ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಉಲೂಪಿಯ ಕಥನ ಕಲಿಸುವ ಜೀವನ ಪಾಠ

ಅರ್ಜುನನು ಗಂಗಾದ್ವಾರದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಿದ್ದಾಗ, ನಾಗರಾಜ ಕೌರವ್ಯನ ಮಗಳಾದ ಉಲೂಪಿಯು ಅರ್ಜುನನನ್ನು ಕಂಡು ಆತನ ತೇಜಸ್ಸಿಗೆ ಮಾರುಹೋದಳು. ಆತನನ್ನು ಪಾತಾಳ ಲೋಕಕ್ಕೆ ಕರೆದೊಯ್ದು, ಹೇ ಧನಂಜಯ, ನಿನ್ನ ರೂಪ ಮತ್ತು ಪರಾಕ್ರಮಕ್ಕೆ ಮನಸೋತಿದ್ದೇನೆ. ನನ್ನನ್ನು ಪತ್ನಿ ಯಾಗಿ ಸ್ವೀಕರಿಸು ಎಂದು ಪ್ರಾರ್ಥಿಸಿದಳು.

ಒಂದೊಳ್ಳೆ ಮಾತು

ದ್ವಾಪರಯುಗದಲ್ಲಿ ಪಾಂಡವರ ನಡುವೆ ದ್ರೌಪದಿಯ ನಿವಾಸಕ್ಕೆ ಸಂಬಂಧಿಸಿದಂತೆ ಒಂದು ಧರ್ಮ ನಿಯಮವಿತ್ತು. ಆ ನಿಯಮದಂತೆ, ದ್ರೌಪದಿಯೊಂದಿಗೆ ಒಬ್ಬ ಪಾಂಡವ ಏಕಾಂತದಲ್ಲಿರುವಾಗ ಕೋಣೆಗೆ ಮತ್ತೊಬ್ಬನು ಪ್ರವೇಶಿಸುವಂತಿರಲಿಲ್ಲ. ಆದರೆ ಒಮ್ಮೆ ಸಂಕಟದ ಸಮಯದಲ್ಲಿ ಗೋವು ಗಳ ಮತ್ತು ಬ್ರಾಹ್ಮಣರ ರಕ್ಷಣೆಗೆ ಶಸ್ತ್ರಗಳ ಅಗತ್ಯವಿದ್ದಾಗ, ಅರ್ಜುನನು ಧರ್ಮಪಾಲನೆಗಾಗಿ ಸ್ವಯಂಪ್ರೇರಿತನಾಗಿ ಆ ನಿಯಮವನ್ನು ಮುರಿದು ಹನ್ನೆರಡು ವರ್ಷಗಳ ತೀರ್ಥಯಾತ್ರೆಗೆ ತೆರಳಿದನು.

ಅರ್ಜುನನು ಗಂಗಾದ್ವಾರದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಿದ್ದಾಗ, ನಾಗರಾಜ ಕೌರವ್ಯನ ಮಗಳಾದ ಉಲೂಪಿಯು ಅರ್ಜುನನನ್ನು ಕಂಡು ಆತನ ತೇಜಸ್ಸಿಗೆ ಮಾರುಹೋದಳು. ಆತನನ್ನು ಪಾತಾಳಲೋಕಕ್ಕೆ ಕರೆದೊಯ್ದು, ಹೇ ಧನಂಜಯ, ನಿನ್ನ ರೂಪ ಮತ್ತು ಪರಾಕ್ರಮಕ್ಕೆ ಮನಸೋತಿ ದ್ದೇನೆ. ನನ್ನನ್ನು ಪತ್ನಿ ಯಾಗಿ ಸ್ವೀಕರಿಸು ಎಂದು ಪ್ರಾರ್ಥಿಸಿದಳು.

ತಾನು ಬ್ರಹ್ಮಚರ್ಯ ವ್ರತದಲ್ಲಿದ್ದೇನೆಂದು ಅರ್ಜುನನು ನುಡಿದಾಗ, ಉಲೂಪಿಯು ನಿನ್ನ ವ್ರತವು ದ್ರೌಪದಿಗೆ ಮಾತ್ರ ಸೀಮಿತ; ನನ್ನಂತಹ ಆಶ್ರಯ ಬೇಡಿದ ಅಬಲೆಯ ಪ್ರಾಣರಕ್ಷಣೆ ಮಾಡುವುದು ಕ್ಷತ್ರಿಯ ಧರ್ಮ ಎಂದು ಧರ್ಮಸೂಕ್ಷ ವನ್ನು ಬಿಡಿಸಿ ಹೇಳಿದಳು. ಅರ್ಜುನನು ಒಪ್ಪಿ ಅವಳೊಂದಿಗೆ ಒಂದು ರಾತ್ರಿ ಕಳೆದನು. ಅವರಿಬ್ಬರ ಸಂಗಮದಿಂದ ಅಪ್ರತಿಮ ವೀರನಾದ ‘ಇರಾವಾನ್’ ಜನಿಸಿದನು.

ಇದನ್ನೂ ಓದಿ: Roopa Gururaj Column: ಸತ್ಯ ಅಪ್ರಿಯವಾದರೂ, ಔಷಧದಂತೆ

ತನ್ನ ಕರ್ತವ್ಯ ಮುಗಿದ ಬಳಿಕ ಅರ್ಜುನನು ಭೂಲೋಕಕ್ಕೆ ಮರಳಿದನು. ಆದರೆ ಉಲೂಪಿಯ ಪ್ರೇಮವು ಕೇವಲ ಸ್ವಾರ್ಥಕ್ಕೆ ಸೀಮಿತವಾಗಿರಲಿಲ್ಲ. ಅರ್ಜುನನ ಮತ್ತೊಬ್ಬ ಪತ್ನಿ ಚಿತ್ರಾಂಗದೆಯ ಮಗನಾದ ಬಭ್ರುವಾಹನನನ್ನು ಮಣಿಪುರದಲ್ಲಿ ಸ್ವಂತ ಮಗನಿಗಿಂತಲೂ ಮಿಗಿಲಾಗಿ ಸಾಕಿ, ಸಮಸ್ತ ಶಸ್ತ್ರಾಸ್ತ್ರ ವಿದ್ಯೆಗಳನ್ನು ಧನುರ್ವೇದದ ನಿಯಮ ದಂತೆ ಧಾರೆಯೆರೆದಳು.

ಕುರುಕ್ಷೇತ್ರ ಮಹಾಸಂಗ್ರಾಮದ ನಂತರ, ಯುಧಿಷ್ಠಿರನ ಅಶ್ವಮೇಧ ಯಾಗದ ಅಶ್ವವನ್ನು ರಕ್ಷಿಸುತ್ತಾ ಅರ್ಜುನನು ಮಣಿಪುರಕ್ಕೆ ಬಂದನು. ಆಗ ಪಿತೃ-ಪುತ್ರರ ನಡುವೆ ಧರ್ಮಯುದ್ಧ ನಡೆಯಿತು. ಈ ಯುದ್ಧದಲ್ಲಿ ಬಭ್ರುವಾಹನನ ಬಾಣಕ್ಕೆ ಅರ್ಜುನನು ಪ್ರಾಣಬಿಟ್ಟನು. ಪುತ್ರನು ಪಿತೃಹತ್ಯೆಯ ಮಹಾ ಪಾಪದ ಭಯದಿಂದ ಕಣ್ಣೀರಿಡುತ್ತಿದ್ದಾಗ, ಉಲೂಪಿಯು ಮಧ್ಯ ಪ್ರವೇಶಿಸಿದಳು.

ಭಾರತ ಯುದ್ಧದಲ್ಲಿ ಶಿಖಂಡಿಯ ಮರೆಯಲ್ಲಿ ನಿಂತು ಭೀಷ್ಮರನ್ನು ಸಂಹರಿಸಿದ್ದ ಕಾರಣಕ್ಕೆ ವಸುಗಳು ಅರ್ಜುನನಿಗೆ ಶಾಪವಿತ್ತಿದ್ದರು; ಆ ಶಾಪವಿಮೋಚನೆಗಾಗಿಯೇ ಈ ನಾಟಕವನ್ನು ತಾನು ರಚಿಸಿದ್ದಾಗಿ ತಿಳಿಸಿದಳು. ಕೂಡಲೇ ನಾಗಲೋಕದ ಪರಮಪವಿತ್ರವಾದ ‘ಸಂಜೀವಿನಿ ಮಣಿ’ಯನ್ನು ತರಿಸಿ, ಅರ್ಜುನನ ಎದೆಯ ಮೇಲಿಟ್ಟು ಆತನನ್ನು ಪುನರುಜ್ಜೀವನ ಗೊಳಿಸಿದಳು. ಅರ್ಜುನ ಮತ್ತು ನಾಗಕನ್ಯೆ ಉಲೂಪಿಯ ಮಗನಾದ ಇರಾವಾನನನ್ನು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳು ನಾಡಿನಲ್ಲಿ ಕೂತ್ತಾಂಡವರ್ ಅಥವಾ ಅರವಾಣ್ ಎಂಬ ಹೆಸರಿನಿಂದ ಗ್ರಾಮದೇವತೆಯಾಗಿ ಹಾಗೂ ತೃತೀಯಲಿಂಗಿ ಸಮುದಾಯದ ಆರಾಧ್ಯ ದೈವವಾಗಿ ಪೂಜಿಸಲಾಗುತ್ತದೆ.

ಕುರುಕ್ಷೇತ್ರ ಯುದ್ಧದ ಗೆಲುವಿಗಾಗಿ ಕಾಳಿಕಾದೇವಿಗೆ ನರಬಲಿಯಾಗಲು ಒಪ್ಪಿದ ಇರಾವಾನ್, ಸಾಯುವ ಮುನ್ನ ವಿವಾಹವಾಗಬೇಕೆಂಬ ಆಸೆ ವ್ಯಕ್ತಪಡಿಸಿದಾಗ ಶ್ರೀಕೃಷ್ಣನೇ ಮೋಹಿನಿ ರೂಪ ತಾಳಿ ಆತನನ್ನು ವರಿಸುತ್ತಾನೆ ಎಂಬ ಪುರಾಣದ ಹಿನ್ನೆಲೆಯಲ್ಲಿ, ತಮಿಳುನಾಡಿನ ಪ್ರಸಿದ್ಧ ಕೂವಾಗಂ ಜಾತ್ರೆಯಲ್ಲಿ ಸಾವಿರಾರು ತೃತೀಯಲಿಂಗಿಗಳು ತಮ್ಮನ್ನು ಮೋಹಿನಿಯೆಂದು ಭಾವಿಸಿ ಇರಾವಾನ್ ಹೆಸರಿನ ತಾಳಿ ಕಟ್ಟಿಸಿಕೊಂಡು ಸಂಭ್ರಮಿಸುತ್ತಾರೆ; ಮರುದಿನ ಅವನ ಬಲಿಯ ಸಂಕೇತವಾಗಿ ತಾಳಿ ಕಳಚಿ, ಬಳೆ ಒಡೆದು ವೈಧವ್ಯದ ಶೋಕವನ್ನಾಚರಿಸುವ ಮೂಲಕ ಇಂದಿಗೂ ಆತನ ಅಪೂರ್ವ ತ್ಯಾಗವನ್ನು ಭಕ್ತಿಯಿಂದ ಆರಾಧಿಸುತ್ತಾರೆ.

ಉಲೂಪಿಯ ಕಥೆಯು ಮಾನವ ಸಂಬಂಧಗಳ ಅತಿ ದೊಡ್ಡ ಸತ್ಯವೊಂದನ್ನು ನಮಗೆ ಸಾರುತ್ತದೆ. ನಿಜವಾದ ಪ್ರೀತಿಯೆಂದರೆ ಒಟ್ಟಿಗೆ ಬದುಕುವುದು ಮಾತ್ರವಲ್ಲ; ದೂರವಿದ್ದರೂ ಪ್ರೀತಿಸುವ ಜೀವದ ಹಿತವನ್ನು ಸದಾ ಕಾಪಾಡು ವುದು. ಆಕೆ ಅರ್ಜುನನ ಮೇಲೆ ಹಕ್ಕು ಸಾಽಸ ಲಿಲ್ಲ, ಬದಲಿಗೆ ಆತನ ಕುಟುಂಬಕ್ಕೆ ಮಾರ್ಗ ದರ್ಶಕಳಾಗಿ, ಸಂಕಷ್ಟದ ವೇಳೆ ಸಂಜೀವಿನಿಯಾಗಿ ನಿಂತಳು. ನಮ್ಮ ಬದುಕಿನಲ್ಲೂ ಅಷ್ಟೇ ನಾವು ಯಾರ ಜೀವನದಲ್ಲಿ ಎಷ್ಟು ಮುಖ್ಯ ಪಾತ್ರವನ್ನು ವಹಿಸು ತ್ತೇವೆ ಅನ್ನುವುದು ಮುಖ್ಯ ವಾಗುವುದಿಲ್ಲ. ಪ್ರೀತಿ ಪಾತ್ರರು ಸೋತು ಕಂಗಾಲಾದಾಗ ನಾವು ಅವರ ಪಾಲಿಗೆ ನಿಲ್ಲಬವೇ ಎಂಬುದೇ ನಮ್ಮ ವ್ಯಕ್ತಿತ್ವದ ಅಳತೆಗೋಲಾಗುತ್ತದೆ. ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಇತರರ ಒಳಿತಿಗಾಗಿ ಶ್ರಮಿಸುವ ನಿಸ್ವಾರ್ಥ ಭಾವನೆಯೇ ನಮ್ಮ ನಿಜವಾದ ವ್ಯಕ್ತಿತ್ವದ ಪರಿಚಯ.

ರೂಪಾ ಗುರುರಾಜ್

View all posts by this author