ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಒಂದು ಪದ್ಯ ಬಗೆಯುತ್ತಾ ಮೌನದ ಮಡಿಲಿಗೆ

ಮುಂದಿನ ಚರಣಗಳಲ್ಲಿ ಕರುಗಳ ಗಂಟೆಯ ಕಿಣಿ ರವ, ನಿರ್ಝರ ಮರ್ಮರ ನಾದ, ಖಗದಿಂಚರ, ಮೃಗ ಕೂಜನ, ಡೇಗೆಯ ರೆಕ್ಕೆಯ ಹೊಯ್ಲು, ರೈತರ ಮಂಜುಳ ವಾಣಿ, ಗೊಲ್ಲತಿಯರ ನಡೆ ಮಾತು ಇವನ್ನೆಲ್ಲ ಪುತಿನ ಉಲ್ಲೇಖಿಸುತ್ತಾರೆ. ಪುತಿನ ಯಾಕೆ ಈ ಸದ್ದುಗಳನ್ನು ಮೌನ ಎನ್ನುತ್ತಿದ್ದಾರೆ? ಈ ಸದ್ದುಗಳಲ್ಲಿ ಒಂದು ಬೆಳವಣಿಗೆಯಿದೆ. ಅದು ಪಶುಲೋಕ, ಪಕ್ಷಿಲೋಕದಿಂದ ನಿಧಾನವಾಗಿ ಮನುಷ್ಯಲೋಕಕ್ಕೆ ದಾಟುತ್ತಿದೆ.

Harish Kera Column: ಒಂದು ಪದ್ಯ ಬಗೆಯುತ್ತಾ ಮೌನದ ಮಡಿಲಿಗೆ

-

ಹರೀಶ್‌ ಕೇರ
ಹರೀಶ್‌ ಕೇರ Nov 27, 2025 8:26 AM

ಕಾಡುದಾರಿ

ಪುತಿನ ಮೂಲಭಾವ ಸಾವಧಾನ ಮತ್ತು ಭಕ್ತಿ. ಅವಸರ, ತರ್ಕ, ವಾಗ್ವಾದಗಳಿಗೆ ದಕ್ಕದ ಕೆಲವು ವಿಚಿತ್ರ ಸಂಗತಿಗಳು ಸಾವಧಾನಕ್ಕೆ ಮಾತ್ರ ದಕ್ಕುತ್ತವೆ. ಅದರಲ್ಲಿ ಇದೂ ಒಂದು. ಮೌನದ ಕುರಿತ ಈ ಒಳನೋಟ ಮಾತಿಗೂ ವಿಚಾರಕ್ಕೆ ದಕ್ಕಲು ಹೇಗೆ ಸಾಧ್ಯ? ಅದು ಮೌನಕ್ಕೆ ದಕ್ಕಬೇಕಲ್ಲವೆ ?

ಇತ್ತೀಚೆಗೆ ಮೇಲುಕೋಟೆಗೆ ಭೇಟಿ ನೀಡಿದಾಗ ಅಲ್ಲಿರುವ ಕವಿ ಪುತಿ ನರಸಿಂಹಾಚಾರ್‌ ಅವರ ಮನೆ, ಮೇಲುಕೋಟೆಯ ಎರಡು ವಿಶಿಷ್ಟ ದೇವಾಲಯಗಳು, ಬೆಟ್ಟ, ಅಲ್ಲಿನ ದಿವ್ಯ ಭಾವಗಳೆಲ್ಲ ಕಾಡಿದವು. ಪುತಿನರ ‘ಯದುಗಿರಿಯ ಮೌನ ವಿಕಾಸ’ ಕವಿತೆ ನೆನಪಾಯಿತು. ಅದನ್ನು ನಾನು ಹೇಗೆ ನನ್ನದನ್ನಾ ಗಿಸಿಕೊಂಡೆ ಎಂದು ಹೇಳುವುದು ಈ ಲೇಖನದ ಉದ್ದೇಶ. ಕವಿತೆ ಮೂರು ಭಾಗದಲ್ಲಿದೆ.

‘ಮೂಡಣ ಕಣಿವೆಯ ಹಿಮದವಕುಂಠನ/ ರವಿಕರ ಸ್ಪರ್ಶಕೆ ಜಾರುತಿದೆ, ನಾಡದೊ ಹಿಗ್ಗುತ ನಾಚುತ ಮೆಲ್ಲನೆ/ ಮೈಸಿರಿಯನು ತಾ ತೋರುತಿದೆ’ ಎಂದು ಶುರುವಾಗುತ್ತದೆ. ರವಿಕರ ಸ್ಪರ್ಶ’ ಎಂಬಲ್ಲಿ ಇರುವ ಕರ- ಕಿರಣ, ಕೈ ಎಂಬ ಶ್ಲೇಷೆಯನ್ನು ಮೆಚ್ಚಬಹುದು. ರವಿಯನ್ನು ಪುರುಷನಾಗಿಯೂ, ಮೂಡಣ ಕಣಿವೆಯನ್ನು ಹೆಣ್ಣಾಗಿಯೂ ಕಾಣಿಸಿದ ಈ ಸಾಲುಗಳು ಕರಸ್ಪರ್ಶ’ ಎಂಬ ಮೂಲಕ ಪ್ರಣಯದ ಸೂಚನೆಯನ್ನೂ ತೋರಿವೆ.

ಮುಂದಿನ ಚರಣದಲ್ಲಿ, ‘ಬನದೊಳು ಕೆರೆಯೊಳು ಕಮರಿಯ ಬುಡದೊಳು/ ದಿಗಂತ ವಿಸ್ತೃತ ನಾಡಿನೊಳು/ ಇನನರುಣಾಂಶುಗಳೆಡೆ ಮಿಡಿವವು/ ತರುಜಲಗಳ ನೆರೆ ನಲವಿನೊಳು’. ಮೊದಲಿನ ಪಲ್ಲವಿಯಲ್ಲಿ ಬಂದ ಪ್ರಣಯಭಾವದ ಮುಂದಿನ ಭಾಗ- ಸೃಷ್ಟಿಯೂ ಆಗಿದೆಯೆಂಬ ಸೂಚನೆ ಇದೆ. ಅದು ಯಾವ ಸೃಷ್ಟಿ? ‘ಜನಪದದಂತರ್ಯಾಮಿಯ ಯೋಗ/ ಸಮಾಧಿಯ ಕಲಕಿದೆ ಸುಮ್ಮಾನ/ ಕಣಿವೆಯ ತಳದಂಚಿನೊಳೊಯ್ಯೊಯ್ಯನೆ/ ಎಚ್ಚರುತಿದೆ ಮಾಗಿಯ ಮೌನ’.

ಜನಪದದ ಅಂತರ್ಯಾಮಿ ಯೋಗ ಸಮಾಧಿಯಲ್ಲಿದ್ದಾನೆ. ಮೂರನೇ ಚರಣದಲ್ಲಿ ಬಂದ ಯೋಗ ಸಮಾಧಿ’ ಹಾಗೂ ಎಚ್ಚರುತಿದೆ ಮಾಗಿಯ ಮೌನ’ ಎಂಬ ಪದಗುಚ್ಛಗಳು ಇಲ್ಲಿ ನಮ್ಮನ್ನು ಹೆಚ್ಚಿನ ಅನ್ವೇಷಣೆಗೆ ಪ್ರೇರೇಪಿಸುತ್ತಿವೆ.

ಇದನ್ನೂ ಓದಿ: Harish Kera Column: ಮಧ್ಯರಾತ್ರಿ ಚಂದ್ರ ತಳಿಯ ತುಂಬುತಿರುವುದು

ಮುಂದಿನ ಚರಣಗಳಲ್ಲಿ ಕರುಗಳ ಗಂಟೆಯ ಕಿಣಿ ರವ, ನಿರ್ಝರ ಮರ್ಮರ ನಾದ, ಖಗದಿಂಚರ, ಮೃಗ ಕೂಜನ, ಡೇಗೆಯ ರೆಕ್ಕೆಯ ಹೊಯ್ಲು, ರೈತರ ಮಂಜುಳ ವಾಣಿ, ಗೊಲ್ಲತಿಯರ ನಡೆ ಮಾತು ಇವನ್ನೆಲ್ಲ ಪುತಿನ ಉಲ್ಲೇಖಿಸುತ್ತಾರೆ. ಪುತಿನ ಯಾಕೆ ಈ ಸದ್ದುಗಳನ್ನು ಮೌನ ಎನ್ನುತ್ತಿದ್ದಾರೆ? ಈ ಸದ್ದುಗಳಲ್ಲಿ ಒಂದು ಬೆಳವಣಿಗೆಯಿದೆ. ಅದು ಪಶುಲೋಕ, ಪಕ್ಷಿಲೋಕದಿಂದ ನಿಧಾನವಾಗಿ ಮನುಷ್ಯಲೋಕಕ್ಕೆ ದಾಟುತ್ತಿದೆ.

ಕರುಗಳ ಗಂಟೆಯ ಕಿಣಿ ರವದಿಂದ, ಖಗದಿಂಚರದಿಂದ, ರೈತರ ಮಂಜುಳವಾಣಿಗೂ ಗೊಲ್ಲತಿಯರ ಮಾತಿಗೂ ಬೆಳೆದಿದೆ. ‘ಮೂಡಣ ಕಣಿವೆಯ ತಳದೊಳಗಾಲಿಸು ಎಚ್ಚತ್ತಿದೆ ಮೌನ!

ಸಾಸಿರ ದನಿಯೊಳು ಚಿಗುರಿದೆ ಮೌನ’ ಎನ್ನುತ್ತಾರೆ. ರವಿಯ ಜೊತೆಗೆ ಮೌನವೂ ಎಚ್ಚೆತ್ತಿದೆಯಂತೆ. ಆದರೆ ಇಲ್ಲಿ ಕವಿ ಸದ್ದುಗಳನ್ನು ಕೊಡುತ್ತಿದ್ದಾರೆ. ಸಾವಿರ ದನಿಗಳಲ್ಲಿ ಮೌನ ಚಿಗುರಿದೆ’ಯಂತೆ! ಈ ಒಳನೋಟ ಹೊಸದು!

ಮೌನ ಚಿಗುರುವುದು ಮೌನದಲ್ಲಿ ಅಲ್ಲ, ಸದ್ದಿನಲ್ಲಿ. ಮೌನದ ಗಾಢತೆ, ಪಾವಿತ್ರ್ಯ, ಸವಿ ಗೊತ್ತಾಗ ಬೇಕಾದರೆ ಸದ್ದುಗಳು ಬೇಕು ಎನ್ನುತ್ತಿದ್ದಾರೋ ಕವಿ? ನುಡಿವೆತ್ತಿದೆ ಮೌನ, ಸುಂದರ ಮೌನ, ಸವಿ ಮೌನ. ಸವಿ ಎನ್ನುವುದು ಇಲ್ಲಿ ನಾಮಪದವೂ, ಕ್ರಿಯಾಪದವೂ ಆಗಿದೆಯೊ? ಈ ಪ್ರಶ್ನೆಗಳನ್ನಿಟ್ಟು ಕೊಂಡು ಮುಂದಿನ ಭಾಗಕ್ಕೆ ಹೋಗುವ. ಮುಂದೆ ಯದುಗಿರಿಯ ಪಡುವಣ ಕಣಿವೆಯ ಮೌನ. ಪಡುವಣ ಎಂದಾಗ ಸೂರ್ಯ ಮುಳುಗುವ, ದಿನ ಮುಗಿಯುವ ಭಾವ ಬರುತ್ತಿದೆ.

Screenshot_7 r

ಸಂಜೆಗೆ ಬೆಳಗಿನಂತೆ ಚಪಲದ, ಸೃಷ್ಟಿಯ, ಚುರುಕುತನದ ಚಟುವಟಿಕೆಯ ಚಿತ್ರವಿಲ್ಲ; ಅದರದು ಯಾವಾಗಲೂ ತುಂಬು ಘನತೆಯ ಭಾವ. ಮೂಡಣ ಕಣಿವೆಯಲ್ಲಿ ಇಂಚರಗಳಿವೆ. ಅವುಗಳ ಮೂಲಕ ನಾವು ಮೌನವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ. ಆದರೆ, ಪಡುವಣದದರೋ, ಮೌನ ಆಗಲೇ ಇದೆ. ಅದು ಸ್ಥಾಪಿತ ಮೌನ, ನಿರ್ಭರ ಮೌನ, ಕದಡದ ಮೌನ.

ಒಮ್ಮೊಮ್ಮೆ ಅಲ್ಲಿ ದನಿ ಮಿಡಿಯುತ್ತದಾದರೂ ಅದು ಮೌನದ ಗಾಂಭೀರ್ಯ ಅರಿಯದ ಹಸುಳೆಯ ಮಾತಿನಂತೆ. ಮೊದಲ ಭಾಗದಲ್ಲಿ ಬಂದ ಸೃಷ್ಟಿಯ ಚಿತ್ರವೂ ಇಲ್ಲಿನ ಹಸುಳೆಯ ಚಿತ್ರವೂ ಕೂಡಿ ಕೊಳ್ಳುತ್ತಿವೆ. ಕಣಿವೆ ರಾಜರ್ಷಿಯಂತಿದೆ. ಭಕ್ತರೂ ಬಂದಿದ್ದಾರೆ. ತರುಗಳೂ ನೀರವವಾಗಿ ನಿಂತಿವೆ. ‘ಬಸಿರಿನಲ್ಲಿ ಲಯವನ್ನು ಹುದುಗಿಸಿ ಗಿರಿ ನಿಂತಿದೆ- ದಮದ ಹಾಗೆ. ದಮ ಎಂಬ ಯೋಗದ ಪರಿಭಾಷೆ ಇಲ್ಲಿ ಸೆಳೆಯುತ್ತಿದೆ.

ದಮ ಎಂದರೆ ಬಾಹ್ಯ ಇಂದ್ರಿಯಗಳನ್ನು ನಿಗ್ರಹಿಸುವುದು. ಗಿರಿಯು ಯೋಗಿಯಾಗಿ ನಿಂತಿದೆ. ಅದು ಶಬ್ದಕ್ಕೆ, ಬಿಸಿಲಿನ ಸ್ಪರ್ಶಕ್ಕೆ ವಿಚಲಿತವಾಗದು. ಅದರೊಳಗೆ ಒಂದು ಮೌನವಿದೆ. ಈಗ ಮೌನದ ವಿಕಾಸ’ ಎಂಬ ಪದಗುಚ್ಛಕ್ಕೆ ಯಾವುದೋ ಅರ್ಥ ಸುಳಿದಂತಾಗುತ್ತಿದೆ.

ಮುಂದಿನ ಸಾಲಿನಲ್ಲಿ ದಮದ ಜೊತೆಗೆ ಶಮವೂ ಬಂದಿದೆ. ಶಮ ಎಂದರೆ ಅಂತರಂಗದ ನಿಗ್ರಹ. ಇದೂ ಯೋಗದ ಪರಿಭಾಷೆ. ಪಡುವಣ ಕಣಿವೆಯಲ್ಲಿ ಮೌನ ನಿದ್ರಿಸುತ್ತಿದೆ. ಈ ಮೌನವನ್ನು ರಾಗ ಮೋದಗಳು ಕಲಕುತ್ತಿಲ್ಲ. ಇದು ಸವಿಮೌನವಲ್ಲ; ಇದು ಘನ ಮೌನ. ಇದು ಸೋಜಿಗದ ಮೌನ. ಮೊದಲ ಭಾಗದ ಲೌಕಿಕದ ಚಿತ್ರಗಳಿಂದ ಎರಡನೇ ಭಾಗದ ಅಲೌಕಿಕಕ್ಕೆ ಆಗುವ ಅಂತರಂಗದ ವಿಕಾಸವನ್ನು ಕವಿ ಹೇಳುತ್ತಿದ್ದಾರೆ.

ಮೂರನೇ ಭಾಗದಲ್ಲಿ ‘ಯದುಗಿರಿಯ ದೇಗುಲದ ಮುಂಜಾನೆಯ ಮೌನವಿದೆ. ಹಿಮ ಬೀಳುತಿದೆ, ಚಳಿ ಮೂಡುತಿದೆ,ಮಾಗಿಯು ಗಾದಿಯನೇರುತಿದೆ; ತಮ ಹದುಗುತಿದೆ, ಬೆಳಕೊಗೆಯುತಿದೆ, ಬೆಳ್ಳಿಯು ಮಂಜೊಳು ಕರಗುತಿದೆ. ಮಾಗಿ’ ಎಂಬ ಪದ ನನ್ನಲ್ಲಿರುವ ಅರ್ಥ ಅಷ್ಟೇ ಅಲ್ಲ ಎನ್ನುತ್ತಿದೆ. ಮೂರು ಜಾವದ ಇರುಳಿನ- ಅಂತ್ಯದ ಆಲಿಂಗನದ ಸುಪ್ತಿಯಲ್ಲಿ - ಇರವು ಅಳಿದ ಇರುಳು- ಅಂತ್ಯವನ್ನು ಪದೇ ಪದೇ ಸೂಚಿಸುವ ಈ ಪದಗಳು ಕವನವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಿವೆಯೋ ಎಂಬಂತೆ ಭಾಸವಾಗುತ್ತಿದೆ.

ಇಲ್ಲಿ ದೇವರ ಸಾನ್ನಿಧ್ಯದಲ್ಲಿ ಭಕ್ತರು ಸೇರಿದ್ದಾರೆ. ಎರಡನೇ ಭಾಗದಲ್ಲಿ ಗಿರಿಯೆಂಬ ರಾಜರ್ಷಿಯ ಸಾನ್ನಿಧ್ಯದಲ್ಲಿ ತರುಗಳು ಸೇರಿದ್ದು ನೆನಪಾಗುತ್ತಿದೆ. ಇಲ್ಲಿ ಗುಡಿಕತ್ತಲೆಯಲ್ಲಿ ಹಣತೆಗಳು ರಂಜಿಸಿದ್ದು ತಮವೇ ಪುಷ್ಪಿತವಾದಂತೆ- ಕತ್ತಲೆಯೇ ಹೂವಾದಂತೆ- ಇದೆ.

ಜೀವಾತ್ಮ ಮಾನವನ ದೇಹದಲ್ಲಿ ಸೇರಿಕೊಂಡಿದೆ. ಈಗ ಅದು ದೇವನ ಸನಿಹದಲ್ಲಿ ನಿಜಾನಂದ ವನ್ನು ಪಡೆಯುವ ಯತ್ನದಲ್ಲಿದೆ; ಪಾಶುರ ಭಕ್ತಿಗೀತೆಗಳ ಮೂಲಕ ಆತನನ್ನು ಸ್ತುತಿಸುತ್ತಿದೆ. ನಿಜಾ ನಂದ ಹಾಗೂ ಜೀವಾತ್ಮ ಎಂಬ ಪದಗಳು ಈ ಪದ್ಯವನ್ನು ನೇರವಾಗಿ ಅಧ್ಯಾತ್ಮದ ಮಟ್ಟಕ್ಕೆ ಒಯ್ಯಲು ಹವಣಿಸುತ್ತಿವೆ.

‘ಸಹಸ್ರ ಕಂಠದಿ ಮೇಳವಿಸಿದೆ ನುತಿ/ ದೇಗುಲವಾಗಿದೆ ಘೋಷವತಿ’ / ಆತ್ಮಾನಂದಕೆ ತನ್ನೇಕಾಂತದಿ/ ನಿಯತಿಯು ಮಿಡಿಯುವ ಘೋಷವತಿ’ ಇಲ್ಲಿ ಘೋಷವತಿ ಎಂಬುದು ಒಂದು ವೀಣೆಯ ಹೆಸರು. ಆತ್ಮಾನಂದಕ್ಕಾಗಿ ತನ್ನೊಳಗೇ ಅವಿತುಕೊಂಡ ಘೋಷವತಿಯಾಗಿದೆ ನಿಯತಿ. ಆದರೆ ಪೂಜೆಯ ಯಾವುದೋ ಒಂದು ಹಂತದಲ್ಲಿ ಮಂಗಳಾರತಿ ಪೂರ್ಣಗೊಂಡು ಮಂಗಳವಾದ್ಯಗಳೆಲ್ಲ ನಿಂತಾಗ ಥಟ್ಟನೆ ಒಂದು ಮೌನ ಕವಿಯುತ್ತದಲ್ಲ; ಹಾಗೆ ಒಂದು ನೀರವ ಕವಿದಿದೆ ಇದ್ದಕ್ಕಿದ್ದಂತೆ.

ಜೀವವು ಭಾವಕೆ ಸಲ್ಲುವುದು ಮತ್ತು ಗೀತವು ಕೃತಕೃತ್ಯವಾಗುವುದು- ಅದು ರಸದ ಉತ್ತುಂಗವನ್ನು ಮುಟ್ಟಿದಾಗ. ಕವಿತೆ, ಕತೆ, ನೃತ್ಯ, ಚಿತ್ರಕಲೆ- ಯಾವ ಸೃಜನಶೀಲತೆಯೂ ಇರಬಹುದು- ಕೃತಕೃತ್ಯ ವಾಗುವುದು ಆ ಸೃಜನಶೀಲನ ಭಾವವನ್ನು ಸಹೃದಯನ ಜೀವ ಮುಟ್ಟಿದಾಗ. ಸೃಜನಶೀಲ ಗಳಿಗೆ ಕಲಾವಿದನಲ್ಲಿ ಮೂಡುವುದೂ ಲೌಕಿಕ- ಅಲೌಕಿಕಗಳ ಒಂದು ಸ್ಪರ್ಶದ ಗಳಿಗೆಯಲ್ಲೆ.

ಬೇಂದ್ರೆ ತಮ್ಮ ಕವಿತೆಗಳನ್ನು ಬರೆದವನು ಅಂಬಿಕಾತನಯದತ್ತ ಎನ್ನುತ್ತಿದ್ದರು. ಯಾವುದೋ ಒಂದು ಮತ್ತ ಸ್ಥಿತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕಲಾವಿದರನ್ನು ನಾವು ನೋಡಿದ್ದೇವೆ. ‘ಆ ದಡ ಸಿಕ್ಕಿತೆ ಆತುಮಕೆ?’ ಎಂಬುದು ಕವಿಯ ಪ್ರಶ್ನೆ. ಯೋಗ ಸಮಾಧಿಯೂ ನೋವು ಸಾವು ಗಳನ್ನು ದಾಟಿದ ಒಂದು ಆ ದಡ. ಕಡಲಿನಂತೆ ಮೊರೆದ ಲೌಕಿಕ ಜೀವನದ ಯಾವುದೋ ಒಂದು ಕ್ಷಣದಲ್ಲಿ ಜೀವಕ್ಕೆ ಇದರ ಅರ್ಥಪೂರ್ಣತೆ ಹಾಗೂ ನಿರರ್ಥಕತೆಯೆಲ್ಲ ಥಟ್ಟನೆ ಅರ್ಥವಾಗಿ, ಭಾವಕ್ಕೆ ದಕ್ಕಿದಂತಾಗಿ, ಜೀವವು ಬೆಚ್ಚಿ ಬೆರಗಾಗಿ ಮೌನವಾಗಿ ನಿಂತುಬಿಟ್ಟಿದೆ.

ಈ ಮೌನಕ್ಕೆ ಸಾಟಿಯೇ ಇಲ್ಲ. ಈ ಮೌನವನ್ನು ಮೀರಿದ ಮೌನವೂ ಇಲ್ಲ. ಇದು ಚಿನ್‌ಮೌನವಂತೆ. ಮೊದಲ ಭಾಗದ್ದು ಸವಿಮೌನ, ಎರಡನೆಯದು ಘನಮೌನ, ಮೂರನೆಯದು ಚಿನ್‌ಮೌನ. ಮೊದಲಿನದ್ದು ಅಪ್ಪಟ ಲೌಕಿಕ ಮೌನ. ಅದು ಲೌಕಿಕದ ಸದ್ದು ಸಾಧನೆಗಳಿಂದ ಪ್ರೇರಿತವಾದದ್ದು. ಎರಡನೆಯದ್ದು ಯೋಗದ್ದು. ಅಲ್ಲಿ ಗಿರಿಯೂ ರಾಜರ್ಷಿಯಾಗಿದೆ.

ಮೂರನೆಯ ಭಾಗದಲ್ಲಿ ಮೌನದ ಅನುಭವವನ್ನು ಪಡೆಯುತ್ತಿರುವುದು ಜನತೆಯೇ ಹೊರತು ಯೋಗಿಯಲ್ಲ. ಯೋಗಿಯ ಮೌನಕ್ಕೆ ಏರಿಳಿತಗಳಿಲ್ಲ. ಕಾವ್ಯಾನಂದವು ಬ್ರಹ್ಮಾನಂದದ ಸಹೋದರ ನಂತೆ. ಬ್ರಹ್ಮಾನಂದ ಸಾಮಾನ್ಯರಿಗೆ ದೂರವೇ. ಆದರೆ ಸ್ವಲ್ಪ ಪ್ರಯತ್ನಪಟ್ಟರೆ ಹೆಚ್ಚಿನವರು ಕಾವ್ಯಾ ನಂದದ ಬಳಿಗೆ ಹೋಗಬಲ್ಲರು.

ಕಲೆಯಾಗಲೀ ಭಕ್ತಿಯಾಗಲೀ ಅನುಭ ವಕ್ಕೆ ದಕ್ಕಬೇಕಾದರೆ ಲೌಕಿಕ ಜೀವನವೇ ಬೇಕು. ಲೌಕಿಕ ಜೀವನದ ಸಾಧನೆ ಸೋಲುಗಳ ತುರೀಯ ಸ್ಥಿತಿಯಲ್ಲೇ ಒಂದು ಸೃಜನಶೀಲ ಮೌನದ ಉತ್ತುಂಗ ಗೊತ್ತಾಗುವುದು ಅನ್ನುತ್ತಿದ್ದಾರೆಯೇ ಕವಿ? ಮಾತಿನ ಬಗ್ಗೆ ನಾವು ಸಾಕಷ್ಟು ಮಾತಾಡಿದ್ದೇವೆ.

ಆದರೆ ಮೌನಕ್ಕೂ ಒಂದು ವಿಕಾಸವಿದೆ; ಅದನ್ನೂ ನಾವು ಶೋಧಿಸಬಹುದು ಎಂಬುದನ್ನು ಪುತಿನ ಹೇಳುತ್ತಾರೆ. ಮೌನದ ವಿಕಾಸ ಎಂದರೆ ಮನುಷ್ಯನ ಆತ್ಮದ ಅಂತರಂಗದ ವಿಕಾಸ; ಅಧ್ಯಾತ್ಮದ ವಿಕಾಸ; ಯೋಗದ ವಿಕಾಸ; ಕಲೆಗಳ ವಿಕಾಸ; ಮನುಷ್ಯ ಸೃಜನಶೀಲನಾಗಿ ತನ್ನೊಳಗೆ ತಾನು ಏನನ್ನೆಲ್ಲ ಕಂಡುಕೊಳ್ಳಬಹುದೋ ಅದೆಲ್ಲವೂ ಮೌನದ ವಿಕಾಸ.

ಮಾತು ಸೋತು ನಿಲ್ಲುವಲ್ಲಿ ಮೌನ ಚಿಗುರುತ್ತದೆ; ಅರಳುತ್ತದೆ; ವಿಕಾಸಗೊಳ್ಳುತ್ತದೆ. ಪುತಿನ ಮೂಲ ಭಾವ ಸಾವಧಾನ ಮತ್ತು ಭಕ್ತಿ. ಅವಸರ, ತರ್ಕ, ವಾಗ್ವಾದಗಳಿಗೆ ದಕ್ಕದ ಕೆಲವು ವಿಚಿತ್ರ ಸಂಗತಿಗಳು ಸಾವಧಾನಕ್ಕೆ ಮಾತ್ರ ದಕ್ಕುತ್ತವೆ. ಅದರಲ್ಲಿ ಇದೂ ಒಂದು. ಮೌನದ ಕುರಿತ ಈ ಒಳನೋಟ ಮಾತಿ ಗೂ ವಿಚಾರಕ್ಕೆ ದಕ್ಕಲು ಹೇಗೆ ಸಾಧ್ಯ? ಅದು ಮೌನಕ್ಕೆ ದಕ್ಕಬೇಕಲ್ಲವೆ? ಈ ವಿಚಾರದಲ್ಲಿ ಪುತಿನ ರನ್ನು ಗೋಪಾಲಕೃಷ್ಣ ಅಡಿಗರ ಜೊತೆ ಹೋಲಿಸಿ ನೋಡಿದರೆ ವ್ಯತ್ಯಾಸ ವಿಶಿಷ್ಟತೆಗಳು ಗೊತ್ತಾಗ ಬಹುದು.

ಅಡಿಗರಿಗೆ ಮಾತಿನ ಶಕ್ತಿಯ ಮೇಲೆ ಬಹಳ ನಂಬಿಕೆ; “ಮಾತು ದೂರದ ಮಿಂಚು ತಂತಿಗಳಿರುವ ಹಾಗೆ, ಒದೆಸಿಕೊಳ್ಳದೆ ಒಳಗೆ ಮಿಂಚುಬಲ ತಿಳಿಯದು" ಎನ್ನುತ್ತಾರೆ. ಮೌನದಲ್ಲಿಯೂ ಅವರು ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ ಕೂತವರು. ಅವರಿಗೆ ಮೌನದಲ್ಲೂ ಮಾತೇ. ಮೌನದ ನಿಗೂಢ ಗಂಭೀರ ಸಂವಾದದ ಚಟಾಕಿ’ ಅವರ ಕಾವ್ಯವೆಲ್ಲ ಮಾತಿನ ವಿಜೃಂಭಣೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಡಿಗರ ಕಾವ್ಯ ಮಾತಿನ ನಾನಾ ಅವತಾರಗಳಾದ ಪ್ರತಿಮೆ ಕಟಕಿ ವ್ಯಂಗ್ಯ ವಿಡಂಬನೆ ಟೀಕೆ ವಾಗ್ವಾದಗಳ ವಿಲಾಸ; ಪುತಿನ ಕಾವ್ಯ ಮೌನದ ನಾನಾ ಅವತಾರಗಳಾದ ಸಾವಧಾನ, ಭಕ್ತಿ, ರಸ, ನೆಮ್ಮದಿಗಳ ಗರ್ಭಗುಡಿ. ಮೌನದ ಬಗ್ಗೆ ಮಾತಾಡಬಹುದೆ? ಮೌನದಲ್ಲೆ ಮಾತಾಡಬೇಕು. ಪುತಿನ ಕವಿತೆ ಮೌನದ ಇನ್ನೊಂದು ರೂಪ. ಆ ಪದ್ಯವೇ ಮೌನದ ಒಂದು ವಿಕಾಸ.