ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಸತ್ತ ಭಾಷೆಗೆ ಜೀವ ತುಂಬಿದ ಇಸ್ರೇಲಿಗರು ನೀಡಿದ ಪಾಠ

ನವೆಂಬರ್ ತಿಂಗಳು ಮುಗಿಯುತ್ತಿದ್ದಂತೆ ನಮ್ಮ ಭಾಷಾಭಿಮಾನವೂ ಗೂಡು ಸೇರುತ್ತದೆ. ಭಾಷೆ ಯನ್ನು ಬದುಕಿನ ಅಗತ್ಯವಾಗಿಸುವ ಬದಲು ಕೇವಲ ಒಂದು ದಿನ, ಹೆಚ್ಚೆಂದರೆ ಒಂದು ತಿಂಗಳ ಸಂಭ್ರಮಕ್ಕೆ ಸೀಮಿತಗೊಳಿಸುವ ನಮ್ಮ ಈ ಆತ್ಮವಂಚನೆಯ ನಡೆವಳಿಕೆಗೆ ಜಾಗತಿಕ ಇತಿಹಾಸದಲ್ಲಿ ಒಂದು ತೀಕ್ಷ ವಾದ ಕನ್ನಡಿಯಿದೆ. ಆ ಕನ್ನಡಿಯೇ ಇಸ್ರೇಲ್ ಮತ್ತು ಅದರ ಹೀಬ್ರೂ ಭಾಷೆಯ ಅಸಾಧಾರಣ ಪುನರುತ್ಥಾನದ ಕತೆ.

ನೂರೆಂಟು ವಿಶ್ವ

ಪ್ರತಿ ನವೆಂಬರ್ ಬಂದಾಗಲೂ ಕರ್ನಾಟಕದ ಬೀದಿ ಬೀದಿಗಳಲ್ಲಿ ಕೆಂಪು-ಹಳದಿ ಬಾವುಟಗಳು ಹಾರಾಡು ತ್ತವೆ, ಧ್ವನಿವರ್ಧಕಗಳಲ್ಲಿ ಕನ್ನಡದ ಹಾಡುಗಳು ಮೊಳಗುತ್ತವೆ. ಕನ್ನಡ ಸಂಘಟನೆಗಳು ಕ್ರಿಯಾಶೀಲ ವಾಗುತ್ತವೆ. ಎಡೆ ಕನ್ನಡದ ಕಹಳೆ ಮೊಳಗುತ್ತವೆ. ಆದರೆ, ಇದೇ ಸಂಭ್ರಮದ ಹಿಂದೆಯೇ ಒಂದು ಕಹಿ ನಡುಕ, ಒಂದು ಆತಂಕ ನಿರಂತರವಾಗಿ ಪ್ರತಿಧ್ವನಿಸುತ್ತದೆ. ಅದೇನೆಂದರೆ, ‘ಕನ್ನಡ ನಾಡಿನಲ್ಲಿ ಕನ್ನಡ ಕ್ಷೀಣಿಸುತ್ತಿದೆ, ನಶಿಸುತ್ತಿದೆ’ ಎಂಬುದು.

ನವೆಂಬರ್ ತಿಂಗಳು ಮುಗಿಯುತ್ತಿದ್ದಂತೆ ನಮ್ಮ ಭಾಷಾಭಿಮಾನವೂ ಗೂಡು ಸೇರುತ್ತದೆ. ಭಾಷೆ ಯನ್ನು ಬದುಕಿನ ಅಗತ್ಯವಾಗಿಸುವ ಬದಲು ಕೇವಲ ಒಂದು ದಿನ, ಹೆಚ್ಚೆಂದರೆ ಒಂದು ತಿಂಗಳ ಸಂಭ್ರಮಕ್ಕೆ ಸೀಮಿತಗೊಳಿಸುವ ನಮ್ಮ ಈ ಆತ್ಮವಂಚನೆಯ ನಡೆವಳಿಕೆಗೆ ಜಾಗತಿಕ ಇತಿಹಾಸದಲ್ಲಿ ಒಂದು ತೀಕ್ಷ ವಾದ ಕನ್ನಡಿಯಿದೆ. ಆ ಕನ್ನಡಿಯೇ ಇಸ್ರೇಲ್ ಮತ್ತು ಅದರ ಹೀಬ್ರೂ ಭಾಷೆಯ ಅಸಾಧಾರಣ ಪುನರುತ್ಥಾನದ ಕತೆ.

ಇತಿಹಾಸದ ಪುಟಗಳನ್ನು ತಿರುವಿದರೆ, ಹೀಬ್ರೂ ಭಾಷೆ ಸುಮಾರು ಹದಿನೇಳು ಶತಮಾನಗಳ ಕಾಲ ಜನರ ನಿತ್ಯ ಬಳಕೆಯ ಆಡುಭಾಷೆಯಾಗಿ ಉಳಿದಿರಲೇ ಇಲ್ಲ. ಕ್ರಿ.ಶ. ಎರಡನೇ ಶತಮಾನದಿಂದ ಹತ್ತೊಂಬತ್ತನೇ ಶತಮಾನದ ಕೊನೆಯವರೆಗೂ ಅದು ಕೇವಲ ಧಾರ್ಮಿಕ ಗ್ರಂಥಗಳಲ್ಲಿ, ಪ್ರಾರ್ಥನಾ ಮಂದಿರಗಳ ಮಂತ್ರ ಗಳಲ್ಲಿ ಮಾತ್ರ ಬದುಕಿದ್ದ ‘ಮೃತ ಭಾಷೆ’ (Dead Language) ಆಗಿತ್ತು. ಜಗತ್ತಿನ ನಾನಾ ಮೂಲೆಗಳಿಗೆ ಚದುರಿ ಹೋಗಿದ್ದ ಯಹೂದಿಗಳು ಜರ್ಮನ್, ರಷ್ಯನ್, ಪೋಲಿಶ್, ಸ್ವೀಡಿಶ್, ಅರೇಬಿಕ್ ಮುಂತಾದ ಬೇರೆ ಬೇರೆ ಭಾಷೆಗಳನ್ನೇ ತಮ್ಮ ಆಡುಭಾಷೆಯನ್ನಾಗಿ ಮಾಡಿಕೊಂಡಿದ್ದರು.

ಇದನ್ನೂ ಓದಿ: Vishweshwar Bhat Column: ಲೇಪಿಸ್ ಲಜುಲಿ

ಸತತ ಹದಿನೇಳು ಶತಮಾನಗಳ ಕಾಲ ಸತ್ತುಹೋಗಿದೆ ಎಂದೇ ಜಗತ್ತು ಭಾವಿಸಿದ್ದ ಭಾಷೆಯನ್ನು ಮತ್ತೆ ಎದ್ದು ನಿಲ್ಲಿಸಿ, ಇಡೀ ರಾಷ್ಟ್ರದ ಜೀವನಾಡಿಯನ್ನಾಗಿ ಪರಿವರ್ತಿಸಿದ್ದು ಮಾನವ ಇತಿಹಾಸದ ಅತಿ ದೊಡ್ಡ ಭಾಷಿಕ ಪವಾಡ. ಈ ಪವಾಡದ ಹಿಂದೆ ಇದ್ದದ್ದು ಎಲಿಯೆಜರ್ ಬೆನ್-ಯೆಹೂದಾ ಎಂಬ ಒಬ್ಬ ವ್ಯಕ್ತಿಯ ಅಚಲ ಸಂಕಲ್ಪ.

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಆತ, ‘ಯಹೂದಿಗಳಿಗೆ ಸ್ವತಂತ್ರ ನೆಲೆ ಬೇಕಾದರೆ, ಅವರಿಗೆ ತಮ್ಮದೇ ಆದ ಒಂದು ಜೀವಂತ ಭಾಷೆ ಬೇಕು’ ಎಂದು ಸಾರಿದ. ಆ ಕಾಲದಲ್ಲಿ ಆಧುನಿಕ ವಿಜ್ಞಾನ, ರೈಲು, ವಿದ್ಯುತ್, ಪತ್ರಿಕೆ ಅಥವಾ ನಿತ್ಯ ಬಳಕೆಯ ಸರಳ ವಸ್ತುಗಳಿಗೂ ಹೀಬ್ರೂ ಭಾಷೆ ಯಲ್ಲಿ ಪದಗಳಿರಲಿಲ್ಲ. ಬೆನ್-ಯೆಹೂದಾ ತನ್ನ ಮನೆಯಲ್ಲಿ ಹೀಬ್ರೂ ಹೊರತುಪಡಿಸಿ ಅನ್ಯಭಾಷೆ ಯನ್ನು ಆಡದಂತೆ ಕಟ್ಟು ನಿಟ್ಟಿನ ಶಪಥ ಮಾಡಿದ.

ತನ್ನ ಮಗನನ್ನು ವಿಶ್ವದ ಮೊಟ್ಟಮೊದಲ ‘ಆಧುನಿಕ ಹೀಬ್ರೂ ಮಾತೃಭಾಷಿಕ’ನನ್ನಾಗಿ ಬೆಳೆಸಿದ. ಪ್ರಾಚೀನ ಬೇರುಗಳಿಂದಲೇ ಸಾವಿರಾರು ನೂತನ ಪಾರಿಭಾಷಿಕ ಶಬ್ದಗಳನ್ನು ಟಂಕಿಸಿ, ಬೃಹತ್ ಶಬ್ದಕೋಶವನ್ನು ರಚಿಸಿ, ಭಾಷೆಯ ಮರುಹುಟ್ಟಿಗೆ ತನ್ನ ಸರ್ವಸ್ವವನ್ನೂ ಧಾರೆಯೆರೆದ. 1948ರಲ್ಲಿ ಇಸ್ರೇಲ್ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿದಾಗ, ಎದುರಾದ ಸವಾಲು ಅಸಾಧಾರಣವಾಗಿತ್ತು.

ವಿಶ್ವದ ಎಪ್ಪತ್ತಕ್ಕೂ ಹೆಚ್ಚು ದೇಶಗಳಿಂದ ವಲಸೆ ಬಂದ ಲಕ್ಷಾಂತರ ಯಹೂದಿಗಳಿಗೆ ಪರಸ್ಪರರ ಭಾಷೆ ಅರ್ಥವಾಗುತ್ತಿರಲಿಲ್ಲ. ಆಗ ಇಸ್ರೇಲ್ ಸರಕಾರ ಕೈಗೊಂಡ ನಿರ್ಧಾರ ಕ್ರಾಂತಿಕಾರಕವಾಗಿತ್ತು. ಅವರು ಯಾವುದೇ ಅನ್ಯಭಾಷೆಯ ಮುಂದೆ ಮಂಡಿಯೂರಲಿಲ್ಲ. ಬದಲಿಗೆ ಹೀಬ್ರೂ ಭಾಷೆಯನ್ನು ದೇಶದ ಏಕೈಕ ಆಡಳಿತ ಮತ್ತು ಏಕೀಕರಣ ಸೂತ್ರವನ್ನಾಗಿ ಘೋಷಿಸಿದರು. ವಲಸಿಗರಿಗೆ ಹೀಬ್ರೂ ಕಲಿಸಲು ‘ಉಲ್ಪಾನ್’ (Ulpan) ಎಂಬ ವಿನೂತನ ಭಾಷಾ ತರಬೇತಿ ಶಾಲೆಗಳನ್ನು ಮನೆ-ಮನೆಗೆ ಹರಡಿದರು.

61 ಕ

ವೈದ್ಯರು, ಎಂಜಿನಿಯರ್ ಗಳು, ವಿಜ್ಞಾನಿಗಳು ಮತ್ತು ಸಾಮಾನ್ಯ ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರೂ ಈ ಕೇಂದ್ರಗಳಲ್ಲಿ ಹೀಬ್ರೂ ಕಲಿಯುವುದು ಕಡ್ಡಾಯವಾಯಿತು. ಇಸ್ರೇಲಿನಲ್ಲಿ ಹೀಬ್ರೂ ಭಾಷೆಗೆ ಅಗ್ರತಾಂಬೂಲ ಎಂಬುದು ಕೇವಲ ಕಾಗದದ ಮೇಲಿನ ಕಾನೂನಲ್ಲ, ಅದೊಂದು ರಾಜಿಯಿಲ್ಲದ ಸಾಮಾಜಿಕ ಒಡಂಬಡಿಕೆ. ಅಲ್ಲಿ ಹೀಬ್ರೂ ಕಲಿಯದೇ ಯಾವುದೇ ಪ್ರಜೆ ಸರಕಾರಿ ನೌಕರಿ ಪಡೆಯಲು, ಬ್ಯಾಂಕ್ ವ್ಯವಹಾರ ನಡೆಸಲು, ನ್ಯಾಯಾಲಯದಲ್ಲಿ ವಾದಿಸಲು ಅಥವಾ ಸಾರ್ವಜನಿಕವಾಗಿ ಬದುಕಲು ಸಾಧ್ಯವೇ ಇಲ್ಲ.

ಎಷ್ಟೇ ದೊಡ್ಡ ಅಂತಾರಾಷ್ಟ್ರೀಯ ತಜ್ಞನಾಗಿದ್ದರೂ ಇಸ್ರೇಲ್ ಸಮಾಜದೊಳಗೆ ಬೆರೆಯಬೇಕಾದರೆ ಅವನು ಹೀಬ್ರೂ ಕಲಿತುಕೊಳ್ಳಲೇಬೇಕು. ಭಾಷೆಯನ್ನು ಬದುಕಿನ ಹಕ್ಕನ್ನಾಗಿ ಮಾಡುವುದರ ಜತೆಗೆ, ಬದುಕಿನ ಪ್ರಮುಖ ಆರ್ಥಿಕ ಅರ್ಹತೆಯನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆ ಇಸ್ರೇಲಿಗರಿಗೆ ಸಲ್ಲುತ್ತದೆ.

ಇಲ್ಲಿ ನಾವು ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಭಾಷಾಭಿಮಾನಕ್ಕೂ ಆಧುನಿಕ ಪ್ರಗತಿಗೂ ಇರುವ ಸಂಬಂಧ. ಜಗತ್ತಿನ ತಲಾ ಅತಿ ಹೆಚ್ಚು ನವೋದ್ಯಮಗಳನ್ನು (Start ups) ಹೊಂದಿರುವ ದೇಶ ಇಸ್ರೇಲ. ಜಗತ್ತು ಅದನ್ನು ‘ಸ್ಟಾರ್ಟ್ -ಅಪ್ ನೇಷನ್’ ಎಂದು ಕರೆಯುತ್ತದೆ. ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ತಂತ್ರಜ್ಞಾನ, ಹನಿ ನೀರಾವರಿ ಮತ್ತು ಅತ್ಯಾಧುನಿಕ ವೈದ್ಯಕೀಯ ಸಂಶೋಧನೆಗಳಲ್ಲಿ ಇಸ್ರೇಲ್ ವಿಶ್ವದ ಮುಂಚೂಣಿಯಲ್ಲಿದೆ. ಆದರೆ ಈ ಎಲ್ಲ ಸಂಶೋಧನೆಗಳು ಮತ್ತು ಉನ್ನತ ಶಿಕ್ಷಣ ಮೊದಲು ನಡೆಯುವುದು ಅವರ ತಾಯ್ನುಡಿ ಹೀಬ್ರೂವಿನಲ್ಲಿ!

ತಂತ್ರಜ್ಞಾನ ಬೆಳೆಯಬೇಕಾದರೆ ಇಂಗ್ಲಿಷ್‌ಗೆ ಶರಣಾಗಬೇಕಿಲ್ಲ ಎಂಬುದನ್ನು ಇಸ್ರೇಲ್ ಜಗತ್ತಿಗೆ ಸಾಬೀತು ಪಡಿಸಿದೆ. ಇಸ್ರೇಲ್ ಸೇನೆಯಾದ ಐಡಿಎಫ್ (ಇಸ್ರೇಲ್ ಡಿಫೆನ್ಸ್‌ ಫೋರ್ಸಸ್) ಕೇವಲ ಗಡಿ ಕಾಯುವ ಪಡೆಯಾಗಿ ಉಳಿಯದೆ, ಭಾಷಾ ಪ್ರಸಾರದ ಪ್ರಬಲ ಶಾಲೆಯಾಗಿ ಕೆಲಸ ಮಾಡಿತು. ಸೇನೆಗೆ ಸೇರಿದ ಪ್ರತಿಯೊಬ್ಬ ಯುವಕ-ಯುವತಿ ಕಡ್ಡಾಯವಾಗಿ ಹೀಬ್ರೂನ ಸಂವಹನ ನಡೆಸಬೇಕಿತ್ತು.

ತುಕಡಿಗಳಲ್ಲಿ ಬೇರೆ ಭಾಷೆ ಮಾತನಾಡುವುದು ಕಟ್ಟುನಿಟ್ಟಿನ ಶಿಸ್ತು ಉಲ್ಲಂಘನೆಯಾಗಿತ್ತು. ಹೀಬ್ರೂ ಸರಿಯಾಗಿ ಬಾರದ ಸೈನಿಕರಿಗೆ ಕಮಾಂಡರ್‌ಗಳು ಭಾಷೆ ಕಲಿಸುತ್ತಿದ್ದರು. ಯುದ್ಧ ತಂತ್ರ, ಶಸಾಸಗಳ ವಿವರಣೆ, ಆದೇಶಗಳು ಎಲ್ಲವೂ ಹೀಬ್ರೂ ಭಾಷೆಯ ಇರುತ್ತಿದ್ದವು. ಇಡೀ ದೇಶದ ರಕ್ಷಣಾ ವ್ಯವಸ್ಥೆಯು ಹೀಬ್ರೂ ಭಾಷೆಯ ಸುತ್ತಲೇ ಹೆಣೆದುಕೊಂಡಿದ್ದರಿಂದ, ವಲಸಿಗ ಯುವಪೀಳಿಗೆಗೆ ಹೀಬ್ರೂ ಕಲಿಯುವುದು ಬದುಕಿನ ಅನಿವಾರ್ಯತೆಯೂ ಆಯಿತು, ಹೆಮ್ಮೆಯ ಲಕ್ಷಣವೂ ಆಯಿತು.

ಜಾಗತಿಕ ಮಾರುಕಟ್ಟೆಯಲ್ಲಿ ಎಷ್ಟೇ ದೈತ್ಯ ಕಂಪನಿಯಾಗಿದ್ದರೂ, ಇಸ್ರೇಲ್ ನೆಲದಲ್ಲಿ ಕಾಲಿಡ ಬೇಕಾದರೆ ಹೀಬ್ರೂ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲೇಬೇಕೆಂಬುದು ಸರಕಾರದ ಸ್ಪಷ್ಟ ಆದೇಶವಾಗಿತ್ತು. ಕೋಕಾ-ಕೋಲಾ ಕಂಪನಿಯು ಇಸ್ರೇಲ್ ಪ್ರವೇಶಿಸಿದಾಗ, ತನ್ನ ಬಾಟಲಿ ಹಾಗೂ ಟಿನ್‌ಗಳ ಮೇಲೆ ಜಾಗತಿಕವಾಗಿ ಪ್ರಸಿದ್ಧವಾದ ಇಂಗ್ಲಿಷ್ ಲೋಗೋ ಜತೆಗೆ ಹೀಬ್ರೂ ಲಿಪಿಯಲ್ಲೂ ‘ಕೋಕಾ-ಕೋಲಾ’ ಎಂದು ಮುದ್ರಿಸಬೇಕೆಂದು ಸರಕಾರ ಆದೇಶಿಸಿತು.

ಜಗತ್ತಿನಾದ್ಯಂತ ತನ್ನದೇ ನಿಯಮಗಳನ್ನು ಹೇರುತ್ತಿದ್ದ ಕೋಕಾ-ಕೋಲಾ, ಆರಂಭದಲ್ಲಿ ಕೇವಲ ಕೆಲವೇ ಲಕ್ಷ ಜನರಿರುವ ಸಣ್ಣ ಮಾರುಕಟ್ಟೆಗಾಗಿ ಈ ನಿಯಮ ಪಾಲಿಸಲು ನಿರಾಕರಿಸಿತು. ಆದರೆ ಇಸ್ರೇಲ್ ಸರಕಾರ, ‘ನಮ್ಮ ಭಾಷೆಗೆ ಗೌರವ ನೀಡದ ಪೇಯ ನಮ್ಮ ಜನರಿಗೆ ಬೇಡವೇ ಬೇಡ’ ಎಂದು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದಾಗ, ಜಾಗತಿಕ ದೈತ್ಯ ಕಂಪನಿಯೇ ಮಣಿದು ಹೀಬ್ರೂ ಲಿಪಿಯಲ್ಲಿ ಮುದ್ರಣ ಆರಂಭಿಸಿತು.

ಕೇವಲ ತಂಪು ಪಾನೀಯಗಳಷ್ಟೇ ಅಲ್ಲ, ಜಾಗತಿಕ ತಂತ್ರಜ್ಞಾನ ದಿಗ್ಗಜರಾದ ಮೈಕ್ರೋಸಾಫ್ಟ್, ಗೂಗಲ್, ಆಪಲ, ಸ್ಯಾಮ್ಸಂಗ್ ಮುಂತಾದ ಕಂಪನಿಗಳು ಇಸ್ರೇಲ್‌ನಲ್ಲಿ ಯಾವುದೇ ಗ್ಯಾಜೆಟ್, ಮೊಬೈಲ್ ಅಥವಾ ಸಾಫ್ಟ್‌ʼವೇರ್ ಬಿಡುಗಡೆ ಮಾಡಿದರೂ ಅವುಗಳಲ್ಲಿ ಹೀಬ್ರೂ ಇಂಟರ್ʼಫೇಸ್ ಇರಲೇಬೇಕು. ಇಸ್ರೇಲ್‌ನ ಮಾರುಕಟ್ಟೆ ಸಣ್ಣದಾದರೂ, ಅಲ್ಲಿನ ಕಾನೂನುಗಳು ಹಾಗೂ ಜನರ ಭಾಷಾ ಪ್ರಜ್ಞೆ ಅತ್ಯಂತ ದೃಢವಾಗಿರುವುದರಿಂದ ಅಂತಾರಾಷ್ಟ್ರೀಯ ಕಂಪನಿಗಳು ಹೀಬ್ರೂ ಭಾಷಾ ಬೆಂಬಲವನ್ನು (Right- to- Left ಲಿಪಿಯ ಸಂಕೀರ್ಣತೆಯ ನಡುವೆಯೂ) ಮೊದಲ ಆದ್ಯತೆಯಾಗಿ ಅಭಿವೃದ್ಧಿಪಡಿಸುತ್ತವೆ.

ಜಗತ್ತಿನ ಯಾವುದೇ ಪ್ರಸಿದ್ಧ ಕಾರು ಕಂಪನಿಯು ತನ್ನ ಕಾರುಗಳನ್ನು ಇಸ್ರೇಲ್‌ಗೆ ರಫ್ತು ಮಾಡು ವಾಗ, ಡ್ಯಾಶ್‌ಬೋರ್ಡ್ ಪರದೆಗಳು ಮತ್ತು ಕೈಪಿಡಿಗಳು ಹೀಬ್ರೂ ಭಾಷೆಯ ಇರುವುದನ್ನು ಖಾತರಿಪಡಿಸಿ ಕೊಳ್ಳುತ್ತವೆ. ಅಂತಾರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಮಾಧ್ಯಮ ರಂಗದಲ್ಲೂ ಇಸ್ರೇಲಿಗರ ಸ್ವಾಭಿಮಾನ ಎದ್ದು ಕಾಣುತ್ತದೆ.

ನ್ಯಾಷನಲ್ ಜಿಯಾಗ್ರಾಫಿಕ್, ಟೈಮ್, ನ್ಯೂಸ್‌ವೀಕ್, ದಿ ಎಕನಾಮಿ, ಫೋರ್ಬ್ಸ್ ಮುಂತಾದ ಜಾಗತಿಕ ಮಟ್ಟದ ಉನ್ನತ ನಿಯತಕಾಲಿಕೆಗಳು ಹೀಬ್ರೂ ಭಾಷೆಯ ಪ್ರತ್ಯೇಕ ಆವೃತ್ತಿಗಳನ್ನು ಪ್ರಕಟಿಸುತ್ತವೆ. ಈ ಪತ್ರಿಕೆಗಳು ಕೇವಲ ಇಂಗ್ಲಿಷ್ ಲೇಖನಗಳನ್ನು ಯಥಾವತ್ತಾಗಿ ಅನುವಾದಿಸುವುದಿಲ್ಲ, ಜಾಗತಿಕ ಆಗುಹೋಗುಗಳನ್ನು ಇಸ್ರೇಲ್ ಹಾಗೂ ಯಹೂದಿ ದೃಷ್ಟಿಕೋನದಿಂದ ವಿಶ್ಲೇಷಿಸುವ ಸ್ವತಂತ್ರ ಹೀಬ್ರೂ ಸಂಪಾದಕೀಯ ಮಂಡಳಿಗಳನ್ನೇ ಹೊಂದಿವೆ.

ಜಗತ್ತಿನ ಶ್ರೇಷ್ಠ ಜ್ಞಾನ, ವಿಜ್ಞಾನ ಹಾಗೂ ರಾಜಕೀಯ ವಿಶ್ಲೇಷಣೆಗಳು ತಮ್ಮ ಸ್ವಂತ ಭಾಷೆಯ ಜನರಿಗೆ ತಲುಪಬೇಕು ಎಂಬ ಇಸ್ರೇಲಿಗರ ಬೇಡಿಕೆಯೇ ಈ ಜಾಗತಿಕ ನಿಯತಕಾಲಿಕೆಗಳು ಹೀಬ್ರೂ ನಲ್ಲಿ ಮುದ್ರಣಗೊಳ್ಳಲು ಮುಖ್ಯ ಕಾರಣವಾಗಿದೆ. ಹಾಗೆಂದು ಇಸ್ರೇಲಿಗರು ಸಂಕುಚಿತ ಮನೋ ಭಾವದವರಲ್ಲ ಅಥವಾ ಜಾಗತಿಕ ಪ್ರಪಂಚದಿಂದ ಮುಖ ತಿರುಗಿಸಿಕೊಂಡವರಲ್ಲ.

ಜಾಗತಿಕ ಮಾರುಕಟ್ಟೆ, ರಫ್ತು ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳಿಗಾಗಿ ಅವರು ಅಂತಾರಾಷ್ಟ್ರೀಯ ಸಂಪರ್ಕ ಭಾಷೆಯಾದ ಇಂಗ್ಲಿಷನ್ನು ಅತ್ಯಂತ ನಿರರ್ಗಳವಾಗಿ, ಸಮರ್ಥವಾಗಿ ಬಳಸುತ್ತಾರೆ. ಆದರೆ ಆ ಇಂಗ್ಲಿಷ್ ಕೇವಲ ವ್ಯವಹಾರದ ಕಿಟಕಿಯಷ್ಟೇ. ಅದು ಅವರ ಮನೆಯ ಮಾಲೀಕನಾಗಲು ಅವರು ಎಂದಿಗೂ ಬಿಡುವುದಿಲ್ಲ.

ಗಡಿಯಾಚೆಗೆ ಇಂಗ್ಲಿಷ್ ಬಳಸುವ ಅದೇ ತಂತ್ರಜ್ಞ, ಗಡಿಯೊಳಗೆ ಬರುತ್ತಿದ್ದಂತೆ ತನ್ನ ಹೀಬ್ರೂ ಭಾಷೆಯ ಬೇರುಗಳಿಗೆ ಅಷ್ಟೇ ನಿಷ್ಠೆಯಿಂದ ಮರಳುತ್ತಾನೆ. ಈ ಸ್ಪಷ್ಟ ಪ್ರತ್ಯೇಕತೆ ಅವರ ಯಶಸ್ಸಿನ ಮೂಲ ರಹಸ್ಯ. ಈಗ ಹೀಬ್ರೂವಿನ ಈ ಕ್ರಾಂತಿಕಾರಕ ಇತಿಹಾಸದ ಎದುರು ನಮ್ಮ ಕರ್ನಾಟಕವನ್ನು ನಿಲ್ಲಿಸಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕನ್ನಡವು ಹೀಬ್ರೂವಿನಂತೆ ಎಂದೂ ಸತ್ತ ಭಾಷೆಯಲ್ಲ.

ಇದು ಎರಡು ಸಾವಿರ ವರ್ಷಗಳಿಗೂ ಮೀರಿದ ಅಖಂಡ ಸಾಹಿತ್ಯಿಕ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಅಮೃತ ಭಾಷೆ. ಕವಿರಾಜಮಾರ್ಗದಿಂದ ಹಿಡಿದು ವಚನಕಾರರು, ದಾಸರು, ಪಂಪ-ರನ್ನರಿಂದ ಇಂದಿನವರೆಗೂ ಸತತವಾಗಿ ಜೀವಂತವಾಗಿರುವ ಭಾಷೆ. ಎಂಟು ಜ್ಞಾನಪೀಠ ಪ್ರಶಸ್ತಿ ಗಳನ್ನು ತನ್ನ ಮುಡಿಗೇರಿಸಿಕೊಂಡ ಶ್ರೀಮಂತ ನುಡಿ. ಆದರೂ ಇವತ್ತು ನಮ್ಮ ತಾಯ್ನಾಡಿನ ನಾವು ‘ಕನ್ನಡ ಉಳಿಸಿ’ ಎಂದು ಅಂಗಲಾಚುವ ಪರಿಸ್ಥಿತಿ ಬಂದಿರುವುದು ಅತ್ಯಂತ ದಾರುಣ ಮತ್ತು ವಿಪರ್ಯಾಸದ ಸಂಗತಿ.

ನಮ್ಮ ಇಂದಿನ ದಯನೀಯ ದುಃಸ್ಥಿತಿಗೆ ಮೂಲ ಕಾರಣ ಕನ್ನಡಿಗರಾದ ನಮ್ಮ ಮನೆ ಮಾಡಿರುವ ಕೀಳರಿಮೆ ಮತ್ತು ಅಂಧ ಅನುಕರಣೆ. ಮಕ್ಕಳ ಶಿಕ್ಷಣ ಎಂದರೆ ಕೇವಲ ಇಂಗ್ಲಿಷ್ ಮಾಧ್ಯಮ ಮಾತ್ರ ಎಂಬ ಭ್ರಮೆ ನಮ್ಮ ಮನಸ್ಸುಗಳಲ್ಲಿ ಆಳವಾಗಿ ಬೇರೂರಿದೆ. ಮನೆಯೊಳಗೆ ಕನ್ನಡದಲ್ಲಿ ಮಾತನಾ ಡುವುದನ್ನು ಹಳ್ಳಿಗಾಡಿನ ಲಕ್ಷಣವೆಂದೂ, ಇಂಗ್ಲಿಷಿನಲ್ಲಿ ತೊದಲಿಸುವುದನ್ನು ಪ್ರತಿಷ್ಠೆಯ ಸಂಕೇತ ವೆಂದೂ ಭಾವಿಸುವ ಮಾನಸಿಕ ದಾಸ್ಯ ನಮ್ಮನ್ನು ಆವರಿಸಿದೆ.

ಇಂಗ್ಲಿಷನ್ನು ಕೇವಲ ಜ್ಞಾನಾರ್ಜನೆಯ ಒಂದು ಸಂಪರ್ಕ ಸಾಧನವಾಗಿ ಕಲಿಯುವ ಬದಲು, ಅದನ್ನೇ ನಮ್ಮ ಸಂಸ್ಕೃತಿಯನ್ನಾಗಿ ಮಾಡಿಕೊಂಡು ನಮ್ಮ ಸ್ವಂತ ನಾಲಗೆಯನ್ನೇ ನಾವು ಪರಕೀಯ ಗೊಳಿಸುತ್ತಿದ್ದೇವೆ. ಕರ್ನಾಟಕದ ರಾಜಧಾನಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ವ್ಯಾಲಿ ಎಂದು ಖ್ಯಾತಿ ಗಳಿಸಿದೆ. ಆದರೆ ಈ ಆರ್ಥಿಕ ಬೆಳವಣಿಗೆಯ ಜತೆಜತೆಗೆ ಕನ್ನಡ ಭಾಷೆ ತನ್ನದೇ ರಾಜಧಾನಿಯಲ್ಲಿ ದ್ವಿತೀಯ ದರ್ಜೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಹೊರಗಿನಿಂದ ಬಂದು ಇಲ್ಲಿ ಅನ್ನ, ಆಶ್ರಯ, ಉದ್ಯೋಗ ಕಂಡುಕೊಂಡ ಲಕ್ಷಾಂತರ ಜನರಿಗೆ ಕನ್ನಡ ಕಲಿಯುವ ಯಾವುದೇ ಅನಿವಾರ್ಯತೆ ಇಂದು ಉಳಿದಿಲ್ಲ.

‘ಕನ್ನಡ ಬರದಿದ್ದರೂ ಬೆಂಗಳೂರಿನಲ್ಲಿ ದಶಕಗಳ ಕಾಲ ಸುಖವಾಗಿ ಬದುಕಬಹುದು’ ಎಂಬ ವಾತಾವರಣವನ್ನು ನಾವೇ ಪ್ರೀತಿಯ ಹೆಸರಿನಲ್ಲಿ ಸೃಷ್ಟಿಸಿಕೊಟ್ಟಿದ್ದೇವೆ. ನಮ್ಮ ಅತಿಯಾದ ಔದಾರ್ಯವೇ ಇಂದು ನಮ್ಮ ಭಾಷೆಯ ಕುತ್ತಿಗೆಗೆ ಕುಣಿಕೆಯಾಗುತ್ತಿದೆ. ಭಾಷೆ ಕೇವಲ ಭಾವನಾತ್ಮಕ ವಿಷಯವಾಗಿ ಉಳಿದರೆ ಅದು ದೀರ್ಘಕಾಲ ಬದುಕಲು ಸಾಧ್ಯವಿಲ್ಲ. ಭಾಷೆಗೆ ಅನ್ನ ಕೊಡುವ, ಬದುಕು ಕಟ್ಟಿಕೊಡುವ ಆರ್ಥಿಕ ಶಕ್ತಿಯಿರಬೇಕು.

ಇಸ್ರೇಲ್ ಹೀಬ್ರೂ ಭಾಷೆಯನ್ನು ಅನ್ನದ ಭಾಷೆಯನ್ನಾಗಿ, ಸಂಪತ್ತಿನ ಭಾಷೆಯನ್ನಾಗಿ ರೂಪಿಸಿತು. ಆದರೆ ನಾವು ಕನ್ನಡವನ್ನು ಉದ್ಯೋಗ, ಆಡಳಿತ ಮತ್ತು ಮಾರುಕಟ್ಟೆಯಿಂದ ದೂರವಿಟ್ಟಿದ್ದೇವೆ. ಬ್ಯಾಂಕಿಂಗ್, ಐಟಿ, ಕಾರ್ಪೊರೇಟ್ ವಲಯ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಕ್ಕೆ ಸ್ಥಾನವಿಲ್ಲ ದಂತಾಗಿದೆ.

ಎಲ್ಲಿಯವರೆಗೆ ಒಬ್ಬ ಸಾಮಾನ್ಯ ಯುವಕನಿಗೆ ‘ಕನ್ನಡ ಕಲಿತರೆ, ಕನ್ನಡದ ಓದಿದರೆ ನನಗೆ ಉತ್ತಮ ಉದ್ಯೋಗ ಸಿಗುತ್ತದೆ’ ಎಂಬ ಭರವಸೆ ಸಿಗುವುದಿಲ್ಲವೋ, ಅಲ್ಲಿಯವರೆಗೆ ಕನ್ನಡದ ಉಳಿವು ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕನ್ನಡ ನಾಡಿನ ಸ್ಥಿತಿಯನ್ನು ತುಲನೆ ಮಾಡಿ ನೋಡಿದರೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಸಂಗ ಎದುರಾಗುತ್ತದೆ.

ಕರ್ನಾಟಕದ ಜನಸಂಖ್ಯೆ ಸುಮಾರು ಏಳು ಕೋಟಿಗೂ ಅಧಿಕ. ಅಂದರೆ ಇಸ್ರೇಲ್‌ನ ಒಟ್ಟು ಜನಸಂಖ್ಯೆಗಿಂತ (ಸುಮಾರು ತೊಂಬತ್ತು ಲಕ್ಷ) ಸುಮಾರು ಎಂಟು ಪಟ್ಟು ದೊಡ್ಡದಾದ ಮಾರುಕಟ್ಟೆ ನಮ್ಮದು. ಎರಡು ಸಾವಿರ ವರ್ಷಗಳ ಭವ್ಯ ಸಾಹಿತ್ಯಿಕ ಪರಂಪರೆ, ಶಾಸ್ತ್ರೀಯ ಭಾಷಾ ಸ್ಥಾನಮಾನ, ಅಪಾರ ಶಬ್ದಸಂಪತ್ತು ಹಾಗೂ ಸಮೃದ್ಧ ಸಂಸ್ಕೃತಿ ನಮ್ಮ ಕನ್ನಡಕ್ಕಿದೆ. ಆದರೂ ನಮ್ಮ ನೆಲದ ಕಾರ್ಯನಿರ್ವಹಿಸುವ ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕುಗಳು ಅಥವಾ ಸಾಫ್ಟ್‌ʼವೇರ್ ಸಂಸ್ಥೆಗಳು ಕನ್ನಡವನ್ನು ಬಳಸಲು ಹಿಂದೇಟು ಹಾಕುತ್ತಿವೆ ಎಂದರೆ, ಕೊರತೆ ಇರುವುದು ನಮ್ಮ ಭಾಷೆಯಲ್ಲಲ್ಲ, ನಮ್ಮ ಇಚ್ಛಾಶಕ್ತಿಯಲ್ಲಿ ಮತ್ತು ಆಡಳಿತಾತ್ಮಕ ದೃಢತೆಯಲ್ಲಿ.

ಇಸ್ರೇಲ್ ನ ಯಶಸ್ಸು ನಮಗೆ ಕಲಿಸುವ ಬಹುದೊಡ್ಡ ಪಾಠವೆಂದರೆ, ಮಾರುಕಟ್ಟೆಯನ್ನು ಶರಣಾಗಿಸುವ ಶಕ್ತಿ ಗ್ರಾಹಕನ ಮತ್ತು ಆಡಳಿತಗಾರನ ಕೈಯಲ್ಲಿದೆ ಎಂಬುದು. ನಮ್ಮ ರಾಜ್ಯದಲ್ಲಿ ವ್ಯಾಪಾರ ಮಾಡುವ ಯಾವುದೇ ಕಂಪನಿಯಾಗಲಿ, ಉತ್ಪನ್ನಗಳ ಮೇಲಿನ ವಿವರಣೆ, ಬಿಲ, ಮೊಬೈಲ್ ಆಪ್ ಹಾಗೂ ಗ್ರಾಹಕ ಸೇವೆಯನ್ನು ಕನ್ನಡದ ನೀಡಬೇಕೆಂದು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದರೆ ಯಾವ ಕಂಪನಿಯೂ ಕರ್ನಾಟಕವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ.

ಎಂಟು ಪಟ್ಟು ಸಣ್ಣದಾದ ದೇಶಕ್ಕೆ ಕೋಕಾ-ಕೋಲಾ, ಮೈಕ್ರೋಸಾಫ್ಟ್‌ʼಗಳು ತಲೆಬಾಗುತ್ತವೆ ಎಂದಾದರೆ, ಏಳು ಕೋಟಿ ಜನರಿರುವ ಕರ್ನಾಟಕಕ್ಕೆ ಮಣಿಯದಿರಲು ಹೇಗೆ ಸಾಧ್ಯ? ಆದರೆ ಅದಕ್ಕೆ ಕೇವಲ ನಾಮಫಲಕಗಳ ಹೋರಾಟವಷ್ಟೇ ಸಾಲದು, ಸರಕಾರಕ್ಕೆ ಸ್ಪಷ್ಟ ಭಾಷಾ ನೀತಿ, ಉನ್ನತ ಆಡಳಿತಾತ್ಮಕ ಬದ್ಧತೆ ಹಾಗೂ ರಾಜಕೀಯ ಇಚ್ಛಾಶಕ್ತಿ ಅತ್ಯಗತ್ಯ. ಕನ್ನಡ ನಾಡಿನಲ್ಲಿ ಭಾಷಾಭಿ ಮಾನ ಎಂಬುದು ನವೆಂಬರ್ ತಿಂಗಳ ಜಾತ್ರೆ ಅಥವಾ ಕೇವಲ ಹೋರಾಟಗಾರರ ಅರಚಾಟ ಎಂಬಂತೆ ಬಿಂಬಿತವಾಗಿರುವುದು ಇನ್ನೊಂದು ದುರಂತ.

ರಾಜಕೀಯ ನಾಯಕರಿಗೆ ಕನ್ನಡ ಕೇವಲ ಮತಗಳಿಕೆಯ ಭಾವನಾತ್ಮಕ ಅಸವಾಗಿದೆ. ಕನ್ನಡದ ಶಾಲೆಗಳು ಮೂಲಸೌಕರ್ಯಗಳಿಲ್ಲದೇ ಮುಚ್ಚಿಹೋಗುತ್ತಿವೆ, ಕನ್ನಡ ಪ್ರಾಧಿಕಾರಗಳ ಶಿಫಾರಸುಗಳು ಕಡತಗಳಲ್ಲಿ ಧೂಳು ತಿನ್ನುತ್ತಿವೆ. ಸರಕಾರಿ ಕಚೇರಿಗಳಲ್ಲೂ ಕನ್ನಡ ಕಡತಗಳು ಇಂಗ್ಲಿಷ್ ಟಿಪ್ಪಣಿ ಗಳಿಗೆ ಕಾಯುತ್ತಿವೆ. ಕಟ್ಟುನಿಟ್ಟಾದ ಭಾಷಾ ನೀತಿಯನ್ನು ಜಾರಿಗೆ ತರಲು ಬೇಕಾದ ರಾಜಕೀಯ ಇಚ್ಛಾಶಕ್ತಿಯಾಗಲಿ, ಅದನ್ನು ದೃಢವಾಗಿ ಅನುಷ್ಠಾನಗೊಳಿಸುವ ಆಡಳಿತಾತ್ಮಕ ಬದ್ಧತೆಯಾಗಲಿ ನಮ್ಮಲ್ಲಿ ಕಾಣಸಿಗುತ್ತಿಲ್ಲ.

ಇಸ್ರೇಲಿನಿಂದ ನಾವು ಕಲಿಯಬೇಕಾದ ಪ್ರಮುಖ ಪಾಠವೆಂದರೆ-ತನ್ನ ಭಾಷೆಯೊಂದಿಗೆ ರಾಜಿ ಮಾಡಿ ಕೊಳ್ಳದ ಸ್ವಾಭಿಮಾನ. ಆ ದೇಶದಲ್ಲಿ ಅನ್ಯಭಾಷಿಕರು ಬಂದಾಗ ಅವರು ಹೀಬ್ರೂ ಕಲಿಯಲೇ ಬೇಕಾದ ಪರಿಸರವನ್ನು ಸೃಷ್ಟಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಕನ್ನಡಿಗನೇ ಅನ್ಯಭಾಷಿಕನಿಗೆ ಅನುಕೂಲ ವಾಗುವಂತೆ ಹಿಂದಿ ಅಥವಾ ಇಂಗ್ಲಿಷಿಗೆ ಜಾರಿಬಿಡುತ್ತಾನೆ.

ನಮ್ಮ ನೆಲದ ನಾವು ನಮ್ಮ ಭಾಷೆಯನ್ನು ಬದಿಗೊತ್ತುವ ಈ ‘ಔದಾರ್ಯ ರೋಗ’ ಭಾಷಾ ಪ್ರೇಮ ವಲ್ಲ, ಅದು ಆತ್ಮಹತ್ಯಾತ್ಮಕ ನಡೆವಳಿಕೆ. ಬೇರೆಯವರ ಭಾಷೆಯನ್ನು ಗೌರವಿಸುವುದು ಸಂಸ್ಕೃತಿ, ಆದರೆ ನಮ್ಮ ಭಾಷೆಯನ್ನೇ ಬಲಿಕೊಟ್ಟು ಪರರ ಭಾಷೆಯನ್ನು ನೆತ್ತಿಯ ಮೇಲೆ ಹೊರುವುದು ದಾಸ್ಯ. ಕನ್ನಡವನ್ನು ಪುನರುಜ್ಜೀವನಗೊಳಿಸುವುದು ಎಂದರೆ ಇಂಗ್ಲಿಷನ್ನು ದ್ವೇಷಿಸುವುದಲ್ಲ.

ಜಾಗತಿಕ ಜ್ಞಾನಕ್ಕೆ ಇಂಗ್ಲಿಷ್ ಕಿಟಕಿಯಾಗಿರಲಿ, ಆದರೆ ನಮ್ಮ ಅಸ್ತಿತ್ವದ ಬಾಗಿಲು ಮತ್ತು ಮನೆಯ ನೆಲ ಕನ್ನಡವೇ ಆಗಿರಬೇಕು. ವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್, ಕೃತಕ ಬುದ್ಧಿಮತ್ತೆ ಮತ್ತು ಗಣಕ ವಿಜ್ಞಾನದ ಪಾರಿಭಾಷಿಕ ಜ್ಞಾನ ಕನ್ನಡದಲ್ಲಿ ಮುಕ್ತವಾಗಿ ಲಭ್ಯವಾಗಬೇಕು.

ಡಿಜಿಟಲ್ ಲೋಕದಲ್ಲಿ, ಅಂತರ್ಜಾಲದಲ್ಲಿ, ತಂತ್ರಜ್ಞಾನದ ಆಪ್‌ಗಳಲ್ಲಿ ಕನ್ನಡ ಸರ್ವವ್ಯಾಪಿ ಯಾಗಬೇಕು. ಕನ್ನಡದ ಯೋಚಿಸಿ, ಕನ್ನಡದ ಹೊಸ ಆವಿಷ್ಕಾರಗಳನ್ನು ಮಾಡುವಂಥ ಆಧುನಿಕ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯಮ ಪರಿಸರ ನಮ್ಮಲ್ಲಿ ನಿರ್ಮಾಣವಾಗಬೇಕಿದೆ. ನವೆಂಬರ್ ಒಂದರ ರಾಜ್ಯೋತ್ಸವ ಕೇವಲ ಹಬ್ಬದ ಆಚರಣೆಯಾಗಬಾರದು. ಅದು ನಮ್ಮ ಅಸ್ಮಿತೆಯ ಮರುಶೋಧನೆ ಯ ದಿನವಾಗಬೇಕು. ಸತ್ತುಹೋದ ಹೀಬ್ರೂ ಭಾಷೆಯನ್ನೇ ವಿಶ್ವದ ಶ್ರೇಷ್ಠ ತಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸಲು ಸಾಧ್ಯ ಎಂದ ಮೇಲೆ, ಜೀವಂತವಾಗಿರುವ, ಸಾವಿರಾರು ವರ್ಷಗಳ ಸತ್ವವಿರುವ ಕನ್ನಡವನ್ನು ವಿಶ್ವದ ಮುಂಚೂಣಿ ಭಾಷೆಯನ್ನಾಗಿ ನಿಲ್ಲಿಸುವುದು ಕನ್ನಡಿಗರಿಗೆ ಅಸಾಧ್ಯವೇನಲ್ಲ.

ಬೇಕಾಗಿರುವುದು ಕೇವಲ ಪೊಳ್ಳು ಘೋಷಣೆಗಳಲ್ಲ. ಇಸ್ರೇಲಿಗರಂಥ ಉಗ್ರ ಭಾಷಾ ನಿಷ್ಠೆ, ವ್ಯವಸ್ಥಿತ ಆಡಳಿತಾತ್ಮಕ ನೀತಿ ಮತ್ತು ದೈನಂದಿನ ಬದುಕಿನಲ್ಲಿ ಕನ್ನಡದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ಪ್ರತಿಯೊಬ್ಬ ಕನ್ನಡಿಗನ ಅಚಲ ಸಂಕಲ್ಪ.

ವಿಶ್ವೇಶ್ವರ ಭಟ್‌

View all posts by this author