Yagati Raghu Naadig Column: ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...
ಮಿಲಿಟರಿ ಸೇವೆಯ ನಂತರ ಸ್ವಯಂನಿವೃತ್ತಿ ಪಡೆದು ನಗರದ ಹೊರವಲಯದಲ್ಲಿ ಫಾರ್ಮ್‌ಹೌಸ್ ಮಾಡಿಕೊಂಡು ನೆಲೆಸಿದ್ದ ಮೀಸೆಮಾವ ಅವಿವಾಹಿತರಾಗಿದ್ದು, ಬಿಲ್ಲು ವಿದ್ಯೆಯನ್ನು ಆಸಕ್ತರಿಗೆ ಕಲಿಸು ತ್ತಿದ್ದರು. ‘ಧನಂಜಯ ಬಿಲ್ಲು ವಿದ್ಯಾ ತರಬೇತಿ ಕೇಂದ್ರ’ ಅವರದ್ದೇ ಆಗಿತ್ತು. ಕಥಾನಾಯಕ ಶ್ರಮಜೀವಿ ಯನ್ನು ನಯಾಪೈಸೆ ಶುಲ್ಕವಿಲ್ಲದೆ ತರಬೇತಿಗೆ ದಾಖಲಿಸಿಕೊಂಡ ಮಾತೃಹೃದಯಿ ಅವರು.


ರಸದೌತಣ
naadigru@gmail.com
ಕಥೆಯ ಎಳೆಗಾಗಿ ಹುಡುಕುತ್ತಿದ್ದ ಕಥೆಗಾರನಿಗೆ, ‘ಅಂಗರಾಜ ಮರ್ದನ ಕೇಂದ್ರ’ ಎಂಬ ಮಸಾಜ್ ಪಾರ್ಲರ್ ನಡೆಸುತ್ತಿದ್ದ ಶ್ರಮಜೀವಿಯ ಪರಿಚಯವಾಗುತ್ತದೆ. ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ ಆತ, ನಂತರ ತನ್ನ ಕಥೆಯಿಂದ ಪ್ರಭಾವಿತನಾಗಿ, ಆತ್ಮಹತ್ಯೆಯ ಚಿತ್ತಸ್ಥಿತಿಯಿಂದ ಹೊರಬಂದು ಬದುಕು ಕಟ್ಟಿಕೊಂಡಿದ್ದು ಕಥೆಗಾರನಿಗೆ ಗೊತ್ತಾಗುತ್ತದೆ.
ಶ್ರಮಜೀವಿಯ ಕೋರಿಕೆಯಂತೆ ಮಾಲೀಶಿಗೆ ಒಪ್ಪುವ ಕಥೆಗಾರ, ಆತನ ವೃತ್ತಾಂತವನ್ನೂ ಕೇಳುವ ಉತ್ಸುಕತೆ ತೋರುತ್ತಾನೆ. ಆಗಷ್ಟೇ ಹುಟ್ಟಿ ಉದ್ಯಾನದಲ್ಲಿ ಮಲಗಿಸಲ್ಪಟ್ಟಿದ್ದ ತನ್ನನ್ನು ಮೀನುಗಾರ್ತಿಯೊಬ್ಬಳು ಎತ್ತಿಕೊಂಡು ಹೋಗಿ ಸಾಕಿದ್ದನ್ನು, ನಂತರ ಗುರಿವಿದ್ಯೆಯಲ್ಲಿ ತನಗಿದ್ದ ಪ್ರಾವೀಣ್ಯವನ್ನು ಕಂಡ ಸಹೃದಯಿಯೊಬ್ಬರು ಬಿಲ್ಲು ವಿದ್ಯಾ ತರಬೇತಿ ಕೇಂದ್ರಕ್ಕೆ ತನ್ನನ್ನು ದಾಖಲಿಸಿದ್ದನ್ನು, ಅಲ್ಲಿಗೆ ಬರುತ್ತಿದ್ದ ಶ್ರೀಮಂತರ ಮಕ್ಕಳನ್ನೂ ಬಿಲ್ಲು ವಿದ್ಯೆಯಲ್ಲಿ ಮೀರಿಸಿದ್ದನ್ನು ಶ್ರಮಜೀವಿ ಹೇಳಿಕೊಳ್ಳುತ್ತಾನೆ. ಈ ಕಥೆಯ ಮುಂದಿನ ಭಾಗ ಇಲ್ಲಿದೆ, ಒಪ್ಪಿಸಿಕೊಳ್ಳಿ.....
* * *
“ಸರ್, ನನ್ನ ವೃತ್ತಾಂತ ಪಿಟೀಲು ಕಛೇರಿಯಂತೆ ಕುಯ್ಯುತ್ತಿದ್ದರೆ ನಿಲ್ಲಿಸಿ ಬಿಡಲಾ?" ಎಂದು ಶ್ರಮ ಜೀವಿ ಕಥೆಗಾರನನ್ನು ತುಂಟದನಿಯಲ್ಲಿ ಕೇಳಿದ. ಅದಕ್ಕೆ ಕಥೆಗಾರ, “ಅಯ್ಯಾ, ಸೊಗಸಾಗಿ ಸಾಗುತ್ತಿರುವ ವೃತ್ತಾಂತದ ಮಧ್ಯೆ ಹೀಗೆ ಕಮರ್ಷಿಯಲ್ ‘ಬ್ರೇಕ್’ ಕೊಟ್ಟರೆ, ನಿಮ್ಮ ಮೂಳೆಗಳನ್ನು ನಾನು ‘ಬ್ರೇಕ್’ ಮಾಡಬೇಕಾಗುತ್ತೆ. ನಿಮ್ಮ ಮಾಲೀಶಿಗೆ ಮೈ-ಕೈ ಒಡ್ಡಿರುವಂತೆಯೇ, ನಿಮ್ಮ ವೃತ್ತಾಂತಕ್ಕೂ ಕಿವಿಯೊಡ್ಡಿಕೊಂಡಿರುವೆ. ಇದನ್ನು ಕಂತುಗಳಾಗಿ ಒಡೆಯದೇ ಒಂದೇ ಎಪಿಸೋಡ್ ನಲ್ಲಿ ನೀವು ಹೇಳಿ ಬಿಡಬೇಕು" ಎಂದು ನಗುತ್ತಲೇ ಗದರಿದ. ಈ ಮಾತಿಗೆ ಮನದುಂಬಿ ನಕ್ಕ ಶ್ರಮ ಜೀವಿ, ಕಪಾಟಿನ ಮತ್ತೊಂದು ಹೂಜಿಯ ತೈಲವನ್ನು ದಿವಾನದ ಪಕ್ಕದ ಹಿತ್ತಾಳೆ ಬೋಗುಣಿಗೆ ಬಗ್ಗಿಸಿಕೊಂಡು, ಅದರಿಂದ ಕೊಂಚಕೊಂಚವೇ ತೈಲವನ್ನು ಎತ್ತಿಕೊಂಡು ಕಥೆಗಾರನ ಮೈಗೆ ಲೇಪಿಸುತ್ತಾ, ಮಿಕ್ಕಿದ್ದನ್ನು ತಲೆಗೆ ತಿಕ್ಕುತ್ತಾ ವೃತ್ತಾಂತವನ್ನು ಮುಂದುವರಿಸಿದ....
ಇದನ್ನೂ ಓದಿ: Yagati Raghu Naadig Column: ಕರ್ಮಯೋಗಿಯೊಂದಿಗೆ ಕಥೆಗಾರನ ಕಥಾಕಾಲಕ್ಷೇಪ..!
“ಸರ್, ನನ್ನನ್ನು ಬಿಲ್ಲು ವಿದ್ಯೆಯ ತರಬೇತಿಗೆ ಸೇರಿಸಿದ ಆ ಮೀಸೆಮಾವನ ಹೆಸರು ವಿಶಿಷ್ಟವಾಗಿತ್ತು. ಎಲ್ಲರೂ ಅವರನ್ನು ‘ಅಜ’ ಎಂದೇ ಕರೆಯುತ್ತಿದ್ದುದು ನನಗೆ ವಿಚಿತ್ರವಾಗಿ ಕಂಡಿತ್ತಾದರೂ, ಅದೇಕೆ ಹಾಗೆ? ಎಂದು ಅವರನ್ನು ಕೇಳುವ ಧೈರ್ಯವಿರದೆ ಸುಮ್ಮನಿದ್ದೆ. ಮಿಲಿಟರಿ ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು ನಗರದ ಹೊರವಲಯದಲ್ಲಿ ಫಾರ್ಮ್‌ಹೌಸ್ ಮಾಡಿಕೊಂಡು ನೆಲೆಸಿದ್ದ ಆ ಅವಿವಾಹಿತರು, ಬಿಲ್ಲು ವಿದ್ಯೆಯನ್ನು ಆಸಕ್ತರಿಗೆ ಕಲಿಸುತ್ತಿದ್ದರು. ಸದರಿ ‘ಧನಂಜಯ ಬಿಲ್ಲು ವಿದ್ಯಾ ತರಬೇತಿ ಕೇಂದ್ರ’ ಅವರದ್ದೇ ಆಗಿತ್ತು. ಅಲ್ಲಿ ನನಗೆ ನಯಾಪೈಸೆ ಶುಲ್ಕವಿಲ್ಲದೆ ತರಬೇತಿಗೆ ದಾಖಲಿಸಿ ಕೊಂಡ ಮಾತೃಹೃದಯಿ ಅವರು. ಅದೇನು ವಿಚಿತ್ರವೋ ವಿಶೇಷವೋ ಗೊತ್ತಿಲ್ಲ. ಸಾಕುತಾಯಿಗೆ ಹೇಳಿ ನನ್ನನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ‘ಅಜ’ರಿಗೆ ನನ್ನಲ್ಲಿ ಅದೇನೋ ಮಮಕಾರ. ಮನೆ ಯಲ್ಲಿ ನನಗೊಂದು ಕೋಣೆ ಕೊಟ್ಟು ಆರೈಕೆಗೆ ಕೊಂಚವೂ ಮುಕ್ಕಾಗದಂತೆ ನೋಡಿ ಕೊಂಡರು. ಊಟ-ತಿಂಡಿಯನ್ನು ನನಗೆ ಕೈಯಾರೆ ಉಣಿಸಿದರೇ ಅವರಿಗೆ ಸಮಾಧಾನ ವಾಗುತ್ತಿದ್ದುದು. ಆಗೆ ನನಗೆ, ‘ದೇವರು ಒಂದು ಕೈಯಲ್ಲಿ ಕಸಿದರೂ, ಇನ್ನೊಂದು ಕೈಯಲ್ಲಿ ಕೊಡುತ್ತಾನಂತೆ’ ಎಂಬ ಮಾತು ನೆನಪಾಗಿ ಕಣ್ತುಂಬಿ ಬರುತ್ತಿತ್ತು. ಅಪ್ಪ-ಅಮ್ಮನಿಲ್ಲದ ಅನಾಥ ಪ್ರಜ್ಞೆ-ತಬ್ಬಲಿತನ ನನ್ನಿಂದ ದೂರವಾಗತೊಡಗಿತು. ‘ಅಜ’ರಿಗೆ ನಿಜಾರ್ಥದ ಮಗನೇ, ಆತ್ಮಬಂಧುವೇ ಆಗಿ ಬಿಟ್ಟೆ. ಗುಂಡುಗುಂಡಗೆ ಗುಜ್ಜಾನೆ ಮರಿಯಂತಿದ್ದ ನನ್ನನ್ನು ಅವರು ಪ್ರೀತಿ ಯಿಂದ ‘ಗಜ’ ಎನ್ನುತ್ತಿದ್ದರು, ನಾನೂ ಅವರನ್ನು ‘ಅಜ’ ಎಂದೇ ಕರೆಯುತ್ತಿದ್ದೆ. ಹಾಗೆಂದರೆ ‘ಮೇಕೆ’ ಎಂಬುದು ಗೊತ್ತಿದ್ದರೂ ಅದಕ್ಕೆ ಅವರ ಆಕ್ಷೇಪವಿರಲಿಲ್ಲ! ಪ್ರಾಯಶಃ ನನ್ನೆಡೆಗೆ ಬೆಳೆದುಕೊಂಡಿದ್ದ ‘ಪುತ್ರವಾತ್ಸಲ್ಯ’ ಇದಕ್ಕೆ ಕಾರಣವಾಗಿದ್ದಿರಬೇಕು. ಮುಂಜಾನೆ 4 ಗಂಟೆಗೆಲ್ಲ ಈ ‘ಗಜ’ವನ್ನು ‘ಅಜ’ ಎಬ್ಬಿಸಿಬಿಡುತ್ತಿತ್ತು! ನಿತ್ಯಕರ್ಮಗಳು ಮುಗಿದ ನಂತರ ಒಂದಷ್ಟು ಹೊತ್ತು ಧ್ಯಾನ, ನಂತರ ತೋಟದ ಮನೆಯ ಸುತ್ತ ಮೈಪೂರ್ತಿ ಒದ್ದೆಯಾಗುವಷ್ಟರ ಮಟ್ಟಿಗಿನ ಬಿರುಸು ನಡಿಗೆ. ನಂತರ ಮನೆಗೆ ಮರಳಿ ತಣ್ಣೀರು ಸ್ನಾನ, ತರುವಾಯ ಬಿಸಿಬಿಸಿ ರಾಗಿ ಗಂಜಿಯ ಸಮಾರಾಧನೆ! ಆಮೇಲೆ, ಅಂದಿನ ಪತ್ರಿಕೆಗಳ ಸುದ್ದಿಗಳನ್ನು ನಾನು ಓದಿ ಹೇಳುತ್ತಿರಬೇಕು, ಅದನ್ನು ಕೇಳಿಸಿಕೊಂಡೇ ಅವರು ರೊಟ್ಟಿಯನ್ನೋ ಉಪ್ಪಿಟ್ಟನ್ನೋ ಮಾಡುತ್ತಿರಬೇಕು. ನಂತರ ಇಬ್ಬರೂ ಲಕ್ಷಣವಾಗಿ ತಟ್ಟೆ ತುಂಬ ತಿಂಡಿ ಕತ್ತರಿಸಬೇಕು- ಇದು ನಮ್ಮ ಮುಂಜಾನೆ ದಿನಚರಿ. ನಂತರ ‘ಅಜ’ ಬೈಕಿನಲ್ಲಿ ಕೂರಿಸಿಕೊಂಡು ತರಬೇತಿ ಕೇಂದ್ರಕ್ಕೆ ಕರೆತರುತ್ತಿದ್ದರು. ನಾವಿಬ್ಬರೂ ಬಂದಿಳಿಯುತ್ತಿದ್ದಂತೆ, ‘ಅಜ-ಗಜಗಳು ಬಂದ್ವಪ್ಪಾ...’ ಅಂತ ಸಹಪಾಠಿಗಳು ರೇಗಿಸುತ್ತಿದ್ದರು. ಅದಕ್ಕೆ ‘ಅಜ’ ಆಕ್ಷೇಪಿಸುತ್ತಿರಲಿಲ್ಲ. ಕಾರಣ, ಅವಿಧೇಯತೆ-ಅಶಿಸ್ತಿಗೆ ಆ ಮಿಲಿಟರಿ ಮಾವ ಕೆರಳುತ್ತಿದ್ದರೇ ವಿನಾ, ಮಕ್ಕಳ ಬಾಲಸಹಜ ತುಂಟತನ-ಚೇಷ್ಟೆಗೆ ಬ್ರೇಕ್ ಹಾಕುತ್ತಿರಲಿಲ್ಲ. ಹೀಗಾಗಿ ಸಹಪಾಠಿಗಳಲ್ಲಿ ‘ಅಜ’ರೆಂದರೆ ಭಯ-ಭಕ್ತಿಯೂ ಇತ್ತು, ಅಸೀಮ ಪ್ರೀತಿಯೂ ಇತ್ತು...

“ಆದರೆ, ನನ್ನ ಕೆಲ ಸಹಪಾಠಿಗಳ ಗುರಿಕೌಶಲದ ವಿಷಯದಲ್ಲಿ ‘ಅಜ’ರಿಗೆ ಅಷ್ಟೇನೂ ಸಮಾಧಾನ ವಿರಲಿಲ್ಲ. ಕಾರಣ ಅವರೆಲ್ಲರೂ ಚಿನ್ನದ ಚಮಚದಲ್ಲಿ ಉಣ್ಣುವ, ತರಬೇತಿ ಕೇಂದ್ರಕ್ಕೆ ಕಾರುಗಳ ಬಂದಿಳಿಯುವ ಆಸಾಮಿಗಳಾಗಿದ್ದರೇ ವಿನಾ, ಬಿಲ್ಲು ವಿದ್ಯೆಯ ಅಭ್ಯಾಸಿಗಳಿಗೆ ಅಗತ್ಯ ವಾಗುವ ವೈಶಿಷ್ಟ್ಯಗಳು ಅವರಲ್ಲಿರಲಿಲ್ಲ. ಅಂದರೆ, ಬಿಲ್ಲು ಹಿಡಿದು ನಿಲ್ಲುವಾಗ ನೆಲಕ್ಕೆ ಒತ್ತಿ ಹಿಡಿಯಬೇಕಾದ ಹೆಜ್ಜೆಯ ದೃಢತೆ-ಸ್ಥಿರತೆ, ಬಿಲ್ಲನ್ನು ಹಿಡಿದಿರುವ ಕೈಯಲ್ಲಿ ನಡುಕವಿಲ್ಲದಿರುವಿಕೆ, ಬಾಣಹೂಡಿ ಹೆದೆಯ ದಾರವನ್ನು ಹಿಂದಕ್ಕೆಳೆಯುವಾಗ ಬಾಹುವಿನಲ್ಲಿರಬೇಕಾದ ದಾರ್ಢ್ಯತೆ, ಉಸಿರಾಟದಲ್ಲಿನ ಲಯ, ಮನದಲ್ಲಿರಬೇಕಾದ ತಾಳ್ಮೆ ಮತ್ತು ಕಂಗಳಲ್ಲಿ ಇರಬೇಕಾದ ಏಕಾಗ್ರತೆ ಇತ್ಯಾದಿಗಳು ಅವರಲ್ಲಿ ಇರಲಿಲ್ಲ. ಅಥವಾ, ಇದ್ದರೂ ಹೊಮ್ಮಿಸಬೇಕಾದ ‘ದರ್ದು’ ಇರಲಿಲ್ಲ. ಒಂಥರಾ ‘ಟೈಂಪಾಸ್’ಗೆಂದು ಅಲ್ಲಿಗೆ ಬರುತ್ತಿದ್ದರು. ಈ ನ್ಯೂನತೆಯ ಕುರಿತು ‘ಅಜ’ರು ಒಂದೊಮ್ಮೆ ಅವರ ಪೋಷಕರಲ್ಲಿ ತೋಡಿಕೊಂಡರೆ, ‘ಮೇಷ್ಟ್ರೇ, ನಿಮಗೆ ಕೊಡಬೇಕಾದ ಫೀಸು ಕೊಟ್ಟಿದ್ದೇವೆ, ನಿಮಗ್ಯಾಕೆ ಅವೆ... ಸುಮ್ನೇ ಏನೋ ಒಂದು ಹೇಳಿಕೊಡಿ. ಮನೆಯಲ್ಲಿ ಇವರ ಕಾಟ ತಪ್ಪಿಸಿ ಕೊಳೋಕೆ ಇಲ್ಲಿಗೆ ತಂದು ಸೇರಿಸಿದ್ದೀವಿ. ಇಂದ್ರೆ ನಮ್ ಮಕ್ಕಳಿಗೆ ಮಾಡೋಕ್ಕೇನೂ ಕೆಲಸವಿಲ್ವಾ?’ ಎಂಬ ಉತ್ತರ ಬರುತ್ತಿತ್ತಂತೆ. ಹೀಗಾಗಿ, ಅದಾವುದೋ ಉದಾತ್ತ ಉದ್ದೇಶ ಇಟ್ಟುಕೊಂಡಿದ್ದ ‘ಅಜ’ರು ಕೊಂಚ ಹತಾಶರಾಗಿದ್ದರಂತೆ. ಅವರ ಕಂಗಳಲ್ಲಿ ಮತ್ತೆ ಬೆಳಕು ಮೂಡಿದ್ದು ನಾನಂದು ಮಕ್ಕಳಿಗಾಗಿ ಮಾವಿನಕಾಯಿ ಗೊಂಚಲನ್ನು ಕಟಿನಿಂದ ಉದುರಿಸಿಕೊಟ್ಟಿದ್ದನ್ನು ಕಂಡಾಗಲೇ....
“ಆದರೆ, ಸಹಪಾಠಿಗಳ ಪೈಕಿ ಬಿಲ್ಲು ವಿದ್ಯೆಯಲ್ಲಿ ಆಸಕ್ತಿ ಇದ್ದವನು ಕಿರೀಟಿ. ನಗರದ ಉದ್ಯಮಿ ಯೊಬ್ಬರ ಮಗನಾದ ಈತ ‘ಅಜ’ರ ಮೆಚ್ಚಿನ ಶಿಷ್ಯನಾಗಿದ್ದ. ಆದರೆ ನಾನು ‘ಅಜ’ರ ತೆಕ್ಕೆಗೆ ಬಂದ ನಂತರ, ನನ್ನೆಡೆಗೆ ಅವರ ಪ್ರೀತಿ ಒಂದು ಗುಕ್ಕು ಜಾಸ್ತಿಯೇ ಇದ್ದುದು ನೋಡಿ ಕಿರೀಟಿ ನನ್ನನ್ನು ದ್ವೇಷಿಸುತ್ತಿದ್ದ. ‘ಅಜ’ರೇನೂ ಕಾರಣವಿಲ್ಲದೆ ನನ್ನಲ್ಲಿ ಅಂಥದೊಂದು ಪ್ರೀತಿ ತೋರುತ್ತಿರಲಿಲ್ಲ; ನನಗೆ ಜನ್ಮಜಾತವಾಗಿ ಬಂದಿದ್ದ ಗುರಿಕೌಶಲದ ಜತೆಗೆ ಈಗಿನ ಶಾಸ್ತ್ರೋಕ್ತ ಪಾಠವೂ ಸೇರಿಕೊಂಡು ಮತ್ತಷ್ಟು ಹೊಳಪು ದಕ್ಕಿದರೆ, ತಮ್ಮ ಕನಸು ಸಾಕಾರವಾಗುತ್ತದೆ ಎಂದು ‘ಅಜ’ ಲೆಕ್ಕಿಸಿದ್ದರು. ಹೀಗಾಗಿ ನನ್ನ ಮೇಲೆ ಅವರ ಗಮನ ಮತ್ತು ಪ್ರೀತಿ ಹೆಚ್ಚೇ ಇತ್ತು. ಇದಕ್ಕೆ ಇನ್ನೊಂದು ಕಾರಣವೂ ಇತ್ತು. ಕಿರೀಟಿಗೆ ಸದರಿ ಬಿಲ್ಲು ವಿದ್ಯೆಯನ್ನೇ ನೆಚ್ಚಿಕೊಳ್ಳುವ ಅನಿವಾರ್ಯತೆಯೇನೂ ಇರಲಿಲ್ಲ. ಸಾಂಪ್ರದಾಯಿಕ ಶಿಕ್ಷಣಕ್ರಮದಲ್ಲೂ ಪ್ರತಿಭಾವಂತನೇ ಆಗಿದ್ದ ಆತ ಎಂಜಿನಿಯರ್ ಆಗುವ ಗುರಿಯಿಟ್ಟುಕೊಂಡಿದ್ದ, ಸದರಿ ಬಿಲ್ಲು ವಿದ್ಯೆಯು ಅವನ ಪಾಲಿಗೆ ‘ಹತ್ತರ ಜತೆಗೆ ಹನ್ನೊಂದು’ ಎನ್ನುವಂಥ ಆದ್ಯತೆಯನ್ನು ಪಡೆದಿತ್ತು, ಒಂದು ಅಮುಖ್ಯ ‘ಪಠ್ಯೇತರ ಚಟುವಟಿಕೆ’ ಆಗಿತ್ತು, ಅಷ್ಟೇ. ಇಷ್ಟಾಗಿಯೂ, ರಾಷ್ಟ್ರೀಯ ಕ್ರೀಡಾಕೂಟದ ಜ್ಯೂನಿಯರ್ ವಿಭಾಗಕ್ಕೆಂದು ತಾವು ತಯಾರು ಮಾಡುತ್ತಿದ್ದ ಗುರಿಕಾರರ ಪಟ್ಟಿಯಲ್ಲಿ ನಮ್ಮಿಬ್ಬರ ಹೆಸರನ್ನು ಮೊದಲಲ್ಲಿ ಸೇರಿಸಿಕೊಂಡಿದ್ದರು ‘ಅಜ’. ಕ್ರೀಡಾಕೂಟಕ್ಕೆ ಇನ್ನೊಂದು ತಿಂಗಳು ಬಾಕಿಯಿತ್ತು, ಹೀಗಾಗಿ ತರಬೇತಿ ರಭಸದಿಂದಲೇ ಸಾಗುತ್ತಿತ್ತು. ಆದರೆ ಅದೇನು ವಿಧಿಯಾಟವೋ ಗೊತ್ತಿಲ್ಲ, ‘ಅಜ’ರಿಗೆ ಹೃದಯಾಘಾತವಾಗಿ ತೀರಿಕೊಂಡುಬಿಟ್ಟರು. ನಾನು ಮತ್ತೊಮ್ಮೆ ಅನಾಥನಾದೆ. ನಾನೇ ಅವರ ಅಂತ್ಯಸಂಸ್ಕಾರ ನಡೆಸ ಬೇಕಾಯಿತು, ಕಾರಣ ‘ಅಜ’ರಿಗೆ ಬಂಧುಗಳಿರಲಿಲ್ಲ. ಅಂತ್ಯಸಂಸ್ಕಾರದ ಕರ್ಮಗಳನ್ನು ನಡೆಸುವಾಗ ಮೃತರ ಹೆಸರನ್ನು ಪುರೋಹಿತರು ‘ಅಶ್ವತ್ಥಾಮಜನಕ’ ಎಂದು ಉಚ್ಚರಿಸಿದಾಗ ನಾನು ಅವರನ್ನು ಅಚ್ಚರಿಯಿಂದ ನೋಡಿದೆ. ಆಗ ಪುರೋಹಿತರು, ‘ಹೌದು ಕಣಪ್ಪಾ, ಅದೇ ಅವರ ಹೆಸರು. ಕೇಳೋ ದಿಕ್ಕೆ ವಿಚಿತ್ರವಾಗಿದೆ ಎಂಬ ಕಾರಣಕ್ಕೋ, ಮಿಕ್ಕವರು ಉಚ್ಚರಿಸೋಕ್ಕೆ ಉದ್ದವಾಗಿದೆ ಎಂಬ ಕಾರಣಕ್ಕೋ ಅದನ್ನು ಅವರು ‘ಅಜ’ ಎಂದೇ ತುಂಡಾಗಿಸಿಕೊಂಡಿದ್ದರು’ ಎಂದರು. ‘ಅಜ’ರ ಕ್ರಿಯಾಶೀಲತೆ, ಕಿಲಾಡಿತನ ನೆನಪಾಗಿ ಆ ನೋವಿನಲ್ಲೂ ತೆಳುನಗು ಬಂತು. ಆದರೆ ‘ಅಜ’ರು ಮಾತ್ರ ನಗಲಿಲ್ಲ. ಅಂತ್ಯಸಂಸ್ಕಾರ ಮುಗಿದ ನಂತರ, ನನಗೆ ದಿಕ್ಕೇ ತೋಚದಂತಾಗಿತ್ತು. ಕಾರಣ, ನನಗೆ ನೆಲೆ, ಊಟ, ಬಟ್ಟೆ ಎಲ್ಲ ಸಿಕ್ಕಿದ್ದು ‘ಅಜ’ರ ಅಕ್ಷಯಪಾತ್ರೆಯಿಂದಲೇ. ಭಗವಂತ ಅದನ್ನೂ ಕಸಿದಿದ್ದ. ‘ಸಾವಿನ ಮನೆಯಲ್ಲಿ ಹಸಿವೆ ಜಾಸ್ತಿ’ ಎಂಬ ಮಾತು ಕೇಳಿದ್ದೆ, ಅದೀಗ ನಿಜವೆನಿಸಿತು. ಆದರೆ ಆಹಾರ ಉಣಿಸುತ್ತಿದ್ದ ‘ಅಜ’ರೇ ಇಲ್ಲವಾದ ಮೇಲಂತೂ ರಣಹಸಿವು ನನ್ನನ್ನು ಕಾಡತೊಡಗಿತು. ಇನ್ನೇನೂ ವಿಧಿಯಲ್ಲ, ಸಾಕುತಾಯಿಯ ಬಳಿಗೆ ಮರಳೋಣ ಎಂದುಕೊಂಡು ನನ್ನಲ್ಲಿದ್ದ ಕೆಲವೇ ಬಟ್ಟೆ ಮತ್ತಿತರ ವಸ್ತುಗಳನ್ನು ಟ್ರಂಕಿನಲ್ಲಿ ತುಂಬಿಕೊಂಡೆ. ಜತೆಗೆ, ಗೋಡೆಯಲ್ಲಿ ನೇತಾಡುತ್ತಿದ್ದ ‘ಅಜ’ರ ಚಿತ್ರಪಟವೂ ಸೇರಿಕೊಂಡಿತು. ಮನೆಯ ಹೊಸ್ತಿಲಿಗೊಮ್ಮೆ ನಮಸ್ಕರಿಸಿ ಅಲ್ಲಿಂದ ಹೊರಟು ಗೇಟಿನವರೆಗೆ ಬಂದೆ, ಅಲ್ಲಿಂದಲೇ ಮನೆಯನ್ನು ಇನ್ನೊಮ್ಮೆ ಕಣ್ತುಂಬಿಕೊಂಡೆ. ಅಷ್ಟರಲ್ಲಿ ನನ್ನ ಭುಜದ ಮೇಲೆ ‘ಧಪ್’ ಎಂದು ಸದ್ದು ಕೇಳಿಸಿತು. ತಿರುಗಿ ನೋಡಿದರೆ ಫಾರ್ಮ್ ಹೌಸ್‌ನ ಕಾವಲುಗಾರ ರಾಜಣ್ಣ... ಜತೆಗೆ ಓರ್ವ ಮಧ್ಯ ವಯಸ್ಕ ಹೆಂಗಸು. ಆಕೆ ಮತ್ತಾರೂ ಅಲ್ಲ.... ನನ್ನ ಸಹಪಾಠಿ ಕಿರೀಟಿಯ ತಾಯಿ ‘ಪೃಥೆ’....!
(ಮುಂದುವರಿಯುವುದು)