ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sandeep Sharma Column: ಗೆಲುವಿಲ್ಲದ ಇರಾನ್ ಸಂಘರ್ಷ

ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ ಮತ್ತು ಕೇವಲ ಶೇ.41ರಷ್ಟು ಇರುವ ‘ಮಾಗಾ’ ಮತದಾರರು ಮಾತ್ರ ಅಧ್ಯಕ್ಷರ ಯುದ್ಧದ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ. ಉಳಿದ ದೇಶವು ಈ ಯುದ್ಧವನ್ನು ವಿರೋಧಿಸುತ್ತಿದೆ. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಯಲ್ಲಿ ರಿಪಬ್ಲಿಕನ್ ಪಕ್ಷದ ಗೆಲುವಿನ ಸಾಧ್ಯತೆಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ.

ಅಭಿಮತ

ಸಂದೀಪ್‌ ಶರ್ಮಾ

ಇಸ್ರೇಲ್ ಮತ್ತು ಅಮೆರಿಕದ ದಾಳಿಗಳಿಂದ ಇರಾನ್ ಸಂಪೂರ್ಣ ಜರ್ಜರಿತವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸತ್ಯವಷ್ಟೆ. ಇರಾನ್‌ನ ಮಿಲಿಟರಿ ಶಕ್ತಿ, ಪರಮಾಣು ಕೇಂದ್ರಗಳು, ಕ್ಷಿಪಣಿ ನೆಲೆಗಳು ಮತ್ತು ಆಡಳಿತಾತ್ಮಕ ಮೂಲ ಸೌಕರ್ಯಗಳು ನಿಖರವಾದ ಬಾಂಬ್ ದಾಳಿಗಳಿಂದ ಛಿದ್ರಗೊಂಡಿವೆ.

ಇರಾನ್‌ನ ಆಕಾಶವನ್ನು ಅಮೆರಿಕ ಮತ್ತು ಇಸ್ರೇಲ್ ಆಕ್ರಮಿಸಿಕೊಂಡಿವೆ. ತಮ್ಮ ಇಚ್ಛೆ ಯಂತೆ ಆಕ್ರಮಣವನ್ನೂ ಮಾಡುತ್ತಿವೆ. ಆದರೆ, ಇಷ್ಟೆ ಆದರೂ ಅಚ್ಚರಿಯ ರೀತಿಯಲ್ಲಿ ಇರಾನ್ ಪ್ರತಿದಿನ ಜಿಸಿಸಿ ದೇಶ ಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ಮತ್ತು ರಾಕೆಟ್‌ಗಳ ಸುರಿಮಳೆಗೈಯುತ್ತಿದೆ.

ಅಷ್ಟೇ ಅಲ್ಲದೆ, ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿ ತನ್ನ ನಿಯಂತ್ರಣ ಕ್ಕೆ ತೆಗೆದುಕೊಂಡಿದೆ. ತನಗೆ ಬೇಕಾದ ಹಡಗುಗಳನ್ನು ಮಾತ್ರ ಅದು ಸಂಚರಿಸಲು ಬಿಡು ತ್ತಿದೆ. ಅಂದರೆ ಜಗತ್ತಿನ ಶೇ.20ರಷ್ಟು ತೈಲ ಮತ್ತು ಎಲ್‌ʼಎನ್‌ಜಿ ಸಾಗಣೆಯನ್ನು ಅಸ್ತವ್ಯಸ್ತ ಗೊಳಿಸಿದೆ. ಅಷ್ಟಕ್ಕೇ ನಿಲ್ಲದೆ, ದುಬೈ ಅಥವಾ ಬಹರೇನ್‌ನ ವಸತಿ ಸಮುಚ್ಚಯಗಳ ಮೇಲೆ ಆಗೊಮ್ಮೆ ಈಗೊಮ್ಮೆ ಕ್ಷಿಪಣಿ ದಾಳಿ ಮಾಡುವ ಮೂಲಕ ಈ ದೇಶಗಳನ್ನು ಸದಾ ಆತಂಕ ದಲ್ಲಿರಿಸಿದೆ.

ಇರಾನ್ ಧ್ವಂಸವಾಗುತ್ತಿರಬಹುದು. ಆದರೆ, ಸದ್ಯಕ್ಕೆ ಕುಸಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಕಟು ವಾಸ್ತವ ಈಗ ಇಸ್ರೇಲ್ ಮತ್ತು ಅಮೆರಿಕ ಎರಡಕ್ಕೂ ಮನವರಿಕೆಯಾಗಿದೆ. ಹಾಗಾದರೆ ಇಲ್ಲಿನ ಅಸಲಿ ಕಥೆಯೇನು? ಇರಾನ್, ಅಮೆರಿಕ ಮತ್ತು ಜಗತ್ತಿಗೆ ನೀಡುತ್ತಿರುವ ಸಂಕೇತವೇನು? ಇದನ್ನು ಅರ್ಥೈಸಿಕೊಳ್ಳುವ ಮೊದಲು, ಅಮೆರಿಕದ ಸ್ಥಿತಿಗತಿಯನ್ನು ಗಮನಿಸೋಣ.

ಇದನ್ನೂ ಓದಿ: Sandeep Sharma Column: ಪಶ್ಚಿಮ ಏಷ್ಯಾ ಬಿಕ್ಕಟ್ಟು: ಭಾರತದ ಕಾರ್ಯತಂತ್ರದ ಸ್ಪಷ್ಟತೆ

ಅಧ್ಯಕ್ಷ ಟ್ರಂಪ್ ಪ್ರತಿದಿನ ಅಮೆರಿಕದ ವಾಯುಪಡೆಯ ಕಾರ್ಯಾಚರಣೆಯ ಯಶಸ್ಸನ್ನು ಶ್ಲಾಘಿಸುತ್ತಿದ್ದಾರೆ. ಹೌದು, ಅವರು ಹೇಳುವುದು ಸರಿ. ಅಮೆರಿಕವು ಹಿಂದೆಂದೂ ಕಂಡಿರದ ರೀತಿಯಲ್ಲಿ ಅತ್ಯಂತ ನಿಖರವಾದ ಬಾಂಬ್ ದಾಳಿಯನ್ನು ನಡೆಸಿದೆ. ತೆಹ್ರಾನ್, ಇಸಹಾನ್, ಶಿರಾಜ್ ಮತ್ತು ಖಾಗರ್ ದ್ವೀಪದಲ್ಲಿರುವ ತೈಲ ರಫ್ತು ಕೇಂದ್ರಗಳ ಮೇಲೆ ಪದೇ ಪದೆ ದಾಳಿ ಮಾಡಲಾಗಿದೆ. ಆದರೂ, ಪೆಜೆಶ್ಕಿಯಾನ್‌ಗಿಂತ ಹೆಚ್ಚಾಗಿ ಟ್ರಂಪ್ ಅವರ ಮುಖದಲ್ಲಿ ಆತಂಕದ ಗೆರೆಗಳು ಎದ್ದು ಕಾಣುತ್ತಿವೆ.

ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ ಮತ್ತು ಕೇವಲ ಶೇ.41ರಷ್ಟು ಇರುವ ‘ಮಾಗಾ’ ಮತದಾರರು ಮಾತ್ರ ಅಧ್ಯಕ್ಷರ ಯುದ್ಧದ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ. ಉಳಿದ ದೇಶವು ಈ ಯುದ್ಧವನ್ನು ವಿರೋಧಿಸುತ್ತಿದೆ. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಗೆಲುವಿನ ಸಾಧ್ಯತೆಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ.

ಇದೆಲ್ಲದರ ಅರ್ಥವೇನು? ಯುದ್ಧ ಆರಂಭವಾಗಿ ನಾಲ್ಕು ವಾರಗಳು ಕಳೆದರೂ ವಾಸ್ತವ ದಲ್ಲಿ ಏನಾಗುತ್ತಿದೆ? ವಿಶ್ವದ ಅತ್ಯಂತ ಸಂಕೀರ್ಣ ಮತ್ತು ಮಾರಕ ವಾಯು ಕಾರ್ಯಾ ಚರಣೆಯನ್ನು ರೂಪಿಸಿದ ತಂತ್ರಜ್ಞರು, ಕೇವಲ ಆಕಾಶದಿಂದ ನಡೆಸುವ ನಿರಂತರ ದಾಳಿ ಯು ಇರಾನ್ ಅನ್ನು ಮಣಿಸುತ್ತದೆ ಮತ್ತು ಅದು ಶರಣಾಗುತ್ತದೆ ಎಂದು ತಪ್ಪಾಗಿ ಭಾವಿಸಿ ದಂತಿದೆ. ಅವರು ಒಂದು ಮೂಲಭೂತ ಸತ್ಯವನ್ನು ಮರೆತಿದ್ದಾರೆ: ಇರಾನ್ ಭಾರತದ ಅರ್ಧದಷ್ಟು ವಿಸ್ತೀರ್ಣವನ್ನು ಹೊಂದಿದ್ದು, ಪರ್ವತ ಮಯ ಪ್ರದೇಶಗಳಿಂದ ಕೂಡಿದ್ದು ಮತ್ತು ಅದರ ಜನಸಂಖ್ಯಾ ಸಾಂದ್ರ ತೆಯು ಅಮೆರಿಕದ ಕೇವಲ ಮೂರನೇ ಒಂದರಷ್ಟಿದೆ.

ವಾಯುದಾಳಿಗಳು ಶತ್ರುವನ್ನು ದುರ್ಬಲಗೊಳಿಸಬಹುದೇ ಹೊರತು, ಸಂಪೂರ್ಣವಾಗಿ ಸೋಲಿಸಲು ಸಾಧ್ಯವಿಲ್ಲ. ಕಾರ್ಯವನ್ನು ಪೂರ್ಣಗೊಳಿಸಲು ಭೂ ಸೇನೆ ಇಳಿಯಲೇಬೇಕು. ಅಧ್ಯಕ್ಷ ಟ್ರಂಪ್ ಅಂತಹ ಆಯ್ಕೆಯ ಬಗ್ಗೆ ಆಲೋಚಿಸುತ್ತಿದ್ದರೆ, ಅವರ ಸಲಹೆಗಾರರು ಖಂಡಿತವಾಗಿಯೂ 1980ರ ಘಟನೆಯನ್ನು ನೆನಪಿಸಿರುತ್ತಾರೆ.

ಅಂದು ತೆಹ್ರಾನ್‌ನಲ್ಲಿ ಒತ್ತೆಯಾಳುಗಳಾಗಿದ್ದ 53 ಅಮೆರಿಕರನ್ನು ಬಿಡಿಸುವ ಸಾಹಸಮಯ ಕಾರ್ಯಾಚರಣೆಯು ದುರಂತದಲ್ಲಿ ಅಂತ್ಯಗೊಂಡು, ಜಿಮ್ಮಿ ಕಾರ್ಟರ್ ಅವರ ಅಧ್ಯಕ್ಷೀ ಯ ಅವಧಿಯನ್ನೇ ಅಂತ್ಯಗೊಳಿಸಿತ್ತು.‌ ಹಾಗಾದರೆ ಪ್ರಸ್ತುತ ಪ್ರಶ್ನೆಯೆಂದರೆ: ಇರಾನ್ ಶಿಲಾ ಯುಗದ ಸ್ಥಿತಿಗೆ ತಲುಪುವಂತೆ ಬಾಂಬ್ ದಾಳಿಗೆ ಒಳಗಾಗಿದ್ದರೂ, ಅದು ಇನ್ನೂ ಹೇಗೆ ಪಟ್ಟು ಹಿಡಿದು ಕುಳಿತಿದೆ? ಈ ಜಟಿಲ ಪ್ರಶ್ನೆಗೆ ಉತ್ತರ ಸರಳವಾಗಿದೆ. ಯುದ್ಧವನ್ನು ಯಾರು ಬೇಕಾದರೂ ಆರಂಭಿಸಬಹುದು, ಆದರೆ ಅದನ್ನು ಯಾವಾಗ ಮತ್ತು ಹೇಗೆ ಕೊನೆ ಗೊಳಿಸಬೇಕು ಎಂಬುದು ತಿಳಿದಿರಬೇಕು.

ಭಾರತದ ಉದಾಹರಣೆಯನ್ನೇ ತೆಗೆದುಕೊಳ್ಳಿ. ನಾವು ನಮಗೆ ಬೇಕಾದ ಸಮಯದಲ್ಲಿ ಮತ್ತು ಸ್ಥಳದಲ್ಲಿ ‘ಆಪರೇಷನ್ ಸಿಂಧೂರ್’ ಆರಂಭಿಸಿದೆವು ಮತ್ತು ನಮಗೆ ಬೇಕಾದ ರೀತಿಯಲ್ಲಿ ಅದನ್ನು ನಿಲ್ಲಿಸಿದೆವು. ಆ ಅಲ್ಪಾವಧಿಯ ತೀವ್ರ ಸಂಘರ್ಷಕ್ಕೆ ಇಳಿಯುವಾಗ ನಮ್ಮ ಗುರಿಗಳು ಸ್ಪಷ್ಟವಾಗಿದ್ದವು. ಪೆಹಲ್ಗಾಮ್ ಹತ್ಯಾಕಾಂಡದ ರೂವಾರಿಗಳನ್ನು ಶಿಕ್ಷಿಸುವುದು ಮತ್ತು ಪಾಕಿಸ್ತಾನದ ವಾಯುಪಡೆಯನ್ನು ದುರ್ಬಲಗೊಳಿಸುವುದು ನಮ್ಮ ಉದ್ದೇಶ ವಾಗಿತ್ತು.

ನಾವು ಎರಡನ್ನೂ ಸಾಧಿಸಿದೆವು. ಅಂದೂ ಕೂಡ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಬೇಕು ಮತ್ತು ಪಾಕಿಸ್ತಾನಕ್ಕೆ ಶಾಶ್ವತ ಪಾಠ ಕಲಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಆದರೆ, ಯುದ್ಧವನ್ನು ಯಾವಾಗ ನಿಲ್ಲಿಸಬೇಕು ಎಂಬ ವಿವೇಚನೆ ನಮಗಿತ್ತು. ಇಲ್ಲದಿದ್ದರೆ ನಾವು ಯುದ್ಧದ ಸುಳಿಗೆ ಸಿಲುಕುತ್ತಿದ್ದೆವು.

ಅಲ್ಪಾವಧಿಯ, ಚುರುಕಾದ ಯುದ್ಧದ ಈ ಪರಿಕಲ್ಪನೆಯು ಅಮೆರಿಕಕ್ಕೆ ಅರ್ಥವಾದಂತಿಲ್ಲ. ಯುದ್ಧದ ಬಾಗಿಲನ್ನು ಬಡಿಯುವದಷ್ಟೆ ಕಲಿತರು ಮುಚ್ಚುವುದನ್ನು ಕಲಿತೇ ಇಲ್ಲ. ವಿಯೆಟ್ನಾಂ (1955-1975), ಇರಾಕ್ (2003-2011) ಮತ್ತು ಅಫ್ಘಾನಿಸ್ತಾನದಲ್ಲಿ (2001-2021) ಇದೇ ಆಯಿತು. ಈಗ 2026ರಲ್ಲಿ ಇರಾನ್ನಲ್ಲಿಯೂ ಅದೇ ಮರುಕಳಿಸುತ್ತಿದೆ.

ಇತ್ತೀಚೆಗೆ ವೆನೆಜುಲಾದಲ್ಲಿ ನಡೆದದ್ದು ಯುದ್ಧವಲ್ಲ, ಅದು ಸ್ಪಷ್ಟ ಗುರಿಗಳನ್ನು ಹೊಂದಿದ್ದ ವಿಶೇಷ ಪಡೆಗಳ ದಾಳಿಯಾಗಿತ್ತು. ಹಾಗಾಗಿಯೇ ಅದು ಯಶಸ್ವಿಯಾಯಿತು. ಇರಾನಿಯರು ಇಂತಹ ದಾಳಿಯನ್ನು ನಿರೀಕ್ಷಿಸಿ ಸನ್ನದ್ಧರಾಗಿದ್ದರು ಎಂಬುದು ಈಗ ಸ್ಪಷ್ಟ ವಾಗುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿ ಮಾಡಲಿವೆ ಎಂದು ಅವರಿಗೆ ತಿಳಿದಿತ್ತು. ತಮ್ಮ ಆಕಾಶದ ಮೇಲಿನ ನಿಯಂತ್ರಣ ತಪ್ಪುತ್ತದೆ ಮತ್ತು ಪ್ರಮುಖ ನೆಲೆಗಳು ಗುರಿಯಾಗುತ್ತವೆ ಎಂಬ ಅರಿವು ಅವರಿಗಿತ್ತು.

ಹಾಗಾಗಿಯೇ ಅವರು ತಮ್ಮ ಕ್ಷಿಪಣಿ ಲಾಂಚರ್ ಗಳನ್ನು ಭೂಗತ ನೆಲೆಗಳಿಗೆ ಸ್ಥಳಾಂತ ರಿಸಿರಬಹುದು. ಗಾಜಾದಲ್ಲಿ ಹಮಾಸ್ ಸುರಂಗಗಳನ್ನು ನಿರ್ಮಿಸಲು ತಂತ್ರಜ್ಞಾನ ನೀಡಿದ್ದೇ ಇರಾನ್, ಅಂದ ಮೇಲೆ ತನಗಾಗಿ ಅದು ಇನ್ನೂ ಅತ್ಯಾಧುನಿಕ ಭೂಗತ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಿಕೊಂಡಿರುವುದರಲ್ಲಿ ಸಂಶಯವಿಲ್ಲ.

ಪತ್ತೆ ಹಚ್ಚಲಾಗದಂತೆ ಕ್ಷಿಪಣಿ ಲಾಂಚರ್‌ಗಳನ್ನು ಸ್ಥಳಾಂತರಿಸುವ ವ್ಯವಸ್ಥೆ ಅವರ ಬಳಿಯಿದೆ. ಅದಕ್ಕಾಗಿಯೇ ಅವರು ಜಿಸಿಸಿ ದೇಶಗಳ ಮೇಲೆ ನಿರಂತರ ದಾಳಿ ಮಾಡು ತ್ತಿದ್ದಾರೆ. ಆದರೂ, ಆರಂಭದ ಬಾಂಬ್ ದಾಳಿ ಮತ್ತು ಅಯತೊರ ಹತ್ಯೆ ಇರಾನ್ ಅನ್ನು ಅಕ್ಷರಶಃ ಬೆಚ್ಚಿಬೀಳಿಸಿತ್ತು. ಆ ಸಮಯದಲ್ಲಿ ಅಮೆರಿಕವು ಆಡಳಿತ ಬದಲಾವಣೆಯ ಗುರಿ ತಲುಪಲು ಸುಸಂದರ್ಭವಿತ್ತು.

ಆಡಳಿತದ ವಿರುದ್ಧವಿದ್ದ ಇರಾನ್‌ನ ಜನಸಾಮಾನ್ಯರನ್ನು ಪ್ರೋತ್ಸಾಹಿಸಿದ್ದರೆ ಫಲಿತಾಂಶ ವೇ ಬೇರೆಯಾಗಿರುತ್ತಿತ್ತು. ಆದರೆ, ಇಸ್ರೇಲ್‌ನ ಆಲೋಚನೆಯೇ ಬೇರೆಯಾಗಿತ್ತು. ಅವರಿಗೆ ಕೇವಲ ಆಡಳಿತ ಬದಲಾವಣೆ ಸಾಕಾಗಿರಲಿಲ್ಲ, ಇರಾನ್ ಅನ್ನು ಚೂರುಚೂರು ಮಾಡಿ ಅದು ಎಂದಿಗೂ ತಲೆ ಎತ್ತದಂತೆ ಮಾಡುವುದು ಅವರ ಗುರಿಯಾಗಿತ್ತು. ಅಮೆರಿಕ ಕೂಡ ಈ ಹಠಕ್ಕೆ ಬಿದ್ದಂತೆ ಕಂಡುಬಂದಿತು.

ದಾಳಿಗಳು ತೀವ್ರಗೊಂಡವು ಮತ್ತು ಅನಾಮಧೇಯ ಬಾಂಬ್ ದಾಳಿಯೊಂದು ಹೆಣ್ಣು ಮಕ್ಕಳ ಶಾಲೆಯ ಮೇಲೆ ನಡೆಯಿತು. ಇದು ಯುದ್ಧದ ದಿಕ್ಕನ್ನೇ ಬದಲಿಸಿತು. ಕ್ರೂರವಾದ ಇರಾನ್ ಆಡಳಿತದ ಬಗ್ಗೆ ಜಗತ್ತಿನಲ್ಲಿ ಸಹಾನು ಭೂತಿ ಹುಟ್ಟಲು ಶುರುವಾಯಿತು. ಅಯತೊರ ಸಾವನ್ನು ಸಂಭ್ರಮಿಸಿದ್ದ ಪ್ರತಿಭಟನಾಕಾರರು ಕೂಡ ತಮ್ಮ ದೇಶವು ಛಿದ್ರವಾಗುವುದನ್ನು ಸಹಿಸಲಾರದೆ ಮೌನಕ್ಕೆ ಶರಣಾದರು.

ಒಂದು ಅರ್ಥದಲ್ಲಿ, ಅಮೆರಿಕದ ನಿರಂತರ ದಾಳಿಯು ಪತನದ ಅಂಚಿನಲ್ಲಿದ್ದ ಇರಾನ್ ಸರಕಾರಕ್ಕೆ ಹೊಸ ಬಲ ನೀಡಿತು. ಇರಾನ್ ಈಗ ಅಸಮ್ಮಿತ ಯುದ್ಧದ ಮೊರೆ ಹೋಗಿದೆ. ಇರಾನ್ ಪುನರ್ ನಿರ್ಮಾಣಕ್ಕೆ ಹಲವು ವರ್ಷಗಳೇ ಬೇಕಾಗಬಹುದು. ಆದರೆ, ಅದು ಈ ಅಸಮ್ಮಿತ ಯುದ್ಧದ ಮೂಲಕ ಜಿಸಿಸಿ ದೇಶಗಳ ಮೇಲೆ ಒತ್ತಡ ಹೇರಿ, ಭವಿಷ್ಯದಲ್ಲಿ ಅವರಿಂದಲೇ ತನ್ನ ದೇಶದ ನಿರ್ಮಾಣಕ್ಕೆ ಹಣ ಪಡೆಯುವ ತಂತ್ರ ಹೂಡಬಹುದು. ಈ ಯುದ್ಧವು ಬ್ರಿಕ್ಸ್‌ನಂತಹ ಒಕ್ಕೂಟಗಳ ಅಸಹಾಯಕತೆಯನ್ನು ಎತ್ತಿ ತೋರಿಸಿದೆ.

ದಕ್ಷಿಣದ ದೇಶಗಳು ಕೇವಲ ಟಿವಿ ಚರ್ಚೆಗಳಲ್ಲಿ ಮಾತ್ರ ಒಂದಾಗಿವೆ. ಭಾರತವು ಇದೆಲ್ಲ ವನ್ನೂ ಗಮನಿಸುತ್ತಾ, ತನ್ನ ಇಂಧನ ಭದ್ರತೆಗಾಗಿ ಇರಾನ್ ಜತೆ ಪ್ರತ್ಯೇಕ ಮಾತುಕತೆ ನಡೆಸುತ್ತಿದೆ. ಈ ಭೀಕರ ಯುದ್ಧದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್- ದೇಶಗಳು ಭಾರತವನ್ನು ನಂಬಿಕಸ್ಥ ಪಾಲುದಾರ ಎಂದು ಕರೆಯುತ್ತಿರುವುದು ಗಮನಾರ್ಹ.

ಆದರೆ, ಭವಿಷ್ಯವು ಕಠಿಣವಾಗಿದೆ. ಗಲ್ಫ್ ದೇಶಗಳ ಆರ್ಥಿಕತೆ ಕುಸಿದರೆ ಅಲ್ಲಿರುವ ಭಾರತೀಯ ಕಾರ್ಮಿಕರ ಜೀವನ ಮತ್ತು ಭಾರತಕ್ಕೆ ಬರುತ್ತಿದ್ದ ಹಣದ ಹರಿವು ನಿಲ್ಲಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ಈ ಯುದ್ಧದಲ್ಲಿ ಎಲ್ಲರಿಗೂ ನಷ್ಟವೇ. ಇಲ್ಲಿ ಸೋಲಿನ ಗೋಳು ಮಾತ್ರ ಕೇಳಿ‌ ಬರುತ್ತಿದೆಯೇ ಹೊರತು, ವಿಜಯದ ನಾದ ಎಲ್ಲೂ ಕೇಳಿಸುತ್ತಿಲ್ಲ.