ಶಿಶಿರಕಾಲ
ಚಿನ್ನ. ಜಗತ್ತಿನ ಎಲ್ಲ ಆರ್ಥಿಕ ಏರುಪೇರಿಗೆ, ಬಡತನ ಶ್ರೀಮಂತಿಕೆಗೆ ಚಿನ್ನವೇ ಕಾರಣವೆನ್ನುವ ಮಾತಿದೆ. ಯಾವ ದೇಶದಲ್ಲಿ ಹೆಚ್ಚಿಗೆ ಚಿನ್ನವಿದೆಯೋ ಅದೇ ಶ್ರೀಮಂತ ಎನ್ನುವ ಸಿದ್ಧಾಂತಗಳಿವೆ. ಯಾವುದೋ ಭ್ರಷ್ಟ ವ್ಯಕ್ತಿಯ ಮೇಲೆ ದಾಳಿಯಾದಾಗ ಅಲ್ಲಿ ಅಷ್ಟು ಚಿನ್ನ ಸಿಕ್ಕಿತಂತೆ ಎನ್ನುವುದೇ ಹೈಲೈಟ್. ಆ ವ್ಯಕ್ತಿಯ ಭ್ರಷ್ಟತೆಯನ್ನು ಅಳೆಯುವುದೇ ಚಿನ್ನದ ತೂಕದ ಮೇಲೆ. ಎಲ್ಲ ತುಲಾಭಾರ ಕ್ಕಿಂತ ಚಿನ್ನದ ತುಲಾಭಾರ ಅತ್ಯಂತ ವಜ್ಜೆಯದು. ಹೆಂಡತಿಗೆ ಎಷ್ಟೇ ಪ್ರೀತಿ ತೋರಿಸಿದರೂ ಚಿನ್ನ ಎಷ್ಟು ಮಾಡಿಸಿದ್ದಾನೆ ಎನ್ನುವುದಕ್ಕೆ ಹೆಚ್ಚಿಗೆ ತೂಕ.
ಮದುವೆಯಲ್ಲಿ ಅಷ್ಟು ಚಿನ್ನ ಹಾಕಿದರಂತೆ ಎನ್ನುವ ಮಾತು ಇಡೀ ಮದುವೆಯ ಎಕಾನೊಮಿಕ್ಸ್ ಅನ್ನು ಸಾದೃಶಗೊಳಿಸುತ್ತದೆ. ಹೀಗೆ ನಮ್ಮ ದೈನಂದಿನ ಜೀವನದಲ್ಲಿ ಚಿನ್ನವೆಂದರೆ ಎಲ್ಲಿಲ್ಲದ ಮಹತ್ವ. ಚಿನ್ನವೆಂದರೆ ಮೋಹ. ಹುಬ್ಬೇರುವುದು, ಹುಬ್ಬು ಗಂಟಿಕ್ಕುವುದು ಇವೆಲ್ಲವಕ್ಕೆ ಚಿನ್ನ ಕಾರಣ. ಹೇಗೆ ಎಲ್ಲ ದುರಂತಕ್ಕಿಂತ ವಿಮಾನ ದುರಂತದ ಸುದ್ದಿಗೆ ಹೆಚ್ಚಿನ ಮೈಲೇಜ್ ಸಿಗುತ್ತದೋ ಹಾಗೇ ಎಲ್ಲ ದರೋಡೆಗಿಂತ ಚಿನ್ನದ ದರೋಡೆ ಎಲ್ಲಿಲ್ಲದ ಸುದ್ದಿ ಮಾಡುತ್ತದೆ. ಈ ಚಿನ್ನಕ್ಕೇಕೆ ಇಷ್ಟು ಕಿಮ್ಮತ್ತು ಎನ್ನುವ ಪ್ರಶ್ನೆ ಒಂದಿಂದು ಸಮಯದಲ್ಲಿ ನಮ್ಮಲ್ಲಿ ಹುಟ್ಟಿಯೇ ಇರುತ್ತದೆ.
ಸುಲಭದಲ್ಲಿ ಸಿಗದ, ಅತ್ಯಂತ ಸುಂದರ ಲೋಹ, ಆ ಕಾರಣಕ್ಕೆ ಇಷ್ಟು ಬೆಲೆ, ಆ ಬೆಲೆಯಿಂದಾಗಿಯೇ ಅಷ್ಟು ಮಹತ್ವದ ಸ್ಥಾನ ಎಂದು ಒಂದು ಸಾಮಾನ್ಯ ಉತ್ತರ. ಆದರೆ ಚಿನ್ನ ಹೇಳಿ ಕೇಳಿ ಒಂದು ಲೋಹ. ಈ ಲೋಹಕ್ಕೇ ಏಕೆ ಇಷ್ಟು ಬೆಲೆ? ಮನುಷ್ಯನ ಒಬ್ಸೇಷನ್, ಈ ಪರಿಯ ಗೀಳು ಈ ಲೋಹದ ಮೇಲೆಯೇ ಏಕೆ? ಉಳಿದೆಲ್ಲ ಲೋಹಕ್ಕಿಂತ ಇದೇ ಶ್ರೇಷ್ಠ, ಮೌಲ್ಯಯುತ ಏಕೆ? ಈ ಲೋಹಕ್ಕೆ ಸಿಕ್ಕ ಮಹತ್ವ ಇಂದು ನಿನ್ನೆಯದಲ್ಲ.
ರಾಜರ ಕಾಲಕ್ಕಿಂತ ಹಿಂದೆ ಹೋಗುವ ಇತಿಹಾಸ. ಹಾಗಂತ ಚಿನ್ನ ಮಾತ್ರ ಅತ್ಯಂತ ಸೀಮಿತತೆಯ ಲೋಹವೆಂದೇನಲ್ಲವಲ್ಲ. ಚಿನ್ನಕ್ಕಿಂತ ಅಪರೂಪದ ಲೋಹ ಬೇರಿನ್ನೊಂದು ಇಲ್ಲ ಎಂದಾದರೆ ಹೌದಾಗಿತ್ತು. ಆದರೆ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಭೂಮಿಯಲ್ಲಿ ಲಭ್ಯವಿರುವ ಲೋಹಗಳು ಹತ್ತಾರಿವೆ. ಅದರಂತೆಯೇ ಅಷ್ಟೇ ಶುದ್ಧ ರೂಪದಲ್ಲಿ ಸಿಗುವ ಲೋಹ ಕೂಡ ಇವೆ. ಚಿನ್ನ ಒಂದು ಸೂಪರ್ ವಿದ್ಯುತ್ ವಾಹಕ ಹೌದು, ಆದರೆ ಅಷ್ಟೆಲ್ಲ ಒಳ್ಳೆಯ ವಿದ್ಯುದ್ವಹನಕ್ಕೆ ಚಿನ್ನವೇ ಆಗಬೇಕೆಂದೇನಿಲ್ಲ. ಇನ್ನು ಅದರ ಬಣ್ಣ.
ನಿಜವಾಗಿಯೂ ಚಿನ್ನದ ಬಣ್ಣ ಚೆಂದವೇ, ಆದರೆ ಅಂದ ಚಂದ ಎನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು. ಹಾಗೆ ನೋಡಿದರೆ ಚಿನ್ನಕ್ಕಿಂತ ತಾಮ್ರದ ಬಣ್ಣವೇ ಹೆಚ್ಚು ಚಂದ ಅನ್ನುವವರೂ ಇzರೆ. ಸುಮಾರು ನಾಲ್ಕು ಸಾವಿರ ವರ್ಷದಿಂದ ಚಿನ್ನವೆಂದರೆ ಮನುಷ್ಯ ಸಮಾಜದಲ್ಲಿ ಹಣ, ಅಂತಸ್ತು, ಶ್ರೀಮಂತಿಕೆ, ಮೌಲ್ಯ. ಚಿನ್ನವನ್ನು ಮನುಷ್ಯ ಬಳಸಲು ಶುರುಮಾಡಿ ಸುಮಾರು ಆರು ಸಾವಿರ ವರ್ಷವಾಯಿತಂತೆ. ಅದಕ್ಕಿಂತ ಜಾಸ್ತಿ ಇತಿಹಾಸ ಚಿನ್ನಕ್ಕಿದ್ದರೂ ಇರಬಹುದು. ಆದರೆ ಅದೆಲ್ಲ ನಗಣ್ಯ. ಚಿನ್ನಕ್ಕೆ ಒಂದು ಗಣ್ಯತೆ ಸಿಕ್ಕಿದ್ದು ನಾಲ್ಕು ಸಾವಿರ ವರ್ಷ ಹಿಂದೆ.
ಆದರೆ ಚಿನ್ನ ನಿಜವಾಗಿಯೂ ಅಷ್ಟು ಸೀಮಿತವೇ? ಒಂದು ಕಾಲವಿತ್ತು- ಆಗ ಚಿನ್ನವೇ ಮನುಷ್ಯ ಹೊರ ತೆಗೆಯುವ ಉಳಿದೆಲ್ಲ ಲೋಹಕ್ಕಿಂತ ಅಪರೂಪದ ಲೋಹವಾಗಿತ್ತು. ಆದರೆ ಕಾಲಕ್ರಮೇಣ ಅದಕ್ಕಿಂತ ಅಪರೂಪದ ಲೋಹಗಳ ಪತ್ತೆಯಾಯಿತು- ಮನುಷ್ಯ ಅದನ್ನು ಭೂಮಿಯಿಂದ ಹೊರತೆಗೆಯಲು ಶುರುಮಾಡಿದ. ಆಗ ಚಿನ್ನದ ಬೆಲೆ ಬಿದ್ದು ಹೋಗುತ್ತದೆ- ಪ್ಲಾಟಿನಂ ಹೊಸ ಚಿನ್ನ ಎನ್ನುವ ಮಾತುಗಳು ಮುನ್ನೆಲೆಗೆ ಬಂದವು. ಆದರೆ ಚಿನ್ನ ಇಂದಿಗೂ ಬೆಲೆ ಕಳೆದುಕೊಂಡಿಲ್ಲ.
ಚಿನ್ನಕ್ಕೆ ಚಿನ್ನವೇ ಸಾಟಿ. ಭೂಮಿಯ ಗರ್ಭದಲ್ಲಿರುವ ಎಲ್ಲ ಚಿನ್ನವನ್ನು ಹೊರ ತೆಗೆದರೆ ಇಡೀ ಭೂಮಿಗೆ ಸುಮಾರು ಹದಿಮೂರು ಇಂಚಿನ ಕವಚವನ್ನು ಮಾಡಿಸಿ ಹಾಕಬಹುದಂತೆ. ಅಷ್ಟು ಪ್ರಮಾಣದಲ್ಲಿದ್ದರೂ ಆ ಚಿನ್ನ ಸದ್ಯ ನಮಗೆಲ್ಲ ಅಲಭ್ಯ. ಚಿನ್ನ- ಸುಂದರ, ಅತ್ಯಂತ ಅಪೇಕ್ಷಣೀಯ, ಮೌಲ್ಯಯುತ ಮತ್ತು ಇಂದಿಗೂ ಅಪರೂಪತೆ ಕಾಪಾಡಿಕೊಂಡ ಲೋಹ. ‘ಚಿನ್ನದ ಮೋಹದ ಇತಿಹಾಸ’ ಎನ್ನುವುದು ಅಷ್ಟು ಸಮಂಜಸವಾಗುವುದಿಲ್ಲ.
ಇತಿಹಾಸ ಎಂದರೆ ಹಿಂದೆ ಹೀಗೆ ಇತ್ತು ಎಂದು- ಆದರೆ ಚಿನ್ನದ ಮೋಹ ಇಂಗ್ಲೀಷಿನ ಪ್ರೆಸೆಂಟ್ ಪ್ರೆಫೆಕ್ಟ್ ಕಂಟಿನ್ಯುಅಸ್ ಟೆನ್ಸ್. ಭೂತ- ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಕೂಡ ಇದರ ಮೋಹ ಕಡಿಮೆಯಾಗುವ ಯಾವುದೇ ಲಕ್ಷಣವಿಲ್ಲ. ಜಗತ್ತಿನ ಯಾವುದೇ ಮೂಲೆಯ, ಭಾಷೆಯ ಜನರನ್ನೇ ತೆಗೆದುಕೊಂಡರೂ ಚಿನ್ನಕ್ಕೆ ಅಷ್ಟೇ ಮಹತ್ವ ಮತ್ತು ಬೆಲೆ. History of world is story of gold ಎನ್ನುವ ಮಾತಿದೆ.
ಇದನ್ನೂ ಓದಿ: Shishir Hegde Column: ಅಮೆರಿಕ ತಳ್ಳಿದ ಬ್ರಾಂಡ್ʼಗಳಿಗೆ ಭಾರತವೇ ನೆಲೆ !
ಚಿನ್ನದ ಇತಿಹಾಸ, ಅದು ಮನುಷ್ಯ ಸಮಾಜದಲ್ಲಿ ಉಳಿದುಕೊಂಡು, ಮೌಲ್ಯವನ್ನು ಕಾಪಾಡಿ ಕೊಂಡು ಬಂದದ್ದು ನೋಡಿದರೆ ಈ ಮಾತನ್ನು ದೂಸ್ರಾ ಮಾತಿಲ್ಲದೆ ಒಪ್ಪಲೇಬೇಕು. ಮನುಷ್ಯನ ಚಿನ್ನದೆಡೆಗಿನ ಗೀಳು ನಮ್ಮ ಇತಿಹಾಸವನ್ನೇ ರೂಪಿಸಿದೆ. ನಾಗರಿಕತೆಯ ಹುಟ್ಟಿನ ಈ ಲೋಹದ ಮೋಹ ಕೂಡ ಹುಟ್ಟಿದ್ದು. ಅತ್ಯಂತ ಹಳೆಯ ಸಿಂಧೂ ನಾಗರಿಕತೆಯನ್ನೇ ತೆಗೆದುಕೊಳ್ಳಿ ಅಥವಾ ಈಜಿಪ್ಟ್ ನಾಗರಿಕತೆ ಯನ್ನೇ ತೆಗೆದುಕೊಳ್ಳಿ, ಅಲ್ಲ ಚಿನ್ನವೆಂದರೆ ಎಲ್ಲಿಲ್ಲದ ಮೋಹ, ಚಿನ್ನವೆಂದರೆ ಅದೊಂದು ಶ್ರೇಷ್ಠತೆಯ ಸಂಕೇತ.
ಈಜಿಪ್ಟ್ ನಾಗರಿಕತೆಯಲ್ಲಿ ಚಿನ್ನವೆಂದರೆ ಸೂರ್ಯನಿಂದ ಹುಟ್ಟಿದ್ದು ಎನ್ನುವ ನಂಬಿಕೆಯಿತ್ತು. ಚಿನ್ನ ವೆಂದರೆ ಅವರಿಗೆ ದೇವರ ಮಾಂಸ ಮತ್ತು ಮೂಳೆ. ನೈಲ್ ನದಿಯ ಅಕ್ಕ ಪಕ್ಕದಲ್ಲಿದ್ದ ಪಂಗಡ ಗಳಲ್ಲಿ ಚಿನ್ನ ದೇವರ ಇರುವಿಕೆಯ ಪ್ರತೀಕ. ಈಜಿ ನಾಗರಿಕತೆಯಲ್ಲಿ ಯಾರ ನೆಲದಲ್ಲಿ ಚಿನ್ನ ಇದೆ ಯೋ ಅಲ್ಲಿ ದೈವತ್ವ ಹೆಚ್ಚಿದೆ ಎನ್ನುವ ನಂಬಿಕೆ ಇತ್ತು. ಅಂದ ಚಂದಕ್ಕಿಂತ ದೈವತ್ವದ ಕಾರಣ ದಿಂದಾಗಿ ಈಜಿಪ್ಟ್ʼನ ರಾಜರುಗಳು ಚಿನ್ನವನ್ನು ಇಟ್ಟುಕೊಳ್ಳುತ್ತಿದ್ದರು.
ಬೇರೆ ರಾಜನಲ್ಲಿ ಹೆಚ್ಚಿಗೆ ಚಿನ್ನವಿದೆಯೆಂದರೆ ಉಳಿದ ರಾಜರು ಆ ಕಾರಣಕ್ಕಾಗಿಯೇ ಯುದ್ಧಕ್ಕೆ ನಿಲ್ಲುತ್ತಿರಲಿಲ್ಲ. ಅದಕ್ಕೆ ಅದೇ ಕಾರಣ- ಚಿನ್ನವಿರುವಲ್ಲಿ ಹೆಚ್ಚಿನ ದೈವತ್ವ ಎನ್ನುವ ನಂಬಿಕೆ. ಈ ನಂಬಿಕೆಯ ಕಾರಣದಿಂದಾಗಿಯೇ ಅಲ್ಲಿನ ಮಮ್ಮಿಗಳ ಜೊತೆ ಕೂಡ ಚಿನ್ನವನ್ನು ಇಡಲಾಗುತ್ತಿತ್ತು. ಜನ್ಮಾಂತರದ ನಂಬಿಕೆಯಿದ್ದ ಈಜಿ ಜನರಲ್ಲಿ ನಂತರದ ಜೀವನದಲ್ಲಿ ಚಿನ್ನವನ್ನು ಜೊತೆ ಒಯ್ಯ ಬಹುದು ಎನ್ನುವ ನಂಬಿಕೆ. ಚಿನ್ನವೆಂದರೆ ಅಮರ- ಅಮರತ್ವಕ್ಕೆ ಚಿನ್ನವೇ ಸಾಥಿ. ಇದು ಈಜಿಪ್ಟ್ ನಾಗರಿಕತೆಯ ಕಥೆಯಾದರೆ ಅತ್ತ ಸಂಬಂಧವೇ ಇಲ್ಲದ ದಕ್ಷಿಣ ಅಮೆರಿಕಾದ ಇಂದಿನ ಪೆರುವಿನ ಅಂದಿನ ಇಂಕಾ ನಾಗರಿಕತೆಯಲ್ಲೂ ಯಥಾವತ್ ಇಂಥದ್ದೇ ನಂಬಿಕೆಯಿತ್ತು. ಎಲ್ಲಿಯ ಈಜಿಪ್ಟ್ ಎಲ್ಲಿಯ ಪೆರು.
ಆ ನಾಗರಿಕತೆಯಲ್ಲಿ ಕೂಡ ಚಿನ್ನ ದೇವರ ಅಂಶ ಎನ್ನುವುದೇ ದಿಟ್ಟ ನಂಬಿಕೆಯಾಗಿತ್ತು. ಆ ಕಾರಣಕ್ಕೆ ಚಿನ್ನವನ್ನು ರಾಜರುಗಳಷ್ಟೇ ಧರಿಸಬಹುದಿತ್ತು. ಬೇರೆಯವರು ಚಿನ್ನವನ್ನು ಮುಟ್ಟು ವುದು ಕೂಡ ಅಪಾಯಕಾರಿ, ಒಮ್ಮೆ ಶುದ್ಧೀಕರಿಸಿದ ನಂತರ ಚಿನ್ನ ರಾಜರಲ್ಲದವರಿಗೆ ತಾಕಿದರೆ ಸಾವು ಬರುತ್ತದೆ ಎನ್ನುವುದು ಅಂದಿನ ನಂಬಿಕೆ. ಅಕ್ಕಸಾಲಿಗ ಕೂಡ ಚಿನ್ನವನ್ನು ಕೈಗವಸು ಹಾಕಿಯೇ ಮುಟ್ಟುತ್ತಿದ್ದ. ಪ್ರಾಚೀನ ಗ್ರೀಸ್ ನಾಗರಿಕತೆಯಲ್ಲಿ ಚಿನ್ನವೆಂದರೆ ದೈವತ್ವ ಎನ್ನುವು ದಕ್ಕಿಂತ ಸ್ವಲ್ಪ ವಿಭಿನ್ನ. ಚಿನ್ನವೆಂದರೆ ಸ್ವರ್ಗದ ತುಂಡು.
ಚಿನ್ನವೆಂದರೆ ದೇವರಲ್ಲ, ಆದರೆ ಸ್ವರ್ಗದ ವಸ್ತು ಎನ್ನುವ ಭಾವ ಹುಟ್ಟಿದಾಗಲೇ ಅದನ್ನು ಸ್ವಾಧೀನ ಪಡಿಸಿಕೊಳ್ಳುವ ಹಂಬಲಗಳೂ ಹುಟ್ಟಿಕೊಂಡದ್ದು. ಆ ಕಾಲದಲ್ಲಿ ಗ್ರೀಸ್ ಎಂದರೆ ಇಂದಿನ ಗ್ರೀಸ್ ನಂತಲ್ಲ. ಯಥೇಚ್ಛ ಆಹಾರವಿದ್ದ ಕಾಲ. ಗ್ರೀಸ್‌ನಲ್ಲಿ ಯಾರೂ ಹೆಚ್ಚಿನ ಶ್ರಮಪಡಬೇಕಾದದ್ದಿರ ಲಿಲ್ಲ. ನೆಲದಲ್ಲಿ ಹಣ್ಣು ತರಕಾರಿ ಯಥೇಚ್ಛ, ಕರಾವಳಿಯಂಚಿನಲ್ಲಿ ಯಥೇಚ್ಛ ಮೀನು. ಆಗ ಚಿನ್ನವೆಂದರೆ ವಿಶೇಷ ಆದರೆ ತುಟ್ಟಿಯಾಗಿರಲಿಲ್ಲ. ದಿನಬಳಕೆಯ ವಸ್ತುಗಳನ್ನು ಚಿನ್ನದಲ್ಲಿಯೇ ಮಾಡುವ ಕಾಲವೊಂದಿತ್ತು.
ಭಾರತದಲ್ಲಿಯೂ ಒಂದು ಕಾಲದಲ್ಲಿ ಚಿನ್ನಕ್ಕೆ ಅಂಥದ್ದೇ ಸ್ಥಿತಿಯಿದ್ದದ್ದು ನಿಮಗೆ ಗೊತ್ತಿದ್ದದ್ದೇ. ಪಾಶ್ಚಾತ್ಯ ಇತಿಹಾಸಕಾರರ ಪ್ರಕಾರ ಸುಮಾರು ಎರಡೂವರೆ ಸಾವಿರ ವರ್ಷಗಳ ಮೊದಲು ಕಪ್ಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರದ ಮಧ್ಯದಲ್ಲಿ ಸ್ಥಾಪಿತವಾದ ಲಿಡಿಯಾ ಸಾಮ್ರಾಜ್ಯ ಚಿನ್ನದ ಗಟ್ಟಿಗಳನ್ನು ಮೊದಲ ಬಾರಿ ನಾಣ್ಯಗಳಂತೆ ಬಳಸಿದ್ದು. ಆದರೆ ಅದೇ ಕಾಲದಲ್ಲಿ ಭಾರತ ದಲ್ಲಿ ಕೂಡ ಚಿನ್ನದ ಗಟ್ಟಿಗಳನ್ನು ವಹಿವಾಟಿಗೆ ಬಳಸಿದ ಕುರುಹುಗಳಿವೆ.
ಅಲ್ಲಿಂದ ಇಲ್ಲಿಯವರೆಗೆ ಚಿನ್ನವೆಂದರೆ ಹಣ, ಸಂಪತ್ತು. ಈ ಕಾಲಘಟ್ಟದಲ್ಲಿಯೇ ಚಿನ್ನ ಶ್ರೇಷ್ಠ ಲೋಹದಿಂದ ಹಣವಾದದ್ದು. ಅದೇ ಸಮಯದಲ್ಲಿ ಮನುಷ್ಯನಲ್ಲಿ ಸ್ವಾಧೀನ ಮನೋಭಾವ ಕೂಡ ಹೆಚ್ಚಿದ್ದು. ನೀವು ರೂಪಾಯಿ ನೋಟನ್ನು ಸೂಕ್ಷ್ಮವಾಗಿ ಗ್ರಹಿಸಿದ್ದಲ್ಲಿ I promise to pay the bearer the sum of ... rupees ಎಂದು ಬರೆದು ಅದರ ಕೆಳಗೆ ರಿಸರ್ವ್ ಬ್ಯಾಂಕ್‌ನ ಗವರ್ನರ್ ಸಹಿ ಇರುತ್ತದೆ. ನೋಟು ಎಂದರೆ ಅಷ್ಟು ಹಣವನ್ನು ಸರಕಾರ ನೀಡಲು ಒಪ್ಪುತ್ತದೆ ಎನ್ನುವ ಒಡಂಬಡಿಕೆಯ ಪತ್ರ. ಅಸಲಿಗೆ ನೋಟಿಗೆ ಸರಕಾರದ ಬೆಂಬಲವಿದ್ದರಷ್ಟೇ ಬೆಲೆ- ಅದಿಲ್ಲದಿದ್ದರೆ ಅದೊಂದು ಪೇಪರ್. ಆದರೆ ಚಿನ್ನ ಹಾಗಲ್ಲ- ಚಿನ್ನಕ್ಕೇ ಬೆಲೆ ಅಲ್ಲಿ. ಯಾರದೂ ಭರವಸೆ ಬೇಕಾಗಿಲ್ಲ.
ಹೀಗೆ ಭರವಸೆಯ ಅವಶ್ಯಕತೆಯಿಲ್ಲದ ಹಣದ ಬಳಕೆ ಶುರುವಾಗಿದ್ದು ಆಗ. ಅಲ್ಲಿಂದಿಲ್ಲಿಯವರೆಗೂ ಚಿನ್ನಕ್ಕೆ ಚಿನ್ನವೇ ಸಾಟಿ. ಲಿಡಿಯಾ ಸಾಮ್ರಾಜ್ಯ ಅಥವಾ ಆ ಕಾಲದ ಇತರ ರಾಜ್ಯಗಳಲ್ಲಿ ನಾಣ್ಯಕ್ಕೆ ರಾಜ ಮುದ್ರೆ ಹಾಕುವ ಪದ್ಧತಿ ರೂಢಿಯಲ್ಲಿತ್ತು. ರಾಜ ಮುದ್ರೆ ಇದ್ದರೆ ಅದು ಚಿನ್ನದ ತೂಕ ಮತ್ತು ಶುದ್ಧತೆಯ ಗ್ಯಾರಂಟಿ. ಇಂದಿನ ಹಾಲ್‌ಮಾರ್ಕ್‌ನಂತೆ. ಹಾಗಾಗಿ ಸಾಮಾನ್ಯ ಚಿನ್ನದ ಗಟ್ಟಿಗಿಂತ ರಾಜ ಮುದ್ರೆ ಇದ್ದ ಚಿನ್ನವೆಂದರೆ ಪಕ್ಕಾ. ಆ ಕಾರಣಕ್ಕೆ ಬೆಲೆ ಸ್ಥಿರವಾಗಿಸಲು ರಾಜಮುದ್ರೆಯನ್ನು ಯಾರೂ ಫೇಕ್ ಮಾಡದಂತೆ ಮತ್ತು ಹಾಗೆ ಮಾಡಿದರೆ ಅದು ಅಕ್ಷಮ್ಯ ಅಪರಾಧ ಎನ್ನುವ ರೂಢಿ ಚಾಲ್ತಿಗೆ ಬಂತು.
ಹೊಸ ಜಮಾನಾದ ನೋಟುಗಳು ಅದನ್ನೇ ಚಿನ್ನಕ್ಕೆ ಬದಲು ಪೇಪರಿನ ಮೇಲೆ ಈ ರೀತಿ ಭರವಸೆ ನೀಡುವ ಪದ್ಧತಿ ರೂಪಗೊಂಡದ್ದು. ಲಿಡಿಯಾದ ಅಂದಿನ ನಾಣ್ಯಗಳು ಬೆಳ್ಳಿಮಿಶ್ರಿತ ಚಿನ್ನವಾಗಿತ್ತು. ಈ ಚಿನ್ನ ಅಲ್ಲಿನ ನದಿಗಳಲ್ಲಿ ಸಹಜವಾಗಿ ಸಿಗುತ್ತಿತ್ತು. ಆ ಕಾರಣಕ್ಕೇ ಅದನ್ನೇ ನಾಣ್ಯವನ್ನಾಗಿ ಬಳಸಲು ಶುರುಮಾಡಿದ್ದು. ಆದರೆ ಆ ಮಿಶ್ರ ಚಿನ್ನದಲ್ಲಿ ಚಿನ್ನದ ಪ್ರಮಾಣ ಹೆಚ್ಚು ಕಡಿಮೆ ಯಾಗುತ್ತಿತ್ತು. ಆ ಕಾರಣಕ್ಕೆ ಕ್ರಮೇಣ ನಾಣ್ಯದ ಬೆಲೆ ಕೂಡ ಸ್ಥಿರವಾಗಿರಲಿಲ್ಲ.
ಹಾಗಾಗಿ ಶುದ್ಧ ಚಿನ್ನವನ್ನು ಬೆಳ್ಳಿಯಿಂದ ಪ್ರತ್ಯೇಕಿಸಿ ನಾಣ್ಯವನ್ನಾಗಿಸಿ ಬಳಸುವುದು ಲಿಡಿಯಾದ ರಾಜ ಕ್ರಿಸಸ್ ಸಮಯದಲ್ಲಿ ರೂಢಿಗೆ ಬಂತು. ಇಂಗ್ಲೀಷಿನಲ್ಲಿ ಇಟಛಿoo ಎಂದರೆ ಶ್ರೀಮಂತ ಎನ್ನುವ ಅರ್ಥದಲ್ಲಿ ಇಂದಿಗೂ ಬಳಸಲು ಕಾರಣ ಇದೇ. ಸಂಪತ್ತು ಎನ್ನುವ ಭಾವ ಜನರಲ್ಲಿ ಹುಟ್ಟಿದ ಸಮಯವೇ ಇದು. ಆದರೂ ಚಿನ್ನವೇ ಏಕೆ? ಬೇರೆ ಲೋಹವೇಕಲ್ಲ ಎನ್ನುವ ಪ್ರಶ್ನೆ ಹಾಗೆಯೇ ಉಳಿಯಿತು.
ಪೆರಿಯೋಡಿಕ್ ಟೇಬಲ್‌ನಲ್ಲಿರುವ ಎಲ್ಲ ಮೂಲಧಾತುಗಳ ಒಟ್ಟು ಸಂಖ್ಯೆ 103. ಇಷ್ಟು ಧಾತು ಗಳಲ್ಲಿ ಚಿನ್ನವೇ ಏಕೆ? ಈ ಮೂಲಧಾತುಗಳಲ್ಲಿ ಅನಿಲಗಳಾದ ಹೈಡ್ರೋಜನ್, ಆಮ್ಲಜನಕ ಇವೆಲ್ಲವನ್ನಂತೂ ಬಳಸುವಂತಿಲ್ಲ. ಅದು ಬಿಟ್ಟರೆ ಉಳಿದ ಐವತ್ತನಾಲ್ಕು ಧಾತುಗಳು ಗಾಳಿ ಅಥವಾ ನೀರಿನ ಜೊತೆ ರಾಸಾಯನಿಕ ಕ್ರಿಯೆಯಿಂದ ಹಾಳಾಗುವಂಥವು.
ಇನ್ನು ಉಳಿದ 45 ಧಾತುಗಳು ರೇಡಿಯೋ ಆಕ್ಟಿವ್. ಹಾಗಾಗಿ ಅದನ್ನು ಹಣವಾಗಿ ಬಳಸುವಂತಿಲ್ಲ. ಹೀಗೆ ಎಲ್ಲ ಸಲ್ಲದ ಮೂಲ ಧಾತುಗಳನ್ನು ಬದಿಗಿಟ್ಟರೆ ಕೊನೆಗೆ ಉಳಿಯುವುದು ಕೇವಲ ಐದು. ಚಿನ್ನ, ಬೆಳ್ಳಿ, ರೋಡಿಯಮ, ಪ್ಲಾಟಿನಂ ಮತ್ತು ಪೊಲೆಡಿಯಮ. ರೋಡಿಯಮ್ ಮತ್ತು ಪೊಲೆಡಿ ಯಮ್ ಹದಿನೆಂಟನೇ ಶತಮಾನದ ವರೆಗೆ ಆವಿಷ್ಕಾರವೇ ಆಗಿರಲಿಲ್ಲ. ಪ್ಲಾಟಿನಂನ ಸಮಸ್ಯೆ ಎಂದರೆ ಅದನ್ನು ಕರಗಿಸಲು ಸುಮಾರು 3000 ಡಿಗ್ರಿ ಸೆಲ್ಷಿಯಸ್ ಉಷ್ಣತೆ ಬೇಕು.
ಅಷ್ಟು ಉಷ್ಣತೆ ಸಾಧಿಸುವುದು ಹಿಂದಿನ ಕಾಲದಲ್ಲಿ ಸಾಧ್ಯವೇ ಇರಲಿಲ್ಲ. ಈ ಕಾರಣಕ್ಕೆ ಕೊನೆಗೆ ಉಳಿದು ಕೊಂಡದ್ದು ಬರೀ ಬೆಳ್ಳಿ ಮತ್ತು ಚಿನ್ನ. ಇವೆರಡರಲ್ಲಿ ಅಪರೂಪದ ಲೋಹವೆಂದರೆ ಚಿನ್ನ. ಅಲೆಕ್ಸಾಂಡರ್ ಈಜಿಪ್ಟ್ʼನಿಂದ ಭಾರತದವರೆಗೆ ಸಾಮ್ರಾಜ್ಯ ಸ್ಥಾಪಿಸಿದ್ದನಲ್ಲ- ಆಗ ಅಷ್ಟೂ ಜಾಗದಲ್ಲಿ ಒಂದೇ ಕರೆನ್ಸಿ ಚಾಲ್ತಿಯಲ್ಲಿತ್ತು. ಅಲ್ಲಿಂದ ಮುಂದೆ ಎಲ್ಲ ಕಡೆ ಚಿನ್ನದ ನಾಣ್ಯದ ಬಳಕೆ ಬೃಹತ್ ವಹಿವಾಟುಗಳಿಗೆ, ಅಂತಾರಾಷ್ಟ್ರೀಯ ಟ್ರೇಡ್ ಗೆ ಶುರುವಾಗಿದ್ದು.
ಅಲ್ಲಿಂದಿಲ್ಲಿಯವರೆಗೂ ಚಿನ್ನಕ್ಕಾಗಿಯೇ ಎಷ್ಟೋ ಸಾಮ್ರಾಜ್ಯಗಳು ಬಡಿದಾಡಿವೆ, ಸರ್ವನಾಶವಾಗಿವೆ. ವಿಜಯನಗರ ಸಾಮ್ರಾಜ್ಯ ಆದಿಯಾಗಿ ಬಹುತೇಕ ರಾಜ ಮನೆತನಗಳ ವೈಭವ, ಐಶ್ವರ್ಯ ಚಿನ್ನದಿಂದಲೇ. ಬ್ರಿಟಿಷರು ಮತ್ತು ಇತರೆ ಯುರೋಪಿಯನ್ನರು ಕೊಳ್ಳೆ ಹೊಡೆದ ಚಿನ್ನಕ್ಕೆ ಲೆಕ್ಕವೇ ಇಲ್ಲ. ನಾಗರಿಕತೆಯ ಬೆಳವಣಿಗೆಯಲ್ಲಿ, ಇತಿಹಾಸದುದ್ದಕ್ಕೂ ಚಿನ್ನ ಎಲ್ಲ ಸಮಾಜದ, ಕಾಲಘಟ್ಟದ ಅವಿಭಾಜ್ಯ ಅಂಗವೇ ಆಗಿರುವುದು ಗಮನಾರ್ಹ.
ಎಲ್ಲ ಇತಿಹಾಸವೂ ಚಿನ್ನದ ಸುತ್ತಲೇ ಒಂದಿಂದು ಕಾರಣಕ್ಕೆ ಗಿರಕಿ ಹೊಡೆಯುತ್ತವೆ. ಸ್ಥೂಲದೃಷ್ಟಿ ಯಿಂದ ನೋಡಿದರೆ ಅಲ್ಲ ಒಂದು ವಸ್ತು ವಿನಿಮಯಕ್ಕೆ ಬೇಕಿತ್ತು, ಅದು ಚಿನ್ನವಾಯಿತು ಎನ್ನಬಹುದು. ಚಿನ್ನವೆನ್ನುವ ಒಂದು ಲೋಹ ಜಗತ್ತನ್ನೇ ಇಷ್ಟು ಕಾಲ ಕಂಟ್ರೋಲ್ ಮಾಡಿದ ರೀತಿಯೇ ವಿಸ್ಮಯ. ಆರು ಸಾವಿರ ವರ್ಷದಿಂದ ಇಂದಿಗೂ ಚಿನ್ನವೆಂದರೆ ಅಷ್ಟೇ ಗೀಳು. ದಕ್ಷಿಣ ಆಫ್ರಿಕಾದ ಸಾವುಕಾ ಚಿನ್ನದ ಗಣಿ ನಾಲ್ಕು ಕಿಲೋಮೀಟರ್ ನೆಲದೊಳಕ್ಕಿದೆ. ಇಂದಿಗೂ ಇಲ್ಲಿ ನೆಲವನ್ನು ಇನ್ನಷ್ಟು ಆಳಕ್ಕೆ ಕೊರೆದು ಚಿನ್ನ ತೆಗೆಯಲಾಗುತ್ತದೆ.
ಬಾವಿಯಲ್ಲಿ ಇಳಿದರೆ ತಂಪಿನ ಅನುಭವವಾಗುತ್ತದೆ- ಈ ಚಿನ್ನದ ಗಣಿ ಆ ತಂಪನ್ನು ಮೀರಿ ಭೂಮಿಯ ಅಂತರಾಳದ ಉಷ್ಣತೆಯಿಂದಾಗಿ 55 ಡಿಗ್ರಿ ಸೆಲ್ಷಿಯಸ್. ಅಲ್ಲಿ ಬೃಹತ್ ಎಸಿ, ಕೃತಕ ಆಮ್ಲಜನಕ ಇಲ್ಲದೆ ಒಂದು ನಿಮಿಷ ಬದುಕುವುದೂ ಕಷ್ಟ. ಇದು ಇಂದಿಗೂ ನಮ್ಮ ಚಿನ್ನದ ಗೀಳಿಗೆ ಹಿಡಿದ ಕನ್ನಡಿ. ಯುಟ್ಯೂಬ್‌ನಲ್ಲಿ GOLD : The story of man's 6000 year obsession ಎನ್ನುವ ಡಾಕ್ಯುಮೆಂಟರಿಯಿದೆ. ಚಿನ್ನದ ಇತಿಹಾಸವೇ ಮನುಷ್ಯನ ಇತಿಹಾಸ ಎನ್ನುವುದನ್ನು ಸೂಕ್ಷ ವಾಗಿ ವಿವರಿಸುತ್ತದೆ. ಹೊಸ ಒಂದು ಜಗತ್ತು ನಿಮ್ಮೆದುರು ತೆರೆದುಕೊಳ್ಳುತ್ತದೆ. ಒಟ್ಟಾರೆ ಚಿನ್ನ ಶೃಂಗಾರಕ್ಕೆ ಸೀಮಿತವಾಗಿರದೆ ಇತಿಹಾಸದುದ್ದಕ್ಕೂ ತನ್ನ ಬೆಲೆ ಕಾಪಾಡಿಕೊಂಡು ಬಂದಿರುವುದು, ಅದರ ಸುತ್ತಲೇ ಮನುಷ್ಯ ನಾಗರಿಕತೆ ಬೆಳೆದದ್ದು ಅನನ್ಯವೇ ಸರಿ.