ಒಂದೊಳ್ಳೆ ಮಾತು
ಜಗನ್ನಾಥಪುರಿಯಲ್ಲಿ ವಾಸಿಸಿದ್ದ ಅವಧಿಯಲ್ಲಿ ಶ್ರೀಚೈತನ್ಯ ಮಹಾಪ್ರಭುಗಳು ಪಂಡಿತರು, ಭಿಕ್ಷು ಕರು, ಸಂತರು, ರಾಜರೂ ಸೇರಿದಂತೆ ಎಲ್ಲ ವರ್ಗದ ಜನರನ್ನು ತಮ್ಮ ಕಡೆ ಸೆಳೆದರು. ಅವರ ಕೃಪೆ ಯನ್ನು ಬಯಸಿದವರಲ್ಲಿ ಒರಿಸ್ಸಾದ ರಾಜ ಪ್ರತಾಪ ರುದ್ರ ಕೂಡ ಒಬ್ಬ.
ಐಶ್ವರ್ಯ ಮತ್ತು ವೈಭವಗಳಿಂದ ಸುತ್ತುವರಿದ ಶಕ್ತಿಶಾಲಿ ರಾಜನಾಗಿದ್ದರೂ ಪ್ರತಾಪರುದ್ರನ ಹೃದಯ ಅಪಾರ ವಿನಯದಿಂದ ತುಂಬಿತ್ತು. ಮಹಾಪ್ರಭುವಿನ ಕೃಷ್ಣಪ್ರೇಮದ ದೈವಿಕ ಮಹಿಮೆ ಯನ್ನು ಕೇಳಿ, ಅವರನ್ನು ಒಮ್ಮೆ ದರ್ಶನ ಮಾಡುವ ಆಕಾಂಕ್ಷೆ ಅವನಲ್ಲಿ ಉಕ್ಕುತ್ತಿತ್ತು. ಮಂತ್ರಿಗಳು ಮಹಾಪ್ರಭುವಿನ ಬಳಿಗೆ ಈ ವಿನಂತಿಯನ್ನು ಸಲ್ಲಿಸಿದಾಗ ಪ್ರಭು ನಿರಾಕರಿಸಿದರು.
ಸನ್ಯಾಸಿಯು ಲೌಕಿಕ ಸಂಗತಿಯನ್ನು, ವಿಶೇಷವಾಗಿ ರಾಜರ ಸಂಗವನ್ನು ತಪ್ಪಿಸಬೇಕು ಎಂದು ಅವರ ನಿಲುವಾಗಿತ್ತು, ‘ರಾಜನನ್ನು ನೋಡುವುದೇ ಭೌತಿಕ ಕಲ್ಮಶವನ್ನು ಆಹ್ವಾನಿಸುವಂತೆ’ ಎಂದು ಬಿಟ್ಟರು. ಇದನ್ನು ಕೇಳಿ ರಾಜನ ಹೃದಯ ನೋವಿನಿಂದ ತುಂಬಿದರೂ ಅವನು ನಿರಾಶನಾಗಲಿಲ್ಲ. ‘ನಾನು ಅವರನ್ನು ನೋಡಲಾರದೆ ಇದ್ದರೂ, ದೂರದಿಂದಲೇ ಸೇವೆ ಮಾಡುವೆ, ಅವರೇ ನನ್ನ ಕೈಕ ಸ್ವಾಮಿ’ ಎಂದನು.
ಇದನ್ನೂ ಓದಿ: Roopa Gururaj Column: ದೇವಿ ಲಕ್ಷ್ಮೀಯ ಸ್ವಯಂವರ ಸಾರುವ ಜೀವನ ಮೌಲ್ಯಗಳು
ಜಗನ್ನಾಥನ ರಥಯಾತ್ರೆಯ ಸಮಯದಲ್ಲಿ, ರಾಜನೇ ಸ್ವತಃ ರಥದ ಮುಂದಿನ ಬೀದಿಯನ್ನು ಮಂದಿರದ ಆವರಣವನ್ನು ಶುದ್ಧಗೊಳಿಸಿ, ಪ್ರಭುವಿನ ಪರಿವಾರದವರಿಗೆ ವಸತಿ, ಆಹಾರ ಹಾಗೂ ವಸಗಳನ್ನು ವ್ಯವಸ್ಥೆ ಮಾಡಿದ. ಒರಿಸ್ಸಾದ ಮಹಾರಾಜನೇ ದೇವರ ದಾಸರಿಗಾಗಿ ಶ್ರಮಿಸುತ್ತಿರುವು ದನ್ನು ನೋಡಿ ಭಕ್ತರು ಅಚ್ಚರಿಗೊಂಡರು!
ಈ ವಿಷಯವನ್ನು ಚೈತನ್ಯ ಮಹಾಪ್ರಭುವಿಗೆ ತಿಳಿಸಿದಾಗ, ಅವರು ನಗುತ್ತಲೇ, ‘ಅವನು ಭಾಗ್ಯಶಾಲಿ. ಭಕ್ತರ ಸೇವೆಯೇ ರಾಜನನ್ನು ಕೃಷ್ಣನಿಗೆ ಹತ್ತಿರ ಮಾಡುತ್ತದೆ’ ಎಂದರು. ಆದರೂ ಅವರು ರಾಜ ನನ್ನು ಭೇಟಿಯಾಗಲು ಒಪ್ಪಲಿಲ್ಲ. ಕೊನೆಗೆ ಪ್ರತಾಪರುದ್ರ ಚೈತನ್ಯ ಮಹಾಪ್ರಭುಗಳ ಆಪ್ತರಾದ ಸಾರ್ವಭೌಮ ಭಟ್ಟಾಚಾರ್ಯ ಹಾಗೂ ರಾಮಾನಂದ ರಾಯರ ಬಳಿಗೆ ಹೋಗಿ, ‘ನನಗೆ ಕನಿಷ್ಠ ಒಂದು ಬಾರಿ ಅವರ ಸೇವೆ ಮಾಡಲು ಅವಕಾಶ ಕಲ್ಪಿಸಿ. ನನಗೆ ಗೌರವ ಬೇಡ, ಒಮ್ಮೆ ಅವರ ಕೃಪಾ ದೃಷ್ಟಿ ಬಿದ್ದರೆ ಸಾಕು’ ಎಂದು ವಿನಂತಿಸಿದ.
ರಾಮಾನಂದರಾಯರು ‘ವಿನಯವೇ ಏಕೈಕ ಮಾರ್ಗ, ರಾಜನಾಗಿ ಅಲ್ಲ, ದಾಸನಾಗಿ ಹತ್ತಿರ ಹೋದರೆ, ಪ್ರಭುವಿನ ಕೃಪೆ ಖಂಡಿತ ಸಿಗುತ್ತದೆ’ ಎಂದರು. ರಥಯಾತ್ರೆಯ ಸಮಯದಲ್ಲಿ ಮಹಾ ಪ್ರಭು ಜಗನ್ನಾಥನ ರಥದ ಮುಂದೆ ದೈವಿಕ ಉನ್ಮಾದದಲ್ಲಿ ನೃತ್ಯ ಮಾಡುತ್ತಿದ್ದಾಗ, ರಾಜ ಪ್ರತಾಪ ರುದ್ರ ಸಾಮಾನ್ಯ ಭಕ್ತನಂತೆ ಬಿಳಿ ವಸ್ತ್ರ ಧರಿಸಿ ಮಾರುದೇಶದಲ್ಲಿ ಅಲ್ಲೇ ನಿಂತಿದ್ದನು.
ನೃತ್ಯದಿಂದ ವಿಶ್ರಾಂತಿ ಪಡೆಯಲು ಪ್ರಭು ತೋಟದಲ್ಲಿ ಕುಳಿತಾಗ, ರಾಜನು ಮೌನವಾಗಿ ಹತ್ತಿರ ಹೋಗಿ ಅವರ ಪಾದಗಳನ್ನು ಒತ್ತಲು ಪ್ರಾರಂಭಿಸಿದ. ರಾಜನು ನಿಧಾನವಾಗಿ ಶ್ರೀಮದ್ಭಾಗವತದ ಗೋಪಿಗೀತೆಯ ಶ್ಲೋಕಗಳನ್ನು ಹಾಡಲು ಆರಂಭಿಸಿದ. ಕೃಷ್ಣನಿಗಾಗಿ ಗೋಪಿಯರ ವಿರಹ ಭರಿತ ಪ್ರೀತಿಯ ಗಾನ ಅದಾಗಿತ್ತು.
ಅದನ್ನು ಕೇಳುತ್ತಿದ್ದಂತೆ ಚೈತನ್ಯ ಮಹಾಪ್ರಭುವಿನ ಕಣ್ಣುಗಳಲ್ಲಿ ಅಶ್ರು ತುಂಬಿತು. ಅವರು ಎದ್ದು ರಾಜನನ್ನು ಅಪ್ಪಿಕೊಂಡು, ‘ನೀನು ನನಗೆ ಗೋಪಿ ಯರ ಭಕ್ತಿಯ ಅಮೃತವನ್ನು ನೀಡಿದೆ, ಇಂತಹ ವಚನಗಳನ್ನು ಉಚ್ಚರಿಸುವವನು ನನಗೆ ಅತ್ಯಂತ ಪ್ರಿಯ’ ಎಂದು ಹೇಳಿದರು.
ಆ ಕ್ಷಣದಲ್ಲಿ ಚೈತನ್ಯ ಪ್ರಭುಗಳು ‘ನೀನು ರಾಜನಲ್ಲ, ನೀನು ನನ್ನ ಶಾಶ್ವತ ದಾಸ. ನಿನ್ನ ಎಲ್ಲಾ ಅಹಂಕಾರವೂ ನಾಶವಾಗಿದೆ. ಈಗ ನೀನು ನನ್ನ ಕೃಪೆಗೆ ಯೋಗ್ಯನಾಗಿದ್ದಿ’ ಎಂದರು. ಪ್ರೀತಿಯಿಂದ. ರಾಜನು ಕಂಪಿಸುತ್ತಾ, ಕಣ್ಣೀರಿನಿಂದ ತೊಯ್ದ ಅವರ ಪಾದಗಳಿಗೆ ಬಿದ್ದನು.
‘ಪ್ರಭು, ನೀವು ನನ್ನನ್ನು ರಾಜನಾಗಿ ಅಲ್ಲ, ನಿಮ್ಮ ಮಗನಂತೆ ಅಂಗೀಕರಿಸಿದ್ದೀರಿ ಎಂದನು’. ನಂತರ ಭಕ್ತರು, ಪ್ರಭು ಅಪ್ಪಿಕೊಂಡ ವ್ಯಕ್ತಿಯೇ ರಾಜ ಪ್ರತಾಪರುದ್ರ ಎಂದು ತಿಳಿಸಿದಾಗ, ಮಹಾ ಪ್ರಭು ನಗುತ್ತಾ ‘ಅವನನ್ನು ರಾಜನೆಂದು ಕರೆಯಬೇಡಿ, ಅವನು ಶುದ್ಧ ಭಕ್ತ. ಕೃಷ್ಣನು ಜನ್ಮವನ್ನಾಗಲಿ, ಅಧಿಕಾರವನ್ನಾಗಲಿ ನೋಡುವುದಿಲ್ಲ, ಪ್ರೀತಿ ಯನ್ನು ಮಾತ್ರ ನೋಡುತ್ತಾನೆ’ ಎಂದರು. ಆ ದಿನದಿಂದ ಪ್ರತಾಪರುದ್ರ ವಿಶಾಲ ಸಾಮ್ರಾಜ್ಯವನ್ನು ಆಳುತ್ತಿದ್ದರೂ, ಭಕ್ತರ ದಾಸನಂತೆ ಬದುಕಿದ.
ಯಾತ್ರಿಕರಿಗೆ ಅನ್ನದಾನ, ಮಂದಿರಗಳ ನಿರ್ಮಾಣ, ಮತ್ತು ಪ್ರತಿಯೊಂದು ಕೀರ್ತನದಲ್ಲೂ ವೈಯಕ್ತಿಕವಾಗಿ ಭಾಗವಹಿಸಿದ. ರಾಜನೇ ಆಗಾಗ್ಗೆ ಹೇಳುತ್ತಿದ್ದ ‘ನಾನು ಆಳುವುದು ಪ್ರಭುವಿನ ಕೃಪೆಯಿಂದ, ಆದರೆ ನನ್ನ ಹೃದಯ ವನ್ನು ಆಳುವವನು ಅವನೇ’. ಭಗವಂತನನ್ನು ಒಲಿಸಿಕೊಳ್ಳಲು ವಿನಯ ಪ್ರಾಮಾಣಿಕತೆ ಮತ್ತು ಭಕ್ತಿಯೊಂದೇ ಮಾರ್ಗ, ಇದು ಸರ್ವಕಾಲಕ್ಕೂ ಸಲ್ಲುವ ಮಾತು.