ಸಂಪಾದಕರ ಸದ್ಯಶೋಧನೆ
ಆಸ್ಟ್ರೇಲಿಯಾದ ಮಾಧ್ಯಮ ಜಗತ್ತನ್ನು ಅವಲೋಕಿಸಿದಾಗ, ಜನಸಾಮಾನ್ಯರ ನಾಡಿಮಿಡಿತವನ್ನು ಅತ್ಯಂತ ನಿಖರವಾಗಿ ಹಿಡಿದು, ಇಡೀ ದೇಶದ ಅತಿ ಹೆಚ್ಚು ಪ್ರಸಾರ ಸಂಖ್ಯೆಯನ್ನು ಹೊಂದಿರುವ ದೈನಿಕವಾಗಿ ‘ಹೆರಾಲ್ಡ್ ಸನ್’ ಎದ್ದು ಕಾಣುತ್ತದೆ. ವಿಕ್ಟೋರಿಯಾ ರಾಜ್ಯದ ರಾಜಧಾನಿಯಾದ ಮೆಲ್ಬೋರ್ನ್ನಿಂದ ಪ್ರಕಟವಾಗುವ ಈ ಟ್ಯಾಬ್ಲಾಯ್ಡ್ ಪತ್ರಿಕೆಯು, ಕೇವಲ ಒಂದು ಸುದ್ದಿ ಪತ್ರಿಕೆ ಯಾಗಿ ಉಳಿಯದೇ ಮೆಲ್ಬೋರ್ನ್ ನಗರದ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದೆ.
ಬೆಳಗಿನ ಕಾಫಿಯ ಜತೆಗೆ ಅಥವಾ ಟ್ರ್ಯಾಮ್ಗಳಲ್ಲಿ ಪ್ರಯಾಣಿಸುವಾಗ ಮೆಲ್ಬೋರ್ನ್ ನಿವಾಸಿಗಳ ಕೈಯಲ್ಲಿ ಈ ಪತ್ರಿಕೆ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಇದು ಜನಮಾನಸದಲ್ಲಿ ಬೇರೂರಿದೆ. ರೂಪರ್ಟ್ ಮರ್ಡೋಕ್ ಅವರ ‘ನ್ಯೂಸ್ ಕಾರ್ಪ್ ಆಸ್ಟ್ರೇಲಿಯಾ’ ಸಂಸ್ಥೆಯ ಒಡೆತನದಲ್ಲಿರುವ ಈ ಪತ್ರಿಕೆಯು, ತನ್ನ ಆಕ್ರಮಣಕಾರಿ ವರದಿಗಾರಿಕೆ, ಜನಪರ ನಿಲುವು ಮತ್ತು ವಿಶಿಷ್ಟ ಶೈಲಿಯಿಂದ ಆಸ್ಟ್ರೇಲಿಯಾದ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡಿದೆ.
ಹೆರಾಲ್ಡ್ ಸನ್ ಪತ್ರಿಕೆಯ ಇತಿಹಾಸವು ಎರಡು ಪ್ರತಿಷ್ಠಿತ ಪತ್ರಿಕೆಗಳ ವಿಲೀನದ ಕಥೆಯನ್ನು ಹೊಂದಿದೆ. 1990ರ ಅಕ್ಟೋಬರ್ 8ರಂದು, 1840ರಲ್ಲಿ ಸ್ಥಾಪನೆಯಾಗಿದ್ದ ಸಂಜೆಯ ಪತ್ರಿಕೆ ‘ದಿ ಹೆರಾಲ್ಡ್’ ಮತ್ತು 1922ರಲ್ಲಿ ಆರಂಭವಾಗಿದ್ದ ಬೆಳಗಿನ ಟ್ಯಾಬ್ಲಾಯ್ಡ್ ‘ದಿ ಸನ್ ನ್ಯೂಸ್- ಪಿಕ್ಟೋರಿ ಯಲ್’ ಒಂದಾಗಿ ‘ಹೆರಾಲ್ಡ್-ಸನ್’ (ನಂತರ ಹೈಫನ್ ತೆಗೆದು ‘ಹೆರಾಲ್ಡ್ ಸನ್’ ಆಯಿತು) ಜನ್ಮ ತಾಳಿತು.
ಇದನ್ನೂ ಓದಿ: Vishweshwar Bhat Column: ಮಹತ್ವದ ಪತ್ರಿಕೆ ʼದಿ ಅಟ್ಲಾಂಟಿಕ್ʼ
ಆ ಕಾಲದಲ್ಲಿ ‘ದಿ ಸನ್’ ಆಸ್ಟ್ರೇಲಿಯಾದ ಅತಿ ಹೆಚ್ಚು ಮಾರಾಟವಾಗುವ ಪತ್ರಿಕೆಯಾಗಿದ್ದರೆ, ‘ದಿ ಹೆರಾಲ್ಡ್’ ತನ್ನ ಗಂಭೀರ ವಿಶ್ಲೇಷಣೆಗಳಿಗೆ ಹೆಸರುವಾಸಿಯಾಗಿತ್ತು. ಈ ಎರಡು ದೈತ್ಯ ಪತ್ರಿಕೆಗಳ ಸಂಗಮವು ಆಸ್ಟ್ರೇಲಿಯಾದ ಪತ್ರಿಕೋದ್ಯಮದ ಇತಿಹಾಸದ ಒಂದು ಮಹತ್ವದ ಮೈಲಿಗಯಿತು. ಹಳೆಯ ಪರಂಪರೆಯ ಗಾಂಭೀರ್ಯ ಮತ್ತು ಹೊಸ ಕಾಲದ ಚುರುಕುತನವನ್ನು ಮೇಳೈಸಿಕೊಂಡು ಈ ಪತ್ರಿಕೆ ಮುನ್ನಡೆಯಿತು. ಈ ಪತ್ರಿಕೆಯ ಅತ್ಯಂತ ದೊಡ್ಡ ಶಕ್ತಿ ಮತ್ತು ವೈಶಿಷ್ಟ್ಯವೆಂದರೆ ಅದು ತನ್ನ ಓದುಗರೊಂದಿಗೆ ಬೆಳೆಸಿಕೊಂಡಿರುವ ಭಾವನಾತ್ಮಕ ಸಂಬಂಧ.
ಬ್ರಾಡ್ಶೀಟ್ ಪತ್ರಿಕೆಗಳಾದ ‘ದಿ ಏಜ್’ ಬುದ್ಧಿಜೀವಿಗಳು ಮತ್ತು ಮೇಲ್ವರ್ಗದ ಓದುಗರನ್ನು ಗುರಿ ಯಾಗಿಸಿಕೊಂಡರೆ, ಹೆರಾಲ್ಡ್ ಸನ್ ನೇರವಾಗಿ ಸಾಮಾನ್ಯ ಕಾರ್ಮಿಕ ವರ್ಗ, ಮಧ್ಯಮ ವರ್ಗ ಮತ್ತು ಕ್ರೀಡಾಪ್ರೇಮಿಗಳ ಭಾಷೆಯಲ್ಲಿ ಮಾತನಾಡುತ್ತದೆ. ಇದರ ತಲೆಬರಹಗಳು ಅತ್ಯಂತ ಚುಟುಕಾಗಿ, ಮೊನಚಾಗಿ ಮತ್ತು ನೇರವಾಗಿ ಹೃದಯಕ್ಕೆ ತಟ್ಟುವಂತಿರುತ್ತವೆ.
ಕ್ಲಿಷ್ಟಕರವಾದ ರಾಜಕೀಯ ಅಥವಾ ಆರ್ಥಿಕ ವಿಚಾರಗಳನ್ನು ಸಹ ಸಾಮಾನ್ಯ ವ್ಯಕ್ತಿಗೂ ಅರ್ಥ ವಾಗುವಂತೆ ಸರಳೀಕರಿಸಿ, ಅದಕ್ಕೆ ಒಂದಿಷ್ಟು ನಾಟಕೀಯತೆಯ ಸ್ಪರ್ಶ ನೀಡಿ ಪ್ರಕಟಿಸುವುದು ಈ ಪತ್ರಿಕೆಯ ಕಲೆಗಾರಿಕೆ. ಓದುಗರಿಗೆ ಏನು ಬೇಕು, ಅವರನ್ನು ಯಾವ ವಿಷಯ ಕೆರಳಿಸುತ್ತದೆ ಅಥವಾ ಸಂತೋಷಪಡಿಸುತ್ತದೆ ಎಂಬುದನ್ನು ಈ ಪತ್ರಿಕೆಯ ಸಂಪಾದಕೀಯ ಬಳಗ ಚೆನ್ನಾಗಿ ಅರಿತಿದೆ.
ಹೆರಾಲ್ಡ್ ಸನ್ ಪತ್ರಿಕೆಯ ಮತ್ತೊಂದು ಪ್ರಮುಖ ಮತ್ತು ಜಗತ್ಪ್ರಸಿದ್ಧ ವೈಶಿಷ್ಟ್ಯವೆಂದರೆ ಅದರ ‘ಕ್ರೀಡಾ ಪುಟಗಳು’ ಅದರಲ್ಲೂ ವಿಶೇಷವಾಗಿ ‘ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್’ ಕುರಿತಾದ ವರದಿಗಾರಿಕೆ. ಮೆಲ್ಬೋರ್ನ್ ನಗರವನ್ನು ಜಗತ್ತಿನ ಕ್ರೀಡಾ ರಾಜಧಾನಿ ಎಂದು ಕರೆಯಲಾಗುತ್ತದೆ ಮತ್ತು ಅಲ್ಲಿನ ಜನರಿಗೆ ಎಎಫ್ಎಲ್ ಎನ್ನುವುದು ಒಂದು ಧರ್ಮವಿದ್ದಂತೆ.
ಹೆರಾಲ್ಡ್ ಸನ್ ಪತ್ರಿಕೆಯ ಹಿಂಬದಿಯ ಪುಟಗಳು ಕ್ರೀಡೆಗಾಗಿಯೇ ಮೀಸಲಾಗಿರುತ್ತವೆ. ಪತ್ರಿಕೆಯ ಸುಮಾರು ಅರ್ಧದಷ್ಟು ಜಾಗವನ್ನು ಕ್ರೀಡಾ ಸುದ್ದಿಗಳು, ಆಟಗಾರರ ವಿಶ್ಲೇಷಣೆ, ಗಾಯಗಳ ವರದಿ ಮತ್ತು ಪಂದ್ಯದ ವಿಷ್ಯವಾಣಿಗಳು ಆಕ್ರಮಿಸಿಕೊಂಡಿರುತ್ತವೆ. ಎಎಫ್ʼಎಲ್ ಋತುವಿನಲ್ಲಂತೂ ಪತ್ರಿಕೆಯೊಂದಿಗೆ ನೀಡುವ ವಿಶೇಷ ಪುರವಣಿಗಳು ಮತ್ತು ಪೋಸ್ಟರ್ಗಳಿಗಾಗಿ ಜನ ಮುಗಿಬಿದ್ದು ಪತ್ರಿಕೆಯನ್ನು ಕೊಳ್ಳುತ್ತಾರೆ. ಈ ಪತ್ರಿಕೆಯ ಇನ್ನೊಂದು ವಿಶಿಷ್ಟ ಆಕರ್ಷಣೆಯೆಂದರೆ ‘ಮಾರ್ಕ್ ನೈಟ್’ ಅವರ ವ್ಯಂಗ್ಯಚಿತ್ರಗಳು.
ಆಸ್ಟ್ರೇಲಿಯಾದ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ಕುಂಚದ ಮೂಲಕ ಅತ್ಯಂತ ತೀಕ್ಷ್ಣವಾಗಿ, ಹಾಸ್ಯಮಯವಾಗಿ ಮತ್ತು ಕೆಲವೊಮ್ಮೆ ವಿವಾದಾತ್ಮಕವಾಗಿ ಚಿತ್ರಿಸುವ ಮಾರ್ಕ್ ನೈಟ್, ಹೆರಾಲ್ಡ್ ಸನ್ ಪತ್ರಿಕೆಯ ಮುಖವಾಣಿಯಂತಿದ್ದಾರೆ. 2018ರಲ್ಲಿ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರ ಕುರಿತು ಇವರು ಬರೆದ ವ್ಯಂಗ್ಯಚಿತ್ರವು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು.
ವಿವಾದಗಳೇನೇ ಇದ್ದರೂ, ನೈಟ್ ಅವರ ವ್ಯಂಗ್ಯಚಿತ್ರಗಳು ಪತ್ರಿಕೆಯ ಸಂಪಾದಕೀಯ ಪುಟಕ್ಕೆ ಒಂದು ವಿಶಿಷ್ಟ ತೂಕ ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿವೆ ಎಂಬುದರಲ್ಲಿ ಎರಡು ಮಾತಿಲ್ಲ.