ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಕನ್ನಡಿ ಮತ್ತು ಕಲೆಯ ಭ್ರಮೆ: ಅಷ್ಟಾವಕ್ರ ಗೀತೆ

ಅಷ್ಟಾವಕ್ರರು ಗಂಭೀರವಾಗಿ ಹೇಳಿದರು: ನಿನ್ನ ಆಸೆಗಳೂ ಹಾಗೆಯೇ. ನೀನು ಆಸೆಗಳನ್ನು ಹೊರಗಿನ ವಸ್ತುಗಳಲ್ಲಿ ಅಥವಾ ನಿನ್ನ ವ್ಯಕ್ತಿತ್ವದಲ್ಲಿ ಹುಡುಕುತ್ತಿದ್ದೀಯ. ಆದರೆ ನಿಜವಾದ ಮಸಿ ಇರುವುದು ‘ನಾನು ಸುಖಿಯಾಗಲು ಇದು ಬೇಕು’ ಎಂದು ನೀನು ನಿನ್ನನ್ನು ಗುರುತಿಸಿ ಕೊಂಡಿದ್ದೀಯಲ್ಲ, ಆ ತಪ್ಪಾದ ಅರಿವಿನಲ್ಲಿ.

ಒಂದೊಳ್ಳೆ ಮಾತು

ಒಮ್ಮೆ ಒಬ್ಬ ರಾಜ ತೀವ್ರವಾದ ಮಾನಸಿಕ ಆತಂಕದಲ್ಲಿದ್ದ. ಅವನ ಬಳಿ ಎಲ್ಲವೂ ಇತ್ತು-ರಾಜ್ಯ, ಸಂಪತ್ತು, ಸೌಂದರ್ಯ. ಆದರೂ ಅವನು ಇನ್ನೂ ಏನೋ ಬೇಕು ಎಂಬ ಹಂಬಲ ದಲ್ಲಿದ್ದ. ಅಷ್ಟಾವಕ್ರ ಮುನಿಗಳ ಬಳಿ ಹೋಗಿ, ಮುನಿಗಳೇ, ನನ್ನ ಆಸೆಗಳನ್ನು ನಾನು ಹೇಗೆ ನಿಯಂತ್ರಿಸಲಿ? ಅವು ನನ್ನನ್ನು ಬಂಧಿಸಿವೆ ಎಂದು ಕೇಳಿಕೊಂಡ.ಅಷ್ಟಾವಕ್ರರು ನಸುನಕ್ಕು ಅವನನ್ನು ಒಂದು ದೊಡ್ಡ ಕನ್ನಡಿಯ ಮುಂದೆ ನಿಲ್ಲಿಸಿದರು.

ಆ ಕನ್ನಡಿಯಲ್ಲಿ ರಾಜನ ಮುಖದ ಮೇಲೆ ಸ್ವಲ್ಪ ಮಸಿ ಇತ್ತು. ಅಷ್ಟಾವಕ್ರರು ಹೇಳಿದರು, ರಾಜನೇ, ಆ ಕನ್ನಡಿಯ ಮೇಲೆ ನಿನ್ನ ಬಿಂಬಕ್ಕೆ ಹತ್ತಿರುವ ಮಸಿಯನ್ನು ಅಳಿಸಲು ಪ್ರಯತ್ನಿಸು. ರಾಜ ಗಾಬರಿಯಿಂದ ಕನ್ನಡಿಯ ಮೇಲೆ ಕೈ ಆಡಿಸಿದ. ಎಷ್ಟು ಅಳಿಸಿದರೂ ಕನ್ನಡಿಯ ಮೇಲಿನ ಆ ಕಲೆ ಹೋಗಲಿಲ್ಲ. ರಾಜನಿಗೆ ಸಿಟ್ಟು ಬಂತು, ಮುನಿಗಳೇ, ಕನ್ನಡಿಯ ಮೇಲಿರುವ ಕಲೆಯನ್ನಲ್ಲ, ನನ್ನ ಮುಖದ ಮೇಲಿರುವ ಮಸಿಯನ್ನು ನಾನು ತೊಳೆದು ಕೊಳ್ಳಬೇಕು. ಆಗಷ್ಟೇ ಬಿಂಬ ಸರಿಯಾಗುತ್ತದೆ ಎಂದ!

ಅಷ್ಟಾವಕ್ರರು ಗಂಭೀರವಾಗಿ ಹೇಳಿದರು: ನಿನ್ನ ಆಸೆಗಳೂ ಹಾಗೆಯೇ. ನೀನು ಆಸೆಗಳನ್ನು ಹೊರಗಿನ ವಸ್ತುಗಳಲ್ಲಿ ಅಥವಾ ನಿನ್ನ ವ್ಯಕ್ತಿತ್ವದಲ್ಲಿ ಹುಡುಕುತ್ತಿದ್ದೀಯ. ಆದರೆ ನಿಜವಾದ ಮಸಿ ಇರುವುದು ‘ನಾನು ಸುಖಿಯಾಗಲು ಇದು ಬೇಕು’ ಎಂದು ನೀನು ನಿನ್ನನ್ನು ಗುರುತಿಸಿ ಕೊಂಡಿದ್ದೀಯಲ್ಲ, ಆ ತಪ್ಪಾದ ಅರಿವಿನಲ್ಲಿ.

ಇದನ್ನೂ ಓದಿ: Roopa Gururaj Column: ಕಸ್ತೂರಿಮೃಗದ ಭ್ರಮೆ ಮತ್ತು ಅಷ್ಟಾವಕ್ರರ ಉತ್ತರ

ನೀನು ಆಸೆಯನ್ನು ಹೊರಗೆ ಎದುರಿಸುತ್ತಿಲ್ಲ, ನೀನೇ ಆಸೆಯಾಗಿ ಬದಲಾಗಿದ್ದೀಯ. ಅಲ್ಲಿಯವರೆಗೆ ರಾಜ ತನ್ನನ್ನು ತಾನು ಬಾಧಿತ ವ್ಯಕ್ತಿ ಎಂದು ಅಂದುಕೊಂಡಿದ್ದ. ಆದರೆ ಅಷ್ಟಾವಕ್ರರ ಮಾತು ಅವನನ್ನು ಎಚ್ಚರಿಸಿತು.

ಆ ಕ್ಷಣದಲ್ಲಿ ಅವನಿಗೆ ಅರಿವಾಯಿತು -ಸಮಸ್ಯೆ ಆಸೆಗಳಲ್ಲ, ನಾನು ಈ ದೇಹ, ನಾನು ಈ ಮನಸ್ಸು, ನಾನು ಈ ಆಸೆ ಎಂಬ ತಪ್ಪಾದ ಗುರುತಿಸುವಿಕೆ. ಅಷ್ಟಾವಕ್ರ ಗೀತೆಯು ನಮಗೆ ಕಲಿಸುವುದು ಜೀವನವನ್ನು ಸುಧಾರಿಸುವುದನ್ನಲ್ಲ, ಬದಲಾಗಿ ಸುಧಾರಿಸಲು ಯತ್ನಿಸು ತ್ತಿರುವ ಆ ಸುಳ್ಳು ‘ನಾನು’ ಎಂಬ ಅಸ್ಮಿತೆಯನ್ನು ಕಳೆದುಕೊಳ್ಳುವುದನ್ನು.

ಅಷ್ಟಾವಕ್ರ ಗೀತೆಯ ಮೊದಲ ಅಧ್ಯಾಯದಲ್ಲಿದೆ:

ಮುಕ್ತಾಭಿಮಾನೀ ಮುಕ್ತೋ ಹಿ ಬದ್ಧೋ ಬದ್ಧಾಭಿಮಾನಿನಃ |

ಕಿಂವದಂತೀಹ ಸತ್ಯೇಯಂ ಯಾ ಮತಿಃ ಸಾ ಗತಿರ್ಭವೇತ್ ||

(ಅಷ್ಟಾವಕ್ರ ಗೀತಾ - 1.1.1)

ಅಷ್ಟಾವಕ್ರರು ಇಲ್ಲಿ ದೊಡ್ಡ ಸತ್ಯವೊಂದನ್ನು ಬಿಚ್ಚಿಡುತ್ತಾರೆ. ನೀವು ನಾನು ಪಾಪಿ, ನಾನು ಆಸೆಬುರುಕ, ನಾನು ಸಂಸಾರಿ ಎಂದು ನಿಮ್ಮನ್ನು ನೀವು ಒಂದು ಚೌಕಟ್ಟಿಗೆ ಹಾಕಿಕೊಂಡ ತಕ್ಷಣ, ಆ ಚೌಕಟ್ಟೇ ನಿಮ್ಮ ಪಂಜರವಾಗುತ್ತದೆ.

ನೀವು ಆಸೆಯನ್ನು ಬಿಡಲು ಹೋರಾಡುತ್ತಿದ್ದೀರಿ ಎಂದರೆ, ನೀವು ಈಗಾಗಲೇ ನಾನು ಆಸೆ ಉಳ್ಳವನು ಎಂದು ಒಪ್ಪಿಕೊಂಡಿದ್ದೀರಿ ಎಂದರ್ಥ. ನಿಮ್ಮ ಮತಿ (ಬುದ್ಧಿ/ನಂಬಿಕೆ) ಹೇಗಿದೆಯೋ ನಿಮ್ಮ ಸ್ಥಿತಿಯೂ ಹಾಗೆಯೇ ಇರುತ್ತದೆ. ನೀವು ನಿಮ್ಮನ್ನು ದೇಹ ಮತ್ತು ಮನಸ್ಸಿನಿಂದ ಬೇರ್ಪಡಿಸಿ ನಾನು ಕೇವಲ ಸಾಕ್ಷಿ ಚೈತನ್ಯ ಎಂದು ಅರಿತ ಕ್ಷಣದಲ್ಲಿ, ಯಾವ ಆಸೆಯೂ ನಿಮ್ಮನ್ನು ಮುಟ್ಟಲಾರದು.

ಏಕೆಂದರೆ ಆಸೆ ಇರುವುದು ಮನಸ್ಸಿಗೆ, ಆತ್ಮಕ್ಕಲ್ಲ. ಈ ಶ್ಲೋಕವು ‘ಸುಧಾರಣೆ’ಯ ಬಗ್ಗೆ ಮಾತನಾಡುವುದಿಲ್ಲ. ನೀವು ಕೆಟ್ಟವರಿಂದ ಒಳ್ಳೆಯವರಾಗಿ ಎಂದು ಅಷ್ಟಾವಕ್ರರು ಹೇಳು ತ್ತಿಲ್ಲ. ಬದಲಾಗಿ, ನೀವು ಮೊದಲೇ ಮುಕ್ತರು, ಆದರೆ ನೀವು ಬಂಧಿತರೆಂದು ಭ್ರಮೆಯಲ್ಲಿ ದ್ದೀರಿ ಎಂದು ನೆನಪಿಸುತ್ತಿದ್ದಾರೆ.

ನಾವು ನಮ್ಮನ್ನು ಯಾವುದರ ಜೊತೆ ಗುರುತಿಸಿಕೊಳ್ಳುತ್ತೇವೆಯೋ ಅದೇ ನಮ್ಮ ಸಂಕೋಲೆ ಯಾಗುತ್ತದೆ. ಒಂದು ಹಳೆಯ ಗಾದೆ ಮಾತಿದೆ - ‘ಯಾದೃಶೀ ಭಾವನಾ ಯಸ್ಯ ಸಿದ್ಧಿರ್ಭವತಿ ತಾದೃಶೀ’ ಅಂದರೆ, ಮನುಷ್ಯನ ಬುದ್ಧಿ ಅಥವಾ ಆಲೋಚನೆ ಹೇಗಿರುತ್ತದೆಯೋ, ಅವನ ಗತಿಯೂ ಹಾಗೆಯೇ ಆಗುತ್ತದೆ. ಇಂದಿನ ದಿನಗಳಲ್ಲಿ ಪ್ರಾಪಂಚಿಕ ವಸ್ತುಗಳಲ್ಲಿ ಸುಖವನ್ನು ಅರಸುತ್ತಿರುವ ನಾವು, ಬೇರೆಯವರನ್ನು ಮೆಚ್ಚಿಸಲು ನಮ್ಮದಲ್ಲದ ಬದುಕನ್ನು ಆವಾಹಿಸಿ ಕೊಂಡಿರುವ ನಮ್ಮಂಥವರಿಗೆ ಈ ಮಾತುಗಳು ದೊಡ್ಡ ಪಾಠ.

ಆದ್ದರಿಂದಲೇ ನಮ್ಮ ಆಲೋಚನೆಗಳನ್ನ ಹಿಡಿತದಲ್ಲಿರಿಸಿಕೊಂಡು ಆಸೆಗಳ ಮೂಲವನ್ನು ಅರ್ಥ ಮಾಡಿಕೊಂಡು ಅವುಗಳಿಂದ ಬೇರ್ಪಟ್ಟಾಗ ಜೀವನ ಸರಳವಾಗುತ್ತದೆ.

ರೂಪಾ ಗುರುರಾಜ್

View all posts by this author