ಒಂದೊಳ್ಳೆ ಮಾತು
ಡಾ.ಬಾಲಸುಬ್ರಹ್ಮಣ್ಯ ಅವರದು ಬಹಳ ದೊಡ್ಡ ಹೆಸರು ಮತ್ತು ತೂಕದ ವ್ಯಕ್ತಿತ್ವ. ವೃತ್ತಿ ಯಿಂದ ವೈದ್ಯರಾಗಿದ್ದರೂ, ಪ್ರವೃತ್ತಿಯಿಂದ ಸಮಾಜಸೇವಕರಾಗಿ ಹೆಗ್ಗಡದೇವನಕೋಟೆ ಯ ಆಚೆ ಇರುವ ಹೊಸಹಳ್ಳಿಯಲ್ಲಿ ತಮ್ಮ ವೈದ್ಯ ಸ್ನೇಹಿತರನ್ನು ಸೇರಿಸಿಕೊಂಡು, ಅಲ್ಲಿಯ ಗಿರಿಜನರಾದ ಕಾಡು ಕುರುಬ ಹಾಗೂ ಜೇನು ಕುರುಬರಿಗಾಗಿ ಒಂದು ಆಸ್ಪತ್ರೆಯನ್ನು ಕಟ್ಟಿ ದ್ದಾರೆ. ನಂತರ ಅವರಿಗಾಗಿ ಒಂದು ಶಾಲೆಯನ್ನು ಕೂಡ ತೆರೆದರು. ಈಗ ನೂರಾರು
ಗಿರಿಜನ ಮಕ್ಕಳು ಆ ಶಾಲೆಯಲ್ಲಿ ಓದುತ್ತಿದ್ದಾರೆ. ಕಾಡಿನಲ್ಲಿರುವ ಈ ಮಕ್ಕಳಿಗೆ ಯಾವ ಸಂಸ್ಕೃತಿಯ ಅರಿವೂ ಇಲ್ಲ, ಇವರು ಅನಾಗರಿಕರು ಎಂದು ಸಾಮಾನ್ಯವಾಗಿ ಭಾವಿಸ ಲಾಗುತ್ತದೆ; ಆದರೆ ಅದು ಯಾವಾಗಲೂ ನಿಜವಾಗಿರುವುದಿಲ್ಲ. ವಾಸ್ತವ ಬೇರೆಯೇ ಇರುತ್ತದೆ.
ಡಾ.ಬಾಲಸುಬ್ರಹ್ಮಣ್ಯಂರವರೇ ಹೇಳಿದ ಒಂದು ಘಟನೆ ಹೀಗಿದೆ: ಅಲ್ಲಿಯ ಗಿರಿಜನ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಪ್ರತಿದಿನ ರಾಗಿ ಮುದ್ದೆಯನ್ನು ಕೊಡುತ್ತಾರೆ. ಊಟ ಬಡಿಸು ವುದು ಅಲ್ಲಿನ ವಿದ್ಯಾರ್ಥಿಗಳೇ. ಒಬ್ಬೊಬ್ಬ ವಿದ್ಯಾರ್ಥಿಗಳಿಗೂ ಒಂದೊಂದು ಕೆಲಸದ ಜವಾಬ್ದಾರಿ ಕೊಟ್ಟಿರುತ್ತಾರೆ. ಆ ಜವಾಬ್ದಾರಿಯನ್ನು ಮಕ್ಕಳು ಹೇಗೆ ನಿಭಾಯಿಸು ತ್ತಾರೆ ಎಂಬುದನ್ನು ನೋಡುವುದೇ ಖುಷಿ ಕೊಡುತ್ತದೆ.
ಇದನ್ನೂ ಓದಿ: Roopa Gururaj Column: ಮನಸ್ಸಿನ ಸಂಯಮ, ಸಂಬಂಧಗಳನ್ನು ಬೆಸೆಯುತ್ತದೆ
ಒಂದು ದಿನ ಒಬ್ಬ ಹುಡುಗನಿಗೆ ರಾಗಿಮುದ್ದೆಯನ್ನು ಮಾಡಿ ಬಡಿಸುವ ಜವಾಬ್ದಾರಿ ಬಿದ್ದಿತ್ತು. ಅವನ ತರಗತಿಯಲ್ಲಿ ಸುಮಾರು ಇಪ್ಪತ್ತೆಂಟು ಜನ ವಿದ್ಯಾರ್ಥಿಗಳಿದ್ದರು. ಆಗ ಆ ಹುಡುಗ ಎಲ್ಲಾ ರಾಗಿ ಹಿಟ್ಟನ್ನು ಸೇರಿಸಿ ಇಪ್ಪತ್ತೆಂಟು ಸಾಧಾರಣ ಗಾತ್ರದ ಉಂಡೆಗಳನ್ನು ಮಾಡಿ ಜೋಡಿಸಿಟ್ಟ.
ಅದರಲ್ಲಿ ಒಂದು ಉಂಡೆಯನ್ನು ಮಾತ್ರ ತೆಗೆದುಕೊಂಡು ಅದರಲ್ಲಿ ಎರಡು ಭಾಗ ಮಾಡಿಟ್ಟ. ಅಂದರೆ ಒಟ್ಟು ಇಪ್ಪತ್ತೊಂಬತ್ತು ಮುದ್ದೆಗಳಾಗಿದ್ದವು. ಇಪ್ಪತ್ತೇಳು ಮುದ್ದೆಗಳು ಒಂದೇ ಗಾತ್ರದವು, ಇನ್ನೆರಡು ಮುದ್ದೆಗಳು ಮಾತ್ರ ಚಿಕ್ಕವುಗಳಾಗಿದ್ದವು. ಯಾವುದೋ ಕಾರಣಕ್ಕಾಗಿ ಡಾಕ್ಟರ್ ಬಾಲು ಅವರು ಅಡುಗೆ ಮನೆಯೊಳಗೆ ಬಂದರು. ಅಲ್ಲಿ ಆ ಹುಡುಗ ತಟ್ಟೆಯಲ್ಲಿ ರಾಗಿ ಮುದ್ದೆಯನ್ನು ಜೋಡಿಸಿಟ್ಟುಕೊಂಡು ನಿಂತಿದ್ದನ್ನು ನೋಡಿದರು.
ಎರಡು ಮುದ್ದೆಗಳು ಮಾತ್ರ ಸಣ್ಣಗಿದ್ದುದ್ದನ್ನು ಅವರು ಗಮನಿಸಿ, “ಯಾಕಪ್ಪಾ, ಎಷ್ಟು ಹುಡುಗರಿದ್ದಾರೆ? ಎಷ್ಟು ಮುದ್ದೆ ಮಾಡಿದ್ದೀಯಾ?" ಎಂದು ಕೇಳಿದರು. ಹುಡುಗ, “ಇಪ್ಪತ್ತೆಂಟು ಜನ ಇದ್ದಾರೆ ಸರ್" ಎಂದ.
“ಹಾಗಾದರೆ ಇಪ್ಪತ್ತೊಂಬತ್ತು ಮುದ್ದೆ ಇದೆಯ?" ಎಂದು ಕೇಳಿದರು ಡಾ. ಬಾಲು. ಆಗ ಆ ಹುಡುಗ, “ಅದೂ ಸರ್, ಊಟದ ಹೊತ್ತಿಗೆ ನನ್ನ ತಂಗಿ ಇಲ್ಲಿಗೆ ಬರ್ತಾಳೆ; ಅವಳಿಗಾಗಿ ನನ್ನ ಮುದ್ದೆಯಲ್ಲಿ ಅರ್ಧ ಮಾಡಿ ಇನ್ನೊಂದು ಮುದ್ದೆ ಮಾಡಿದ್ದೀನಿ" ಎಂದು ಹೇಳಿದ.
“ಅಯ್ಯೋ ದಡ್ಡ, ಒಟ್ಟು ಹಿಟ್ಟಿನ ಇಪ್ಪತ್ತೊಂಬತ್ತು ಮುದ್ದೆ ಮಾಡಿದ್ದರೆ ಆಗುತ್ತಿರಲಿಲ್ಲವೇ? ಅದರಲ್ಲೇಕೆ ಅರ್ಧ ಮಾಡಿದೆ?" ಎಂದರು ಡಾ.ಬಾಲು. ಆಗ ಆ ಹುಡುಗ “ಹಾಗೆ ಮಾಡಿದರೆ, ಬೇರೆ ಎಲ್ಲರಿಗೂ ಸ್ವಲ್ಪ ಕಡಿಮೆಯಾಗುತ್ತಿತ್ತು. ಅವಳು ನನ್ನ ತಂಗಿ, ನನ್ನ ಪಾಲಿನಲ್ಲಿ ಮಾತ್ರ ಅವಳಿಗೆ ಕೊಡುವುದು ಸರಿಯಲ್ಲವೇ ಸರ್?" ಎಂದ. ಆ ಹುಡುಗನ ಮಾತನ್ನು ಕೇಳಿ, ಡಾ.ಬಾಲುರವರ ಕಣ್ಣುಗಳಲ್ಲಿ ನೀರು ಹರಿಯಿತು. ಅವನ ಪ್ರಾಮಾಣಿಕತೆಗೆ ಭೇಷ್ ಎಂದು ಹೇಳಿ ಅವನ ಬೆನ್ನು ತಟ್ಟಿದರು.
ಯಾವುದಾದರೂ ಸಮಾರಂಭಗಳಲ್ಲಿ ಅಥವಾ ಕಚೇರಿಗಳಲ್ಲಿ ಏನಾದರೂ ಉಚಿತವಾಗಿ ಸಿಗುತ್ತದೆ ಎಂದರೆ ನಮ್ಮದಷ್ಟನ್ನ ತೆಗೆದುಕೊಳ್ಳುವುದರ ಜತೆಗೆ ಮನೆಯವರಿಗಾಗಿ ಕೂಡ ಅನಾಯಾಸವಾಗಿ ಒಂದಿಷ್ಟು ಹಿಡಿದುಕೊಂಡು ಬಂದಿರುತ್ತೇವೆ. ಅದಕ್ಕೆ ನಿಜವಾಗಲೂ ನಾವು ಅರ್ಹರೋ ಅಲ್ಲವೋ ಎನ್ನುವುದನ್ನು ಕೂಡ ಯೋಚಿಸುವುದಿಲ್ಲ.
‘ಜಗತ್ತಿನದೆಲ್ಲ ಒಳ್ಳೆಯದು ನನಗೆ ಮತ್ತು ನನ್ನ ಮನೆಯವರಿಗೆ ಬೇಕು’ ಎಂದು ಯೋಚಿಸುವ ವಿದ್ಯಾವಂತರಾದ ನಮ್ಮ ಸಣ್ಣತನವನ್ನ ಮೇಲಿನ ಕಥೆ ಅದೆಷ್ಟು ಚೆನ್ನಾಗಿ ತೋರಿಸಿ ಬಿಡುತ್ತದೆ ಅಲ್ಲವೇ? ಇನ್ನಾದರೂ ‘ಎಲ್ಲವೂ ನಮಗೇ ಬೇಕು’ ಎನ್ನುವ ಅತಿಯಾಸೆಯನ್ನ ಬಿಟ್ಟು ಪ್ರಾಮಾಣಿಕವಾಗಿ ಬದುಕುವ ಪ್ರಯತ್ನ ಮಾಡೋಣ....