ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinayaka M Bhat Column: ಬಿಜೆಪಿ ಭೀಷ್ಮ ಪಿತಾಮಹನ ಸಾರ್ಥಕ ಶತಾಯುಷ್ಯ

ಅಂಥಾದ್ದರಲ್ಲಿ ರಾಜಕೀಯದ ಹೋರಾಟದ ಜೀವನದಲ್ಲಿ ಬೆವರು ರಕ್ತ ಏಕವಾಗಿ ಹರಿಸಿದ್ದ ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿಯವರು ಶತಮಾನವನ್ನು ಕಂಡಿದ್ದಾರೆ. ಅವರ ಶತಮಾನದ ಬದುಕಿನ ರಹಸ್ಯವೇನು ಎಂದು ನೋಡುವುದಾದರೆ, ಜೀವನದುದ್ದಕ್ಕೂ ಆಹಾರ-ವಿಹಾರಗಳಲ್ಲಿ ಶಿಸ್ತನ್ನು ಪಾಲಿಸಿದ್ದರು, ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರು, ಮಾನಸಿಕವಾಗಿ ನೆಮ್ಮದಿಯನ್ನು ಹಾಳುಗೆ ಡವಿಕೊಂಡಿರಲಿಲ್ಲ ಹಾಗೂ ಆದರ್ಶವಾದ ಕುಟುಂಬ ಜೀವನವನ್ನು ಕಂಡಿದ್ದರು ಎಂದು ಸರಳವಾಗಿ ನಿರ್ಣಯಿಸಬಹುದು.

ವಿದ್ಯಮಾನ

ಕಳೆದ ತಿಂಗಳು ಲಾಲ್ ಕೃಷ್ಣ ಅಡ್ವಾಣಿಯವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಯಾಕೋ ಅಡ್ವಾಣಿಯವರು ನೂರರ ಹೊಸ್ತಿಲಿನಲ್ಲಿ ತಮ್ಮ ಜೀವನಪಯಣಕ್ಕೆ ಮಂಗಳ ಹಾಡಿಬಿಡುತ್ತಾರೇನೋ ಅನಿಸಿತ್ತು. ಆದರೆ ವಿಧಿ ಅಡ್ವಾಣಿಯವರ ಕೈಬಿಡಲಿಲ್ಲ. ನವೆಂಬರ್ 8ರಂದು ಅವರು ನೂರನೇ ವರ್ಷಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ತೊಂಬತ್ತೊಂಬತ್ತಕ್ಕೂ ನೂರಕ್ಕೂ ಇರುವುದು ಕೇವಲ ಒಂದರ ವ್ಯತ್ಯಾಸವಾದರೂ, ಶತಕಕ್ಕೆ ಇರುವ ಗೌರವವೇ ಬೇರೆ.

ಒಂದು ಶತಮಾನ ಬದುಕುವುದು ಯಾರಿಗೂ ಇಂದಿನ ಕಾಲದಲ್ಲಿ ಸುಲಭದ ಮಾತಲ್ಲ. ಆಹಾರ, ನೀರು, ನಿದ್ರೆ ಎಲ್ಲವೂ ಕಲುಷಿತವಾಗಿರುವಾಗ, ನಿತ್ಯವೂ ಹೊಸಹೊಸ ರೋಗಗಳು ಜನ್ಮತಾಳುತ್ತಿರುವ ಈ ಕಾಲದಲ್ಲಿ ನೂರು ವರ್ಷ ಬದುಕುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.

ಅಂಥಾದ್ದರಲ್ಲಿ ರಾಜಕೀಯದ ಹೋರಾಟದ ಜೀವನದಲ್ಲಿ ಬೆವರು ರಕ್ತ ಏಕವಾಗಿ ಹರಿಸಿದ್ದ ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿಯವರು ಶತಮಾನವನ್ನು ಕಂಡಿದ್ದಾರೆ. ಅವರ ಶತಮಾನದ ಬದುಕಿನ ರಹಸ್ಯವೇನು ಎಂದು ನೋಡುವುದಾದರೆ, ಜೀವನದುದ್ದಕ್ಕೂ ಆಹಾರ-ವಿಹಾರಗಳಲ್ಲಿ ಶಿಸ್ತನ್ನು ಪಾಲಿಸಿದ್ದರು, ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರು, ಮಾನಸಿಕವಾಗಿ ನೆಮ್ಮದಿಯನ್ನು ಹಾಳುಗೆ ಡವಿಕೊಂಡಿರಲಿಲ್ಲ ಹಾಗೂ ಆದರ್ಶವಾದ ಕುಟುಂಬ ಜೀವನವನ್ನು ಕಂಡಿದ್ದರು ಎಂದು ಸರಳವಾಗಿ ನಿರ್ಣಯಿಸಬಹುದು.

ಸಾಮಾನ್ಯವಾಗಿ ರಾಜಕಾರಣಿಗಳು ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಅನಾರೋಗ್ಯ ಪೀಡಿತರಾಗಿ ಬಿಡುತ್ತಾರೆ. ಕೇರಳದ ಮುಖ್ಯಮಂತ್ರಿಗಳಾಗಿದ್ದ ವಿ.ಎಸ್ ಅಚ್ಯುತಾನಂದನ್ ಅವರನ್ನು ಹೊರತು ಪಡಿಸಿದರೆ ಶತಮಾನ ಬದುಕಿದ ಇನ್ನಾವ ರಾಜಕಾರಣಿಯ ಹೆಸರೂ ನೆನಪಿಗೆ ಬರುತ್ತಿಲ್ಲ. ಈ ಎಲ್ಲ ದೃಷ್ಟಿಯಿಂದ, ಶತಕದ ನಂತರವೂ ‘ನಾಟ್ ಔಟ್’ ಆಗಿ ಮುನ್ನಡೆ ದಿರುವ ಭಾರತರತ್ನ ಅಡ್ವಾಣಿ ಯವರು ಅಭಿನಂದನಾರ್ಹರೇ. ಆಯುಷ್ಯವನ್ನು ಮನುಷ್ಯ ಹುಟ್ಟುವಾಗಲೇ ಪಡೆದು ಬಂದಿರು ತ್ತಾನೆ ಎಂದು ಹೇಳಲಾಗುತ್ತದೆ. ಆದರೆ, ಮರಣಿಸಿದ ಮೇಲೂ ಮನುಷ್ಯನನ್ನು ಜೀವಂತವಾಗಿರಿಸುವ ಜೀವಿತಾವಧಿಯಲ್ಲಿ ಮಾಡಿರುವ ಸಾಧನೆ ಎನ್ನುವುದು ಸಾಮಾನ್ಯರಿಗೂ ವಿಶೇಷ ವ್ಯಕ್ತಿಗಳಿಗೂ ಇರುವ ವ್ಯತ್ಯಾಸವನ್ನು ತೋರಿಸುತ್ತದೆ. ಆ ದೃಷ್ಟಿಯಿಂದ ಶತಾಯುಷಿ ಅಡ್ವಾಣಿಯವರ ರಾಜಕೀಯ ಜೀವನದ ಯಥಾಮತಿ ಅವಲೋಕನ ಈ ಲೇಖನದ ಹೇತು.

ಇದನ್ನೂ ಓದಿ: Vinayaka M Bhat Column: ಪ್ರಜಾಪ್ರಭುತ್ವವನ್ನು ಅಣಕಿಸುವ ಪಕ್ಷಕ್ಕೊಂದಷ್ಟು ಪ್ರಶ್ನೆಗಳು

ಇವರನ್ನು ಬಿಜೆಪಿಯ ಭೀಷ್ಮ ಅಂತ ಕರೆಯುವ ಜನರಿದ್ದಾರೆ. ತಾನು ಸಿಂಹಾಸನವೇರದ ಭೀಷಣ ಪ್ರತಿಜ್ಞೆ ಮಾಡಿದ್ದ ಭೀಷ್ಮ ಪಿತಾಮಹ ತನ್ನ ಕಣ್ಣೆದುರಿಗೇ ತನ್ನ ಕುಲಕ್ಷಯವನ್ನು ಕಾಣುವ ಹಾಗಾಯ್ತು. ಆದರೆ ಬಿಜೆಪಿಯ ಭೀಷ್ಮನಿಗೆ ತನ್ನ ಪಕ್ಷವೆಂಬ ಕುಲ ಅಕ್ಷಯವಾಗುವುದನ್ನು ಕಾಣುವ ಭಾಗ್ಯವಾಯ್ತು, ಆ ದೃಷ್ಟಿಯಿಂದ ಅವರಿಗೆ ಭೀಷ್ಮ ಎನ್ನುವ ಬಿರುದು ಸರಿಯಾಗಲಾರದೇನೋ!

ನಾವು ನೆಟ್ಟ ತೆಂಗಿನ ಮರವು ನಮ್ಮ ಜೀವಿತದಲ್ಲಿ ಫಲ ಕೊಡಲಾರದು ಎನ್ನುವ ಪ್ರಾಚೀನ ಮಾತೊಂದಿದೆ. ತಾತ್ಪರ್ಯ, ನಾವು ತೆಂಗಿನ ಗಿಡ ನೆಡುವಾಗ, ಇದರ ಫಲ ನಮಗೆ ಸಿಗದಿದ್ದರೂ ಮಕ್ಕಳು ಮೊಮ್ಮಕ್ಕಳಿಗೆ ಇದರ ಫಲ ಸಿಗಲಿ ಎನ್ನುವುದನ್ನು ತಿಳಿದೇ ಗಿಡ ನೆಡಬೇಕು. ನಾವು ಉಣ್ಣುತ್ತಿರುವುದೂ ಬೇರೆಯವರು ನೆಟ್ಟ ಗಿಡದ ಫಲವೇ ಆಗಿದೆ ಎನ್ನುವುದನ್ನು ತಿಳಿದು ಗಿಡ ನೆಡುವುದು, ಹಣ್ಣುಕಾಯಿಗಳ ಗಿಡ ನೆಡುವುದರ ಹಿಂದಿನ ತತ್ವ. ಆದರೆ ಸುದೈವವಶಾತ್ ಅಡ್ವಾಣಿ ಯವರ ವಿಷಯದಲ್ಲಿ ಹಾಗಾಗಲಿಲ್ಲ, ಅವರು ಬಿತ್ತಿದ ಬೀಜ ಅವರೆದುರೇ ಬೃಹತ್ ಮರವಾಗಿ ಬೆಳೆದುನಿಂತು, ಸುಪುಷ್ಟವಾದ ಫಲವನ್ನು, ಪುಷ್ಕಳವಾದ ನೆರಳನ್ನೂ ಕೊಡುತ್ತಿರುವುದಷ್ಟೇ ಆಲ್ಲದೇ, ತನ್ನ ಬೇರನ್ನೂ ಬಹಳ ಆಳಕ್ಕೆ ಬಿಟ್ಟು, ಯಾವ ಚಂಡಮಾರುತಕ್ಕೂ ಬುಡಮೇಲಾ ಗದಷ್ಟು ಘಟ್ಟಿಯಾಗಿ ನಿಂತಿದೆ.

ಬಿಜೆಪಿ ಎಂಬ ಬೀಜವೇ ಜೊಳ್ಳು, ಭೂಮಿಗೆ ಬಿದ್ದರೂ ಚಿಗುರಲಾರದು, ಮೊಳಕೆ ಭೂಮಿಯೊಡೆದು ಮೇಲೆದ್ದು ಬಂದರೂ ಮೊಳಕೆಯ ಸತ್ತುಹೋಗುತ್ತೆ ಎಂದವರಿದ್ದರು. ಆದರೆ ಈಗ ಅನೇಕ ಪ್ರಾಣಿ-ಪಕ್ಷಿ ಸಂಕುಲಗಳು ಆ ಬಿಜೆಪಿ ಎಂಬ ವೃಕ್ಷದ ಆಶ್ರಯ ಪಡೆದಿವೆ. ಹಾಗಾಗಿ, ಬೀಜವೂರುವುದರಿಂದ ಮಹಾ ವೃಕ್ಷವಾಗುವಲ್ಲಿಯವರೆಗಿನ ಬಿಜೆಪಿಯ ಮಹಾಪ್ರಯಾಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಅಡ್ವಾಣಿಯವರ ಶತಾಯುಷ್ಯಕ್ಕೆ ವಿಶೇಷ ಅರ್ಥವಿದೆ.

Vin Bhat 15

‘ಮಂದಿರ್ ವಹೀ ಬನಾಯೇಂಗೆ’ ಮಂದಿರವ ಕಟ್ಟುವೆವು, ಎಲ್ಲಿ? ಅಯೋಧ್ಯೆಯಲ್ಲಿ. ಯಾವುದೋ ಮೂಲೆಯಲ್ಲಲ್ಲ, ಯಾವ ಮಂದಿರವಿದ್ದ ಜಾಗದಲ್ಲಿ ಬಾಬರ ಬಂದು ಮಸೀದಿ ಕಟ್ಟಿದ್ದಾನೋ, ಅದೇ ಜಾಗದಲ್ಲಿ ಮತ್ತೆ ಮಂದಿರವಾಗಬೇಕು ಎನ್ನುವುದು ಅಡ್ವಾಣಿಯವರ ಘೋಷಣೆಯಾಗಿತ್ತು. ಅದು ಸಾಧ್ಯವೇ ಇಲ್ಲ ಎನ್ನುವುದು ಬಹುತೇಕ ಬಿಜೇಪಿಗರಿಗೂ ಗೊತ್ತಿತ್ತು, ಸಾಧ್ಯವಾದರೂ ಬಿಜೆಪಿಯಿಂದ ಸಾಧ್ಯವಾಗಲಾರದು ಎನ್ನುವುದು ಅನೇಕರ ಅಭಿಪ್ರಾಯವಾಗಿತ್ತು.

ಕಾರಣ ಸರಳ, ಆಗ ಬಿಜೆಪಿ ಈ ಶತಮಾನದಲ್ಲಿ ಅಧಿಕಾರಕ್ಕೆ ಬರುವ ಸಂಭವನೀಯತೆಯೇ ಅಷ್ಟು ಕಡಿಮೆ ಇತ್ತು. ಬರೇ ಚುನಾವಣೆಯಲ್ಲಿ ಹಿಂದೂ ಮತಗಳ ಧ್ರುವೀಕರಣದ ತಂತ್ರವಾಗಿ ಬಿಜೆಪಿ ರಾಮಮಂದಿರ ವನ್ನು ಬಳಸುತ್ತಿದೆ, ರಾಮ ಮಂದಿರವಾಗುವುದು ಬಿಜೆಪಿಗೂ ಬೇಡ ಎನ್ನುವ ಆಪಾದನೆಯನ್ನೂ ಅಡ್ವಾಣಿ ಕೇಳಿಸಿಕೊಂಡಿದ್ದಾರೆ. ಈಗ ಭವ್ಯ ಶ್ರೀರಾಮಮಂದಿರ ಅದೇ ಜಾಗದಲ್ಲಿ ತಲೆ ಎತ್ತಿ ನಿಂತಿದೆ.

ಜಗತ್ತಿನ ಮೂಲೆ ಮೂಲೆಯಿಂದ ಭಕ್ತಜನರನ್ನು ಬಾ ಎಂದು ತನ್ನತ್ತ ಕರೆಯುತ್ತಿದೆ. ಬಾಬ್ರಿ ಮಸೀದಿಯ ದ್ವಂಸ ಮಾಡಿರುವುದನ್ನು ಅಡ್ವಾಣಿಯವರೂ ದುರದೃಷ್ಟಕರ ಘಟನೆ, ಹಾಗಾಗಬಾರ ದಿತ್ತು, ಇದು ನಮ್ಮ ಹೋರಾಟದ ತತ್ವಕ್ಕೆ ವಿರೋಧವಾದ ಘಟನೆ ಎಂದೇ ಬಣ್ಣಿಸಿದ್ದರು. ಹಾಗೆ ಕರಸೇವಕರ ಸ್ವಯಂಸ್ಪೂರ್ತಿ ಯಿಂದಾದ ಈ ಘಟನೆಯಿಂದ ನ್ಯಾಯಾಲಯದಲ್ಲಿ ಪ್ರಕರಣ ಸ್ವಲ್ಪ ದುರ್ಬಲವಾಯ್ತು ಮತ್ತು ಐತಿಹಾಸಿಕ ಅಯೋಧ್ಯೆಯ ತೀರ್ಪು ಬರಲು ವಿಳಂಬವಾಗುವ ಹಾಗಾಯ್ತು ಎನ್ನುವುದು ಬಹಳ ಜನರಿಗೆ ಇಂದಿಗೂ ತಿಳಿದಿಲ್ಲ.

ಅಷ್ಟೇ ಅಲ್ಲದೇ ಆ ಜಾಗದಲ್ಲಿದ್ದ ಕಾರಣ ಕಾನೂನಿನ ಕುಣಿಕೆ ಅಡ್ವಾಣಿಯವರನ್ನೂ ಬಿಡದೇ ಬಾಧಿಸಿತು. ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸುವಲ್ಲಿಯೂ ಇದೇ ಪ್ರಕರಣ ಅವರಿಗೆ ಅಡ್ಡ ಬಂದು ನಿಂತಿತ್ತು ಎನ್ನುವುದನ್ನು ನಾವು ಸ್ಮರಿಸಬಹುದು. ಇಂದು ನರೇಂದ್ರ ಮೋದಿಯವರಿಗೆ ಅಮಿತ್ ಶಾ ಇದ್ದಹಾಗೆ, ಅಂದು ವಾಜಪೇಯಿಯವರಿಗೆ ಅಡ್ವಾಣಿ ಇದ್ದವರು.

ತುರ್ತುಪರಿಸ್ಥಿತಿಯಲ್ಲಿ ಜೈಲು ಸೇರುವುದರಿಂದ ಹಿಡಿದು ಎಲ್ಲ ಸುಖ-ದುಃಖಗಳನ್ನು ವಾಜಪೇಯಿ ಯವರ ಜೊತೆಗೆ ಹಂಚಿಕೊಂಡವರು. ಹಿರಿಯ ಮಿತ್ರ ವಾಜಪೇಯಿಯವರು ಪ್ರಧಾನಿಯಾಗಲು ಏನು ಬೇಕೋ ಎಲ್ಲವನ್ನೂ ಅವರು ಮಾಡಿದ್ದರು. ಆದರೆ ಅಡ್ವಾಣಿಯವರು ಪ್ರಧಾನಮಂತ್ರಿ ಆಗುವುದನ್ನು ನೋಡುವ ಬಹುಜನರ ಕನಸು ಮಾತ್ರ ಹಾಗೆಯೇ ಉಳಿದುಹೋಯಿತು.

2004ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರೆ ಅಡ್ವಾಣಿ ಪ್ರಧಾನಿಯಾಗುತ್ತಿದ್ದರೋ ಏನೋ! ಆದರೆ ಆ ಚುನಾವಣೆಯನ್ನು ಬಿಜೆಪಿ ಸೋತಿತ್ತು. ಹವಾಲಾ ಹಗರಣದಲ್ಲಿ ತಮ್ಮ ಹೆಸರು ಕೇಳಿ ಬಂದ ತಕ್ಷಣ ಎಲ್. ಕೆ.ಅಡ್ವಾಣಿಯವರು ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ತಾವು ನಿರಪರಾಧಿ ಎಂದು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು ಮತ್ತು ಹಾಗೇ ನಡೆದುಕೊಂಡರು ಕೂಡಾ.

ಜೈನ್ ಸಹೋದರರ ಡೈರಿಗಳನ್ನು ಕಾನೂನುಬದ್ಧ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎನ್ನುತ್ತಾ, ಸೂಕ್ತ ಪುರಾವೆಗಳಿಲ್ಲದ ಕಾರಣ ನ್ಯಾಯಾಲಯವು ಅಡ್ವಾಣಿಯವರನ್ನು ಆರೋಪ ಮುಕ್ತಗೊಳಿಸಿತು. ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಿತು. ಹೀಗೆ ನ್ಯಾಯಾಲಯದಿಂದ ಸಂಪೂರ್ಣವಾಗಿ ಆರೋಪ ಮುಕ್ತರಾದ ನಂತರ, ಅಡ್ವಾಣಿಯವರು ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಸಂಸದರಾಗಿ ಆಯ್ಕೆ ಯಾದರು.

2002ರ ಗುಜರಾತ್ ಗಲಭೆಯ ನಂತರ ನರೇಂದ್ರ ಮೋದಿಯವರು ಅಧಿಕಾರದಲ್ಲಿ ಮುಂದುವರೆಯ ಬೇಕೇ ಎಂಬ ಬಗ್ಗೆ ಪ್ರಶ್ನೆಯೆದ್ದಿತ್ತು. ಆ ಸಮಯದಲ್ಲಿ ಅಡ್ವಾಣಿಯವರು ನರೇಂದ್ರ ಮೋದಿಯವರ ನ್ನು ಬಲವಾಗಿ ಬೆಂಬಲಿಸಿದ್ದರು ಮತ್ತು ಅವರನ್ನು ಪದಚ್ಯುತಿಗೊಳಿಸುವಂತೆ ಒತ್ತಡ ಹೆಚ್ಚಾದಾಗ ಮೋದಿಯನ್ನು ಬಲವಂತವಾಗಿ ತೆಗೆದುಹಾಕಿದರೆ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂದು ವರದಿಗಳಾಗಿವೆ.

ಸ್ವತಃ ವಾಜಪೇಯಿ ಅವರು ಮೋದಿಯವರನ್ನು ಅಧಿಕಾರದಿಂದ ತೆಗೆದುಹಾಕಲು ಒಲವು ತೋರಿದ್ದ ರಂತೆ. ರಾಜಧರ್ಮವನ್ನು ಅನುಸರಿಸುವಂತೆ ಮೋದಿಯವರಿಗೆ ಬಹಿರಂಗವಾಗಿ ಹೇಳಿದ್ದರು ಕೂಡಾ. ಅರುಣ್ ಶೌರಿ, ಜಸ್ವಂತ ಸಿಂಗ್ ಮುಂತಾದವರು ಮೋದಿಯವರ ರಾಜೀನಾಮೆ ಪಡೆಯುವ ಪ್ರಸ್ತಾವಕ್ಕೆ ಅಡ್ವಾಣಿಯವರಿಂದ ಸಮ್ಮತಿ ಪಡೆಯುವಂತೆ ವಾಜಪೇಯಿಯವರ ಬೆನ್ನು ಬಿದ್ದಿದ್ದರಂತೆ.

ಗೋವಾದಲ್ಲಿ ನಡೆಯುವ ಕಾರ್ಯಕಾರಿಣಿಯಲ್ಲಿ ಚರ್ಚಿಸೋಣ ಎನ್ನುತ್ತಾ ವಾಜಪೇಯಿಯವರು ಅವರನ್ನೆ ಸಮಾಧಾನ ಮಾಡಿದ್ದರಂತೆ. ಮರುದಿನ ಅಡ್ವಾಣಿ ಹಾಗೂ ವಾಜಪೇಯಿಯವರು ಒಂದೇ ವಿಮಾನದಲ್ಲಿ ಗೋವಾಕ್ಕೆ ಪ್ರಯಾಣ ಮಾಡಿದರು. ಇಬ್ಬರ ಕೈಯ್ಯಲ್ಲಿದ್ದ ಮಾರುದ್ದದ ದಿನಪತ್ರಿಕೆ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣದಂತೆ ತಡೆದಿತ್ತು. ಪ್ರಯಾಣದುದ್ದಕ್ಕೂ ಮಾತಿಲ್ಲ ಕಥೆಯಿಲ್ಲ. ಗೋವಾದ ಕಾರ್ಯಕಾರಿಣಿ ಸಭೆ ಪ್ರಾರಂಭವಾದಾಗ, ಯಾರು ಮತ್ತು ಹೇಗೆ ಮೋದಿಯವರ ರಾಜೀನಾಮೆ ಕೇಳಬೇಕು ಎನ್ನುವುದಕ್ಕೆ ಅವಕಾಶವನ್ನೇ ಕೊಡದೇ, ನರೇಂದ್ರ ಮೋದಿಯವರು ಗುಜರಾತ್ ಪರಿಸ್ಥಿತಿಯ ಬಗ್ಗೆ ವಿವರವಾದ ಭಾಷಣ ಮಾಡಿ, ಕೊನೆಯಲ್ಲಿ ರಾಜ್ಯದ ಮುಖ್ಯಸ್ಥನಾಗಿ ಘಟನೆಗಳ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಘೋಷಿಸಿದರು.

ಕಾರ್ಯಕಾರಿಣಿಯ ಸದಸ್ಯರು ಮತ್ತು ಪದಾಧಿಕಾರಿಗಳು ಮೋದಿಯವರ ಈ ಪ್ರಸ್ತಾವವನ್ನು ಒಕ್ಕೊರಲಿನಿಂದ ವಿರೋಧಿಸಿದರು. ಇದನ್ನೆಲ್ಲ ನೋಡುತ್ತ ಕುಳಿತಿದ್ದ ಅಡ್ವಾಣಿಯವರ ಮುಖದಲ್ಲಿ ಮಂದಹಾಸ ಕಾಣಿಸಿತು. ಮೋದಿಯವರನ್ನು ಉಳಿಸಬೇಕು ಎನ್ನುವ ತಮ್ಮ ಧೃಢನಿರ್ಧಾರಕ್ಕೆ ಪಕ್ಷದ ಪದಾಧಿಕಾರಿಗಳ ಅಭೂತಪೂರ್ವ ಬೆಂಬಲ ದೊರಕಿರುವುದು ಅದಕ್ಕೆ ಕಾರಣವಾಗಿತ್ತು.

ಅಂತಿಮವಾಗಿ, ನರೇಂದ್ರ ಮೋದಿಯವರ ರಾಜೀನಾಮೆ ಪ್ರಸ್ತಾವನೆಯನ್ನು ಪಕ್ಷದ ಕಾರ್ಯಕಾರಿಣಿ ಯು ಸರ್ವಾನುಮತದಿಂದ ತಿರಸ್ಕರಿಸುವ ಮೂಲಕ ಅವರು ಅಧಿಕಾರದಲ್ಲಿ ಮುಂದುವರಿಯು ವಂತೆ ತೀರ್ಮಾನಿಸಿತು. ಸುಮಾರು 24 ವರ್ಷಗಳ ಕೆಳಗೆ ಘಟಿಸಿದ ಘಟನೆ ಇದು. ಅಲ್ಲಿಂದ ಇವತ್ತಿನ ವರೆಗೆ ಗುಜರಾತಿನಲ್ಲಿ ಒಂದೇ ಒಂದು ಕೋಮು ಗಲಭೆ ಸಂಭವಿಸಲಿಲ್ಲ ಎನ್ನುವುದು ಆಕಸ್ಮಿಕ ವಾಗಲಾರದು.

ಅಲ್ಲಿಂದ ಹೊರಟ ಮೋದಿಯವರ ಯಶಸ್ಸಿನ ಪಯಣ ಇವತ್ತಿನ ವರೆಗೆ ಅಬಾಧಿತವಾಗಿ ಸಾಗುತ್ತಲೇ ಇದೆ. ಆದರೆ ಅಂದು ಅಡ್ವಾಣಿಯವರು ಮೋದಿಯವರ ಬೆಂಬಲಕ್ಕೆ ಅಷ್ಟು ಗಟ್ಟಿಯಾಗಿ ನಿಲ್ಲದಿದ್ದರೆ, ಗುಜರಾತಿನ ಧೂಳಿನ ಝಂಝಾವಾತದಲ್ಲಿ ಒಂದು ಕಣವಾಗಿ ಇಷ್ಟೊತ್ತಿಗೆ ಮೋದಿ ಎಲ್ಲಾ ಮಾಯವಾಗಿ ಹೋಗಿಬಿಡುತ್ತಿದ್ದರೇನೋ!

ಹಾಗಾಗಿ, ಮೋದಿ ಭಕ್ತರು ನಿತ್ಯವೂ ಅಡ್ವಾಣಿಯವರನ್ನು ನೆನೆಯಬೇಕು. ಮೋದಿ ಪ್ರಿಯರಿಗೆ ಹಾಗೂ ಸ್ವತಃ ಮೋದಿಯವರಿಗೆ ಲಾಲ್ ಕೃಷ್ಣ ಅಡ್ವಾಣಿಯವರು ನಿಜಾರ್ಥದಲ್ಲಿ ಪ್ರಾತಃಸ್ಮರಣೀಯರು ಎನ್ನಲಡ್ಡಿಯಿಲ್ಲ. ಇವೆಲ್ಲ ಪ್ರಕರಣವಾದ ಮೇಲೆ, ಒಂದು ಸಭೆಯಲ್ಲಿ ಭಾಷಣ ಮಾಡುವಾಗ ಅಡ್ವಾಣಿಯವರು ನರೇಂದ್ರ ಭಾಯಿ ನನ್ನ ಮೇಲೆ ದಯತೋರಿಸಿದ್ದಾರೆ ಎಂದು ಬಿಟ್ಟರು.

ಅಡ್ವಾಣಿಯವರು ಆ ಮಾತನ್ನು ಹಿಂಪಡೆಯಬೇಕು, ನಾನು ಅವರಿಗೆ ದಯತೋರಿಸುವಷ್ಟು ದೊಡ್ಡವನಲ್ಲ ಎಂದು ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ನಿಯಂತ್ರಿಸಲಾಗದೇ ಮೋದಿ ಭಾವುಕರಾಗಿದ್ದರು. ಅವರ ಸಂಬಂಧ ಹಾಗಿತ್ತು. ಗುಜರಾತ್ ಗಲಭೆಯ ಸಂದರ್ಭದಲ್ಲಿ, ಲೋಕವೆ ಮೋದಿಯವರಿಗೆ ಮೌತ್ ಕಾ ಸೌದಾಗರ್- ಸಾವಿನ ವ್ಯಾಪಾರಿ ಪಟ್ಟವನ್ನು ಕಟ್ಟಿದರೂ, ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರು ಎಲ್ಲರನ್ನು ಸಮಾನವಾಗಿ ಕಾಣುವ ರಾಜಧರ್ಮದ ಉಪದೇಶ ಮಾಡುತ್ತಿದ್ದರೂ, ಪಕ್ಷದ ಒಳಗೂ ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯವಿದ್ದರೂ, ಗಲಭೆಯನ್ನು ನಿರ್ವಹಿಸಿದ ರೀತಿಗೆ ಗುಜರಾತಿನಲ್ಲಿ ಮೋದಿಯವರ ಪದಚ್ಯುತಿಯಾಗುವುದನ್ನು ತಡೆದವರಿದ್ದರೆ ಅದು ಲಾಲ್ ಕೃಷ್ಣ ಅಡ್ವಾಣಿ ಮಾತ್ರ ಎನ್ನುವುದು ಮೋದಿಯವರಿಗೂ ಗೊತ್ತಿತ್ತು.

2013ರಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಮೋದಿಯವರನ್ನು ಬಿಂಬಿಸುವಾಗ, ಅಡ್ವಾಣಿ ಯವರಿಗೆ ಪ್ರಧಾನಮಂತ್ರಿಯಾಗುವ ಆಸೆ ಇತ್ತು, ಹಾಗಾಗಿ ಅವರು ಪಕ್ಷದ ಈ ನಿರ್ಣಯವನ್ನು ತಮ್ಮ ಬೆಂಬಲಿಗರ ಮೂಲಕ ವಿರೋಧಿಸಿದ್ದರು ಎಂದು ಹೇಳಲಾಯಿತು. ವಾಸ್ತವಿಕವಾಗಿ, 87 ವರ್ಷದವ ರಾಗಿದ್ದ ಅಡ್ವಾಣಿಯವರಿಗೆ ಆಗ ಪ್ರಧಾನಿಯಾಗುವ ಹುಮ್ಮಸ್ಸಿರಲಿಲ್ಲ.

ಮೋದಿಯವರಿಗೆ ಖಟ್ಟರ್ ಹಿಂದುತ್ವದ ಇಮೇಜ್ ಇರುವುದರಿಂದ, ಅವರನ್ನು ಪ್ರಧಾನಿ ಅಭ್ಯರ್ಥಿ ಅಂತ ಘೋಷಣೆ ಮಾಡಿ ಚುನಾವಣೆಗೆ ಹೋದರೆ ಪಕ್ಷಕ್ಕೆ ಹಿನ್ನಡೆಯಾಗಬಹುದು, ಹಾಗಾಗಿ ಚುನಾವಣಾ ಪೂರ್ವದಲ್ಲಿ ಪ್ರಧಾನಿಯ ಅಭ್ಯರ್ಥಿಯಾಗಿ ಮೋದಿಯವರ ಹೆಸರನ್ನು ಘೋಷಿಸು ವುದು ಬೇಡ ಎನ್ನುವುದು ಅವರ ಅಭಿಪ್ರಾಯವಾಗಿತ್ತು ಅಂತ ಕಾಣುತ್ತೆ. ಅಧಿಕಾರದಲ್ಲಿಲ್ಲದ ಅಡ್ವಾಣಿ ಎಷ್ಟು ಘಟ್ಟಿಗನಾಗಿದ್ದರೋ, ಅಧಿಕಾರದಲ್ಲಿದ್ದಾಗ ಮೆತ್ತಗಾಗಿಬಿಟ್ಟಿದ್ದರು.

ಸೆರೆಯಲ್ಲಿದ್ದ ಭಯೋತ್ಪಾದಕರನ್ನು ಅವರ ಅಧಿಕಾರಾವಧಿಯ ಬಿಟ್ಟುಕೊಡುವ ಪರಿಸ್ಥಿತಿಯೂ ಉಂಟಾಯಿತು. ಮುಂದೆ ತಮ್ಮ ಜನ್ಮಸ್ಥಳವಾದ ಕರಾಚಿಗೆ ಭೇಟಿ ನೀಡಿದ್ದ ಅಡ್ವಾಣಿ ಅವರು, ಮೊಹಮ್ಮದ್ ಅಲಿ ಜಿನ್ನಾ ಅವರ ಸಮಾಧಿಗೆ ಭೇಟಿ ನೀಡಿ, ಜಿನ್ನಾ ಅವರನ್ನು ಜಾತ್ಯತೀತ ನಾಯಕ ಮತ್ತು ಹಿಂದೂ-ಮುಸ್ಲಿಂ ಐಕ್ಯತೆಯ ರಾಯಭಾರಿ ಎಂದು ಬಣ್ಣಿಸಿ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದರು.

ಅಯೋಧ್ಯೆ ರಾಮಜನ್ಮಭೂಮಿ ಚಳವಳಿಯ ಮೂಲಕ ಕಟ್ಟಾ ಹಿಂದುತ್ವದ ಮುಖವಾಗಿ ಗುರುತಿಸಿ ಕೊಂಡಿದ್ದ ಅಡ್ವಾಣಿ ಅವರೇ ಪಾಕಿಸ್ತಾನದ ನೆಲದಲ್ಲಿ ಧರ್ಮದ ಆಧಾರದ ಮೇಲೆ ಪ್ರತ್ಯೇಕ ಪಾಕಿಸ್ತಾನಕ್ಕಾಗಿ ಪಟ್ಟುಹಿಡಿದ ಜಿನ್ನಾ ಅವರನ್ನು ಜಾತ್ಯತೀತ ಎಂದು ಕರೆದಿದ್ದು, ದಶಕಗಳಿಂದ ಸಂಘ ಪರಿವಾರಕ್ಕೆ ಪಥ್ಯವಾಗಲಿಲ್ಲ.

ಅಂದಿನ ಆರ್‌ಎಸ್‌ಎಸ್ ಸರಸಂಘಚಾಲಕ ಕೆ.ಎಸ್. ಸುದರ್ಶನ್ ಸೇರಿದಂತೆ ಅನೇಕ ನಾಯಕರು ಇದನ್ನು ಬಹಿರಂಗವಾಗಿ ಖಂಡಿಸಿದರು. ಸಂಘ ಪರಿವಾರ ಮತ್ತು ಸ್ವಪಕ್ಷೀಯರ ತೀವ್ರ ವಿರೋಧ ದಿಂದಾಗಿ ಅಡ್ವಾಣಿ ಅವರು ರಾಷ್ಟ್ರೀಯ ಪಕ್ಷಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಕರಾಚಿಯ ಈ ಒಂದು ಘಟನೆಯು ಅಡ್ವಾಣಿ ಅವರ ರಾಜಕೀಯ ಜೀವನದ ದಿಕ್ಕನ್ನೇ ಬದಲಿಸಿತು.

ನರೇಂದ್ರ ಮೋದಿ, ನಮ್ಮ ಅನಂತ ಕುಮಾರರಂಥಾ ನೂರಾರು ಯುವಕರನ್ನು ಕಟ್ಟಿಕೊಂಡು ರಥಯಾತ್ರೆ ಮಾಡಿ ರಾಮ ಮಂದಿರ ನಿರ್ಮಾಣಕ್ಕೆ ಆಧಾರಶಿಲೆ ಇಟ್ಟು, ಸಮಗ್ರ ಹಿಂದೂ ಸಮಾಜವನ್ನು ಒಗ್ಗೂಡಿಸಿದ್ದ ಅಡ್ವಾಣಿಯವರು, ಮಂದಿರದ ಶಿಲಾನ್ಯಾಸ, ಲೋಕಾರ್ಪಣೆ, ಧ್ವಜಾರೋಹಣ ಮುಂತಾಗಿ ಯಾವ ಕಾರ್ಯಕ್ರಮದಲ್ಲೂ ಹಾಜರಾಗದಿರುವುದು, ತಾಂತ್ರಿಕ ಕಾರಣಗಳಿಂದಾಗಿ ರಾಷ್ಟ್ರಪತಿಗಳನ್ನಾಗಿ ಮಾಡದಿರುವುದು, ಅಡ್ವಾಣಿ ಅಭಿಮಾನಿಗಳಿಗೆ ಈಗಲೂ ಜೀರ್ಣಮಾಡಿಕೊಳ್ಳಲಾದ ಸಂಗತಿ. ಅವರಿಗೆ ದೇಶದ ಸರ್ವೋನ್ನತ ನಾಗರಿಕ ಪ್ರಶಸ್ತಿ ‘ಭಾರತರತ್ನ’ ಕೊಡಮಾಡಿರುವುದು ಅಭಿಮಾನಿಗಳ ನೋವಿಗೆ ಸ್ವಲ್ಪವಾದರೂ ಆರೈಕೆ ಮಾಡಿದಂತಾಗಿದೆ ಎನ್ನಬಹುದು.

‘ಅಂಧೇರಾ ಛೂಟೇಗಾ, ಸೂರಜ್ ನಿಕ್ಲೇಗಾ, ಏಕ್ ದಿನ್ ಕಮಲ್ ಖಿಲೇಗಾ’ ಎನ್ನುವುದು, ಭಾರತದ ರಾಜಕೀಯ ಭೂಪಟದಲ್ಲಿ ಪಕ್ಷ ನಗಣ್ಯವಾಗಿದ್ದ ಎಂಬತ್ತರ ದಶಕದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರಾಡಿದ ಮಾತು. ಬಿಜೆಪಿಯ ಕೇವಲ ಎರಡು ಸಂಸದರು ಮಾತ್ರ ಇದ್ದ ಕಾಲ ಅದಾಗಿತ್ತು. ಇವರ ಪಾಡನ್ನು ನೋಡಿ ಇತರ ಬಲಿಷ್ಠ ಪಕ್ಷಗಳು ಆಡಿಕೊಳ್ಳುತ್ತಿದ್ದ ಕಾಲ. ಇಂದು ಶೇಕಡಾ 70 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆ.

ಕೇಂದ್ರದಲ್ಲಿ ಸತತ ಮೂರನೇ ಅವಧಿಯಲ್ಲಿ ನರೇಂದ್ರ ಮೋದಿಯವರ ಸರಕಾರ ಮುನ್ನುಗ್ಗುತ್ತಿದೆ. ಪಕ್ಷದ ಸದ್ಯೋಭವಿಷ್ಯವೂ ಉಜ್ವಲವಾಗಿಯೇ ತೋರುತ್ತಿದೆ. ಪಕ್ಷದ ಇವೆಲ್ಲ ಸಾಧನೆಗೆ ನೂರಾರು ನಾಯಕರು ತಮ್ಮ ಜೀವನವನ್ನು ತೇಯ್ದಿದ್ದಾರೆ ಎನ್ನುವುದರಲ್ಲಿ ವಿವಾದವಿಲ್ಲ. ಆದರೂ, ಭಾರತೀಯ ಜನತಾ ಪಕ್ಷದ ಸರ್ವೋತ್ಕರ್ಷಕ್ಕೆ ಪ್ರಧಾನವಾಗಿ ಒಬ್ಬರ ಹೆಸರು ಹೇಳಿ ಅಂತ ಕೇಳಿದರೆ, ನಿರ್ವಿವಾದವಾಗಿ ಲಾಲ್ ಕೃಷ್ಣ ಅಡ್ವಾಣಿಯವರ ಹೆಸರನ್ನೇ ಸರ್ವಪ್ರಥಮವಾಗಿ ಹೇಳಬೇಕಾಗು ತ್ತದೆ.

ವಿನಾಯಕ ವೆಂ ಭಟ್ಟ

View all posts by this author