ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganesh Bhat Column: ಪರಾನುಭೂತಿ ಎನ್ನುವ ಶ್ರೇಷ್ಠ ಭಾವಸಂಗಮ

ಬೇರೆಯವರ ಆಲೋಚನೆ ಹಾಗೂ ನಂಬಿಕೆಗಳನ್ನು ಅರ್ಥ ಮಾಡಿಕೊಳ್ಳುವ, ಇತರರ ಅನುಭವವನ್ನು ಅವರ ಸ್ಥಾನದಲ್ಲಿ ನಿಂತು ಭಾವನಾತ್ಮಕವಾಗಿ ಅನುಭವಿಸುವ ಹಾಗೂ ಇತರರ ಕಷ್ಟಗಳನ್ನು ಅರ್ಥೈಸಿ ಕೊಂಡು ಅವರಿಗೆ ಸಹಾಯ ಮಾಡಲು ಧಾವಿಸುವ ಸಾಮರ್ಥ್ಯಗಳು ‘ಪರಾನುಭೂತಿ’ಯ ಮೂರು ವಿಧಗಳು ಎಂದು ಮನಃಶಾಸ್ತ್ರಜ್ಞರು ವಿವರಿಸಿದ್ದಾರೆ.

ಭಾವಬುತ್ತಿ

ಗಣೇಶ್‌ ಭಟ್‌, ವಾರಣಾಸಿ

ಮನುಷ್ಯ ಭಾವಜೀವಿ. ಇತರರ ನೋವು-ನಲಿವಿಗೆ ಸ್ಪಂದಿಸುವ ಅಪರೂಪದ ಗುಣವನ್ನು ಮನುಷ್ಯ ರು ಹೊಂದಿದ್ದಾರೆ. ಇತರರನ್ನು ಪ್ರೀತಿ, ದಯೆ ಹಾಗೂ ಕರುಣೆಯಿಂದ ಕಾಣುವ ಮಾನವೀಯತೆಯ ಮೂಲವು ಪರಾನುಭೂತಿಯೇ ಆಗಿದೆ. ನಾವು ಇದನ್ನು ಸರಳವಾಗಿ ‘ಒಳ್ಳೆಯತನ’ ಎಂದು ಗುರುತಿಸು ತ್ತೇವೆ.

ಇದು ಇತರರ ನೋವನ್ನು/ಕಷ್ಟವನ್ನು ನಮ್ಮದೆಂದು ಭಾವಿಸಿ ಮಿಡಿಯುವ ಸ್ವಭಾವವೇ ಆಗಿದೆ. ಪರಾನುಭೂತಿ ಶಕ್ತಿ ಅಥವಾ ಸರಳವಾಗಿ ‘ಪರಾನುಭೂತಿ’ ಯನ್ನು ಇಂಗ್ಲಿಷ್‌ನಲ್ಲಿ Empathy ಎಂದು ಕರೆಯಲಾಗುತ್ತದೆ. ಇದು ‘ಅದ್ವೈತ’ಕ್ಕೆ ತೀರಾ ಸಮೀಪವಿರುವ ವಿಚಾರ.

ಬೇರೆಯವರ ಆಲೋಚನೆ ಹಾಗೂ ನಂಬಿಕೆಗಳನ್ನು ಅರ್ಥ ಮಾಡಿಕೊಳ್ಳುವ, ಇತರರ ಅನುಭವ ವನ್ನು ಅವರ ಸ್ಥಾನದಲ್ಲಿ ನಿಂತು ಭಾವನಾತ್ಮಕವಾಗಿ ಅನುಭವಿಸುವ ಹಾಗೂ ಇತರರ ಕಷ್ಟಗಳನ್ನು ಅರ್ಥೈಸಿಕೊಂಡು ಅವರಿಗೆ ಸಹಾಯ ಮಾಡಲು ಧಾವಿಸುವ ಸಾಮರ್ಥ್ಯಗಳು ‘ಪರಾನುಭೂತಿ’ಯ ಮೂರು ವಿಧಗಳು ಎಂದು ಮನಃಶಾಸ್ತ್ರಜ್ಞರು ವಿವರಿಸಿದ್ದಾರೆ.

ಇದನ್ನೂ ಓದಿ: Ganesh Bhat Column: ಆರ್ಥಿಕತೆಯ ನಿರ್ಮಾತೃಗಳನ್ನು ಗುರಿಯಾಗಿಸುವುದು ಎಷ್ಟು ಸರಿ ?

ಮತ್ತೊಂದೆಡೆ, ಇನ್ನೊಬ್ಬರ ಕಷ್ಟಕ್ಕೆ ವಿಷಾದಿಸಿ ಅನುಕಂಪವನ್ನು ವ್ಯಕ್ತಪಡಿಸುವುದು ಮತ್ತು ಬೆಂಬಲವನ್ನು ನೀಡುವುದು ‘ಸಹಾನುಭೂತಿ’ (Sympathy) ಎನಿಸಿಕೊಳ್ಳುತ್ತದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ವರ್ಷದ ಜೂನ್ ತಿಂಗಳಲ್ಲಿ ಉತ್ತರಾಖಂಡ ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾಗ ಒಂದು ಹೃದಯಸ್ಪರ್ಶಿ ಘಟನೆ ನಡೆಯಿತು. ಜೂನ್ ೨೦ ರಾಷ್ಟ್ರಪತಿಯವರ 67ನೇ ಹುಟ್ಟುಹಬ್ಬದ ದಿನವಾಗಿತ್ತು.

ಅಂದು ಅವರು ಒಂದು ಉದಾತ್ತ ಹೆಜ್ಜೆಯನ್ನಿಟ್ಟರು; ದೃಷ್ಟಿದೋಷದಿಂದ ಬಳಲುತ್ತಿರುವವರ ಸಬಲೀಕರಣ ಸಂಸ್ಥೆಯಾದ National Institute for the Empowerment of Persons with Visual Disabilities ನ ಮಕ್ಕಳೊಂದಿಗೆ ಸಂವಾದ ನಡೆಸಲು ಅವರು ಅಲ್ಲಿಗೆ ಭೇಟಿ ಕೊಟ್ಟಿದ್ದರು. ಆಗ ಅಲ್ಲಿನ ದಿವ್ಯಾಂಗ ಮಕ್ಕಳು ಸುಂದರ ಹಾಡಿನ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದರು.

ಆ ಹಾಡನ್ನು ಕೇಳುತ್ತಾ ರಾಷ್ಟ್ರಪತಿಯವರು ಅತ್ತುಬಿಟ್ಟರು. ‘ಆ ಮಕ್ಕಳು ಹೃದಯಾಂತರಾಳದಿಂದ ತುಂಬಾ ಸುಂದರವಾಗಿ ಆ ಹಾಡು ಹಾಡಿದರು, ಹಾಗಾಗಿ ನನಗೆ ಕಣ್ಣೀರನ್ನು ತಡೆಯಲಾಗಲಿಲ್ಲ’ ಎಂದು ತರುವಾಯದಲ್ಲಿ ಮುರ್ಮು ಅವರು ಹೇಳಿಕೊಂಡಿದ್ದುಂಟು. ವೈಕಲ್ಯವಿದ್ದರೂ ಅಷ್ಟು ಸುಂದರವಾಗಿ ಹಾಡಿದ ಆ ಮಕ್ಕಳ ಮುಗ್ಧತೆ, ಅವರು ಅನುಭವಿಸುವ ನೋವು ಮುಂತಾದವು ಮುರ್ಮು ಅವರ ಹೃದಯವನ್ನು ತಟ್ಟಿತ್ತು.

Screenshot_3 R

ರಾಷ್ಟ್ರಪತಿಗಳಿಗಿರುವ ಶಿಷ್ಟಾಚಾರ, ನಿರ್ಭಾವುಕತೆಗಳನ್ನೂ ಮೀರಿ ಅವರ ‘ಪರಾನುಭೂತಿ’ಯು ಕಣ್ಣೀರಾಗಿ ಹರಿದಿತ್ತು...‘ಕೋರ್ಟುಗಳಿಗೆ ಕಣ್ಣು ಮತ್ತು ಕಿವಿ ಮಾತ್ರ ಇರುತ್ತದೆ, ಹೃದಯ ಇರುವು ದಿಲ್ಲ’ ಎಂದು ಅವರಿವರು ಸಾಮಾನ್ಯವಾಗಿ ಹೇಳುವುದುಂಟು. ಆದರೆ ಈ ಮಾತು ಸುಳ್ಳು ಎಂದು ಸಾಬೀತುಪಡಿಸುವ ಅಪರೂಪದ ಘಟನೆಯೊಂದು ಇತ್ತೀಚೆಗೆ ನಮ್ಮ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

ಕಳೆದ ಜೂನ್ ೧೨ರಂದು ಅಹ್ಮದಾಬಾದ್‌ನಲ್ಲಿ ವಿಮಾನವೊಂದು ಪತನಗೊಂಡು, ಪೈಲಟ್ ಸೇರಿದಂತೆ 260 ಮಂದಿ ಅಸುನೀಗಿದ ದುರ್ಘಟನೆ ನಡೆಯಿತಲ್ಲವೇ? ‘ವಾಲ್‌ಸ್ಟ್ರೀಟ್ ಜರ್ನಲ್’ ಸೇರಿದಂತೆ ಕೆಲವು ವಿದೇಶಿ ಪತ್ರಿಕೆಗಳು, ‘ಪೈಲಟ್‌ನ ತಪ್ಪಿನಿಂದಾಗಿ ಈ ದುರಂತ ನಡೆಯಿತು’ ಎಂಬ ರ್ಥದಲ್ಲಿ ವರದಿ ಮಾಡಿದ್ದವು. ಪೈಲಟ್ ಆಗಿದ್ದ ಮಗನನ್ನು ಕಳೆದುಕೊಂಡು ಮೊದಲೇ ನೋವಿ ನಲ್ಲಿದ್ದ ಅವರ ತಂದೆ ಪುಷ್ಕರಾಜ್ ಸಭರ್ವಾಲ್ (91) ಅವರು ಈ ವರದಿಯಿಂದಾಗಿ ಮತ್ತಷ್ಟು ನೊಂದು, ಸುಪ್ರೀಂ ಕೋರ್ಟ್‌ನ ಮೊರೆಹೋದರು.

ಈ ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ನ್ಯಾಯಪೀಠವು, “ಈ ಆರೋಪದ ಭಾರವನ್ನು ನೀವು ಹೊರಬೇಕಾಗಿಲ್ಲ; ವಿಮಾನದ ದುರಂತಕ್ಕೆ ಪೈಲಟ್ ಅನ್ನು ದೂಷಿಸುವಂತಿಲ್ಲ. ಅದೊಂದು ಅಪಘಾತವಾಗಿತ್ತು. ಪ್ರಾಥಮಿಕ ತನಿಖೆಯಲ್ಲೂ ಪೈಲಟ್ ವಿರುದ್ಧ ಯಾವುದೇ ಆರೋಪವಿಲ್ಲ. ಭಾರತವನ್ನು ದೂಷಿಸುವ ಉದ್ದೇಶದಿಂದಲೇ ಈ ಅಸಹನೀಯ ವರದಿಯನ್ನು ಪ್ರಕಟಿಸಲಾಗಿದೆ" ಎಂದು ಹೇಳಿ ಪುತ್ರಶೋಕದಿಂದ ಬಳಲುತ್ತಿದ್ದ ಆ ವಯೋವೃದ್ಧ ತಂದೆಯನ್ನು ಸಮಾಧಾನ ಪಡಿಸಿತು. ತನ್ಮೂಲಕ, ನ್ಯಾಯಪೀಠಕ್ಕೂ ಹೃದಯವಿದೆ ಎಂಬುದನ್ನು ಸಾಬೀತುಪಡಿಸಿತು.

ಇನ್ನು ಪ್ರಧಾನಿ ನರೇಂದ್ರ ಮೋದಿಯವರ ವಿಷಯ. ಅವರು ಭಾವುಕರಾಗಿದ್ದು, ದುಃಖಿತರನ್ನು ಸಂತೈಸಿದ್ದು, ಕಷ್ಟಗಳನ್ನು ಮನಗಂಡು ಸ್ಪಂದಿಸಿದ್ದು ಹೀಗೆ ಸಾಕಷ್ಟು ನಿದರ್ಶನಗಳಿವೆ. ಅದರಲ್ಲಿ ಎದ್ದುಕಾಣುವಂಥದ್ದು 2019ರಲ್ಲಿನ ಒಂದು ಘಟನೆ. ಭಾರತದ ಬಾಹ್ಯಾಕಾಶ ಸಂಸ್ಥೆ ‘ಇಸ್ರೋ’ ಹಮ್ಮಿಕೊಂಡಿದ್ದ ‘ಚಂದ್ರಯಾನ-೨’ ಯೋಜನೆಯ ಪ್ರಮುಖ ಭಾಗವಾದ ವಿಕ್ರಂ ನೌಕೆಯ ಲ್ಯಾಂಡಿಂಗ್ ವಿಫಲವಾದಾಗ ಮೋದಿಯವರು ನಡೆದುಕೊಂಡ ರೀತಿ ಕಣ್ಣಿಗೆ ಕಟ್ಟಿದಂತಿದೆ.

ಸದರಿ ಲ್ಯಾಂಡಿಂಗ್ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮೋದಿಯವರು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಬಂದಿದ್ದರು. ನಿಗದಿತ ಕಕ್ಷೆಯನ್ನು ತಲುಪುವಲ್ಲಿ ‘ಚಂದ್ರಯಾನ-೨’ ಯಶಸ್ವಿಯಾದರೂ, ಚಂದ್ರನನ್ನು ಸ್ಪರ್ಶಿಸಬೇಕಿದ್ದ ‘ವಿಕ್ರಂ ಲ್ಯಾಂಡರ್’ ಕೊನೆಯ ಕ್ಷಣದಲ್ಲಿ ಕಕ್ಷಾಗಾಮಿ ನೌಕೆಯ (ಆರ್ಬಿಟರ್) ಜತೆಗಿನ ಸಂಪರ್ಕವನ್ನು ಕಡಿದುಕೊಂಡಿತು.

ಮಹತ್ತರ ಘಟ್ಟದಲ್ಲಿ ಹೀಗೆ ಒದಗಿದ ವೈಫಲ್ಯವು ಆ ಯೋಜನೆಗಾಗಿ ದುಡಿದಿದ್ದ ಎಲ್ಲಾ ವಿಜ್ಞಾನಿ ಗಳನ್ನೂ ದುಃಖಕ್ಕೆ ದೂಡಿತು. ಪ್ರಧಾನಿಯನ್ನು ಬೀಳ್ಕೊಡುವ ಸಮಯದಲ್ಲಿ ಇಸ್ರೋದ ಅಂದಿನ ಮುಖ್ಯಸ್ಥ ಕೆ.ಸಿವನ್ ಅವರಿಗೆ ದುಃಖ ಉಮ್ಮಳಿಸಿ ಬಂತು. ಆಗ ಮೋದಿಯವರು ಸಿವನ್ ಅವರನ್ನು ಆಲಿಂಗಿಸಿ ಬೆನ್ನುತಟ್ಟಿ ಸಂತೈಸಿದ ರೀತಿಯು ದೇಶವಾಸಿಗಳ ಮೆಚ್ಚುಗೆಗೆ ಪಾತ್ರವಾಯಿತು.

‘ಗೆಲುವಿನಲ್ಲಿ ಮಾತ್ರವಲ್ಲ, ಸೋಲಿನ ಸಂದರ್ಭದಲ್ಲೂ ನಾನು ಇಸ್ರೋ ವಿಜ್ಞಾನಿಗಳ ಜತೆಗಿದ್ದೇನೆ’ ಅಂತ ಮೋದಿಯವರು ಅಲ್ಲಿ ಸೂಚ್ಯವಾಗಿ ಹೇಳಿದಂತಿತ್ತು. ಇದಕ್ಕೂ ಮೊದಲು ಇಸ್ರೋ ವಿಜ್ಞಾನಿ ಗಳನ್ನು ಉದ್ದೇಶಿಸಿ ಭಾಷಣ ಮಾಡುವಾಗ, “ಅಂತಿಮ ಹಂತದವರೆಗೂ ತಲುಪಿದ ಪಯಣ ಹಾಗೂ ಅದರ ಹಿಂದಿನ ಪ್ರಯತ್ನ ಇವು ಫಲಿತಾಂಶದಷ್ಟೇ ಮಹತ್ತರವಾದಂಥವು" ಎಂದು ಶ್ಲಾಘಿಸಿದ್ದರು.

ಗುಲಾ ನಬಿ ಆಜಾದ್ ಅವರ ರಾಜ್ಯಸಭಾ ಸದಸ್ಯತ್ವದ ಅವಧಿಯು 2021ರಲ್ಲಿ ಮುಗಿದ ಸಂದರ್ಭ ದಲ್ಲಿ ಮೋದಿಯವರು ಮಾಡಿದ ಬೀಳ್ಕೊಡುಗೆ ಭಾಷಣವು ಭಾವಪೂರ್ಣವಾಗಿತ್ತು. ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಅಲ್ಲಿಂದ ಕಾಶ್ಮೀರಕ್ಕೆ ತೆರಳಿದ್ದ ೮ ಮಂದಿ ಪ್ರವಾಸಿಗರು ಅಲ್ಲಿ ಉಗ್ರರ ದಾಳಿಗೆ ಬಲಿಯಾದರು. ಆ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಯಾಗಿದ್ದ ಗುಲಾಂ ನಬಿ ಆಜಾದ್ ಅವರು ಸ್ವತಃ ಮುತುವರ್ಜಿವಹಿಸಿ, ಮೃತದೇಹಗಳನ್ನು ಅಂದೇ ರಾತ್ರಿ ಗುಜರಾತಿಗೆ ಕಳುಹಿಸಲು ಕ್ರಮ ಕೈಗೊಂಡರು ಹಾಗೂ ಈ ವಿಚಾರವಾಗಿ ಮೋದಿಯವರೊಡನೆ ಫೋನ್‌ನಲ್ಲಿ ಮಾತಾಡುವಾಗ ಮೃತರ ಬಗೆಗೆ ಅತೀವವಾಗಿ ದುಃಖಿಸಿದ್ದರು.

ಈ ಘಟನೆಯನ್ನು ಸದರಿ ಬೀಳ್ಕೊಡುಗೆ ಭಾಷಣದಲ್ಲಿ ನೆನಪಿಸಿಕೊಳ್ಳುವಾಗ ಮೋದಿಯವರು ಗದ್ಗದಿತರಾಗಿದ್ದರು. ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿಯವರು ನರೇಂದ್ರ ಮೋದಿ ಯವರ ಜತೆಗಿನ ಅನುಭವವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ಕೆಲ ತಿಂಗಳ ಹಿಂದೆ ಕ್ಯಾನ್ಸರ್ ಗೆ ತುತ್ತಾಗಿದ್ದ ರಾಜ್‌ದೀಪ್ ಚಿಕಿತ್ಸೆಗೊಳಗಾಗಿದ್ದರು.

ಚಿಕಿತ್ಸೆಯ ನಂತರ ಅವರಿಗೆ ಪ್ರಧಾನ ಮಂತ್ರಿಯವರ ಕಚೇರಿಯಿಂದ ದೂರವಾಣಿ ಕರೆ ಬಂದು, ಮೋದಿಯವರು ಮಾತನಾಡಲಿದ್ದಾರೆ ಎಂದು ತಿಳಿಸಲಾಯಿತು. ರಾಜ್‌ದೀಪ್ ಅವರೊಡನೆ ಸುಮಾರು ಅರ್ಧ ಗಂಟೆ ಕುಶಲೋಪರಿಯ ಮಾತನಾಡಿದ ಮೋದಿಯವರು ನಂತರದಲ್ಲಿ, ಯಾವ ರೀತಿಯ ಆಹಾರವನ್ನು ಸೇವಿಸಬೇಕು, ಪಥ್ಯ ಹೇಗಿರಬೇಕು, ದಿನಚರಿಯನ್ನು ಹೇಗೆ ಬದಲಿಸಿಕೊಳ್ಳ ಬೇಕು ಎಂಬ ಬಗ್ಗೆ ಸಲಹೆ ನೀಡಿದರಂತೆ.

ಮೋದಿಯವರ ಈ ವರ್ತನೆ ರಾಜ್ ದೀಪ್ ಅವರಿಗೆ ಸಂತಸ ಹಾಗೂ ಅಚ್ಚರಿಯನ್ನುಂಟು ಮಾಡಿತ್ತು. ಏಕೆಂದರೆ, ಅವರು ಮೋದಿಯವರ ಕಟುಟೀ ಕಾಕಾರ; ಗುಜರಾತಿನಲ್ಲಿ ನಡೆದ ಗೋಧ್ರೋತ್ತರ ಹಿಂಸಾಚಾರಗಳಿಗೆ ಮೋದಿಯೇ ನೇರಹೊಣೆ ಎಂಬಂತೆ ವರದಿಮಾಡುತ್ತಾ ಬಂದವರು. ಮೋದಿ ಯವರು ಪ್ರಧಾನಿಯಾದ ನಂತರ ರಾಜ್‌ದೀಪ್‌ರಿಗೆ ಸಂದರ್ಶನವನ್ನು ಕೊಟ್ಟಿಲ್ಲ.

ಇನ್ನು ರಾಜ್‌ದೀಪ್ ಪತ್ನಿ ಸಾಗರಿಕಾ ಘೋಷ್ ಅವರಂತೂ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷದ ರಾಜ್ಯಸಭಾ ಸದಸ್ಯೆಯಾಗಿದ್ದು, ಮೋದಿಯವರು ಸೇರಿದಂತೆ ಕೇಂದ್ರ ಸರಕಾರವನ್ನು ಟೀಕಿಸುತ್ತಲೇ ಬಂದವರು. ಹೀಗಿದ್ದೂ, ರಾಜ್‌ದೀಪ್ ಅವರು ಸಂಕಷ್ಟದಲ್ಲಿದ್ದಾಗ ಅವರಿಗೆ ಕರೆ ಮಾಡಿ ಸಾಂತ್ವನ ಹೇಳುವ ಮಾನವೀಯತೆಯನ್ನು ಮೋದಿ ಮೆರೆದರು.

“ಮೋದಿಯವರಿಗೆ ನನ್ನ ಬಳಿ ಮಾತನಾಡಬೇಕೆಂದೇನೂ ಇರಲಿಲ್ಲ, ಬೇರಾವ ರಾಜಕೀಯ ನಾಯಕನೂ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿರಲಿಲ್ಲ. ವೈದ್ಯ ವೃತ್ತಿಯಲ್ಲಿರುವ ನನ್ನ ಮಗ ಈಗ ಮೋದಿಯವರ ಅಭಿಮಾನಿಯಾಗಿದ್ದಾನೆ" ಎಂದು ರಾಜ್‌ದೀಪ್ ಒಂದೆಡೆ ಹೇಳಿಕೊಂಡಿರುವು ದುಂಟು. ಹೇಳುತ್ತ ಹೋದರೆ, ‘ಪರಾನುಭೂತಿ ಶಕ್ತಿ’ಯ ಇಂಥ ಸಾಕಷ್ಟು ನಿದರ್ಶನಗಳನ್ನು ನೀಡಬಹುದು.

ಮತ್ತೊಬ್ಬರ ನೋವು-ನಲಿವುಗಳಿಗೆ ಸ್ಪಂದಿಸುವ ಗುಣ ಮನುಷ್ಯರಲ್ಲಿ ಸಹಜವಾಗಿಯೇ ಇರುತ್ತದೆ; ಆದರೆ ವ್ಯಾವಹಾರಿಕ ಪ್ರಪಂಚದ ಮತ್ತು ಧಾವಂತದ ಬದುಕಿನ ಸುಳಿಯಲ್ಲಿ ಸಿಲುಕಿರುವ ಇಂದಿನ ಜನರು ಒಂದು ರೀತಿಯ ನಿರ್ಭಾವುಕತೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಮೇಲಿನ ನಿದರ್ಶನಗಳಲ್ಲಿ ಉಲ್ಲೇಖಿಸಲಾಗಿರುವ ‘ಪರಾನುಭೂತಿ ಶಕ್ತಿ’ಯನ್ನು ನಾವೆಲ್ಲರೂ ರೂಢಿಸಿಕೊಳ್ಳುವಂತಾದರೆ ಮುಂದಿನ ಜನಾಂಗವೂ ಇಂಥ ಸೂಕ್ಷ್ಮಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಕ್ಕೆ ಅದು ಮೇಲ್ಪಂಕ್ತಿ ಯಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)