ವ್ಯಕ್ತಿ-ವ್ಯಕ್ತಿತ್ವ
ಡಾ.ರಾಜೇಂದ್ರ ಕುಮಾರ್ ಕೆ.
ಮಂಗಳವಾರ (ಏ.14) ನಮ್ಮ ದೇಶಕ್ಕೆ ಸಂವಿಧಾನ ನೀಡುವಲ್ಲಿ ಗುರುತರ ಪಾತ್ರ ವಹಿಸಿದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನ. ಅವರ ಚಿಂತನೆ, ವಿಚಾರಧಾರೆಗಳನ್ನು ಜಗತ್ತೇ ಮೆಚ್ಚಿಕೊಂಡಿದೆ. ಆ ಉತ್ಕೃಷ್ಟ ವಿಚಾರಧಾರೆಗಳು ಅವರಲ್ಲಿ ಮೂಡಲು ಕಾರಣ ಅವರಲ್ಲಿದ್ದ ಜ್ಞಾನ, ವಿದ್ವತ್ತು. ಈ ಬಾರಿಯ ಅವರ 135ನೇ ಜನ್ಮದಿನದಂದು ಅವರ ’ಓದಿನ ಕೃಷಿ’ಯ ಬಗ್ಗೆ ಒಂದಿಷ್ಟು ತಿಳಿಯೋಣ.
ಡಾ.ಬಿ.ಆರ್.ಅಂಬೇಡ್ಕರ್ ಅವರ 136ನೇ ಜನ್ಮದಿನವನ್ನು ‘ವಿಶ್ವ eನದ ದಿನ’ವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಓದಿನ ಹೋರಾಟಕ್ಕೆ ಸಂದ ಗೌರವ ಎಂದರೂ ಅತಿಶಯೋಕ್ತಿ ಯಲ್ಲ. ಮನುಷ್ಯತ್ವದ ಆಲೋಚನೆಗಳನ್ನು ಇಟ್ಟುಕೊಂಡ ಅಂಬೇಡ್ಕರ್ ಹೇಗೆ ಓದಿದರು, ನಾವು ಹೇಗೆ ಓದುತ್ತಿದ್ದೇವೆ ? ಏಕೆ ಓದುತ್ತಿದ್ದೇವೆ ಎಂಬುದನ್ನು ಮನಗಾಣಿಸಲು ಅಂಬೇಡ್ಕರ್ ಓದಿನ ಅಂತರಾಳವನ್ನು ಅರಿಯಲು ಕೆಲವೊಂದು ಘಟನೆಗಳ ಹಿನ್ನೆಲೆಯಲ್ಲಿ ಅಂಬೇಡ್ಕರ ಓದಿನ ಧ್ಯಾನವನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಗುರುತಿಸುವ ಪ್ರಯತ್ನ ಮಾಡಲಾಗಿದೆ. ಅಂಬೇಡ್ಕರರ ಓದು ನಮಗೆ ಸ್ಪೂರ್ತಿಯ ದೀಪವಾಗಲಿ ಎಂಬುದು ಈ ಲೇಖನದ ಆಶಯ.
ಭೀಮ್ ರಾವ್ ವಿದ್ಯಾರ್ಥಿ ದೆಸೆಯಿಂದ ಸಾಧಾರಣ ಓದುಗನಾಗಿದ್ದ. ಆದರೆ ಓದಿನ ದಾಹ ತೀವ್ರ ವಾಗಿತ್ತು. ಏಕೆಂದರೆ ತಾನು ಶಾಲೆಯಲ್ಲಿ ಓದುತ್ತಿರುವಾಗ ನೀರಿನ ದಾಹವಾದರೆ ನೀರಿದ್ದರೂ ಕುಡಿಯಲು ನೀರು ಸಿಗುತ್ತಿರಲಿಲ್ಲ. ಬಹಳಷ್ಟು ಬಾರಿ ನೀರಿನ ದಾಹದಿಂದಲೇ ಮನೆಗೆ ವಾಪಸ್ ಆಗುತ್ತಿದ್ದ ಭೀಮರಾವ್. ಒಂದು ವೇಳೆ ನೀರಿನ ದಾಹದಿಂದ ಶಾಲೆ ಬಿಟ್ಟಿದ್ದರೆ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳುವುದಕ್ಕೂ ಅಸಾಧ್ಯ ನೀರು ಮುಟ್ಟದಂತಹ ಪರಿಸ್ಥಿತಿಯಲ್ಲಿದ್ದರೂ ಭೀಮರಾವ್ ಓದಿದ್ದರು.
ಸಂಸ್ಕೃತ ಕಲಿಬೇಕೆಂಬ ಇಚ್ಛೆ ಇದ್ದರೂ ಕಲಿಸುವ ಮನಸ್ಸು ಶಿಕ್ಷಕರಿಗಿರಲಿಲ್ಲ. ಅಕ್ಷರ ಕಲಿಯುವು ದಕ್ಕೆ ಪರ್ಶಿಯನ್ ಭಾಷೆ ಆಯ್ಕೆ ಮಾಡಿಕೊಂಡು ಓದಿದ್ದರು. ತದನಂತರದಲ್ಲಿ ಮುಂದೆ ಸಂಸ್ಕೃತ ಕಲಿತು ಪಂಡಿತರಾದರು.
ಅಂಬೇಡ್ಕರ್ ಸಂಸತ್ತಿನಲ್ಲಿ ಸಂಸ್ಕೃತ ಭಾಷೆಯ ಕುರಿತು, ಸಂಸ್ಕೃತ ಬಹುತೇಕ ಭಾರತೀಯ ಭಾಷೆಗಳ ತಾಯಿ ಅದನ್ನು ಬ್ರಾಹ್ಮಣರಾದ ತಾವು ಸರಿಯಾಗಿ ಬಳಸಿಕೊಳ್ಳಲಿಲ್ಲ. ಉಳಿದವರು ಬಳಸಲು ಅವಕಾಶ ಕೊಡಲಿಲ್ಲ. ಅದು ಸಾಹಿತ್ಯದ ಗಣಿ. ಸಂಸ್ಕೃತ ನಮ್ಮ ರಾಷ್ಟ್ರೀಯ ಭಾಷೆಯಾಗಲಿ ಎಂದಿದ್ದರು. ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ ಅಂಬೇರ್ಡ್ಕರದಾಗಿತ್ತು. ಈ ತರದ ಮನಸ್ಸು ಇಂದು ಎಷ್ಟು ಜನರಿಗಿದೆ ಎಂಬುದೇ ಯಕ್ಷಪ್ರಶ್ನೆ?.
ಇದನ್ನೂ ಓದಿ: BR Ambedkar Birth Anniversary: ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ; ಪ್ರಧಾನಿ, ರಾಷ್ಟ್ರಪತಿ ಸಹಿತ ಗಣ್ಯರಿಂದ ಗೌರವ ನಮನ
ಆತ್ಮವಿಶ್ವಾಸದ ಓದು: ತಮ್ಮ ಓದಿನ ಬಗ್ಗೆ ಬಹಳ ಅಪಾರವಾದ ಪ್ರೀತಿ ವಿಶ್ವಾಸವನ್ನು ಹೊಂದಿದ್ದರೆಂಬುದಕ್ಕೆ ಈ ಸಂಭಾಷಣೆ ಸಾಕ್ಷಿ. ಅಂಬೇಡ್ಕರ್ ಅವರು ಶೆಡ್ಯೂಲ್ ಕ್ಯಾಸ್ಟ ಕಮಿಷನ್ ರಿಪೋರ್ಟ್ ಬರೆದಿದ್ದು ಸರಿ ಇಲ್ಲ ಎಂದು ಸಂಸತ್ತಿನಲ್ಲಿ ಅಂಬೇಡ್ಕರ್ ಅವರು ಹೇಳಿದಾಗ, ಅಂದಿನ ಗ್ರಹಮಂತ್ರಿ ಕೆ.ಎನ್.ಕಟ್ಜು ‘ಡಾ.ಅಂಬೇಡ್ಕರ್ ಅದನ್ನು ಸರಿಯಾಗಿ ಓದಿರಲಿಕ್ಕಿಲ್ಲ ಬರಿಯ ಕವರ್ ಪೇಜ್ ಮಾತ್ರ ನೋಡಿರಬೇಕು’ ಎಂದರು.
ತಮ್ಮ ಓದೇ ಸ್ವಾಭಿಮಾನವಾಗಿದ್ದರಿಂದ, ‘ಇದು ಆಯೋಗ ಬರೆದ ರಿಪೋರ್ಟಿನಂತಿಲ್ಲ. ಯಾರೋ ನೌಕರರ ಬರೆದ ರಿಪೋರ್ಟಿನಂತಿದೆ. ನಾನು ಈ ರಿಪೋರ್ಟಿನ ಕವರ್ ಪೇಜನ್ನಷ್ಟೇ ಓದಿರಬೇಕು ಎಂದಿರಿ, ನಾನು ಕವರ್ -ಟು- ಕವರ್ ಓದಿರುವೆ. ನನ್ನ ಓದುವ ಹವ್ಯಾಸ ನಿಮಗೆ ತಿಳಿದಂತಿಲ್ಲ.
ನಿಮ್ಮ ತಾತ ಮುತ್ತಾತಂದಿರು, ಮಕ್ಕಳು, ಮೊಮ್ಮಕ್ಕಳು ಓದುವುದನ್ನೆಲ್ಲ ಸೇರಿಸಿದರು. ನಾನು ಓದಿದಷ್ಟು ಆಗುವುದಿಲ್ಲ ತಿಳಿದಿರಲಿ’ ಎಂದು ಪ್ರತ್ಯುತ್ತರಿಸಿದ್ದರು. ಅಂಬೇಡ್ಕರ್‌ರ ಕ್ರಮಬದ್ಧ ಓದು, ವಿದ್ವತ್ತಿಗೆ ಲಂಡನಿನ ಮಹಿಳೆ ಫ್ಯಾನಿ ಫಿಟ್ಜ್ ರಾಲ್ಡ್ ಮಾರು ಹೋಗಿ ಮದುವೆ ಪ್ರಸ್ತಾಪವನ್ನು ಮುಂದಿಟ್ಟಿದ್ದರು!
ಓದಿನ ಮೂಲಕವೇ ಅಪಾರವಾದ ಜನರನ್ನು ಸಂಪಾದಿಸುವ ಶಕ್ತಿ ಅಂಬೇಡ್ಕರ್ ಅವರದಾಗಿತ್ತು. ಮುಂಬೈ ‘ರಾಜಗೃಹ’ ಹಾಗೂ ದೆಹಲಿಯ ಮನೆಗಳಲ್ಲಿ ಪುಸ್ತಕಗಳ ರಾಶಿ, ಅಲ್ಲಿನ ಕೋಣೆಗಳನ್ನು ಆವರಿಸಿತ್ತು. ಮುಸ್ಲಿಂ ಜಮೀನ್ದಾರರೊಬ್ಬನ ಮನೆಗೆ ಭೇಟಿ ಕೊಟ್ಟಾಗ ಅವರ ಮನೆಯಲ್ಲಿದ್ದ ಬಂಗಾರದ ಅಕ್ಷರಗಳ ಕುರಾನನ್ನು ನೋಡಿ ಎಂಟು ಸಾವಿರ ರೂಪಾಯಿಗಳನ್ನು ಕೊಟ್ಟು ಆ ಪುಸ್ತಕವನ್ನು ಅಂಬೇಡ್ಕರ್ ಖರೀದಿಸಿದ್ದರು.
ಪುಸ್ತಕಗಳ ಕಡು ವ್ಯಾಮೋಹಿ ಅಂಬೇಡ್ಕರ್ ಆಗಿದ್ದರು ಎಂಬುದನ್ನು ಈ ಘಟನೆ ತಿಳಿಸುತ್ತದೆ. ವಿಶಿಷ್ಟವಾದ ಫೌಂಟನ್ ಪೆನ್ನುಗಳನ್ನು ಅವರು ಸಂಗ್ರಹಿಸುತ್ತಿದ್ದರು. ಯಾರೋ ಒಬ್ಬರು ಇಂಗ್ಲೆಂಡಿನಲ್ಲಿ ಅವರಿಗೆ ಬಂಗಾರದ ಪೆನ್ ಅನ್ನು ಕೊಟ್ಟಿದ್ದನ್ನು ಜತನವಾಗಿಟ್ಟುಕೊಂಡಿದ್ದರು.
ಗ್ರಂಥಾಲಯದ ವಿಷಯವಾಗಿ ಓದುಬರಹದ ಆತ್ಮೀಯನಾಗಿ ನಾನಕ್ ಚಂದ್ ರತ್ತು ಸಹಾಯಕ ರಾಗಿದ್ದರು. ಅಂಬೇಡ್ಕರರ ಸಮಗ್ರ ಬರಹಗಳು ಮತ್ತು ಭಾಷಣಗಳು ಹಲವು ಭಾಷೆಗಳಲ್ಲಿ 22 ಸಂಪುಟಗಳಲ್ಲಿ ಪ್ರಕಟಗೊಂಡಿವೆ ಎಂಬುದನ್ನು ನಾವು ಮರೆಯುವಂತಿಲ್ಲ.
ಭೂತಬಂಗ್ಲೆಯಲ್ಲಿ ಕೈತೋಟ ನಿರ್ಮಿಸಿದ ಅಂಬೇಡ್ಕರ್: ಬ್ರಿಟಿಷ್ ಭಾರತದಲ್ಲಿ 1942ರ ಸುಮಾರಿಗೆ ಕಾರ್ಮಿಕ ಮಂತ್ರಿ ಆಗಿದ್ದ ಅಂಬೇಡ್ಕರ್, ದೆಹಲಿಯಲ್ಲಿನ ಭೂತ ಬಂಗ್ಲೆ ಎಂದು ಕರೆಯಲ್ಪಟ್ಟ ಕಟ್ಟಡವನ್ನು ಖರೀದಿಸಿ ಅಲ್ಲಿ ಉತ್ತಮವಾದ ತೋಟವನ್ನು ನಿರ್ಮಿಸಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದರು. ದೆಹಲಿಯಲ್ಲಿರುವ ಮನೆಗಳ ಆವರಣದಲ್ಲಿನ ತೋಟಗಳಲ್ಲಿ ಅತ್ಯುತ್ತಮವಾದದ್ದು ಎಂದು ಲಂಡನ್ನಿನ ‘ಡೈಲಿ ಮೇಲ್’ ಪತ್ರಿಕೆ ವರದಿ ಮಾಡಿತ್ತು. ಅರೆಬರೆ ಓದು ಅಜ್ಞಾನವನ್ನು, ಮೂಢನಂಬಿಕೆಯನ್ನು ಬಿತ್ತುತ್ತದೆ.
ಪರಿಪೂರ್ಣವಾದ ಓದು ಯಾವ ಭೂತ ಪ್ರೇತಗಳಿಗೂ ಅಂಜದೆ ಮುನ್ನುಗುತ್ತದೆ. ಇಲ್ಲಿ ಜ್ಞಾನದ ಬೆಳಕು ಇರುತ್ತದೆ. ಅಲ್ಲಿ ಯಾವ ಕತ್ತಲೆಗೂ ಕೆಲಸವಿರುವುದಿಲ್ಲ ಎಂದು ತೋರಿಸಿಕೊಟ್ಟ ಮೇಧಾವಿ. ಬಂಗ್ಲೆಯ ಕಡೆ ಬ್ರಿಟಿಷರು ಕೂಡ ಬರಲು ಹೆದರುತ್ತಾರೆಂದು ಅಲ್ಲಿನ ವಾಚ್ ಮ್ಯಾನ್ ಅಂಬೇಡ್ಕರ್‌ಗೆ ಹೇಳಿದಾಗ, ಭಾರತೀಯ ಸಮಾಜದ ಭೂತ ಪ್ರೇತಗಳೊಂದಿಗೆ ಗುದ್ದಾಡುತ್ತಲೇ ಇದ್ದೇನೆ. ಈಗ ಹೊಸ ಭೂತಗಳು ಹೊಸ ಅನುಭವಗಳು ನೀಡುವುದಾದರೆ ನೋಡೆ ಬಿಡುತ್ತೇನೆ ಎಂದು ಚಟಾಕಿ ಹಾರಿಸಿದ್ದರು.
ಅಂಬೇಡ್ಕರರ ಪುಸ್ತಕ ಆಯ್ಕೆ ಹಾಗೂ ಓದು ಹೇಗಿತ್ತು: ಒಮ್ಮೆ ಯು.ಆರ್. ರಾವ್ ಅವರನ್ನು ‘ಇಷ್ಟು ಪುಸ್ತಕಗಳನ್ನು ಯಾವಾಗ ಓದುತ್ತಿರಿ?’ ಎಂದು ಒಮ್ಮೆ ಕೇಳುತ್ತಾರೆ. ‘ಓದುವುದು ಎಂದರೇನು? ಹೇಳಿ’ ಎನ್ನುತ್ತಾರೆ. ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿ ಅದನ್ನು ಅರಗಿಸಿಕೊಂಡು ವಿಶ್ಲೇಷಿಸಿ ನೆನಪಿಸಿಕೊಳ್ಳುವುದು ಎಂದು ಉತ್ತರ ಕೊಟ್ಟರು ರಾವ್. ಆಗ ಅಂಬೇಡ್ಕರ್, ‘ಇಲ್ಲ ಇಲ್ಲ ನನ್ನದು ಆ ಶೈಲಿಯಲ್ಲ. ಕೆಲವೇ ಪುಸ್ತಕಗಳು ಮಾತ್ರ ಆಳ ಓದಿಗೆ, ಸಂಪೂರ್ಣ ಓದಿಗೆ ಪ್ರಶಸ್ತ ವಾಗಿರುತ್ತವೆ. ಉಳಿದಂತೆ ನಾನು ಪುಸ್ತಕ ನೋಡಿದ ಕೂಡಲೇ ಅದರ ಪರಿವಿಡಿ ಪರಿಚಯ ಬೆನ್ನುಡಿ ಮುನ್ನುಡಿಗಳನ್ನು ನೋಡುತ್ತೇನೆ. ಆನಂತರವಷ್ಟೇ, ನನಗೆ ಅದು ಬೇಕು ಬೇಡವೋ ಎಂದು ನಿರ್ಧರಿಸುತ್ತೇನೆ.
ನನಗೆ ಮುಖ್ಯವೆನಿಸಿದ ಅಧ್ಯಾಯದ ಮೇಲೆ ಕಣ್ಣು ಹಾಯಿಸುತ್ತೇನೆ ನನಗೆ ಗೊತ್ತಿರುವ ವಿಚಾರ ಧಾರೆಯ ಭಾಗ ಓದುವುದಿಲ್ಲ. ಯಾವುದಾದರೂ ಹೊಸ ಯೋಚನೆಗಳು ಇದ್ದರೆ ನಮ್ಮನ್ನು ಯೋಚನೆಗೆ ಹಚ್ಚುವಂತಿದ್ದರೆ ಆ ಭಾಗ ಓದುತ್ತೇನೆ ಅಲ್ಲಿಗೆ ಆ ಪುಸ್ತಕದ ಓದು ಮುಗಿಯಿತು ಎಂದರ್ಥ" ಎಂದು ಕ್ರಿಯಾತ್ಮಕ ಓದಿನ ಬಗೆಯನ್ನು ವಿಶ್ಲೇಷಿಸುತ್ತಾರೆ.
ಪುಸ್ತಕಗಳ ಆಲಯ ‘ರಾಜಗೃಹ’: ಮುಂಬೈಯಲ್ಲಿರುವ ತಮ್ಮ ಮನೆ ರಾಜಗೃಹದಲ್ಲಿನ ಕೋಣೆಗಳೆಲ್ಲವೂ ಪುಸ್ತಕಗಳ ಕಪಾಟುಗಳಿಂದ ತುಂಬಿರುತ್ತಿದ್ದವು. ಸುಮಾರು 35 ಸಾವಿರ ಪುಸ್ತಕಗಳ ಖಾಸಗಿ ಗ್ರಂಥಾಲಯ ಅಂಬೇಡ್ಕರರದಾಗಿತ್ತು. ರಾಜಕಾರಣದಿಂದ ಹಿಡಿದು ಕೋಳಿ ಸಾಕಣೆಯ ತನಕ ಕಟ್ಟಡ,ಕೃಷಿ, ಆರ್ಥಿಕತೆ, ಸಾಪೇಕ್ಷ ಸಿದ್ಧಾಂತ, ಬೌದ್ಧ ಧರ್ಮ, ಪರಮಾಣು ಶಕ್ತಿ, ಕಲ್ಲಿದ್ದಲಿನ ಮಾಹಿತಿ ಇತ್ಯಾದಿ ಪುಸ್ತಕಗಳು ಇವರ ಬಳಿ ಇದ್ದವು.
ಸಮಯಕ್ಕನುಗುಣವಾಗಿ ಓದುವ ಬರೆಯುವ ನೆನಪನ್ನು ಇಟ್ಟುಕೊಳ್ಳುವ ಅಗಾಧ ಸಾಮರ್ಥ್ಯ ಅಂಬೇಡ್ಕರ್ ಆಗಿತ್ತು. ಒಂದು ವಿಷಯದಿಂದ ಮತ್ತೊಂದು ವಿಷಯವನ್ನು ವಿಭಿನ್ನವಾಗಿ ಕಲಿಯುವುದೇ ಓದಿನ ರಿಲ್ಯಾಕ್ಸ್ ಮಾಡಿದಂತೆ ಎಂಬ ಮಾತು ಅವರದಾಗಿತ್ತು.
ಪ್ರತಿಯೊಬ್ಬರು ತಮ್ಮ ಆದಾಯದ ಪ್ರತಿಶತ ಹತ್ತರಷ್ಟಾದರೂ ಪುಸ್ತಕಗಳನ್ನು ಕೊಂಡುಕೊಳ್ಳ ಬೇಕೆಂಬುದು ಅವರ ಆಶಯವಾಗಿತ್ತು. ಟಾಲ್ ಸ್ಟಾಯ್ ಆದಿಯಾಗಿ ಹಲವು ಮಹನೀಯರ ಜೀವನ ಚರಿತ್ರೆಗಳು ಅಂಬೇಡ್ಕರರ ಗ್ರಂಥಾಲಯದಲ್ಲಿದ್ದವು.
ಬೋಧಕರಾಗಿ ಅಂಬೇಡ್ಕರ್: ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಉಪ ಪ್ರಾಂಶುಪಾಲ ರಾಗಿ ಕೆಲಸ ಮಾಡುತ್ತಿದ್ದಾಗ ಅಸ್ಪೃಶ್ಯ ಸಮುದಾಯದ ವಿದ್ಯಾರ್ಥಿಯನ್ನು ಉತ್ತೀರ್ಣಗೊಳಿಸ ಬೇಕೆಂದು ಅಂಬೇಡ್ಕರ್ ಅವರನ್ನು ಕೇಳಿಕೊಂಡಾಗ, ಅವನು ಅರ್ಹನಾಗಿದ್ದಲ್ಲಿ ತೇರ್ಗಡೆ ಯಾಗುತ್ತಾನೆ. ಜಾಣತನದಲ್ಲಿಯಾಗಲಿ ಹಾಕಬೇಕಾದ ಶ್ರಮದಲ್ಲಿಯಾಗಲಿ ಅಸ್ಪೃಶ್ಯ ವಿದ್ಯಾರ್ಥಿಗಳಿಗೆ ವಿನಾಯಿತಿ ಇಲ್ಲ. ಹಾಗೆ ನೋಡಿದರೆ ಈ ಸಮುದಾಯದ ವಿದ್ಯಾರ್ಥಿಯು ಆದರ್ಶ ವಿದ್ಯಾರ್ಥಿ ಯಾಗಬೇಕು. ಈ ವಿಷಯದಲ್ಲಿ ನನ್ನ ಸಹಾಯ ಕೇಳಬೇಡಿ ಎಂದು ಅಂಬೇಡ್ಕರ್ ಓದಿನ ಮಹತ್ವ ವನ್ನು ತಿಳಿಸಿಕೊಟ್ಟರು.
ಇಂದಿನ ದಿನಮಾನಗಳಲ್ಲಿ ನಮ್ಮ ಜಾತಿಯವ ಅಂತ ಹೇಳಿ ಪ್ರಶಸ್ತಿ ಸನ್ಮಾನ ಕೊಡುತ್ತಿದ್ದಾರೆ. ಅರ್ಹ ವ್ಯಕ್ತಿಗೆ ಸಿಗದ ಬಿರುದುಗಳು ಅನರ್ಹರ ವ್ಯಕ್ತಿಗಳ ಪಾಲಾಗುತ್ತಿರುವುದು ಅಂಬೇಡ್ಕರ್‌ರವರಿಗೆ ಮಾಡುವ ಅವಮಾನವೆಂದೇ ಭಾವಿಸಬೇಕು. ವಕೀಲ ವೃತ್ತಿ ಒಂದು ರೀತಿಯಲ್ಲಿ ಬೋಧನೆ ಮಾದರಿ ಎಂದರೆ ತಪ್ಪಾಗಲಾರದು.
ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಸಂವಾದ ಮಾಡುವುದರ ಮೂಲಕ ತಿಳಿಯಪಡಿಸುತ್ತಿದ್ದರು. ಮನುಷ್ಯರ ಲೈಂಗಿಕತೆಯ ಆರೋಗ್ಯದ ಮಾಹಿತಿಗಳನ್ನು ನೀಡುತ್ತಿರುವುದು ಉತ್ತಮವೆಂದು ತಮ್ಮ ವಕೀಲರ ಪರ ವಾದ ಮಂಡಿಸುತ್ತಾ, ‘ಅಶ್ಲೀಲತೆ ಎನ್ನುವುದು ಅರ್ಥದಲ್ಲಿ ಇಲ್ಲ, ಅಭಿವ್ಯಕ್ತಿಸುವ ಕ್ರಮದಲ್ಲಿದೆ’ ಎಂಬ ಈ ಮೊದಲ ತೀರ್ಪನ್ನು ಉಲ್ಲೇಖಿಸಿ ತಮ್ಮ ಗೆಳೆಯ ಕರ್ವೆ ಬಿಡುಗಡೆಗೊಳ್ಳಲು ಅವರ ಓದಿನ ಅರಿವೇ ಕಾರಣವಾಯಿತು.
ಕೊನೆಯ ದಿನಗಳ ಓದಿನ ಧ್ಯಾನ: ಅಂಬೇಡ್ಕರ್ ತಮ್ಮ ಕೊನೆಯ ದಿನಗಳಲ್ಲೂ ಓದನ್ನ ಬಿಡದ ಯೋಧ. ‘ಬುದ್ಧ ಮತ್ತು ದಮ್ಮ’ ಪುಸ್ತಕ ರಚನೆಯಲ್ಲಿ ಧ್ಯಾನಸ್ತ ರಾಗಿದ್ದರು. ರಾತ್ರಿಯ ಪರಿವಿಲ್ಲದೆ ಮರುದಿನ ತನಕ ಓದಿ ನಾನಕ್ ಚಂದು ರತ್ತು ಅವ್ರಿಗೆ ಆಶ್ಚರ್ಯ ಮೂಡಿಸಿದ್ದರು. ಗ್ರಂಥಾಲಯ ಗಳಲ್ಲಿ ಅತಿ ಹೆಚ್ಚು ಕಾಲ ಕಳೆದ ವ್ಯಕ್ತಿತ್ವ ಅಂಬೇಡ್ಕರರದು. ಇಂದಿನ ಅತಿ ಹೆಚ್ಚು ಗ್ರಂಥಾಲಯ ಗಳಲ್ಲಿ ಧೂಳು ಆವರಿಸಿದೆ. ಸರಿಯಾದ ಕ್ರಮದಲ್ಲಿ ಪುಸ್ತಕಗಳ ಜೋಡಣೆ ಇಲ್ಲ. ಗ್ರಂಥಾಲಯಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಓದಿನ ಆಸಕ್ತಿಯು ಕೊನೆ ಉಸಿರು ಎಳೆಯುತ್ತಿದೆ ಎಂದು ಭಾಸವಾಗುತ್ತಿದೆ. ಬಹು ಆಯ್ಕೆಯ ಓದಿಗಿಂತ ವಿಶ್ಲೇಷಣಾತ್ಮಕ ಓದು ನಮ್ಮನ್ನು ರೂಪಿಸುತ್ತದೆ. ಇದರಿಂದ ಹೊರಬರಲು ಅಂಬೇಡ್ಕರ್ ಎಲ್ಲರಿಗೂ ಓದಿನ ಸ್ಪೂರ್ತಿ ದೀಪವಾಗಲಿ.