ಗಾಂಧಿ ಸ್ಮರಣೆ
ಸಿದ್ದಣ್ಣ ಸಿ, ವಾಡೇದ
ಒಬ್ಬ ವ್ಯಕ್ತಿ ತನ್ನ ಬದುಕನ್ನೇ ತನ್ನ ತತ್ವದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡರೆ ಅವರ ಚಿಂತನೆಗೆ ವಿಶೇಷ ತೂಕ. ಮೋಹನದಾಸ ಕರಮಚಂದ ಗಾಂಧೀಜಿ ಅಂಥವರಲ್ಲಿ ಒಬ್ಬರು. ಅವರು ಗ್ರಂಥಗಳಲ್ಲಿ ಕುಳಿತು ಸಿದ್ಧಾಂತ ಹೆಣೆದ ತತ್ವeನಿಯಲ್ಲ. ಬದುಕಿನ ಪ್ರತಿ ಹೆಜ್ಜೆಯಲ್ಲೂ ತಾವು ನಂಬಿದ್ದನ್ನು ಪರೀಕ್ಷಿಸಿ, ತಪ್ಪಿದಾಗ ತಿದ್ದಿಕೊಂಡು, ಸರಿಯೆನಿಸಿದ್ದನ್ನು ಜಗತ್ತಿಗೆ ತೋರಿಸಿದಂತವರು. ತಮ್ಮ ಆತ್ಮಕಥೆಗೆ ಅವರು ಸತ್ಯದ ಪ್ರಯೋಗಗಳು ಎಂದು ಹೆಸರಿಟ್ಟಿದ್ದೇ ಇದಕ್ಕೆ ಸಾಕ್ಷಿ. ನನ್ನ ಜೀವನವೇ ನನ್ನ ಸಂದೇಶ ಎಂಬ ಅವರ ಮಾತು ಕೇವಲ ಘೋಷಣೆಯಾಗಿರಲಿಲ್ಲ.
ಗಾಂಧಿತತ್ವದ ಮೂಲಗಳು: ಗಾಂಧೀಜಿಯ ಚಿಂತನೆ ಶೂನ್ಯದಿಂದ ಹುಟ್ಟಿದ್ದಲ್ಲ. ಅವರು ಬಾಲ್ಯದ ಅಹಿಂಸೆ, ಉಪವಾಸ, ಸರಳತೆಯ ಸಂಸ್ಕಾರ ಪಡೆದವರು. ತಾಯಿ ಪುತಲೀಬಾಯಿಯ ವ್ರತನಿಷ್ಠೆ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಶ್ರೀಮದ್ ರಾಜಚಂದ್ರ ಆಧ್ಯಾತ್ಮಿಕ ಮಾರ್ಗದರ್ಶನ, ಭಗವದ್ಗೀತೆಯ ನಿರಂತರ ಅಧ್ಯಯನ, ಟಾಲ್‌ಸ್ಟಾಯ್ ರ ದೇವರ ರಾಜ್ಯ ನಿಮ್ಮೊಳಗಿದೆ, ರಸ್ಕಿನ್‌ರ ಅನ್‌ಟು ದಿಸ್ ಲಾ ಮತ್ತು ಥೋರೋರ ನಾಗರಿಕ ಅಸಹಕಾರದ ಪರಿಕಲ್ಪನೆ ಇವೆಲ್ಲವೂ ಅವರ ಚಿಂತನೆಯನ್ನು ರೂಪಿಸಿದ್ದವು. ಆದರೆ ಅವರು ಇವನ್ನು ಯಥಾವತ್ತಾಗಿ ಸ್ವೀಕರಿಸಲಿಲ್ಲ. ತಮ್ಮ ಅನುಭವದ ಒರೆಗಲ್ಲಿಗೆ ಹಚ್ಚಿ, ಭಾರತದ ಮಣ್ಣಿಗೆ ಹೊಂದುವಂತೆ ಹೊಸ ರೂಪ ಕೊಟ್ಟವರು.
ದಕ್ಷಿಣ ಆಫ್ರಿಕಾದಲ್ಲಿ ಅವರು ಕಳೆದ ಇಪ್ಪತ್ತೊಂದು ವರ್ಷಗಳು ಅವರ ತತ್ವ ಪಕ್ವವಾದ ಕಾಲವದು. ಅಲ್ಲಿನ ವರ್ಣಭೇದ ನೀತಿಯ ಅವಮಾನ, ಪೀಟರ್ಮ್ಯಾರಿಟ್ಸ್‌ಬರ್ಗ್ ನಿಲ್ದಾಣದಲ್ಲಿ ರೈಲಿನಿಂದ ಹೊರಗೆ ದೂಡಲ್ಪಟ್ಟ ಘಟನೆ ಅವರೊಳಗಿನ ಹೋರಾಟಗಾರನನ್ನು ಎಚ್ಚರಿಸಿತ್ತು.
ಇದನ್ನೂ ಓದಿ: Vishweshwar Bhat Column: ಯಾರು ಕುರ್ದಿಶ್ ಜನ ?
ಸತ್ಯದ ಶಕ್ತಿ: ಗಾಂಧೀಜಿಯ ಸಮಸ್ತ ಚಿಂತನೆಯ ಕೇಂದ್ರ ಸತ್ಯ. ಮೊದಲು ದೇವರೇ ಸತ್ಯ ಎನ್ನುತ್ತಿದ್ದ ಅವರು ಮುಂದೆ ಸತ್ಯವೇ ದೇವರು ಎಂಬ ನಿಲುವಿಗೆ ಬಂದರು. ಈ ಸಣ್ಣ ತಿದ್ದುಪಡಿ ಬಹಳ ಅರ್ಥಪೂರ್ಣ. ದೇವರ ಹೆಸರಿನಲ್ಲಿ ಜನ ಜಗಳವಾಡಬಹುದು, ಆದರೆ ಸತ್ಯವನ್ನು ನಿರಾಕರಿಸು ವವರು ಕಡಿಮೆ. ಹೀಗಾಗಿ ನಾಸ್ತಿಕರೂ ಒಪ್ಪಬಹುದಾದ ನೆಲೆಯೊಂದು ಅವರಿಗೆ ಸಿಕ್ಕಿತು.
ಗಾಂಧೀಜಿಗೆ ಸತ್ಯ ಎಂದರೆ ಮಾತು, ಮನಸ್ಸು, ಕ್ರಿಯೆ ಈ ಮೂರೂ ಒಂದೇ ದಿಕ್ಕಿನಲ್ಲಿರುವುದು. ತಾವು ತಿಳಿದುಕೊಂಡ ಸತ್ಯ ಅಂತಿಮವಲ್ಲ, ಅದು ತಮ್ಮ ಸೀಮಿತ ದೃಷ್ಟಿಯ ಸತ್ಯ ಎಂಬ ವಿನಯವೂ ಅವರಲ್ಲಿತ್ತು. ಅದಕ್ಕಾಗಿಯೇ ತಮ್ಮ ಹಳೆಯ ಹೇಳಿಕೆಗೂ ಹೊಸ ಹೇಳಿಕೆಗೂ ವಿರೋಧ ಕಂಡರೆ, ಹೊಸದನ್ನೇ ನಂಬಬೇಕೆಂದು ಓದುಗರಿಗೆ ಹೇಳುತ್ತಿದ್ದವರು. ಸತ್ಯವನ್ನು ಹುಡುಕುವ ಪಯಣದಲ್ಲಿ ಅಹಂಕಾರಕ್ಕೆ ಜಾಗವಿಲ್ಲ ಎಂಬುದು ಅವರ ನಂಬಿಕೆ.
ಸತ್ಯ ತಲುಪುವ ದಾರಿ ಅಹಿಂಸೆ: ಸತ್ಯ ಗುರಿಯಾದರೆ ಅಹಿಂಸೆ ಅದನ್ನು ತಲುಪುವ ದಾರಿ. ಇವೆರಡನ್ನು ಬೇರ್ಪಡಿಸಲಾಗದು ಎಂದು ಗಾಂಧೀಜಿ ಹೇಳುತ್ತಿದ್ದರು. ಅಹಿಂಸೆ ಎಂದರೆ ಕೊಲ್ಲದಿರು ವುದು ಮಾತ್ರವಲ್ಲ. ಯಾರ ಬಗ್ಗೆಯೂ ದ್ವೇಷ ಇಟ್ಟುಕೊಳ್ಳದಿರುವುದು, ಯಾರಿಗೂ ಮನಸ್ಸಿನಲ್ಲಿ ಕೇಡು ಬಯಸದಿರುವುದು, ವೈರಿಯನ್ನೂ ಪ್ರೀತಿಯಿಂದ ಕಾಣುವುದು. ಅಹಿಂಸೆ ಹೇಡಿಯ ಆಯುಧವಲ್ಲ, ಅದು ಧೀರನ ಬಲ. ಹೇಡಿತನದಿಂದ ಅಹಿಂಸೆ ಪಾಲಿಸುವುದಕ್ಕಿಂತ ಹಿಂಸೆಯಿಂದಾ ದರೂ ಹೋರಾಡುವುದು ಲೇಸು ಎಂದೂ ಹೇಳಿದರು. ಇದರ ಅರ್ಥ ಇಷ್ಟೇ: ಅಹಿಂಸೆಗೆ ಬೇಕಾದ ನೈತಿಕ ಧೈರ್ಯ ಬಂದೂಕಿನ ಧೈರ್ಯಕ್ಕಿಂತ ದೊಡ್ಡದು.
ಸತ್ಯಾಗ್ರಹ: ಸತ್ಯ ಮತ್ತು ಅಹಿಂಸೆ ಹೋರಾಟದ ರೂಪ ಪಡೆದಾಗ ಹುಟ್ಟಿದ್ದು ಸತ್ಯಾಗ್ರಹ. ಸತ್ಯದ ಮೇಲಿನ ಆಗ್ರಹ ಎಂಬುದು ಈ ಪದದ ಅರ್ಥ. ಇದನ್ನು ಅವರು ನಿಷ್ಕ್ರಿಯ ಪ್ರತಿರೋಧ ಎಂದು ಕರೆಯಲು ಒಪ್ಪಲಿಲ್ಲ. ಏಕೆಂದರೆ ಇದು ನಿಷ್ಕ್ರಿಯವಲ್ಲ, ಅತ್ಯಂತ ಸಕ್ರಿಯ ಹೋರಾಟ. ಅನ್ಯಾಯಕ್ಕೆ ಸಹಕರಿಸಲು ನಿರಾಕರಿಸುವುದು, ಅದರಿಂದ ಬರುವ ಶಿಕ್ಷೆಯನ್ನು ನಗುತ್ತಾ ಸ್ವೀಕರಿಸುವುದು, ಆದರೆ ಪ್ರತಿಯಾಗಿ ಹಿಂಸೆ ಮಾಡದಿರುವುದು ಅದರ ಸ್ವರೂಪ. ಇಲ್ಲಿ ಹೋರಾಟಗಾರ ಇತರರ ಮೇಲೆ ಕಷ್ಟ ಹೇರುವುದಿಲ್ಲ, ತಾನೇ ಕಷ್ಟ ಸಹಿಸಿ ಎದುರಾಳಿಯ ಅಂತಃಕರಣವನ್ನು ತಟ್ಟುತ್ತಾನೆ.
ಸ್ವರಾಜ್ಯದ ಪರಿಕಲ್ಪನೆ : ಗಾಂಧೀಜಿಗೆ ಸ್ವರಾಜ್ಯ ಎಂದರೆ ಬ್ರಿಟಿಷರು ಹೋಗಿ ಭಾರತೀಯರು ಅಧಿಕಾರಕ್ಕೆ ಬರುವುದು ಮಾತ್ರವಲ್ಲ. 1909ರಲ್ಲಿ ಬರೆದ ಹಿಂದ್ ಸ್ವರಾಜ ಕೃತಿಯಲ್ಲಿ ಅವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಬ್ರಿಟಿಷರ ವ್ಯವಸ್ಥೆಯನ್ನೇ ಉಳಿಸಿಕೊಂಡು ಬ್ರಿಟಿಷರಿಲ್ಲದೆ ಆಳುವುದು ಅವರ ದೃಷ್ಟಿಯಲ್ಲಿ ಹುಲಿಯ ಸ್ವಭಾವ ಇರಿಸಿಕೊಂಡು ಹುಲಿ ಇಲ್ಲದ ಸ್ಥಿತಿ ಬಯಸಿದಂತೆ. ನಿಜವಾದ ಸ್ವರಾಜ್ಯ ವ್ಯಕ್ತಿಯ ಆತ್ಮಸಂಯಮದಿಂದ ಆರಂಭವಾಗುತ್ತದೆ. ತನ್ನನ್ನು ತಾನು ಆಳಿಕೊಳ್ಳಲಾಗದವನು ಇತರರನ್ನು ಸರಿಯಾಗಿ ಆಳಲಾರ. ಅವರ ಸ್ವರಾಜ್ಯ ಹಲವು ಹಂತಗಳದ್ದು. ವ್ಯಕ್ತಿಯ ಆತ್ಮಶುದ್ಧಿ, ಹಳ್ಳಿಯ ಸ್ವಾವಲಂಬನೆ, ರಾಷ್ಟ್ರದ ರಾಜಕೀಯ ಸ್ವಾತಂತ್ರ್ಯ ಇವು ಒಂದರೊಳ ಗೊಂದು ಹೆಣೆದುಕೊಂಡಿವೆ. ಗ್ರಾಮ ಸ್ವರಾಜ್ಯ ಅವರ ಕನಸಿನ ಕೇಂದ್ರ. ಭಾರತದ ಆತ್ಮ ಹಳ್ಳಿಗಳ ಲ್ಲಿದೆ ಎಂದು ನಂಬಿದ ಅವರು, ಅಧಿಕಾರ ದೆಹಲಿಯಲ್ಲಿ ಕೇಂದ್ರೀಕೃತವಾಗುವ ಬದಲು ಪ್ರತಿ ಹಳ್ಳಿಯೂ ತನ್ನ ಆಹಾರ, ಬಟ್ಟೆ, ಶಿಕ್ಷಣ, ಆಡಳಿತದಲ್ಲಿ ಸ್ವಾವಲಂಬಿಯಾಗಬೇಕು ಎಂದು ಬಯಸಿದರು.
ಸ್ವದೇಶಿ ಮತ್ತು ಚರಕ : ಸ್ವದೇಶಿ ಎಂದರೆ ಸಮೀಪದ ಪರಿಸರ ಮತ್ತು ಸಮಾಜದ ಸೇವೆಗೆ ಆದ್ಯತೆ ನೀಡುವ ಮನೋಭಾವ ಎಂದು ಗಾಂಧೀಜಿ ವಿವರಿಸಿದರು. ಇದು ಸಂಕುಚಿತ ರಾಷ್ಟ್ರವಾದವಲ್ಲ. ತನ್ನ ಸುತ್ತಲಿನ ಜನರ ಜೀವನೋಪಾಯವನ್ನು ಉಳಿಸುವ ನೈತಿಕ ಹೊಣೆ ಅದು. ವಿದೇಶಿ ಬಟ್ಟೆಯ ಬಹಿಷ್ಕಾರ ಮತ್ತು ಖಾದಿಯ ಪ್ರಚಾರ ಈ ತತ್ವದ ಕಾರ್ಯರೂಪ. ಚರಕ ಗಾಂಧೀಜಿಗೆ ಬರೀ ನೂಲುವ ಯಂತ್ರವಲ್ಲ, ಅದೊಂದು ಸಂಕೇತ. ಅದು ಬಡವರಿಗೆ ಕೆಲಸ ಕೊಟ್ಟಿತು, ಶ್ರಮದ ಘನತೆಯನ್ನು ಸಾರಿತು, ಶ್ರೀಮಂತ-ಬಡವರ ನಡುವಿನ ಅಂತರವನ್ನು ತಗ್ಗಿಸಿತು, ಸಾಮ್ರಾಜ್ಯಶಾಹಿ ಆರ್ಥಿಕತೆಯ ವಿರುದ್ಧ ಶಾಂತಿಯುತ ಪ್ರತಿರೋಧವಾಯಿತು. ಪ್ರತಿದಿನ ಸ್ವಲ್ಪ ಹೊತ್ತು ನೂಲುವ ಮೂಲಕ ವಕೀಲ, ವೈದ್ಯ, ವ್ಯಾಪಾರಿ ಎಲ್ಲರೂ ಶ್ರಮಜೀವಿಗಳೊಂದಿಗೆ ಒಂದಾಗಬೇಕು ಎಂದು ಕರೆ ನೀಡಿದರು.
ಗಾಂಧೀಜಿ ಆಳವಾದ ಧಾರ್ಮಿಕ ವ್ಯಕ್ತಿ. ಆದರೆ ಅವರ ಧರ್ಮ ಯಾವ ಗೋಡೆಯೊಳಗೂ ಬಂಧಿಸ ಲ್ಪಟ್ಟಿರಲಿಲ್ಲ. ಎಲ್ಲ ಧರ್ಮಗಳೂ ಒಂದೇ ಸತ್ಯದ ಬೇರೆ ಬೇರೆ ದಾರಿಗಳು, ಯಾವುದೂ ಪರಿಪೂರ್ಣ ವಲ್ಲ, ಯಾವುದೂ ತುಚ್ಛವಲ್ಲ ಎಂದು ಅವರು ನಂಬಿದ್ದರು. ಅವರ ಪ್ರಾರ್ಥನಾ ಸಭೆಗಳಲ್ಲಿ ಗೀತೆ, ಕುರಾನ್, ಬೈಬಲ್, ಬೌದ್ಧ ಮಂತ್ರಗಳು ಒಟ್ಟಿಗೆ ಮೊಳಗುತ್ತಿದ್ದವು. ಈಶ್ವರ ಅ ತೇರೋ ನಾಮ ಎಂಬ ಭಜನೆ ಈ ಸಹಬಾಳ್ವೆಯ ಸಂಕೇತ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ರ ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟದಲ್ಲಿ, ನೆಲ್ಸನ್ ಮಂಡೇಲಾ ವರ್ಣಭೇದ ವಿರೋಧಿ ಹೋರಾಟದಲ್ಲಿ, ಆಂಗ್ ಸಾನ್ ಸೂಕಿ ಮ್ಯಾನ್ಮಾರ್‌ನಲ್ಲಿ, ಪರಿಸರ ಚಳವಳಿಗಾರರು ಜಗತ್ತಿನಾದ್ಯಂತ ಗಾಂಧಿಮಾರ್ಗ ದಿಂದ ಪ್ರೇರಣೆ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಅಹಿಂಸಾ ದಿನವಾಗಿ ಅಕ್ಟೋಬರ್ 2ನ್ನು ವಿಶ್ವಸಂಸ್ಥೆ ಘೋಷಿಸಿದ್ದು ಈ ಜಾಗತಿಕ ಮನ್ನಣೆಗೆ ಸಾಕ್ಷಿ.