ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ರಾಮಾಯಣವು ಶ್ರೀರಾಮನನ್ನು ಆದರ್ಶ ರಾಜ, ಆದರ್ಶ ಪುತ್ರ, ಆದರ್ಶ ಸಹೋ ದರ ಮತ್ತು ಆದರ್ಶ ಪತಿ ಎಂದು ವರ್ಣಿಸುತ್ತದೆ. ಆದರೆ ಭಾರತೀಯ ಜ್ಞಾನ ಪರಂಪರೆಯ ಇನ್ನೊಂದು ಆಳವಾದ ದೃಷ್ಟಿಯಿಂದ ನೋಡಿದರೆ, ಶ್ರೀರಾಮನ ಜೀವನವು ಆಯುರ್ವೇದ ದಲ್ಲಿ ವಿವರಿಸಲ್ಪಟ್ಟ ಸದ್ವೃತ್ತದ ತತ್ತ್ವಗಳ ಜೀವಂತ ಪ್ರತಿರೂಪದಂತೆ ಕಾಣುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಕೆಲವು ಹಬ್ಬಗಳು ಕೇವಲ ಆಚರಣೆಗಳಲ್ಲ; ಅವು ಮಾನವ ಜೀವನದ ಮೌಲ್ಯಗಳನ್ನು ಪುನಃ ನೆನಪಿಸುವ ಆಧ್ಯಾತ್ಮಿಕ ಅವಕಾಶಗಳಾಗಿವೆ. ಅಂಥ ಮಹತ್ವಪೂರ್ಣ ಹಬ್ಬಗಳಲ್ಲಿ ಅತ್ಯಂತ ಪವಿತ್ರವಾದುದು ಶ್ರೀರಾಮ ನವಮಿ. ಈ ದಿನವು ಕೇವಲ ಒಂದು ಪೌರಾಣಿಕ ಸ್ಮರಣೆ ಮಾತ್ರವಲ್ಲ; ಜತೆಗೆ ಧರ್ಮ, ಸತ್ಯ ಮತ್ತು ಆದರ್ಶ ಜೀವನದ ಸಂಕೇತವಾದ ಶ್ರೀರಾಮನ ಅವತಾರದ ಸ್ಮರಣೆಯೂ ಆಗಿದೆ.
ಪ್ರತಿ ವರ್ಷ ಶ್ರೀರಾಮನವಮಿ ಬಂದಾಗ ದೇವಾಲಯಗಳಲ್ಲಿ ರಾಮನಾಮದ ಘೋಷಗಳು ಮೊಳಗುತ್ತವೆ, ಮನೆಮನೆಗಳಲ್ಲಿ ರಾಮಾಯಣ ಪಾರಾಯಣ ನಡೆಯುತ್ತದೆ ಮತ್ತು ಭಕ್ತರ ಮನಸ್ಸಿನಲ್ಲಿ ಒಂದು ಪ್ರಶ್ನೆ ಉದಯಿಸುತ್ತದೆ: ಶ್ರೀರಾಮನ ಜೀವನವನ್ನು ಶತಮಾನ ಗಳಿಂದಲೂ ಏಕೆ ಮಾನವ ಜೀವನದ ಆದರ್ಶವೆಂದು ಕೊಂಡಾಡಲಾಗಿದೆ? ರಾಮಾಯಣ ವು ಶ್ರೀರಾಮನನ್ನು ಆದರ್ಶ ರಾಜ, ಆದರ್ಶ ಪುತ್ರ, ಆದರ್ಶ ಸಹೋದರ ಮತ್ತು ಆದರ್ಶ ಪತಿ ಎಂದು ವರ್ಣಿಸುತ್ತದೆ. ಆದರೆ ಭಾರತೀಯ ಜ್ಞಾನಪರಂಪರೆಯ ಇನ್ನೊಂದು ಆಳವಾದ ದೃಷ್ಟಿಯಿಂದ ನೋಡಿದರೆ, ಶ್ರೀರಾಮನ ಜೀವನವು ಆಯುರ್ವೇ ದದಲ್ಲಿ ವಿವರಿಸಲ್ಪಟ್ಟ ಸದ್ವೃತ್ತದ ತತ್ತ್ವಗಳ ಜೀವಂತ ಪ್ರತಿರೂಪದಂತೆ ಕಾಣುತ್ತದೆ.
ಆಯುರ್ವೇದವು ಆರೋಗ್ಯವನ್ನು ಕೇವಲ ರೋಗರಹಿತ ಸ್ಥಿತಿ ಎಂದಷ್ಟೇ ಹೇಳುವುದಿಲ್ಲ. ದೇಹ, ಮನಸ್ಸು, ಇಂದ್ರಿಯಗಳು ಮತ್ತು ಆತ್ಮ- ಈ ನಾಲ್ಕು ಅಂಶಗಳ ಸಮತೋಲನವೇ ನಿಜವಾದ ಸ್ವಾಸ್ಥ್ಯ ಎಂದು ಅದು ತಿಳಿಸುತ್ತದೆ. ಈ ಸಮತೋಲನವನ್ನು ಕಾಪಾಡಿಕೊಳ್ಳಲು ಆಯುರ್ವೇದವು ಆಹಾರ, ಜೀವನಶೈಲಿ ಮತ್ತು ಆಚಾರದ ಕುರಿತು ಹಲವಾರು ಮಾರ್ಗದರ್ಶನಗಳನ್ನು ನೀಡುತ್ತದೆ.
ಅವುಗಳಲ್ಲಿ ಅತ್ಯಂತ ಮಹತ್ವಪೂರ್ಣವಾದುದು ಸದ್ವೃತ್ತ- ಅಂದರೆ ಸತ್-ಪ್ರವೃತ್ತಿಯ ಜೀವನ. ಸದ್ವೃತ್ತದ ಸಾರವನ್ನು ಆಯುರ್ವೇದವು ಹೀಗೆ ಹೇಳುತ್ತದೆ: ಆರ್ದ್ರಸಂತಾನತಾ ತ್ಯಾಗಃ ಕಾಯವಾಕ್‌ಚೇತಸಾಂ ದಮಃ | ಸ್ವಾರ್ಥಬುದ್ಧಿಃ ಪರಾರ್ಥೇಷು ಪರ್ಯಾಪ್ತಮಿತಿ *ಸದ್ವ್ರತಮ್* || ಅಂದರೆ, ಎಲ್ಲಾ ಜೀವಿಗಳ ಮೇಲಿನ ಕರುಣೆ, ತ್ಯಾಗಭಾವ, ದೇಹ-ನುಡಿ-ಮನಸ್ಸಿನ ನಿಯಂತ್ರಣ ಮತ್ತು ಪರರ ಹಿತವನ್ನು ತನ್ನ ಸ್ವಾರ್ಥದಂತೆ ಕಾಣುವ ಮನೋಭಾವ- ಇವೆಲ್ಲವೂ ಸದ್ವೃತ್ತದ ಮೂಲತತ್ತ್ವಗಳು.
ಇದನ್ನೂ ಓದಿ: Dr Sadhanashree Column: ಬೇವಿನ ಕಹಿ ರುಚಿಯೊಳಗಿನ ಮಧುರ ರಹಸ್ಯವನ್ನು ಬಲ್ಲಿರಾ ?
ಈ ಗುಣಗಳನ್ನು ಗಮನಿಸಿದಾಗ ಅವು ಕೇವಲ ಗ್ರಂಥಗಳಲ್ಲಿ ಉಳಿದಿರುವ ತತ್ತ್ವಗಳಲ್ಲ; ಅವು ಮನುಷ್ಯನು ಅನುಸರಿಸಬೇಕಾದ ಜೀವನ ಮಾರ್ಗಗಳು ಎಂಬುದು ಅರಿವಾಗುತ್ತದೆ. ಈ ಎಲ್ಲಾ ಗುಣಗಳು ಶ್ರೀರಾಮನ ಜೀವನದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತವೆ.
ಕರುಣೆ: ಎಲ್ಲ ಜೀವಿಗಳ ಮೇಲಿನ ಮೃದುಭಾವ
ಸದ್ವೃತ್ತದ ಮೊದಲ ಗುಣವೇ ಆರ್ದ್ರಸಂತಾನತಾ, ಅಂದರೆ ಎಲ್ಲ ಜೀವಿಗಳ ಮೇಲಿನ ಕರುಣೆ. ಅರಣ್ಯವಾಸದ ಸಮಯದಲ್ಲಿ ಅನೇಕ ಋಷಿಮುನಿಗಳು ರಾಕ್ಷಸರ ಹಿಂಸೆಯಿಂದ ಕಂಗೆಟ್ಟಿದ್ದರು. ತಮ್ಮ ಯಜ್ಞಗಳು ಮತ್ತು ತಪಸ್ಸುಗಳನ್ನು ನೆರವೇರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಅವರು ಬದುಕುತ್ತಿದ್ದರು.
ಅವರ ದುಃಖವನ್ನು ಕಂಡ ಶ್ರೀರಾಮನು ಅವರಿಗೆ ರಕ್ಷಣೆಯನ್ನು ನೀಡುವುದನ್ನು ತನ್ನ ಕರ್ತವ್ಯವೆಂದು ಸ್ವೀಕರಿಸಿದನು. ಇದು ಕೇವಲ ಶೌರ್ಯದ ಪ್ರದರ್ಶನವಲ್ಲ; ಜತೆಗೆ ಕರುಣೆಯ ಅಭಿವ್ಯಕ್ತಿ.
ಇದೇ ರೀತಿ ವಿಭೀಷಣನು ತನ್ನ ಸಹೋದರ ರಾವಣನನ್ನು ತೊರೆದು ಆಶ್ರಯಕ್ಕಾಗಿ ಬಂದಾಗ, ಅವನು ಶತ್ರುಪಕ್ಷದಿಂದ ಬಂದಿದ್ದರೂ ಶ್ರೀರಾಮನು ಅವನನ್ನು ಆಶ್ರಯಕ್ಕೆ ಸ್ವೀಕರಿಸಿದನು. ಇದು ಎಲ್ಲ ಜೀವಿಗಳ ಮೇಲಿನ ಸಮಾನ ಕರುಣೆಯ ಪ್ರತೀಕವಾಗಿದೆ.
ತ್ಯಾಗ: ಧರ್ಮಕ್ಕಾಗಿ ಮಾಡಿದ ನಿರ್ಧಾರ
ಸದ್ವೃತ್ತದ ಮತ್ತೊಂದು ಮಹತ್ವದ ಗುಣವೇ ತ್ಯಾಗ. ರಾಜ್ಯಾಭಿಷೇಕಕ್ಕೆ ಸಿದ್ಧವಾಗಿದ್ದ ಸಮಯದಲ್ಲಿ, ತಂದೆಯಾದ ದಶರಥ ಮಹಾರಾಜರ ವಚನವನ್ನು ಕಾಪಾಡಲು ಶ್ರೀರಾಮ ನು ತನ್ನ ಸಿಂಹಾಸನವನ್ನು ತ್ಯಜಿಸಿ ಹದಿನಾಲ್ಕು ವರ್ಷಗಳ ವನವಾಸವನ್ನು ಸ್ವೀಕರಿಸಿದನು.
ವೈಯಕ್ತಿಕ ಸುಖಕ್ಕಿಂತ ಧರ್ಮವನ್ನು ಪ್ರಾಧಾನ್ಯವಾಗಿ ಕಂಡ ಈ ನಿರ್ಧಾರವು ತ್ಯಾಗದ ಅತ್ಯುನ್ನತ ಉದಾಹರಣೆಯಾಗಿದೆ.
ಕಾಯ-ವಾಕ್-ಚೇತಸಾಂ ದಮಃ
ದೇಹ, ಮಾತು ಮತ್ತು ಮನಸ್ಸಿನ ನಿಯಂತ್ರಣ ಸದ್ವೃತ್ತದ ಪ್ರಮುಖ ಅಂಶವಾಗಿದೆ. ಶ್ರೀರಾಮನ ಜೀವನದಲ್ಲಿ ಈ ನಿಯಂತ್ರಣ ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಸಂಕಷ್ಟಗಳ ನಡುವೆಯೂ ಅವನು ತನ್ನ ಸಮತೋಲನವನ್ನು ಕಳೆದುಕೊಳ್ಳಲಿಲ್ಲ. ಯುದ್ಧದ ಸಂದರ್ಭ ದಲ್ಲಿಯೂ ಧರ್ಮವನ್ನು ಮೀರಿ ನಡೆದುಕೊಳ್ಳಲಿಲ್ಲ.
ಪರಾರ್ಥೇಷು ಸ್ವಾರ್ಥಬುದ್ಧಿ
ಸದ್ವೃತ್ತವು ಮನುಷ್ಯನು ಪರರ ಹಿತವನ್ನು ತನ್ನ ಸ್ವಾರ್ಥದಂತೆ ಕಾಣಬೇಕು ಎಂದು ಹೇಳುತ್ತದೆ. ಶ್ರೀರಾಮನ ಆಡಳಿತವನ್ನು ರಾಮರಾಜ್ಯ ಎಂದು ಕೊಂಡಾಡಲಾಗುತ್ತದೆ. ಏಕೆಂದರೆ ಆ ಆಡಳಿತದಲ್ಲಿ ಪ್ರಜೆಗಳ ಸುಖಸಮೃದ್ಧಿ, ನ್ಯಾಯ ಮತ್ತು ಸಮಾನತೆ ಪ್ರಮುಖ ವಾಗಿತ್ತು.
ದಶಪಾಪಗಳಿಂದ ದೂರವಿರುವ ಜೀವನ
ಆಯುರ್ವೇದವು ಮನುಷ್ಯನು ತಪ್ಪಿಸಿಕೊಳ್ಳಬೇಕಾದ ದಶ ವಿಧ ಪಾಪಕರ್ಮಗಳನ್ನು ವಿವರಿಸುತ್ತದೆ: ಹಿಂಸಾಸ್ತೇಯಾನ್ಯಥಾಕಾಮಂ ಪೈಶುನ್ಯಂ ಪರುಷಾನೃತೆ | ಸಂಭಿನ್ನಾಲಾಪಂ ವ್ಯಾಪಾದಮಭಿಧ್ಯಾಂ ದೃಗ್ವಿಪರ್ಯ ಯಮ್ || ಅಂದರೆ, ಹಿಂಸೆ, ಕಳ್ಳತನ, ಅನೈತಿಕ ಕಾಮಾ ಚರಣೆ, ಬೆನ್ನ ಹಿಂದೆ ಕೆಟ್ಟಮಾತು ಆಡುವುದು, ಕಟುಮಾತು, ಸುಳ್ಳುಮಾತು, ಬೇರೆಯವರ ವೈಯಕ್ತಿಕ ವಿಷಯಗಳ ಕುರಿತು ಮಾತನಾಡುತ್ತಾ ಕಾಲಹರಣ ಮಾಡುವುದು, ದುರುದ್ದೇಶ ದಿಂದ ಕೂಡಿದ ಮಾತು, ಹೊಟ್ಟೆಕಿಚ್ಚು ಮತ್ತು ಶಾಸ್ತ್ರಗಳ ಮೇಲೆ ಸಂದೇಹ- ಇವು ದೇಹ, ಮಾತು ಮತ್ತು ಮನಸ್ಸಿನ ಮೂಲಕ ಉಂಟಾಗುವ ದಶವಿಧ ಪಾಪಗಳು. ಶ್ರೀರಾಮನ ಜೀವನವು ಈ ಪಾಪಗಳಿಂದ ಸಂಪೂರ್ಣ ದೂರವಿರುವ ಆದರ್ಶವಾಗಿದೆ.
ದುಃಖಿತರತ್ತ ಕರುಣೆ
ಆಯುರ್ವೇದವು ಮತ್ತೊಂದು ಸ್ಥಳದಲ್ಲಿ ಹೀಗೆ ಹೇಳುತ್ತದೆ: ಅವೃತ್ತಿವ್ಯಾಧಿಶೋಕಾರ್ತಾನುವರ್ತೇತ ಶಕ್ತಿತಃ | ಆತ್ಮವತ್ ಸತತಂ ಪಶ್ಯೇದಪಿ ಕೀಟಪಿಪೀಲಿಕಾಮ್ ||
ಅಂದರೆ, ಜೀವನೋಪಾಯವಿಲ್ಲದವರು, ರೋಗಿಗಳು ಮತ್ತು ದುಃಖಿತರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಕೀಟಗಳಾದರೂ ಸರಿ ಎಲ್ಲಾ ಜೀವಿಗಳನ್ನು ಆತ್ಮಸಮಾನವಾಗಿ ನೋಡಬೇಕು. ಈ ತತ್ತ್ವವು ಶ್ರೀರಾಮನ ಜೀವನದಲ್ಲಿಯೂ ಅತ್ಯಂತ ಸುಂದರವಾಗಿ ಪ್ರತಿಬಿಂಬಿತವಾಗುತ್ತದೆ. ಲಂಕೆಗೆ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ವಾನರಸೇನೆ ದೊಡ್ಡ ದೊಡ್ಡ ಕಲ್ಲುಗಳನ್ನು ಹೊತ್ತು ಸಮುದ್ರದಲ್ಲಿ ಹಾಕುತ್ತಿತ್ತು.
ಅದೇ ಸಮಯದಲ್ಲಿ ಒಂದು ಸಣ್ಣ ಅಳಿಲು ತನ್ನಿಂದಾದಷ್ಟು ಸಹಾಯ ಮಾಡುವ ಉದ್ದೇಶ ದಿಂದ ಮರಳಿನ ಕಣಗಳನ್ನು ಹೊತ್ತು ಸಮುದ್ರಕ್ಕೆ ಹಾಕುತ್ತಿತ್ತು. ಕೆಲವರು ಅದನ್ನು ಅಲ್ಪ ಪ್ರಯತ್ನವೆಂದು ನೋಡಿದರೂ, ಶ್ರೀರಾಮನು ಆ ಅಳಿಲಿನ ಭಕ್ತಿಯನ್ನು ಮತ್ತು ಶ್ರಮವನ್ನು ಗಮನಿಸಿ ಗೌರವಿಸಿದನು. ಅದರ ಸಣ್ಣ ಸೇವೆಯನ್ನೂ ಮಹತ್ವದಿಂದ ಕಂಡು ಅದನ್ನು ಸ್ನೇಹದಿಂದ ತನ್ನ ಕೈಯಿಂದ ಸ್ಪರ್ಶಿಸಿ ಆಶೀರ್ವದಿಸಿದನು ಎಂಬ ಪ್ರಸಿದ್ಧ ಕಥೆಯನ್ನು ರಾಮಾಯಣ ಪರಂಪರೆ ತಿಳಿಸುತ್ತದೆ.
ಈ ಘಟನೆಯು ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ- ಮನುಷ್ಯನು ದೊಡ್ಡದಾ ಗಲಿ ಸಣ್ಣದಾಗಲಿ ಪ್ರತಿಯೊಂದು ಜೀವಿಯ ಪ್ರಯತ್ನವನ್ನು ಗೌರವದಿಂದ ನೋಡಬೇಕು.
ಆಯುರ್ವೇದವು ಹೇಳುವಂತೆ ಕೀಟ-ಪಿಪೀಲಿಕೆಯಾಗಲಿ ಎಲ್ಲ ಜೀವಿಗಳನ್ನೂ ಆತ್ಮಸಮಾನ ವಾಗಿ ನೋಡುವ ಮನೋ ಭಾವವೇ ನಿಜವಾದ ಸದ್ವೃತ್ತ. ಶ್ರೀರಾಮನ ಜೀವನವು ಈ ತತ್ತ್ವ ವನ್ನು ಅತ್ಯಂತ ಸರಳ ಮತ್ತು ಸುಂದರ ರೀತಿಯಲ್ಲಿ ನಮಗೆ ಬೋಧಿಸುತ್ತದೆ.
ಮಾತಿನಲ್ಲೂ ಸಂಸ್ಕೃತಿ
ಸದ್ವೃತ್ತವು ಮನುಷ್ಯನು ಹೇಗೆ ಮಾತನಾಡಬೇಕು ಎಂಬುದನ್ನು ವಿವರಿಸುತ್ತದೆ: ಕಾಲೇ ಹಿತಂ ಮಿತಂ ಬ್ರೂಯಾದವಿಸಂವಾದಿ ಪೇಶಲಮ್ | ಪೂರ್ವಾ ಭಿಭಾಷೀ ಸುಮುಖಃ ಸುಶೀಲಃ ಕರುಣಾ ಮೃದುಃ || ಅಂದರೆ, ಸರಿಯಾದ ಸಮಯದಲ್ಲಿ, ಹಿತವಾದ ಮತ್ತು ಮಿತವಾದ ಮಾತು ಗಳನ್ನು ಆಡಬೇಕು.
ವಿವಾದಕ್ಕೀಡಾಗದಂಥ ಮಾತುಗಳಿರಬೇಕು. ಬೇರೆಯವರನ್ನು ನಾವೇ ಮೊದಲು ಹೋಗಿ ಮಾತನಾಡಿಸಬೇಕು. ಮೃದು ಮತ್ತು ಸೌಜನ್ಯದಿಂದ ಕೂಡಿದ ಮಾತುಗಳಿರಬೇಕು.
ಶ್ರೀರಾಮನ ಮಾತುಗಳು ಸದಾ ಮೃದು ಮತ್ತು ಗೌರವಪೂರ್ಣವಾಗಿದ್ದವು. ರಾಮಾಯಣ ವನ್ನು ಪಾರಾಯಣ ಮಾಡಿದಾಗ ಮನಸ್ಸಿನಲ್ಲಿ ಒಂದು ಪ್ರಶ್ನೆ ಉದಯಿಸುತ್ತದೆ- ಶ್ರೀರಾಮ ನು ಆಯುರ್ವೇದದಲ್ಲಿ ಹೇಳಲ್ಪಟ್ಟ ಸದ್ವೃತ್ತವನ್ನು ಅನುಸರಿಸಿದನೋ ಅಥವಾ ಶ್ರೀರಾಮನ ಆದರ್ಶ ಜೀವನವನ್ನೇ ನೋಡಿ ಆಯುರ್ವೇದವು ಸದ್ವೃತ್ತದ ತತ್ತ್ವಗಳನ್ನು ಬೋಧಿಸಿತೋ? ಅಂತ.
ಗೌರವ ಮತ್ತು ಸಂಸ್ಕೃತಿ
ಆಯುರ್ವೇದವು ಮತ್ತೊಂದು ಕಡೆ ಹೀಗೆ ಹೇಳುತ್ತದೆ: ‘ಅರ್ಚಯೇದ್ದೇವಗೋವಿಪ್ರವೈದ್ಯವೃದ್ಧನೃಪಾತಿಥೀನ್’ ಅಂದರೆ- ದೇವರು, ಗೋವು, ಪಂಡಿತರು, ವೈದ್ಯರು, ವೃದ್ಧರು, ರಾಜರು ಮತ್ತು ಅತಿಥಿಗಳನ್ನು ಗೌರವಿಸಬೇಕು. ಶ್ರೀರಾಮನ ಜೀವನದಲ್ಲಿ ಈ ಮೌಲ್ಯಗಳು ಸ್ಪಷ್ಟವಾಗಿ ಕಾಣುತ್ತವೆ. ಅವನು ಹಿರಿಯರಿಗೆ ತೋರಿದ ಗೌರವವೇ ಅವನಿಗೆ ರಕ್ಷಾಕವಚವಾಯಿತು ಎಂದರೆ ತಪ್ಪಾಗಲಾರದು.
ಧರ್ಮದ ನಿಜವಾದ ಸುಖ
ಆಯುರ್ವೇದವು ಹೀಗೆ ಹೇಳುತ್ತದೆ: ಸುಖಾರ್ಥಾಃ
ಸರ್ವಭೂತಾನಾಂ ಮತಾಃ ಸರ್ವಾಃ ಪ್ರವೃತ್ತಯಃ |
ಸುಖಂ ಚ ನ ವಿನಾ ಧರ್ಮಾತ್ ತಸ್ಮಾದ್ ಧರ್ಮಪರೋ
ಭವೇತ್ || ಅಂದರೆ, ಎಲ್ಲ ಜೀವಿಗಳೂ ಸುಖಕ್ಕಾಗಿ ಪ್ರಯತ್ನಿಸುತ್ತವೆ; ಆದರೆ ಧರ್ಮವಿಲ್ಲದೆ ನಿಜವಾದ ಸುಖ ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಧರ್ಮಪರರಾಗಿಯೇ ಜೀವಿಸ ತಕ್ಕದ್ದು.ಈ ತತ್ತ್ವವು ಶ್ರೀರಾಮನ ಜೀವನದಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ. ಅವನ ಜೀವನದ ಪ್ರತಿಯೊಂದು ನಿರ್ಧಾರವೂ ಧರ್ಮವನ್ನು ಕೇಂದ್ರವಾಗಿಟ್ಟುಕೊಂಡೇ ಹೊಮ್ಮಿದಂಥವು.
ಇದರಿಂದಲೇ ನಮಗೆ ತಿಳಿಯುವುದು- ನಿಜವಾದ ಸುಖವು ಕ್ಷಣಿಕ ಭೋಗಗಳಲ್ಲಿ ಇಲ್ಲ; ಅದು ಧರ್ಮಪರವಾದ ಜೀವನದಲ್ಲಿದೆ ಅಂತ. ಆಯುರ್ವೇದವು ಹೇಳುವ ಈ ತತ್ತ್ವವನ್ನು ಶ್ರೀರಾಮನ ಜೀವನವೇ ಅತ್ಯಂತ ಸ್ಪಷ್ಟವಾಗಿ ನಮಗೆ ಬೋಧಿಸುತ್ತದೆ.
ದಿನರಾತ್ರಿಗಳ ಜಾಗೃತಿ: ನಿರಂತರ ಸ್ಮೃತಿಯ ಜೀವನ
ಆಯುರ್ವೇದವು ಸದ್ವೃತ್ತದ ಅನುಸರಣೆಯಿಂದ ಮನುಷ್ಯನು ಯಾವ ಮನೋಭಾವದಲ್ಲಿ ಬದುಕಬೇಕು ಎಂಬುದನ್ನೂ ಸುಂದರವಾಗಿ ಹೇಳುತ್ತದೆ: ನಕ್ತಂದಿನಾನಿ ಮೇ ಯಾಂತಿ ಕಥಂಭೂತಸ್ಯ ಸಂಪ್ರತಿ | ದುಃಖಭಾಂಗ್ ನ ಭವತ್ಯೇವಂ ನಿತ್ಯಂ ಸನ್ನಿಹಿತಸ್ಮೃತಿಃ || ಅಂದರೆ, ನನ್ನ ದಿನಗಳು ಮತ್ತು ರಾತ್ರಿಗಳು ಹೇಗೆ ಕಳೆಯುತ್ತಿವೆ ಎಂಬುದನ್ನು ಸದಾ ಜಾಗೃತಿಯಿಂದ ಪರಿಶೀಲಿಸುವ, ತನ್ನ ನಡೆ-ನುಡಿಗಳು ಧರ್ಮದ ಮಾರ್ಗದ ಸಾಗುತ್ತಿವೆಯೇ ಎಂಬುದನ್ನು ನಿತ್ಯವೂ ನೆನಪಿನಲ್ಲಿ ಇಟ್ಟುಕೊಳ್ಳುವ ವ್ಯಕ್ತಿಗೆ ದುಃಖವು ತಲುಪುವುದಿಲ್ಲ.
ಇದು ಆಯುರ್ವೇದದ ಬಹಳ ಆಳವಾದ ಉಪದೇಶ. ಮಾನವನ ಜೀವನ ಕ್ಷಣಕ್ಷಣಕ್ಕೂ ಸಾಗುತ್ತಿದೆ. ಆ ಕ್ಷಣಗಳನ್ನು ವ್ಯರ್ಥಗೊಳಿಸದೆ, ಪ್ರತಿದಿನವೂ ತನ್ನ ಆಚಾರ, ಚಿಂತನೆ ಮತ್ತು ನಡೆಗಳನ್ನು ಪರಿಶೀಲಿಸುತ್ತಾ, ಅವುಗಳನ್ನು ಉದ್ಧರಿಸುತ್ತಾ ಬದುಕಬೇಕೆಂಬ ಬೋಧನೆ ಇದಾಗಿದೆ. ಇಂಥ ಸ್ಮೃತಿಪೂರ್ಣ ಜೀವನವೇ ಮನುಷ್ಯನನ್ನು ದುಃಖದಿಂದ ಕಾಪಾಡುತ್ತದೆ.
ಶ್ರೀರಾಮನ ಪ್ರತಿಯೊಂದು ನಿರ್ಧಾರವೂ ಧರ್ಮಸ್ಮೃತಿಯಿಂದಲೇ ರೂಪುಗೊಂಡಿತ್ತು. ಕ್ಷಣಿಕ ಸುಖವನ್ನು ಬಿಟ್ಟು ಶಾಶ್ವತ ಧರ್ಮವನ್ನು ಹಿಡಿದಿರುವ ಈ ಮನೋಭಾವವೇ ಶ್ರೀರಾಮನ ಜೀವನದ ವಿಶೇಷತೆ.
ಹೀಗಾಗಿ, ದಿನರಾತ್ರಿ ಹೇಗೆ ಸಾಗುತ್ತಿದೆ ಎಂಬುದನ್ನು ಜಾಗೃತಿಯಿಂದ ಗಮನಿಸಿ, ಸದ್ಗತಿ ಯನ್ನು ಆರಿಸುವ ಈ ಆಯುರ್ವೇದೀಯ ಸಂದೇಶಕ್ಕೆ ಶ್ರೀರಾಮನ ಜೀವನವೇ ಅತ್ಯುತ್ತಮ ಉದಾಹರಣೆ.
ಸದ್ವೃತ್ತದ ಫಲ
ಕೊನೆಯಲ್ಲಿ ಆಯುರ್ವೇದವು ಸದ್ವೃತ್ತವನ್ನು ಅನುಸರಿಸುವವನಿಗೆ ದೊರೆಯುವ ಫಲವನ್ನು ಬಹಳ ಸುಂದರವಾಗಿ ವಿವರಿಸುತ್ತದೆ: ಇತ್ಯಾಚಾರಃ ಸಮಾಸೇನ ಯಂ ಪ್ರಾಪ್ಮೋತಿ ಸಮಾಚರನ್ | ಆಯುರಾ ರೋಗ್ಯಮೈಶ್ವರ್ಯಂ ಯಶೋ ಲೋಕಾಂಶ್ಚ ಶಾಶ್ವತಾನ್ || ಅಂದರೆ, ಈ ಸದ್ವೃತ್ತಾಚಾರವನ್ನು ಜೀವನದಲ್ಲಿ ಅನುಸರಿಸುವವನು ದೀರ್ಘಾಯುಷ್ಯ, ಆರೋಗ್ಯ, ಐಶ್ವರ್ಯ, ಯಶಸ್ಸು ಮತ್ತು ಶಾಶ್ವತ ಲೋಕಪ್ರಾಪ್ತಿ ಎಂಬ ಮಹತ್ವದ ಫಲಗಳನ್ನು ಪಡೆಯುತ್ತಾನೆ.
ಆಯುರ್ವೇದದ ದೃಷ್ಟಿಯಲ್ಲಿ ಸದ್ವೃತ್ತವು ಕೇವಲ ನೈತಿಕ ಆಚಾರವಲ್ಲ; ಅದು ದೇಹ, ಮನಸ್ಸು ಮತ್ತು ಸಮಾಜದ ಸಮತೋಲನವನ್ನು ಕಾಪಾಡುವ ಸಮಗ್ರ ಜೀವನವಿಧಾನ. ಮನುಷ್ಯನು ತನ್ನ ಮನಸ್ಸನ್ನು ಶಾಂತವಾಗಿಟ್ಟುಕೊಂಡು, ಮಾತಿನಲ್ಲಿ ಮೃದುತ್ವವನ್ನು ಕಾಪಾಡಿ, ಕರ್ಮಗಳಲ್ಲಿ ಧರ್ಮವನ್ನು ಪಾಲಿಸಿದಾಗ ದೇಹದಲ್ಲಿನ ದೋಷಗಳು ಸಮತೋಲನದಲ್ಲಿರುತ್ತವೆ, ಮನಸ್ಸು ಪ್ರಸನ್ನವಾಗಿರುತ್ತದೆ ಮತ್ತು ಜೀವನದಲ್ಲಿ ಸ್ಥೈರ್ಯ ಉಂಟಾಗುತ್ತದೆ.
ಇಂಥ ಜೀವನವೇ ನಿಜವಾದ ಸ್ವಾಸ್ಥ್ಯಕ್ಕೆ ಮೂಲವಾಗುತ್ತದೆ. ಸದ್ವೃತ್ತವು ವ್ಯಕ್ತಿಗೆ ಮಾತ್ರ ವಲ್ಲ, ಕುಟುಂಬಕ್ಕೂ ಮತ್ತು ಸಮಾಜಕ್ಕೂ ಶಾಂತಿ ಮತ್ತು ಸೌಹಾರ್ದವನ್ನು ನೀಡುತ್ತದೆ. ಕರುಣೆ, ಸತ್ಯ, ತ್ಯಾಗ ಮತ್ತು ಧರ್ಮದ ಮೌಲ್ಯಗಳ ಮೇಲೆ ನಿರ್ಮಿತವಾದ ಜೀವನವು ಮನುಷ್ಯನಿಗೆ ಗೌರವ ಮತ್ತು ಕೀರ್ತಿಯನ್ನು ತಂದುಕೊಡುತ್ತದೆ.
ಈ ಎಲ್ಲಾ ಗುಣಗಳ ಸಮಗ್ರ ರೂಪವೇ ಶ್ರೀರಾಮನ ಜೀವನವಾಗಿದೆ. ಧರ್ಮವನ್ನು ಜೀವನದ ಕೇಂದ್ರವಾಗಿಟ್ಟುಕೊಂಡು, ಕರುಣೆ ಮತ್ತು ಸತ್ಯದ ಮಾರ್ಗದಲ್ಲಿ ನಡೆದು, ಪ್ರಜೆಗಳ ಹಿತಕ್ಕಾಗಿ ಬದುಕಿದ ಶ್ರೀರಾಮನ ಜೀವನವು ಸದ್ವೃತ್ತದ ಜೀವಂತ ಮಾದರಿಯಾಗಿದೆ.
ಆಯುರ್ವೇದ ಗ್ರಂಥಗಳಲ್ಲಿ ಉಪದೇಶಿಸಲ್ಪಟ್ಟ ಸದ್ವೃತ್ತ ತತ್ತ್ವಗಳನ್ನು ಶ್ರೀರಾಮನ ಜೀವನವು ಜೀವಂತವಾಗಿ ನಮಗೆ ತೋರಿಸುತ್ತದೆ. ಹೀಗಾಗಿ ಶ್ರೀರಾಮನವಮಿ ನಮಗೆ ಒಂದು ಮಹತ್ವದ ನೆನಪು- ಶ್ರೀರಾಮನನ್ನು ಕೇವಲ ಆರಾಧಿಸುವುದಲ್ಲ, ಶ್ರೀರಾಮನಂತೆ ಬದುಕಲು ಪ್ರಯತ್ನಿಸುವುದೇ ನಿಜವಾದ ಆಚರಣೆ. ಅಂಥ ಸದ್ವೃತ್ತಮಯ ಜೀವನವೇ ಮನುಷ್ಯನಿಗೆ ಆರೋಗ್ಯ, ಸಂತೋಷ ಮತ್ತು ಶಾಶ್ವತ ಕೀರ್ತಿಯನ್ನು ನೀಡುವ ಧರ್ಮಮಾರ್ಗವಾಗಿದೆ.
ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ
ಭೂಯೋ ನಮಾಮ್ಯಹಮ್ ||