Kiran Upadhyay Column: ನಿಮಗೆ ಜ್ಞಾನಪೀಠವಲ್ಲ, ಸುಜ್ಞಾನಪೀಠವೂ ಕಡಿಮೆಯೇ
ನೀವು ಬರೆದದ್ದೆಲ್ಲ ಅರ್ಥವಾಯಿತೇ? ಇಲ್ಲ. ಏನೂ ಅರ್ಥವಾಗಲಿಲ್ಲವೇ? ಹಾಗೂ ಅಲ್ಲ, ಒಂದು ರೀತಿ ಯಲ್ಲಿ ಅರ್ಥವಾಯಿತು. ಇನ್ನೊಮ್ಮೆ ಓದಿದರೆ ಮತ್ತೊಂದು ರೀತಿಯಲ್ಲಿ ಅರ್ಥವಾಯಿತು. ಯಾಕೋ ಗೊತ್ತಿಲ್ಲ, ನಿಮ್ಮ ಕುರಿತು ಏನೋ ಗೌರವ, ಯಾವುದೋ ಪ್ರೀತಿ, ಅವ್ಯಕ್ತ ಭಾವ. ಅದಕ್ಕೇ ಹೇಳಿದ್ದು, ನಿಮ್ಮನ್ನು ಹೇಗೆ ಸಂಬೋಧಿಸಬೇಕೆಂದೇ ತಿಳಿಯುತ್ತಿಲ್ಲ ಎಂದು. ಈ ಸಂಬಂಧಕ್ಕೆ ಬೇರೇನಾದರೂ ಹೆಸರಿದೆಯೇ ಎಂದು ನಿಮ್ಮನ್ನೇ ಕೇಳೋಣವೆಂದರೆ, ಭೇಟಿಯಾದಾಗ ಅದಕ್ಕೂ ಧೈರ್ಯ ಸಾಲು ತ್ತಿರಲಿಲ್ಲ. ನಿಮ್ಮ ಎದುರು ನಿಲ್ಲುವಾಗ ಜಂಘಾಬಲ ಉಡುಗಿ ಹೋಗುತ್ತಿತ್ತು.

-

ವಿದೇಶವಾಸಿ
dhyapaa@gmail.com
ಭೈರಪ್ಪನವರೇ....
ನಿಮ್ಮನ್ನು ಹೇಗೆ ಸಂಬೋಧಿಸಬೇಕೆಂಬುದೇ ಅರ್ಥವಾಗುತ್ತಿಲ್ಲ. ನೀವು ನನ್ನ ಮನೆಯವರಲ್ಲ, ಗುರುವಲ್ಲ, ಬಂಧುವಲ್ಲ, ಮಿತ್ರರಲ್ಲ. ನನ್ನ-ನಿಮ್ಮ ನಡುವೆ ಆ ರೀತಿಯ ಯಾವ ಸಂಬಂಧವೂ ಇಲ್ಲ. ನಮ್ಮಿಬ್ಬರ ನಡುವೆ ಇದ್ದದ್ದು ಒಬ್ಬ ಬರಹಗಾರ ಮತ್ತು ಹುಚ್ಚು ಓದುಗನ ನಡುವೆ ಇರುವ ಸಂಬಂಧವೇ? ಛೇ, ಅದನ್ನೂ ಗಟ್ಟಿಯಾಗಿ ಹೇಳುವಂತಿಲ್ಲ, ಏಕೆಂದರೆ ನೀವು ಬರೆದ ಕೃತಿಗಳಲ್ಲಿ ‘ನಾನೇಕೆ ಬರೆಯುತ್ತೇನೆ’, ’ದೂರ ಸರಿದರು’, ’ಭೀಮಕಾಯ’, ’ಜಲಪಾತ’, ‘ಬೆಳಕು ಮೂಡಿತು’ ನಾನು ಓದಲಿಲ್ಲ.
ಮೊನ್ನೆಯವರೆಗೂ ನೀವು ’ಗತಜನ್ಮ ಮತ್ತೆರಡು ಕಥೆಗಳು’ ಕೃತಿ ರಚಿಸಿದ್ದೀರಿ ಎಂಬುದೂ ತಿಳಿದಿರ ಲಿಲ್ಲ. ‘ಮತದಾನ’, ’ನಾಯಿ ನೆರಳು, ’ವಂಶವೃಕ್ಷ’, ’ತಬ್ಬಲಿಯು ನೀನಾದೆ ಮಗನೆ’ ಸಿನಿಮಾ ನೋಡಿದ್ದರಿಂದ ಮತ್ತೆ ಪುಸ್ತಕ ಓದಬೇಕು ಎಂದೆನಿಸಲಿಲ್ಲ. ಹಾಗಾದರೆ ಓದಿದ್ದೆಲ್ಲ ಇಷ್ಟವಾಯಿತೇ? ಹೌದು.
ನೀವು ಬರೆದದ್ದೆಲ್ಲ ಅರ್ಥವಾಯಿತೇ? ಇಲ್ಲ. ಏನೂ ಅರ್ಥವಾಗಲಿಲ್ಲವೇ? ಹಾಗೂ ಅಲ್ಲ, ಒಂದು ರೀತಿಯಲ್ಲಿ ಅರ್ಥವಾಯಿತು. ಇನ್ನೊಮ್ಮೆ ಓದಿದರೆ ಮತ್ತೊಂದು ರೀತಿಯಲ್ಲಿ ಅರ್ಥವಾಯಿತು. ಯಾಕೋ ಗೊತ್ತಿಲ್ಲ, ನಿಮ್ಮ ಕುರಿತು ಏನೋ ಗೌರವ, ಯಾವುದೋ ಪ್ರೀತಿ, ಅವ್ಯಕ್ತ ಭಾವ. ಅದಕ್ಕೇ ಹೇಳಿದ್ದು, ನಿಮ್ಮನ್ನು ಹೇಗೆ ಸಂಬೋಧಿಸಬೇಕೆಂದೇ ತಿಳಿಯುತ್ತಿಲ್ಲ ಎಂದು. ಈ ಸಂಬಂಧಕ್ಕೆ ಬೇರೇನಾದರೂ ಹೆಸರಿದೆಯೇ ಎಂದು ನಿಮ್ಮನ್ನೇ ಕೇಳೋಣವೆಂದರೆ, ಭೇಟಿಯಾದಾಗ ಅದಕ್ಕೂ ಧೈರ್ಯ ಸಾಲುತ್ತಿರಲಿಲ್ಲ. ನಿಮ್ಮ ಎದುರು ನಿಲ್ಲುವಾಗ ಜಂಘಾಬಲ ಉಡುಗಿ ಹೋಗುತ್ತಿತ್ತು.
ಕೈಕಾಲು ನಡುಗುತ್ತಿದ್ದವು. ಮುಂದೆ ಯಾವತ್ತಾದರೂ ಕೇಳೋಣವೆಂದುಕೊಂಡರೆ ಇನ್ನು ಅದಕ್ಕೂ ಅವಕಾಶವಿಲ್ಲ.
ಇದನ್ನೂ ಓದಿ: Kiran Upadhyay Column: ಇವರು ಎಂಥಾ ಲಾಂ(ಗಲೀ)ಜು ಜನ...!!?
ತಮ್ಮ ತೊಂಬತ್ತನಾಲ್ಕು ವರ್ಷದ ಸುದೀರ್ಘ, ಸಂತೃಪ್ತ ಬದುಕನ್ನು ಮುಗಿಸಿ ಮೊನ್ನೆ ಇಹಲೋಕ ತೊರೆದು ಹೋದಿರಿ. ತಾವು ಸಾಯುಜ್ಯ ಸಾಮ್ರಾಜ್ಯ ಸೇರುವ ಸಮಯದಲ್ಲಿ, ‘ಮತ್ತೊಮ್ಮೆ ಹುಟ್ಟಿ ಬನ್ನಿ’ ಎನ್ನುವಷ್ಟು ಸ್ವಾರ್ಥಿ ನಾನಾಗಲಾರೆ. ‘ನಿಮ್ಮ ಅಗಲುವಿಕೆಯಿಂದ ಸಾರಸ್ವತ ಲೋಕ ಬಡವಾಗಿದೆ’ ಎನ್ನುವುದನ್ನೂ ನಂಬಲಾರೆ.
ಏಕೆಂದರೆ, ನೂರಾರು ಕೃತಿ ರಚಿಸಿಯೂ ಜನಮಾನಸದಲ್ಲಿ ಉಳಿಯದ ಲೇಖಕರಿಗಿಂತ ಅವರ ಕಾಲು ಭಾಗದಷ್ಟೇ ಕೃತಿ ರಚಿಸಿ ಜನರ ಚಿತ್ತ ಭಿತ್ತಿಯಲ್ಲಿ ಚಿರಸ್ಥಾಯಿಯಾಗಿದ್ದೀರಿ. ಸಂಖ್ಯೆಗಿಂತಲೂ ವಿಷಯಕ್ಕೆ ಹೆಚ್ಚಿನ ಬೆಲೆ ಎಂಬುದನ್ನು ನಿರೂಪಿಸಿದ್ದೀರಿ. ಈ ವಿಷಯದಲ್ಲಿ ನೀವು ನನ್ನನ್ನು ಅಲ್ಪ ತೃಪ್ತ ಎಂದರೂ ಅಡ್ಡಿಯಿಲ್ಲ.
ಬಾಲ್ಯದಿಂದಲೂ ನಿಮ್ಮ ಬಗ್ಗೆ ಬೆರಗು, ಕುತೂಹಲ, ಆಸಕ್ತಿ ಎಲ್ಲವನ್ನೂ ಇಟ್ಟುಕೊಂಡು, ಇಂದಿನ ವರೆಗೂ ಅದನ್ನು ಬೆಳೆಸಿಕೊಂಡು ಬಂದವ ನಾನು. ನನ್ನ ಬಾಲ್ಯದ ದಿನಗಳಲ್ಲಿ, ನಮ್ಮ ಮನೆಯಲ್ಲಿ ದಿನಪತ್ರಿಕೆ, ವ್ಯಕ್ತಿ ಚಿತ್ರಣ, ಆತ್ಮ ಚರಿತ್ರೆ, ಪ್ರವಾಸ ಕಥನ ಇತ್ಯಾದಿ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕ ಗಳಿಗೆ ಮಾತ್ರ ಪ್ರವೇಶವಿತ್ತೇ ವಿನಃ ಕಾದಂಬರಿಗಳಿಗೆ ಇರಲಿಲ್ಲ.

ಈಗಿನ ಮಕ್ಕಳಿಗೆ ಮೊಬೈಲ್ ಹುಚ್ಚು ಇದ್ದಂತೆಯೇ ನಮ್ಮ ಪೀಳಿಗೆಯ ಮಕ್ಕಳಿಗೆ ಕಾದಂಬರಿಯ ಹುಚ್ಚು ಇತ್ತು, ಈಗಿನ ಮಕ್ಕಳು ಕದ್ದು ಮೊಬೈಲ್ ನೋಡುವಂತೆ ಆಗಿನ ಮಕ್ಕಳು ಕದ್ದು ಕಾದಂಬರಿ ಯನ್ನು ಓದುತ್ತಿದ್ದರು. ಮೊಬೈಲ್‌ನಲ್ಲಿ ಒಳ್ಳೆಯದು, ಕೆಟ್ಟದ್ದು, ಎರಡೂ ಇರುತ್ತದೆ. ನಮ್ಮ ಮಕ್ಕಳು ಯಾವುದನ್ನು ನೋಡುತ್ತಿದ್ದಾರೆ, ಯಾವುದರ ಹಿಂದೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಇಂದಿನ ಪಾಲಕ-ಪೋಷಕರಿಗೆ ಹೇಗೆ ತಲೆ ಬಿಸಿ ಇರುತ್ತದೆಯೋ ಹಾಗೆಯೇ ಅಂದಿನ ಪಾಲಕ-ಪೋಷಕರಿಗೆ ಮಕ್ಕಳು ಯಾವ ಕಾದಂಬರಿ ಓದುತ್ತಾರೆ ಎನ್ನುವ ಕಾಳಜಿ ಇರುತ್ತಿತ್ತು.
ಏಕೆಂದರೆ ಒಂದಷ್ಟು ಒಳ್ಳೆಯ ಕಾದಂಬರಿಯ ಜತೆಗೆ ಕೊಲೆ, ಸುಲಿಗೆ, ಅಶ್ಲೀಲಗಳಿರುವ ಕೆಲವು ಪತ್ತೇದಾರಿ ಕಾದಂಬರಿಗಳೂ ಪ್ರಕಟವಾಗುತ್ತಿದ್ದವು. ಆದ್ದರಿಂದ ನಮ್ಮ ಮನೆಯಲ್ಲಿ ಕಾದಂಬರಿ ಓದುವುದಕ್ಕೆ ನಿಷೇಧವಿತ್ತು. ಒಮ್ಮೆ ನನ್ನ ಅಕ್ಕ ಪಠ್ಯಪುಸ್ತಕದ ನಡುವೆ ಕಾದಂಬರಿ ಇಟ್ಟುಕೊಂಡು ಓದುತ್ತಿದ್ದುದು ನನ್ನ ಕಣ್ಣಿಗೆ ಬಿತ್ತು.
ನಾನು ಅಪ್ಪ-ಅಮ್ಮಂದಿರಲ್ಲಿ ಹೇಳಿದಾಗ, ಅಪ್ಪ ಅಕ್ಕನಿಗೆ ಮೊದಲ ಹದಿನೈದು ನಿಮಿಷ ಬೈದು, ಆಮೇಲೆ ‘ಯಾವ ಕಾದಂಬರಿ? ಯಾರು ಬರೆದದ್ದು?’ ಎಂದು ಕೇಳಿದ್ದರು. ಅಕ್ಕ ‘ಭೈರಪ್ಪನವರ ಪರ್ವ’ ಎಂದಳು. ‘ಭೈರಪ್ಪ ಎಂಬ ಹೆಸರು ಕೇಳಿದ್ದೇನೆ, ಆ ಪುಸ್ತಕವನ್ನು ನನಗೆ ಕೊಡು, ಮೊದಲು ನಾನು ಓದಿ, ಅದು ಚೆನ್ನಾಗಿದ್ದರೆ ನಿನಗೆ ಹೇಳುತ್ತೇನೆ, ಆಮೇಲೆ ನೀನು ಓದುವೆಯಂತೆ’ ಎಂದು ಆ ಪುಸ್ತಕವನ್ನು ತೆಗೆದುಕೊಂಡು ಹೋದರು.
ಆಗಲೇ ಕಾಲೇಜು ಓದುತ್ತಿದ್ದ ಅಕ್ಕನಿಗೆ ಅದಕ್ಕಿಂತ ಹೆಚ್ಚೇನೂ ಮಾಡಲು ಸಾಧ್ಯವಿರಲಿಲ್ಲ. ಎರಡು ದಿನದ ನಂತರ ಅಪ್ಪ ಅಕ್ಕನಿಗೆ ಆ ಪುಸ್ತಕವನ್ನು ಹಿಂದಿರುಗಿಸಿ ‘ಚೆನ್ನಾಗಿದೆ’ ಎನ್ನುತ್ತಾ ನಿಮ್ಮ ಇನ್ನಷ್ಟು ಕಾದಂಬರಿಗಳನ್ನು ತರಿಸಿಕೊಂಡು ಓದಿದರು. ಹೀಗೆ ನಮ್ಮ ಮನೆಯಲ್ಲಿ ಕಾದಂಬರಿಗಳ ಪ್ರವೇಶಕ್ಕೆ ನೀವು ಕಾರಣೀಕರ್ತರು. ಅಕ್ಕ ಓದಿ ಮುಗಿಸಿದ ನಂತರ ಪರ್ವವನ್ನು ನಾನೂ ಓದಿದೆ. ನಾನು ಓದಿದ ಮೊತ್ತಮೊದಲ ಕಾದಂಬರಿ ‘ಪರ್ವ’.
ನಿಮ್ಮ ಬಹುತೇಕ ಕೃತಿಗಳನ್ನು ಓದಿದರೂ, ನಿಮ್ಮ ಕೃತಿಗಳಲ್ಲಿ ಇಂದಿಗೂ ನನ್ನ ಫೇವರಿಟ್ ಪರ್ವವೇ. ಎರಡೂವರೆ ತಾಸು ಕುಳಿತು ಸಿನಿಮಾ ನೋಡಲು ಸಾಧ್ಯವಾಗದ ಈ ಕಾಲದಲ್ಲಿ ನಿಮ್ಮ ‘ಪರ್ವ’ ನಾಟಕವನ್ನು ಏಳೂವರೆ ಗಂಟೆ ಕುಳಿತು ನೋಡಿದ್ದೇ ಇದಕ್ಕೆ ಸಾಕ್ಷಿ.
ನಿಮ್ಮನ್ನು ಓದುತ್ತಿರುವಾಗ, ಮುಂದೊಂದು ದಿನ ನಾನೂ ಬರೆಯುತ್ತೇನೆ, ಅದು ಪುಸ್ತಕವಾಗಿ ಪ್ರಕಟವಾಗುತ್ತದೆ, ಅದರ ಬಿಡುಗಡೆ ಸಮಾರಂಭಕ್ಕೆ ನೀವು ಬರುತ್ತೀರಿ, ನಾನು ನಿಮ್ಮೊಂದಿಗೆ ವೇದಿಕೆ ಹಂಚಿಕೊಳ್ಳುತ್ತೇನೆ ಎಂಬ ಲವ ಮಾತ್ರದ ಕನಸನ್ನೂ ಕಂಡಿರಲಿಲ್ಲ. ವಿಶ್ವೇಶ್ವರ ಭಟ್ಟರು, ವಿಶ್ವವಾಣಿ ಪುಸ್ತಕದಿಂದ ಅದೂ ಸಾಧ್ಯವಾಯಿತು. ಅದೂ ಒಂದಲ್ಲ, ಎರಡು ಬಾರಿ!
ನನ್ನ ಬರಹದ ಬದುಕಿಗೆ ಇದಕ್ಕಿಂತ ‘ಸಾರ್ಥ’ಕದ ಕ್ಷಣ ಬೇರೆ ಬೇಕೇ? ಆದರೆ ನಿಮ್ಮಲ್ಲಿ ಕೇಳಬೇಕಾದ ಕೆಲವು ಪ್ರಶ್ನೆಗಳು ಅಂದೂ ಇದ್ದವು, ಇಂದೂ ಇವೆ. ಕೊನೆಯ ದಿನಗಳಲ್ಲಿ ನಿಮ್ಮ ಜೀವನದ ಬಹು ಭಾಗವನ್ನು ಕಳೆದ ಮೈಸೂರಿನ ಮನೆಯನ್ನು ಬಿಟ್ಟು ಬೆಂಗಳೂರಿಗೆ ಬಂದಿರಿ. ಬಹುಶಃ ಅದು ನಿಮ್ಮ ಕೊನೆಯ ದಿನಗಳು ಎಂದು ನಿಮಗೂ ಅನ್ನಿಸಿರಲಿಕ್ಕಿಲ್ಲ.
ನೀವು ಆ ಮನೆ ಬಿಟ್ಟು ಬರುವಾಗ ನಿಮಗೆ ತೊಂಬತ್ತ ಮೂರು ವರ್ಷ. ನಿಮ್ಮ ಜತೆ ಸಹಬಾಳ್ವೆ ನಡೆಸಿದ ಪತ್ನಿಯನ್ನು ಮೈಸೂರಿನಲ್ಲಿ ಬಿಟ್ಟು, ತಮ್ಮನ್ನು ಅತಿ ಗೌರವದಿಂದ ಕಾಣುವ ವಿಶ್ವೇಶ್ವರ ಭಟ್ಟರ ಮನೆಯಲ್ಲಿ ಬಂದು ಉಳಿದಿರಿ. ‘ನೀವು ಅವರ ಮನೆಯನ್ನೇ ಯಾಕೆ ಆಯ್ದುಕೊಂಡಿರಿ?’ ಎಂಬ ಕುತೂಹಲ ನನ್ನಂತೆಯೇ ಅನೇಕರ ಮನದಲ್ಲಿ ಮೂಡಿತ್ತು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ನನ್ನ ದೃಷ್ಟಿಯಲ್ಲಿ ಇದು ಭಟ್ಟರ ಪಾಲಿಗೆ ಒದಗಿ ಬಂದ ಅದೃಷ್ಟ. ಅವರು ಮಾಡಿದ ಸುಕೃತದ ಫಲ ಈ ರೀತಿಯಲ್ಲಿ ಅವರಿಗೆ ಬಂದೊದಗಿದೆ ಎಂದೇ ನಾನು ಭಾವಿಸಿದೆ. ಯಾಕೆಂದರೆ, ಯಾರಾದರೂ ಕರೆದಾಗ ಬಿಡಿ, ಒತ್ತಾಯ ಮಾಡಿದರೂ ನೀವು ಎಲ್ಲಿಯೂ ಹೋದವರಲ್ಲ, ಹೋಗುವವರೂ ಅಲ್ಲ. ಯಾವುದೋ ಆಸೆಗೆ, ಕಾಟಾಚಾರಕ್ಕೆ ಏನನ್ನಾದರೂ ಒಪ್ಪಿಕೊಳ್ಳುವವರು ನೀವಲ್ಲ.
ಇದೇ ವಿಶ್ವೇಶ್ವರ ಭಟ್ಟರ ಕುರಿತಾಗಿ ನಾನು ‘ವಿಶ್ವತೋಮುಖ’ ಪುಸ್ತಕ ಬರೆಯುವಾಗ ನಿಮ್ಮಿಂದ ಮುನ್ನುಡಿ ಬರೆಸಬೇಕೆಂದು ಒಮ್ಮೆ ನಿಮ್ಮ ಬಳಿ ಮಾತನಾಡಿದ್ದೆ. ನೀವು ‘ಈಗ ನನ್ನಿಂದ ಬರೆಯಲು ಸಾಧ್ಯವಾಗುತ್ತಿಲ್ಲ, ಬೇರೆ ಯಾರಿಂದಲಾದರೂ ಬರೆಸಿ’ ಎಂದು ನಯವಾಗಿಯೇ ಹೇಳಿದ್ದೀರಿ. ಭಟ್ಟರ ಬಗ್ಗೆ ಇಷ್ಟು ಅಭಿಮಾನ ಇಟ್ಟುಕೊಂಡಿರುವ ನೀವು ಅವರ ಬಗ್ಗೆ ಮುನ್ನುಡಿ ಬರೆಯಲಿಲ್ಲ ಎಂದು ನನಗೆ ಆ ಸಂದರ್ಭದಲ್ಲಿ ಬೇಸರವಾಗಿದ್ದು ನಿಜವಾದರೂ, ನಂತರ ಪುಸ್ತಕ ಬಿಡುಗಡೆಗೆ ಬಂದಾಗ ಸಮಾಧಾನವಾಗಿತ್ತು.
ಎಂಟು ತಿಂಗಳ ಹಿಂದೆ ನೀವು ಅವರ ಮನೆಗೆ ಬಂದು ಉಳಿದಿದ್ದೀರಿ ಎಂಬ ವಿಷಯ ತಿಳಿದಾಗ ಸಂತೋಷಪಟ್ಟವರಲ್ಲಿ ನಾನೂ ಒಬ್ಬ. ಭಕ್ತನನ್ನು ಹುಡುಕಿಕೊಂಡು ದೇವರೇರುತ್ತಾನಂತೆ, ಶಿಷ್ಯ ನನ್ನು ಹುಡುಕಿಕೊಂಡು ಗುರುವೇ ಬರುತ್ತಾನಂತೆ ಎಂದು ಕೇಳಿದ ಮಾತು ಸತ್ಯ ಎಂದೆನಿಸಿತು. ಅದಕ್ಕೆ ತಕ್ಕಂತೆ ಭಟ್ಟರೂ, ಅವರ ಮನೆಯವರೂ ನಿಮ್ಮನ್ನು ಅಷ್ಟೇ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಂಡು ಸಂಭ್ರಮಪಟ್ಟರು.
ನಿಮಗೆ ಯಾವುದೇ ವಸ್ತುವಿನ ಅವಶ್ಯಕತೆ ಇದ್ದಲ್ಲಿ ಐದರಿಂದ ಹತ್ತು ನಿಮಿಷದ ಒಳಗೆ ಅದು ನಿಮಗೆ ತಲುಪುವ ವ್ಯವಸ್ಥೆಯನ್ನು ಮಾಡಿದ್ದು, ನಿಮ್ಮ ಆರೋಗ್ಯದಲ್ಲಿ ಸ್ವಲ್ಪವೇ ಏರುಪೇರಾದರೂ ಹತ್ತು ನಿಮಿಷದ ಒಳಗೆ ವೈದ್ಯರು ಬಂದು ನಿಮ್ಮನ್ನು ಪರೀಕ್ಷಿಸುವ ವ್ಯವಸ್ಥೆ ಮಾಡಿದ್ದನ್ನು ನೀವು ಗಮನಿಸಿ ದ್ದೀರೋ ಇಲ್ಲವೋ ಗೊತ್ತಿಲ್ಲ.
ನೀವಾದರೋ ಏನನ್ನೂ ಬಯಸಿದವರಲ್ಲ. ನಿಮ್ಮಲ್ಲಿ ಸಾಕಷ್ಟು ಹಣವಿತ್ತು. ನೀವು ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿಯೇ ಉಳಿದುಕೊಳ್ಳಬಹುದಾಗಿತ್ತು. ಅಷ್ಟಕ್ಕೂ ನಿಮಗೆ ಬೇಕಾದದ್ದು, ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಲಘು ಉಪಹಾರ, ಅಷ್ಟೇ ತಾನೇ? ನೀವು ಗಳಿಸಿದ ಆಸ್ತಿ, ನೀವು ಗಳಿಸಿದ ಕೀರ್ತಿಯಿಂದ, ನೀವು ಬಂದು ಉಳಿಯುತ್ತೀರಿ ಎಂದರೆ ನಿಮ್ಮನ್ನು ಇಟ್ಟುಕೊಳ್ಳಲು ಸಾಕಷ್ಟು ಜನ ಮುಂದೆ ಬರುತ್ತಿದ್ದರು.
ಕರ್ನಾಟಕದಲ್ಲಿ ಅಷ್ಟೇ ಅಲ್ಲ ಬಹುಶಃ ಮಹಾರಾಷ್ಟ್ರದ ಓದುಗರೂ ಇದಕ್ಕೆ ಿದ್ದರಾಗಿದ್ದರು ಎಂದು ನೀವು ತೀರಿಹೋದ ಮೇಲೆ ಮರಾಠಿ ದಿನಪತ್ರಿಕೆಯಲ್ಲಿ ನಿಮ್ಮ ಸಲುವಾಗಿ ಒಂದುವರೆ ಪುಟವನ್ನು ಮೀಸಲಿಟ್ಟಿದ್ದನ್ನು ನೋಡಿದಾಗ ಅನ್ನಿಸಿತು. ಇನ್ನೂ ಯಾವ-ಯಾವ ಭಾಷೆಯ ಪತ್ರಿಕೆಯಲ್ಲಿ ಎಷ್ಟೆಷ್ಟು ಬರೆದಿzರೋ ಗೊತ್ತಿಲ್ಲ. ಏಕೆಂದರೆ ನಿಮ್ಮ ಪುಸ್ತಕಗಳು ನಲವತ್ತು ಭಾಷೆಯಲ್ಲಿ ಅನುವಾದ ಗೊಂಡಿವೆ. ಕನ್ನಡದ ಯಾವ ಸಾಹಿತಿಯ ಪುಸ್ತಕವೂ ಇಷ್ಟೊಂದು ಭಾಷೆಗೆ ಅನುವಾದಗೊಂಡಿಲ್ಲ.
ನನ್ನ ದೃಷ್ಟಿಯಲ್ಲಿ ಇದು ‘ಜ್ಞಾನಪೀಠ’ವಲ್ಲ, ಅದಕ್ಕಿಂತ ಮಿಗಿಲಾದ ‘ಸುಜ್ಞಾನಪೀಠ’ ಎಂಬ ಪ್ರಶಸ್ತಿ ಇದ್ದಿದ್ದರೂ ಅದಕ್ಕಿಂತ ಮಿಗಿಲಾದದ್ದು. ಎಷ್ಟೋ ಜನರಿಗೆ ನಿಮಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿಲ್ಲ ಎಂಬ ಬೇಸರವಿದೆ. ಅಂಥವರಲ್ಲಿ ನಾನೂ ಒಬ್ಬನಾಗಿದ್ದೆ. ಆದರೆ ನಿಮ್ಮ ಕಠೋರ ನಿಲುವು ನೋಡಿ ದಾಗ, ಕಠಿಣ ನುಡಿ ಕೇಳಿದಾಗ ಅದು ನಿಮಗೆ ಸಿಗುವುದಿಲ್ಲ ಎಂದು ಖಚಿತವಾಗಿತ್ತು. ನಿಮಗೆ ಸಿಕ್ಕದ ಜ್ಞಾನಪೀಠ ಶಾಶ್ವತವಾಗಿ ಸೊಣಕಲಾಯಿತು.
2006ರಲ್ಲಿ ಬಹ್ರೈನ್ನಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಾಧ್ಯಕ್ಷರಾಗಿ ಬಂದಾಗ, ನೀವು ಮಾತು ಆರಂಭಿಸುತ್ತಿದ್ದಂತೆಯೇ ಜನ ಚಪಾಳೆ ತಟ್ಟಿದರು. ‘ನನ್ನ ಮಾತು ಆರಂಭವೇ ಆಗಲಿಲ್ಲ, ಈಗಲೇ ಯಾಕೆ ಚಪ್ಪಾಳೆ ಹೊಡೆಯುತ್ತೀರಿ? ಪೂರ್ತಿ ಕೇಳಿಸಿಕೊಂಡ ನಂತರ ಚಪ್ಪಾಳೆ ಹೊಡೆಯಿರಿ’ ಎಂದು ಕಟುವಾಗಿ ನುಡಿದಿರಿ.
ಆಗಲೇ ಅನಿಸಿತ್ತು ನಿಮಗೆ ಯಾರದ್ದೂ ಶಹಬಾಸ್ ಗಿರಿಬೇಕಿಲ್ಲ ಎಂದು. ಬೇರೆಯವರಾಗಿದ್ದರೆ, ವಿದೇಶಕ್ಕೆ ಬಂದು ಭಾಷಣ ಮಾಡುವುದನ್ನು, ಅಲ್ಲಿಯ ಜನ ಚಪ್ಪಾಳೆ ಹೊಡೆಯುವುದನ್ನು ಎಷ್ಟು ಸಂಭ್ರಮಿಸುತ್ತಿದ್ದರು ಗೊತ್ತೇ? ನಿಮಗೆ ಇಂತಹ ಸೂಕ್ಷ್ಮಗಳೆಲ್ಲ ಅರ್ಥವಾಗುತ್ತಿರಲಿಲ್ಲವೇ?’ ಇಂಗ್ಲಿಷ್ ಮಾಧ್ಯಮದ ಶಾಲೆ ನಡೆಸುವವರಿಗೆ ಶಿಕ್ಷಣ ಎಂದರೆ ವ್ಯಾಪಾರ ಎಂದು ಅವರ ವಿರೋಧ ಕಟ್ಟು ಕೊಂಡಿರಿ.
‘ಎಲ್ಲರಿಗೂ ಶಿಕ್ಷಕರಾಗುವ ಯೋಗ್ಯತೆ ಇರುವುದಿಲ್ಲ. ದುಡ್ಡಿಗಾಗಿ ಪಾಠ ಹೇಳುವವರು ಶಿಕ್ಷಕ ರಾಗುವುದಿಲ್ಲ’ ಎಂದು ಒಂದಷ್ಟು ಶಿಕ್ಷಕರನ್ನು ದೂರ ಮಾಡಿಕೊಂಡಿರಿ. ‘ವಿದ್ಯೆ ಎಂದರೆ ಏನು ಎಂಬ ಪರಿeನವೇ ಇಲ್ಲದವರು ನಮ್ಮ ರಾಜ್ಯ ಆಳುತ್ತಿದ್ದಾರೆ’ ಎಂದು ಜನಪತಿನಿಧಿಗಳ ವಿರೋಧ ಕಟ್ಟಿ ಕೊಂಡಿರಿ.
‘ಧಾರ್ಮಿಕ ಆಚರಣೆಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗುವವರು ತುಂಟರು’ ಎಂಬ ಹೇಳಿಕೆ ನೀಡಿ ನಾಸ್ತಿಕರ ಬಾಯಿಗೆ ಬಿದ್ದಿರಿ. ಕಮ್ಯುನಿಷ್ಟರ ವಿರುದ್ಧ ಮಾತಾಡಿ ಅವರ ಕಣ್ಣಿಗೆ ಬಿದ್ದಿರಿ. ಟಿಪ್ಪು ಸುಲ್ತಾನ್, ತುಘಲಕ್ ಕುರಿತಾಗಿ ನಿಮ್ಮ ಅಭಿಪ್ರಾಯ ಹೇಳಿ, ನಿಮ್ಮ ಎರಡು ಕಾದಂಬರಿಯ ಸಿನಿಮಾ ಕ್ಕೆ ನಿರ್ದೇಶನ ಮಾಡಿದ ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿಯವರ ಬರವಣಿಗೆಯ ಕುರಿತು ಮಾತಾಡಿ ಅವರ ಮುನಿಸನ್ನೂ ಎದುರಿಸಿದಿರಿ.
‘ಮೊದಲು ಸತ್ಯ, ಆಮೇಲೆ ಸಾಹಿತ್ಯ, ಸೌಂದರ್ಯ, ಕಲೆ’ ಎಂದು ಹೇಳಿ ಇನ್ನಷ್ಟು ಸಾಹಿತಿಗಳನ್ನು, ಕಲಾವಿದರನ್ನು ಎದುರು ಹಾಕಿಕೊಂಡಿರಿ. ಹಾಗೆ ನೋಡಿದರೆ ನಿಮಗೆ ಕನ್ನಡ ಸಾಹಿತ್ಯ ವಲಯದಲ್ಲಿ ಸ್ನೇಹಿತರ ಸಂಖ್ಯೆ ತೀರಾ ಕಡಿಮೆ. ನಿಮಗೆ ಸತ್ಯ ಎಂದು ಕಂಡಿದ್ದರ ಪರ ನೀವು ನಿಂತಿದ್ದು ಇದಕ್ಕೆ ಕಾರಣ ಇರಬಹುದು. ಈ ಲೋಕದಲ್ಲಿ ಅವರ ಮೂಗಿನ ನೇರಕ್ಕೆ ನಡೆಯುವವರು ಒಳ್ಳೆಯವರು, ಇಲ್ಲವಾದರೆ ಕೆಟ್ಟವರು ಎಂಬುದು ನಿಮಗೆ ತಿಳಿದಿರಲಿಲ್ಲ ಎಂದೆನಿಸುತ್ತದೆ.
ಅದಕ್ಕಾಗಿ ನೀವು ‘ಸರಕಾರಿ ಸಾಹಿತಿ’ಯಾಗಲಿಲ್ಲ. ಅಷ್ಟಕ್ಕೂ ನೀವಾಗಿಯೇ ಯಾವುದೇ ಪದವಿಯ, ಸ್ಥಾನದ, ಪ್ರಶಸ್ತಿಯ, ಸನ್ಮಾನದ ಬೆನ್ನು ಹತ್ತಿದವರಲ್ಲ. ಪ್ರಶಸ್ತಿ, ಸನ್ಮಾನಗಳ ಜತೆಗೆ ಬಂದ ಹಣವನ್ನು ಬಡ ವಿದ್ಯಾರ್ಥಿಗಳಿಗೆ, ಶಾಲೆಗಳಿಗೆ, ಊರಿನ ಜನರಿಗೆ, ಹೀಗೆ ಇತರರ ಒಳಿತಿಗೆ ಹಂಚಿದವರು. ಹಾಗಂತ ನೀವು ಹುಟ್ಟಿನಿಂದಲೇ ಶ್ರೀಮಂತರೇನೂ ಆಗಿರಲಿಲ್ಲ.
ಬಡತನದಲ್ಲಿಯೇ ಹುಟ್ಟಿ ಬೆಳೆದವರು. ದುಡಿಮೆಯಿಂದ, ಬರವಣಿಗೆಯಿಂದ, ಸಾಹಿತ್ಯಕವಾಗಿಯೂ, ಆರ್ಥಿಕವಾಗಿಯೂ ಶ್ರೀಮಂತರಾದವರು. ನೀವು ನಮ್ಮನ್ನು ಬಿಟ್ಟು ಹೋದ ನಂತರ ಈ ವಿಷಯ ಗಳು ಚರ್ಚೆಯಾಗಬೇಕಿತ್ತು. ನಿಮ್ಮ ಉದಾತ್ತ ಮನೋಭಾವ, ಬಡವರ ಬಗ್ಗೆ ನಿಮಗಿರುವ ಅಂತಃ ಕರಣ, ನಿಮ್ಮ ಊರಿನ ಜನರ ಬಗ್ಗೆ ನಿಮಗಿರುವ ಕಾಳಜಿ, ಪ್ರಶಸ್ತಿ-ಸನ್ಮಾನಗಳನ್ನು ಸ್ವೀಕರಿಸಿದ ಮರುಘಳಿಗೆಯ, ಕೆಲವೊಮ್ಮೆ ವೇದಿಕೆಯ ಆ ಹಣವನ್ನು ಸತ್ಕಾರ್ಯಕ್ಕೆ ಬಳಸಬೇಕೆಂದು ಹಿಂತಿರು ಗಿಸುತ್ತಿದ್ದದ್ದು, ‘ನಾನು ಸಾಯುವಾಗ ನನ್ನ ಬಳಿ ಒಂದು ರೂಪಾಯಿಯೂ ಇರಕೂಡದು’ ಎಂಬ ನಿರ್ಧಾರದಿಂದ ಟ್ರಸ್ಟ್ ಸ್ಥಾಪಿಸಿದ್ದು, ಇಂತಹ ವಿಷಯ ಹೆಚ್ಚು ಸುದ್ದಿ ಆಗಬೇಕಿತ್ತು.
ಆದರೆ ಕೆಲವು ಮಾಧ್ಯಮಗಳಲ್ಲಿ ನೀವು ಬರೆದಿಟ್ಟ ಉಯಿಲು ಚರ್ಚೆಯಾಯಿತು. ಅವರದ್ದೂ ಹೊಟ್ಟೆಪಾಡು ತಾನೆ? ಮಾರ್ಕೆಟ್ ಶೇರ್‌ನಲ್ಲಿ ಎರಡಂಕಿ ತಲುಪದ, ಟಿಆರ್‌ಪಿಯಲ್ಲಿ ಐದನ್ನು ದಾಟದ, ನೋಡುಗರಲ್ಲಿ ನೂರನ್ನು ಮೀರದ ಸುದ್ದಿವಾಹಿನಿಯವರು ಮತ್ತಿನ್ನೇನು ಮಾಡಿಯಾರು? ಇವರ ಜತೆಗೆ ಸೋಶಿಯಲ್ ಮೀಡಿಯಾ ಇನ್ ಫ್ಲ್ಯೂಯೆನ್ಸರ್ಗಳೆಂದು ತಮಗೆ ತಾವೇ ಕಿರೀಟ ತೊಡಿಸಿಕೊಂಡು, ತಮ್ಮ ಕೈಯಿಂದ ತಮ್ಮ ಬೆನ್ನನ್ನೇ ತಟ್ಟಿಕೊಂಡು ಓಡಾಡುವ ಒಂದಿಷ್ಟು ಯೂಟ್ಯೂಬ್ ಶೂರರು, ಪಾಡ್‌ಕಾಸ್ಟ್ ಕಲಿಗಳಿಗೆ ಉಯಿಲೇ ಆಹಾರವಾಯಿತು.
ಅವರಿಗೆ ನಿಮ್ಮ ನಾವೆಲ್ (ಕಾದಂಬರಿ), ದಿಲ್ (ಹೃದಯ)ಗಿಂತ ವಿಲ್ (ಉಯಿಲು) ಖುಷಿ ಕೊಟ್ಟಿರ ಬೇಕು. ನಿಮ್ಮ ಒಂದೇ ಒಂದು ಪುಸ್ತಕದ ಒಂದು ಪುಟ ಓದದಿದ್ದರೂ, ಉಯಿಲಿನ ಎಲ್ಲಾ ಪುಟ ಗಳನ್ನು ಓದಿ ಅದರ ಬಗ್ಗೆ ಚರ್ಚಿಸುತ್ತಿರುವವರಿಗೆ ನನ್ನ ಕಡೆಯಿಂದ ಶ್ರದ್ಧಾಂಜಲಿ. ಜನರ ಖಾಸಗಿ ವಿಷಯವನ್ನು ಸಾರ್ವಜನಿಕವಾಗಿ ಚರ್ಚಿಸುವುದರಲ್ಲಿ ಕೆಲವರಿಗೆ ಯಾವ ಸುಖ ಸಿಗುತ್ತದೆ ಯೋ ಗೊತ್ತಿಲ್ಲ.
ಅಷ್ಟಕ್ಕೂ ನೀವು ನನಗೆ ಹತ್ತಿರವಾದದ್ದು, ನಾನು ನಿಮ್ಮ ಅಭಿಮಾನಿಯಾದದ್ದು ನಿಮ್ಮ ಬರವಣಿಗೆ ಯಿಂದ. ನಿಮ್ಮನ್ನು ಓದಿದ ಸುಮಾರು ಮೂರೂವರೆ ದಶಕದ ನಂತರ ನಾನು ನಿಮ್ಮನ್ನು ಮುಖತಃ ಭೇಟಿಯಾದದ್ದು. ಅದರ ನಂತರ ನಾಲ್ಕು-ಐದು ಬಾರಿ ಭೇಟಿಯಾದರೂ ನಿಮ್ಮ ವೈಯಕ್ತಿಕ ವಿಷಯದಲ್ಲಿ ನನಗೆ ಯಾವ ಆಸಕ್ತಿಯೂ ಇರಲಿಲ್ಲ.
ಎಲ್ಲಿಯವರೆಗೆ ಎಂದರೆ, ನಿಮಗೆ ಎಷ್ಟು ಮಕ್ಕಳು, ಎಷ್ಟು ಮೊಮ್ಮಕ್ಕಳು, ನಿಮ್ಮ ಶ್ರೀಮತಿಯವರ ಹೆಸರೇನು, ಇದ್ಯಾವುದೂ ಗೊತ್ತಿರಲಿಲ್ಲ. ಅದು ನನಗೆ ಬೇಕಾಗಿಯೂ ಇರಲಿಲ್ಲ. ನಾನು ಸಚಿನ್ ತೆಂಡೂಲ್ಕರ್ ನನ್ನು ಇಷ್ಟಪಡುವುದು ಆತನ ಆಟಕ್ಕೆ, ಅಮಿತಾಭ್ ಬಚ್ಚನ್ನನ್ನು ಇಷ್ಟ ಪಡುವುದು ಆತನ ಅಭಿನಯಕ್ಕೆ ಎಂದು ತಿಳಿದವನು. ಅವರ ಖಾಸಗಿ ಜೀವನದಲ್ಲಿ ಏನು ನಡೆಯುತ್ತಿದೆ ಎಂಬ ಆಸಕ್ತಿ ನನಗೆ ಎಳ್ಳಷ್ಟೂ ಇಲ್ಲ.
ನಾವು ಯಾರನ್ನೇ ಎಷ್ಟೇ ಇಷ್ಟಪಟ್ಟರೂ, ದ್ವೇಷಿಸಿದರೂ, ಅವರ ವೈಯಕ್ತಿಕ ಅಥವಾ ಖಾಸಗಿ ವಿಷಯದಲ್ಲಿ ತೊಂದರೆಯಾದಾಗ ನಮ್ಮಿಂದ ಅದನ್ನು ಬಗೆಹರಿಸಲು ಸಾಧ್ಯವಿದ್ದರೆ, ಕೊನೆಯಪಕ್ಷ ನಾಲ್ಕು ಸಾಂತ್ವನದ ಮಾತನ್ನಾದರೂ ಆಡಲು ಸಾಧ್ಯವಿದ್ದರೆ ಮಾತ್ರ ಆ ಕಡೆ ಲಕ್ಷ್ಯ ಕೊಡಬೇಕು ಎಂದು ನಂಬಿದವನು ನಾನು.
ಅದನ್ನು ಬಿಟ್ಟು, ಯಾರೋ ಓದುತ್ತಾರೆ, ಯಾರೋ ನೋಡುತ್ತಾರೆ, ಯಾರೋ ಇಷ್ಟಪಡುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಾಯಿ ಹರಿಬಿಟ್ಟರೆ, ಅಕ್ಷರ ಹಾದರ ಮಾಡಿದರೆ ಯಾವ ಪ್ರಯೋಜನವೂ ಇಲ್ಲ ಎಂದು ಕೆಲವರಿಗೆ ಯಾಕೆ ಅರ್ಥವಾಗುವುದಿಲ್ಲವೋ ಗೊತ್ತಿಲ್ಲ. ಅವರ ಚಪಲ ಅವರು ತೀರಿಸಿಕೊಳ್ಳಲಿ ಬಿಡಿ. ಉಳಿದಂತೆ, ಪುಸ್ತಕ ಮಳಿಗೆಗಳಲ್ಲಿ ನಿಮ್ಮ ಕಾದಂಬರಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಶೀಘ್ರದಲ್ಲಿಯೇ ಇನ್ನೊಂದಿಷ್ಟು ಮರು ಮುದ್ರಣ ಕಾಣಲಿವೆ.
ನಿಮ್ಮವ...