ಒಂದೊಳ್ಳೆ ಮಾತು
‘ಕಥಾಸರಿತ್ಸಾಗರ’ದ ಲಾವಾಣಕ ಲಂಬಕದಲ್ಲಿ ಬರುವ ವತ್ಸರಾಜ ಉದಯನ, ಆತನ ಪತ್ನಿ ವಾಸವದತ್ತೆ ಹಾಗೂ ಮಹಾಮಂತ್ರಿ ಯೌಗಂಧರಾಯಣನ ಕಥೆಯು ನಿಸ್ವಾರ್ಥ ಸ್ವಾಮಿನಿಷ್ಠೆ ಮತ್ತು ತ್ಯಾಗದ ಅಪರೂಪದ ಕಥೆ. ಕೌಶಾಂಬಿಯ ಅಧಿಪತಿ ಉದಯನ ಮಹಾರಾಜನು ಉಜ್ಜಯಿನಿಯ ರಾಜಕುಮಾರಿ ವಾಸವದತ್ತೆಯನ್ನು ಅಪಾರವಾಗಿ ಪ್ರೀತಿಸಿ ವಿವಾಹ ವಾಗಿದ್ದನು. ಆದರೆ ಆಕೆಯ ಸೌಂದರ್ಯ ಮತ್ತು ಪ್ರೇಮದ ಅಮಲಿನಲ್ಲಿ ಮುಳುಗಿಹೋದ ರಾಜನು, ಕ್ರಮೇಣ ತನ್ನ ರಾಜಧರ್ಮ, ಸೈನ್ಯ ಮತ್ತು ಪ್ರಜೆಗಳ ಯೋಗಕ್ಷೇಮವನ್ನು ಸಂಪೂರ್ಣ ವಾಗಿ ಮರೆತುಬಿಟ್ಟನು.
ಇದೇ ಸಂದರ್ಭವನ್ನು ಹೊಂಚು ಹಾಕಿ ಕಾಯುತ್ತಿದ್ದ ನೆರೆಯ ಶತ್ರುರಾಜ ಆರೂಣಿಯು ವತ್ಸ ಸಾಮ್ರಾಜ್ಯದ ಗಡಿಗಳನ್ನು ಆಕ್ರಮಿಸಿಕೊಂಡನು. ರಾಜ್ಯವನ್ನು ಶತ್ರುಗಳ ಕಪಿಮುಷ್ಠಿಯಿಂದ ರಕ್ಷಿಸಬೇಕಾದರೆ, ಪ್ರಬಲ ಮಗಧ ಸಾಮ್ರಾಜ್ಯದ ಸ್ನೇಹ ಮತ್ತು ಅಲ್ಲಿನ ರಾಜ ಕುಮಾರಿ ಪದ್ಮಾವತಿಯೊಂದಿಗೆ ಉದಯನನ ವಿವಾಹವಾಗುವುದು ಅತ್ಯಂತ ಅನಿವಾರ್ಯವಾಗಿತ್ತು. ಆದರೆ ಉದಯನನಿಗೆ ವಾಸವದತ್ತೆಯ ಹೊರತು ಮತ್ತಿನ್ನಾವ ಸ್ತ್ರೀಯನ್ನೂ ನೋಡುವ ಮನಸ್ಸಿರಲಿಲ್ಲ.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 23: ರಾಜ ವಿಕ್ರಮನಿಗೆ ಗೆಲುವು ಮತ್ತು ಅಂತಿಮ ಮುಕ್ತಿ
ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಚತುರ ಮತ್ತು ನಿಷ್ಠಾವಂತ ಮಂತ್ರಿ ಯೌಗಂಧರಾಯಣನು, ರಾಜ್ಯವನ್ನು ಉಳಿಸಲು ಒಂದು ಕಠಿಣ ಮತ್ತು ಕರುಳುಹಿಂಡುವ ತಂತ್ರವನ್ನು ರೂಪಿಸಿದನು. ಆತ ನೇರವಾಗಿ ರಾಣಿ ವಾಸವದತ್ತೆಯ ಬಳಿಗೇ ತೆರಳಿ, ಅಮ್ಮಾ, ರಾಜನ ಪ್ರಾಣ ಮತ್ತು ವತ್ಸ ಸಾಮ್ರಾಜ್ಯದ ಭವಿಷ್ಯ ನಿಮ್ಮ ಕೈಯಲ್ಲಿದೆ. ನೀವು ಮಡಿದಿರೆಂದು ರಾಜ ನಂಬಿದರೆ ಮಾತ್ರ ಆತ ರಾಜ್ಯದ ರಕ್ಷಣೆಗೆ ನಿಲ್ಲುತ್ತಾನೆ ಮತ್ತು ಮಗಧದ ಮೈತ್ರಿಗೆ ಒಪ್ಪುತ್ತಾನೆ ಎಂದು ಕಣ್ಣೀರಿಡುತ್ತಾ ಬೇಡಿದನು. ಪತಿಯ ಕೀರ್ತಿ ಮತ್ತು ಪ್ರಜೆಗಳ ಕ್ಷೇಮಕ್ಕಾಗಿ ವಾಸವ ದತ್ತೆಯು ತನ್ನ ವೈಯಕ್ತಿಕ ಸುಖವನ್ನಷ್ಟೇ ಅಲ್ಲ, ತನ್ನ ಅಸ್ತಿತ್ವವನ್ನೇ ತ್ಯಜಿಸಲು ಸಿದ್ಧಳಾದಳು!
ಯೋಜನೆಯಂತೆ, ರಾಜನು ಬೇಟೆಗೆಂದು ತೆರಳಿದಾಗ ಲಾವಾಣಕ ಗ್ರಾಮದ ಅರಮನೆಗೆ ಬೆಂಕಿ ಹಚ್ಚಲಾಯಿತು. ರಾಣಿ ವಾಸವದತ್ತೆ ಮತ್ತು ಮಂತ್ರಿ ಯೌಗಂಧರಾಯಣ ಇಬ್ಬರೂ ಬೆಂಕಿ ಯಲ್ಲಿ ಸುಟ್ಟು ಭಸ್ಮವಾದರು ಎಂಬ ಸುದ್ದಿ ಕಾಳ್ಗಿಚ್ಚಿ ನಂತೆ ಹರಡಿತು. ಉದಯನನು ಶೋಕಸಾಗರದಲ್ಲಿ ಮುಳುಗಿ ತತ್ತರಿಸಿಹೋದನು. ಆದರೆ ಇತ್ತ ಬದುಕಿದ್ದ ವಾಸವದತ್ತೆಯು ತನ್ನ ಹೆಸರನ್ನು ‘ಆವಂತಿಕಾ’ ಎಂದು ಬದಲಿಸಿಕೊಂಡು, ಮಾರು ವೇಷದಲ್ಲಿ ಸಾಮಾನ್ಯ ಸೇವಕಿಯಂತೆ ಮಗಧದ ರಾಜಕುಮಾರಿ ಪದ್ಮಾವತಿಯ ಆಸ್ಥಾನದಲ್ಲಿ ಆಶ್ರಯ ಪಡೆದಳು!
ಯೌಗಂಧರಾಯಣನೂ ವೇಷ ಬದಲಿಸಿ ಆಕೆಯನ್ನು ರಕ್ಷಿಸುತ್ತಾ ರಾಜ ಕಾರ್ಯದಲ್ಲಿ ನಿರತ ನಾದನು. ತನ್ನ ಪತಿಯ ಕಣ್ಣೆದುರೇ ಪರಸ್ತ್ರೀಯಾಗಿ ತಿರುಗಾಡುತ್ತಾ, ಪದ್ಮಾವತಿಯ ಕೈ ಹಿಡಿಯುವ ಪತಿಯ ಮದುವೆಯ ಹಾರವನ್ನು ತನ್ನ ಕೈಯಾರೆ ತಾನೇ ಪೋಣಿಸುವಂತಹ ಅಗ್ನಿಪರೀಕ್ಷೆಯನ್ನು ವಾಸವದತ್ತೆ ನಗುನಗುತ್ತಲೇ ಸಹಿಸಿಕೊಂಡಳು. ಕೊನೆಗೆ ಮಗಧದ ಸೈನ್ಯಬಲದಿಂದ ಶತ್ರು ಗಳೆಲ್ಲ ನಾಶವಾಗಿ, ವತ್ಸ ಸಾಮ್ರಾಜ್ಯವು ಸಂಪೂರ್ಣವಾಗಿ ಮರಳಿ ದಕ್ಕಿದಾಗ, ಮಂತ್ರಿ ಯೌಗಂಧರಾಯಣನು ವಾಸವದತ್ತೆಯನ್ನು ರಾಜನ ಮುಂದೆ ನಿಲ್ಲಿಸಿ ಸತ್ಯವನ್ನು ಬಹಿರಂಗ ಪಡಿಸಿದನು.
ತನ್ನ ಸಾಮ್ರಾಜ್ಯದ ಉಳಿವಿಗಾಗಿ ಮಂತ್ರಿ ಮತ್ತು ಪತ್ನಿ ಇಬ್ಬರೂ ಪಟ್ಟ ಅಪಾರ ಕಷ್ಟ ಹಾಗೂ ನಿಸ್ವಾರ್ಥ ತ್ಯಾಗವನ್ನು ಕಂಡು ಉದಯ ನನ ಕಣ್ಣುಗಳಿಂದ ಧನ್ಯತೆಯ ಆನಂದಭಾಷ್ಪ ಹರಿಯಿತು. ಬದುಕಿನಲ್ಲಿ ಅಧಿಕಾರ, ಪ್ರೀತಿ ಅಥವಾ ವೈಯಕ್ತಿಕ ಸುಖಗಳಿಗೆ ಅತಿಯಾಗಿ ಕಟ್ಟುಬಿದ್ದಾಗ ನಾವು ನಮ್ಮ ಜವಾಬ್ದಾರಿಯನ್ನೇ ಮರೆತುಬಿಡುತ್ತೇವೆ. ಆದರೆ ಅಂತಹ ಸಂದರ್ಭ ದಲ್ಲಿ ನಮ್ಮನ್ನು ಎಚ್ಚರಿಸಿ, ಒಳಿತಿನ ದಾರಿಗೆ ತರುವ ನಿಷ್ಠಾವಂತ ಹಿತೈಷಿಗಳು ಮತ್ತು ಸ್ನೇಹಿತರ ಒಡನಾಟ ನಮಗಿರಬೇಕು.
ನಮ್ಮ ಆಪ್ತರು ಮತ್ತೆ ಮತ್ತೆ ನಮ್ಮನ್ನು ಎಚ್ಚರಿಸುತ್ತಿದ್ದಾರೆ ಎಂದರೆ ನಾವು ತಪ್ಪು ಹೆಜ್ಜೆ ಇಡುತ್ತಿದ್ದೇವೆ ಅಲ್ಲಿ ಏನು ಸರಿಯಾಗಿಲ್ಲ ಎಂದು ಖಂಡಿತ ವಿಮರ್ಶಿಸಬೇಕು. ಕೆಲವೊಮ್ಮೆ ಅತಿಯಾದ ಸ್ನೇಹ, ಮೋಹ ನಾವು ಪರಿಸ್ಥಿತಿ ಯನ್ನು ಇದ್ದ ಹಾಗೆ ನೋಡಲು ಅವಕಾಶ ಮಾಡಿ ಕೊಡುವುದಿಲ್ಲ. ಅಂತಹ ಸಮಯದಲ್ಲಿ ನಿಷ್ಪಕ್ಷಪಾತವಾಗಿ ನಮ್ಮನ್ನು ಎಚ್ಚರಿಸುವ ಒಬ್ಬರು ನಮ್ಮ ಜೊತೆಗಿದ್ದರೂ ಕೂಡ ಅವರು ಬಹಳ ವಿಶಿಷ್ಟರಾಗುತ್ತಾರೆ.
ಅಷ್ಟೇ ಅಲ್ಲ ಕೆಲವು ಆಪ್ತರು ನಮಗಾಗಿ ನಮ್ಮ ಒಳಿತಿಗಾಗಿ ಏನು ತ್ಯಾಗ ಮಾಡಲು ಸಿದ್ಧರಾಗಿ ನಿಲ್ಲುತ್ತಾರೆ. ಅಂತಹವರನ್ನು ಜೀವನದಲ್ಲಿ ಎಂದೂ ಕಳೆದುಕೊಳ್ಳಬಾರದು. ಅಂತಹ ಜೀವಗಳೇ ನಾವು ಜೀವನದಲ್ಲಿ ಗಳಿಸಿ ಕೊಂಡ ನಿಜವಾದ ಆಸ್ತಿ.