ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಮಹತ್ವದ ಪತ್ರಿಕೆ ʼದಿ ಅಟ್ಲಾಂಟಿಕ್‌ʼ

1857ರಲ್ಲಿ ಬೋಸ್ಟನ್‌ನ ಯಾವುದೋ ಒಂದು ಪ್ರತಿಷ್ಠಿತ ಕಾಫಿ ಶಾಪ್ ಅಥವಾ ರಹಸ್ಯ ಕ್ಲಬ್‌ನಲ್ಲಿ ಕುಳಿತಿದ್ದ ಕೆಲವು ಅತಿ ಬುದ್ಧಿವಂತ ಸಾಹಿತಿಗಳಿಗೆ, ‘ನಮ್ಮ ತಲೆಯಲ್ಲಿ ತುಂಬಿರುವ ಈ ಭಾರಿ ಗಂಭೀರ ವಿಚಾರಗಳನ್ನು ಜಗತ್ತಿನ ತಲೆಯ ಮೇಲೆ ಸುರಿಯಲು ಒಂದು ಪತ್ರಿಕೆ ಬೇಕಲ್ಲಪ್ಪಾ’ ಎಂದು ಅನ್ನಿಸಿದ್ದೇ ತಡ, ಆಗ ಹುಟ್ಟಿಕೊಂಡಿದ್ದೇ ‘ದಿ ಅಟ್ಲಾಂಟಿಕ್’ ಪತ್ರಿಕೆ.

ಸಂಪಾದಕರ ಸದ್ಯಶೋಧನೆ

1857ರಲ್ಲಿ ಬೋಸ್ಟನ್‌ನ ಯಾವುದೋ ಒಂದು ಪ್ರತಿಷ್ಠಿತ ಕಾಫಿ ಶಾಪ್ ಅಥವಾ ರಹಸ್ಯ ಕ್ಲಬ್‌ನಲ್ಲಿ ಕುಳಿತಿದ್ದ ಕೆಲವು ಅತಿ ಬುದ್ಧಿವಂತ ಸಾಹಿತಿಗಳಿಗೆ, ‘ನಮ್ಮ ತಲೆಯಲ್ಲಿ ತುಂಬಿರುವ ಈ ಭಾರಿ ಗಂಭೀರ ವಿಚಾರಗಳನ್ನು ಜಗತ್ತಿನ ತಲೆಯ ಮೇಲೆ ಸುರಿಯಲು ಒಂದು ಪತ್ರಿಕೆ ಬೇಕಲ್ಲಪ್ಪಾ’ ಎಂದು ಅನ್ನಿಸಿದ್ದೇ ತಡ, ಆಗ ಹುಟ್ಟಿಕೊಂಡಿದ್ದೇ ‘ದಿ ಅಟ್ಲಾಂಟಿಕ್’ ಪತ್ರಿಕೆ.

ರಾಲ್ಫ್ ವಾಲ್ಡೋ ಎಮರ್ಸನ್, ಹೆನ್ರಿ ವರ್ಡ್ಸ್‌ವರ್ತ್ ಲಾಂಗ್‌ʼಫೆಲೋ ಅಂಥ ದಿಗ್ಗಜರೆಲ್ಲ ಸೇರಿ ಶುರು ಮಾಡಿದ ಈ ಪತ್ರಿಕೆಗೆ ಮೊದಲು ‘ದಿ ಅಟ್ಲಾಂಟಿಕ್ ಮಂತ್ಲಿ’ ಎಂಬ ಹೆಸರಿತ್ತು. ಅಮೆರಿಕದ ಪೂರ್ವ ಕರಾವಳಿಯ ಬುದ್ಧಿಜೀವಿಗಳು ಸೇರಿಕೊಂಡು ಶುರುಮಾಡಿದ ಈ ಸಾಹಸಕ್ಕೆ ಅಟ್ಲಾಂಟಿಕ್ ಸಾಗರದ ಹೆಸರನ್ನೇ ಇಟ್ಟಿದ್ದು ನೋಡಿದರೆ, ಇವರ ಆಲೋಚನೆಗಳು ಆ ಸಾಗರದಷ್ಟೇ ಆಳ ಮತ್ತು ಅಗಲ ವಾಗಿರಬೇಕು ಎಂಬ ಅತಿಯಾದ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ಅಂದಿನಿಂದ ಇಂದಿನವರೆಗೂ ಈ ಪತ್ರಿಕೆಯನ್ನು ಓದುವುದು ಎಂದರೆ, ಕೇವಲ ಸುದ್ದಿ ತಿಳಿದುಕೊಳ್ಳುವುದಲ್ಲ, ಬದಲಾಗಿ ನಿಮ್ಮ ಮಿದುಳಿಗೆ ಜಿಮ್‌ನಲ್ಲಿ ಭಾರ ಎತ್ತುವ ವ್ಯಾಯಾಮ ಕೊಟ್ಟಂತೆ!

ಇದನ್ನೂ ಓದಿ: Vishweshwar Bhat Column: ವಿಶ್ವಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞನ ಹುದ್ದೆಗೆ ಮುಳುವಾದ And ಎಂಬ ಪದ !

ಈ ಪತ್ರಿಕೆಯ ಇತಿಹಾಸವನ್ನು ಕೆದಕುತ್ತಾ ಹೋದರೆ, ಅಮೆರಿಕದ ಶಾಲಾ ಪಠ್ಯಪುಸ್ತಕಗಳಲ್ಲಿ ಬರುವ ಬಹುತೇಕ ಎಲ್ಲ ಮಹಾನ್ ಬರಹಗಾರರ ಹೆಸರುಗಳು ಇಲ್ಲಿ ಕಾಣಸಿಗುತ್ತವೆ. ಮಾರ್ಕ್ ಟ್ವೈನ್ ಹಾಸ್ಯದಿಂದ ಹಿಡಿದು, ಹ್ಯಾರಿಯೆಟ್ ಬೀಚರ್ ಸ್ಟೋವ್ ಅವರ ಕ್ರಾಂತಿಕಾರಿ ಬರಹಗಳವರೆಗೆ, ಅಷ್ಟೇ ಏಕೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಐತಿಹಾಸಿಕ ‘ಲೆಟರ್ ಫ್ರಮ್ ಬರ್ಮಿಂಗ್‌ ಹ್ಯಾಮ್ ಜೈಲ್’ ಕೂಡ ಇಲ್ಲಿ ಪ್ರಕಟವಾಗಿತ್ತು. ‌

ಅಂದರೆ, ಒಂದು ಕಾಲದಲ್ಲಿ ನೀವು ನಿಜವಾಗಿಯೂ ಒಬ್ಬ ದೊಡ್ಡ ಲೇಖಕ ಎಂದು ಸಮಾಜ ಒಪ್ಪಿಕೊಳ್ಳಬೇಕಾದರೆ, ನಿಮ್ಮ ಹೆಸರು ‘ದಿ ಅಟ್ಲಾಂಟಿಕ್’ ಪುಟಗಳಲ್ಲಿ ಅಚ್ಚಾಗಲೇಬೇಕಿತ್ತು. ಇಲ್ಲದಿದ್ದರೆ, ನೀವು ಬರೆದ ಕವಿತೆಗಳನ್ನು ಕೇವಲ ನಿಮ್ಮ ಮನೆಯ ಬೆಕ್ಕಿಗೆ ಮಾತ್ರ ಓದಿ ಹೇಳಬೇಕಾದ ಪರಿಸ್ಥಿತಿ ಇರುತ್ತಿತ್ತು. ಇಂದಿಗೂ ಈ ಪತ್ರಿಕೆ ತನ್ನ ಆ ಗತ್ತು ಮತ್ತು ಗಾಂಭೀರ್ಯವನ್ನು ಎಳ್ಳಷ್ಟೂ ಕಡಿಮೆ ಮಾಡಿ ಕೊಂಡಿಲ್ಲ, ಬದಲಾಗಿ ಇನ್ನಷ್ಟು ಗಂಭೀರವಾಗಿದೆ.

ಸಾಮಾನ್ಯ ಪತ್ರಿಕೆಗಳು ‘ಇಂದು ಮಳೆಯಾಗಬಹುದು, ಛತ್ರಿ ತೆಗೆದುಕೊಂಡು ಹೋಗಿ’ ಎಂದು ನಾಲ್ಕು ಸಾಲಿನಲ್ಲಿ ಮುಗಿಸಿದರೆ, ‘ದಿ ಅಟ್ಲಾಂಟಿಕ್’ ಪತ್ರಿಕೆಯವರು ಅದೇ ವಿಷಯದ ಮೇಲೆ ಹತ್ತು ಸಾವಿರ ಪದಗಳ ಒಂದು ಮಹಾಪ್ರಬಂಧವನ್ನೇ ಬರೆಯುತ್ತಾರೆ! ‘ಮಳೆ ಹನಿಯ ತಾತ್ವಿಕ ಹಿನ್ನೆಲೆ, ಹವಾಮಾನ ಬದಲಾವಣೆಯ ರಾಜಕೀಯ ಮತ್ತು ಛತ್ರಿ ಹಿಡಿಯುವವರ ಮಾನಸಿಕ ತೊಳಲಾಟ’ ಎಂಬ ಶೀರ್ಷಿಕೆಯಡಿ ಇವರ ಲೇಖನ ಶುರುವಾಗುತ್ತದೆ. ಈ ಪತ್ರಿಕೆಯ ಒಂದೇ ಒಂದು ಲೇಖನವನ್ನು ನೀವು ಪೂರ್ತಿಯಾಗಿ ಓದಿ ಮುಗಿಸಿದರೆ, ನಿಮಗೆ ಯಾವುದೋ ಒಂದು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಿಕ್ಕಷ್ಟೇ ಹೆಮ್ಮೆಯಾಗುತ್ತದೆ. ಆದರೆ, ಓದುವಾಗ ಪಕ್ಕದಲ್ಲಿ ಒಂದು ದೊಡ್ಡ ಡಿಕ್ಷನರಿ ಮತ್ತು ಎರಡು ಕಪ್ ಸ್ಟ್ರಾಂಗ್ ಕಾಫಿ ಇಟ್ಟುಕೊಳ್ಳುವುದು ಕಡ್ಡಾಯ, ಇಲ್ಲದಿದ್ದರೆ ಮೂರನೇ ಪ್ಯಾರಾಗೆ ನಿಮ್ಮ ಕಣ್ಣುಗಳು ತಾವಾಗಿಯೇ ಮುಚ್ಚಿಕೊಳ್ಳುವ ಅಪಾಯವಿರುತ್ತದೆ.

ಕಾಲ ಬದಲಾದಂತೆ ಕೇವಲ ಸಾಹಿತ್ಯ ಮತ್ತು ರಾಜಕೀಯಕ್ಕೆ ಅಂಟಿಕೊಂಡು ಕೂತರೆ ಹೊಟ್ಟೆ ತುಂಬುವುದಿಲ್ಲ ಎಂಬ ಸತ್ಯ ಈ ಬುದ್ಧಿಜೀವಿಗಳಿಗೂ ಅರ್ಥವಾಯಿತು. ಹೀಗಾಗಿ ‘ದಿ ಅಟ್ಲಾಂಟಿಕ್ ಮಂತ್ಲಿ’ ತನ್ನ ಹೆಸರಿನಲ್ಲಿದ್ದ ‘ಮಂತ್ಲಿ’ಯನ್ನು ಕತ್ತರಿಸಿ ಹಾಕಿ ಕೇವಲ ‘ದಿ ಅಟ್ಲಾಂಟಿಕ್’ ಆಗಿ ಬದಲಾಯಿತು. ಈಗ ಇದು ಕೇವಲ ತಿಂಗಳಿಗೊಮ್ಮೆ ಬರುವ ಮ್ಯಾಗಜೀನ್ ಅಲ್ಲ, ದಿನದ ಇಪ್ಪತ್ತನಾಲ್ಕು ಗಂಟೆಯೂ ಆನ್‌ಲೈನ್ ನಲ್ಲಿ ಸದ್ದು ಮಾಡುವ ಡಿಜಿಟಲ್ ದೈತ್ಯ. ತಂತ್ರಜ್ಞಾನ, ಸಂಸ್ಕೃತಿ, ವಿಜ್ಞಾನ, ಶಿಕ್ಷಣ ಮತ್ತು ಅಮೆರಿಕದ ರಾಜಕೀಯದ ಒಳಸುಳಿಗಳನ್ನು ಇವರು ವಿಶ್ಲೇಷಿಸುವ ರೀತಿ ಎಷ್ಟು ತೀಕ್ಷ್ಣವಾಗಿರುತ್ತದೆ ಎಂದರೆ, ರಾಜಕಾರಣಿಗಳು ಬೆಳಗ್ಗೆ ಎದ್ದು ಕಾಫಿ ಕುಡಿಯುವ ಮೊದಲು ಈ ಪತ್ರಿಕೆಯಲ್ಲಿ ತಮ್ಮ ಬಗ್ಗೆ ಏನು ಬರೆದಿದ್ದಾರೆ ಎಂದು ಭಯದಿಂದ ನೋಡುವಂತಾಗಿದೆ.

ಈ ಪತ್ರಿಕೆಯ ಅತ್ಯಂತ ವಿಶೇಷವಾದ ಗುಣವೆಂದರೆ, ಇವರು ಆರಿಸಿಕೊಳ್ಳುವ ವಿಚಿತ್ರ ಮತ್ತು ಕುತೂಹಲ ಕಾರಿ ವಿಷಯಗಳು. ಇಡೀ ಜಗತ್ತು ಯಾವುದೋ ಒಂದು ಬ್ರೇಕಿಂಗ್ ನ್ಯೂಸ್ ಹಿಂದೆ ಓಡುತ್ತಿದ್ದರೆ, ದಿ ಅಟ್ಲಾಂಟಿಕ್ ‘ಪತ್ರಕರ್ತರು ಮಾತ್ರ ನಾವು ಏಕೆ ಸುಸ್ತಾಗುತ್ತಿದ್ದೇವೆ?’, ‘ಸ್ಮಾರ್ಟ್ʼಫೋನ್‌ಗಳು ಒಂದು ಪೀಳಿಗೆಯನ್ನೇ ಹಾಳು ಮಾಡಿವೆಯೇ?’ ಅಥವಾ ‘ಬೇಸರ ಎಂಬುದು ಮನುಷ್ಯನ ಸೃಜನಶೀಲತೆಗೆ ಹೇಗೆ ಒಳ್ಳೆಯದು?’ ಎಂಬಂಥ ವಿಷಯಗಳ ಮೇಲೆ ಸಂಶೋಧನೆ ಮಾಡುತ್ತಿರುತ್ತಾರೆ. ಇವರ ಲೇಖನಗಳನ್ನು ಓದಿದಾಗ, ‘ಅರೆ! ನನ್ನ ಜೀವನದಲ್ಲೂ ಹೀಗೇ ಆಗುತ್ತಿದೆಯಲ್ಲ, ಇವರಿಗೆ ಹೇಗೆ ಗೊತ್ತಾಯಿತು?’ ಎಂದು ಓದುಗರು ಬೆಚ್ಚಿ ಬೀಳುತ್ತಾರೆ.

ವಿಶ್ವೇಶ್ವರ ಭಟ್‌

View all posts by this author