ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

250 Years for USA: ಮಿಸ್ಸಿಸ್ಸಿಪ್ಪಿ‌ ಮಹಾನದಿಯ ಮನದ ಮಾತು

ಋಷಿಮೂಲ ನದೀಮೂಲಗಳನ್ನೆಲ್ಲ ಹುಡುಕಬಾರದು ಎಂದು ನಿಮ್ಮ ದೇಶದಲ್ಲಿ ಹೇಳ್ತಾರಂತೆ ಅಲ್ವಾ? ಈ ದೇಶದಲ್ಲಿ ಹಾಗೇನಿಲ್ಲ ಬಿಡಿ. ನನ್ನ ಮೂಲ ಯಾವುದು ಎಂದು ಬೇಕಿದ್ದರೆ ನಾನೇ ಹೇಳುತ್ತೇನೆ. ಅಮೆರಿಕದಲ್ಲಿ ಉತ್ತರಭಾಗದಲ್ಲಿ, ಕೆನಡಾ ದೇಶಕ್ಕೆ ತಾಗಿಕೊಂಡು ಇರುವ, ಸಾವಿರ ಸರೋವರಗಳ ನಾಡು ಎಂದು ಖ್ಯಾತವಾದ ಮಿನ್ನೆಸೋಟ ರಾಜ್ಯದಲ್ಲಿ, ಇಟಾಸ್ಕಾ ಎಂಬ ಸರೋವರ ನನ್ನ ತವರುಮನೆ. ಅಲ್ಲಿಂದ ದಕ್ಷಿಣಾಭಿಮುಖವಾಗಿ ಹರಿದು ಹತ್ತು ರಾಜ್ಯಗಳ ಗುಂಟ ಸಾಗಿ (ರಾಜ್ಯಗಳ ಮೂಲಕ ಎನ್ನಬಹು ದಾಗಿತ್ತು,

ಭಾರತ ದೇಶದ ಉತ್ತರದ ತುದಿಯಿಂದ ದಕ್ಷಿಣದ ತುದಿಯವರೆಗಿನ ದೂರ, ಅಂದರೆ ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೆ, ಅಥವಾ ಆಸೇತುಹಿಮಾಚಲ ಅಂತೇವಲ್ಲ ಅದು, ಇರೋದು ಸುಮಾರು 1800 ಮೈಲು. ಮಿಸ್ಸಿಸ್ಸಿಪ್ಪಿ ನದಿಯ ಉದ್ದ ಅದಕ್ಕಿಂತಲೂ ಹೆಚ್ಚು!

ಅಮೆರಿಕ ಸಂಯುಕ್ತ ಸಂಸ್ಥಾನಗಳ ಜೀವನದಿ ಯಾವುದೆಂದು ಕೇಳಿದರೆ ಮಿಸ್ಸಿಸ್ಸಿಪ್ಪಿ ಎಂಬ ಹೆಸರಿನ ನಾನು, ‘ಅದು ನಾನೇ!’ ಎಂದು ಗರ್ವದಿಂದ ಉತ್ತರಿಸುತ್ತೇನೆ. ಕನ್ನಡ ಪದಗಳನ್ನು ಇಂಗ್ಲಿಷ್ ಆಕ್ಸೆಂಟಲ್ಲಿ ಸ್ಟೈಲಿನಿಂದ ಹೇಳುವಂತೆ ‘ಜೀವ ನಾ ಡಿ’ ಎನ್ನುತ್ತೀರಾದರೆ ಅದೂ ನಾನೇ! ಸ್ವಾರಸ್ಯ ವೆಂದರೆ ಅಮೆರಿಕದ ಅತ್ಯಂತ ಉದ್ದದ ನದಿ ನಾನಲ್ಲ. ಆ ಕೀರ್ತಿ ನನ್ನ ಸಹೋದರಿ ಮಿಸ್ಸೌರಿ ನದಿಗೆ ಸಲ್ಲುತ್ತದೆ. ಆಕೆಯ ಉದ್ದ ಸುಮಾರು 2500 ಮೈಲು. ನಾನು ಸೆಕೆಂಡ್ ಲಾಂಗೆಸ್ಟ್, 2320 ಮೈಲು. ಆದರೆ ಮಿಸ್ಸೌರಿಯನ್ನು ನನ್ನ ಉಪನದಿ ಎಂದು ಪರಿಗಣಿಸುವುದರಿಂದ ಜೀವನದಿ ಮತ್ತು ಜೀವನಾಡಿ ನಾನೇ. ಅಮೆರಿಕ ಹೇಳಿಕೇಳಿ ಬಲು ದೊಡ್ಡ ದೇಶ. ಇಲ್ಲಿ ಎಲ್ಲವೂ ದೊಡ್ಡ ಸೈಜು. ಹಾಗೆ ನಾವು ನದಿಗಳೂ ಸಾರಾರು ಮೈಲು ದೂರ ಹರಿಯುತ್ತೇವೆ. ನಿಮಗೆ ಒಂದು ಅಂದಾಜಿಗೆ ಅನುಕೂಲ ವಾಗುವಂತೆ ಹೇಳುವುದಾದರೆ, ನಿಮ್ಮ ಭಾರತ ದೇಶದ ಉತ್ತರದ ತುದಿಯಿಂದ ದಕ್ಷಿಣದ ತುದಿಯ ವರೆಗಿನ ದೂರ (ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಥವಾ ಆಸೇತುಹಿಮಾಚಲ ಅಂತೀರಲ್ಲ ಅದು) ಇರೋದು ಸುಮಾರು 1800 ಮೈಲು. ಅದಕ್ಕಿಂತ ನನ್ನ ಉದ್ದ ಹೆಚ್ಚು!

ಋಷಿಮೂಲ ನದೀಮೂಲಗಳನ್ನೆಲ್ಲ ಹುಡುಕಬಾರದು ಎಂದು ನಿಮ್ಮ ದೇಶದಲ್ಲಿ ಹೇಳ್ತಾರಂತೆ ಅಲ್ವಾ? ಈ ದೇಶದಲ್ಲಿ ಹಾಗೇನಿಲ್ಲ ಬಿಡಿ. ನನ್ನ ಮೂಲ ಯಾವುದು ಎಂದು ಬೇಕಿದ್ದರೆ ನಾನೇ ಹೇಳುತ್ತೇನೆ. ಅಮೆರಿಕದಲ್ಲಿ ಉತ್ತರಭಾಗದಲ್ಲಿ, ಕೆನಡಾ ದೇಶಕ್ಕೆ ತಾಗಿಕೊಂಡು ಇರುವ, ಸಾವಿರ ಸರೋವರಗಳ ನಾಡು ಎಂದು ಖ್ಯಾತವಾದ ಮಿನ್ನೆಸ್ಪೋ ರಾಜ್ಯದಲ್ಲಿ, ಇಟಾಸ್ಕಾ ಎಂಬ ಸರೋವರ ನನ್ನ ತವರುಮನೆ. ಅಲ್ಲಿಂದ ದಕ್ಷಿಣಾಭಿಮುಖವಾಗಿ ಹರಿದು ಹತ್ತು ರಾಜ್ಯಗಳ ಗುಂಟ ಸಾಗಿ (ರಾಜ್ಯಗಳ ಮೂಲಕ ಎನ್ನಬಹುದಾಗಿತ್ತು,

ಆದರೆ ಬಹುತೇಕ ನನ್ನ ದಾರಿಯುದ್ದಕ್ಕೂ ರಾಜ್ಯಗಳಿಗೆ ನಾನೇ ಒಂದು ಗಡಿ) ಮೆಕ್ಸಿಕೊ ಕೊಲ್ಲಿಯನ್ನು ತಲುಪುತ್ತೇನೆ. ಅಷ್ಟುದ್ದದ ಪಯಣದಲ್ಲಿ ಹತ್ತಾರು ಉಪನದಿಗಳು ನನ್ನನ್ನು ಸೇರುತ್ತವೆನ್ನಿ. ಆದರೂ, ಇಟಾಸ್ಕಾ ಸರೋವರದಿಂದ ಹೊರಟ ಒಂದು ಜಲಬಿಂದು ಮೆಕ್ಸಿಕೊ ಕೊಲ್ಲಿಯನ್ನು ತಲುಪುವುದೇ ಮಿಸ್ಸಿಸ್ಸಿಪ್ಪಿ ನದಿಯ ವರ್ಜಿನಲ್ ರೂಪ ಅಂತೀರಾದ್ರೆ ಆ ಜಲಬಿಂದುಗೆ ಸುಮಾರು 90 ದಿನ ಬೇಕು!

ಇದನ್ನೂ ಓದಿ: Srivathsa Joshi Column: ಷಷ್ಠೀ ವಿಭಕ್ತಿಯು ಸೃಷ್ಟಿಸುವ ಸ್ವಾರಸ್ಯಗಳ ವೃಷ್ಠಿ

ಮಿಸ್ಸಿಸ್ಸಿಪ್ಪಿ ಎಂಬ ನನ್ನ ಹೆಸರಿನ ಬಗ್ಗೆಯೂ ನಿಮಗೆ ಕುತೂಹಲವಿರಬಹುದಲ್ಲ? ನಿಮ್ಮಲ್ಲಿ ಕೆಲವರಿಗೆ ಏಳನೇ ತರಗತಿಯ ಭೂಗೋಳಶಾಸ್ತ್ರ ಪಠ್ಯದಲ್ಲಿ ಅಮೆರಿಕದ ಜಿಯಾಗ್ರಫಿ ಬಗ್ಗೆಯೂ ಪಾಠ ಇತ್ತಂತೆ, ಅದರಲ್ಲಿ ನನ್ನ ಹೆಸರೂ ಬರ್ತಿತ್ತಂತೆ ಅಲ್ವಾ? ಪರೀಕ್ಷೆಯಲ್ಲಿ ಉತ್ತರಿಸಲಿಕ್ಕಾದರೂ ಉರು ಹೊಡೆದಿದ್ದಿರೋ ಏನೊ. ಅಥವಾ ಆಮೇಲೆ ಜನರಲ್ ಕ್ವಿಜ್‌ಗಳಲ್ಲಿ ‘ವರ್ಡ್ ವಿದ್ ರಿಪೀಟೆಡ್ ಅಕ್ಕರೆನ್ಸಸ್ ಆಫ್ ಕಾನ್ಸೊನೆಂಟ್ಸ್’ ಅಂತಲೋ, ‘ವರ್ಡ್ ವಿದ್ ಓನ್ಲಿ ವನ್ ವೋವೆಲ್ ದ್ಯಾಟ್ ಕಮ್ಸ್ ಫಾರ್ ಟೈಮ್ಸ್’ ಅಂತಲೋ ಪ್ರಶ್ನೆ ಇದ್ದಾಗ ಮಿಸ್ಸಿಸ್ಸಿಪ್ಪಿ ಎಂದು ಉತ್ತರಿಸಿದ್ದಿರೋ ಏನೊ.

1991ರಲ್ಲಿ ಮೀರಾ ನಾಯರ್ ನಿರ್ಮಿಸಿದ್ದ ‘ಮಿಸ್ಸಿಸ್ಸಿಪ್ಪಿ ಮಸಾಲಾ’ ಇಂಗ್ಲಿಷ್ ಚಿತ್ರದಿಂದಾಗಿಯೂ ಕೆಲವರಿಗೆ ನನ್ನ ಹೆಸರಿನ ಪರಿಚಯವಿರಬಹುದು. ಮಿಸ್ಸಿಸ್ಸಿಪ್ಪಿ ಎಂಬ ಹೆಸರು ಬಂದದ್ದು ಅಮೆರಿಕದ ಮೂಲನಿವಾಸಿಗಳಾದ ರೆಡ್ ಇಂಡಿಯನ್ಸ್ ಮಾತಾಡುತ್ತಿದ್ದ ಆಲ್ಗೊನ್‌ಕ್ವಿನ್ ಭಾಷೆಂದ. ‘ಮಿಸಿ ಜೀಬಿ’ ಎಂದರೆ ಮಹಾ ನದಿ ಅಥವಾ ದೊಡ್ಡ ನದಿ ಎಂದು ಅರ್ಥ. ನನ್ನ ಹೆಸರಿನಲ್ಲೇ ನದಿ ಎಂಬ ಪದ ಇದೆಯಾದ್ದರಿಂದ ಮಿಸ್ಸಿಸ್ಸಿಪ್ಪಿ ನದಿ ಎನ್ನಬೇಕಾಗಿಲ್ಲ. ಮಿಸ್ಸಿಸ್ಸಿಪ್ಪಿ ಅಂತಷ್ಟೇ ಸಾಕು. ಆದರೆ ಈ ಹೆಸರಿನದೇ ಒಂದು ರಾಜ್ಯವೂ ಇಲ್ಲಿದೆ. ಹಾಗಾಗಿ ನಾನು ಮಿಸ್ಸಿಸ್ಸಿಪ್ಪಿ ರಿವರ್. ಆ ರಾಜ್ಯ ಮಿಸ್ಸಿಸ್ಸಿಪ್ಪಿ ಸ್ಟೇಟ್. ನನಗೆ ಕೆಲವು ನಿಕ್‌ನೇಮುಗಳೂ ಇವೆ: ‘ಓಲ್ಡ್ ಮ್ಯಾನ್ ರಿವರ್’, ‘ಓಲ್ಡ್ ಮಡ್ಡೀ’ (ನನ್ನ ನೀರು ಕೆಸರುಮಯ), ‘ಓಲ್ಡ್ ಬ್ಲೂ’, ‘ಗ್ಯಾದರಿಂಗ್ ಆಫ್ ವಾಟರ‍್ಸ್’ ಇತ್ಯಾದಿ. ಇಲ್ಲಿನ ಜನಪದ ಗೀತೆಗಳಲ್ಲಿ ನನ್ನ ಉಲ್ಲೇಖವಿದೆ. ಅಮೆರಿಕದ ಪ್ರಸಿದ್ಧ ಹಾಸ್ಯಬರಹಗಾರ ಮಾರ್ಕ್ ಟ್ವೈನ್‌ನ ಕೃತಿಗಳಲ್ಲಿ ನನ್ನ ಪ್ರಸ್ತಾವ ಇದ್ದೇ ಇರುತ್ತದೆ. ‘ಎಡ್ವೆಂಚರ‍್ಸ್ ಆಫ್ ಹಕಲ್‌ಬೆರ್ರಿ ಫಿನ್ಸ್’ನಂಥ ಕಥೆಗಳು ನಡೆದಿದ್ದು ನನ್ನ ನದೀಪಾತ್ರದಲ್ಲೇ. ಮಾರ್ಕ್ ಟ್ವೈನ್ ತನ್ನ ಆತ್ಮಕಥನಕ್ಕೂ ‘ಲೈಫ್ ಆನ್ ದ ಮಿಸ್ಸಿಸ್ಸಿಪ್ಪಿ’ ಎಂದೇ ಹೆಸರಿಟ್ಟಿದ್ದಾನೆ. ‌

ಆತ ತಾರುಣ್ಯದಲ್ಲಿ ಸ್ಟೀಮ್ ಬೋಟ್ ಚಾಲಕನಾಗಿದ್ದ. ಅವನ ಸ್ಟೀಮ್ ಬೋಟ್ ನನ್ನ ಮೂಲಕವೇ ಹೋಗುತ್ತಿತ್ತು. ಮಾರ್ಕ್ ಟ್ವೈನ್ ಎಂಬ ಕಾವ್ಯನಾಮ (ಮೂಲ ಹೆಸರು: ಸ್ಯಾಮುವೆಲ್ ಲಾಂಗ್‌ ಹೋಮ್ ಕ್ಲೆಮೆನ್ಸ್) ನನ್ನದೇ ಕಾರಣದಿಂದ ಬಂದದ್ದು. ಮಾರ್ಕ್ ಟ್ವೈನ್ ಅಂದರೆ ನದಿಯ ಆಳವನ್ನು ಅಳೆಯುವ ಅಳತೆಪಟ್ಟಿಯಲ್ಲಿ ಎರಡನೇ ಗುರುತು ಅಂತರ್ಥ. ಹನ್ನೆರಡು ಅಡಿಗಳಷ್ಟು ಆಳ; ಸ್ಟೀಮ್ ಬೋಟ್‌ಗೆ ಸುರಕ್ಷಿತ.

Screenshot_2 ok

ಮಾರ್ಕ್ ಟ್ವೈನ್‌ಗಿಂತಲೂ ಸ್ವಲ್ಪ ಹಿಂದಿನ ಕಾಲದ ಚರಿತ್ರೆಯನ್ನು ನಾನಿಲ್ಲಿ ನಿಮಗೆ ಹೇಳಬೇಕು. 1806ರವರೆಗೂ ನಾನು (ಮತ್ತು ನನ್ನ ಪಶ್ಚಿಮಕ್ಕಿದ್ದ ಪ್ರದೇಶ) ಫ್ರೆಂಚರ ಸ್ವಾಧೀನದಲ್ಲಿದ್ದೆವು. ಅವರು ಅದನ್ನು ‘ಲಾ ಲೂಸಿಯೇನ್’ ಎನ್ನುತ್ತಿದ್ದರು. 1803ರಲ್ಲಿ, ಥಾಮಸ್ ಜೆಫರ್‌ಸನ್ ಅಮೆರಿಕಾಧ್ಯಕ್ಷ ನಾಗಿದ್ದಾಗ ಆ ಭಾಗವನ್ನು ಆಗಿನ ಫ್ರಾನ್ಸ್ ಚಕ್ರವರ್ತಿ ನೆಪೊಲಿಯನ್ ಬೊನಾಪಾರ್ಟೆ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಖರೀದಿಸಿದನು. ಹಾಗಾಗಿ, ಅಮೆರಿಕ ದೇಶಕ್ಕೆ ಸ್ವಾತಂತ್ರ್ಯ 1776ರಲ್ಲಿ ಸಿಕ್ಕಿದ್ದಾದರೂ ಆಮೇಲೆ ಹಂತಹಂತವಾಗಿ ದೇಶ ವಿಸ್ತಾರವಾಗುತ್ತ ಹೋದದ್ದಾದ್ದರಿಂದ ನಾನು ಅಮೆರಿಕನ್ ಆದದ್ದು 1803ರಲ್ಲಿ. ಅದಾದ ಬಳಿಕ ಈ ದೇಶದ ಅಭ್ಯುದಯಕ್ಕೆ ನಾನು ಕೊಟ್ಟ ಕೊಡುಗೆ ಅಷ್ಟಿಷ್ಟಲ್ಲ. ಸ್ಟೀಮ್ ಬೋಟುಗಳು ಜನರನ್ನು ಮತ್ತು ಸಾಮಾನುಸರಂಜಾಮನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯಲು ಪ್ರಮುಖ ಸಾಧನ ವಾಗಿದ್ದ ದಿನಗಳು ಅವು. ರಸ್ತೆಗಳು, ಮೋಟಾರು ವಾಹನಗಳು ಇನ್ನೂ ಶುರುವಾಗಿರಲಿಲ್ಲ. ರೈಲುಸಂಚಾರವೂ ಅಷ್ಟಕ್ಕಷ್ಟೇ. ಜಲಸಾರಿಗೆ ಯೇ ಜೀವನಾಡಿ. ಹಣ್ಣು-ತರಕಾರಿ, ಹೈನುಪದಾರ್ಥ, ಧಾನ್ಯ, ಹತ್ತಿ, ಮರಮಟ್ಟು ಮತ್ತು ಲೋಹದ ಸಾಮಗ್ರಿ ಎಲ್ಲವನ್ನೂ ದೊಡ್ಡ ದೋಣಿಗಳಲ್ಲಿ, ಹಡಗುಗಳಲ್ಲಿ ನನ್ನ ಮೂಲಕ ಸಾಗಿಸುತ್ತಿದ್ದರು. ಇಲ್ಲೊಂದು ಗಮನಾರ್ಹ ಅಂಶವಿದೆ.

ನನ್ನ ಹರಿವಿನ ಬಹುಭಾಗವೆಲ್ಲ ಸಮತಟ್ಟಾದ ಪ್ರದೇಶದಲ್ಲೇ. ಕೆಲವೆಡೆ ನಾನು ನಾಲ್ಕಾರು ಮೈಲು ಗಳಷ್ಟು ಅಗಲವಾಗಿ ಹರಿಯುತ್ತೇನೆ. ಒಂದು ಕಡೆಯಂತೂ ನನ್ನ ಅಗಲ 11 ಮೈಲುಗಳಷ್ಟಿದೆ! ಈ ರೀತಿಯ ಹರಿವಿನಿಂದಾಗಿ ದೋಣಿ-ಹಡಗು ಯಾನ ಸುಲಭ. ಧುಮ್ಮಿಕ್ಕಿ ಹರಿಯುವ ಜಲಧಾರೆ ಯಾಗುವುದು ಮಿನ್ನೆಸ್ಪೋ ರಾಜ್ಯದ ಸೈಂಟ್ ಆಂಟೊನಿ ಎಂಬಲ್ಲಿ ಒಂದು ಕಡೆ ಮಾತ್ರ. ಉಳಿದ ಕಡೆಗಳಲ್ಲಿ ಅಲ್ಪಸ್ವಲ್ಪ ಏರುತಗ್ಗುಗಳಿದ್ದರೂ ‘ಲಾಕ್’ಗಳ ಮೂಲಕ ನೀರಿನ ಮಟ್ಟವನ್ನು ಏರಿಸಿ ಅಥವಾ ತಗ್ಗಿಸಿ ದೋಣಿ ಸಂಚಾರಕ್ಕೆ ಅನುಕೂಲ ಮಾಡಿಕೊಳ್ಳುತ್ತಾರೆ.

ಅದು ಮನುಷ್ಯರ ವಿಚಾರವಾಯ್ತು; ಜಲಚರಗಳೂ ಪ್ರಾಣಿಪಕ್ಷಿಗಳೂ ನನ್ನನ್ನು ಬಹಳಷ್ಟು ಅವಲಂಬಿಸಿವೆ. ಸುಮಾರು 240 ಬಗೆಯ ನುಗಳಿಗೆ, ಅಂದರೆ ಅಮೆರಿಕದ ಒಟ್ಟು ಮೀನುಗಾರಿಕೆಯ ಕಾಲು ಭಾಗಕ್ಕೆ ನನ್ನದೇ ಆಶ್ರಯತಾಣ. ಸುಮಾರು 40 ಪ್ರತಿಶತದಷ್ಟು ಜಲಚರಗಳುಚಳಿಗಾಲದಲ್ಲಿ ಮೆಕ್ಸಿಕೊಗೆ, ಬೇಸಗೆಯಲ್ಲಿ ಕೆನಡಾಕ್ಕೆ ವಲಸೆ ಹೋಗುವುದು ನನ್ನ ಮೂಲಕವೇ!

ಆಕಾಶದಲ್ಲಿ ಹಾರುತ್ತ ಹಿಂಡುಹಿಂಡಾಗಿ ವಲಸೆ ಹೋಗುವ 300ಕ್ಕೂ ಅಧಿಕ ಪಕ್ಷಿಜಾತಿಗಳು, ಹಾಗೆಯೇ ಮೊನಾರ್ಕ್ ಚಿಟ್ಟೆಯಂಥವು ಸಹ ನನ್ನನ್ನು ಅವುಗಳ ವಲಸೆ ದಾರಿಯ ಗುರುತಾಗಿ ಇಟ್ಟುಕೊಳ್ಳುತ್ತವೆ. ಅಮೆರಿಕದ ರಾಷ್ಟ್ರಪಕ್ಷಿ ಬಾಲ್ಡ್ ಈಗಲ್ ಹೆಚ್ಚಾಗಿ ಗೂಡುಕಟ್ಟಿ ಸಂತಾನೋ ತ್ಪತ್ತಿ ಮಾಡುವುದು ನನ್ನ ತೀರಪ್ರದೇಶದಲ್ಲೇ.

ಪೈನ್, ಮೇಪಲ್, ಓಕ್, ಕರಿ ಮುಂತಾದ ಮರಗಳು ಬೆಳೆಯುವ ದಟ್ಟ ಅರಣ್ಯಗಳಿರುವುದು ನನ್ನ ಬಳಿಯೇ. ಅಲ್ಲಿರುವ ಕರಡಿ, ಜಿಂಕೆ, ಮೂಸ್, ಬೇವರ್ ಮತ್ತಿತರ ಕಾಡುಪ್ರಾಣಿಗಳಿಗೆ ನೀರೊದಗಿಸುವುದು ನನ್ನದೇ ಹೊಣೆ. ಅಮೆರಿಕದ 40 ಪ್ರತಿಶತ ಕೃಷಿಭೂಮಿಗೆ ನೀರಾವರಿ ಪೂರೈಕೆ ನನ್ನದೇ. ಮತ್ತೆ ‘ಜೀವನದಿ’ ಎಂದು ಕರೆಯುವುದು ಸುಮ್ಮನೆ ಅಲ್ಲ.

ಅಮೆರಿಕ ಸಂಯುಕ್ತ ಸಂಸ್ಥಾನಗಳ ಭೂಪಟದಲ್ಲಿ ನೋಡಿದರೆ ಉತ್ತರದಿಂದ ದಕ್ಷಿಣಕ್ಕೆ ಹೆಚ್ಚೂ ಕಡಿಮೆ ಸರಳರೇಖೆಯಂತೆ ಇರುವ ನಾನು ದೇಶವನ್ನು ಪೂರ್ವಾರ್ಧ ಮತ್ತು ಪಶ್ಚಿಮಾರ್ಧ ಎಂದು ವಿಭಜಿಸುತ್ತೇನೆ. ಇದೆಷ್ಟು ಸಮಮಿತಿ ಇದೆಯೆಂದರೆ 50 ರಾಜ್ಯಗಳ ಪೈಕಿ ನನ್ನ ಎಡಭಾಗಕ್ಕೆ (ನೀವು ಭೂಪಟ ನೋಡುವಾಗ ಪೂರ್ವಕ್ಕೆ) 26 ರಾಜ್ಯಗಳು, ನನ್ನ ಬಲಭಾಗಕ್ಕೆ (ಭೂಪಟದಲ್ಲಿ ಪಶ್ಚಿಮಕ್ಕೆ) 24 ರಾಜ್ಯಗಳು.

ಇನ್ನೊಂದು ಜನರಲ್ ನಾಲೆಡ್ಜ್ ಅಂಶವನ್ನೂ ಇಲ್ಲಿ ಹೇಳಬಯಸುತ್ತೇನೆ. ಅಮೆರಿಕದಲ್ಲಿ ಪ್ರತಿಯೊಂದು ರೇಡಿಯೊ ಸ್ಟೇಷನ್ ಮತ್ತು ಟಿವಿ ಸ್ಟೇಷನ್ ಗೆ ನಾಲ್ಕಕ್ಷರಗಳ ಒಂದು ಐಡೆಂಟಿಫಿ ಕೇಶನ್ ಲೇಬಲ್ ಇರುತ್ತದೆ. ಅದನ್ನು ‘ಕಾಲ್ ಲೆಟರ್ಸ್’ ಎನ್ನುತ್ತಾರೆ. ಆಯಾಯ ಸ್ಟೇಷನ್‌ನವರು ಅದನ್ನು ಆಗಾಗ ಉದ್ಘೋಷಿಸಬೇಕು.

ನಿಯಮ ಏನೆಂದರೆ, ನನ್ನ ಎಡಭಾಗದ ಎಲ್ಲ ಸ್ಟೇಷನ್‌ಗಳ ಮೊದಲ ಅಕ್ಷರ ‘ಡಬ್ಲ್ಯು’ ಆಗಿರಬೇಕು. ಬಲಭಾಗದ ಎಲ್ಲ ಸ್ಟೇಷನ್‌ಗಳ ಮೊದಲ ಅಕ್ಷರ ‘ಕೆ’ ಆಗಿರಬೇಕು. ಹಾಗಾಗಿಯೇ ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ, ಬಾಸ್ಟನ್ ಮುಂತಾದ ಪೂರ್ವಕರಾವಳಿಯ ಟಿವಿ/ ರೇಡಿಯೊ ಸ್ಟೇಷನ್ ಹೆಸರುಗಳು ಡಬ್ಲ್ಯುದಿಂದ ಆರಂಭವಾಗಿರುತ್ತವೆ. ಲಾಸ್‌ಏಂಜಲೀಸ್, ಸಾನ್ ಫ್ರಾನ್ಸಿಸ್ಕೋ ಮುಂತಾದ ಪಶ್ಚಿಮ ಕರಾವಳಿಯ ಸ್ಟೇಷನ್ ಹೆಸರುಗಳು ಕೆ ಅಕ್ಷರದಿಂದ ಆರಂಭವಾಗಿರುತ್ತವೆ.

ಜನಸಾಮಾನ್ಯರಿಗೆ ಈ ವ್ಯತ್ಯಾಸದಿಂದ ಏನೂ ಆಗಬೇಕಾದ್ದಿಲ್ಲ; ಆದರೆ ದೂರಸಂಪರ್ಕ ಇಲಾಖೆಗೆ, ಸ್ಟೇಷನ್‌ಗಳ ವಿಂಗಡಣೆಗೆ ಇದು ಮಹತ್ವದ್ದಾಗುತ್ತದೆ. ಅಮೆರಿಕದ ಜನಸಂಖ್ಯೆಯಲ್ಲಿ ಸುಮಾರು 18 ಮಿಲಿಯನ್ ಜನರಿಗೆ ಕುಡಿಯುವ ನೀರು ಪೂರೈಕೆ ನನ್ನಿಂದಲೇ. 50 ಚಿಕ್ಕಪುಟ್ಟ ಪಟ್ಟಣಗಳು ನನ್ನ ತೀರದಲ್ಲಿವೆ. ಮಿನಿಯಾಪೊಲಿಸ್, ಸೈಂಟ್ ಪೌಲ್, ಸೈಂಟ್ ಲೂಯಿಸ್, ಮೆಂಫಿಸ್, ನ್ಯೂ ಆರ್ಲಿಯೆನ್ಸ್ ಮುಂತಾದ ದೊಡ್ಡ ನಗರಗಳೂ ಇವೆ. ಸೈಂಟ್ ಲೂಯಿಸ್ ನಗರ ಇರುವ ರಾಜ್ಯದ ಹೆಸರು ಮಿಸ್ಸೌರಿ. ಅಲ್ಲಿ ನನ್ನ ದಂಡೆಯಲ್ಲಿರುವ ಗೇಟ್‌ವೇ ಆರ್ಚ್ ಬಹಳ ಪ್ರಸಿದ್ಧ ಪ್ರವಾಸಿತಾಣ. ಅಮೆರಿಕದ ಅನೇಕ ರಾಜ್ಯಗಳಲ್ಲಿರುವಂತೆ ಮಿಸ್ಸೌರಿ ರಾಜ್ಯದಲ್ಲೂ ಕೆಸಿನೊ(ಜೂಜುಕಟ್ಟೆ)ಗಳಿಗೆ ನಿಷೇಧವಿದೆ. ಆದರೆ ಸೈಂಟ್ ಲೂಯಿಸ್ ನಗರದ ಬಳಿ ಏನು ಮಾಡಿದ್ದಾರೆ ಗೊತ್ತೇ? ನನ್ನ ಮಧ್ಯದಲ್ಲಿ ತೇಲುವ ಕೆಸಿನೊಗಳನ್ನು ನಿರ್ಮಿಸಿದ್ದಾರೆ!

‘ನೊ ಗ್ಯಾಂಬ್ಲಿಂಗ್ ಶಲ್ ಬಿ ಡನ್ ಆನ್ ದಿಸ್ ಲ್ಯಾಂಡ್’ ಎಂದು ಆ ರಾಜ್ಯದ ಕಾನೂನು ಪುಸ್ತಕ ಹೇಳುತ್ತದೆ. ಲ್ಯಾಂಡ್‌ನ ಮೇಲೆ ಮಾಡುವುದಿಲ್ಲ, ನೀರಿನ ಮೇಲೆ ಮಾಡುತ್ತೇವೆ ಎಂದು ಕಾನೂನಿನ ರಂಗೋಲಿಯಡಿ ನುಸುಳುವ ನರಸಿಂಹಾವತಾರಿ ಚಾಣಾಕ್ಷರು ಜನರನ್ನು ದೋಣಿಯಲ್ಲಿ ನದಿಯ ಮಧ್ಯಭಾಗಕ್ಕೆ ಒಯ್ಯುತ್ತಾರೆ. ಅಲ್ಲಿ ಕ್ರೂಸ್ ಹಡಗಿನಂಥದು ಇರುತ್ತದೆ, ಅದರೊಳಗೆ ಜೂಜಿನ ವ್ಯವಸ್ಥೆ. ‘ಮಂದಿ ಬಿಟ್ಟಾರ ನಡುನೀರ ಮಲ್ಲಯ್ಯ... ತಂದಿ ನನ್ನ ಕೈಯ ಬಿಡಬ್ಯಾಡ...’ ಎಂದುಕೊಂಡು ಲೋಭಿ ಬಕರಾಗಳು ಜೂಜಾಡುತ್ತಾರೆ.

ಮೊದಲೆಲ್ಲ ಸಮಯದ ಮಿತಿ, ನಷ್ಟದ ಮಿತಿ ವಿಧಿಸುತ್ತಿದ್ದರಂತೆ. ಈಗೀಗಂತೂ ಅದೂ ಇಲ್ಲ. ಏನು ಮನುಷ್ಯರೋ ಅವರದು ಏನು ದುರಾಸೆಗಳೋ ನಾನರಿಯೆ. ಅಪರೂಪಕ್ಕೊಮ್ಮೊಮ್ಮೆ ನಾನು ಮುನಿಸಿಕೊಳ್ಳುವುದಿದೆ. ಆಗ ನನ್ನ ಪ್ರವಾಹಕ್ಕೆ ಎದುರು ನಿಲ್ಲುವ ಶಕ್ತಿ ಯಾರಿಗೂ ಇರುವುದಿಲ್ಲ. 1927ರಲ್ಲಿ, 1933ರಲ್ಲಿ, ಇತ್ತೀಚೆಗೆ 2008ರಲ್ಲಿ ನನ್ನಲ್ಲಿ ನೆರೆಯುಕ್ಕಿ ಆದ ಅನಾಹುತಗಳು ಭೀಕರ ವಾಗಿದ್ದವು.

ನೂರಾರು ಸಾವು, ಸಾವಿರಾರು ಜನ ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡಿದ್ದರು. ಈಗ ಅಮೆರಿಕದ ನೇವಿ ಕೋರ್ ಎಂಜಿನಿಯರಿಂಗ್ ಭಾಗದ ನೇತೃತ್ವದಲ್ಲಿ ಪ್ರವಾಹ ತಡೆಯ ವಿವಿಧೋಪಾಯಗಳು, ಕರಾರುವಾಕ್ಕಾದ ಮುನ್ಸೂಚನೆ ಕ್ರಮಗಳು ಮತ್ತು ಕ್ಷಿಪ್ರ ಸಂಪರ್ಕದಿಂದಾಗಿ ನನ್ನ ಅಟ್ಟಹಾಸಕ್ಕೆ ಅವಕಾಶಗಳು ಕಮ್ಮಿ. ನಾನೂ ಅಂದುಕೊಳ್ಳುತ್ತೇನೆ, ಪ್ರಕೃತಿಗೆ ತಲೆಬಾಗಿ ಮನುಷ್ಯನಿದ್ದರೆ ನಮ್ಮಂಥ ವರ ಅಟ್ಟಹಾಸ ಬೇಕಾಗಿಲ್ಲ, ಮಂದಹಾಸ ಸಾಕು. ಆದರೆ ಇದು ಮನುಷ್ಯರಿಗೂ ಅರ್ಥವಾಗ ಬೇಕಲ್ಲ?

ಶ್ರೀವತ್ಸ ಜೋಶಿ

View all posts by this author