ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

K‌iran Upadhyay Column: ಪಿಚ್‌ ಮೇಲೆ ಮಲಗುತ್ತಿದ್ದ ಐಪಿಎಲ್‌ ಸ್ಟಾರ್

ಐಪಿಎಲ್ ಆರಂಭವಾದ ದಿನಗಳಲ್ಲಿ ನಾನು ಇಷ್ಟಪಡುತ್ತಿದ್ದ ಆಟಗಾರರಲ್ಲಿ ಒಬ್ಬರಾಗಿದ್ದ ವರು ಸುರೇಶ್ ರೈನಾ. ರೈನಾ ತಮ್ಮ ಆಟದ ಜತೆಗೆ ಸ್ಟೈಲ್ʼನಿಂದಲೂ ಇಷ್ಟವಾಗುತ್ತಿದ್ದರು. ಒಮ್ಮೆ ಅವರ ಪೂರ್ವಾಪರ, ಬಾಲ್ಯದಲ್ಲಿ ಅವರು ಪಟ್ಟ ಪಾಡು, ಇವನ್ನೆಲ್ಲ ತಿಳಿದ ನಂತರವಂತೂ ನಾನು ಅವರ ಪಕ್ಕಾ ಅಭಿಮಾನಿಯಾದೆ. ರೈನಾ ಕುರಿತು ಎಲ್ಲಿಯೇ, ಏನೇ ಕಂಡರೂ ಒಂದು ಘಳಿಗೆ ನಿಂತು ಅದನ್ನು ನೋಡಿಯೇ ಮುಂದೆ ಹೋಗುತ್ತೇನೆ.

ಪಿಚ್‌ ಮೇಲೆ ಮಲಗುತ್ತಿದ್ದ ಐಪಿಎಲ್‌ ಸ್ಟಾರ್

-

ವಿದೇಶವಾಸಿ

ಈ ಬಾರಿಯ ಐಪಿಎಲ್ ಪಂದ್ಯಾಟಗಳು ಉಳಿದ ಎಲ್ಲಾ ಸರಣಿಗಳಿಗಿಂತ ಹೆಚ್ಚು ಮನರಂಜನೆ ನೀಡಿವೆ. ಬಹುತೇಕ ಪಂದ್ಯಗಳಲ್ಲಿ ತಂಡಗಳು ಇನ್ನೂರಕ್ಕೂ ಹೆಚ್ಚು ರನ್ ಗಳಿಸಿ ಸವಾಲು ಒಡ್ಡಿದರೆ, ಅದನ್ನೂ ಬೆನ್ನಟ್ಟಿ ಪಂದ್ಯವನ್ನು ಗೆದ್ದ ದಾಖಲೆಗಳೂ ಸಾಕಷ್ಟಿವೆ. ಒಟ್ಟೂ ಎಪ್ಪತ್ತನಾಲ್ಕು ಪಂದ್ಯಗಳಲ್ಲಿ ಸಾವಿರದ ನಾಲ್ಕು ನೂರಕ್ಕೂ ಹೆಚ್ಚು ಸಿಕ್ಸರ್, ಎರಡು ಸಾವಿರದ ಮುನ್ನೂರಕ್ಕೂ ಹೆಚ್ಚು ಫೋರ್, ಸುಮಾರು ನಾಲ್ಕು ಸಾವಿರ ಬೌಂಡರಿ ರನ್‌ಗಳು ಈ ಒಂದು ಸರಣಿಯಲ್ಲಿ ಕಾಣ ಸಿಕ್ಕಿವೆ.

ಹಾಗೆಯೇ ಹಲವಾರು ಪ್ರತಿಭೆಗಳು ಕೂಡ ತಮ್ಮ ಆಕರ್ಷಕ ಆಟದಿಂದ ಕ್ರಿಕೆಟ್ ಪ್ರೇಮಿಗಳ ಮನ ತಣಿಸಿದ್ದಾರೆ, ಪಂದ್ಯ ನೋಡುವಾಗ ಕುರ್ಚಿಯ ತುದಿಗೆ ಬಂದು ಕುಳಿತುಕೊಳ್ಳುವಂತೆ ಮಾಡಿದ್ದಾರೆ.

ಒಂದು ಕಾಲವಿತ್ತು, ಭಾರತದ ಕ್ರಿಕೆಟ್ ತಂಡ ಎಂದರೆ, ದೆಹಲಿ ಮತ್ತು ಮುಂಬೈನವರೇ ಹೆಚ್ಚು ತುಂಬಿಕೊಂಡಿರುತ್ತಿದ್ದರು. ನಾಲ್ಕರಿಂದ ಐದು ಆಟಗಾರರು ದೆಹಲಿಯವರಾದರೆ, ನಾಲ್ಕರಿಂದ ಐದು ಆಟಗಾರರು ಮುಂಬೈನವರು. ಉಳಿದ ಒಂದೆರಡು ಆಟಗಾರರು ಕರ್ನಾಟಕ, ತಮಿಳುನಾಡು, ಪಂಜಾಬ, ಪಶ್ಚಿಮ ಬಂಗಾಳ ಹೀಗೆ ಉಳಿದ ರಾಜ್ಯಗಳಿಂದ ಇರುತ್ತಿದ್ದರು.

ಬಿಹಾರ, ಒರಿಸ್ಸಾ, ಕೇರಳ, ರಾಜಸ್ಥಾನ, ಹರಿಯಾಣ, ಪೂರ್ವದ ಸಣ್ಣ ಪುಟ್ಟ ರಾಜ್ಯಗಳ ಆಟಗಾರರು ಔಷಧಕ್ಕೆ ಬೇಕೆಂದರೂ ಸಿಗುತ್ತಿರಲಿಲ್ಲ. ಎಲ್ಲಾ ದೃಷ್ಟಿಬೊಟ್ಟಿನಂತೆ ದಂದು, ಇಂದು ಆಟಗಾರರು, ಅದೂ ಮುಬೈ, ದೆಹಲಿಯಂಥ ಮಹಾನಗರದಲ್ಲಿ ಬಂದು ನೆಲೆಸಿದವರು ಕಾಣ ಸಿಗುತ್ತಿದ್ದರು.

ಐದು ಆರು ದಶಕಗಳ ಹಿಂದೆ ಪ್ರತಿಷ್ಠಿತ ಕ್ಲಬ್‌ಗಳಿಗೆ, ಜಿಮ್ಕಾನಾಗಳಿಗೆ ಹೋಗಿ ಆಟವಾಡು ತ್ತಿದ್ದ ಅಥವಾ ಅಲ್ಲಿ ತರಬೇತಿ ಪಡೆಯುತ್ತಿದ್ದ, ಅವರಿಂದಲೇ ಶಿಫಾರಸು ಪಡೆಯುತ್ತಿದ್ದ ಆಟಗಾರರು ರಾಷ್ಟ್ರೀಯ ತಂಡದಲ್ಲಿರುತ್ತಿದ್ದರು. ಹಾಗಂತ ಅವರೆಲ್ಲ ಕೆಟ್ಟ ಆಟಗಾರ ರಾಗಿರುತ್ತಿದ್ದರು ಎಂದಲ್ಲ. ಆದರೆ ಇಂದಿನ ಭಾರತ ತಂಡದಲ್ಲಿ ಇರುವಷ್ಟು ಪ್ರತಿಭಾವಂತ ರು ಆ ಕಾಲದಲ್ಲಿ ಇರುತ್ತಿರಲಿಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳು ಇದ್ದಿರಬಹುದಾದರೂ ಅದು ವಾಸ್ತವ.

ಇದನ್ನೂ ಓದಿ: Kiran Updhyay Column: ಮೆಲೊಡಿ ಕೊಟ್ಟಿದ್ದಕ್ಕೇ ಹೀಗೆ, ಇನ್ನು ಅದನ್ನು ಕೊಟ್ಟಿದ್ದರೆ...

ಎಂಬತ್ತು-ತೊಂಭತ್ತರ ದಶಕದಲ್ಲಿ, ಮಹಾನಗರಗಳ ಜತೆಗೆ ಉಳಿದ ನಗರಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಆರಂಭವಾಯಿತು. ಕೆಲವು ವರ್ಷಗಳ ನಂತರ ಈ ಕಾರ್ಯ ಇನ್ನಷ್ಟು ಚುರುಕುಗೊಂಡು, ಗ್ರಾಮೀಣ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಹಂತ ತಲುಪಿತು.

ಮಹಾನಗರಗಳ ಪದ್ಧತಿಯೇ ಇದ್ದಿದ್ದರೆ ರೈಲ್ವೆಯಲ್ಲಿ ಟಿಕೆಟ್ ಕಲೆಕ್ಟರ್ ಕೆಲಸ ಮಾಡುತ್ತಿದ್ದ ಮಹೇಂದ್ರ ಸಿಂಗ್ ಧೋನಿ, ಗುಜರಾತಿನ ಹಳ್ಳಿಯ ಮೂಲೆಯಲ್ಲಿದ್ದ ರೈತರ ಮಗ, ಸ್ಞತಃ ಕಲ್ಲು ಕೆಲಸ ಮಾಡಿಕೊಂಡಿದ್ದ ಮುನಾಫ್ ಪಟೇಲ್, ವಾಚ್ಮನ್ ಕೆಲಸ ಮಾಡುತ್ತಿದ್ದವರ ಮಗ ರವೀಂದ್ರ ಜಡೇಜಾ, ಕಲ್ಲಿದ್ದಲಿನ ಗಣಿಯಲ್ಲಿ ಕೆಲಸ ಮಾಡುತ್ತಿದ್ದವರ ಮಗ ಉಮೇಶ ಯಾದವ್, ಗ್ಯಾಸ್ ಸಿಲಿಂಡರ್ ವಿತರಣೆ ಮಾಡುತ್ತಿದ್ದವರ ಮಗ ರಿಂಕು ಸಿಂಗ್, ಮಸೀದಿ‌ ಯಲ್ಲಿ ಪ್ರಾರ್ಥನೆಗೆ ಅಜಾನ್ ಕೊಡುವ ಮೌಲ್ವಿಯ ಮಕ್ಕಳಾದ ಯೂಸುಫ್ ಮತ್ತು ಇರ್ಫಾನ್ ಪಠಾಣ, ದಾವಣಗೆರೆಯಲ್ಲಿ ಆಟೋರಿಕ್ಷಾ ಓಡಿಸುತ್ತಿದ್ದವರ ಮಗ ವಿನಯ್ ಕುಮಾರ್, ಹೈದರಾಬಾದ್‌ನಲ್ಲಿ ಆಟೋರಿಕ್ಷಾ ಓಡಿಸುತ್ತಿದ್ದವರ ಮಗ ಮಹಮ್ಮದ್ ಸಿರಾಜ್, ಬೀದಿ ಬದಿಯಲ್ಲಿ ಪಾನಿಪುರಿ ಮಾರುತ್ತಿದ್ದ ಯಶಸ್ವಿ ಜೈಸ್ವಾಲ್‌ ಮೊದಲಾದವರು ಭಾರತದ ತಂಡ ತಲುಪುವುದಿರಲಿ, ರಾಜ್ಯಮಟ್ಟದ ರಣಜಿ ಪಂದ್ಯ ಆಡುವುದಾಗಲಿ, ಕೊನೆ ಪಕ್ಷ ಐಪಿಎಲ್ ಮುಖಾಂತರ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುವುದಾಗಲಿ ಸಾಧ್ಯವಾಗುತ್ತಿರಲಿಲ್ಲ.

ಐಪಿಎಲ್ʼನಲ್ಲಿ ಕೆಲವು ಹೊಸ ಪ್ರತಿಭೆಗಳು ಬಂದು ತಮ್ಮನ್ನು ಸ್ಥಾಪಿಸಿಕೊಂಡದ್ದು ಹೌದಾದರೂ, ಅವರ ಯಶಸ್ಸಿನ ಕಥೆ ನಮ್ಮ ಕಣ್ಣು-ಕಿವಿಗಳಿಗೆ ಖುಷಿ ಕೊಡುವುದು ಹೌದಾದರೂ, ಅವರ ಸಾಧನೆ, ಪಟ್ಟ ಶ್ರಮ, ಅವರ ಬದ್ಧತೆ, ಇತ್ಯಾದಿಗಳು ಸ್ಪೂರ್ತಿದಾಯಕ ವೂ, ಯುವ ಪೀಳಿಗೆಗೆ ಪ್ರೇರಣಾದಾಯಕವೂ ಆಗಿವೆ. ಈ ನಿಟ್ಟಿನಲ್ಲಿ ಐಪಿಎಲ್ ಒಳ್ಳೆಯ ಪ್ರತಿಭೆಗಳನ್ನು ಆರಿಸುವುದಕ್ಕೆ ಒಂದು ಉತ್ತಮ ಮಾಧ್ಯಮವಾಯಿತು ಎಂದರೆ ಅತಿಶಯೋಕ್ತಿಯಲ್ಲ.

ಐಪಿಎಲ್ ಆರಂಭವಾದ ದಿನಗಳಲ್ಲಿ ನಾನು ಇಷ್ಟಪಡುತ್ತಿದ್ದ ಆಟಗಾರರಲ್ಲಿ ಒಬ್ಬರಾಗಿದ್ದ ವರು ಸುರೇಶ್ ರೈನಾ. ರೈನಾ ತಮ್ಮ ಆಟದ ಜತೆಗೆ ಸ್ಟೈಲ್ʼನಿಂದಲೂ ಇಷ್ಟವಾಗುತ್ತಿದ್ದರು. ಒಮ್ಮೆ ಅವರ ಪೂರ್ವಾಪರ, ಬಾಲ್ಯದಲ್ಲಿ ಅವರು ಪಟ್ಟ ಪಾಡು, ಇವನ್ನೆಲ್ಲ ತಿಳಿದ ನಂತರವಂತೂ ನಾನು ಅವರ ಪಕ್ಕಾ ಅಭಿಮಾನಿಯಾದೆ. ರೈನಾ ಕುರಿತು ಎಲ್ಲಿಯೇ, ಏನೇ ಕಂಡರೂ ಒಂದು ಘಳಿಗೆ ನಿಂತು ಅದನ್ನು ನೋಡಿಯೇ ಮುಂದೆ ಹೋಗುತ್ತೇನೆ. ರೈನಾ ನನ್ನ ಮೇಲೆ ಅಷ್ಟು ಪ್ರಭಾವವನ್ನಂತೂ ಬೀರಿದ್ದಾರೆ.

Suresh Raina1

ಅವರು ಟೆಸ್ಟ್, ಏಕದಿನ, ಟಿ-ಟ್ವೆಂಟಿ, ಐಪಿಎಲ್ ಪದ್ಯಗಳಲ್ಲಿ ಗಳಿಸಿದ ರನ್, ಪಡೆದ ವಿಕೆಟ್, ಇತ್ಯಾದಿಗಳ ಕುರಿತು ಇಲ್ಲಿ ಹೇಳುವುದಿಲ್ಲ. ಭಾರತ ತಂಡಕ್ಕೆ ರೈನಾ ನೀಡಿದ ಕೊಡುಗೆ ಯನ್ನಾಗಲಿ, ಅವರ ದಾಖಲೆಗಳನ್ನಾಗಲಿ ನೆನಪಿಸುವುದಿಲ್ಲ. ಅದೆಲ್ಲ ಎಲ್ಲರಿಗೂ ತಿಳಿದಿರು ವಂಥದ್ದೇ.

ಅವರು ಈ ಹಂತ ತಲುಪಲು ಸವೆಸಿದ ದಾರಿಯನ್ನು ಮಾತ್ರ ಆಗಾಗ ನೆನಪಿಸಿ ಕೊಳ್ಳುತ್ತಿರ ಬೇಕು. ಸುರೇಶ್ ರೈನಾ ಎಂದಾಕ್ಷಣ ಅವರ ಬ್ಯಾಟಿಂಗ್ ಜತೆಜತೆಗೇ ನೆನಪಾಗುವುದು ಅವರ ಫೀಲ್ಡಿಂಗ್. ಒಂದು ಕಾಲದಲ್ಲಿ ಭಾರತದ ಕ್ರಿಕೆಟ್ ಆಟಗಾರರು ಟೆಸ್ಟ್‌ ಪಂದ್ಯದ ಮೊದಲ ದಿನ ತೊಟ್ಟ ಬಿಳಿ ಬಣ್ಣದ ಒಂದೇ ಸಮವಸ್ತ್ರವನ್ನು ಕೊನೆಯ ದಿನದವರೆಗೂ ತೊಡು ತ್ತಿದ್ದರು. ಬೀಳುವುದಿಲ್ಲ, ಜಾರುವುದಿಲ್ಲ, ಚೆಂಡನ್ನು ಹಿಡಿಯಲು ಓಡುವುದೂ ಇಲ್ಲ. ಹಾಗಿರುವಾಗ ಸಮವಸ್ತ್ರವಾದರೂ ಹೇಗೆ ಮಣ್ಣಾದೀತು? ಕ್ರಮೇಣ ಕ್ಷೇತ್ರರಕ್ಷಣೆಯೂ ಆಟದ ಪ್ರಮುಖ ಭಾಗವಾಯಿತು.

A rupee saved is a rupee gained ಅನ್ನುತ್ತಾರಲ್ಲ, ಹಾಗೆಯೇ A run saved is a run gained ಎನ್ನುವಂತಾಯಿತು. ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಸುರೇಶ್ ರೈನಾ ತಂಡದಲ್ಲಿರುವಾಗ (ವಿರಾಟ್ ಕೊಹ್ಲಿ, ರವೀಂದ್ರ ಜಡೆಜಾರನ್ನೂ ಪಟ್ಟಿಗೆ ಸೇರಿಸಿಕೊಳ್ಳ ಬಹುದು) ಭಾರತದ ಕ್ಷೇತ್ರರಕ್ಷಣೆ ಉತ್ತುಂಗದಲ್ಲಿತ್ತು ಎಂದರೆ ಸುಳ್ಳಲ್ಲ.

ಒಂದು ಸಮಯ ಹೇಗಿತ್ತು ಎಂದರೆ ಯುವರಾಜ, ರೈನಾ, ಕೈಫ್ ಮೂವರೂ ಆಫ್ ಸೈಡ್‌ ನಲ್ಲಿ ಗೋಡೆಯಂತೆ‌ ನಿಂತಿರುತ್ತಿದ್ದರು. ಅವರ ಬಳಿ ಚೆಂಡು ಹೋದರೆ ಬ್ಯಾಟ್ʼಮನ್ ಒಂದು ರನ್ ತೆಗೆದುಕೊಳ್ಳಲು ನಾಲ್ಕು ಬಾರಿ ವಿಚಾರ ಮಾಡಬೇಕಿತ್ತು.

ರೈನಾ ಕಥೆ ಕೇಳಿದಾಗ, ಅವರು ಬಾಲ್ಯದಲ್ಲಿ ಪಟ್ಟ ಕಷ್ಟವೇ ಅವರ ಕ್ಷೇತ್ರ ರಕ್ಷಣೆಗೆ ಉಡು ಗೊರೆಯಾಗಿ ಒದಗಿಬಂತು ಅನ್ನಿಸುತ್ತದೆ. ಸುರೇಶ್ ರೈನಾ ಮೂಲತಃ ಕಾಶ್ಮೀರದವರು. ಕಾಶ್ಮೀರದಲ್ಲಿ ತೀವ್ರಗಾಮಿಗಳ ಕೂಗು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಅವರ ತಂದೆ ಕಾಶ್ಮೀರ ಬಿಟ್ಟು, ಉತ್ತರಪ್ರದೇಶದ ಮುರಾದಾಬಾದ್‌ಗೆ ಬಂದು ನೆಲೆಸಿದರು. ಅವರ ತಂದೆ ಭಾರತೀಯ ಸೇನೆಯಲ್ಲಿ ಟ್ಯಾಂಕರ್‌ಗಳಿಗೆ ಕೋಡಿಂಗ್ ಕೆಲಸ ಮಾಡಿ ತಿಂಗಳಿಗೆ ಹತ್ತು ಸಾವಿರ ರೂ. ಸಂಬಳ ಪಡೆಯುತ್ತಿದ್ದ ಖಡಕ್ ಮನುಷ್ಯರಾಗಿದ್ದರು. ಆ ಹಣದಲ್ಲಿಯೇ ಹೆಂಡತಿ ಮತ್ತು ಆರು ಜನ ಮಕ್ಕಳನ್ನು ಅವರು ಸಾಕಬೇಕಾಗಿತ್ತು.

ತಾಯಿ ಮುಂಗೋಪಿ ಮತ್ತು ಸಿಟ್ಟಿನ ಸಾಕಾರ ಮೂರ್ತಿ. ಅವರ ಕೈಯಲ್ಲಿ ಸೌಟಿಗಿಂತ ಲಟ್ಟಣಿಗೆ ಇದ್ದದ್ದೇ ಹೆಚ್ಚು. ಅದು ಮಕ್ಕಳು ದಾರಿ ತಪ್ಪಬಾರದು ಎಂಬ ಕಾರಣಕ್ಕಾಗಿ. ಆದ್ದರಿಂದ ಸಣ್ಣವರಿರುವಾಗ ರೈನಾಗೆ ‘ಲಟ್ಟಣಿಗೆ ಯಾವ ಕೆಲಸಕ್ಕೆ ಬರುತ್ತದೆ’ ಎಂದು ಕೇಳಿದರೆ ‘ರೊಟ್ಟಿ ಲಟ್ಟಿಸುವುದಕ್ಕೆ’ ಎನ್ನುವುದಕ್ಕಿಂತ ‘ಬೆನ್ನಿಗೆ ಬಾರಿಸಲು ಹೆಚ್ಚು ಪ್ರಯೋಜನಕ್ಕೆ ಬರುತ್ತದೆ’ ಎನ್ನುವಂತಿತ್ತು.

ರೈನಾ ಅಣ್ಣಂದಿರಿಂದಲೂ ಸಾಕಷ್ಟು ಪೆಟ್ಟು ತಿನ್ನುತ್ತಿದ್ದರು. ಅಣ್ಣಂದಿರು ಅವರನ್ನು ಬಗ್ಗಿ ನಿಲ್ಲಿಸುತ್ತಿದ್ದರು, ಉಟಾಬಸ್ ಹೊಡೆಸುತ್ತಿದ್ದರು. ಇವೆಲ್ಲ ಹೆಚ್ಚಾಗಿ ಆಟದ ವಿಷಯದಲ್ಲಿಯೇ ಆಗುತ್ತಿತ್ತು. ರೈನಾ ಹನ್ನೆರಡು ವರ್ಷದವರಾಗಿದ್ದಾಗ ಊರಿನ ಗಲ್ಲಿಗಳಲ್ಲಿ, ಸಹೋದರ ಮತ್ತು ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದರು.

ಹಾಗೆಯೇ ಊರು ಊರಿನ ನಡುವೆ ನಡೆಯುವ ಸಣ್ಣ ಪುಟ್ಟ ಮಕ್ಕಳ ಪಂದ್ಯಗಳಲ್ಲಿ ಆಡುತ್ತಿದ್ದರು. ಎಷ್ಟು ಚೆನ್ನಾಗಿ ಆಡುತ್ತಿದ್ದರು ಎಂದರೆ ನೋಡಲು ಬಂದ ಕೆಲವು ಊರಿನ ಜನ ರೈನಾ ಆಟ ನೋಡಿ, ಖುಷಿಯಾಗಿ, ಐವತ್ತು ನೂರು ರೂಪಾಯಿಯ ಬಹುಮಾನ ಕೊಟ್ಟು ಹೋಗುತ್ತಿದ್ದರು. ಅದರಿಂದ ಪ್ರೇರಣೆಗೊಂಡ ರೈನಾ ಲಖನೌ ನಗರದಲ್ಲಿರುವ ಸ್ಪೋರ್ಟ್ಸ್ ಕಾಲೇಜ್ ಸೇರಿಕೊಂಡರು. ಅಲ್ಲಿ ಸೇರಲು ಪ್ರತಿ ವರ್ಷ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಹಾಕುತ್ತಿದ್ದರು. ಬಂದ ವಿದ್ಯಾರ್ಥಿಗಳಿಗೆ ಹತ್ತರಿಂದ ಹದಿನೈದು ಚೆಂಡು ಎಸೆಯಲಾಗುತ್ತಿತ್ತು.

ಅದರಲ್ಲಿಯೇ ಅವರು ತಮ್ಮ ಪ್ರತಿಭೆ ತೋರಿಸಬೇಕಾಗುತ್ತಿತ್ತು. ಇವೆಲ್ಲದರ ನಡುವೆ ರೈನಾ ಆಯ್ಕೆಯಾಗಿದ್ದರು. ರೈನಾ ಅಲ್ಲಿ ಸೇರಿಕೊಂಡಾಗ ವರ್ಷಕ್ಕೆ ಹತ್ತು ಸಾವಿರ ರೂ. ಫೀಸ್ ಕಟ್ಟಬೇಕಾಗಿತ್ತು. ತಂದೆಗೆ ಬರುತ್ತಿದ್ದ ಸಂಬಳದಲ್ಲಿ ರೈನಾ ಅವರಿಗೆ ಕೊಡಲು ಇಷ್ಟು ಮಾತ್ರ ಸಾಧ್ಯವಾಗುತ್ತಿತ್ತು. ಉಳಿದದ್ದನ್ನು ರೈನಾ ಹೇಗೋ ಹೊಂದಿಸಿಕೊಳ್ಳಬೇಕಾಗಿತ್ತು.

ರೈನಾ ಲಖನೌನಲ್ಲಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಾಗ ಒಂದೆರಡು ಜೊತೆ ಬಟ್ಟೆ, ಒಂದು ಹಾಸು, ಒಂದು ಹೊದಿಕೆ ಬಿಟ್ಟರೆ ಇನ್ನೇನೂ ಇರಲಿಲ್ಲ. ಹಾಸ್ಟೆಲ್‌ನಲ್ಲಿ ಒಂದು ಕೋಣೆ ಯಲ್ಲಿ ಮೂರು ಜನ ಉಳಿದುಕೊಳ್ಳಬೇಕಾಗಿತ್ತು. ಆದರೆ ಎರಡೇ ಮಂಚ ಇರುತ್ತಿತ್ತು. ರೈನಾ ಗಿಂತ ದೊಡ್ಡ ಮಕ್ಕಳು ಮಂಚದ ಮೇಲೆ ಮಲಗುತ್ತಿದ್ದುದರಿಂದ ರೈನಾ ನೆಲದ ಮೇಲೆ ಮಲಗುತ್ತಿದ್ದರು.

ಹಾಸ್ಟೆಲ್‌ನ ಕೋಣೆಯ ಕಿಟಕಿಗಳಿಗೆ ಗಾಜುಗಳು ಇರುತ್ತಿರಲಿಲ್ಲವಾದ್ದರಿಂದ ಮಳೆ ಮತ್ತು ಚಳಿಗಾಳಿಯಿಂದ ರಕ್ಷಿಸಿಕೊಳ್ಳಲು ಪೇಪರ್ ಅಂಟಿಸುತ್ತಿದ್ದರು. ಚಳಿಗಾಲದಲ್ಲಂತೂ ಚಳಿ ತಡೆಯಲಾಗದೆ ರೈನಾ ಎಷ್ಟೋ ಬಾರಿ ಕ್ರಿಕೆಟ್ ಪ್ಯಾಡ್ ಕಟ್ಟಿಕೊಂಡು, ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಮಲಗುತ್ತಿದ್ದರು.

ದೊಡ್ಡ ಮಕ್ಕಳು ಕೆಲವೊಮ್ಮೆ ರೈನಾ ಮೈಮೇಲೆ ತಣ್ಣಗಿನ ನೀರು ತಂದು ಸುರಿಯುತ್ತಿದ್ದರು. ಎಲೆ ಅಡಿಕೆ ಅಗೆದು ಉಗಿಯುತ್ತಿದ್ದರು. ಬಿಡುವಿದ್ದಾಗ ತಮ್ಮ ಬಟ್ಟೆ ತೊಳೆದುಕೊಳ್ಳುವುದರ ಜತೆಗೆ ದೊಡ್ಡವರ ಬಟ್ಟೆಯನ್ನೂ ತೊಳೆದು ಕೊಡಬೇಕಾಗಿತ್ತು. ಕೆಲವು ಮಕ್ಕಳು ಬಟ್ಟೆ ತೊಳೆದಿದ್ದು ಸರಿಯಾಗಲಿಲ್ಲ, ಕೊಳೆ ಹೋಗಲಿಲ್ಲ ಎಂದು ರೈನಾ ಅವರನ್ನು ಹೊಡೆಯು ತ್ತಿದ್ದರು.

ಇದೇ ಹಾಸ್ಟೆಲ್ ಕೋಣೆಯ ಒಳಗಾದರೆ, ರೈನಾ ಅವರ ವಯಸ್ಸಿನ ಇತರ ಮಕ್ಕಳೊಂದಿಗೆ ಸೇರಿ ಮೈದಾನದಲ್ಲಿಯೂ ಕೆಲಸ ಮಾಡಬೇಕಾಗುತ್ತಿತ್ತು. ಕ್ರಿಕೆಟ್ ಪಿಚ್ ಮೇಲೆ ರೋಲರ್ ಓಡಾಡಿಸಬೇಕಾಗುತ್ತಿತ್ತು, ಅದೂ ಕೈಯಲ್ಲಿ ಎಳೆದುಕೊಂಡು ಹೋಗುವಂತಹ ರೋಲರ್. ಕೆಲವೊಮ್ಮೆ ಮಳೆ ಬಂದಾಗ ರೈನಾ ಇತರ ಮಕ್ಕಳ ಜೊತೆ ಪಿಚ್‌ಗೆ ನೀರು ತಾಗದಂತೆ ಬಚಾವ್ ಮಾಡಲು, ಪಿಚ್ಮೇ ಲೆ ಮಲಗಿಕೊಳ್ಳುತ್ತಿದ್ದರು. ಏಕೆಂದರೆ ಅಲ್ಲಿ ಪಿಚ್ ಮುಚ್ಚಲು ತಾಡಪತ್ರಿಯಾಗಲಿ, ಪ್ಲಾಸ್ಟಿಕ್ ಆಗಲಿ ಇರುತ್ತಿರಲಿಲ್ಲ.

ಇಷ್ಟು ಮಾಡಿಯೂ ಅವರಿಗೆ ಬ್ಯಾಟಿಂಗ್ ಸಿಗುತ್ತಿರಲಿಲ್ಲ. ಅವರು ದೊಡ್ಡ ವಿದ್ಯಾರ್ಥಿಗಳಿಗೆ ದಿನವಿಡೀ ಬೌಲಿಂಗ್ ಮಾಡಬೇಕಾಗಿತ್ತು. ಎದರೂ ಅಪರೂಪಕ್ಕೊಮ್ಮೆ ಇವರಿಗೆ ಬ್ಯಾಟಿಂಗ್ ಸಿಕ್ಕಾಗ ಈ ಎಲ್ಲಾ ಸಿಟ್ಟನ್ನು ಅವರು ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ತೀರಿಸಿ ಕೊಳ್ಳುತ್ತಿದ್ದರು. ಕೆಲವೊಮ್ಮೆ ಅದಕ್ಕೂ ಪೆಟ್ಟು ತಿನ್ನಬೇಕಾಗಿತ್ತು.

ರೈನಾ ಉತ್ತರ ಪ್ರದೇಶದ ಹದಿನಾಲ್ಕು ವರ್ಷಕ್ಕೂ ಸಣ್ಣವರ ತಂಡಕ್ಕೆ ಆಯ್ಕೆಯಾಗಿದ್ದರು. ಒಮ್ಮೆ ಪಂದ್ಯಾಟದಲ್ಲಿ ಭಾಗವಹಿಸಲು ತಂಡದವರೊಂದಿಗೆ ರೈಲಿನಲ್ಲಿ ಪ್ರಯಾಣಿಸು ತ್ತಿದ್ದರು. ದೊಡ್ಡ ಮಕ್ಕಳು ಬರ್ತ್ʼನಲ್ಲಿ ಮಲಗಿದ್ದರೆ, ರೈನಾ ಬೋಗಿಯ ನೆಲದ ಮೇಲೆ ಪೇಪರ್ ಹಾಸಿಕೊಂಡು ಮಲಗಿದ್ದರು.

ಇದ್ದಕ್ಕಿದ್ದಂತೆ ಅವರಿಗೆ ಎದೆಯ ಮೇಲೆ ಭಾರವಾದ ವಸ್ತು ಇಟ್ಟಂತೆ ಭಾಸವಾಯಿತು. ಕಣ್ಣು ತೆರೆದು ನೋಡಿದಾಗ ಎದೆಯ ಮೇಲೆ ಒಬ್ಬ ಹುಡುಗ ಕುಳಿತು ರೈನಾ ಮೇಲೆ ಮೂತ್ರ ವಿಸರ್ಜಿಸುತ್ತಿದ್ದ. ತಪ್ಪಿಸಿಕೊಳ್ಳಬೇಕೆಂದರೆ ಇನ್ನಿಬ್ಬರು ರೈನಾ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಹೇಗೋ ಕಷ್ಟ ಪಟ್ಟು ರೈನಾ ಕೈ ಬಿಡಿಸಿಕೊಂಡು ಅವರನ್ನು ನೂಕಿ ದಾಗ ಒಬ್ಬ ಹುಡುಗ ರೈಲಿನಿಂದ ಹೊರಗೆ ಹೋಗಿ ಬಿದ್ದ. ರೈಲು ತೀರಾ ನಿಧಾನವಾಗಿ ಚಲಿಸುತ್ತಿದ್ದುದರಿಂದ ಆತನಿಗೆ ಹೆಚ್ಚು ಪೆಟ್ಟಾಗಲಿಲ್ಲ. ಇಲ್ಲವಾದರೆ ರೈನಾ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದರು.

ಒಮ್ಮೆ ಹಾಸ್ಟೆಲ್‌ನಿಂದ ಮನೆಗೆ ಬರಬೇಕು ಅಂದುಕೊಂಡಾಗ, ಬಸ್, ಟ್ರೈನ್ ಸಿಗದೇ ಹೆದ್ದಾರಿಯಲ್ಲಿ ನಿಂತು ಲಾರಿಗೆ ಕೈ ತೋರಿಸಿದರು. ಲಾರಿ ನಿಂತಿತು, ರೈನಾ ಅದರೊಳಗೆ ಹತ್ತಿಕೊಂಡರು. ಆದರೆ ಅದರಲ್ಲಿ ಇನ್ನೂ ನಾಲ್ಕೈದು ಜನ ಇದ್ದರು. ಎಲ್ಲರೂ ಪಾನಮತ್ತ ರಾಗಿದ್ದು, ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ರೈನಾ ತಮ್ಮ ಮೊಣಕೈ ನಿಂದ ಕಿಟಕಿಯ ಗಾಜನ್ನು ಗುದ್ದಿ ಒಡೆದು, ಚಲಿಸುತ್ತಿರುವ ಲಾರಿಯಿಂದಲೇ ಹೊರಗೆ ಜಿಗಿದು ಓಡಿ ಬಂದಿದ್ದರು. ಅದೃಷ್ಟವಶಾತ್ ಅವರಿಗೆ ಯಾವುದೇ ದೊಡ್ಡ ಪೆಟ್ಟಾಗಿರಲಿಲ್ಲ.

ರೈನಾ ಕಾಲೇಜಿನಲ್ಲಿರುವಾಗ ಪ್ರತಿನಿತ್ಯ ರ‍್ಯಾಗಿಂಗ್ ನಡೆಯುತ್ತಿತ್ತು. ಕೆಲವೊಮ್ಮೆ ರ‍್ಯಾಗಿಂಗ್ ಅತಿಯಾದಾಗ, ಯಾರ ಬಳಿಯೂ ಹೇಳಿಕೊಳ್ಳಲಾಗದ ರೈನಾ ಒಬ್ಬರೇ ಕುಳಿತು ಅಳುತ್ತಿದ್ದರು. ಒಮ್ಮೆ ರಾತ್ರೋರಾತ್ರಿ ಯಾರಿಗೂ ಹೇಳದೇ ಹಾಸ್ಟೆಲ್‌ನಿಂದ ಮನೆಗೆ ಓಡಿ ಬಂದಿದ್ದರು. ಆಗ ರೈನಾ ಅಣ್ಣ ಅವರಿಗೆ ಸಮಾಧಾನ ಮಾಡಿ, ಯಾವ ಕಾಲಕ್ಕೂ, ಯಾರಿಗೂ ಹೆದರಬೇಡ ಎಂದು ಧೈರ್ಯ ತುಂಬಿದರು.

ರೈನಾ ಜತೆ ಬಂದು, ಶಿಕ್ಷಕರಲ್ಲಿ ಮಾತನಾಡಿ, ದೊಡ್ಡವರು ಸಣ್ಣವರಿಗೆ ಮಾಡುತ್ತಿರುವ ರ‍್ಯಾಗಿಂಗ್ ಬಗ್ಗೆ ತಿಳಿಸಿದರು. ಭರವಸೆ ಸಿಕ್ಕ ನಂತರ ರೈನಾ ಅವರನ್ನು ಪುನಃ ಬಿಟ್ಟು ಬಂದರು. ಅಲ್ಲಿಗೆ ರೈನಾ ಮನಸ್ಸು ಮತ್ತು ದೇಹ ಎರಡೂ ಕಲ್ಲಾಗಿತ್ತು. ಕ್ರಿಕೆಟ್ ಆಡಬೇಕು, ಭಾರತ ತಂಡವನ್ನು ಸೇರಿಕೊಳ್ಳಬೇಕು ಎನ್ನುವುದು ಅವರ ಮನಸ್ಸಿನಲ್ಲಿ ಕಲ್ಲಿನಷ್ಟೇ ಗಟ್ಟಿಯಾಗಿ ಕುಳಿತುಕೊಂಡು ಬಿಟ್ಟಿತು. ಅಲ್ಲಿಂದ ಮುಂದೆ ರೈನಾ ಬದುಕು ಅವರದ್ದಾ ಗಿರಲಿಲ್ಲ, ಭಾರತೀಯ ಕ್ರಿಕೆಟ್ ಪ್ರೇಮಿಗಳದ್ದಾಗಿತ್ತು.

ರೈನಾ ಈಗ ಉದ್ಯಮಿಯಾಗಿದ್ದಾರೆ, ಸಂಸಾರದೊಂದಿಗೆ ಸುಖವಾಗಿದ್ದಾರೆ, ಚಾರಿಟಿ, ತರಬೇತಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅದೂ ಹೇಳಲು ಯೋಗ್ಯವಾದ ವಿಷಯವೇ. ಆದರೆ ಏಕದಿನ, ಟಿ-ಟ್ವೆಂಟಿ, ಅದರಲ್ಲೂ, ಐಪಿಎಲ್ ದಿಗ್ಗಜರ ಪಟ್ಟಿಯಲ್ಲಿ ಗೇಲ್, ಡಿವಿಲಿಯರ್ಸ್, ವಾರ್ನರ್, ಹೇಯ್ಡನ್, ಯುವರಾಜ, ವಿರಾಟ, ರೋಹಿತ್, ಧೋನಿ, ಯಾರ ಹೆಸರನ್ನು ಬೇಕಾದರೂ ಸೇರಿಸಿ, ಆದರೆ ರೈನಾ ಹೆಸರು ಇಲ್ಲದಿದ್ದರೆ ಆ ಪಟ್ಟಿ ಅಪೂರ್ಣ. ರೈನಾ ಈಗ ಐಪಿಎಲ್ ಆಡುತ್ತಿಲ್ಲವಾದರೂ, ಐಪಿಎಲ್ ವಿಷಯದ ಕುರಿತು ಚರ್ಚೆ, ಸಂಭಾಷಣೆ ನಡೆದರೆ ರೈನಾ ನೆನಪಾಗದೇ ಇರುವುದಿಲ್ಲ.