ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranjith H Ashwath Column: ರಾಜ್ಯಪಾಲರ ಭಾಷಣವೆಂಬ 'ಗ್ರೇ ಏರಿಯಾ'

ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಒಪ್ಪಿದ್ದರು. ಆ ಕಾರಣಕ್ಕಾಗಿಯೇ ಅಧಿವೇಶನವನ್ನೂ ‘ಕರೆದಿದ್ದರು’. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಯಾವಾಗ ಸರಕಾರ ಕೇಂದ್ರದ ವಿರುದ್ಧ 11 ಪ್ಯಾರಗಳನ್ನು ಸೇರಿಸಿತೋ ಅಲ್ಲಿಗೆ, ಲೋಕಭವನ ಹಾಗೂ ಸರಕಾರದ ನಡುವಿನ ಸಂಘರ್ಷ ಆರಂಭವಾಯಿತು.

ಅಶ್ವತ್ಥಕಟ್ಟೆ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪ್ರೇರಿತ ಕಿತ್ತಾಟಗಳು ಹೊಸದೇನಲ್ಲ. ಅದರಲ್ಲಿಯೂ ಕೇಂದ್ರ ಹಾಗೂ ರಾಜ್ಯದಲ್ಲಿ ಭಿನ್ನ ಪಕ್ಷಗಳು ಅಧಿಕಾರದಲ್ಲಿದ್ದಾಗ, ಕೇಂದ್ರ ಸರಕಾರದಿಂದ ನೇಮಕವಾಗುವ ರಾಜ್ಯಪಾಲರ ಹಾಗೂ ರಾಜ್ಯ ಸರಕಾರದ ನಡುವೆ ಕಿತ್ತಾಟ ಗಳೂ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಎನಿಸುವಷ್ಟರ ಮಟ್ಟಿಗೆ ಹೋಗಿದೆ. ಆದರೆ ಈ ವಿಷಯದಲ್ಲಿ ಮಾದರಿ ಎನಿಸಿಕೊಂಡಿದ್ದ ಕರ್ನಾಟಕದಲ್ಲಿಯೂ ಇದೀಗ ರಾಜಭವನ ವರ್ಸಸ್ ರಾಜ್ಯ ಸರಕಾರ ಶುರುವಾಗಿರುವುದು ಕರ್ನಾಟಕದ ಮಟ್ಟಿಗೆ ಆತಂಕಕಾರಿ ಬೆಳವಣಿಗೆಯಾಗಿದೆ.

ಕರ್ನಾಟಕದಲ್ಲಿ ಹಂಸರಾಜ್ ಭಾರದ್ವಾಜ್ ರಾಜ್ಯಪಾಲರಾಗಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಈ ರೀತಿಯ ತಿಕ್ಕಾಟವಿತ್ತು. ಆ ಸಮಯದಲ್ಲಿ ರಾಜ್ಯಪಾಲರು ನಿತ್ಯ ಒಂದಿಲ್ಲೊಂದು ವಿಷಯವನ್ನು ಮುಂದಿಟ್ಟುಕೊಂಡು ಸರಕಾರವನ್ನು ಟೀಕಿಸುವ ಅಥವಾ ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನು ಮಾಡುತ್ತಿದ್ದರು.

ಆದರೆ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವುದಿಲ್ಲ ಎನ್ನುವ ‘ವಿರೋಧ’ವನ್ನು ವ್ಯಕ್ತಪಡಿಸಿದ್ದ ಇತಿಹಾಸವಿರಲಿಲ್ಲ. ಆದರೆ ಈ ಬಾರಿ ಕರ್ನಾಟಕದ ಇತಿಹಾಸದಲ್ಲಿ ಅದೂ ಘಟಿಸಿದ್ದು, ಆ ಮಟ್ಟಿಗೆ ಕರ್ನಾಟಕದ ‘ಮಾದರಿ’ ಹಾಳಾಯಿತು ಎಂದರೆ ತಪ್ಪಾಗುವುದಿಲ್ಲ.

ಈ ಹಿಂದೆ ಜೆಎಚ್ ಪಟೇಲರ ಸಮಯದಲ್ಲಿ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಭಾಷಣ ಮಾಡುವಾಗ ಪ್ರತಿಪಕ್ಷಗಳ ತೀವ್ರ ವಿರೋಧ ಹಾಗೂ ಗಲಾಟೆಯಿಂದ ಭಾಷಣವನ್ನು ಮೊಟಕುಗೊಳಿಸಿದ್ದ ಇತಿಹಾಸ ವಿದೆ. ಆದರೆ ರಾಜ್ಯ ಸರಕಾರ ಸಿದ್ಧಪಡಿಸಿರುವ ಭಾಷಣ ಸರಿಯಿಲ್ಲ. ಆದ್ದರಿಂದ ಅದನ್ನು ಓದಲು ಸಾಧ್ಯವಿಲ್ಲ ಎಂದು ಹೇಳಿದ್ದು ಇದೇ ಮೊದಲು.

ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಒಪ್ಪಿದ್ದರು. ಆ ಕಾರಣಕ್ಕಾಗಿಯೇ ಅಧಿವೇಶನವನ್ನೂ ‘ಕರೆದಿದ್ದರು’. ಅಲ್ಲಿಯ ವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಯಾವಾಗ ಸರಕಾರ ಕೇಂದ್ರದ ವಿರುದ್ಧ 11 ಪ್ಯಾರ ಗಳನ್ನು ಸೇರಿಸಿತೋ ಅಲ್ಲಿಗೆ, ಲೋಕಭವನ ಹಾಗೂ ಸರಕಾರದ ನಡುವಿನ ಸಂಘರ್ಷ ಆರಂಭವಾಯಿತು.

ಕೇಂದ್ರ ಸರಕಾರದ ಅನುಮೋದನೆಯೊಂದಿಗೆ, ರಾಷ್ಟ್ರಪತಿಗಳಿಂದ ನೇಮಕವಾಗಿರುವ ನಾನು, ಕೇಂದ್ರ ಹಾಗೂ ರಾಷ್ಟ್ರಪತಿಗಳಿಂದ ಅನುಮೋದನೆಗೊಂಡಿರುವ ಕಾಯಿದೆಯ ವಿರುದ್ಧ ಹೇಗೆ ಮಾತನಾಡಲಿ? ಎನ್ನುವ ಪ್ರಶ್ನೆಯನ್ನು ಗೆಹ್ಲೋಥ್ ಅವರು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹಾಗೂ ಸಿಎಸ್ ಶಾಲಿನಿ ರಜನೀಶ್ ಮುಂದಿಟ್ಟರು.

ಇದರೊಂದಿಗೆ ಭಾಷಣಕ್ಕೆ ಹೋದರೆ ಏನಾಗುತ್ತದೆ? ಹೋಗದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆ ಸಂವಿಧಾನ ಪಂಡಿತರ ಮುಂದಿಟ್ಟಾಗಲೇ ಗೊತ್ತಾಗಿದ್ದು, ರಾಜ್ಯಪಾಲರ ಭಾಷಣ ಎನ್ನುವುದು ‘ಗ್ರೇ ಏರಿಯಾ’ ಎಂದು. ಜಂಟಿ ಅಧಿವೇಶನದ ಸಮಯದಲ್ಲಿ ರಾಜ್ಯಪಾಲರು ತಮ್ಮಿಷ್ಟದ ಭಾಷಣ ಮಾಡುವುದಕ್ಕೆ ಅವಕಾಶವಿಲ್ಲ ಎನ್ನುವುದು ಎಷ್ಟು ಸ್ಪಷ್ಟವೋ, ಯಾವುದು ಓದಬೇಕು? ಯಾವುದು ಓದಬಾರದು ಎನ್ನುವುದನ್ನು ತೀರ್ಮಾನಿಸುವುದಕ್ಕೆ ಅವರಿಗೆ ಅವಕಾಶವಿದೆ.

ಸಂವಿಧಾನದ 176ನೇ ವಿಧಿಯಲ್ಲಿ ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದಬೇಕು ಎಂದು ಹೇಳಿದೆಯೇ ಹೊರತು, ಓದದೇ ಹೋದರೆ ಏನಾಗುತ್ತದೆ ಎನ್ನುವ ಸ್ಪಷ್ಟನೆ ಇಲ್ಲ. ಸಂವಿಧಾನದಲ್ಲಿರುವ ಈ ಗೊಂದಲವನ್ನು ಮುಂದಿಟ್ಟುಕೊಂಡು ರಾಜ್ಯಪಾಲರು ಆರಂಭ ದಲ್ಲಿ ಭಾಷಣಕ್ಕೆ ಬರುವುದಿಲ್ಲ ಎಂದು ಹೇಳಿದ್ದು.

ಕೇಂದ್ರದ ವಿರುದ್ಧ 11 ಪ್ಯಾರಾ ತೆಗೆಯದಿದ್ದರೆ ಭಾಷಣ ಮಾಡುವುದಿಲ್ಲ ಎಂದಾಗ ಆರಂಭ ದಲ್ಲಿ ಸರಕಾರದಿಂದ ‘ಓದದಿದ್ದರೆ ಪರವಾಗಿಲ್ಲ’ ಎನ್ನುವ ಸಂದೇಶ ರವಾನೆಯಾಗಿತ್ತು. ಆದರೆ ಬಳಿಕ ಸಿದ್ಧಪಡಿಸಿರುವ ಭಾಷಣವನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಮಾತನ್ನು ಎಚ್.ಕೆ. ಪಾಟೀಲ್ ಹೇಳಿದಾಗಲೇ ಗೊಂದಲ ಶುರುವಾಗಿತ್ತು.

ಈ ನಡುವೆ ಸರಕಾರ ಸಂಧಾನದ ಜತೆ ಜತೆಗೆ, ರಾಜ್ಯಪಾಲರು ಆಗಮಿಸದಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸಿದ್ಧತೆ ಆರಂಭಿಸಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸಜ್ಜಾಗುತ್ತಿದ್ದಂತೆ ಎಚ್ಚೆತ್ತ ರಾಜ್ಯಪಾಲರು, ಭಾಷಣ ಮಾಡಿರಬೇಕು. ಆದರೆ ರಾಜ್ಯ ಸರಕಾರವನ್ನು ಒಂಟಿ ಕಾಲಿನಲ್ಲಿ ನಿಲ್ಲಿಸಬೇಕು ಎನ್ನುವ ತೀರ್ಮಾನಕ್ಕೆ ಬಂದರು. ಒಂದು ವೇಳೆ ಬಾರದೇ ಹೋಗಿ, ಸುಪ್ರೀಂ ಕೋರ್ಟ್‌ನ ಸಾಂವಿಧಾ ನಿಕ ಪೀಠದಲ್ಲಿ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದಾಗ, ‘ರಾಜ್ಯಪಾಲರ ಭಾಷಣವಿಲ್ಲದೇ ಅಧಿವೇಶನ ನಡೆಸಬಹುದು’ ಎಂದೋ ಅಥವಾ ‘ಸಚಿವ ಸಂಪುಟ ಕೊಟ್ಟ ಭಾಷಣ ಓದು ವುದು ರಾಜ್ಯಪಾಲರ ಕರ್ತವ್ಯ’ವೆಂದು ಪೀಠ ಹೇಳಿದ್ದರೆ, ರಾಜ್ಯಪಾಲರಿಗೆ ತೀವ್ರ ಹಿನ್ನಡೆ ಯಾಗುತ್ತಿತ್ತು.

ಆ ಕಾರಣಕ್ಕೆ, ನ್ಯಾಯಾಲಯದಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಬಂದು, ಎರಡು ಸಾಲಿನ ಭಾಷಣ ಓದಿ ಹೋದರು. ಆದರೆ ರಾಜ್ಯಪಾಲರ ಈ ನಡೆಯಿಂದ ಕೇಂದ್ರವನ್ನು ರಾಜ್ಯಪಾಲರಿಂದ ಟೀಕಿಸುವ ಕೈ ನಾಯಕರ ಆಶಯ ಈಡೇರಲಿಲ್ಲ. ಆ ಕಾರಣಕ್ಕಾಗಿಯೇ ರಾಜ್ಯಪಾಲರನ್ನು ಅಡ್ಡಹಾಕುವ ಕೆಟ್ಟ ಸಂಪ್ರದಾಯಕ್ಕೆ ಕೆಲ ಕಾಂಗ್ರೆಸ್ ಶಾಸಕರು ನಾಂದಿ ಹಾಡಿದರು.

ಮೂರು ವಾಕ್ಯದಲ್ಲಿ ರಾಜ್ಯಪಾಲರು ಭಾಷಣ ಮಾಡುವ ಮೂಲಕ ‘ಸಾಂವಿಧಾನಿಕ ಬಿಕ್ಕಟ್ಟು’ ಸೃಷ್ಟಿಯಾಗದಂತೆ ಜಾಣ ನಡೆ ಅನುಸರಿಸಿದರು. ಆದರೆ ಅದರ ಮುಂದುವರೆದ ಭಾಗವಾಗಿ ಕಾಂಗ್ರೆಸ್ ಶಾಸಕರು ರಾಜ್ಯಪಾಲರನ್ನು ತಡೆಯುವ ಪ್ರಯತ್ನ ಮಾಡಿದ್ದು, ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ವಾಗ್ದಾಳಿ ನಡೆಸಿದ್ದು, ರಾಜ್ಯಪಾಲರ ವಿರುದ್ಧವೇ ‘ನಿರ್ಣಯ’ ತೆಗೆದು ಕೊಳ್ಳುವ ಆಲೋಚನೆ ಮಾಡಿರುವುದರಿಂದ ಲೋಕಭವನ ಹಾಗೂ ವಿಧಾನಸೌಧದ ನಡುವೆ ಎಲ್ಲರೂ ಸರಿಯಾ ಗಿಲ್ಲ.

ಸರಿ ಹೋಗುವುದು ಇಲ್ಲ ಎನ್ನುವ ಸ್ಪಷ್ಟ ಸಂದೇಶ ನೀಡಿದಂತಾಗಿದೆ. ಆದರೆ ಇದೀಗ ಕಾಂಗ್ರೆಸಿಗರು ಒಂದು ಹೆಜ್ಜೆ ಮುಂದೆ ಹೋಗಿ, ಲೋಕಭವನ ಚಲೋಕ್ಕೆ ಕರೆ ನೀಡಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ನರೇಗಾ ಯೋಜನೆ ಮರುಸ್ಥಾಪನೆಗೆ ಆಗ್ರಹಿಸಿ ಕಾಂಗ್ರೆಸಿಗರು ಮಂಗಳವಾರ ಫ್ರೀಡಂ ಪಾರ್ಕ್‌ ನಲ್ಲಿ ಪ್ರತಿಭಟನೆ ಆಯೋಜಿಸಿದ್ದರು. ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕಾಗಿರುವು ದರಿಂದ ಇದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ಈ ಪ್ರತಿಭಟನೆಯ ಬಳಿಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ‘ಲೋಕಭವನ ಚಲೋ’ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ.

ಆಡಳಿತಾರೂಢ ಪಕ್ಷ ಅದರಲ್ಲಿಯೂ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ಸಮ್ಮುಖ ದಲ್ಲಿ, ರಾಜಭವನಕ್ಕೆ ಮುತ್ತಿಗೆ ಹಾಕುವುದು ಎಷ್ಟು ಸರಿ? ಹೈಕೋರ್ಟ್ ಸೂಚನೆಯಂತೆ ನಿಗದಿತ ಸ್ಥಳಗಳನ್ನು ಹೊರತಾಗಿ ಇತರೆಡೆ ರ‍್ಯಾಲಿ, ಮೆರವಣಿಗೆಗೆ ರಾಜ್ಯ ಸರಕಾರವೇ ನಿರ್ಬಂಧ ವಿಧಿಸಿರುವಾಗ ಈ ನಿರ್ಬಂಧವನ್ನು ಉಲ್ಲಂಘಿಸಿ ರ‍್ಯಾಲಿ ನಡೆಸುವುದು ಕಾನೂನಾ ತ್ಮಕವಾಗಿ ಎಷ್ಟು ಸರಿ ಎನ್ನುವ ಪ್ರಶ್ನೆಗಳು ಶುರುವಾಗಿದೆ.

ಅದರಲ್ಲಿಯೂ ಡಿ.ಕೆ.ಶಿವಕುಮಾರ್ ಅವರು ‘ಲೋಕಭವನಕ್ಕೆ ಮುತ್ತಿಗೆ’ ಎನ್ನುವ ಶಬ್ದ ವನ್ನು ಬಳಸಿದ್ದಾರೆ. ರಾಜಕೀಯವಾಗಿ ತಮ್ಮ ತಮ್ಮ ಪಕ್ಷದ ನಿಲುವು, ಸಿದ್ಧಾಂತಕ್ಕೆ ಬದ್ಧವಾಗಿ ಹೋರಾಟ ನಡೆಸುವುದರಲ್ಲಿ ತಪ್ಪಿಲ್ಲ. ಆದರೆ ರಾಜ್ಯದಲ್ಲಿ ಸಂವಿಧಾನ ಮುಖ್ಯಸ್ಥರಾಗಿರುವ, ಯಾವುದೇ ಪಕ್ಷಕ್ಕೆ ಸೇರದೇ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗುವ ಮೂಲಕ ಯಾವ ಸಂದೇಶವನ್ನು ನೀಡಲು ಸರಕಾರ ಪ್ರಯತ್ನಿಸುತ್ತಿದೆ? ಲೋಕಭವನಕ್ಕೆ ಯಾರೇ ಮುತ್ತಿಗೆ ಹಾಕಲು ಪ್ರಯತ್ನಿಸಿದರೂ ಪೊಲೀಸರು ಕಿ.ಮೀ ದೂರದಲ್ಲಿಯೇ ವಶಕ್ಕೆ ಪಡೆಯುವುದು ಸಹಜ.

ವಿಧಾನಸೌಧ, ರಾಜಭವನ, ಮುಖ್ಯ ಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವ ‘ವಿಫಲ’ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಆದರೆ ಜನಸಾಮಾನ್ಯರು, ಸಂಘ-ಸಂಸ್ಥೆಗಳು, ಪ್ರತಿಪಕ್ಷಗಳು ಮಾಡುವುದಕ್ಕೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ, ರಾಜಭವನಕ್ಕೆ ಭದ್ರತೆಯನ್ನು ನೀಡಬೇಕಾದ ಆಡಳಿತ ಪಕ್ಷವೇ ಈ ರೀತಿ ಬೀದಿಗೆ ಇಳಿದರೆ ಪೊಲೀಸರ ಕಥೆಯೇನು ಎನ್ನುವುದು ಈಗಿರುವ ಪ್ರಶ್ನೆ.

ವಿಬಿ ರಾಮ್ ಜಿ ಕಾಯಿದೆ ಜಾರಿಗೊಳಿಸಿರುವ ಬಿಜೆಪಿಯ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸುವದಕ್ಕೆ ಯಾರ ಅಭ್ಯಂತರವೂ ಇಲ್ಲ. ಒಂದು ವೇಳೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಡಿ.ಕೆ.ಶಿವಕುಮಾರ್ ಕರೆ ನೀಡಿದ್ದರೂ ‘ರಾಜಕೀಯ’ ಹೋರಾಟದ ಒಂದು ಭಾಗವೆಂದೇ ಭಾವಿಸಬಹುದಾಗಿತ್ತು. ಆದರೆ ಈ ಮುತ್ತಿಗೆ ಕಾರ್ಯಕ್ರಮವನ್ನು ಲೋಕ ಭವನಕ್ಕೆ ಶಿಫ್ಟ್ ಮಾಡುವ ಮೂಲಕ ಕರ್ನಾಟಕ ರಾಜಕೀಯದಲ್ಲಿ ‘ಕೆಟ್ಟ ಪರಂಪರೆ’ಗೆ‌ ಕಾಂಗ್ರೆಸ್ ಕೈಹಾಕಿದೆ ಎನ್ನುವುದು ಸ್ಪಷ್ಟ.

ಹಾಗೇ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ಸರಕಾರ ಹಾಗೂ ರಾಜ್ಯಪಾಲರ ನಡುವೆ ಈ ರೀತಿಯ ತಿಕ್ಕಾಟ ನಡೆಯುತ್ತಿರುವುದು ಸಹಜ ಎನಿಸಿದೆ. ಈ ರೀತಿಯಾಗಲು ಕಾರಣವೂ ಇದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಹಲವು ದಶಕಗಳ ಕಾಲ ಕಾಂಗ್ರೆಸ್ ಏಕಚಕ್ರಾಧಿಪತ್ಯ ನಡೆಸಿತ್ತು.

ಕೆಲ ರಾಜ್ಯಗಳಲ್ಲಿ ಇತರೆ ಪಕ್ಷಗಳು ಅಧಿಕಾರಕ್ಕೆ ಬಂದರೂ, ದೊಡ್ಡ ಪ್ರಮಾಣದಲ್ಲಿ ವಿರೋಧಿಸುವ ಶಕ್ತಿ ಇರಲಿಲ್ಲ. ಕಾಂಗ್ರೆಸೇತರ ಪಕ್ಷಗಳು ಅಧಿಕಾರಕ್ಕೆ ಬಂದರೂ, ಅಲ್ಲಿನ ಸರಕಾರಗಳು ‘ಹೊಂದಾಣಿಕೆ’ ಮಾಡಿಕೊಂಡು ಹೋಗುತ್ತಿದ್ದರಿಂದ ರಾಜಕೀಯವಾಗಿ ಮುಂದೊಂದು ದಿನ ರಾಜ್ಯಪಾಲರ ಭಾಷಣ ಬಹುದೊಡ್ಡ ಸಮಸ್ಯೆಯಾಗುತ್ತದೆ ಎಂದು ಭಾವಿಸಿರಲಿಲ್ಲ.

ಅಟಲ್ ಬಿಹಾರಿ ವಾಜಪೇಯಿ ಸರಕಾರವಿದ್ದಾಗಲೂ, ಈ ಪ್ರಮಾಣದಲ್ಲಿ ರಾಜಕೀಯ ಕಿತ್ತಾಟವಿರದ ಕಾರಣ ಸಮಸ್ಯೆಯಾಗಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸೈದ್ಧಾಂತಿಕ ವಿಷಯದಲ್ಲಿ ಹೋರಾಟಗಳು ತೀವ್ರ ಸ್ವರೂಪ ಪಡೆಯುತ್ತಿರುವುದರಿಂದ ರಾಜ್ಯ ಸರಕಾರ ಹಾಗೂ ರಾಜ್ಯಪಾಲರ ನಡುವೆ ಈ ಪ್ರಮಾಣದಲ್ಲಿ ತಿಕ್ಕಾಟ ತೀವ್ರಗೊಂಡಿದೆ ಎಂದರೆ ತಪ್ಪಾಗುವುದಿಲ್ಲ.

ರಾಜ್ಯ ಸರಕಾರ ಹಾಗೂ ರಾಜ್ಯಪಾಲರ ನಡುವಿನ ಈ ಗುದ್ದಾಟ ಕರ್ನಾಟಕದ ಮಟ್ಟಿಗೆ ಹೊಸದಾದರೂ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದಕ್ಷಿಣ ಭಾರತದ ತಮಿಳುನಾಡು, ಕೇರಳ ರಾಜ್ಯಗಳು ಹಾಗೂ ಬಿಜೆಪಿಯೇತರ ರಾಜ್ಯಗಳಲ್ಲಿ ಇದು ಹೊಸದೇನಲ್ಲ. ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ರಾಜ್ಯಪಾಲರ ಮೇಲೆ ದಾಳಿ ನಡೆದಿರುವ ಅಥವಾ ರಾಜ್ಯ ಪಾಲರು ಸರಕಾರಕ್ಕೆ ‘ಪರ್ಯಾಯ’ವಾಗಿ ಗಲಭೆ ಪೀಡಿತ ಜಾಗಗಳಿಗೆ ಭೇಟಿ ನೀಡಿದ ಉದಾಹರಣೆಗಳಿವೆ.

ಆದರೆ ಕರ್ನಾಟಕದ ಕಳೆದ ಎರಡುವರೆ ದಶಕದ ಇತಿಹಾಸದಲ್ಲಿ ಹಂಸರಾಜ್ ಭಾರದ್ವಾಜ್ ಬಳಿಕ ಈ ಪ್ರಮಾಣದಲ್ಲಿ ಸಂಘರ್ಷಗಳು ಇರಲಿಲ್ಲ. ಇದೀಗ ಭಾಷಣದ ಈ ಮುಸುಕಿನ ಗುದ್ದಾಟ ಸದ್ಯಕ್ಕೆ ಶಾಂತವಾಗಿದ್ದರೂ, ಮುಂದೆ ಭುಗಿಲೇಳುವುದಿಲ್ಲ ಎಂದಲ್ಲ.

ಸಂವಿಧಾನದಲ್ಲಿರುವ ಈ ರೀತಿಯ ಹತ್ತಾರು ‘ಗ್ರೇ ಏರಿಯಾ’ಗಳಿಗೆ ಸಂವಿಧಾನಿಕ ಪೀಠ ದಲ್ಲಿಯೇ ಪರಿಹಾರ ಪಡೆದಿರುವ ಭಾರತ, ರಾಜ್ಯಪಾಲರ ಭಾಷಣದ ಈ ಗೊಂದಲವನ್ನೂ ಇಂದಲ್ಲ ನಾಳೆ ಅಲ್ಲಿಯೇ ಪರಿಹರಿಸಿಕೊಳ್ಳುವುದೊಂದೇ ಉಳಿದಿರುವ ಮಾರ್ಗ ಎಂದರೆ ತಪ್ಪಾಗುವುದಿಲ್ಲ.

ರಂಜಿತ್​ ಎಚ್​ ಅಶ್ವತ್ಥ್

View all posts by this author