ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಶ್ರೀರಾಮನ ಕೋವಿದಾರ, ನಮ್ಮೂರ ಮಂದಾರ

ಬೇಸಿಗೆಯಲ್ಲಿ ಎಲೆಗಳನ್ನು ಕಳೆದುಕೊಂಡು ಬೋಳಾಗಿ ಹೂಗಳನ್ನು ಧರಿಸಿಕೊಂಡು ನಿಂತಾಗ ಹೂ ಮರವೇ ಆಗಿಬಿಡುತ್ತದೆ ಇದು. ಈ ಮರದ ಹೂಗಳದು- ಎಲ್ಲ ಹೂವುಗಳದೂ- ಒಂದು ಬಗೆಯ ಗಂಧ ವ್ರತ. ತಾನು ಉರಿಯುತ್ತ ಜಗತ್ತಿಗೆ ಪರಿಮಳ ನೀಡುವ ಅಗರಬತ್ತಿಯ ಕಾಯಕವನ್ನು ಕವಿ ಎಚ್‌ಎಸ್ ವೆಂಕಟೇಶಮೂರ್ತಿ ಒಂದು ಕವನದಲ್ಲಿ ‘ಗಂಧವ್ರತ’ ಎಂದು ಕರೆದಿದ್ದರು.

ಕಾಡುದಾರಿ

ವಾಕಿಂಗ್ ಮಾಡುತ್ತಿದ್ದಾಗ ದಾರಿಯಲ್ಲಿ ಮಂದಾರ ಹೂಗಳು ಕಾಣಿಸಿದವು. ಕಾಲಿನಡಿಗೆ ಸಿಕ್ಕಿ ಅಪ್ಪಚ್ಚಿಯಾಗದಿರಲಿ ಎಂದು ಎತ್ತಿಕೊಂಡೆ. ಮೂಗಿನ ಬಳಿ ತರುವುದಕ್ಕೂ ಮುನ್ನವೇ ಗಾಢವಾದ ಅದರ ಪರಿಮಳ ಸೋಕಿತು. ಕತ್ತು ಎತ್ತಿ ನೋಡಿದರೆ ನೂರಾರು ಹೂಗಳನ್ನು ಬಿಟ್ಟ ಮಂದಾರ ಮರ. ಹಾಗೇ ರಸ್ತೆ ಪಕ್ಕ ಉದ್ದಕ್ಕೂ. ಯಾರೋ ಪುಣ್ಯಾತ್ಮರು ಕೆಲವು ವರ್ಷಗಳ ಕೆಳಗೆ ನೆಟ್ಟ ಮರಗಳು ಹೂವಿನಲ್ಲಿ ಜೀವ ತಳೆದಿದ್ದವು.

ಕೆಂಪು-ಗುಲಾಬಿ ಬಣ್ಣದ ಐದು ದಳಗಳು. ಕುಸುಮದಿಂದ ತುದಿಯವರೆಗೂ ಗೆರೆಗಳು. ನಡುವೆ ಐದಾರು ಪುಷ್ಪಶಲಾಕೆ. ಹೂವಿನ ಸುತ್ತ ಹಾರಾಡುತ್ತಿದ್ದ ಜೇನುನೊಣಗಳು. ಹೆಚ್ಚೆಂದರೆ ಹತ್ತು ಹದಿನೈದಡಿ ಎತ್ತರದ ಮರಗಳು ತೀರ ದಪ್ಪಗೂ ಬೆಳೆಯದೆ ಎರಡಾಗಿ ಸೀಳಿಕೊಂಡ ಎಲೆಗಳ ನಡುವೆ ಹೂ ಬಿಟ್ಟಿದ್ದವು.

ಬೇಸಿಗೆಯಲ್ಲಿ ಎಲೆಗಳನ್ನು ಕಳೆದುಕೊಂಡು ಬೋಳಾಗಿ ಹೂಗಳನ್ನು ಧರಿಸಿಕೊಂಡು ನಿಂತಾಗ ಹೂಮರವೇ ಆಗಿಬಿಡುತ್ತದೆ ಇದು. ಈ ಮರದ ಹೂಗಳದು- ಎಲ್ಲ ಹೂವುಗಳದೂ- ಒಂದು ಬಗೆಯ ಗಂಧವ್ರತ. ತಾನು ಉರಿಯುತ್ತ ಜಗತ್ತಿಗೆ ಪರಿಮಳ ನೀಡುವ ಅಗರಬತ್ತಿಯ ಕಾಯಕವನ್ನು ಕವಿ ಎಚ್‌ಎಸ್ ವೆಂಕಟೇಶಮೂರ್ತಿ ಒಂದು ಕವನದಲ್ಲಿ ‘ಗಂಧವ್ರತ’ ಎಂದು ಕರೆದಿದ್ದರು.

ಇದನ್ನೂ ಓದಿ: Harish Kera Column: ಒಂದು ಪದ್ಯ ಬಗೆಯುತ್ತಾ ಮೌನದ ಮಡಿಲಿಗೆ

ಕೆಂಪು ಮಂದಾರದ ಜೊತೆಗೆ ಯಾಕೋ ಏನೋ ಅನೇಕ ಭಾವ- ನೆನಪು- ಸ್ಪಂದನಗಳು ಬೆಸೆದು ಕೊಂಡಿವೆ. ಬಾಲ್ಯದಲ್ಲಿ ಮನೆಯ ಮುಂದೆ ಒಂದು ಕೆಂಪು ಮಂದಾರ ಮರವಿತ್ತು. ಹೆಚ್ಚು ಎತ್ತರ ಬೆಳೆಯದ ಈ ಮರದ ಗೆಲ್ಲುಗಳು ಮಕ್ಕಳಿಗೆ ಕೋತಿಯಾಟ ಆಡಲು ಸೊಗಸಾಗಿದ್ದವು. ಅದು ಕೆಂಪು ಹೂಗಳನ್ನು ಬಿಟ್ಟುಕೊಂಡು ನಿಂತಾಗ ಊರಿನ ಯಾರ್ಯಾರೋ ಬರುತ್ತಿದ್ದರು- ಹೂವಿಗಾಗಿ, ಮರದ ಕಾಂಡದ ಕೆತ್ತೆಗಾಗಿ, ಅದರಿಂದ ಮಾಡುತ್ತಿದ್ದ ಕಷಾಯದ ಪ್ರಯೋಜನಕ್ಕಾಗಿ.

ಚರ್ಮರೋಗಕ್ಕೆ, ಮುಟ್ಟಿನ ಸ್ರಾವದ ಸಮಸ್ಯೆಗಳಿಗೆ ಇದರ ಮದ್ದು ಆಗುತ್ತಿತ್ತು. ಇದನ್ನು ತಮ್ಮ ಮನೆಯಲ್ಲೂ ಬೆಳೆಯೋಣ ಎಂದು ಬಯಸಿ ಕೋಡು ಕೊಂಡು ಹೋದವರು ಬಹಳ. ಹಾಗೆ ಅದು ಬೆಳೆಯುವುದೇ ಅಪರೂಪ. ಕೋಡು ಸಿಡಿದು ಬೀಜಗಳು ಚಿಮ್ಮಿ ಮಳೆಗಾಲದಲ್ಲಿ ಅದರಿಂದ ಕೆಲವು ಗಿಡಗಳು ಹುಟ್ಟಿಕೊಂಡಿದ್ದವು.

ಹೂವಿಗಾಗಿ ಬರುತ್ತಿದ್ದ ಹುಡುಗಿಯರು ಲಂಗವನ್ನು ತುಸು ಎತ್ತಿ ಹಿಡಿದು ಹೆಜ್ಜೆ ಹಾಕುತ್ತ ಮುಗುಳು ನಕ್ಕು ಮರೆಯಾಗುತ್ತಿದ್ದರು. ಅವರ ಮುಖಗಳೂ ಮಂದಾರ ಹೂಗಳೂ ಬೆರೆತುಕೊಂಡು ಕನಸಲ್ಲಿ ಬರುತ್ತಿದ್ದವು. ಆಗ ಹಳ್ಳಿಯ ತರುಣರನ್ನು ಪ್ರೌಢರನ್ನಾಗಿರುವ ಕೆಲಸವನ್ನು ಚಿತ್ರಗೀತೆಗಳು ಮಾಡುತ್ತಿದ್ದವು.

Screenshot_3 R

ದೊಡ್ಡಪ್ಪ ಜಾಗರೂಕವಾಗಿ ಸಾಕಿಕೊಂಡಿದ್ದ ರೇಡಿಯೋದಲ್ಲಿ ಆಗಾಗ ತೇಲಿಬರುತ್ತಿದ್ದ ‘ನಮ್ಮೂರ ಮಂದಾರ ಹೂವೇ’ ಎಂಬ ಚಿತ್ರಗೀತೆ. ವಾರ್ತೆಗಳ ಬಳಿಕ ನಾವು ಕಾದು ಕೂರುತ್ತಿದ್ದ ಚಿತ್ರಗೀತೆಗಳ ಸಮಯದಲ್ಲಿ ನಾವು ಅಪೇಕ್ಷಿಸುತ್ತಿದ್ದ ಚಿತ್ರಗೀತೆಯಲ್ಲಿ ನಮ್ಮೂರ ಮಂದಾರ ಹೂವಿಗೆ ಮೊದಲ ಸ್ಥಾನ. ಅದ್ಯಾಕೋ ನಾವು ಮನೆಯೆದುರು ನೋಡುತ್ತಿದ್ದ ಮಂದಾರ ಹೂವಿಗೂ ಹಾಡಿನಲ್ಲಿ ಬರುತ್ತಿದ್ದ ಮಂದಾರ ಹೂವಿಗೆ ಸಿಂಕ್ ಆಗುತ್ತಿರಲಿಲ್ಲವಾದರೂ, ಹಾಡಿನ ಮಾಧುರ್ಯ ಒಳಗೆ ಇಳಿದು ತನ್ನದೇ ಒಂದು ಗಂಧರ್ವ ಲೋಕವನ್ನು ಕಟ್ಟುತ್ತಿತ್ತು.

ಜೇನಿನಲ್ಲಿ ಮುಳುಗಿಸಿದ ಜಾಮೂನಿನಂತಿದ್ದ ಆ ಹಾಡಿನ ದನಿ ಎಸ್‌ಪಿಬಿಯವರದು, ಅದು ಆಲೆ ಮನೆ ಸಿನಿಮಾದ ಹಾಡು, ಅದರ ಹೀರೋ ಹೆಬ್ಳೀಕರ್, ಈ ಹಾಡು ಬರೆದವರು ದೊಡ್ಡರಂಗೇ ಗೌಡರು ಅಂತ ಗೊತ್ತಾದ್ದೆಲ್ಲ ಬಹಳ ಕಾಲದ ನಂತರ. ಆ ಮೇಲೆ, ಶಿರಾಡಿ ಘಾಟ್ ರಸ್ತೆ ಆಗಿನ್ನೂ ಅಗಲವಾಗದಿದ್ದಾಗ, ಬೆಂಗಳೂರೆಂಬ ಮಹಾನಗರವನ್ನು ಮೊದಲ ಬಾರಿಗೆ ನೋಡಲು ಒಂದು ಪುಟ್ಟ ಬ್ಯಾಗು ಎದೆಗವುಚಿಕೊಂಡು, ಸ್ಲೀಪರ್ ಬಸ್ಸುಗಳಿಲ್ಲದ ಕಾಲದಲ್ಲಿ ಹೊರಟಾಗ, ರಾತ್ರಿ ಹೊರಟ ಕೆಂಪು ಬಸ್ಸಿನ ಚಾಲಕ ಘಾಟ್ ನಡುವೆಯೆ ಚಾ ಹೀರಲು ನಿಲ್ಲಿಸಿದಾಗ ಚಾದಂಗಡಿಯ ಕ್ಯಾಸೆಟ್ ಪ್ಲೇಯರ್‌ನೊಳಗಿಂದ ತಂಗಾಳಿಯ ಅಲೆಯಂತೆ ಬಂದು ತೀವಿದ ಹಾಡಿನ ಅಲೆಯೂ ನಮ್ಮೂರ ಮಂದಾರ ಹೂವೇ ಆಗಿತ್ತು.

ಆ ಹಾಡಿನಂದು ಏನೋ ಮ್ಯಾಜಿಕ್ ಇತ್ತು. ಆಗಷ್ಟೇ ಮನೆ ಬಿಟ್ಟು ಹೊರಟವನನ್ನು ಸಂತೈಸುವ, ಪ್ರೀತಿಯಿಂದ ಬರಮಾಡಿಕೊಳ್ಳುವ ಯಾವುದೋ ಜೀವಂತಿಕೆ ಅದರಲ್ಲಿ ಇದ್ದಂತಿತ್ತು. ಅದರಲ್ಲಿ ಹೂವು ಇತ್ತು, ಜೊತೆಗೆ ನಮ್ಮೂರೂ ಇತ್ತು, ಹೋಗುವೆಯೇಕೆ ಎಂದು ಕಣ್ಣ ಕೇಳುತ್ತಿದ್ದಂತಿದ್ದ ಊರಿನ ಹುಡುಗಿಯರೂ ಇದ್ದರು. ಆ ಸಿನಿಮಾ ಬಂದು ಬಹು ಕಾಲವಾಗಿತ್ತು.

ಹೆಬ್ಳೀಕರ್ ನಮ್ಮ ಕಾಲಕ್ಕೆ ಹಳಬರಾಗಿದ್ದರು. ಸಿನಿಮಾವೇನೂ ಹಿಟ್ ಆಗಿರಲಿಲ್ಲ. ಆದರೆ ಆ ಹಾಡು ಮಾತ್ರ ಅಮರವಾಗಿತ್ತು. ಮುಂದೆ ದೊಡ್ಡರಂಗೇಗೌಡರು ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇ ಳನದ ಅಧ್ಯಕ್ಷರಾದಾಗ ಅವರನ್ನು ಸಂದರ್ಶನ ಮಾಡಲು ಅವರ ಮನೆಗೆ ಹೋದಾಗ, ಅವರ ಬೇರೆ ಹಾಡಿಗಿಂತಲೂ ನಮ್ಮೂರ ಮಂದಾರ ಹೂವೇ ನಮಗೆ ಯಾಕಿಷ್ಟ ಎಂಬುದನ್ನು ಅವರಿಗೆ ಹೇಳಿದೆ.

ಅವರು ಸುಮ್ಮನೇ ನಕ್ಕರಷ್ಟೇ. ಮಂದಾರ ಹೂವನ್ನೇ ಅವರು ಯಾಕೆ ಆಯ್ದುಕೊಂಡರು ಎಂದು ಕೇಳಿದಾಗ, ಹಾಡು ಬರೆಯುವಾಗ ಮದ್ರಾಸಿನಲ್ಲಿz. ಚಿಕ್ಕಂದಿನಲ್ಲಿ ಹೂವನ್ನು ಯಾವಾಗಲೂ ನೋಡುತ್ತಿz, ಹೆಂಡತಿಯೊಂದಿಗೇ ಅದೂ ನೆನಪಾಯಿತು ಅಂದರು. ಅಷ್ಟು ಹೊತ್ತಿಗಾಗಲೇ ನಮ್ಮ ಇಷ್ಟದ ಕವಿಗಳು, ಸಾಹಿತಿಗಳು, ಕವನಗಳ ರೀತಿ ಶೈಲಿ ಎಲ್ಲ ಬದಲಾಗಿತ್ತು.

ಅಡಿಗರಿಂದ ತೊಡಗಿ ಸಿದ್ದಲಿಂಗಯ್ಯನವರವರೆಗೂ ಎಲ್ಲರೂ ಒಳಗೆ ಬಂದುಬಿಟ್ಟಿದ್ದರು. ಆದರೆ ಗೌಡರ ಅದೊಂದು ಹಾಡು ಮಾತ್ರ ಎಸ್‌ಪಿಬಿ ಧ್ವನಿಯ ಜೊತೆ ಸೇರಿಕೊಂಡು ಅಮರವಾಗಿ ಉಳಿದಿತ್ತು. ಊರಿನಿಂದಲೂ ಬಾಲ್ಯದ ಗೆಳೆಯ ಗೆಳತಿಯರಿಂದಲೂ ದೂರವಾಗಿದ್ದೇನೆ ಎಂಬ ಭಾವನೆ ಬಂದಾಗಲೆ ಆ ಹಾಡು ಕೇಳಿಸಿಕೊಂಡರೆ ಸಮಾಧಾನ. ಹೀಗೆ ಒಂದು ಹಾಡು ನಿಜವಾಗು ವುದು ಈ ತ್ರಿವಳಿಯಲ್ಲಿ- ಕವಿ, ಗಾಯಕ ಮತ್ತು ಕೇಳುಗ.

ಮುಂದೆ 1996ರಲ್ಲಿ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ‘ನಮ್ಮೂರ ಮಂದಾರ ಹೂವೇ’ ಎಂಬ ಹೆಸರಿನ ಸಿನಿಮಾ ಕೂಡ ಬಂತು. ಹಾಡಿನ ಸಾಲನ್ನು ಚಿತ್ರಕ್ಕಿಡುವ ಟ್ರೆಂಡು ಮಾತ್ರವೇ ಇದರ ಹಿನ್ನೆಲೆ ಆಗಿರಲಾರದು. ಕಥೆ- ಚಿತ್ರಕಥೆ ದೇಸಾಯಿ ಅವರದೇ ಆಗಿದ್ದು, ಸ್ಕ್ರಿಪ್ಟ್ ಮಾಡಿಕೊಳ್ಳದೇ ಶೂಟಿಂಗ್ ಮಾಡಿ, ಹವ್ಯಕ ಭಾಷೆಯನ್ನೂ ಬಳಸಿ, ಯಾಣದಂಥ ಅಪರೂಪದ ತಾಣದಲ್ಲೂ ಚಿತ್ರೀಕರಿಸಿಕೊಂಡು, ಹಸಿರು ನೀರು ಹಳ್ಳಿ ಹಾಡು ಎಂದೆಲ್ಲ ಸ್ಥಳೀಯವಾಗಿದ್ದ ಈ ಚಿತ್ರ ನಿಜಕ್ಕೂ ಒಂದು ಮಾಸ್ಟರ್‌ ಪೀಸೇ ಆಗಿತ್ತು.

ಅದು ತಂದುಕೊಟ್ಟ ಯಶಸ್ಸನ್ನು ಇನ್ಯಾವ ಫಿಲಂನಲ್ಲೂ ರಿಪೀಟ್ ಮಾಡಲು ದೇಸಾಯಿಯವರಿಗೆ ಸಾಧ್ಯವಾಗಲಿಲ್ಲ. ಅದರಲ್ಲಿದ್ದ ರಮೇಶ್- ಶಿವರಾಜ್ ಕುಮಾರ್- ಪ್ರೇಮಾರ ತ್ರಿವಳಿ ಪಾತ್ರಗಳ ಸ್ನೇಹ- ಪ್ರೇಮ- ತ್ಯಾಗದ ಮಿಶ್ರಣ ಅಪರೂಪದ್ದಾಗಿತ್ತು.

ರಮೇಶ್ ಅಭಿನಯಿಸಿದ ಹಳ್ಳಿ ಯುವಕನ ಪ್ರೇಮ ಮತ್ತು ತ್ಯಾಗ, ಆ ಮತ್ತು ಈ ಕಾಲದ ಎಲ್ಲ ಹಳ್ಳಿ ಹುಡುಗರ ಪ್ರೇಮ ಮತ್ತು ತ್ಯಾಗದ ದುಗುಡದ ಆರ್ಚಿಟೈಪ್ (ಮೂಲಮಾದರಿ) ಇದ್ದಂತಿತ್ತು. ಆದ್ದರಿಂದಲೇ ಆ ಶೀರ್ಷಿಕೆ ಫಿಲಂಗೆ ನೂರಕ್ಕೆ ನೂರು ಹೊಂದಿಕೊಂಡಿತ್ತು. ಒಂದು ಹಾಡು ಎಲ್ಲರೆದೆಯಲ್ಲಿ ಬೆಳೆಯುವುದು- ಅಮರವಾಗುವುದು ಹೀಗೆ. ಮೊನ್ನೆ ಮೊನ್ನೆ ತಾನೇ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧ್ವಜ ಏರಿಸಿದರು. ಅದರಲ್ಲಿ ಕೋವಿದಾರ ಮರದ ಚಿಹ್ನೆಯಿತ್ತು.

ಕೋವಿದಾರ ಅಂದರೆ ಏನು ಎಂದು ಹುಡುಕಾಡಿದಾಗ ಇದೇ ಕೆಂಪುಮಂದಾರ ಕಂಡು ಮೈ ಜುಮ್ಮೆಂದಿತು. ಅಯೋಧ್ಯೆಯನ್ನು ಆಳಿದ ಸೂರ್ಯ ವಂಶದ ರಾಜರ ಧ್ವಜದ ಚಿಹ್ನೆ ಕೋವಿದಾರ ಆಗಿತ್ತಂತೆ. ವನವಾಸಿಗಳಾಗಿ ಹೋದ ರಾಮ ಲಕ್ಷ್ಮಣ ಸೀತೆಯರು ಚಿತ್ರಕೂಟದಲ್ಲಿ ತಂಗಿದ್ದಾಗ, ಅವರನ್ನು ಕಾಣಲೆಂದು ಧಾವಿಸಿ ಬಂದ ಭರತನ ರಥದ ಮೇಲೆ ಪಟಪಟಿಸುತ್ತಿದ್ದ ಧ್ವಜವನ್ನು ದೂರದಿಂದಲೇ ಲಕ್ಷ್ಮಣ ಕಾಣುತ್ತಾನೆ.

ಅದರಿಂದಲೇ ಬರುತ್ತಿರುವುದು ಭರತ ಎಂದು ಅವರಿಗೆ ಖಚಿತವಾಗುತ್ತದೆ. ಆದಿಕವಿ ವಾಲ್ಮೀಕಿ ಇದನ್ನು ಉಲ್ಲೇಖಿಸದೇ ಇರುತ್ತಿದ್ದರೆ ಶ್ರೀರಾಮನ ಧ್ವಜದಲ್ಲಿ ಕೋವಿದಾರವಿತ್ತು ಎಂದು ನಾವು ತಿಳಿಯುವುದು ಕಷ್ಟವಿತ್ತು. ವನವಾಸದಲ್ಲಿದ್ದಾಗ ರಾಮ ಸಾಕಷ್ಟು ಮಂದಾರ ಗಿಡಗಳನ್ನು ಕಂಡಿರಲೂಬಹುದು.

ಅದನ್ನು ನೋಡಿದಾಗಲೆ ಅವನಿಗೆ ತನ್ನ ಧ್ವಜದ, ತನ್ನೂರಿನ ನೆನಪಾಗುತ್ತಿದ್ದಿರಬಹುದು ಎಂದು ನಾವು ಊಹಿಸಬಹುದು. ಸೀತೆಯನ್ನು ರಾವಣ ಕದ್ದುಕೊಂಡು ಹೋದ ಬಳಿಕ ಆತನಿಗೆ ವಿರಹ ಉಲ್ಬಣಿಸಿದುದು ನಿಜವಷ್ಟೆ. ಆಗ ‘ನಮ್ಮೂರ ಮಂದಾರ ಹೂವೇ’ ಎಂಬ ಹಾಡನ್ನು ಕೇಳಿಸಿದ್ದರೆ ಅದು ಸಿಚುಯೇಷನ್‌ಗೆ ಹೊಂದುವ ವಿರಹಗೀತೆ ಆಗಿ ಬಿಡುತ್ತಿತ್ತು.

ಎಲ್ಲ ಮನುಷ್ಯ ಜೀವಗಳಿಗೂ ಒಂದು ‘ನಮ್ಮೂರ ಮಂದಾರ ಹೂವು’ ಬೇಕಿರುತ್ತದೆ. ಅದು ವ್ಯಕ್ತಿ ಯನ್ನು ತನ್ನ ಊರಿನ ಬೇರುಗಳಿಂದ ಪೂರ್ತಿಯಾಗಿ ಬಿಡಿಸಿಕೊಳ್ಳದಂತೆ ಹಿಡಿದಿಡುತ್ತದೆ. ಅದು ಮಂದಾರವೇ ಇರಬಹುದು, ಸುರಗಿಯೂ ಪಾರಿಜಾತವೂ ಆಗಿರಬಹುದು. ಮಂದಾರ ಹೂವಿ ನಂತೆಯೇ ನೆಲಕ್ಕಂಟಿದ ತನ್ನ ಗಾಢ ಪರಿಮಳದಿಂದ ಮನದಲ್ಲಿ ಅಚ್ಚಾಗಿ ನಿಂತ ಇನ್ನೊಂದು ಹೂವು ಸುರಗಿ. ಅದು ಯುಆರ್ ಅನಂತಮೂರ್ತಿಯವರ ಆತ್ಮಕತೆಯ ಶೀರ್ಷಿಕೆ ಕೂಡ.

‘ಸುರಗಿ’ ಈ ಕೃತಿಯ ಶೀರ್ಷಿಕೆ. ‘ನನ್ನ ಬಾಲ್ಯವನ್ನು ನೆನಪು ಮಾಡುವ ಈ ಮಲೆನಾಡಿನ ಹೂವು ಒಣಗಿದಷ್ಟೂ ತನ್ನ ಪರಿಮಳವನ್ನು ಹೆಚ್ಚಿಸಿಕೊಳ್ಳುತ್ತದೆ. ಆರೋಗ್ಯ ಹದಗೆಡುತ್ತಿರುವ ನನ್ನ ಈ ವಯಸ್ಸಿನಲ್ಲಿ ಸುರಗಿಯಂತೆ ಇರಬೇಕೆನ್ನುವುದು ನನ್ನ ಆಶಯ’- ಎನ್ನುತ್ತಾರೆ ಅನಂತಮೂರ್ತಿ ತಮ್ಮ ಆತ್ಮಕತೆಯ ಮೊದಲ ಮಾತಿನಲ್ಲಿ. ಒಣಗುತ್ತ ಹೋದಂತೆ ಹೆಚ್ಚು ಗಾಢವಾಗಿ ಪರಿಮಳ ಬಿಡುತ್ತ ಹೋಗುವ ಈ ಹೂವನ್ನು ಬಾಡಿದಾಗಲೂ ದೇವರಿಗೆ- ದೈವಕ್ಕೆ ಅರ್ಪಿಸಬಹುದು ಎಂಬು ದು ವಿಶೇಷತೆ.

ಮನುಷ್ಯನಿಗೆ ವಯಸ್ಸಾದಂತೆ ಮಾಗುತ್ತಾನೆ/ಳೆ, ಮಾಗಿದರೆ ನಡೆನುಡಿ ಪಕ್ವವಾಗುತ್ತದೆ ಎಂಬುದು ನಮ್ಮ ನಂಬಿಕೆ ತಾನೆ. ಅನಂತಮೂರ್ತಿಯವರಂತೂ ತಮ್ಮ ಕೊನೆಯ ದಿನಗಳಲ್ಲಿ ನಿಜಾರ್ಥದಲ್ಲಿ ಪಕ್ವಗೊಂಡು ಪರಿಮಳದ ಪಕಳೆಯಾಗಿದ್ದರು. ಎಲ್ಲಿಂದಲೋ ಹೊರಟು ಎಲ್ಲಿಗೋ ಹೋದೆ. ಇಲ್ಲ, ಅಲ್ಲಿಯೇ ಇದ್ದೆ- ಮಂದಾರ ಮರದಡಿಯಲ್ಲಿ. ಆ ಹಾಡನ್ನು ಬರೆದಾಗ ದೊಡ್ಡರಂಗೇಗೌಡರಿಗೆ, ಅದಕ್ಕೆ ಸಂಗೀತ ನಿರ್ದೇಶನ ಮಾಡುತ್ತಾ ಅಶ್ವತ್ಥ್- ವೈದಿಯವರಿಗೆ, ಹಾಡುತ್ತಾ ಎಸ್‌ಪಿಬಿಗೆ, ಫಿಲಂಗೆ ಹೆಸರಿಡುತ್ತಾ ಸುನೀಲ್ ಕುಮಾರ್ ದೇಸಾಯಿಗೆ ಏನನಿಸುತ್ತಿದ್ದಿರಬಹುದು.

ಇದೆಲ್ಲಕ್ಕೂ ಮೂಲಮಾತೃಕೆಯಾದ, ಪರಿಮಳದ ಹಾದಿಯಲ್ಲಿ ಟೈಮ್ ಮಶೀನ್‌ನಂತೆ ನಮ್ಮನ್ನು ಎಲ್ಲಿಗೋ ಒಯ್ಯುವ ಕೆಂಪುಮಂದಾರ ಹೂವಿಗೆ ಧನ್ಯವಾದ ಹೇಳದೇ ಇರುವುದು ಹೇಗೆ ?

ಹರೀಶ್‌ ಕೇರ

View all posts by this author