ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raghava Sharma Nidle Column: ಹಾಗಾದರೆ ದಿಲ್ಲಿ ಅಬಕಾರಿ ನೀತಿ ಹಗರಣ ನಡೆದೇ ಇಲ್ಲವೇ ?

ರದ್ದಾದ ಅಬಕಾರಿ ನೀತಿಯ ಬಗ್ಗೆ ಮನೀಷ್ ಸಿಸೋಡಿಯಾ ಬಳಿ ಕೇಳಿದ್ದಾಗ, “ಅದೊಂದು ಅದ್ಭುತವಾದ ಮಾದರಿ ಅಬಕಾರಿ ನೀತಿ" ಎಂದೇನೂ ಅವರು ಬೆನ್ನು ತಟ್ಟಿಕೊಳ್ಳಲಿಲ್ಲ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಧೀಶರು ಕೂಡ “ಅಬಕಾರಿ ಹಗರಣ ನಡೆದಿಲ್ಲ. ಎಲ್ಲವೂ ಶುಭ್ರವಾಗಿದೆ" ಎಂದೂ ಹೇಳಿಲ್ಲ. ಬದಲಿಗೆ, “ಸಿಬಿಐ ಮಾಡಿದ ಆರೋಪಗಳಿಗೆ ಶಕ್ತಿ ತುಂಬುವ ಸಾಕ್ಷ್ಯಗಳಿಲ್ಲ ಮತ್ತು ಕೋರ್ಟ್ ಮುಂದೆ ಪ್ರಸ್ತುತಪಡಿಸಲಾದ ಸಾಕ್ಷ್ಯಗಳನ್ನು ದೃಢೀಕರಿಸಲು ಅಗತ್ಯ ದಾಖಲೆಗಳನ್ನೂ ಒದಗಿಸಿಲ್ಲ.

ಹಾಗಾದರೆ ದಿಲ್ಲಿ ಅಬಕಾರಿ ನೀತಿ ಹಗರಣ ನಡೆದೇ ಇಲ್ಲವೇ ?

-

ಜನಪಥ

ಅಬಕಾರಿ ಹಗರಣ ನಡೆದೇ ಇಲ್ಲ, ಲಿಕ್ಕರ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಅಂಶಗಳು ಹೊಸ ಅಬಕಾರಿ ನೀತಿಯಲ್ಲಿ ಇಲ್ಲ ಎನ್ನುವುದು ಕೇಜ್ರಿವಾಲ್ ವಾದ ವಾದರೆ, ಹಳೆ ಅಬಕಾರಿ ನೀತಿಯನ್ನು ಮರುಸ್ಥಾಪನೆ ಮಾಡಿದ್ದೇಕೆ? ಹೊಸ ನೀತಿ ಯನ್ನೇ ಮುಂದುವರಿಸಬಹುದಿತ್ತ ಎಂಬ ಪ್ರಶ್ನೆಗಳಿಗೆ ಅವರು ಸಮರ್ಥನೀಯ ಉತ್ತರ ನೀಡಿಯೇ ಇಲ್ಲ. ರzದ ಅಬಕಾರಿ ನೀತಿಯ ಬಗ್ಗೆ ಮನೀಷ್ ಸಿಸೋಡಿಯಾ ಬಳಿ ಕೇಳಿದ್ದಾಗ, ಅದೊಂದು ಅದ್ಭುತ ವಾದ ಮಾದರಿ ಅಬಕಾರಿ ನೀತಿ ಎಂದೇನೂ ಅವರು ಬೆನ್ನು ತಟ್ಟಿಕೊಳ್ಳಲಿಲ್ಲ.

ದೆಹಲಿ ಅಬಕಾರಿ ನೀತಿ ಹಗರಣ ಸಾಮಾನ್ಯ ಪ್ರಕರಣವೇನಾಗಿರಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ದಿಲ್ಲಿ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಆಪ್) ವಿರುದ್ಧ ಮುಗಿಬೀಳಲು ಇದೇ ಹಗರಣವನ್ನು ಬ್ರಹ್ಮಾಸ್ತ್ರ ವನ್ನಾಗಿ ಪ್ರಯೋಗಿಸಿದ್ದವು.

ಆಮ್ ಆದ್ಮಿ ಪಕ್ಷವು ದಿಲ್ಲಿ ನಿವಾಸಿಗರ ವಿಶ್ವಾಸ ಕಳೆದುಕೊಳ್ಳಲು ಮತ್ತು ಅಧಿಕಾರ ಕಳೆದುಕೊಳ್ಳಲು ಕಾರಣವಾಗಿದ್ದು ಕೂಡ ಇದೇ ಲಿಕ್ಕರ್ ಸ್ಕ್ಯಾಮ. ಮದ್ಯ (ಲಿಕ್ಕರ್) ಮಾರಾಟ ಸಂಸ್ಥೆಗಳಿಂದ ಸುಮಾರು 100 ಕೋಟಿ ರುಪಾಯಿಗಿಂತಲೂ ಹೆಚ್ಚು ಕಿಕ್ʼಬ್ಯಾಕ್ (ಲಂಚ) ಪಡೆದಿದ್ದಾರೆ ಎಂಬ ಆರೋಪದಡಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ, ದಿಲ್ಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್, ಡಿಸಿಎಂ ಮನೀಷ್ ಸಿಸೋಡಿಯಾ, ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್, ತೆಲಂಗಾಣ ಬಿಆರ್‌ಎಸ್ ಪಕ್ಷದ ಮಾಜಿ ನಾಯಕಿ, ಮಾಜಿ ಸಿಎಂ ಕೆ.ಚಂದ್ರಶೇಖರ ರಾವ್ ಪುತ್ರಿ ಕೆ.ಕವಿತಾ ಸೇರಿ ಅನೇಕರು ಬಂಧನಕ್ಕೊಳಗಾಗಿ, ಮಾನಸಿಕ ಸಂಕಟ ಅನುಭವಿಸಿದ ಪ್ರಕರಣವಿದು. ‌

ಆಮ್ ಆದ್ಮಿ ಪಕ್ಷದ ಬಗ್ಗೆ ದೆಹಲಿ ಮಾತ್ರವಲ್ಲ, ದೇಶಾದ್ಯಂತ ಜನಾಭಿಪ್ರಾಯ ಬದಲಿಸಲು ಬಿಜೆಪಿಗಂತೂ ಈ ಹಗರಣ ವರದಾನವಾಗಿತ್ತು. ಕೇಜ್ರಿವಾಲ್ ನೇತೃತ್ವದ ‘ಆಪ್’ ಸರಕಾರವು ಹಳೆಯ ಅಬಕಾರಿ ನೀತಿಯನ್ನು ರದ್ದುಗೊಳಿಸಿ ಹೊಸ ಅಬಕಾರಿ ನೀತಿಯನ್ನು ಜಾರಿ ಮಾಡಿದ್ದರಿಂದ ಲಿಕ್ಕರ್ ಪರವಾನಗಿದಾರರಿಗೆ ಅನುಕೂಲವಾಗಿ, ರಾಜಧಾನಿಯ ಹಲವೆಡೆ ಮದ್ಯದ ಅಂಗಡಿಗಳು ಎಂದರಲ್ಲಿ ತೆರೆದುಕೊಂಡವು.

ಆದರೆ, ಯಾವಾಗ ಹಗರಣದ ಆರೋಪಗಳು ಗಂಭೀರ ಸ್ವರೂಪ ಪಡೆದುಕೊಂಡು, ಸಿಬಿಐ-ಇ.ಡಿ. ತನಿಖಾ ಸಂಸ್ಥೆಗಳ ಪ್ರವೇಶವಾಯ್ತೋ ಆಗ ಹೊಸ ಅಬಕಾರಿ ನೀತಿಯನ್ನು ರದ್ದು ಗೊಳಿಸಿದ ಕೇಜ್ರಿವಾಲ್ ಸರಕಾರ, ಹಳೆಯ ಅಬಕಾರಿ ನೀತಿಯನ್ನು ಮರು ಅನುಷ್ಠಾನ ಗೊಳಿಸಿತು.

ಇದನ್ನೂ ಓದಿ: Raghav Sharma Nidle Column: ನಿಮ್ಮ ಮಂಗಾಟಕ್ಕೆ ಜಾಗತಿಕ ವೇದಿಕೆಯೇ ಬೇಕಿತ್ತಾ ?

ಆದರೆ, ಇ.ಡಿ.-ಸಿಬಿಐ ಸಂಸ್ಥೆಗಳ ತನಿಖೆ ಮುಂದುವರಿದು, ಸಿಸೋಡಿಯಾ (ಸುಮಾರು ಒಂದೂವರೆ ವರ್ಷ) ನಂತರ ಕೇಜ್ರಿವಾಲ್ (5 ತಿಂಗಳು), ಸಂಜಯ್ ಸಿಂಗ್ ತಿಹಾರ್ ಜೈಲಿ ನಲ್ಲಿ ಹಲವು ತಿಂಗಳುಗಳನ್ನು ಕಳೆಯಬೇಕಾಯಿತು. ಸದ್ಯದ ಮಟ್ಟಿಗಂತೂ ಅವರೆಲ್ಲರೂ (ಆಪ್ ಮುಖಂಡರು) ಆರೋಪ ಮುಕ್ತರಾಗಿದ್ದಾರೆ ಮತ್ತು ಮೈಗಂಟಿದ್ದ ಭ್ರಷ್ಟಾಚಾರದ ಮಸಿಯನ್ನು ನ್ಯಾಯಾಲಯವೇ ಅಳಿಸಿರುವುದರಿಂದ ಮೈಕೊಡವಿಕೊಂಡು ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನು ಎದುರಿಸಲು ಸಜ್ಜಾಗಿ ನಿಂತಿದ್ದಾರೆ.

“ಅಬಕಾರಿ ಹಗರಣ ನಡೆದೇ ಇಲ್ಲ. ಲಿಕ್ಕರ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಅಂಶಗಳು ಹೊಸ ಅಬಕಾರಿ ನೀತಿಯಲ್ಲಿ ಇಲ್ಲ" ಎನ್ನುವುದು ಕೇಜ್ರಿವಾಲ್ ವಾದವಾದರೆ, “ಹಳೆ ಅಬಕಾರಿ ನೀತಿಯನ್ನು ಮರುಸ್ಥಾಪನೆ ಮಾಡಿದ್ದೇಕೆ? ಹೊಸ ಅಬಕಾರಿ ನೀತಿಯನ್ನೇ ಮುಂದುವರಿಸಬಹುದಿತ್ತ?" ಎಂಬ ಪ್ರಶ್ನೆಗೆ ಅವರು ಸಮರ್ಥನೀಯ ಉತ್ತರ ನೀಡಿಯೇ ಇಲ್ಲ.

ರದ್ದಾದ ಅಬಕಾರಿ ನೀತಿಯ ಬಗ್ಗೆ ಮನೀಷ್ ಸಿಸೋಡಿಯಾ ಬಳಿ ಕೇಳಿದ್ದಾಗ, “ಅದೊಂದು ಅದ್ಭುತವಾದ ಮಾದರಿ ಅಬಕಾರಿ ನೀತಿ" ಎಂದೇನೂ ಅವರು ಬೆನ್ನು ತಟ್ಟಿಕೊಳ್ಳಲಿಲ್ಲ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಧೀಶರು ಕೂಡ “ಅಬಕಾರಿ ಹಗರಣ ನಡೆದಿಲ್ಲ. ಎಲ್ಲವೂ ಶುಭ್ರವಾಗಿದೆ" ಎಂದೂ ಹೇಳಿಲ್ಲ. ಬದಲಿಗೆ, “ಸಿಬಿಐ ಮಾಡಿದ ಆರೋಪಗಳಿಗೆ ಶಕ್ತಿ ತುಂಬುವ ಸಾಕ್ಷ್ಯಗಳಿಲ್ಲ ಮತ್ತು ಕೋರ್ಟ್ ಮುಂದೆ ಪ್ರಸ್ತುತಪಡಿಸಲಾದ ಸಾಕ್ಷ್ಯಗಳನ್ನು ದೃಢೀಕರಿಸಲು ಅಗತ್ಯ ದಾಖಲೆಗಳನ್ನೂ ಒದಗಿಸಿಲ್ಲ.

ಹೀಗಾಗಿ, ಏಕಪಕ್ಷೀಯವಾಗಿ ಮತ್ತು ರಾಜಕೀಯ ಚತುರತೆಯಿಂದ ಮಾಡಲಾದ ಆರೋಪ ಗಳನ್ನು ಒಪ್ಪಲು ಸಾಧ್ಯವಿಲ್ಲ" ಎಂದು ನ್ಯಾ.ಜಿತೇಂದ್ರ ಸಿಂಗ್ ಅವರು ಸಿಬಿಐ ತನಿಖಾ ಪ್ರಕ್ರಿಯೆಯನ್ನೇ ಕಟು ವಾಕ್ಯಗಳಲ್ಲಿ ಪ್ರಶ್ನಿಸಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಯನ್ನು ಮುಖ್ಯ ಆರೋಪಿ (ನಂ.1) ಮಾಡಿದ್ದನ್ನೂ ಪ್ರಶ್ನಿಸಿರುವ ನ್ಯಾಯಾಧೀಶರು, ತನಿಖಾಧಿಕಾರಿ ಗಳ ಮೇಲೆಯೇ ತನಿಖೆ ನಡೆಸಬೇಕು ಎಂಬ ಅಪರೂಪದ ಸೂಚನೆಯನ್ನೂ ತೀರ್ಪಿನಲ್ಲಿ ಪ್ರಕಟಿಸಿರುವುದಿರಂದ ಸಿಬಿಐ ವಿಪರೀತ ಮುಖಭಂಗವನ್ನು ಅನುಭವಿಸಿದೆ.

kejriwal

‘ಅಬಕಾರಿ ಹಗರಣದ ಬಗ್ಗೆ ಬಿಜೆಪಿ-ಕಾಂಗ್ರೆಸ್ ನಾಯಕರ ಅಬ್ಬರ’, ‘ಕೇಜ್ರಿವಾಲ್ ಮಾಸ್ಟರ್ ಮೈಂಡ್’, ‘ಸಂಜಯ್ ಸಿಂಗ್ ಕಿಂಗ್‌ಪಿನ್’ ಎಂಬ ವಿಧವಿಧದ ಶೀರ್ಷಿಕೆಗಳೊಂದಿಗೆ ಶಂಕಿತ ಹಗರಣದ ವರದಿ ಮಾಡಿದ್ದ ಮಾಧ್ಯಮಗಳೂ ಕೋರ್ಟ್ ತೀರ್ಪನ್ನು ನೋಡಿ ಬೆಚ್ಚಿಬಿದ್ದಿವೆ. ಸಿಬಿಐ ತನಿಖಾಧಿಕಾರಿಗಳ ವಿಶ್ವಾಸಾರ್ಹತೆ ಮತ್ತೊಮ್ಮೆ ಪಾತಾಳಕ್ಕಿಳಿದಿದೆ.

“ಪ್ರಕರಣದಲ್ಲಿ ಕೇವಲ ಒಬ್ಬ ಅಪ್ರೂವರ್‌ನ (ದಿನೇಶ್ ಅರೋರಾ) ಹೇಳಿಕೆಗಳನ್ನಾಧರಿಸಿ ಆರೋಪಿಗಳನ್ನು ಅಪರಾಧಿಗಳು ಎಂದು ಗುರುತಿಸಲು ಸಾಧ್ಯವಿಲ್ಲ" ಎಂದ ನ್ಯಾಯಾಧೀಶರು, ತಮ್ಮ 596 ಪುಟಗಳ ತೀರ್ಪಿನಲ್ಲಿ ಸಿಬಿಐ ಕಾರ್ಯವಿಧಾನದ ಲೋಪ ಗಳು, ಸಾಂವಿಧಾನಿಕ ತತ್ವಗಳ ಉಲ್ಲಂಘನೆ ಮತ್ತು ‘ಬೀಸು ಹೇಳಿಕೆ’ ಸಾಕ್ಷ್ಯಗಳ ಮೇಲಿನ ಅವಲಂಬನೆಯನ್ನು ಖಂಡಿಸಿದ್ದಾರೆ.

“ಸಿಬಿಐ ತನಿಖೆ ವಸ್ತುನಿಷ್ಠವೂ ಅಲ್ಲ, ನಿಷ್ಪಕ್ಷಪಾತವಾಗಿಯೂ ಇಲ್ಲ" ಎಂಬ ನ್ಯಾಯಾ ಧೀಶರ ಅಭಿಪ್ರಾಯವು ತನಿಖಾಧಿಕಾರಿಗಳ ಉದ್ದೇಶಗಳನ್ನೇ ಪ್ರಶ್ನೆ ಮಾಡುವಂತಿದೆ. ದಕ್ಷಿಣ ಭಾರತದ ಲಿಕ್ಕರ್ ಕಂಪನಿಗಳು (ಸಿಬಿಐ ಈ ಕಂಪನಿಗಳನ್ನು ಸೌತ್ ಗ್ರೂಪ್ ಎಂದು ಹೆಸರಿಸಿತ್ತು) 100 ಕೋಟಿ ರುಪಾಯಿ ಲಂಚವನ್ನು ಆಮ್ ಆದ್ಮಿ ಪಕ್ಷಕ್ಕೆ ‘ಮುಂಗಡ ಹಣ’ವಾಗಿ ನೀಡಿದ್ದವು ಎನ್ನುವುದು ಸಿಬಿಐ ಆರೋಪ. ಆದರೆ, ಈ ಆರೋಪವೇ ಸ್ವೀಕಾ ರಾರ್ಹ ಪುರಾವೆಗಳಿಲ್ಲದ ಊಹಾತ್ಮಕ ಕಲ್ಪನೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅಪ್ರೂವರ್ ದಿನೇಶ್ ಅರೋರಾ ಹೇಳಿಕೆಯನ್ನಷ್ಟೇ ಆಧರಿಸಿ ಮುಂಗಡ ಹಣದ ಆರೋಪ ವನ್ನು ಮಾಡಲಾಗಿದೆ.

ಮೇಲಾಗಿ ದಿನೇಶ್ ಅರೋರಾ ಆರೋಪಿಗಳ ಹೆಸರನ್ನು ನೇರವಾಗಿ ಎಲ್ಲೂ ಹೆಸರಿಸಿಲ್ಲ ಮತ್ತು ಹಣ ಪಡೆದಿರುವ ಅಥವಾ ವ್ಯವಹಾರ ನಡೆದಿರುವ ಸಾಕ್ಷ್ಯಗಳನ್ನೂ ಒದಗಿಸ ಲಾಗಿಲ್ಲ.

‘ಹೇಳಿಕೆಗಳಲ್ಲಿನ ಅಸಂಗತತೆ’ ಮತ್ತು ‘ದೃಢೀಕರಣದ ಕೊರತೆ’ಯಿಂದಾಗಿ, ಇಲ್ಲಿ ಪಿತೂರಿ ನಡೆದಿದೆ ಎಂದು ತೀರ್ಮಾನಿಸಲು ಸಾಧ್ಯವೇ ಇಲ್ಲ. ಹವಾಲಾ ವಹಿವಾಟಿನ ಕುರಿತಾದ ಆರೋಪಗಳಲ್ಲಿ ಸ್ಪಷ್ಟತೆ ಕಾಣುವುದಿಲ್ಲ ಎಂದು ನ್ಯಾಯಾಧೀಶರು ಹೇಳಿರುವುದು ಈ ಪ್ರಕರಣದಲ್ಲಿನ ಸಿಬಿಐ ತನಿಖಾ ಸಾಮರ್ಥ್ಯವನ್ನೇ ಬೊಟ್ಟು ಮಾಡುವಂತಿದೆ.

ರಾಜಕಾರಣಿಗಳ ಹಾಗೂ ವಿಪಕ್ಷ ಮುಖಂಡರ ಸದ್ದಡಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪ ಮಾಡುತ್ತಿದ್ದ ವಿಪಕ್ಷಗಳಿಗೆ ಈ ತೀರ್ಪು ರಾಜಕೀಯ ಅಸ್ತ್ರವಾಗಿ ಸಿಕ್ಕಿದೆ. ಈ ತೀರ್ಪಿನಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿರುವುದು ಸುಳ್ಳೇನಲ್ಲ.

ರಾಜಕೀಯ ಪುನರುಜ್ಜೀವನ ಬಯಸುತ್ತಿರುವ ಕಾಂಗ್ರೆಸ್‌ಗೆ ಕೇಜ್ರಿವಾಲ್ ಪುನರಾಗಮನ ಹಿತವೆನಿಸಿಲ್ಲ. ಈಗ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಅಲ್ಲಿ ತೀರ್ಪು ಬರುವ ತನಕ ಕೇಜ್ರಿವಾಲ್ ಮತ್ತು ತಂಡ ಆರೋಪ ಮುಕ್ತವಾಗಿರಲಿದೆ.

“ನನ್ನದು ಉದಾತ್ತ ಪ್ರಾಮಾಣಿಕತೆ" ಎಂದು ಕಣ್ಣೀರು ಸುರಿಸಿದ ಕೇಜ್ರಿವಾಲ್ಗೆ ರಾಜಕೀಯ ಮರುಜನ್ಮ ಸಿಕ್ಕಿದೆ. ದಿಲ್ಲಿ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅವರು 2ನೇ ಇನ್ನಿಂಗ್ಸ್ ಆರಂಭಿಸಲು ಹೊಸ ವೇದಿಕೆ ನಿರ್ಮಾಣವಾಗಲಿದೆ. ಲಿಕ್ಕರ್ ಹಗರಣ ತೆಲಂಗಾಣಕ್ಕೂ ವ್ಯಾಪಿಸಿ ಬಿಆರ್‌ಎಸ್ ಪಕ್ಷದಲ್ಲಿದ್ದ ಕೆ.ಕವಿತಾ ಕೂಡ ಬಂಧನಕ್ಕೀಡಾಗಿದ್ದರು. ಅವರೂ ಕಳಂಕ ಮುಕ್ತರಾಗಿದ್ದು,

ತೆಲಂಗಾಣ ರಾಜಕಾರಣದಲ್ಲಿ ಅವರು ಎರಡನೇ ಹೊಸ ಇನ್ನಿಂಗ್ಸ್‌ ಆರಂಭಿಸಲು ಬಲ ಬಂದಂತಾಗಿದೆ. ಹಾಗೆ ನೋಡಿದರೆ, ದಿಲ್ಲಿ ಅಬಕಾರಿ ನೀತಿಯಿಂದಾಗಿ ಹಗರಣ ನಡೆದಿದೆ ಎಂದು ಮೊದಲು ಆರೋಪ ಮಾಡಿದ್ದೇ ಕಾಂಗ್ರೆಸ್. 2022ರಲ್ಲಿ ಅಂದಿನ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅನಿಲ್ ಚೌಧುರಿ ಅವರು ಆಗಿನ ದಿಲ್ಲಿ ಲೆಫ್ಟಿನಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ಪತ್ರ ಬರೆದು, ಹಗರಣದ ಬಗ್ಗೆ ವಿವರಣೆ ನೀಡಿ, ‘ಈ ಬಗ್ಗೆ ಸೂಕ್ತ ತನಿಖೆಗೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದ್ದರು.

ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರೂ ಸಕ್ಸೇನಾ ಅವರಿಗೆ ಹಗರಣ ನಡೆದಿರುವ ಸಾಧ್ಯತೆ ಬಗ್ಗೆ ವರದಿ ನೀಡಿದ್ದರು. ಈ ದೂರುಗಳ ಆಧಾರದ ಮೇಲೆ ಅವರು ಸಿಬಿಐಗೆ ಶಿಫಾರಸು ಮಾಡಿದ್ದರಿಂದ 2022ರ ಜುಲೈ 20ರಂದು ಸಿಬಿಐ ಪ್ರಕರಣ ದಾಖಲು ಮಾಡಿ ಕೊಂಡು ತನಿಖೆಯನ್ನು ಆರಂಭಿಸಿತು.

ಅಬಕಾರಿ ನೀತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿಷ್ಕರಿಸಿದ ಪರಿಣಾಮ ‘ಆಪ್’ ಪಕ್ಷದ ನಾಯಕರು ಮದ್ಯ ತಯಾರಕರಿಂದ ಲಂಚ ಪಡೆದಿದ್ದರು ಎಂದು ಸಿಬಿಐ ಗಂಭೀರ ಆರೋಪ ಮಾಡಿತು ಹಾಗೂ ನಂತರದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ‌

2021ರಲ್ಲಿ ಕೇಜ್ರಿವಾಲರು ದಕ್ಷಿಣದ ಲಿಕ್ಕರ್ ಉದ್ಯಮಿ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರೊಂದಿಗೆ ಮಾತನಾಡುತ್ತಾ, “ನಿಮ್ಮ ಉದ್ಯಮವನ್ನು ದೆಹಲಿಗೆ ವಿಸ್ತರಿಸಿ, ರಾಜಕೀಯಕ್ಕೆ ಫಂಡಿಂಗ್ ಮಾಡಿ" ಎಂದು ಕೇಳಿಕೊಂಡಿದ್ದರಂತೆ. ಇದನ್ನು ತನಿಖಾಧಿಕಾರಿಗಳಿಗೆ ಹೇಳಿದ್ದು ಶ್ರೀನಿವಾಸುಲು ರೆಡ್ಡಿ. ಆದರೆ ಆ ಹೇಳಿಕೆಯೊಂದನ್ನೇ ಆಧರಿಸಿ ‘ಕೇಜ್ರಿವಾಲ್ ಹಗರಣದ ಮಾಸ್ಟರ್ ಮೈಂಡ್’ ಎಂದು ಸಿಬಿಐ ಆರೋಪಿಸಿದ್ದು ನ್ಯಾಯಾಧೀಶರನ್ನು ತೃಪ್ತಿಪಡಿಸಲಿಲ್ಲ.

ಇದು ಕಾನೂನುಬಾಹಿರ ಕೃತ್ಯವನ್ನು ಸಾಬೀತುಪಡಿಸುವುದಿಲ್ಲ ಮತ್ತು ಅವ್ಯವಹಾರಕ್ಕೆ ಇದು ದಾರಿ ಮಾಡಿತು ಎಂದು ನೇರವಾಗಿ ಒಪ್ಪಲೂ ಆಗುವುದಿಲ್ಲ ಎಂಬುದು ನ್ಯಾಯಾ ಧೀಶರ ನಿಲುವು. ರೆಡ್ಡಿ ಅವರ ಮಗ, ರಾಘವ್ ಮಾಗುಂಟ ಹೇಳಿಕೆಯನ್ನೂ ನ್ಯಾಯಾಲಯ ತಿರಸ್ಕರಿಸಿತು.

“ರೆಡ್ಡಿ-ಕೇಜ್ರಿವಾಲ್ ಸಭೆಯನ್ನು ರಾಘವ ಮಾಗುಂಟ ನೋಡಿದ್ದೇನೆ ಎಂದು ಹೇಳಿಲ್ಲ. ಹಾಗಾಗಿ ಅದೂ ದೃಢೀಕೃತ ಸಾಕ್ಷ್ಯವಾಗಲಿಲ್ಲ. ಮಾಗುಂಟ ಶ್ರೀನಿವಾಸುಲು ರೆಡ್ಡಿ ಜತೆ ಕೇಜ್ರಿವಾಲ್ ಮಾತುಕತೆ ಮಾಡಿದ್ದಾಗ 10-12 ಮಂದಿ ಹಾಜರಿದ್ದರು ಎನ್ನಲಾಗಿತ್ತಾದರೂ, ಅವರ‍್ಯಾರನ್ನೂ ಸಿಬಿಐ ವಿಚಾರಣೆಗೆ ಒಳಪಡಿಸದಿರುವುದು ಅಚ್ಚರಿಗೆ ಕಾರಣವಾಯಿತು.

ಬಹುಶಃ ಅವರನ್ನು ವಿಚಾರಣೆ ಮಾಡಿದ್ದರೆ ನೇರ ಸಾಕ್ಷ್ಯಗಳು ಸಿಗುತ್ತಿದ್ದವೋ ಏನೋ..." ಎಂದು ನ್ಯಾಯಾಧೀಶರೇ ಹೇಳಿದ್ದಾರೆ. ಕೆಳ ನ್ಯಾಯಾಲಯವು 23 ಮಂದಿಯನ್ನು ಆರೋಪ ಮುಕ್ತಗೊಳಿಸಿದ ಮಾತ್ರಕ್ಕೆ ಪ್ರಕರಣ ಪೂರ್ಣ ಮುಗಿದೇ ಬಿಟ್ಟಿತು ಎಂದೇನಲ್ಲ.

ಸಿಬಿಐ, ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಮತ್ತೊಂದು ಸುತ್ತಿನ ಕಾನೂನು ಹೋರಾಟ ನಿಶ್ಚಿತ. ಆರೋಪಿಗಳ ಅಪರಾಧಿತ್ವವನ್ನು ಎತ್ತಿತೋರಿಸುವ ಅಂಶಗಳನ್ನೇ ನ್ಯಾಯಾಧೀಶರು ನಿರ್ಲಕ್ಷಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಸಿಬಿಐ, “ನ್ಯಾಯಾಧೀಶರು ಹಗರಣದಲ್ಲಿನ ಪಿತೂರಿಯ ಆಧಾರವನ್ನು ಸಂಪೂರ್ಣವಾಗಿ ಕಡೆಗಣಿಸಿ, ಸಣ್ಣಸಣ್ಣ ಲೋಪಗಳ ವಿವರವಾದ ಮೌಲ್ಯಮಾಪನ ಮಾಡಿದ್ದಾರೆ.

ಆದರೂ ಅವು ಪ್ರಾಸಿಕ್ಯೂಷನ್ ಪ್ರಕರಣದ ಭಾಗವಾಗಿರಲಿಲ್ಲ. ಹಗರಣದಲ್ಲಿ ಆರೋಪಿಗಳ ವೈಯಕ್ತಿಕ ಪಾತ್ರಗಳ ಬಗ್ಗೆ ತಮ್ಮದೇ ಆದ ತಿಳಿವಳಿಕೆಯೊಂದಿಗೆ ವಿಭಿನ್ನ ದೃಷ್ಟಿಕೋನ ದಿಂದ ನೋಡಿರುವುದು ಸರಿಯಲ್ಲ. ನ್ಯಾಯಾಧೀಶರಿಗೆ ಈ ಪ್ರಕರಣದ ಮೂಲಭೂತ ತಿಳಿವಳಿಕೆ ಹಾಗೂ ಸಿಬಿಐ ಆರೋಪಗಳ ಬಗ್ಗೆ ಈ ಹಂತದಲ್ಲಿ ಅಳವಡಿಸಬೇಕಾಗಿದ್ದ ಕಾನೂನಿನ ಬಗ್ಗೆ ಅರಿವು ಇದ್ದಂತಿಲ್ಲ" ಎಂದು ತನ್ನ ಮೇಲ್ಮನವಿಯಲ್ಲಿ ಅದು ಅಸಮಾ ಧಾನವನ್ನು ಹೊರ ಹಾಕಿದೆ.

ಒಂದುವೇಳೆ, ಹೈಕೋರ್ಟ್‌ನಲ್ಲಿ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡರೆ, ಅಲ್ಲಿನ ನ್ಯಾಯಾಧೀಶರು ಪ್ರಕರಣವನ್ನು ಇದೇ ರೀತಿ ವಿಶ್ಲೇಷಿಸುತ್ತಾರೆ ಎಂದು ಈಗ ಹೇಳಲಾಗದು. ಈ ಹಿಂದೆ ಪ್ರಕರಣದ ಆರೋಪಿಗಳಿಗೆ ಜಾಮೀನು ತಿರಸ್ಕಾರ ಮಾಡಿದ್ದ ಸಂದರ್ಭದಲ್ಲಿ “ಮೇಲ್ನೋಟಕ್ಕೆ ಅವ್ಯವಹಾರ ಕಾಣುತ್ತಿದೆ" ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ನೀಡಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು.

ದಿಲ್ಲಿ ಮದ್ಯ ನೀತಿಯಿಂದ ಹಗರಣ ನಡೆದಿಲ್ಲ ಎಂದು ಕೆಳ ನ್ಯಾಯಾಲಯವೇನೂ ಹೇಳಿಲ್ಲ. ಆದರೆ, ಆರೋಪಗಳನ್ನು ದೃಢೀಕರಿಸುವಂಥ ಸಾಕ್ಷ್ಯ ಒದಗಿಸಲು ಸಿಬಿಐಗೆ ಸಾಧ್ಯವಾಗಿಲ್ಲ. ಹಾಗಾಗಿ, ದಿಲ್ಲಿ ಹೈಕೋರ್ಟ್‌ನಲ್ಲಿ ನಡೆಯುವ ಮತ್ತೊಂದು ಸುತ್ತಿನ ಕಾನೂನು ಹೋರಾಟದ ಮೂಲಕವಾದರೂ ಸಿಬಿಐ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದೇ? ಇದಕ್ಕೆ ಕಾಲವೇ ಉತ್ತರಿಸಲಿದೆ.