ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ತ್ಯಾಗದ ಸುವರ್ಣ ಸಿರಿ: ಮಹಾರಾಣಿ ಕಾಮಸುಂದರಿ ದೇವಿ

1962ರ ಯುದ್ಧದ ಸಮಯದಲ್ಲಿ ದರ್ಭಾಂಗ ರಾಜಮನೆತನವು ನೀಡಿದ ದೇಣಿಗೆಯು ಭಾರತದ ಯಾವುದೇ ವ್ಯಕ್ತಿ ಅಥವಾ ಕುಟುಂಬ ನೀಡಿದ ಅತಿದೊಡ್ಡ ವೈಯಕ್ತಿಕ ದೇಣಿಗೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇಂದು ನಾವು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದೇವೆ ಎಂದರೆ, ಅದರ ಹಿಂದೆ ಕಾಮಸುಂದರಿ ದೇವಿಯವರಂಥ ಅಸಂಖ್ಯಾತ ತಾಯಂದಿರ ತ್ಯಾಗವಿದೆ.

ಒಂದೊಳ್ಳೆ ಮಾತು

1962ರ ಅಕ್ಟೋಬರ್ ತಿಂಗಳು. ಹಿಮಾಲಯದ ಗಡಿಯಲ್ಲಿ ಚೀನಾ ಅತಿಕ್ರಮಣ ನಡೆಸಿತ್ತು. ಭಾರತೀಯ ಸೈನಿಕರು ಮೈಕೊರೆಯುವ ಚಳಿಯಲ್ಲಿ, ಸರಿಯಾದ ಶಸ್ತ್ರಾಸ್ತ್ರಗಳಿಲ್ಲದೆ ದೇಶದ ಮಣ್ಣನ್ನು ರಕ್ಷಿಸಲು ಹೆಣಗಾಡುತ್ತಿದ್ದರು. ಅಂದು ಪ್ರಧಾನಿ ಜವಾಹರಲಾಲ್ ನೆಹರು ಅವರು ರೇಡಿಯೋ ಮೂಲಕ ದೇಶದ ಜನತೆಗೆ ಒಂದು ಕಳಕಳಿಯ ಮನವಿ ಮಾಡಿದರು: ‘ದೇಶದ ರಕ್ಷಣೆಗಾಗಿ ರಾಷ್ಟ್ರ ರಕ್ಷಣಾನಿಧಿಗೆ ನಿಮ್ಮ ಕೈಲಾದ ಸಹಾಯ ಮಾಡಿ’.

ಬಿಹಾರದ ದರ್ಭಾಂಗ ಅರಮನೆಯ ವೈಭವದ ನಡುವೆ ಕುಳಿತಿದ್ದ ಮಹಾರಾಣಿ ಕಾಮ ಸುಂದರಿ ದೇವಿಯವರ ಕಿವಿಗೆ ಈ ಮಾತುಗಳು ಬಿದ್ದಾಗ, ಅವರ ಮನಸ್ಸು ಒಮ್ಮೆಗೇ ತಲ್ಲಣಿಸಿತು. ದರ್ಭಾಂಗದ ಮಹಾರಾಜ ಕಾಮೇಶ್ವರ ಸಿಂಗ್ ಅವರ ಮೂರನೇ ಪತ್ನಿಯಾಗಿ, ಅರಮನೆಯ ಸಕಲ ಸುಖಭೋಗಗಳ ನಡುವೆ ಇದ್ದರೂ, ಅವರ ಹೃದಯ ಗಡಿಯಲ್ಲಿದ್ದ ಸೈನಿಕರ ಕಷ್ಟದತ್ತ ಮಿಡಿಯಿತು.

ತಕ್ಷಣವೇ ಅವರು ತಮ್ಮ ಖಜಾನೆಯತ್ತ ನಡೆದರು. ಅಲ್ಲಿ ರಾಶಿರಾಶಿ ಚಿನ್ನಾಭರಣಗಳಿದ್ದವು. ತಲೆತಲಾಂತರಗಳಿಂದ ಬಂದ ರಾಜವಂಶದ ಕುರುಹುಗಳು ಅವು. ಆದರೆ ಮಹಾರಾಣಿ ಯವರ ಕಣ್ಣಮುಂದೆ ಕಂಡಿದ್ದು ಮಾತ್ರ ಹಿಮದ ಮೇಲೆ ಚೆಲ್ಲುತ್ತಿದ್ದ ಭಾರತೀಯ ಸೈನಿಕರ ರಕ್ತ. ಅವರು ಒಂದು ಕ್ಷಣವೂ ಹಿಂಜರಿಯಲಿಲ್ಲ. ಸುಮಾರು 600 ಕೆ.ಜಿ. ಚಿನ್ನವನ್ನು ರಾಷ್ಟ್ರ ರಕ್ಷಣಾನಿಧಿಗೆ ಅರ್ಪಿಸಲು ನಿರ್ಧರಿಸಿದರು. ಇದು ಕೇವಲ ಲೋಹವಾಗಿರಲಿಲ್ಲ, ಅದು ಒಂದು ಸಾಮ್ರಾಜ್ಯದ ಅಸ್ಮಿತೆಯಾಗಿತ್ತು.

ಇದನ್ನೂ ಓದಿ: Roopa Gururaj Column: ಕರ್ದಮ ಮತ್ತು ದೇವಹೂತಿಯರ ತ್ಯಾಗ ಮತ್ತು ಭಕ್ತಿಯ ಮಹಾನ್‌ ಪಯಣ

‘ಇಷ್ಟೊಂದು ಚಿನ್ನವನ್ನು ದಾನ ಮಾಡುತ್ತೀರಾ?’ ಎಂದು ಅದ್ಯಾರೋ ಕೇಳಿದಾಗ, ಅವರು ನೀಡಿದ ಉತ್ತರ ಇತಿಹಾಸದಲ್ಲಿ ಅಮರವಾಗಿದೆ: ‘ದೇಶವೇ ಇಲ್ಲದಿದ್ದರೆ ಈ ಚಿನ್ನದ ಒಡವೆ ಗಳಿಗೆ ಬೆಲೆಯೇನಿದೆ? ನಮ್ಮ ಸೈನಿಕರು ಸುರಕ್ಷಿತವಾಗಿದ್ದರೆ ಮಾತ್ರ ಈ ಸಿರಿತನಕ್ಕೆ ಅರ್ಥ’. ಆದರೆ ಅವರ ತ್ಯಾಗ ಅಲ್ಲಿಗೇ ನಿಲ್ಲಲಿಲ್ಲ.

ಗಡಿಯಲ್ಲಿನ ಸೈನಿಕರಿಗೆ ಆಹಾರ ಮತ್ತು ಮದ್ದುಗುಂಡುಗಳನ್ನು ತಲುಪಿಸಲು ಸಾರಿಗೆಯ ಕೊರತೆಯಿದೆ ಎಂದು ತಿಳಿದಾಗ, ತಮ್ಮ ರಾಜಮನೆತನದ ಹೆಮ್ಮೆಯಾಗಿದ್ದ ‘ದರ್ಭಾಂಗ ಏವಿಯೇಷನ್’ ಸಂಸ್ಥೆಯ ಖಾಸಗಿ ವಿಮಾನಗಳನ್ನು ಮತ್ತು ವಿಮಾನ ನಿಲ್ದಾಣವನ್ನು ಭಾರತೀಯ ವಾಯುಪಡೆಗೆ ಮುಕ್ತವಾಗಿ ಬಿಟ್ಟುಕೊಟ್ಟರು.

ಅರಮನೆಯ ಐಷಾರಾಮಿ ವಿಮಾನಗಳು ಯುದ್ಧದ ಸಾಮಗ್ರಿಗಳನ್ನು ಹೊತ್ತೊಯ್ಯುವ ವಾಹನಗಳಾದವು. ಯುದ್ಧ ಮುಗಿದು, ಮಹಾರಾಜರ ನಿಧನದ ನಂತರ ತಮ್ಮ ರಾಜ ಮನೆತನದ ಕರ್ತವ್ಯಗಳಲ್ಲಿ ಕಳೆದು ಹೋಗದೆ ಅರಮನೆಯ ಹೆಚ್ಚಿನ ಭಾಗವನ್ನು ಶೈಕ್ಷಣಿಕ ಸಂಸ್ಥೆಗಳಿಗೆ ದಾನ ಮಾಡಿದರು.

ಕಾಮೇಶ್ವರ ಸಿಂಗ್ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಿ ಅದರ ಅಭಿವೃದ್ಧಿಗೆ ಶ್ರಮಿಸುತ್ತಾ ದರ್ಭಾಂಗದ ನರ್ಗೊನಾ ಅರಮನೆಯಲ್ಲಿ ಅತ್ಯಂತ ಸರಳ ಜೀವನ ನಡೆಸಿದರು. ಮಧುಬನಿ ಚಿತ್ರಕಲೆಯಂಥ ಕಲೆಗಳನ್ನು ಪ್ರೋತ್ಸಾಹಿಸುತ್ತಾ, ‘ಜನಪರ ರಾಣಿ’ಯಾಗಿ ಜನರ ಮನಸ್ಸಿ ನಲ್ಲಿ ನೆಲೆಸಿದರು.

1962ರ ಯುದ್ಧದ ಸಮಯದಲ್ಲಿ ದರ್ಭಾಂಗ ರಾಜಮನೆತನವು ನೀಡಿದ ದೇಣಿಗೆಯು ಭಾರತದ ಯಾವುದೇ ವ್ಯಕ್ತಿ ಅಥವಾ ಕುಟುಂಬ ನೀಡಿದ ಅತಿದೊಡ್ಡ ವೈಯಕ್ತಿಕ ದೇಣಿಗೆ ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇಂದು ನಾವು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದೇವೆ ಎಂದರೆ, ಅದರ ಹಿಂದೆ ಕಾಮಸುಂದರಿ ದೇವಿಯವರಂಥ ಅಸಂಖ್ಯಾತ ತಾಯಂದಿರ ತ್ಯಾಗವಿದೆ.

ತಮ್ಮ ಅರಮನೆಯ ವೈಭವಕ್ಕಿಂತ ದೇಶದ ಗಡಿಯೇ ಮುಖ್ಯ ಎಂದು ಭಾವಿಸಿದ ಆ ಮಹಾನ್ ಚೇತನಕ್ಕೆ ದೇಶ ಸದಾ ಋಣಿಯಾಗಿರುತ್ತದೆ. ರಾಜವೈಭವಕ್ಕಿಂತ ದೇಶಪ್ರೇಮ ದೊಡ್ಡದು ಎಂದು ತೋರಿಸಿಕೊಟ್ಟ ಮಹಾರಾಣಿ ಕಾಮಸುಂದರಿ ದೇವಿ, ಭಾರತೀಯ ನಾರೀಶಕ್ತಿಯ ಅನನ್ಯ ಸಂಕೇತ. ಇಂಥವರ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಿ ಹೇಳಬೇಕು. ನಮ್ಮ ಇತಿಹಾಸಜ್ಞಾನ ಮಕ್ಕಳಿಗೆ ಸರಿಯಾಗಿ ಸಿಗುವವರೆಗೆ ಅವರು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಪಠ್ಯಪುಸ್ತಕದಲ್ಲಿ ಬರುವ ವಿಷಯಗಳು ಮಾತ್ರ ಅಲ್ಲ, ಅದರ ಆಚೆಗಿನ ಅನೇಕ ನೈಜ ವಿಷಯಗಳು, ಇತಿಹಾಸ ಜ್ಞಾನವನ್ನು ಬೆಳೆಸಿಕೊಳ್ಳಲು ನಮ್ಮ ಮಕ್ಕಳನ್ನು ಪ್ರೇರೇಪಿಸಬೇಕು. ಆಗ ಮಾತ್ರ ಅವರು ಒಂದು ಗಟ್ಟಿ ವ್ಯಕ್ತಿತ್ವವನ್ನು ರೂಪಿಸಿಕೊಂಡು, ದೇಶದ ಬಗ್ಗೆ ಹೆಮ್ಮೆ ಬೆಳೆಸಿಕೊಂಡು, ಇಂದಿನ ಸ್ವತಂತ್ರ ಭಾರತದ ನಾಗರಿಕರಾಗಿ ಬದುಕಲು ಸಾಧ್ಯ.

ರೂಪಾ ಗುರುರಾಜ್

View all posts by this author