ಒಂದೊಳ್ಳೆ ಮಾತು
ಪ್ರಾಚೀನ ಕಾಲದಲ್ಲಿ ಒಬ್ಬ ಬ್ರಾಹ್ಮಣನಿದ್ದನು. ಅವನಿಗೆ ತನ್ನ ಮಗ ಭರತನು ಮಹಾನ್ ವಿದ್ವಾಂಸನಾಗಿ, ವೇದ-ಶಾಸ್ತ್ರಗಳಲ್ಲಿ ಪ್ರವೀಣನಾಗಿ ಸಮಾಜದಲ್ಲಿ ಗೌರವಿಸಲ್ಪಡಬೇಕು ಎಂಬ ಆಸೆಯಿತ್ತು. ಆದರೆ ಭರತನ ನಡವಳಿಕೆಯೇ ವಿಭಿನ್ನವಾಗಿತ್ತು. ತಂದೆ ಎಷ್ಟು ಪ್ರಯತ್ನಿಸಿದರೂ ಭರತನಿಗೆ ಒಂದೂ ಶ್ಲೋಕ ಕಂಠಪಾಠವಾಗುತ್ತಿರಲಿಲ್ಲ. ತಂದೆ ಅವನನ್ನು ಬುದ್ಧಿಮಾಂದ್ಯ ಎಂದು ತಿಳಿದು ಕೈಬಿಟ್ಟರು.
ತಂದೆ-ತಾಯಿಯ ಮರಣದ ನಂತರ ಅಣ್ಣಂದಿರು ಮತ್ತು ಅತ್ತಿಗೆಯರು ಅವನನ್ನು ಮನೆಯ ಆಳಿಗಿಂತ ಕಡೆಯಾಗಿ ನಡೆಸಿಕೊಂಡರು. ಅವನಿಗೆ ಜಡಭರತ ಎಂದು ಹೆಸರಿ ಟ್ಟರು. ಜಡಭರತನಿಗೆ ಮರ್ಯಾದೆ-ಅವಮಾನಗಳ ಹಂಗಿರಲಿಲ್ಲ. ಅವನು ಮೌನವಾಗಿ ತನಗೆ ಸಿಕ್ಕಿದ್ದನ್ನು ತಿಂದು, ಎಲ್ಲಿ ಜಾಗ ಸಿಗುತ್ತದೋ ಅಲ್ಲಿ ಮಲಗುತ್ತಿದ್ದನು. ಅವನಿಗೆ ಸುಖ-ದುಃಖಗಳೆರಡೂ ಒಂದೇ ಆಗಿದ್ದವು. ಮನೆಯವರು ಅವನನ್ನು ಹೊಲ ಕಾಯುವ ಕೆಲಸಕ್ಕೆ ಹಚ್ಚಿದರು.
ಅವನು ಹಗಲು-ರಾತ್ರಿ ಮೌನವಾಗಿ ಹೊಲದ ಬದಿಯಲ್ಲಿ ಕುಳಿತು ಪ್ರಕೃತಿಯನ್ನು ಸವಿಯುತ್ತಾ, ತನ್ನೊಳಗಿನ ಪರಮಾತ್ಮನಲ್ಲಿ ಲೀನನಾಗಿದ್ದನು.
ಇದನ್ನೂ ಓದಿ: Roopa Gururaj Column: ಮಥುರಾ ಎಂಬ ದಿವ್ಯಧಾಮದ ರಹಸ್ಯ
ಒಂದು ದಿನ ಸಿಂಧು ದೇಶದ ರಾಜ ರಾಹುಗಣನು ತತ್ವಜ್ಞಾನದ ಹಸಿವಿನಿಂದ ಪಲ್ಲಕ್ಕಿಯಲ್ಲಿ ಕುಳಿತು ಕಪಿಲ ಮುನಿಗಳ ಆಶ್ರಮಕ್ಕೆ ತೆರಳುತ್ತಿದ್ದನು. ಹಾದಿಯಲ್ಲಿ ಪಲ್ಲಕ್ಕಿ ಹೊರುವ ಒಬ್ಬ ಆಳು ದಣಿವಿನಿಂದ ಕುಸಿದು ಬಿದ್ದನು. ತಕ್ಷಣ ರಾಜನ ಸೈನಿಕರು ಹೊಲದಲ್ಲಿ ಕುಳಿತಿದ್ದ ಸದೃಢ ಕಾಯದ ಜಡಭರತನನ್ನು ಕಂಡು, ಆತನನ್ನು ಬಲವಂತವಾಗಿ ಪಲ್ಲಕ್ಕಿ ಹೊರಲು ಕರೆತಂದರು.
ಜಡಭರತನು ಯಾವುದೇ ಪ್ರತಿರೋಧವಿಲ್ಲದೆ ಪಲ್ಲಕ್ಕಿ ಹೊತ್ತನು. ಆದರೆ ಅವನು ನಡೆಯುವ ರೀತಿ ವಿಚಿತ್ರವಾಗಿತ್ತು. ನೆಲದ ಮೇಲಿರುವ ಸಣ್ಣ ಇರುವೆಗಳಿಗೂ ತನ್ನಿಂದ ನೋವಾಗಬಾರದೆಂದು ಅವನು ಪ್ರತಿ ಹೆಜ್ಜೆಯನ್ನೂ ಜಾಗರೂಕತೆಯಿಂದ ಇಡುತ್ತಿದ್ದನು. ಇದರಿಂದ ಪಲ್ಲಕ್ಕಿ ಅಲುಗಾಡಿ ಒಳಗೆ ಕುಳಿತಿದ್ದ ರಾಜನಿಗೆ ತೊಂದರೆಯಾಯಿತು.
ರಾಜ ಕೋಪದಿಂದ, ಎಲೈ ಮೂರ್ಖನೇ, ನೀನು ಬದುಕಿದ್ದರೂ ಸತ್ತಂತೆ ಇದ್ದೀಯಾ! ನಿನಗೆ ಸರಿಯಾಗಿ ನಡೆಯಲೂ ಬರುವುದಿಲ್ಲವೇ? ಸುಧಾರಿಸಿಕೊಳ್ಳದಿದ್ದರೆ ನಿನಗೆ ಕಠಿಣ ಶಿಕ್ಷೆ ವಿಧಿಸುತ್ತೇನೆ ಎಂದು ಗದರಿಸಿದನು.
ಅಲ್ಲಿಯವರೆಗೆ ಮೌನವಾಗಿದ್ದ ಜಡಭರತ ಮಂದಹಾಸ ಬೀರುತ್ತಾ ಮಹಾನ್ ತತ್ವಜ್ಞಾನಿ ಯಂತೆ ಮಾತನಾಡಿದ ರಾಜನೇ, ಬಲಶಾಲಿ ಅಥವಾ ಅಶಕ್ತ ಎಂಬುದು ಈ ಮಣ್ಣಿನ ದೇಹಕ್ಕೆ ಸಂಬಂಧಿಸಿದ್ದು. ನೀನು ಶಿಕ್ಷಿಸುವ ಬಗ್ಗೆ ಮಾತನಾಡುತ್ತಿರುವುದು ಈ ನಶ್ವರ ದೇಹವನ್ನೇ ಹೊರತು ನನ್ನನ್ನಲ್ಲ. ನಾನು ಈ ದೇಹವಲ್ಲ, ಬದಲಾಗಿ ಅವಿನಾಶಿ ಯಾದ ಆತ್ಮ. ಹೊರುವವನು ಯಾರು? ಹೊರಿಸುವವನು ಯಾರು? ಎಲ್ಲವೂ ಆ ಪರಮಾತ್ಮನ ಮಾಯೆಯಷ್ಟೇ. ಈ ದೇಹದ ಮೇಲಿನ ಮೋಹವೇ ಅಜ್ಞಾನಕ್ಕೆ ಕಾರಣ.
ಈ ಮಾತುಗಳನ್ನು ಕೇಳಿದ ರಾಜ ರಾಹುಗಣನಿಗೆ ವಿದ್ಯುತ್ ಸಂಚಾರವಾದಂತಾಯಿತು. ಈತ ಸಾಮಾನ್ಯ ಮನುಷ್ಯನಲ್ಲ ಎಂದು ಅರಿತ ರಾಜ ತಕ್ಷಣ ಪಲ್ಲಕ್ಕಿಯಿಂದ ಕೆಳಗಿಳಿದು ಜಡಭರತನ ಪಾದಗಳಿಗೆ ಬಿದ್ದನು. ಮಹಾತ್ಮರೇ, ನೀವು ಯಾರು? ದಯವಿಟ್ಟು ನನ್ನನ್ನು ಕ್ಷಮಿಸಿ, ನನಗೆ ಜ್ಞಾನದ ಹಾದಿ ತೋರಿಸಿ ಎಂದು ಬೇಡಿಕೊಂಡನು.
ಜಡಭರತ ತನ್ನ ಪೂರ್ವಜನ್ಮದ ಕಥೆಯನ್ನು ವಿವರಿಸುತ್ತಾ ರಾಜನೇ, ಹಿಂದಿನ ಜನ್ಮದಲ್ಲಿ ನಾನು ಭರತ ಎಂಬ ಚಕ್ರವರ್ತಿಯಾಗಿದ್ದ. ಎಲ್ಲವನ್ನೂ ತ್ಯಜಿಸಿ ತಪಸ್ಸಿಗೆ ಕುಳಿತಾಗ, ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಒಂದು ಜಿಂಕೆಯ ಮರಿಯನ್ನು ರಕ್ಷಿಸಿದೆ. ಕಾಲಕ್ರಮೇಣ ಆ ಜಿಂಕೆಯ ಮೇಲೆ ನನಗೆ ಅತೀವ ಮೋಹವಾಯಿತು.
ಸಾವಿನ ಕ್ಷಣದಲ್ಲಿ ದೇವರ ಬದಲು ಆ ಜಿಂಕೆಯನ್ನೇ ನೆನೆದ ಕಾರಣ, ಮುಂದಿನ ಜನ್ಮದಲ್ಲಿ ಜಿಂಕೆಯಾಗಿ ಹುಟ್ಟಿದೆ. ಆದರೆ ಪೂರ್ವಜನ್ಮದ ಸ್ಮೃತಿಯಿದ್ದ ಕಾರಣ, ಈ ಜನ್ಮದಲ್ಲಿ ನಾನು ಯಾವುದಕ್ಕೂ ಅಂಟಿಕೊಳ್ಳದೆ ‘ಜಡ’ನಂತೆ ನಟಿಸುತ್ತಿದ್ದೇನೆ ಎಂದ.
ಜಡಭರತನು ಮಾತು ಮುಂದುವರಿಸುತ್ತಾ ನಾವು ಧರಿಸಿರುವ ಬಟ್ಟೆಯಂತೆ ಈ ದೇಹ ಬದಲಾಗುತ್ತದೆ, ಆದರೆ ಆತ್ಮ ಶಾಶ್ವತ. ರಾಜ-ಪ್ರಜೆ, ಶ್ರೀಮಂತ-ಬಡವ ಎಂಬ ಭೇದಗಳು ಕೇವಲ ಲೌಕಿಕ. ಎಲ್ಲರಲ್ಲೂ ಇರುವ ಚೈತನ್ಯ ಒಂದೇ ಅದನ್ನು ಗಮನಿಸು. ಒಂದು ಸಣ್ಣ ಪ್ರಾಣಿಯ ಮೇಲಿನ ಮೋಹವೂ ನಮ್ಮನ್ನು ಜನ್ಮ-ಮೃತ್ಯುವಿನ ಸುಳಿಯಲ್ಲಿ ಸಿಲುಕಿಸುತ್ತದೆ. ಆದ್ದರಿಂದ ನಿರ್ಮೋಹಿಯಾಗಿರುವುದೇ ನಿಜವಾದ ಮುಕ್ತಿ ಎಂದು ಉಪದೇಶ ಮಾಡಿದ. ಜಡಭರತನ ಜ್ಞಾನದ ಬೆಳಕಿನಿಂದ ರಾಜ ರಾಹುಗಣನ ಅಹಂಕಾರ ಕರಗಿಹೋಯಿತು.
ಆದ್ದರಿಂದಲೇ ಯಾರನ್ನೂ ಬಾಹ್ಯ ರೂಪದಿಂದ ಅಳೆಯಬೇಡಿ. ನಾವು ಇಂದು ಉಪೇಕ್ಷೆ ಮಾಡಿದವರೇ ನಾಳೆ ನಮ್ಮ ಮುಂದೆ ಹೆಮ್ಮರವಾಗಿ ಬೆಳೆದು ನಮಗೆ ನೆರಳು ನೀಡಬಹುದು. ಎಲ್ಲಕ್ಕಿಂತ ಮಿಗಿಲಾದದ್ದು ಜ್ಞಾನ ಮತ್ತು ಸಂಸ್ಕಾರ ಅದನ್ನು ಗೌರವಿಸುವ ಗುಣ ಬೆಳೆಸಿ ಕೊಳ್ಳೋಣ.