Kiran Upadhyay Column: ಆ ಅಂತಿಮ ಪಂದ್ಯ ಕಲಿಸಿದ ಪಾಠವನ್ನು ಮರೆಯಲಾಗದು
ಕ್ರಿಕೆಟ್‌ನಲ್ಲಿ ರಾಜಕೀಯ ಸೇರಿಕೊಂಡಿದೆ ಎಂಬ ಮಾತು ಅತಿಯಾಗಿ ಕೇಳಿ ಬರುತ್ತಿದೆ. ಆಟದಲ್ಲಿ ರಾಜಕೀಯ ಯಾವಾಗ ಇರಲಿಲ್ಲ ಹೇಳಿ? ಇತ್ತೀಚೆಗೆ ಹೆಚ್ಚಾಗಿದೆ ಎಂದರೆ ಒಪ್ಪಿಕೊಳ್ಳೋಣ, ಆದರೆ ಆಟದಲ್ಲಿ ರಾಜಕೀಯ ಇರಲೇ ಇಲ್ಲ ಎಂದರೆ ಯಾರೂ ಒಪ್ಪಬೇಕಾಗಿಲ್ಲ.

-

ವಿದೇಶವಾಸಿ
dhyapaa@gmail.com
ಪ್ರತಿ ಬಾರಿಯೂ ನಮ್ಮ ಕೆಲಸದಲ್ಲಿ ಒಳ್ಳೆಯ ಆರಂಭ ಸಿಗಲಿಕ್ಕಿಲ್ಲ. ಆದರೆ ಸಂಯಮದಿಂದ, ತಾಳ್ಮೆಯಿಂದ, ಶ್ರಮಪಟ್ಟು, ಸಮಯೋಚಿತವಾಗಿ ಕೆಲಸ ಮಾಡಿದರೆ ಅಂತ್ಯದಲ್ಲಿ ಯಶಸ್ಸು ಸಿಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಯಾವುದೇ ಕೆಲಸದ ಆರಂಭದಲ್ಲಿ ಯಾವುದೇ ರೀತಿಯ ತೊಡಕಾದರೂ ಧೃತಿಗೆಡಬಾರದು. ನಿಧಾನವಾಗಿಯೇ ಆದರೂ ಸರಿ, ಗುರಿಯ ಕಡೆಗೆ ನಡೆಯಬೇಕು.
ಈ ಸಲ ಕಪ್ ನಮ್ದೇ...’ ಎನ್ನುವ ಸ್ಲೋಗನ್ ಕೇವಲ ಆರ್‌ಸಿಬಿಗೆ ಸೀಮಿತವಾಗಿರಬೇಕಿಲ್ಲ, ಅಲ್ಲವೇ? ಭಾರತದ ತಂಡ ಆಡುವಾಗಲೂ ಇದನ್ನು ಹೇಳಬಹುದು. ಅದರಲ್ಲೂ, ವಿಶ್ವಕಪ್, ಏಷ್ಯಾಕಪ್‌ನಂಥ ಪಂದ್ಯಗಳಲ್ಲಂತೂ ಖಂಡಿತ ಹೇಳಬಹುದು. ಆದರೆ, ಗೆದ್ದ ನಂತರವೂ ಕಪ್ (ಟ್ರೋಫಿ) ಕೈಗೆ ಸಿಗದಿದ್ದರೆ ಏನು ಹೇಳುವುದು? ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಟ ನೋಡಿದಿರಾ..? ಅಂತಿಮ ಪಂದ್ಯವನ್ನಂತೂ ನೋಡಿರಲೇಬೇಕು!
ಭಾರತ-ಪಾಕಿಸ್ತಾನದ ನಡುವಿನ ಹಣಾಹಣಿ ಎಂದರೆ ಯಾರಾದರೂ ಬಿಟ್ಟಾರೆಯೇ? ಭಾರತ-ಪಾಕ್ ಪಂದ್ಯವನ್ನು ಬೇರೆ ದೇಶದ ಕ್ರಿಕೆಟ್ ಪ್ರೇಮಿಗಳೂ ಕುತೂಹಲದಿಂದ ನೋಡುವಾಗ ಈ ಉಭಯ ದೇಶದವರು ತಪ್ಪಿಸುವುದು... ‘ನೋ...ವೇ..., ಚಾನ್ಸೇ ಇಲ್ಲಾ...’ ಇತ್ತೀಚೆಗಂತೂ ಜನ ಈ ಎರಡು ದೇಶಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯವನ್ನೂ ಕದನದಂತೆಯೇ ಕಾಣುತ್ತಿದ್ದಾರೆ.
ಈಗ ಆಟಗಾರರೂ ಇದಕ್ಕೆ ಹೊರತಾಗಿಲ್ಲ. ಕ್ರಿಕೆಟ್‌ನಲ್ಲಿ ರಾಜಕೀಯ ಸೇರಿಕೊಂಡಿದೆ ಎಂಬ ಮಾತು ಅತಿಯಾಗಿ ಕೇಳಿ ಬರುತ್ತಿದೆ. ಆಟದಲ್ಲಿ ರಾಜಕೀಯ ಯಾವಾಗ ಇರಲಿಲ್ಲ ಹೇಳಿ? ಇತ್ತೀಚೆಗೆ ಹೆಚ್ಚಾಗಿದೆ ಎಂದರೆ ಒಪ್ಪಿಕೊಳ್ಳೋಣ, ಆದರೆ ಆಟದಲ್ಲಿ ರಾಜಕೀಯ ಇರಲೇ ಇಲ್ಲ ಎಂದರೆ ಯಾರೂ ಒಪ್ಪಬೇಕಾಗಿಲ್ಲ.
ಮೊದಲೆಲ್ಲ ಮೈದಾನದಲ್ಲಿ ಕ್ರೀಡಾಪಟುಗಳು ಆಟಕ್ಕೆ ಸಂಬಂಧಿಸಿದಂತೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳುವುದು, ಬೈದುಕೊಳ್ಳುವುದು, ಛೇಡಿಸುವುದು, ಕೀಟಲೆ ಮಾಡುವುದು ಎಲ್ಲವೂ ಇದ್ದವು. ಒಂದೇ ಬದಲಾವಣೆ ಎಂದರೆ ಈಗ ಎರಡು ದೇಶಗಳ ನಡುವೆ ನಡೆದ ಯುದ್ಧದ ವಿಷಯಗಳೂ ಆಟದ ಮೈದಾನದ ಒಳಗೆ ಹೊಕ್ಕಿವೆ. ಅದು ಪಂದ್ಯಕ್ಕಿಂತ ಮೊದಲು ನಡೆಯುವ ಪತ್ರಿಕಾಗೋಷ್ಠಿಯಾಗಿರಬಹುದು, ಮೈದಾನದಲ್ಲಿ ಆಟಗಾರರ ನಡುವಿನ ಮಾತು, ಅಭಿನಯ ಅಥವಾ ಇನ್ಯಾವುದೋ ಆಗಿರಬಹುದು, ರಾಜಕೀಯ, ಸೇನೆ, ಕಾರ್ಯಾಚರಣೆ ಎಲ್ಲವೂ ಮೈದಾನ ದಲ್ಲಿ ತೂರಿಕೊಂಡು ಬಂದಿವೆ. ಮೊನ್ನೆ ನಡೆದ ಏಷ್ಯಾ ಕಪ್‌ನಲ್ಲಿ ಇದು ಎದ್ದು ಕಾಣುತ್ತಿತ್ತು.
ಇದನ್ನೂ ಓದಿ: Kiran Upadhyay Column: ನಿಮಗೆ ಜ್ಞಾನಪೀಠವಲ್ಲ, ಸುಜ್ಞಾನಪೀಠವೂ ಕಡಿಮೆಯೇ
ಇಲ್ಲವಾದರೆ, ಬ್ಯಾಟನ್ನು ಬಂದೂಕಿನಂತೆ ಹಿಡಿದು ತೋರಿಸುವುದು, ವಿಮಾನ ಉರುಳಿ ಬಿದ್ದಂತೆ ಸಂಜ್ಞೆ ಮಾಡುವುದು, ಅದಕ್ಕೆ ಅದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುವುದು, ಇವೆಲ್ಲ ಮುಂದುವರಿದ ಭಾಗ. ಹಲವಾರು ಕಾರಣಗಳಿಂದ ಈ ಪಂದ್ಯಾವಳಿಯ ಕಥೆಗಳು, ಘಟನೆಗಳು ದಾಖಲೆಯ ಪುಟ ಗಳಲ್ಲಿ ಮರೆಯಲಾಗದ ಮೈಲಿಗಗಿ ಸೇರಿಕೊಳ್ಳುತ್ತವೆ.
ವೈಯಕ್ತಿಕ ದಾಖಲೆಗಳು ಒಂದು ಕಡೆಯಾದರೆ, ವಿಕೆಟ್ ಬಿದ್ದಾಗ-ಬೀಳದಿದ್ದಾಗ, ಐವತ್ತೋ-ನೂರೋ ರನ್ ಹೊಡೆದಾಗ, ಕೆಲವರು ದೈಹಿಕ ಭಾಷೆಯಲ್ಲಿ ಮಾಡಿದ ಕೀಟಲೆ, ಅದಕ್ಕೆ ಸಿಕ್ಕ ಪ್ರತಿಕ್ರಿಯೆ, ತೆತ್ತ ದಂಡ, ಆಟಗಾರರು ಒಬ್ಬರಿಗೊಬ್ಬರು ಕೈ ಕುಲುಕದಿರುವುದು, ಪಂದ್ಯಾವಳಿ ಗೆದ್ದ ನಂತರ ಕಪ್ ಪಡೆಯಲು ಹೋಗದಿರುವುದು, ಯಾರು ಅದನ್ನು ಕೊಡಬೇಕಾಗಿತ್ತೋ ಅವರೇ ಅದನ್ನು ಎತ್ತಿ ಕೊಂಡು ಹೋದದ್ದು, ಅಬ್ಬಬ್ಬಾ.... ಒಂದೇ, ಎರಡೇ... ಬಹುಶಃ ಯಾವ ಪಂದ್ಯಾಟದಲ್ಲೂ ಇಷ್ಟೆಲ್ಲ ಘಟನೆಗಳು ಘಟಿಸಿರಲಿಕ್ಕಿಲ್ಲ. ಇದೆಲ್ಲವೂ ಭಾರತ-ಪಾಕಿಸ್ತಾನದ ನಡುವೆ ನಡೆದ ಮೂರು ಪಂದ್ಯ ದಲ್ಲಿ ನಡೆದುಹೋಯಿತು.
ಹಾಗೆ ನೋಡಿದರೆ, ಎರಡು ತಂಡದ ಆಟಗಾರರು ಕೈಕುಲುಕದಿರುವುದು ಇದೇ ಮೊದಲ ಸಲವೇನೂ ಅಲ್ಲ. ನನಗೆ ನೆನಪಿರುವಂತೆ, ಅರ್ಜುನ ರಣತುಂಗ ಶ್ರೀಲಂಕಾ ತಂಡದ ನಾಯಕರಾಗಿದ್ದಾಗ ತಮಗೆ ಬದಲಿ ಓಟಗಾರನನ್ನು ಕೊಡುವಂತೆ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಕೇಳಿಕೊಂಡರು. ಆಸ್ಟ್ರೇಲಿಯಾ ತಂಡದ ನಾಯಕ ರಣತುಂಗ ಮನವಿಯನ್ನು ನಿರಾಕರಿಸಿದ್ದಲ್ಲದೆ, ಅವರನ್ನು ‘ದಢೂತಿ’ ಎಂದು ಹೀಗಳೆದಿದ್ದರು.
ಅದಕ್ಕೆ ಮುನಿಸಿಕೊಂಡ ಶ್ರೀಲಂಕಾ ತಂಡದ ಆಟಗಾರರು ಆಸ್ಟ್ರೇಲಿಯಾ ಆಟಗಾರರೊಂದಿಗೆ ಕೈಕುಲುಕದೇ ಮೈದಾನದಿಂದ ಹೊರಗೆ ಬಂದಿದ್ದರು. ಆಗ ಈ ವಿಷಯ ದೊಡ್ದ ಸುದ್ದಿಯಾಗಿತ್ತು. ಇರಲಿ, ಇಂಥ ಅಂಶಗಳನ್ನೆಲ್ಲ ಪಕ್ಕಕ್ಕಿಟ್ಟು, ಕೇವಲ ಏಷ್ಯಾ ಕಪ್‌ನ ಅಂತಿಮ ಪಂದ್ಯವೊಂದನ್ನೇ ನೋಡಿದರೆ, ಆ ಒಂದು ಪಂದ್ಯ ಕೆಲವು ಜೀವನ ಪಾಠವನ್ನು ಹೇಳಿದೆ.
ಪಂದ್ಯದ ಆರಂಭದಲ್ಲಿ, ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಚೆನ್ನಾಗಿಯೇ ಆಡಿ, ಹತ್ತನೆಯ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಎಂಬತ್ತ ನಾಲ್ಕು ರನ್ ಗಳಿಸಿತ್ತು. ಅದೇ ಲೆಕ್ಕದಲ್ಲಿ ಹೋದರೆ ಪಾಕಿಸ್ತಾನ ಇಪ್ಪತ್ತು ಓವರ್‌ನಲ್ಲಿ ಇನ್ನೂರು- ಇನ್ನೂರ ಹತ್ತು ರನ್ ಸೇರಿಸ ಬಹುದು ಎಂದೇ ಅಂದಾಜಿಸಲಾಗಿತ್ತು.
ಆದರೆ, ಮೊದಲ ವಿಕೆಟ್ ಬಿದ್ದದ್ದೇ ತಡ, ಅರವತ್ತೆರಡು ರನ್ ಸೇರಿಸುವಷ್ಟರಲ್ಲಿ ಉಳಿದ ಒಂಬತ್ತು ವಿಕೆಟ್ ಉರುಳಿದವು. ಅದರಲ್ಲೂ ಕೊನೆಯ ಎಂಟು ವಿಕೆಟ್ ಮೂವತ್ತಮೂರು ರನ್ ಸೇರಿಸುವಷ್ಟ ರಲ್ಲಿ ಪತನಗೊಂಡವು. ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಪಾಕಿಸ್ತಾನ ನೂರೈವತ್ತರ ಗಡಿಯನ್ನೂ ತಲುಪಲಾಗದೇ ಧರಾಶಾಯಿಯಾಯಿತು.
ಇದರಿಂದ ಪಾಕಿಸ್ತಾನದ ಮನೋಬಲ ಕುಗ್ಗಿತು ಎನ್ನುವುದಕ್ಕಿಂತ ಸೋಲಿನ ಮೊದಲ ಮೆಟ್ಟಿಲು ಹತ್ತಲು ಪಾಕಿಸ್ತಾನ ಅಣಿಯಾಗಿತ್ತು. ಮೊದಲ ಪಾಠ ಸಿಗುವುದೇ ಇಲ್ಲಿ. ನಾವು ಮಾಡುವ ಯಾವುದೇ ಕೆಲಸ-ಕಾರ್ಯದಲ್ಲಿ ಉತ್ತಮ ಆರಂಭ ಬೇಕು ಎನ್ನುವುದು ನಿಜ. ಆದರೆ ಅದನ್ನು ಅಂತ್ಯದವರೆಗೆ ಕೊಂಡೊಯ್ಯದಿದ್ದಲ್ಲಿ ಯಾವ ಪ್ರಯೋಜವನೂ ಇಲ್ಲ.
ಇಂಗ್ಲಿಷ್‌ನಲ್ಲಿ ’well begun is half done’ ಎಂಬ ಮಾತಿದೆ. ಆದರೆ ಅದು ಪ್ರತಿ ಬಾರಿಯೂ ಸತ್ಯ ವಾಗುವುದಿಲ್ಲ, ಒಳ್ಳೆಯ ಆರಂಭವಾದರೂ ನಿರಂತರ ಅದನ್ನು ಮುಂದುವರಿಸಿಕೊಂಡು ಹೋದರೆ ಮಾತ್ರ ಅದು ಪ್ರಯೋಜನಕ್ಕೆ ಬರುತ್ತದೆ, ಇಲ್ಲವಾದರೆ ಒಳ್ಳೆಯ ಆರಂಭವೂ ‘ಹೊಳೆ ಯಲ್ಲಿ ಹುಣಸೆಹಣ್ಣು ತೊಳೆದಂತೆ’ ಎನ್ನುವುದಕ್ಕೆ ಪಾಕಿಸ್ತಾನದ ಇನ್ನಿಂಗ್ಸ್ ಸಾಕ್ಷಿ.
ಇಷ್ಟಾಗಿಯೂ ಪಾಕಿಸ್ತಾನಕ್ಕೆ ಇನ್ನೂ ಒಂದು ಅವಕಾಶ ಒದಗಿ ಬಂದಿತ್ತು. ಬೌಲಿಂಗ್ ಆರಂಭಿಸಿದ ಪಾಕಿಸ್ತಾನ ಮೊದಲ ಹದಿನೈದು ಚೆಂಡಿನಲ್ಲಿಯೇ ಭಾರತದ ಎರಡು ಪ್ರಮುಖ ಹುದ್ದರಿ ಪಡೆದು ಕೊಂಡಿತು. ಆಗ ಭಾರತ ತಂಡ ಕೇವಲ ಹತ್ತು ರನ್ ಸೇರಿಸಿತ್ತು. ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಅಭಿಷೇಕ್ ಶರ್ಮ ಔಟಾಗಿದ್ದರು. ನಾಲ್ಕನೆಯ ಓವರ್ ಮುಗಿದಾಗ, ಇಪ್ಪತ್ತು ರನ್‌ಗೆ ಭಾರತದ ಮೂವರನ್ನು ಪಾಕಿಸ್ತಾನ ಔಟ್ ಮಾಡಿತ್ತು. ಆಗಲೂ ಅನೇಕರು ಈ ಪಂದ್ಯವನ್ನು ಪಾಕಿಸ್ತಾನ ಗೆಲ್ಲುತ್ತದೆ ಎಂದೇ ಎಣಿಸಿದ್ದರು. ಅದರೆ ಅದೇ ಆರಂಭಶೂರತ್ವ...!
ಇದೇ ಘಟನೆಯನ್ನು ಭಾರತದ ದೃಷ್ಟಿಕೋನದಿಂದ ನೋಡುವುದಾದರೆ, ಎರಡೂ ಇನ್ನಿಂಗ್ಸ್ ನಲ್ಲಿ ಭಾರತದ ಆರಂಭ ಚೆನ್ನಾಗಿರಲಿಲ್ಲ. ಅದರಲ್ಲೂ ಭಾರತ ಬ್ಯಾಟಿಂಗ್ ಮಾಡುವಾಗಲಂತೂ ನೂರ ನಲವತ್ತು ಕೋಟಿ ಭಾರತೀಯರ ಭಾರ ತಂಡದ ಹೆಗಲ ಮೇಲಿತ್ತು. ಅದಕ್ಕೆ ಸರಿಯಾಗಿ ಮೂರು ಪ್ರಮುಖ ವಿಕೆಟ್‌ಗಳೂ ಬಿದ್ದು ಹೋಗಿದ್ದವು. ಆದರೆ ತಿಲಕ್ ವರ್ಮಾ ಮತ್ತು ಶಿವಮ್ ದುಬೆ ಇಬ್ಬರೂ ಜಾಗರೂಕರಾಗಿ, ಸಂದರ್ಭಕ್ಕೆ ತಕ್ಕಂತೆ ಆಡಿದ್ದರಿಂದ ಭಾರತ ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ಐದು ವಿಕೆಟ್‌ಗಳಿಂದ ಜಯಶಾಲಿಯಾಯಿತು.
ಇದರಿಂದ ಕಲಿಯಬೇಕಾದ ಪಾಠವೆಂದರೆ, ಪ್ರತಿ ಬಾರಿಯೂ ನಮ್ಮ ಕೆಲಸದಲ್ಲಿ ಒಳ್ಳೆಯ ಆರಂಭ ಸಿಗಲಿಕ್ಕಿಲ್ಲ. ಆದರೆ ಸಂಯಮದಿಂದ, ತಾಳ್ಮೆಯಿಂದ, ಶ್ರಮಪಟ್ಟು, ಸಮಯೋಚಿತವಾಗಿ ಕೆಲಸ ಮಾಡಿದರೆ ಅಂತ್ಯದಲ್ಲಿ ಯಶಸ್ಸು ಸಿಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಯಾವುದೇ ಕೆಲಸದ ಆರಂಭದಲ್ಲಿ ಯಾವುದೇ ರೀತಿಯ ತೊಡಕಾದರೂ ಧೃತಿಗೆಡಬಾರದು. ನಿಧಾನವಾಗಿಯೇ ಆದರೂ ಸರಿ, ಗುರಿಯ ಕಡೆಗೆ ನಡೆಯಬೇಕು.
ಅಂತಿಮ ಪಂದ್ಯದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ. ಪಂದ್ಯ ಪುರುಷ ತಿಲಕ್ ವರ್ಮಾ ಅವರ ಬ್ಯಾಟಿಂಗ್. ಅದುವರೆಗೂ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದದ್ದು ಅಭಿಷೇಕ್ ಶರ್ಮ. ಆಡಿದ ಏಳು ಪಂದ್ಯಗಳಲ್ಲಿ ಮುನ್ನೂರ ಹದಿನಾಲ್ಕು ರನ್ ಗಳಿಸಿ ಸರಣಿಯ ಅತಿ ಹೆಚ್ಚು ರನ್ ಸೇರಿಸಿದ ಶರ್ಮ, ‘ಸರಣಿ ಪುರುಷ’ ಪ್ರಶಸ್ತಿಗೂ ಭಾಜನರಾದರು. ಹಾಗಾಗಿ ಸ್ವಾಭಾವಿಕವಾಗಿ ಎಲ್ಲರ ಕಣ್ಣೂ ಅವರ ಮೇಲೆಯೇ ಇತ್ತು.
ಅದೇ ಪಾಕಿಸ್ತಾನದ ವಿರುದ್ಧ, ಮೊದಲು ಆಡಿದ ಎರಡು ಪಂದ್ಯದಲ್ಲೂ ಭಾರತದ ವಿಜಯಕ್ಕೆ ಶರ್ಮ ಕಾರಣರಾಗಿದ್ದರು. ಹಾಗಾಗಿ ಅಭಿಷೇಕ್ ಶರ್ಮನನ್ನು ಮೊದಲೇ ಔಟ್ ಮಾಡುವುದಕ್ಕೆ ಪಾಕಿಸ್ತಾನ ಸಿದ್ಧತೆ ಮಾಡಿಕೊಂಡಿತ್ತು. ಅದರಲ್ಲಿ ಯಶಸ್ವಿಯೂ ಆಯಿತು. ಆದರೆ ತಿಲಕ್ ವರ್ಮ ಪಂದ್ಯವನ್ನು ಗೆಲ್ಲಿಸುತ್ತಾರೆ ಎಂದು ಪಾಕಿಸ್ತಾನ ಎಂದೂ ಎಣಿಸಿರಲಿಲ್ಲವೇನೋ! ಪಾಕಿಸ್ತಾನಕ್ಕೆ ವರ್ಮ ‘ಸರ್ಪ್ರೈಸ್ ಎಲಿಮೆಂಟ್’ ಆಗಿದ್ದರು. ಪಾಕಿಸ್ತಾನದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮದ ಹೊರಗಿನ ಅಚ್ಚರಿಯಾಗಿದ್ದರು ವರ್ಮ.
ನಮ್ಮ ಕಲಿಕೆಯ ದಿನಗಳಲ್ಲಿ ಕೆಲವೊಮ್ಮೆ ನಮಗೂ ಹೀಗೆ ಆಗಿದ್ದಿದೆ. ಪಠ್ಯಕ್ರಮದಲ್ಲಿ ಇಲ್ಲದ್ದು, ನಮಗೆ ತರಗತಿಯಲ್ಲಿ ಕಲಿಸದೆ ಇದ್ದದ್ದು, ಪ್ರಶ್ನೆಪತ್ರಿಕೆಯಲ್ಲಿ ಬಂದದ್ದಿದೆ. ಅದಕ್ಕೆ ತಕರಾರು ತೆಗೆದದ್ದೂ ಇದೆ. ಆರು-ಏಳು ವರ್ಷದ ಹಿಂದಿನ ಮಾದರಿ ಪ್ರಶ್ನೆಪತ್ರಿಕೆ ನೋಡಿ, ಅದೇ ಪ್ರಶ್ನೆಗಳು ಮರುಕಳಿಸುತ್ತವೆ ಎಂದು ತಿಳಿದು, ಅದಕ್ಕೆ ಬೇಕಾದಂತೆ ಉತ್ತರ ಕಂಡುಕೊಂಡು ಪರೀಕ್ಷೆಗೆ ಹೋದದ್ದಿದೆ. ನಾವು ತಯಾರಿಸಿದ ಉತ್ತರಕ್ಕೆ ಸರಿಯಾಗಿ ಪ್ರಶ್ನೆಪತ್ರಿಕೆ ಇದ್ದರೆ ಅಡ್ಡಿಯಿಲ್ಲ.
ಇಲ್ಲವಾದರೆ ಉತ್ತರ ಬರೆಯುವಾಗ ಕೈ ನಡುಗುತ್ತದೆ ತಾನೇ? ಪಾಕಿಸ್ತಾನಕ್ಕೆ ಆದದ್ದೂ ಅದೇ. ಅಂದು ಪಾಕಿಸ್ತಾನದ ಎದುರು ‘ಶರ್ಮ’ನ ಬದಲು ‘ವರ್ಮ’ ಬಂದು ನಿಂತಿದ್ದ. ಶಾಲೆಯ ಪರೀಕ್ಷೆಯಾದರೆ ಒಂದಷ್ಟು ಅಂಕ ಕಡಿಮೆಯಾಗುತ್ತದೆ. ಅದೇ ಆಟದಲ್ಲಿ ಅಥವಾ ಜೀವನದಲ್ಲಿ? ಸಾರ ಏನು ಎಂದರೆ, ಆಟದ ಮೈದಾನ ಅಥವಾ ಜೀವನ ಎರಡೂ ಶಾಲೆಯ ಪರೀಕ್ಷೆಯಲ್ಲ.
ಎದುರಾಳಿ ತಂಡದಲ್ಲಿ ಯಾರೆಲ್ಲ ಇದ್ದಾರೋ ಅವರಿಗೆಲ್ಲ ಕಡಿವಾಣ ಹಾಕುವ ಸಿದ್ಧತೆ ಮಾಡಿ ಕೊಂಡಿರಬೇಕು. ಜೀವನದಲ್ಲಿಯೂ ಅಷ್ಟೇ, ’always expect the unexpected. ಅದೇ ತಿಲಕ್ ವರ್ಮನನ್ನು ನೋಡಿ, ‘ಅಂತಿಮ ಪಂದ್ಯದಲ್ಲಿ ಅತಿ ಹೆಚ್ಚು ರನ್ ಹೊಡೆದು ಪಂದ್ಯಪುರುಷ ನಾಗುತ್ತೇನೆ’ ಎಂದು ಆತ ಮೊದಲೇ ಬರೆದಿಟ್ಟಿದ್ದನಂತೆ.
ಅಂತಿಮ ಪಂದ್ಯದವರೆಗೂ ಆತ ಇಷ್ಟು ಚೆನ್ನಾಗಿ, ಜವಾಬ್ದಾರಿಯುತವಾಗಿ ಆಡಿರಲಿಲ್ಲ. ಆದರೂ ಆತನ ಆತ್ಮವಿಶ್ವಾಸವನ್ನು ಮೆಚ್ಚಬೇಕು. ಎಷ್ಟೇ ಒತ್ತಡವಿದ್ದರೂ ತಾಳ್ಮೆಯಿಂದ ನಡೆದರೆ ಅಂತ್ಯ ದಲ್ಲಿ ಜಯ ದೊರಕುತ್ತದೆ ಎನ್ನುವುದಕ್ಕೆ ತಿಲಕ್ ವರ್ಮ ಸಾಕ್ಷಿ.
ಇಷ್ಟೆಲ್ಲ ಆಗಿ, ಭಾರತ ಗೆದ್ದ ಮೇಲಾದರೂ ಟ್ರೋಫಿ ದೊರಕಿತೇ ಎಂದರೆ ಅದೂ ಇಲ್ಲ. ಏಷಿಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷನೂ, ಪಾಕಿಸ್ತಾನದ ಮಂತ್ರಿಯೂ ಆದ ಮೊಹ್ಸಿನ್ ನಖ್ವಿಯ ಹಸ್ತದಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ಮೊದಲೇ ನಿರ್ಧರಿಸಿದ್ದ ಭಾರತ ತಂಡ ಒಂದೂವರೆ ಗಂಟೆ ಯಾದರೂ ಟ್ರೋಫಿ ಪಡೆಯಲು ಹೋಗಲಿಲ್ಲ.
ಅವಮಾನಿತನಾದ ನಖ್ವಿ ಮತ್ತು ಅವನ ಸಹಾಯಕರು ಟ್ರೋಫಿಯನ್ನು ಮೈದಾನದಿಂದ ಹೊರಕ್ಕೆ ಕೊಂಡೊಯ್ದರು. ಆಗ ಭಾರತ ತಂಡ ಕಾಲ್ಪನಿಕ ತ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿತು. ನಂತರ ತಂಡದ ನಾಯಕ ಸೂರ್ಯಕುಮಾರ್ ಯಾದವ್, ‘ನನ್ನ ನಿಜವಾದ ಟ್ರೋಫಿ ಡ್ರೆಸ್ಸಿಂಗ್ ರೂಮಿನಲ್ಲಿದೆ’ ಎಂದು ಹೇಳಿಕೆ ನೀಡಿದ್ದು ಮಜಕೂರಾಗಿತ್ತು. ನಿಜ, ಟ್ರೋಫಿ ಕೈಯಲ್ಲಿ ಸಿಕ್ಕಿದರೆ ಖುಷಿಯಾಗುವುದು ಹೌದು.
ಆದರೆ ಅದು ಕೇವಲ ಭೌತಿಕ. ಇಲ್ಲಿ ಗೆಲುವು ಮುಖ್ಯವೇ ವಿನಾ ತಗಡಿನ ಟ್ರೋಫಿಯಲ್ಲ. ಎಲ್ಲೂ, ಏನೂ ಗೆಲ್ಲದಿದ್ದರೂ ಹಣಕೊಟ್ಟು ಟ್ರೋಫಿ ಕೊಂಡುಕೊಳ್ಳಬಹುದು. ಆದರೆ ಗೆಲುವೇ ಇಲ್ಲದೆ ಟ್ರೋಫಿ ಪಡೆದುಕೊಂಡರೆ ಏನು ಪ್ರಯೋಜನ? ಅಷ್ಟಕ್ಕೂ ದಾಖಲೆಯಾಗಿ ಜನರ ಕೈಗೆ ಸಿಗುವುದು ಅಂಕಿ-ಅಂಶಗಳೇ ವಿನಾ ಟ್ರೋಫಿ ಅಲ್ಲವಲ್ಲ! ನಾವು ಗೆದ್ದಿದ್ದೇವೆ ಎಂಬ ಆತ್ಮತೃಪ್ತಿಗಿಂತ ಹೆಚ್ಚಿನದ್ದೇ ನನ್ನೂ ಭೌತಿಕ ವಸ್ತುಗಳು ಕೊಡುವುದಿಲ್ಲ.
ಇನ್ನು, ಈಗಲೇ ಹೇಳಿದಂತೆ, ಆಟದಲ್ಲಿ ರಾಜಕೀಯ ಬರಬಾರದು... ಇತ್ಯಾದಿ, ಇತ್ಯಾದಿ. ರಾಜಕಾರಣಿಗಳು ತಮ್ಮ ಉಪಯೋಗಕ್ಕೆ ಕ್ರೀಡೆಯನ್ನು ಬಳಸಿಕೊಂಡರೆ? ರಾಜಕೀಯದಲ್ಲಿ ಕ್ರೀಡೆ ಬರಬಹುದು, ಕ್ರೀಡೆಯಲ್ಲಿ ರಾಜಕೀಯ ಬರಬಾರದು ಎಂದರೆ ಹೇಗೆ ಸಾಧ್ಯ? ಈ ಪಂದ್ಯಾಟ ಆರಂಭವಾಗುವುದಕ್ಕೂ ಮೊದಲು, ಒಂದು ಪಕ್ಷದ ವಕ್ತಾರರೊಬ್ಬರು ರಾಷ್ಟ್ರೀಯ ಚಾನೆಲ್ ಒಂದರಲ್ಲಿ ಹೇಳಿದ್ದು ಕೇಳಿದ್ದೆ.
‘ಆಪರೇಶನ್ ಸಿಂದೂರ ಆದ ನಂತರ, ಪಾಕಿಸ್ತಾನದವರೊಂದಿಗೆ ಕ್ರಿಕೆಟ್ ಬೇಕೇ? ಆಟಗಾರರಿಗೆ ದೇಶದ ಮೇಲೆ ನಿಜವಾದ ಪ್ರೀತಿಯಿದ್ದರೆ ಪಹಲ್ಗಾಮ್ ದಾಳಿಯಿಂದಾಗಿ ವಿಧವೆಯರಾದವರಿಗೆ ತಮ್ಮ ಸಂಭಾವನೆ ನೀಡಲಿ’ ಎಂದು. ಉತ್ತರವಾಗಿ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ‘ಈ ಸರಣಿಯಲ್ಲಿ ಆಡಿ ನಾನು ಪಡೆದ ಒಟ್ಟೂ ಸಂಭಾವನೆಯನ್ನು ಭಾರತದ ಯೋಧರ ನಿಧಿಗೆ ನೀಡುತ್ತಿದ್ದೇನೆ’ ಎಂದು ಪತ್ರಿಕಾಗೋಷ್ಠಿಯ ಹೇಳಿದ್ದು ಇನ್ನೂ ಚೆನ್ನಾಗಿತ್ತು.