ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr.Gayatri Jaiprakash Column: ಅಶಾಂತ ಜಗತ್ತಿಗೆ ಬುದ್ಧನ ಮಧ್ಯಮ ಮಾರ್ಗದ ಬೆಳಕು

ಹವಾಮಾನ ಬದಲಾವಣೆ, ಜೈವಿಕ ವೈವಿಧ್ಯತೆಯ ನಾಶ, ಮಾಲಿನ್ಯ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಇವು ಪರಿಸರದ ಬಿಕ್ಕಟ್ಟನ್ನು ತಂದಿವೆ. ಅತಿಯಾದ ಸ್ಪರ್ಧೆ, ಸೋಲಿನ ಭೀತಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಯುವಜನರಲ್ಲಿ ಒತ್ತಡ, ಖಿನ್ನತೆ ಮತ್ತು ಆತಂಕ ಹೆಚ್ಚುತ್ತಿದೆ. ಈ ಎಲ್ಲ ಮಾನಸಿಕ ಆರೋಗ್ಯದ ಬಿಕ್ಕಟ್ಟಿನಿಂದ ಆತ್ಮಹತ್ಯೆಗಳು ಹೆಚ್ಚುತ್ತಿವೆ.

ಧರ್ಮದೀಪ

ಡಾ.ಗಾಯತ್ರಿ ಜೈಪ್ರಕಾಶ

ಇಂದಿನ ಜಗತ್ತು ಅಭಿವೃದ್ಧಿಯ ಶಿಖರವನ್ನು ತಲುಪುತ್ತಿದ್ದರೂ, ಮಾನವನ ಮನಸ್ಸು ಅಶಾಂತಿಯ ಮಡುವಿನಲ್ಲಿದ್ದು ವಿಶ್ವ ವಿನಾಶದ ಅಂಚಿನಲ್ಲಿ ನಿಂತಿದೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರ್ಥಿಕತೆ ಈ ಎಲ್ಲ ಕ್ಷೇತ್ರಗಳಲ್ಲಿಯೂ ಅಪಾರ ಪ್ರಗತಿ ಕಂಡರೂ ಸಮಾಜದಲ್ಲಿ ಶಾಂತಿ, ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಇಂದಿನ ಜಗತ್ತು ಅತಿವೇಗದ ಬದುಕಿನ ನಡುವೆ ಸಿಲುಕಿಕೊಂಡಿದೆ. ತಂತ್ರಜ್ಞಾನ ಜೀವನವನ್ನು ಸುಲಭಗೊಳಿಸಿದರೂ ಮನಸ್ಸನ್ನು ಅಶಾಂತಗೊಳಿಸಿದೆ. 2026ರ ಈ ಕಾಲಘಟ್ಟದಲ್ಲಿ ನಾವು ಹಿಂತಿರುಗಿ ನೋಡಿದರೆ, ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಸಂಘರ್ಷಗಳಿಗೆ ಸಾಕ್ಷಿಯಾಗುತ್ತಿದೆ.

ಜಾಗತಿಕ ಸಂಘರ್ಷಗಳು, ಪರಿಸರ ಬಿಕ್ಕಟ್ಟು, ಮಾನಸಿಕ ಆರೋಗ್ಯದ ಬಿಕ್ಕಟ್ಟು, ನೈತಿಕ ಮತ್ತು ಮೌಲ್ಯಗಳ ಕುಸಿತ, ಆರ್ಥಿಕ ಅಸಮಾನತೆ, ಸೈಬರ್ ಮತ್ತು ಡಿಜಿಟಲ್ ವ್ಯಸನ, ಅಸಹಿಷ್ಣುತೆ ಮತ್ತು ಕೋಮು ಸಂಘರ್ಷ, ಮಾದಕ ವ್ಯಸನ ಇವು ಈಗಿನ ಪರಿಸ್ಥಿತಿಯಲ್ಲಿ ತಾಂಡವವಾಡುತ್ತಿದೆ.

ರಷ್ಯಾ-ಉಕ್ರೇನ್ ಯುದ್ಧ, ಮಧ್ಯಪ್ರಾಚ್ಯದ ಬಿಕ್ಕಟ್ಟು, ಆಫ್ರಿಕಾದಲ್ಲಿನ ಗಲಭೆಗಳು, ವೆನೆಜ಼ಲಾ ಬಿಕ್ಕಟ್ಟು, ಇಥಿಯೋಪಿಯಾ ಮತ್ತು ಎರಿಟ್ರಿಯಾ ದೇಶಗಳ ನಡುವಿನ ಹದಗೆಟ್ಟ ಸಂಬಂಧ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳ ನಡುವೆ ಗಡಿ ಸಂಘರ್ಷ ಇವು ಜಾಗತಿಕ ಸಂಘರ್ಷವನ್ನು ತಂದೊಡ್ಡಿವೆ.

ಇದನ್ನೂ ಓದಿ: ‌Prakash Shesharaghavachar Column: ಮಹಿಳಾ ಮೀಸಲಾತಿ ಮಸೂದೆಗೆ ಮತ್ತೆ ಸೋಲು

ಹವಾಮಾನ ಬದಲಾವಣೆ, ಜೈವಿಕ ವೈವಿಧ್ಯತೆಯ ನಾಶ, ಮಾಲಿನ್ಯ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಇವು ಪರಿಸರದ ಬಿಕ್ಕಟ್ಟನ್ನು ತಂದಿವೆ. ಅತಿಯಾದ ಸ್ಪರ್ಧೆ, ಸೋಲಿನ ಭೀತಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಯುವಜನರಲ್ಲಿ ಒತ್ತಡ, ಖಿನ್ನತೆ ಮತ್ತು ಆತಂಕ ಹೆಚ್ಚುತ್ತಿದೆ. ಈ ಎಲ್ಲ ಮಾನಸಿಕ ಆರೋಗ್ಯದ ಬಿಕ್ಕಟ್ಟಿನಿಂದ ಆತ್ಮಹತ್ಯೆಗಳು ಹೆಚ್ಚುತ್ತಿವೆ.

ಸಮಾಜದಲ್ಲಿ ನೈತಿಕ ಮತ್ತು ಮೌಲ್ಯಗಳ ಕುಸಿತ ಪ್ರಾಮಾಣಿಕತೆ, ಸಂಯಮ ಮತ್ತು ಸಹಾನುಭೂತಿ ಯಂತಹ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಭ್ರಷ್ಟಾಚಾರ, ಸ್ವಾರ್ಥ ಮತ್ತು ಯಾವುದೇ ದಾರಿಯಲ್ಲಾದರೂ ಹಣ ಮಾಡಬೇಕು ಎಂಬ ಧೋರಣೆ ಸಮಾಜದ ಸ್ವಾಸ್ಥ್ಯಕೆಡಿಸುತ್ತಿದೆ. ಶ್ರೀಮಂತ ರು ಹೆಚ್ಚು ಶ್ರೀಮಂತರಾಗುತ್ತಿzರೆ ಮತ್ತು ಬಡವರು ಅಂಚಿಗೆ ತಳ್ಳಲ್ಪಡುತ್ತಿದ್ದಾರೆ.

ಮೂಲಭೂತ ಸೌಕರ್ಯಗಳಾದ ಶಿಕ್ಷಣ ಮತ್ತು ಆರೋಗ್ಯ ಸಾಮಾನ್ಯ ಜನರಿಗೆ ದುಬಾರಿಯಾಗುತ್ತಿರು ವುದು ದೊಡ್ಡ ಆರ್ಥಿಕ ಅಸಮಾನತೆ ಬಿಕ್ಕಟ್ಟು. ಅತಿಯಾದ ಸ್ಮಾರ್ಟ್ʼಫೋನ್ ಬಳಕೆ ಮತ್ತು ಇಂಟರ್‌ನೆಟ್ ವ್ಯಸನವು ಕೌಟುಂಬಿಕ ಬಾಂಧವ್ಯಗಳನ್ನು ಸಡಿಲಗೊಳಿಸುತ್ತಿದೆ.

ಸೈಬರ್ ಅಪರಾಧಗಳು, ಡೇಟಾ ಕಳ್ಳತನ ಮತ್ತು ಸುಳ್ಳು ಸುದ್ದಿಗಳ ಹರಡುವಿಕೆ ಸಮಾಜದಲ್ಲಿ ದ್ವೇಷ ಮತ್ತು ಗೊಂದಲವನ್ನು ಸೃಷ್ಟಿಸುತ್ತಿವೆ. ಜಾತಿ, ಧರ್ಮ ಮತ್ತು ಸಿದ್ಧಾಂತಗಳ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆಗಳು ನಿರ್ಮಾಣವಾಗುತ್ತಿವೆ. ಪರಸ್ಪರ ಗೌರವಿಸುವ ಮತ್ತು ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳುವ ಗುಣ ಕಡಿಮೆಯಾಗುತ್ತಿದೆ.

Screenshot_7

ಯುವ ಪೀಳಿಗೆಯು ಡ್ರಗ್ಸ್ ಮತ್ತು ಮದ್ಯದಂತಹ ಮಾದಕ ದ್ರವ್ಯಗಳಿಗೆ ದಾಸರಾಗುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ದೊಡ್ಡ ಬಿಕ್ಕಟ್ಟಾಗಿದೆ. ಇಂತಹ ಸಂದರ್ಭದಲ್ಲಿ ಸುಮಾರು ಎರಡು ಸಾವಿರದ ಐದುನೂರು ವರ್ಷಗಳ ಹಿಂದೆ ಗೌತಮ ಬುದ್ಧನು ಸಾರಿದ ‘ಮಧ್ಯಮ ಮಾರ್ಗ’ ಇಂದು ಮತ್ತಷ್ಟು ಪ್ರಸ್ತುತವಾಗುತ್ತದೆ.‌

ಮಧ್ಯಮ ಮಾರ್ಗ ಎಂದರೆ ಬದುಕಿನಲ್ಲಿ ಸಮತೋಲನವನ್ನು ಸಾಽಸುವುದು. ಅತಿಯಾದ ಆಸಕ್ತಿ, ದ್ವೇಷ, ಲೋಭ, ಕ್ರೋಧ, ಅಹಂಕಾರ ಇವೆಲ್ಲವೂ ಮಾನವನ ಮನಸ್ಸನ್ನು ಅಸ್ಥಿರಗೊಳಿಸುತ್ತವೆ. ಅದೇ ರೀತಿ ಅತಿಯಾದ ನಿರಾಕರಣೆ, ಕಠಿಣ ನಿಯಮಗಳು ಮತ್ತು ಬದುಕಿನ ಸಹಜತೆಯನ್ನು ತಿರಸ್ಕರಿಸುವ ಮನೋಭಾವವೂ ಮಾನವನನ್ನು ಕಂಗೆಡಿಸುತ್ತವೆ.

ಬುದ್ಧನು ಈ ಎರಡು ಅತಿರೇಕಗಳ ನಡುವೆ ಸಮನ್ವಯದ ಬದುಕನ್ನು ಬೋಧಿಸಿದನು. ಅತಿಯಾದ ಭೋಗವೂ ಬೇಡ, ಅತಿಯಾದ ತಪಸ್ಸೂ ಬೇಡ; ಸಮತೋಲನದ ಬದುಕೇ ಶಾಂತಿಯ ದಾರಿ ಎಂಬು ದನ್ನು ಅವನು ತಿಳಿಸಿದನು. ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗವು ಮಧ್ಯಮ ಮಾರ್ಗದ ಪ್ರಾಯೋಗಿಕ ಬದುಕಿನ ರೂಪವಾಗಿದೆ.

ಸಮ್ಯಕ್ ದೃಷ್ಟಿ (ಸತ್ಯವನ್ನು ಸರಿಯಾಗಿ ಅರಿತುಕೊಳ್ಳುವುದು), ಸಮ್ಯಕ್ ಸಂಕಲ್ಪ (ಶುದ್ಧ ಮತ್ತು ಒಳ್ಳೆಯ ಆಲೋಚನೆಗಳನ್ನು ಹೊಂದುವುದು), ಸಮ್ಯಕ್ ವಾಕ್ಯ(ಸುಳ್ಳು, ನಿಂದನೆ, ಕಟುವಾದ ಮಾತುಗಳನ್ನು ತಪ್ಪಿಸಿ ಸತ್ಯವಾಗಿ ಮಾತನಾಡುವುದು), ಸಮ್ಯಕ್ ಕರ್ಮ(ಹಿಂಸೆ ಮತ್ತು ಕೆಟ್ಟ ಕೃತ್ಯಗಳನ್ನು ಬಿಡಿಸಿ ಸತ್ಕಾರ್ಯ ಮಾಡುವುದು) ಇವು ವ್ಯಕ್ತಿಯ ಜೀವನದಲ್ಲಿ ನೈತಿಕತೆ ಮತ್ತು ಸಮತೋಲನವನ್ನು ಬೆಳೆಸುತ್ತವೆ.

ಇವು ಕೇವಲ ಧಾರ್ಮಿಕ ಆಚರಣೆಗಳಲ್ಲ; ಉತ್ತಮ ವ್ಯಕ್ತಿತ್ವ ನಿರ್ಮಾಣದ ಮಾರ್ಗಗಳಾಗಿವೆ. ‘ಸಮ್ಯಕ್ ಜೀವನೋಪಾಯ’ ಇತರರಿಗೆ ಹಾನಿಯಾಗದ ಉದ್ಯೋಗ ಅಥವಾ ಜೀವನೋಪಾಯ ನಡೆಸುವಂತೆ ಪ್ರೇರೇಪಿಸುತ್ತದೆ. ‘ಸಮ್ಯಕ್ ಪ್ರಯತ್ನ’ ಒಳ್ಳೆಯ ಗುಣಗಳನ್ನು ಬೆಳೆಸಲು ನಿರಂತರ ಪ್ರಯತ್ನ ಮಾಡಿಸುತ್ತದೆ.

‘ಸಮ್ಯಕ್ ಸ್ಮೃತಿ’ ಮನಸ್ಸನ್ನು ಜಾಗೃತವಾಗಿಟ್ಟು ಸದಾ ಎಚ್ಚರಿಕೆಯಿಂದ ಬದುಕಲು ಕಲಿಸುತ್ತದೆ. ‘ಸಮ್ಯಕ್ ಸಮಾಧಿ’ ಧ್ಯಾನ ಮತ್ತು ಏಕಾಗ್ರತೆಯ ಮೂಲಕ ಮನಸ್ಸನ್ನು ಶಾಂತಗೊಳಿಸುತ್ತದೆ. ಬುದ್ಧನು ಬೋಧಿಸಿದಂತೆ, ನಮ್ಮ ಅಗತ್ಯತೆಗಳು ಮತ್ತು ಆಸೆಗಳ ನಡುವೆ ಒಂದು ಗೆರೆ ಎಳೆದುಕೊಳ್ಳು ವುದು ಮಧ್ಯಮ ಮಾರ್ಗದ ಮೊದಲ ಹೆಜ್ಜೆ.

ನಾವು ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೆ ಸಮಸ್ಥಿತಿಯಲ್ಲಿ ಬದುಕುವುದನ್ನು ಕಲಿತರೆ ಅರ್ಧ ದಷ್ಟು ಅಶಾಂತಿ ದೂರವಾಗುತ್ತದೆ. ದ್ವೇಷದಿಂದ ದ್ವೇಷ ಎಂದಿಗೂ ಶಮನವಾಗುವುದಿಲ್ಲ, ಪ್ರೇಮ ದಿಂದ ಮಾತ್ರ ಅದು ಸಾಧ್ಯ ಎಂಬ ಬುದ್ಧನ ಮಾತು ಇಂದಿನ ಜಾಗತಿಕ ರಾಜಕೀಯಕ್ಕೆ ಬಹುದೊಡ್ಡ ಪಾಠ. ಯುದ್ಧದ ಮೂಲಕ ಶಾಂತಿ ಸ್ಥಾಪಿಸಲು ಹೊರಟಿರುವ ರಾಷ್ಟ್ರಗಳು ಬುದ್ಧನ ಕರುಣೆಯ ತತ್ವವನ್ನು ಅಳವಡಿಸಿಕೊಳ್ಳಬೇಕಿದೆ.

ವಿಜಯವು ದ್ವೇಷವನ್ನು ಹುಟ್ಟು ಹಾಕಿದರೆ, ಸೋಲು ನೋವನ್ನು ನೀಡುತ್ತದೆ. ಆದರೆ ಎರಡನ್ನೂ ಮೀರಿದ ಶಾಂತಿಯುತ ಸಹಬಾಳ್ವೆಯೇ ಮಧ್ಯಮ ಮಾರ್ಗದ ಗುರಿ. ಇಂದಿನ ಕಾಲಘಟ್ಟದಲ್ಲಿ ವ್ಯಕ್ತಿಗತವಾಗಿ ನಾವು ಅನುಭವಿಸುತ್ತಿರುವ ಮಾನಸಿಕ ಒತ್ತಡಕ್ಕೆ ‘ಸಮ್ಯಕ್ ಸ್ಮೃತಿ’ ಅಥವಾ ‘ಸಾವಧಾ ನತೆ’ ಅತ್ಯುತ್ತಮ ಚಿಕಿತ್ಸೆ.

ವರ್ತಮಾನದಲ್ಲಿ ಬದುಕುವುದು, ಇತರರ ನೋವಿಗೆ ಸ್ಪಂದಿಸುವುದು ಮತ್ತು ಪ್ರತಿಯೊಂದು ಕ್ರಿಯೆಯಲ್ಲೂ ವಿವೇಕವನ್ನು ಕಾಪಾಡಿಕೊಳ್ಳುವುದು ಬುದ್ಧನ ಮಾರ್ಗವಾಗಿದೆ. ಇಂದಿನ ಅಶಾಂತ, ಆತುರ ಮತ್ತು ಅತಿರೇಕದ ಸಮಾಜಕ್ಕೆ ಬುದ್ಧನ ಮಧ್ಯಮ ಮಾರ್ಗವು ಸಮತೋಲನದ ದೀಪವಾ ಗಿದೆ.

ಶಾಂತಿ, ಸಂಯಮ ಮತ್ತು ಜಾಗೃತಿಯಿಂದ ಬದುಕುವ ಬದುಕೇ ನಿಜವಾದ ಸಂತೋಷದ ದಾರಿ ಎಂಬುದನ್ನು ಬುದ್ಧನು ಮಾನವಕುಲಕ್ಕೆ ತಿಳಿಸಿzನೆ. ಅತಿರೇಕಗಳ ನಡುವೆ ಸಮತೋಲನ ಕಾಪಾಡಿ ಕೊಂಡು ಬದುಕುವುದೇ ಬುದ್ಧನ ಮಧ್ಯಮ ಮಾರ್ಗದ ಸಾರ. ಈ ತತ್ವವನ್ನು ವ್ಯಕ್ತಿ, ಕುಟುಂಬ ಮತ್ತು ಸಮಾಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ ಮತ್ತು ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ.

ಬುದ್ಧ ಎಂಬುದು ಕೇವಲ ವ್ಯಕ್ತಿಯಲ್ಲ, ಅದೊಂದು ಜಾಗೃತ ಸ್ಥಿತಿ. ಜಗತ್ತು ಬಾಂಬ್ ಮತ್ತು ಕ್ಷಿಪಣಿ ಗಳ ಮೂಲಕ ಪರಿಹಾರ ಹುಡುಕುತ್ತಿರುವಾಗ, ಬುದ್ಧನ ಅಹಿಂಸೆ ಮತ್ತು ಮಧ್ಯಮ ಮಾರ್ಗ ಮಾತ್ರ ಶಾಶ್ವತ ಶಾಂತಿಯನ್ನು ನೀಡಬಲ್ಲದು. ಅತಿರೇಕದ ಆಲೋಚನೆಗಳನ್ನು ಬಿಟ್ಟು, ಪ್ರಕೃತಿ ಮತ್ತು ಮಾನವೀಯತೆಯೊಂದಿಗೆ ಸಮತೋಲನ ಕಾಯ್ದುಕೊಳ್ಳುವುದೇ ನಾವು ಬುದ್ಧನಿಗೆ ಸಲ್ಲಿಸುವ ನಿಜವಾದ ಗೌರವ.

ಲೇಖಕರು: ಉಪನ್ಯಾಸಕರು, ಜಮಖಂಡಿ