ತಲೆಮಾರು
ಸುರೇಂದ್ರ ಪೈ, ಭಟ್ಕಳ
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? ಎಂಬುದು ನಮ್ಮ ಹಿರಿಯರು ಆಡಿ ಹೋದ ಸಾರ್ವಕಾಲಿಕ ಸತ್ಯದ ಮಾತು. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಈ ಗಾದೆ ಮಾತಿಗೆ ಇನ್ನೊಂದು ಮುಖ ಸಿಕ್ಕಿದೆ. ‘ಗಿಡ ನೇರವಾಗಿ ಬೆಳೆಯಬೇಕಾದರೆ ಅದಕ್ಕೆ ಆಸರೆಯಾಗಿ ನಿಲ್ಲುವ ಕೋಲು ಮೊದಲು ನೇರವಾಗಿರ ಬೇಕು!’ ಹೌದಲ್ಲವೇ? ಇಂದಿನ ಆಧುನಿಕ ಸಮಾಜದಲ್ಲಿ ನಾವೆಲ್ಲರೂ ಆಗಾಗ ಈಗಿನ ಮಕ್ಕಳಿಗೆ ಸಂಸ್ಕಾರವೇ ಇಲ್ಲ, ನೈತಿಕತೆಯೇ ಗೊತ್ತಿಲ್ಲ ಎಂಬ ಮಾತನ್ನು ಕೇಳುತ್ತಿರುತ್ತೇವೆ.
ತಪ್ಪು ಮಾಡಿದ ಮಗುವನ್ನು ‘ಇವರು ಈ ಜನ್ಮದಲ್ಲಿ ಸುಧಾರಿಸುವುದಿಲ್ಲ. ಮುಂದಿನ ಸಲ ಬೋರ್ಡಿಂಗ್ ಸ್ಕೂಲ್ ಸೇರಿಸೋಣ, ಅದರೂ ಬದಲಾಗಬಹುದು, ನಮ್ಮ ಕೈಲಂತೂ ಆಗಲ್ಲ, ಇವರಿಗೆ ಅದುವೇ ಸರಿ’ ಎಂದು ಕೈತೊಳೆದುಕೊಳ್ಳುವ ಪಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಇಂದಿನ ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ‘ಇಂದು ನೈತಿಕ ಶಿಕ್ಷಣದ ಹಾಗೂ ಸಂಸ್ಕಾರ ಬಿತ್ತುವ ತರಬೇತಿ ಮೊದಲು ಬೇಕಾಗಿರುವುದು ಮಕ್ಕಳಿಗಿಂತ, ಅವರ ಹೆತ್ತವರಿಗೆ’ ಬೇಕೆಂದು ಅನಿಸುತ್ತದೆ. ಹಾಗಂತ ಪಾಲಕರಿಗೆ ಸಂಸ್ಕಾರ ಇಲ್ಲವೇ ಎಂದರೆ ಖಂಡಿತವಾಗಿ ಯೂ ಇದೆ. ಆದರೆ ಅದನ್ನು ಅವರ ಹಿರಿಯರಂತೆ ತಮ್ಮ ಮಕ್ಕಳಿಗೆ ದಾಟಿಸುವಲ್ಲಿ ಎಡವುತ್ತಿದ್ದಾರೆ.
ಇದನ್ನೂ ಓದಿ: Surendra Pai Column: ದಿಮಾಗಿ ನಕ್ಸಲ್: ವಿವೇಚನೆ V/s ವಿಧ್ವಂಸಕತೆ ಮೂಲವೇ ಮಿದುಳು
ಒಮ್ಮೆ ತಾಯಿಯೊಬ್ಬಳು ತನ್ನ ಮಗನಿಗೆ ಸಿಹಿ ತಿನ್ನುವ ಅಭ್ಯಾಸ ಜಾಸ್ತಿ ಇದೆ ಎಂದು ಶ್ರೀ ರಾಮಕೃಷ್ಣ ಪರಮಹಂಸರ ಬಳಿ ಕರೆದುಕೊಂಡು ಬಂದು, ಇವನಿಗೆ ಸಿಹಿ ತಿನ್ನಬೇಡ ಎಂದು ಬುದ್ಧಿ ಹೇಳಿ ಎಂದು ಬೇಡಿಕೊಂಡಳು. ರಾಮಕೃಷ್ಣರು, ಇನ್ನೊಂದು ವಾರದ ನಂತರ ಬನ್ನಿ ಎಂದರು. ಒಂದು ವಾರದ ನಂತರ ಬಂದಾಗ ಪರಮಹಂಸರು ಮಗುವಿಗೆ ಪ್ರೀತಿಯಿಂದ, ಮಗನೇ, ಸಿಹಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ತಿನ್ನಬೇಡ ಎಂದರು.
ತಾಯಿ ಆಶ್ಚರ್ಯದಿಂದ, ಇಷ್ಟೇ ಹೇಳುವುದಕ್ಕೆ ಒಂದು ವಾರ ಸಮಯ ಬೇಕಿತ್ತೇ ಮಹಾತ್ಮರೇ? ಎಂದು ಕೇಳಿದಳು. ಅದಕ್ಕೆ ಪರಮಹಂಸರು ನಗುತ್ತಾ, ಅಮ್ಮಾ, ಹೋದ ವಾರ ನನಗೂ ಸಿಹಿ ತಿನ್ನುವ ಅಭ್ಯಾಸ ವಿತ್ತು. ನಾನೇ ಸಿಹಿ ತಿನ್ನುತ್ತಾ ಮಗುವಿಗೆ ತಿನ್ನಬೇಡ ಎಂದರೆ ಅದು ನೈತಿಕವಾಗುವುದಿಲ್ಲ. ಮೊದಲು ನಾನು ಅದನ್ನು ಬಿಟ್ಟು, ಆಮೇಲೆ ಮಗುವಿಗೆ ಹೇಳಿದೆ ಎಂದರು. ಇದರರ್ಥ ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು ಎಂಬ ಸಂಸ್ಕಾರ. ಇದನ್ನೇ ಸಂಸ್ಕೃತ ಶ್ಲೋಕವೊಂದು ‘ಯಾದೃಶಂ ವಪತೇ ಬೀಜಂ, ತಾದೃಶಂ ಲಭತೇ ಫಲಮ್’ ಎನ್ನುತ್ತದೆ.
ಯಾವ ರೀತಿಯ ಬೀಜವನ್ನು ಬಿತ್ತುತ್ತೇವೆಯೋ, ಅದೇ ರೀತಿಯ ಫಲವನ್ನು ಪಡೆಯುತ್ತೇವೆ ಎಂಬುದೇ ಇದರ ತಾತ್ಪರ್ಯ. ಇಂದು ಪಾಲಕರು ಮಕ್ಕಳ ಮನಸ್ಸಿನಲ್ಲಿ ಅತಿಯಾದ ಸ್ಪರ್ಧೆ, ಅಸೂಯೆ ಮತ್ತು ಭೌತಿಕ ಸುಖದ ಬೀಜಗಳನ್ನು ಬಿತ್ತುತ್ತಿದ್ದಾರೆ. ನಿನ್ನ ಪಕ್ಕದ ಮನೆಯವನಿಗಿಂತ ನಿನಗೆ ಒಂದು ಮಾರ್ಕ್ಸ್ ಆದ್ರೂ ಜಾಸ್ತಿ ಬರಬೇಕು ಎಂದು ಕಲಿಸುವ ಪಾಲಕರು, ಸೋಲನ್ನು ಸ್ವೀಕರಿಸುವ ನೈತಿಕ ಧೈರ್ಯವನ್ನು ಮಕ್ಕಳಿಗೆ ತುಂಬುತ್ತಿಲ್ಲ. ಇದರ ಪರಿಣಾಮವಾಗಿ ಸಣ್ಣ ಅಪಜಯಕ್ಕೂ ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ.
ಇಂದಿನ ಪಾಲಕರು ಮಕ್ಕಳಿಗೆ ದುಬಾರಿ ಬಟ್ಟೆ, ಗ್ಯಾಜೆಟ್‌ಗಳು ಮತ್ತು ದೊಡ್ಡ ಶಾಲೆಗಳಲ್ಲಿ ಸೀಟು ಕೊಡಿಸುತ್ತಾರೆ. ಆದರೆ, ಮಕ್ಕಳಿಗೆ ಅತ್ಯಂತ ಅಗತ್ಯವಾಗಿ ಬೇಕಿರುವ ತಮ್ಮ ಸಮಯ ಮತ್ತು ಪ್ರೀತಿ ಯನ್ನು ಕೊಡುವುದಿಲ್ಲ. ಮನೆಯಲ್ಲಿ ತಂದೆ-ತಾಯಿಯೊಂದಿಗೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಗದಿzಗ, ಮಕ್ಕಳು ತಮ್ಮ ಒಂಟಿತನವನ್ನು ದೂರ ಮಾಡಿಕೊಳ್ಳಲು ಹೊರಗಿನ ಪ್ರಪಂಚ ಅಥವಾ ಅಡ್ಡದಾರಿಗಳನ್ನು ಹುಡುಕುತ್ತಾರೆ. ತಪ್ಪು ಸ್ನೇಹಿತರ ಸಹವಾಸ ಮಾಡಿ ಹಾದಿ ತಪ್ಪುತ್ತಾರೆ. ಇನ್ನು ಕುರುಡು ಪ್ರೀತಿ ಮತ್ತು ಅತಿಯಾದ ಸವಲತ್ತುಗಳ ಸರದಿ.
ಮಕ್ಕಳು ಕೇಳಿದ್ದನ್ನೆ ತಕ್ಷಣವೇ ತಂದುಕೊಡುವುದು ಇಂದಿನ ಪಾಲಕರ ದೊಡ್ಡ ತಪ್ಪು. ಮಗುವಿಗೆ ದುಡ್ಡಿನ ಬೆಲೆ ಮತ್ತು ಕಷ್ಟಗಳ ಅರಿವೇ ಆಗದಂತೆ ಬೆಳೆಸಲಾಗುತ್ತದೆ. ಯಾವಾಗ ಮಗುವಿಗೆ ಇಲ್ಲ ಎಂಬ ಶಬ್ದವನ್ನು ಕೇಳುವ ಅಭ್ಯಾಸವಿರುವುದಿಲ್ಲವೋ, ಅವರು ಹಠಮಾರಿಗಳಾಗುತ್ತಾರೆ. ಮುಂದೆ ಜೀವನದಲ್ಲಿ ಸಣ್ಣ ಸೋಲನ್ನು ಅಥವಾ ನಿರಾಕರಣೆಯನ್ನು ಎದುರಿಸಲು ಸಾಧ್ಯವಾಗದೆ ಮಾದಕ ದ್ರವ್ಯಗಳ ದಾಸರಾಗುವುದು ಅಥವಾ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮಾಡುತ್ತಾರೆ. ಮಗು ತಪ್ಪು ಮಾಡಿದಾಗ ಅಥವಾ ಶಾಲೆಯಿಂದ ದೂರು ಬಂದಾಗ ಪಾಲಕರು ತಮ್ಮ ಮಗುವನ್ನು ತಿದ್ದುವ ಬದಲು, ಶಾಲೆಯ ಶಿಕ್ಷಕರನ್ನೇ ದೂಷಿಸುತ್ತಾರೆ.
ಪಾಲಕರ ಈ ರಕ್ಷಣಾತ್ಮಕ ಧೋರಣೆ ಮಗುವಿಗೆ ನಾನು ಏನು ಮಾಡಿದರೂ ನಮ್ಮ ಅಪ್ಪ-ಅಮ್ಮ ನನ್ನನ್ನು ರಕ್ಷಿಸುತ್ತಾರೆ ಎಂಬ ಅಹಂಕಾರವನ್ನು ತರುತ್ತದೆ. ಇದು ಅವರು ದೊಡ್ಡ ತಪ್ಪುಗಳನ್ನು ಮಾಡಲು ಲೈಸೆನ್ಸ್ ಕೊಟ್ಟಂತಾಗುತ್ತದೆ. ಮಕ್ಕಳು ಅನುಕರಣಶೀಲರು. ಮನೆಯಲ್ಲಿ ದಿನಾಲೂ ಜಗಳವಾಡುವ ಪಾಲಕರು, ಹೆಂಡತಿಯನ್ನು ಗೌರವಿಸದ ತಂದೆ, ಹಿರಿಯರನ್ನು ನಿಂದಿಸುವ ತಾಯಿ, ಇವೆಲ್ಲವನ್ನೂ ನೋಡುತ್ತಾ ಬೆಳೆಯುವ ಮಗುವಿನಲ್ಲಿ ನೈತಿಕತೆ ಹೇಗೆ ತಾನೇ ಮೂಡಲು ಸಾಧ್ಯ? ಹಿಂದೆ ಜಂಟಿ ಕುಟುಂಬಗಳಿದ್ದಾಗ ಅಜ್ಜ-ಅಜ್ಜಿಯಂದಿರು ಕಥೆಗಳ ಮೂಲಕ ನೈತಿಕ ಮೌಲ್ಯಗಳನ್ನು ಧಾರೆ ಎರೆಯುತ್ತಿದ್ದರು.
ಇಂದು ವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಸಂಪೂರ್ಣ ಜವಾಬ್ದಾರಿ ಪಾಲಕರ ಮೇಲಿದೆ. ಆದರೆ ಇಂದಿನ ಪಾಲಕರು ಮಕ್ಕಳ ಎದುರೇ ಸುಳ್ಳು ಹೇಳುವುದು (ಉದಾಹರಣೆಗೆ: ಯಾರೋ ಮನೆಗೆ ಬಂದಾಗ ತಂದೆ ಮನೆಯಲ್ಲಿದ್ದೂ ಮಗನ ಕೈಯಲ್ಲಿ ‘ಅಪ್ಪ ಮನೆಯಲ್ಲಿಲ್ಲ’ ಎಂದು ಸುಳ್ಳು ಹೇಳಿಸುವುದು), ಆಫೀಸಿನ ಸಿಟ್ಟನ್ನು ಮನೆಯಲ್ಲಿ ತೋರಿಸುವುದು, ಲಂಚ ಅಥವಾ ಅಡ್ಡದಾರಿಯ ಗಳಿಕೆಯನ್ನು ಹೆಮ್ಮೆಯಿಂದ ಮಾತನಾಡುವುದನ್ನು ಮಾಡುತ್ತಿರುತ್ತಾರೆ.
ಹೀಗಿರುವಾಗ ಮಕ್ಕಳು ಪ್ರಾಮಾಣಿಕತೆಯನ್ನು ಎಲ್ಲಿಂದ ಕಲಿಯಬೇಕು? ‘ಬಿಂಬ ನಕ್ಕರಷ್ಟೇ ಪ್ರತಿಬಿಂಬ ನಗಲು ಸಾಧ್ಯ’ ಎಂಬುದನ್ನು ನಾವು ಮರೆಯಬಾರದು. ಹೆತ್ತವರು ದಿನವಿಡೀ ಮೊಬೈಲ್ ಪರದೆಯ ಮುಂದೆ ಕುಳಿತು, ಮಗುವಿಗೆ ಪುಸ್ತಕ ಓದು ಎಂದರೆ ಅದು ಹೇಗೆ ಸಾಧ್ಯ? ತಂದೆ ತಾಯಿ ಯೊಂದಿಗೆ ಗೌರವದಿಂದ ನಡೆದುಕೊಳ್ಳದಿದ್ದರೆ, ಮಗು ತನಗೆ ಗೌರವ ನೀಡಬೇಕೆಂದು ಬಯಸುವುದು ಹೇಗೆ? ಸಂಸ್ಕಾರ ಎನ್ನುವುದು ಬಾಯಲ್ಲಿ ಹೇಳುವ ಮಂತ್ರವಲ್ಲ, ಅದು ಬದುಕಿ ತೋರಿಸಬೇಕಾದ ದಾರಿ. ಇಂದು ಪಾಲಕರು ಮಕ್ಕಳನ್ನು ‘ಡಿಜಿಟಲ್ ಬೇಬಿಸಿಟ್ಟಿಂಗ್’ ಕ್ರಮದಲ್ಲಿ ಬೆಳೆಸುತ್ತಿದ್ದೇವೆ.
ಮಕ್ಕಳೂ ಊಟ ಮಾಡಿಸಲು, ಅಳು ನಿಲ್ಲಿಸಲು, ತಮ್ಮ ಕೆಲಸಕ್ಕೆ ತೊಂದರೆ ನೀಡಬಾರದೆಂದು ಹೀಗೆ ಎಲ್ಲದ್ದಕ್ಕೂ ಮೊಬೈಲ್ ನೀಡಿ ಕುಳ್ಳಿರಿಸುತ್ತಿದ್ದೇವೆ. ಇದಕ್ಕೂ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳ ಪ್ರತಿಯೊಂದು ಹೆಜ್ಜೆಯನ್ನೂ ತಾವೇ ನಿಯಂತ್ರಿಸಲು ಹೋಗುತ್ತಾರೆ. ಇದನ್ನು ಹೆಲಿಕಾಪ್ಟರ್ ಪೆರೇಟಿಂಗ್ ಎನ್ನುತ್ತೇವೆ. ಮಗುವಿನ ಸುತ್ತ ಸದಾ ಹೆಲಿಕಾಪ್ಟರ್ ತರಹ ಸುತ್ತುತ್ತಾ, ಅವರ ಹೋಂವರ್ಕ್‌ನಿಂದ ಹಿಡಿದು ಸ್ನೇಹಿತರ ಆಯ್ಕೆಯವರೆಗೂ ತಾವೇ ನಿರ್ಧಾರ ತೆಗೆದು ಕೊಳ್ಳುತ್ತಾರೆ. ಇದರಿಂದ ಮಕ್ಕಳಿಗೆ ಸ್ವಂತವಾಗಿ ಯೋಚಿಸುವ ಶಕ್ತಿ, ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ತಪ್ಪುಗಳಿಂದ ಕಲಿಯುವ ನೈತಿಕ ಸ್ಥೆ ರ್ಯವೇ ಇಲ್ಲದಂತಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ವೀವ್ಸ್‌ಗಾಗಿ ಪಾಲಕರು ತಮ್ಮ ಮಕ್ಕಳನ್ನು ವಿಚಿತ್ರವಾಗಿ ನೃತ್ಯ ಮಾಡಿಸುವುದು, ರೀಲ್ಸ್‌ಗಳಲ್ಲಿ ನಟಿಸುವಂತೆ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಹಣ ಮತ್ತು ಪ್ರಸಿದ್ಧಿಗಾಗಿ ಪಾಲಕರೇ ಮಕ್ಕಳ ಬಾಲ್ಯವನ್ನು ಪ್ರದರ್ಶನದ ವಸ್ತುವನ್ನಾಗಿ ಮಾಡುತ್ತಿದ್ದಾರೆ. ಇದರಿಂದ ಮಗುವಿಗೆ ಸಣ್ಣ ವಯಸ್ಸಿನ ‘ನೈತಿಕತೆಗಿಂತ ಪ್ರಸಿದ್ಧಿಯೇ ಮುಖ್ಯ’ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ.
ಮಕ್ಕಳು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಪಾಲಕರನ್ನು ನೋಡಿಯೇ ಕಲಿಯುತ್ತಾರೆ. ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವಾಗ, ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವಾಗ ಅಥವಾ ಸಣ್ಣಪುಟ್ಟ ವಿಷಯಕ್ಕೆ ರಸ್ತೆಯಲ್ಲಿ ಇತರರೊಂದಿಗೆ ಜಗಳವಾಡುವಾಗ ಪಾಲಕರು ತಮ್ಮ ಜೊತೆಯ ಇರುವ ಮಗುವನ್ನು ಮರೆತು ಬಿಡುತ್ತಾರೆ. ಹೆತ್ತವರ ಇಂತಹ ಕಾನೂನುಬಾಹಿರ ಮತ್ತು ಅನಾಗರಿಕ ವರ್ತನೆಯನ್ನು ನೋಡುವ ಮಗು, ನಾವು ಹೇಗೆ ಬೇಕಾದರೂ ಇರಬಹುದು ಎಂದು ಕೊಂಡು ಬೆಳೆಯುತ್ತದೆ.
ಸಾರ್ವಜನಿಕ ಶಿಸ್ತನ್ನು ಪಾಲಕರು ಪಾಲಿಸಿದರೆ ಮಾತ್ರ, ಮಕ್ಕಳು ಸತ್ಪ್ರಜೆಗಳಾಗಲು ಸಾಧ್ಯ. ಇಂದಿನ ಮಕ್ಕಳಿಗೆ ತಮಗೆ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಗೌರವವಾಗಲಿ, ಕೃತಜ್ಞತೆಯಾಗಲಿ ಇರುವುದಿಲ್ಲ. ಇದಕ್ಕೆ ಪಾಲಕರು ಮಕ್ಕಳ ಕೈಗೆ ಎಲ್ಲವನ್ನೂ ಸುಲಭವಾಗಿ ತಲುಪಿಸುವುದೇ ಕಾರಣ. ಮಕ್ಕಳಿಗೆ ಎಲ್ಲವನ್ನೂ ತಟ್ಟೆಯಲ್ಲಿ ಇಟ್ಟು ಕೊಡುವ ಬದಲು, ಪ್ರತಿಯೊಂದು ವಸ್ತುವಿನ ಹಿಂದೆ ಇರುವ ಕಷ್ಟವನ್ನು ತಿಳಿಸಬೇಕು. ಉದಾಹರಣೆಗೆ, ಅನ್ನವನ್ನು ಚೆಲ್ಲುವ ಮಗುವಿಗೆ ರೈತನ ಕಷ್ಟವನ್ನು, ದುಡ್ಡು ವ್ಯರ್ಥ ಮಾಡುವ ಮಗುವಿಗೆ ತಂದೆಯ ಶ್ರಮವನ್ನು ಅರ್ಥ ಮಾಡಿಸಬೇಕು.
ಮಗುವಿಗೆ ಎಲ್ಲವನ್ನೂ ಕೊಡುವ ಮುನ್ನ, ತ್ಯಾಗ ಮತ್ತು ತಾಳ್ಮೆಯನ್ನು ಕಲಿಸುವುದು ಪಾಲಕರ ಜವಾಬ್ದಾರಿ. ಈ ಕೃತಜ್ಞತೆಯ ಸಂಸ್ಕಾರವನ್ನು ಕಲಿಸಲು ಹೆತ್ತವರಿಗೆ ವಿಶೇಷ ಮಾರ್ಗದರ್ಶನದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಣ್ಣ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅಥವಾ ಪ್ರೀತಿಪಾತ್ರರು ಬೈದರೆ ತಕ್ಷಣವೇ ತೀವ್ರ ಖಿನ್ನತೆಗೆ ಒಳಗಾಗುತ್ತಿದ್ದಾರೆ ಅಥವಾ ಆತ್ಮಹತ್ಯೆಯಂತಹ ತಪ್ಪು ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾರಣ ಪಾಲಕರು ಮಕ್ಕಳಿಗೆ ಕೇವಲ ‘ಗೆಲುವನ್ನು ಸಂಭ್ರಮಿ ಸುವುದನ್ನು’ ಕಲಿಸಿದ್ದಾರೆಯೇ ಹೊರತು ‘ಸೋಲನ್ನು ಧೈರ್ಯವಾಗಿ ಎದುರಿಸುವುದನ್ನು’ ಕಲಿಸಿಲ್ಲ.
ಜೀವನದಲ್ಲಿ ಏರಿಳಿತಗಳು ಸಹಜ ಎಂಬುದನ್ನು ಹೆತ್ತವರೇ ತಮ್ಮ ನಡವಳಿಕೆಯ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕಿದೆ. ಮಗುವನ್ನು ನಾವು ಮನೆ ಬೆಳಗುವ ದೀಪ ಎನ್ನುತ್ತೇವೆ. ಆದರೆ ಆ ದೀಪ ಸದಾಕಾಲ ಪ್ರಕಾಶಮಾನವಾಗಿ ಉರಿಯಬೇಕಾದರೆ, ಅದಕ್ಕೆ ಹಾಕುವ ಎಣ್ಣೆ ಶುದ್ಧವಾಗಿರಬೇಕು. ಆ ಎಣ್ಣೆಯೇ ಪಾಲಕರು ನೀಡುವ ಸಂಸ್ಕಾರ ಮತ್ತು ನೈತಿಕತೆ. ತಾಯಿ ಪ್ರೀತಿ ಮತ್ತು ಕರುಣೆಯನ್ನು ಕಲಿಸಿದರೆ, ತಂದೆ ಶಿಸ್ತು ಮತ್ತು ಸಮಾಜದಲ್ಲಿ ಬದುಕುವ ಧೈರ್ಯವನ್ನು ಕಲಿಸಬೇಕು. ಇವೆರಡೂ ಸಮನಾಗಿದ್ದಾಗ ಮಾತ್ರ ಮಗು ಸುಸಂಸ್ಕೃತನಾಗಿ ಬೆಳೆಯಲು ಸಾಧ್ಯ.
ನಾಲಕ್ಕು ಗೋಡೆಗಳ ಮಧ್ಯೆ, ದೊಡ್ಡ ಅಪಾರ್ಟ್ಮೆಂಟ್‌ನಲ್ಲಿ ಮಕ್ಕಳ ಮನಸ್ಸು ಉಲ್ಲಾಸಭರಿತವಾಗಿ ಇರಲು ಸಾಧ್ಯವಿಲ್ಲ. ಪ್ರಕೃತಿಯಿಂದ ದೂರ ಸರಿದಷ್ಟು ಮಾನವರು ದಾನವರಾಗುತ್ತಾ ಸಾಗುತ್ತೇವೆ. ಹಿರಿಯರನ್ನು ಕೇವಲ ಮುದುಕರೆಂದು ಭಾವಿಸುತ್ತೇವೆ. ಭಾವನಾತ್ಮಕ ಬಂಧ ಮರೆಯಾಗುತ್ತದೆ. ಪ್ರಸಿದ್ಧ ಕವಿ ಖಲೀಲ್ ಗಿಬ್ರಾನ್ ಹೇಳುತ್ತಾರೆ, ಮಕ್ಕಳು ಬಾಣಗಳಿದ್ದಂತೆ, ಪಾಲಕರು ಬಿಲ್ಲುಗಳಿದ್ದಂತೆ. ಬಿಲ್ಲು ಎಷ್ಟು ಗಟ್ಟಿಯಾಗಿ, ಸ್ಥಿರವಾಗಿ ಮತ್ತು ಸರಿಯಾದ ದಿಕ್ಕಿನಲ್ಲಿ ಬಾಗುತ್ತದೆಯೋ, ಅಲ್ಲಿಂದ ಹೊರಡುವ ಬಾಣ ಅಷ್ಟೇ ವೇಗವಾಗಿ ಮತ್ತು ನಿಖರವಾಗಿ ಗುರಿಯನ್ನು ತಲುಪುತ್ತದೆ. ಬಿಲ್ಲಿಗೇ ದಿಕ್ಕಿನ ಅರಿವಿಲ್ಲದಿದ್ದರೆ ಬಾಣ ಹಾದಿ ತಪ್ಪುವುದು ಖಚಿತ.