ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinayaka M Bhat Column: ಬಿರು ಬೇಸಿಗೆಯನ್ನೂ ಸಹನೀಯವಾಗಿಸುವ ಅಮರಫಲ

ಸೂರ್ಯನ ಆಘಾತಕ್ಕೆ ನೂರಾರು ಜನ ಪ್ರತಿ ವರ್ಷ ಬಲಿಯಾಗುತ್ತಾರೆ. ಹೀಗೆ ‘ಸನ್ ಸ್ಟ್ರೋಕ್’ ಆದವರಿಗೆ ಅತ್ಯಂತ ಹಾಗೂ ಏಕೈಕ ಪರಿಣಾಮಕಾರಿ ಚಿಕಿತ್ಸೆ / ಔಷಧಿ ಅಂದರೆ ಅದು ಗಳಿತ ಮಾವಿನ ಹಣ್ಣಿನ ಲೇಪನವಂತೆ. ‘ಸನ್ ಸ್ಟ್ರೋಕ್’ ಆದವರಿಗೆ ಎಷ್ಟು ಸಾಧ್ಯವೋ ಅಷ್ಟು ಗಳಿತ ಮಾವಿನಹಣ್ಣನ್ನು ಆದಷ್ಟು ಬೇಗನೇ ಮೈತುಂಬಾ ಲೇಪಿಸಬೇಕಂತೆ, ಹಾಗೆ ಲೇಪಿಸಿದರೆ ಅವರ ಜೀವವನ್ನು ಬಚಾವ್ ಮಾಡಬಹುದು ಎನ್ನುತ್ತಾರೆ ಅಲ್ಲಿಯ ಜನ.

ವಿದ್ಯಮಾನ

ಸೀತೆಯನ್ನು ಹುಡುಕಿಕೊಂಡು ಬಂದ ಕಪಿಗಳಿಗೆ ಒಮ್ಮೆ ಔತಣಕೂಟವನ್ನು ಏರ್ಪಡಿಸಲಾಗಿತ್ತಂತೆ. ಊಟದಲ್ಲಿ ವಿಶೇಷ ತಳಿಯ ಮಾವಿನ ಹಣ್ಣುಗಳನ್ನು ಬಡಿಸಲಾಗಿತ್ತು. ಮಾವಿನ ಹಣ್ಣನ್ನು ತಿನ್ನುವಾಗ ಒಂದು ಕಪಿಯ ಕೈಯಿಂದ ಜಾರಿದ ಗೊರಟೆ ಎತ್ತರಕ್ಕೆ ಹಾರಿತಂತೆ. ನೀನೇ ಇಷ್ಟು ಎತ್ತರಕ್ಕೆ ಗೊರಟೆಯನ್ನು ಹಾರಿಸುವು ದಾದರೆ ನಾವೇನು ನಿನಗೆ ಕಡಿಮೆಯೇ? ಎಂದು ಕಪಿಗಳೆಲ್ಲ ಒಬ್ಬರಿಗಿಂತ ಒಬ್ಬರು ಗೊರಟೆಯನ್ನು ಎತ್ತರಕ್ಕೆ ಹಾರಿಸಲು ಪ್ರಾರಂಭವಾಗಿ ಅಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಬಿಟ್ಟಿತ್ತಂತೆ. ಮೊದಲೇ ಹೇಳಿಕೇಳಿ ಮಂಗಗಳಲ್ಲವೇ?

ಸುಡು ಬೆಸಿಗೆಯಲ್ಲಿನ ಓಡಾಟಾ, ದೈಹಿಕ ಕೆಲಸಗಳು, ಅಷ್ಟೇ ಏಕೆ ರಾತ್ರಿಯ ನಿದ್ರೆಯೂ ಸೇರಿ ಎಲ್ಲವೂ ಸಾಕು ಎನಿಸಿ ಬಿಡುತ್ತದೆ. ಏನೂ ಮಾಡದಿದ್ದರೂ ಸುಸ್ತು, ಆಯಾಸ. ಯಾವಾಗಪ್ಪಾ ಈ ಬೇಸಿಗೆ ಕಾಲ ಮುಗಿಯೋದು ಮಳೆಗಾಲ ಶುರುವಾಗೋದು ಅನ್ನೋ ನಿರೀಕ್ಷೆ. ಅಂಥಾ ಬೇಸಿಗೆಯಲ್ಲೂ, ಇನ್ನೂ ಬೇಕೆನಿಸುವ ಯಾವುದಾದರೂ ಒಂದು ಸಂಗತಿಯಿದ್ದರೆ, ಬೇಸಿಗೆ ಯಲ್ಲೂ ಮನ ತಣಿಸುವ ವಸ್ತುವೊಂದಿದ್ದರೆ, ಸುಡು ಬೇಸಿಗೆ ಯನ್ನೂ ಸಂಭ್ರಮಿಸುವ ಹಾಗೆ ಮಾಡುವ ವಿಷಯವೊಂದಿದ್ದರೆ, ಬೇಸಿಗೆಯನ್ನೂ ಸಹನೀಯಗೊಳಿಸುವ, ಸ್ಮರಣೀಯವಾಗಿ ಸುವ ಏನಾದರೂ ಪ್ರಾಕೃತಿಕ ವಸ್ತು ಇದ್ದರೆ ಅದು ಹಣ್ಣುಗಳ ರಾಜ ‘ಮಾವು’ ಅಂತ ಸರ್ವಾನುಮತದಿಂದ ಹೇಳಬಹುದು.

ಹಾಗಾಗಿಯೇ ಮಾವಿನ ಹಣ್ಣನ್ನು ‘ಹಣ್ಣಿನ ರಾಜ’, ಬೇಸಿಗೆಯ ಸಂಭ್ರಮ ಎನ್ನುವುದು. ಉಷ್ಣವಲಯದ ಹಣ್ಣುಗಳಲ್ಲಿ ಇಂದಿಗೂ ಮಾವಿನ ಹಣ್ಣಿಗೆ ಮೂರ್ಧನ್ಯ ಸ್ಥಾನವಿದೆ. ಮಾವಿನ ಹಣ್ಣಿಗಿರುವ ಈ ಸ್ಥಾನ ಹಾಗೂ ಮಾನ ಇನ್ಯಾವ ಹಣ್ಣಿಗೂ ಇಲ್ಲವೆನ್ನಬಹುದು.

ಅಂದ ಹಾಗೆ ಬೇಸಿಗೆಗೂ ಮಾವಿನ ಹಣ್ಣಿಗೂ ಸಂಬಂಧ ಕಲ್ಪಿಸುವ ಒಂದು ಪ್ರಮುಖ ಉಪಯೋಗಿ ಮಾಹಿತಿಯನ್ನೂ ಇಲ್ಲಿ ದಾಖಲಿಸಬೇಕು. ಸಾಮಾನ್ಯವಾಗಿ ಉತ್ತರ ಭಾರತ ದಲ್ಲಿನ ಬೇಸಿಗೆಯ ಬಿಸಿಲಿನ ಝಳ, ನಾವು ದಕ್ಷಿಣ ಭಾರತೀಯರು ಅದರಲ್ಲೂ ಕರ್ನಾಟಕ ದವರು ಅನುಭವಿಸುವ ಅತಿ ಕೆಟ್ಟ ಬೇಸಿಗೆಯ ಝಳದ ದುಪ್ಪಟ್ಟಿರುತ್ತದೆ.

ಸೂರ್ಯನ ಆಘಾತಕ್ಕೆ ನೂರಾರು ಜನ ಪ್ರತಿ ವರ್ಷ ಬಲಿಯಾಗುತ್ತಾರೆ. ಹೀಗೆ ‘ಸನ್ ಸ್ಟ್ರೋಕ್’ ಆದವರಿಗೆ ಅತ್ಯಂತ ಹಾಗೂ ಏಕೈಕ ಪರಿಣಾಮಕಾರಿ ಚಿಕಿತ್ಸೆ / ಔಷಧಿ ಅಂದರೆ ಅದು ಗಳಿತ ಮಾವಿನ ಹಣ್ಣಿನ ಲೇಪನವಂತೆ. ‘ಸನ್ ಸ್ಟ್ರೋಕ್’ ಆದವರಿಗೆ ಎಷ್ಟು ಸಾಧ್ಯ ವೋ ಅಷ್ಟು ಗಳಿತ ಮಾವಿನಹಣ್ಣನ್ನು ಆದಷ್ಟು ಬೇಗನೇ ಮೈತುಂಬಾ ಲೇಪಿಸ ಬೇಕಂತೆ, ಹಾಗೆ ಲೇಪಿಸಿದರೆ ಅವರ ಜೀವವನ್ನು ಬಚಾವ್ ಮಾಡಬಹುದು ಎನ್ನುತ್ತಾರೆ ಅಲ್ಲಿಯ ಜನ.

ಇದನ್ನೂ ಓದಿ: Vinayaka M Bhat Column: ಅನುಭವಾಮೃತ: ವೇದಾಂತ ಸಾಹಿತ್ಯ ಸರದ ಶಿಖಾಮಣಿ

ಹಾಗಾಗಿ, ಮಾವಿನ ಹಣ್ಣು ಎಂದರೆ ಕೇವಲ ಬೇಸಿಗೆಯ ಸಂಭ್ರಮವೊಂದೇ ಅಲ್ಲ, ಬೇಸಿಗೆ ಯಲ್ಲಿ ಪ್ರಾಣ ರಕ್ಷಣೆಗೆ ಉಪಯೋಗಿಯೂ ಹೌದು ಎಂದಂತಾಯಿತು. ಮಾವಿನ ಹಣ್ಣಿಗೆ (ಆಮ್ರ ಫಲ) ಅಮರ ಫಲ ಅಥವಾ ಅಮೃತಫಲ ಎಂತಲೂ ಕರೆಯುವ ಪದ್ಧತಿ ಯಿದೆ.

ಮಾವಿನ ಹಣ್ಣು ಶ್ರೀಮಂತ ಇತಿಹಾಸ ಮತ್ತು ರೋಚಕ ದಂತಕಥೆಗಳನ್ನು ಹೊಂದಿದೆ. ಭಾರತದಲ್ಲಿನ ಮಾವಿನ ಹಣ್ಣಿನ ಇತಿಹಾಸ ಸುಮಾರು ಮೂರು ಸಾವಿರ ವರ್ಷಗಳಷ್ಟು ಹಳೆ ಯದಾಗಿದೆ. ರಾಮಾಯಣ ಕಾಲದಲ್ಲಿ ಆಂಜನೇಯ ಲಂಕೆಯಿಂದ ಬರುವಾಗ ಮಾವಿನ ಹಣ್ಣನ್ನು ಭಾರತಕ್ಕೆ ತಂದಿರುವುದರಿಂದ, ಮಾವಿನ ಪಿತಾಮಹ ಎನ್ನುವ ಆ ಕೀರ್ತಿ ಆಂಜನೇಯನಿಗೆ ಸಲ್ಲುತ್ತದೆ.

ಅಶೋಕವನದಲ್ಲಿ ಸೀತೆಯನ್ನು ಭೇಟಿಯಾದ ನಂತರ, ಹನುಮನು ಸಿಕ್ಕಾಪಟ್ಟೆ ಮಾವಿನ ಹಣ್ಣುಗಳನ್ನು ಸವಿದು, ಅವುಗಳ ಕೆಲವು ಗೊರಟೆಗಳನ್ನು ಭಾರತಕ್ಕೆ ಹೊತ್ತು ತಂದನೆಂಬ ನಂಬಿಕೆಯಿದೆ. ಗೌತಮ ಬುದ್ಧನು ತನ್ನ ಭಕ್ತರಿಗೆ ನೆರಳು ಮತ್ತು ರುಚಿಕರವಾದ ಹಣ್ಣು ಗಳನ್ನು ನೀಡಲು ಮಾವಿನ ಮರವನ್ನು ಸೃಷ್ಟಿಸಿದನೆಂಬ ಪೌರಾಣಿಕ ಕಥೆಯೂ ಇದೆ. ದೆಹಲಿ ಸುಲ್ತಾನನಾಗಿದ್ದ ಅಲ್ಲಾವುದ್ದೀನ್ ಖಿಲ್ಜಿ ಮಾವಿನ ಹಣ್ಣಿನ ಮಹಾನ್ ಪ್ರೇಮಿ ಯಾಗಿದ್ದು, ತನ್ನ ಕೋಟೆಯಲ್ಲಿ ಮಾವಿನ ಹಬ್ಬವನ್ನೇ ಆಚರಿಸುತ್ತಿದ್ದನಂತೆ. ಆತ, ಮಾವು ಕಾಮೋತ್ತೇಜಕ (Aphrodisiac) ಗುಣಗಳನ್ನು ಹೊಂದಿದೆ ಎಂದು ನಂಬಿದ್ದನಂತೆ.

ಈ ಬಾರಿ ಭಾರತದಲ್ಲಿ ಮಾವಿನ ಬೆಳೆ ಸಮೃದ್ಧವಾಗಿದೆ. ಯುದ್ಧ ಹಾಗೂ ಇತರ ಜಾಗತಿಕ ಒತ್ತಡಗಳ ಕಾರಣಗಳಿಂದಾಗಿ ಭಾರತದ ಮಾವಿನ ಹಣ್ಣಿನ ರಪ್ತಿನ ಮೇಲೆ ಪರಿಣಾಮ ವಾದಂತೆಯೂ ಕಾಣುತ್ತಿದೆ. ಹಾಗಾಗಿ ಈ ಬಾರಿ ಭಾರತದ ಮಾರುಕಟ್ಟೆಗೆ ಮಾವಿನ ಹಣ್ಣಿನ ಆವಕ ಹೇರಳವಾಗಿದೆ. ಹಾಗಾಗಿ ಬೆಲೆಯೂ ಕಡಿಮೆಯಿದೆ.

mango R

ಅದಲ್ಲದಿದ್ದರೆ, ರತ್ನಾಗಿರಿ ಆಪೂಸು ಹಾಗೂ ಇನ್ನೂ ಕೆಲವು ಉತ್ತಮ ತಳಿಯ ಮಾವಿನ ಹಣ್ಣಿನ ಮೊದಲೆರಡು ದರ್ಜೆಯ ಮಾಲುಗಳು ಭಾರತೀಯರಿಗೆ ಸಿಕ್ಕುತ್ತಿರಲಿಲ್ಲ. ಎಲ್ಲ ವಿದೇಶಗಳ ಪಾಲಾಗುತ್ತಿತ್ತು. ಆದರೆ, ಈ ಬಾರಿ ಎಲ್ಲ ಸರಕುಗಳು ಈ ಬಾರಿ ಮಾರುಕಟ್ಟೆಗೆ ಲಗ್ಗೆಯಿಟ್ಟು ದರ್ಬಾರು ನಡೆಸುತ್ತಿದೆ.

ನಮ್ಮ ಕಡೆ, ಮಾವಿನ ಬೇಳೆ ಜಾಸ್ತಿ ಆದರೆ ಲುಕ್ಸಾನು (Loss) ಅದೇ ಹಲಸಿನ ಬೆಳೆ ಜಾಸ್ತಿ ಬಂದರೆ ಲಾಭ ಎನ್ನುವ ಮಾತಿದೆ. ಕಾರಣ, ಮಾವಿಗೆ ನೆಂಟರು ಜಾಸ್ತಿ, ನೆಂಟರು ಬಂದರೆಂದರೆ ರಸಾಯನ ಪಕ್ಕಾ ಮಾಡಲೇಬೇಕಾದ ಕಜ್ಜಾಯ. ರಸಾಯನಕ್ಕೆ ಹಾಲು ಸಕ್ಕರೆ ಬೇಕೇ ಬೇಕು. ಹಾಗಾಗಿ ನೆಂಟರು ಜಾಸ್ತಿ ಎಂದರೆ ಖರ್ಚೂ ಜಾಸ್ತಿಯಾದಂತೆ ತಾನೆ? ಹಲಸಿಗೆ ಹಾಗಲ್ಲ. ಹೆಚ್ಚೆಂದರೆ ಕಡುಬು ಮಾಡಿದರಾಯಿತು, ಕಡುಬಿಗಾದರೆ ಅಗತ್ಯ ವಿರುವುದು ಸಕ್ಕರೆಗಿಂತ ಕಡಿಮೆ ಬೆಲೆಯ ಬೆಲ್ಲ. ಹಾಗಾಗಿ ಖರ್ಚು ಕಡಿಮೆ.

ಇನ್ನು ಹಲಸಿನ ಬೀಜವೂ ಸಾಂಬಾರಿಗೆ ಉಪಯೋಗಕ್ಕೆ ಬರುತ್ತದೆ. ವೈಜ್ಞಾನಿಕವಾಗಿ ‘ಮ್ಯಾಂಗಿಫೆರಾ ಇಂಡಿಕಾ’ ಎಂದು ಕರೆಯಲ್ಪಡುವ ಮಾವಿನ ಹಣ್ಣು, ಎಲ್ಲ ಹಣ್ಣಿನಂತೆ ಕೇವಲ ಒಂದು ಹಣ್ಣಲ್ಲ. ಇದು ಒಂದು ಸಾಂಸ್ಕೃತಿಕ ಸಂವೇದನೆಯ ಉತ್ತುಂಗ.

ಜಾಗತಿಕವಾಗಿ ಹಣ್ಣುಗಳ ರಾಜ ಎಂದು ಗೌರವಿಸಲ್ಪಡುವ ಮಾವು ಉಷ್ಣವಲಯದ ಪ್ರದೇಶಗಳಲ್ಲಿ, ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿ ಕೃಷಿ, ಪಾಕಶಾಲೆ ಮತ್ತು ಧಾರ್ಮಿಕವಾಗಿ ಸಾಟಿಯಿಲ್ಲದ ಸ್ಥಾನವನ್ನು ಹೊಂದಿದೆ. ಈ ರುಚಿಕರವಾದ ಹಣ್ಣು ಹಳ್ಳಿಯ ಮೂಲೆ ಮೂಲೆಯಿಂದ ಜಾಗತಿಕ ವೇದಿಕೆಯವರೆಗೆ ಪ್ರಯಾಣಿಸಿದೆ, ಅದರ ಮಾದಕ ಪರಿಮಳ, ರೋಮಾಂಚಕ ಬಣ್ಣ ಮತ್ತು ವಿಶಿಷ್ಟ ಪರಿಮಳಗಳೊಂದಿಗೆ ಅರಮನೆ, ಗುರುಮನೆಯಷ್ಟೇ ಅಲ್ಲದೇ ಸಾಮಾನ್ಯರ ಮನೆಗಳ ಅಡುಗೆಮನೆಗಳಲ್ಲೂ ಈ ಶ್ರಾಯದಲ್ಲಿ ಮಾವು ಸಮಾನ ವಾಗಿ ಅಧಿಕಾರ ನಡೆಸುತ್ತವೆ.

ಮಾವು ಗೋಡಂಬಿ ಮತ್ತು ಪಿಸ್ತಾಗಳೊಂದಿಗೆ ತನ್ನ ವಂಶಾವಳಿಯನ್ನು ಹಂಚಿಕೊಳ್ಳು ತ್ತದೆಯಂತೆ. ಭಾರತವು ಮಾವಿನ ಉತ್ಪಾದನೆಯ ಜಾಗತಿಕ ಉತ್ಪಾದನೆಯ ಸುಮಾರು ಅರ್ಧದಷ್ಟು ಭಾಗವನ್ನು ಹೊಂದಿದಯಂತೆ. ಜಾಗತಿಕವಾಗಿ, ಒಂದು ಸಾವಿರಕ್ಕೂ ಹೆಚ್ಚು ಮಾನ್ಯತೆ ಪಡೆದ ಮಾವಿನ ಪ್ರಭೇದಗಳಿವೆ ಎಂದು ಗುರುತಿಸಲಾಗಿದೆ. ಪ್ರತಿಯೊಂದೂ ಪ್ರಭೇದವೂ ರುಚಿ, ವಿನ್ಯಾಸ ಮತ್ತು ಸುವಾಸನೆಯಲ್ಲಿ ಭಿನ್ನತೆಯನ್ನೂ ವೈಶಿಷ್ಟ್ಯವನ್ನೂ ಹೊಂದಿದೆ.

ಮಾವಿನ ಮರಗಳಿಗೆ ಆಯುಷ್ಯ ಜಾಸ್ತಿ, ಹಳೆಯ ತಳಿಗಳ ಮಾವಿನಮರಗಳು ಬಹಳ ದೀರ್ಘ ಕಾಲ ಬಾಳುವಂಥಾದ್ದಾಗಿದೆ. ಇನ್ನೂ ಒಂದು ವಿಷೇಷವೆಂದರೆ, ಒಂದೇ ಜಾತಿ ಯದ್ದಾದರೂ, ಅಥವಾ ಅದೇ ಮರದ ಬೀಜದಿಂದ ಹುಟ್ಟಿದ ಸಸ್ಯವಾದರೂ ರುಚಿ ಮಾತ್ರ ಬೇರೆಯದೇ ಇರುತ್ತದೆ.

ಐತಿಹಾಸಿಕವಾಗಿ, ಮಾವಿನ ಹಣ್ಣು ರಾಜಮನೆತನಕ್ಕೆ ಮೀಸಲಾದ ಐಷಾರಾಮಿ ಹಣ್ಣಾ ಗಿತ್ತು ಎನ್ನುವುದನ್ನು ತಿಳಿದರೆ ಅಚ್ಚರಿಯಾಗಬಹುದು. ರಾಜರು ತಮ್ಮ ಖಾಸಗಿ ಮಾವಿನ ತೋಟಗಳನ್ನು ಪ್ರಾಣಿ ಪಕ್ಷಿಗಳು ಅಥವಾ ಕಳ್ಳರುಗಳಿಂದ ಕಾಪಾಡಲು ದರೋಗಾ ಗಳನ್ನು ನೇಮಿಸುತ್ತಿದ್ದರಂತೆ. ಮೊಘಲ್ ಚಕ್ರವರ್ತಿಗಳು ಮಾವಿನ ಕೃಷಿಯನ್ನು ಒಂದು ಕಲಾ ಪ್ರಕಾರಕ್ಕೆ ಏರಿಸಿದ್ದರು. ಚಕ್ರವರ್ತಿ ಅಕ್ಬರ್ ಈ ಹಣ್ಣಿನಿಂದ ಎಷ್ಟು ಆಕರ್ಷಿತ ನಾಗಿದ್ದರೆಂದರೆ, ಆತ ಬಿಹಾರದ ದರ್ಭಂಗಾದಲ್ಲಿ ಒಂದು ಲಕ್ಷ ಮಾವಿನ ಮರಗಳನ್ನು ಹೊಂದಿರುವ ವಿಸ್ತಾರವಾದ ತೋಟವಾದ ‘ಲಕ್ಷ್‌ ಬಾಗ್’ ಅನ್ನು ಹೊಂದಿದ್ದನಂತೆ. ಅಬುಲ--ಜಲ್ ಸೇರಿದಂತೆ ಅಕ್ಬರನ ಆಸ್ಥಾನ ಕವಿಗಳು ಮತ್ತು ಇತಿಹಾಸಕಾರರು, ಆ ಕಾಲದ ಕಸಿಯಂತಹ ಸಂಕೀರ್ಣ ತೋಟಗಾರಿಕೆ ತಂತ್ರಗಳನ್ನು ದಾಖಲಿಸುತ್ತಾರೆ, ಈ ಉಪಕ್ರಮ ಮಾವಿನ ಉತ್ತಮ ಹೈಬ್ರಿಡ್ ಪ್ರಭೇದಗಳ ಸೃಷ್ಟಿಗೆ ಮತ್ತು ಉಳಿವಿಗೆ ಅನುವು ಮಾಡಿಕೊಟ್ಟಿತು ಎಂದು ತೋಟಗಾರಿಕೆಯ ತಜ್ಞರು ಹೇಳುತ್ತಾರೆ.

ಅಷ್ಟೇ ಅಲ್ಲದೇ, ಈ ಹಣ್ಣು ಬಹಳ ಹಿಂದಿನಿಂದಲೂ ರಾಜ್ಯಾಡಳಿತದ ಸಾಧನವಾಗಿ ಕಾರ್ಯ ನಿರ್ವಹಿಸುತ್ತಿದೆ. ಐತಿಹಾಸಿಕವಾಗಿ, ಆಡಳಿತಗಾರರು ಇತರ ರಾಜ್ಯಗಳ ಜತೆಗೆ ಮೈತ್ರಿಗಳನ್ನು ರೂಪಿಸಲು, ಒಪ್ಪಂದಗಳನ್ನು ಮಾಡಲುಮತ್ತು ಸದ್ಭಾವನೆಯನ್ನು ವ್ಯಕ್ತಪಡಿಸಲು ಉತ್ತಮ ಮಾವಿನ ತಳಿಯ ಹಣ್ಣಿನಿಂದ ತುಂಬಿದ ಬುಟ್ಟಿಗಳನ್ನು ವಿನಿಮಯ ಮಾಡಿ ಕೊಳ್ಳುತ್ತಿದ್ದರಂತೆ.

ಈ ‘ಮಾವಿನ ರಾಜತಾಂತ್ರಿಕತೆ’ಯ ಸಂಪ್ರದಾಯವು ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಇಂದಿಗೂ ಸಕ್ರಿಯವಾಗಿದೆ. ಸಂಬಂಧ ಒಂದು ಮಟ್ಟಕ್ಕೆ ಸರಿಯಿದ್ದ ಕಾಲಕ್ಕೆ ಪಾಕಿಸ್ತಾನ ಸರಕಾರ ನಮ್ಮ ಪ್ರಧಾನ ಮಂತ್ರಿಗಳಿಗೆ ಅಲ್ಲಿನ ಸಿಂಧ್ರಿ, ಚೌನ್ಸಾ ಮುಂತಾದ ವಿಶೇಷ ಮಾವಿನ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿರುವ ಉದಾಹರಣೆ ನಮ್ಮ ಮುಂದಿದೆ.

ಇನ್ನು ಮಾವಿನ ಹಣ್ಣನ್ನು ತಿನ್ನುವ ಬಗೆಯ ಬಗ್ಗೆ ಮಾತ ನಾಡುವುದಾದರೆ, ಇಂದು ಬಹುತೇಕವಾಗಿ ಮಾವಿನ ಹಣ್ಣುಗಳನ್ನು ಹೋಳುಗಳಾಗಿ ಕತ್ತರಿಸಿ ಪೋರ್ಕ್ ಎನ್ನುವ ಸಣ್ಣ ತ್ರಿಶೂಲದಿಂದ ಚುಚ್ಚಿ ತಿನ್ನುವ ರೂಢಿ ಬಂದುಬಿಟ್ಟಿದೆ. ಆದರೆ, ನಾವೆಲ್ಲ ಚಿಕ್ಕವರಿರುವಾಗ ಮಾವಿನ ಹಣ್ಣನ್ನು ತಿನ್ನಲು ಯಾವುದೇ ಉಪಕರಣಗಳನ್ನು ಬಳಸುವ ಪದ್ಧತಿಯೇ ಇರಲಿಲ್ಲ.

ಇಡೀ ಮಾಗಿದ ಮಾವಿನ ಹಣ್ಣನ್ನು ಕೈಯಲ್ಲಿ ಹಿಡಿದು ನಿಧಾನವಾಗಿ ಚೀಪಿ ತಿನ್ನುವುದೇ ಇತ್ತು. ತಿನ್ನುವಾಗ ಹಣ್ಣಿನೊಳಗಿನ ಘಟ್ಟಿ ಗುಳವು ದ್ರವರೂಪ ಪಡೆದು ರಸ ಕೈಗಳಿಂದಿಳಿದು ಮೊಣಕೈವರೆಗೆ ಹನಿಯಾಗಿ ಹರಿದು ಬರುವುದು, ನಾವು ಮೊಣಕೈವರೆಗೂ ನೆಕ್ಕುವುದರ ಮಜವಿತ್ತು, ಇನ್ನು ಅದರ (ಜೂಬು) ನಾರುಯುಕ್ತ ವರಟೆ (ಗೊರಟೆ)ಯನ್ನು ಬೆಳ್ಳಗಾಗುವವ ರೆಗೆ ಹೀರುವುದರಲ್ಲಿ ಅದ್ಭುತ ಅನುಭವಿರುತ್ತಿತ್ತು.

ಮನೆಯಲ್ಲಿ ಮಾವಿನ ಹಣ್ಣಿನ ಪಾಯಸ (ಸೀಕರಣೆ ಅಥವಾ ರಸಾಯನ) ಮಾಡಿದಾಗ ಗೊರಟೆ ಯಾರಿಗೆ ಎಂಬ ಬಗ್ಗೆ ಭೀಕರ ಯುದ್ಧವೇ ಪ್ರಾರಂಭವಾಗುತ್ತಿತ್ತು. ಗೊರಟೆಯ ಹಕ್ಕುಗಳನ್ನು ಗೆಲ್ಲಲು ಚೌಕಾಶಿ ಮಾಡುವುದು, ವಾದಿಸುವುದು ಮತ್ತು ಇಂದು ನನಗೆ, ನಾಳೆ ನಿನಗೆ ಎನ್ನುವ ಸಣ್ಣ ವ್ಯಾಪಾರ ಮಾಡುವುದೂ ಇತ್ತು. ಮಾವು ತಿನ್ನುವ ಅನುಭವ ಬಾಲ್ಯದ ಅತ್ಯಂತ ಅಮೂಲ್ಯವಾದ ನೆನಪೆಂದು ಪರಿಗಣಿಸಬಹುದು.

ಮಲೆನಾಡಿನ ಮನೆ-ಮನೆಗಳಲ್ಲಿ ಈ ಕಾಲದಲ್ಲಿ ಮಾವಿನ ಹಣ್ಣಿನದ್ದೇ ಪಾರುಪತ್ಯ ನಡೆಯುತ್ತೆ. ಬೆಳಗ್ಗೆ ದೋಸೆಯ ಜತೆಗೆ ನಿತ್ಯ ಮಾವಿನ ಹಣ್ಣಿನ ಸೀಕರಣೆ ಬೇಕೇ ಬೇಕು. ಮಧ್ಯಾಹ್ನದ ಊಟಕ್ಕೂ ಬೇರೆ ಬೇರೆ ತಳಿಯ ಮಾವಿನ ಹಣ್ಣಿನ ಗೊಜ್ಜು ಇರಲೇಬೇಕು. ಸಾಮಾನ್ಯವಾಗಿ ಊಟವಾದ ಮೇಲೆ ಹಣ್ಣನ್ನು ತಿನ್ನುವ ಪದ್ಧತಿಯಿದ್ದರೆ, ‘ಹಸಿದಾಗ ಹಲಸು, ಉಣ್ಣುವಾಗ ಮಾವು ಎನ್ನುವ ಮಾತಿನಂತೆ ಮಲೆನಾಡಿನಲ್ಲಿ ಊಟದ ಜತೆಗೇ ಮಾವಿನ ಹಣ್ಣನ್ನು ತಿನ್ನುವ ರೂಢಿಯೂ ಬಹಳವಾಗಿದೆ. ಹಾಗೆ ಊಟ ಮಾಡುವಾಗ ತಾವು ಚೀಪಿ ಬೆಳ್ಳಗಾಗಿಸಿದ ವರಟೆಯನ್ನು ಪಕ್ಕದವನ ಎಲೆಯ ಮೇಲೆ ಹಾಕಿ, ನಿನ್ನ ಮಾವಿನ ಹಣ್ಣಿನಲ್ಲಿ ಎರಡು ವರಟೆಯಿತ್ತಾ? ಎನ್ನುವುದು, ಪಕ್ಕದವ ಗೊರಟೆಯನ್ನು ಎಗರಿಸಿ ಗೊರಟೆಯನ್ನೂ ಬಿಡದೆ ನುಂಗಿಬಿಟ್ಟೆಯಾ ಎಂದು ಕಾಲೆಳೆಯುವುದು ಇದ್ದೇ ಇರುತ್ತೆ. ಆ ಹಣ್ಣಿನ ಗೊರಟೆಯನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ರಸವನ್ನೂ ಹೀರುವಾಗ ಕೈಯಿಂದ ತುಪಕ್ಕನೆ ಜಾರಿ ಎಲ್ಲಾ ಹಾರಿ ಬೀಳುವ ಸಂದರ್ಭವೂ ಇತ್ತು.

ಸೀತೆಯನ್ನು ಹುಡುಕಿಕೊಂಡು ಬಂದ ಕಪಿಗಳಿಗೆ ಒಮ್ಮೆ ಔತಣ ಕೂಟವನ್ನು ಏರ್ಪಡಿಸ ಲಾಗಿತ್ತಂತೆ. ಊಟದಲ್ಲಿ ವಿಶೇಷ ತಳಿಯ ಮಾವಿನ ಹಣ್ಣುಗಳನ್ನು ಬಡಿಸಲಾಗಿತ್ತು. ಮಾವಿನ ಹಣ್ಣನ್ನು ತಿನ್ನುವಾಗ ಒಂದು ಕಪಿಯ ಕೈಯಿಂದ ಜಾರಿದ ಗೊರಟೆ ಎತ್ತರಕ್ಕೆ ಹಾರಿತಂತೆ.

ನೀನೇ ಇಷ್ಟು ಎತ್ತರಕ್ಕೆ ಗೊರಟೆಯನ್ನು ಹಾರಿಸುವುದಾದರೆ ನಾವೇನು ನಿನಗೆ ಕಡಿಮೆಯೇ? ಎಂದು ಕಪಿಗಳೆಲ್ಲ ಒಬ್ಬರಿಗಿಂತ ಒಬ್ಬರು ಗೊರಟೆಯನ್ನು ಎತ್ತರಕ್ಕೆ ಹಾರಿಸಲು ಪ್ರಾರಂಭ ವಾಗಿ ಅಲ್ಲಿ ಅಲ ಕಲ ಸೃಷ್ಟಿಯಾಗಿ ಬಿಟ್ಟಿತ್ತಂತೆ. ಮೊದಲೇ ಹೇಳಿ ಕೇಳಿ ಮಂಗಗಳಲ್ಲವೇ?ರವೀಂದ್ರನಾಥ ಟ್ಯಾಗೋರ್ ಅವರು ಪ್ರಕೃತಿಯನ್ನು ಅಪಾರ ವಾಗಿ ಪ್ರೀತಿಸುತ್ತಿದ್ದವರು. ಅದರಲ್ಲೂ ಮಾವಿನ ಮರ ಮತ್ತು ಮಾವಿನಹಣ್ಣಿನ ಬಗ್ಗೆ ಅವರಿಗಿದ್ದ ಪ್ರೀತಿ ವಿಶೇಷ ವಾದದ್ದು.

ಅವರು ಮಾವಿನ ಮರಗಳ ಸೌಂದರ್ಯಕ್ಕೆ ಮತ್ತು ಹಣ್ಣುಗಳಿಗೆ ಮನ ಸೋತು ತಮ್ಮ ಸಾಹಿತ್ಯದಲ್ಲಿ ಹಾಡಿ ಹೊಗಳಿದ್ದಾರೆ. ಅವುಗಳಲ್ಲಿ ಅವರ ‘ಆಮೆರ್ ಮೊಂಜೊರಿ’ ಬಂಗಾಳಿ ಕವಿತೆ ಪ್ರಸಿದ್ಧವಾದದ್ದಾಗಿದೆ. ಮಾವಿನ ಹೂವು ಮತ್ತು ಹಣ್ಣಿನ ಸುವಾಸನೆ ಹಾಗೂ ಅದರ ಮೇಲಿನ ಅವರ ಒಲವನ್ನು ಈ ಕವನ ಅಭಿವ್ಯಕ್ತಿಸುತ್ತೆ.

‘ಆಮೆರ್ ಮೊಂಜೊರಿ’ ಎಂದರೆ ಮಾವಿನ ಹೂವು ಅಥವಾ ಚಿಗುರು ಎಂದರ್ಥ. ನೋಬೆಲ್ ಪ್ರಶಸ್ತಿ ವಿಜೆತ ಸಾಹಿತಿ ರವೀಂದ್ರನಾಥ ಟ್ಯಾಗೋರರು ಮಾವಿನ ಹಣ್ಣಿನ ಗೊರಟೆಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಹಾಸ್ಯದ ಪ್ರಸಂಗವನ್ನು ವಿವರಿಸುತ್ತಾ ಈ ವಾರದ ಮಾವಿನ ಕಥೆಗೆ ಮಂಗಳ ಹೇಳೋಣ.

ಮೊದಲೇ ಹೇಳಿದಂತೆ, ರವೀಂದ್ರರು ಮಾವಿನ ಹಣ್ಣಿನ ಅಪ್ರತಿಮ ಅಭಿಮಾನಿಯಾಗಿದ್ದ ವರು. ಮಾವಿನ ಹಣ್ಣನ್ನು ಟ್ಯಾಗೋರರು ಬಹಳವಾಗಿ ಇಷ್ಟಪಡುತ್ತಾರೆ ಎನ್ನುವುದನ್ನು ತಿಳಿದಿದ್ದ ಅವರ ಆಪ್ತರೊಬ್ಬರು, ರವಿಂದ್ರರ ಮನೆಗೆ ಬರುವಾಗ ಒಮ್ಮೆ ಚೆನ್ನಾಗಿ ಗಳಿತ ಹಿಮಸಾಗರ, ಲಕ್ಷಣ್ ಭೋಗ್ ಮುಂತಾದ ಉತ್ತಮ ತಳಿಯ ಕೆಲವು ಮಾವಿನ ಹಣ್ಣು ಗಳನ್ನು ತಂದಿದ್ದರಂತೆ. ಅದನ್ನು ನೋಡಿದ ಟ್ಯಾಗೋರರು ತಡಮಾಡದೇ ತಿನ್ನುವುದಕ್ಕೆ ಶುರುವಿಟ್ಟುಕೊಂಡರು, ಒಂದೆರಡು ಹಣ್ಣುಗಳನ್ನು ಅಚ್ಚುಕಟ್ಟಾಗಿ ತಿಂದು ಗೊರಟೆಯನ್ನು ತಮ್ಮ ಮುಂದಿರಿಸಿಕೊಂಡಿದ್ದರಂತೆ. ಕೈತೊಳೆದುಕೊಂಡು ಬಂದ ರವೀಂದ್ರರು, ತಿಂದಿಟ್ಟಿದ್ದ ಮಾವಿನ ಗೊರಟೆಗೆ ಸಾಷ್ಟಾಂಗ ಪ್ರಣಾಮ ಮಾಡಿದರಂತೆ. ಈ ವಿಚಿತ್ರವನ್ನು ನೋಡಿ ಮಾವಿನ ಹಣ್ಣನ್ನು ತಂದ ಅತಿಥಿಗೆ ಪರಮಾಶ್ಚರ್ಯವಾಯಿತು.

ಹೀಗೇಕೆ ತಿಂದಿಟ್ಟ ಗೊರಟೆಗೆ ನಮಸ್ಕಾರ ಮಾಡುತ್ತಿದ್ದೀರಿ? ಎಂದ ಆತ ಟ್ಯಾಗೋರರನ್ನು ಕೇಳಿದ. ಇದರ ನಾರನ್ನು (ಜೂಬು) ನೋಡು! ಅದು ನನ್ನ ದಾಡಿಗಿಂತ (ಗಡ್ಡ) ಉದ್ದವಾಗಿದೆ, ಅಲ್ಲಿಗೆ ಅದು ನನಗೆ ಹಿರಿಯಣ್ಣನಾದಂತಾಯಿತು, ಅಣ್ಣನಿಗೆ ನಮಸ್ಕಾರ ಮಾಡುವುದು ತಪ್ಪೇ? ಎಂದು ಕೇಳಿದರಂತೆ.

ವಿನಾಯಕ ವೆಂ ಭಟ್ಟ

View all posts by this author