ಶಿಶಿರಕಾಲ
ವಿಕಸನದ ಲಕ್ಷಾಂತರ ವರ್ಷ ನಾವು ಕಾಡು, ವನ್ಯಮೃಗಗಳ ಸಾಮೀಪ್ಯದಲ್ಲಿ ಬದುಕುತ್ತಿದ್ದು ದರಿಂದ ನಮ್ಮ ಇಡೀ ದೇಹ ವ್ಯವಸ್ಥೆ, ಮಿದುಳು ಮತ್ತು ಮನಸ್ಸಿನ ಅಪಾಯವನ್ನು ನಿರಂತರ ಗ್ರಹಿಸುವ ಅಭ್ಯಾಸ ಮಾಡಿಕೊಂಡಿದೆ. ಈ ಗುಣ ನಮ್ಮ ನಿಮ್ಮೆಲ್ಲರಲ್ಲಿಯೂ ಇದ್ದೇ ಇದೆ. ಮರಗಿಡಗಳ ಮಧ್ಯೆ ಚಿಕ್ಕ ತರಗೆಲೆ ಸರಿದ ಶಬ್ದದ ಹಿಂದೆ ಇಣಚಿಯ ಮರಿಯೂ ಇರಬಹುದು ಅಥವಾ ಹುಲಿಯೂ ಇರಬಹುದು.
ಒಮ್ಮೆ ಕೃಷ್ಣನನ್ನು ನೋಡಲು ಪರ ಊರಿನ ಕೆಲವರು ಬಂದಿದ್ದರಂತೆ. ಕೃಷ್ಣ ಅಲ್ಲಿರಲಿಲ್ಲ, ಆದರೆ ಅವನ ಕೊಳಲು ಮಾತ್ರ ಪಡಸಾಲೆಯ ಮೂಲೆಯಲ್ಲಿತ್ತು. ಸಾಮಾನ್ಯವಾಗಿ ಕೊಳಲಿಲ್ಲದೆ ಕೃಷ್ಣ ಎಲ್ಲಿಯೂ ಹೊರಡುವವನಲ್ಲ, ಹೀಗಾಗಿ ಅವನು ಮನೆಯೊಳಗೇ ಇರಬೇಕೆಂದು ಅವರೆಲ್ಲ ಕಾದು ಕುಳಿತರು. ಆಗ ಅವರಲ್ಲೊಬ್ಬನು ಕೃಷ್ಣನ ಕೊಳಲನ್ನು ಉದ್ದೇಶಿಸಿ, “ಹೇ ಕೊಳಲೇ, ನಿನ್ನಂದು ಪ್ರಶ್ನೆ ಯಿದೆ. ಕೇಳಬಹುದೇ?" ಎಂದ. ಕೊಳಲು “ಆಯ್ತು, ಕೇಳು" ಎಂದಿತು.
“ಕೃಷ್ಣನೋ ಪರಮಾತ್ಮ, ಆತನ ಸ್ಪರ್ಶವೇ ನಮ್ಮ ಬದುಕನ್ನು ಪಾವನವಾಗಿಸಬಲ್ಲದು. ಆದರೆ ಅದು ಎಲ್ಲರಿಗೂ ಸಿಗುವ ಭಾಗ್ಯವಲ್ಲ. ಹೀಗಿರುವಾಗ, ನೀನು ಕೊಳಲು. ಕೃಷ್ಣ ನಿತ್ಯ ನಿನ್ನನ್ನು ಚುಂಬಿಸುತ್ತಾನೆ. ನಿನ್ನಲ್ಲಿ ಅಂಥದ್ದೇನಿದೆ?" ಎಂದ ಆತ. ಕೊಳಲು ಸಮಾಧಾನದಲ್ಲಿ “ನನ್ನೊಳಗೆ ಏನೂ ಇಲ್ಲ. ನಾನೂ ಖಾಲಿ, ನನ್ನ ಮನಸ್ಸೂ ಖಾಲಿ. ಹಾಗಾಗಿಯೇ ಪರಮಾತ್ಮ ನನ್ನನ್ನು ನಿತ್ಯ ಚುಂಬಿಸುತ್ತಾನೆ" ಎಂದು ಹೇಳಿತಂತೆ.
ಈ ಕಥೆ ಮೂಲಕಾವ್ಯದಲ್ಲಿ ಎಲ್ಲೂ ಇಲ್ಲ. ಆದರೆ ನಮ್ಮ ಆಂತರ್ಯ, ಮನಸ್ಸು ಖಾಲಿಯಾದಾಗ ಭಗವತ್ ಸಾಕ್ಷಾತ್ಕಾರವಾಗುತ್ತದೆ ಎಂಬುದಷ್ಟೇ ಇಲ್ಲಿ ಸೂಚ್ಯ. ವಿಜ್ಞಾನಕ್ಕೆ ಸಂಬಂಧಿಸಿದ ಕೆಲ ವೊಂದಿಷ್ಟು ಸುಳ್ಳುಗಳು ಬಹಳಕಾಲ ಪ್ರಚಲಿತದಲ್ಲಿದ್ದುಬಿಡುತ್ತವೆ. ಉದಾಹರಣೆಗೆ ನಮ್ಮ ಮಿದುಳಿನ ಶೇ.10ರಷ್ಟು ಮಾತ್ರ ಬಳಸಲ್ಪಡುತ್ತದೆ ಇತ್ಯಾದಿ.
ಇದನ್ನೂ ಓದಿ: Shishir Hegde Column: ನಾವೇಕೆ ಎಲ್ಲದಕ್ಕೂ ಈ ಪರಿ ಹೆಸರಿಡುತ್ತೇವೆ ?
ಇಂಥ ಶುದ್ಧ ಸುಳ್ಳುಗಳು ಅದು ಹೇಗೋ ಜೀವ ಪಡೆದು ಬಿಡುತ್ತವೆ. ಆನಂತರ ಎಲ್ಲರೂ ಅದನ್ನೇ ಹೇಳಿಕೊಂಡು ತಿರುಗುತ್ತೇವೆ, ಜೀವಂತವಿಡುತ್ತೇವೆ. ಅಂಥದ್ದೇ ಇನ್ನೊಂದು ನಮ್ಮ ಯೋಚನೆಗಳ ಸಂಖ್ಯೆಗೆ ಸಂಬಂಧಿಸಿದ್ದು. ಮೊನ್ನೆ ಕನ್ನಡದ ಪ್ರಸಿದ್ಧ ವಾಗ್ಮಿಯೊಬ್ಬರ ಭಾಷಣ ಕೇಳುತ್ತಿದ್ದೆ.
“ಮನುಷ್ಯ ಸರಾಸರಿ ಹನ್ನೊಂದರಿಂದ ಹನ್ನೆರಡು ಸಾವಿರ ಯೋಚನೆಗಳನ್ನು ನಿತ್ಯ ಮಾಡುತ್ತಾನೆ. ಅಷ್ಟು ವಿಚಾರಗಳನ್ನು ಮಿದುಳು ಸಂಸ್ಕರಿಸುತ್ತದೆ" ಎಂದು ಅವರು ಹೇಳುತ್ತಿದ್ದರು. ಆದರೆ ನಾವೇ ಲೆಕ್ಕಹಾಕುವುದಾದರೆ, ನಿಮಿಷಕ್ಕೆ ಸರಾಸರಿ ೫ ಯೋಚನೆಗಳು ಎಂದರೂ 16 ತಾಸು ಎಚ್ಚರಿದ್ದರೆ, ಸುಮಾರು 4800 ಯೋಚನೆಗಳು ಬರಬಹುದು. ನಿಮಿಷಕ್ಕೆ ಇದಕ್ಕಿಂತ ಹೆಚ್ಚಿನ ಸಂಖ್ಯೆಯ ವಿಚಾರ ಗಳು ಮೂಡುತ್ತವೆ ಎಂದರೆ ಅಂಥವರ ಮಂಡೆ ಅಥವಾ ಬದುಕು ಸಾಮಾನ್ಯವಲ್ಲ.
ಈ ರೀತಿ ಬರುವ ನಾಲ್ಕೈದು ಸಾವಿರ ಯೋಚನೆಗಳಲ್ಲಿಯೂ ಅದೆಷ್ಟೋ ಯೋಚನೆಗಳು ಮರು ಕಳಿಸುತ್ತವೆ ಇತ್ಯಾದಿ. ಈ ಯೋಚನೆಗಳು, ಅವು ಮರುಕಳಿಸುವ ರೀತಿ ಇತ್ಯಾದಿ ಎಲ್ಲವೂ ಸೇರಿ ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿ ನಿರ್ಮಾಣವಾಗಿರುತ್ತದೆ ಅಲ್ಲವೇ? ಮಾನಸಿಕ ಸ್ಥಿತಿ ಎಂದರೇ ಯೋಚಿಸುವ ರೀತಿ. ಅದು ಸರಿಯಿಲ್ಲದಿದ್ದಲ್ಲಿ ಮನುಷ್ಯ ಸಂತೆಯಲ್ಲಿಯೂ ಒಂಟಿಯಾಗುತ್ತಾನೆ, ಖಿನ್ನನಾಗುತ್ತಾನೆ.
ಕ್ರಮೇಣ ಯೋಚನೆಗಳೇ ವ್ಯಕ್ತಿಯನ್ನು ಮುಕ್ಕಿ ತಿಂದು ಭಿನ್ನನಾಗುತ್ತಾನೆ. ಅದರ ಲಕ್ಷಣಕ್ಕನು ಗುಣವಾಗಿ ಒಂದೊಂದು ಮಾನಸಿಕ ರೋಗವೆಂದು ಹೆಸರಿಟ್ಟರೂ ಮೂಲದಲ್ಲಿರುವ ಸಮಸ್ಯೆ ಯೋಚನಾ ರೀತಿಯದು. ಎಲ್ಲರನ್ನೂ ಅರಿವಿಲ್ಲದೆ ಬಾಧಿಸುವ ಅತಿಯಾದ ಯೋಚನೆಯದು. ಅತಿಯಾಗಿ ಯೋಚಿಸುವುದೆಂದರೆ ಹೆಚ್ಚಿನ ಸಂಖ್ಯೆಯ ಯೋಚನೆಗಳು ಎಂದಲ್ಲ. ಬದಲಿಗೆ ಅತಾರ್ಕಿಕ, ಕಲ್ಪನಾ ವಿಚಾರಗಳ ಸುಳಿಯದ್ದು. ಅತಿಯೋಚನೆಯದ್ದು.
ಅತಿಯೋಚನೆ ಸ್ಮಾರ್ಟ್ ಫೋನ್ ಕಾಲದಲ್ಲಿ ಹುಟ್ಟಿದ್ದಲ್ಲ. ವಿಕಸನದ ಲಕ್ಷಾಂತರ ವರ್ಷ ನಾವು ಕಾಡು, ವನ್ಯಮೃಗಗಳ ಸಾಮೀಪ್ಯದಲ್ಲಿ ಬದುಕುತ್ತಿದ್ದುದರಿಂದ ನಮ್ಮ ಇಡೀ ದೇಹ ವ್ಯವಸ್ಥೆ, ಮಿದುಳು ಮತ್ತು ಮನಸ್ಸಿನ ಅಪಾಯವನ್ನು ನಿರಂತರ ಗ್ರಹಿಸುವ ಅಭ್ಯಾಸ ಮಾಡಿಕೊಂಡಿದೆ.
ಈ ಗುಣ ಅಷ್ಟು ಹಳೆಯದು. ನಮ್ಮ ನಿಮ್ಮೆಲ್ಲರಲ್ಲಿಯೂ ಇದ್ದೇ ಇದೆ. ಮರಗಿಡಗಳ ಮಧ್ಯೆ ಚಿಕ್ಕ ತರಗೆಲೆ ಸರಿದ ಶಬ್ದದ ಹಿಂದೆ ಇಣಚಿಯ ಮರಿಯೂ ಇರಬಹುದು ಅಥವಾ ಹುಲಿಯೂ ಇರಬಹುದು. ಆತಂಕ, ಹೆದರಿಕೆ ಇವೆಲ್ಲ ತಕ್ಷಣಕ್ಕೆ ಹೃದಯಬಡಿತ ಹೆಚ್ಚಿಸುತ್ತವೆ. ಒಟ್ಟಾರೆ ದೇಹ, ಮನಸ್ಸು ಆತ್ಮರಕ್ಷಣೆಗೆ ಸಂಪೂರ್ಣ ಸನ್ನದ್ಧವಾಗುತ್ತವೆ.
ಪೊದೆಯ ಹಿಂದಿದ್ದದ್ದು ಇಣಚಿಯೋ ಅಥವಾ ಹುಲಿಯೋ ಎಂದು ತಿಳಿಯುವುದು ಆಮೇಲೆ. ಎರಡಕ್ಕೂ ತಯಾರಿ ಮಾತ್ರ ಒಂದೇ. ವಿಷಯ ಚಿಕ್ಕದೇ ಇದ್ದರೂ ಅದು ಏನೆಂದು ತಿಳಿಯು ವವರೆಗೂ ನಮ್ಮ ಇಡೀ ದೇಹ ವ್ಯವಸ್ಥೆಯ ಆತಂಕ ಜಾಗ್ರತೆಯಲ್ಲಿರುತ್ತದೆ. ಇಲ್ಲ ಅತಿಯೋಚನೆ ಬದುಕು-ಸಾವಿನ ಪ್ರಶ್ನೆ. ಆ ಎಲ್ಲದನ್ನೂ ಆತಂಕದಲ್ಲಿ ನೋಡುವ ಗುಣವಿಲ್ಲದಿದ್ದರೆ ನಾವೆಂದೋ ನಶಿಸಿಹೋಗಿ ಬಿಡುತ್ತಿದ್ದೆವು. ಆದರೆ ಇಂದಿನ ನಮ್ಮ ಅತಿಯೋಚನೆಗಳು ಯಾವ ರೀತಿಯವು? ನಮ್ಮ ನಿಮ್ಮೆಲ್ಲರ ಅನುಭವ ಒಂದನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ.
ನಾವೆಲ್ಲರೂ ವಾಟ್ಸ್ ಆಪ್ ಬಳಸುತ್ತೇವೆ. ಅದರಲ್ಲಿ ನಾವು ಕಳುಹಿಸಿದ ಸಂದೇಶ ಹೊರ ಹೋದರೆ ಒಂದು ಟಿಕ್ ಮಾರ್ಕ್ (ಸರಿ ಗುರುತು). ಅವರಿಗೆ ತಲುಪಿದರೆ ಎರಡು ಟಿಕ್ ಮಾರ್ಕ್ ಮತ್ತು ಅದನ್ನು ಅವರು ಓದಿದರೆ ಆ ಎರಡು ಟಿಕ್ ಮಾರ್ಕ್ ನೀಲಿ ಬಣ್ಣಕ್ಕೆ ತಿರುಗುತ್ತವೆ ಅಲ್ಲವೇ? ನೀವೇನೋ ಒಂದು ಸಂದೇಶ ಕಳುಹಿಸಿರುತ್ತೀರಿ, ಅತ್ತ ಕಡೆ ಆ ವ್ಯಕ್ತಿ ಆ ಸಂದೇಶವನ್ನು ಓದಿದ್ದು ನೀಲಿ ಗುರುತಿ ನಿಂದ ತಿಳಿಯುತ್ತದೆ. ಆದರೆ ಓದಿಯೂ ಉತ್ತರಿಸದಿದ್ದರೆ? ಆ ಕ್ಷಣದಲ್ಲಿ ನಮ್ಮ ಯೋಚನೆಗಳು ಶುರುವಾಗುತ್ತವೆ. ‘ನಾನೇನಾದರೂ ತಪ್ಪು ಸಂದೇಶ ಕಳುಹಿಸಿದೇನಾ? ಆ ವ್ಯಕ್ತಿಗೆ ನನ್ನಿಂದ ಏನಾದರೂ ಬೇಜಾರಾಗಿ ದೆಯಾ? ಅಥವಾ ಅಲಕ್ಷ್ಯವೇ?’. ನಮ್ಮ ಇಡೀ ವ್ಯವಸ್ಥೆ ಅದಕ್ಕೆ ಪ್ರತಿಕ್ರಿಯಿ ಸುವ ರೀತಿ ಮಾತ್ರ ಅದೇ ಸಾವಿರಾರು ವರ್ಷದ ಹಿಂದಿನ ತರಗೆಲೆಯ ಶಬ್ದಕ್ಕೆ ಪ್ರತಿಕ್ರಿಯಿಸಿದಂತೆ. ಮೊದಲು ಆತಂಕ, ಆಮೇಲೆ ಯೋಚನೆಗಳು, ಕಲ್ಪನೆಗಳು. ತೀರಾ ಚಿಕ್ಕಪುಟ್ಟ ವಿಚಾರಗಳನ್ನು ಹಿಂದಿನ ಅನುಭವಕ್ಕೆ ತಾಳೆ ಹಾಕಿ ಹೀಗೆಯೇ ಎಂದು ಯೋಚಿಸುವುದನ್ನು ವಿಜ್ಞಾನಿಗಳು pattern recognition ಎನ್ನುತ್ತಾರೆ.
ಇಂತಿಂಥ ಅನುಭವಕ್ಕೆ ಇಂತಿಂಥ ಕಾರಣಗಳು ಎಂಬ ಹಿಂದಾದ ಅನುಭವದ ಮೇಲಿನ ಲೆಕ್ಕಾಚಾರ. ಆರಾಮಾಗಿದ್ದ ಮನಸ್ಸು ಕೆಲವೇ ಕ್ಷಣಗಳಲ್ಲಿ ತನ್ನೊಳಗೇ ನೀನಾಸಂ ನಾಟಕರಂಗವನ್ನೇ ನಿರ್ಮಿಸಿ ಕೂತುಬಿಡುತ್ತದೆ. ಕೆಲವೇ ಕೆಲವರಿಗೆ, ಪ್ರeವಂತರಿಗೆ ಮಾತ್ರ ‘ನಾನು ಅತಿಯಾಗಿ ಯೋಚಿಸುತ್ತೇನೆ’ ಎಂಬ ಅರಿವಾಗುತ್ತದೆ.
ಎಲ್ಲರಲ್ಲೂ ಅತಿಯೋಚನೆಯ ‘ಚಿತ್ತವೃತ್ತಿ’ ಒಂದು ರೀತಿಯ ನಿಯಂತ್ರಣದ ಭ್ರಮೆಯನ್ನು ಸೃಷ್ಟಿಸು ತ್ತದೆ. ಅಂಥವರಿಗೆ ಅತಿಯೋಚಿಸದಿದ್ದರೆ ಏನೋ ಒಂದು ತಪ್ಪಿದಂತೆ. ಏನೋ ಒಂದು ಅಪರಾಧ ಮಾಡಿದಂತೆ. ಏಕೆಂದರೆ ಯೋಚಿಸುವುದೆಂದರೆ ಅದೊಂದು ಜವಾಬ್ದಾರಿಯೆಂಬ ಗ್ರಹಿಕೆ ಹಾಗೆಯೇ ಇದೆ. ಹಾಗಾಗಿ ಅತಿಯೋಚನೆ ಮನಸ್ಸಿನ ಹೊರ ನಿಂತು ಗ್ರಹಿಸದಿದ್ದಲ್ಲಿ ಯಾವತ್ತೂ ಅತಿಯೆನಿಸುವು ದಿಲ್ಲ.
ಬದಲಿಗೆ ಸಮಾಧಾನಕ್ಕೆ, ಬದುಕಬೇಕೆಂದರೆ ಇದು ಅವಶ್ಯಕತೆಯೆಂದಷ್ಟೇ ನಂಬಿಕೊಂಡಿರುತ್ತೇವೆ. ನಾವು ಯಾವುದನ್ನೇ ಅತಿಯೋಚಿಸುವುದು ಏಕೆ? ಎಲ್ಲರಲ್ಲೂ ಅನಿಶ್ಚಿತತೆ, ಸಂದಿಗ್ಧತೆ, ನಿರ್ಧಾರಿತ ವಿಚಾರಗಳೆಂದರೆ ಒಂದು ಭಯ. ಇದು ಕೂಡ ಪರಂಪರಾಗತ ಗುಣವೇ. ಭಯ ಅಥವಾ ಆತಂಕಕ್ಕೆ ಅನಿಶ್ಚಿತತೆಯೇ ನೇರ ಮತ್ತು ಏಕ ಕಾರಣ. ಬದುಕಿನ ಯಾವುದೇ ಆತಂಕದ ಉದಾಹರಣೆಯನ್ನೇ ತೆಗೆದುಕೊಳ್ಳಿ.
ನಮ್ಮ ಮನಸ್ಸು ಹೇಗೆಂದರೆ ಯಾವುದೇ ಆತಂಕ-ಭಯವೇ ಇಲ್ಲವೆಂದಾದಾಗ ತಾನೇ ಕಲ್ಪಿಸಿ ಕೊಳ್ಳುತ್ತದೆ, ಸೃಷ್ಟಿಸಿಕೊಳ್ಳುತ್ತದೆ. ಮನಸ್ಸು ತಪ್ಪು ವ್ಯಾಖ್ಯಾನಿಸುವುದನ್ನು ಹೆಚ್ಚು ಸುಖಿಸುತ್ತದೆ. ಆತಂಕದಲ್ಲಿದ್ದಾಗ ಬಂದ ಯೋಚನೆಗಳನ್ನು ನೆನಪಿಸಿಕೊಂಡು ಇದನ್ನು ಗ್ರಹಿಸಬಹುದು. ಮನಸ್ಸಿಗೆ ಏನೋ ಒಂದು ರಹಸ್ಯವನ್ನು ಭೇದಿಸುವುದು ಎಂದರೆ ಎಲ್ಲಿಲ್ಲದ ಖುಷಿ.
ಮನಸ್ಸು ಷೆರ್ಲಾಕ್ ಹೋಮ್ಸ್ʼನಂತೆ. ಇದಕ್ಕೆ ಭೇದಿಸಲಿಕ್ಕೊಂಡು ರಹಸ್ಯ ಬೇಕು. ಇನ್ನೊಬ್ಬರು ಏನಂದುಕೊಳ್ಳುತ್ತಾರೆ ಎಂಬ ಕಲ್ಪನೆ, ತನ್ನೊಳಗೆ ವಾದ-ಪ್ರತಿವಾದ, ‘ಹೀಗಾದರೆ, ಹೀಗೆಂದರೆ ಹಾಗೆ’ ಎಂಬ ಲೆಕ್ಕಾಚಾರಗಳು, ಮುಖದಲ್ಲಿನ ಈ ನೆರಿಗೆ ಇಂಥ ಭಾವನೆ ಎಂದೆಲ್ಲ ಗುರುತಿಸುವುದು. ಮನಸ್ಸು ಅವುದ್ದೀನನ ದೆವ್ವದಂತೆ- ನಿರಂತರ ಒಂದಾದ ಮೇಲೆ ಇನ್ನೊಂದು ಕೆಲಸ ಬೇಕು.
ಹಾಗಾದರೆ ಹಗುರಾಗುವುದು ಹೇಗೆ? ಪರಿಹಾರ ನೇರ ಮತ್ತು ಅತ್ಯಂತ ಸುಲಭ. ನಮ್ಮದೇ ಮನಸ್ಸಿನ ವೃತ್ತಿಯನ್ನು ನಾವೇ ನೋಡಿಕೊಳ್ಳುವುದು. ನಾನೇನು ಇಲ್ಲಿ ಧ್ಯಾನ, ಯೋಗ, ಪತಂಜಲಿ ಇತ್ಯಾದಿಯ ಬಗ್ಗೆ ಹೇಳುತ್ತಿಲ್ಲ. ಮಾಡಬೇಕಾದದ್ದು ಒಂದು ಚಿಕ್ಕ ಕೆಲಸ. ಅನಿಶ್ಚಿತತೆ ಮತ್ತು ಆತಂಕ ಚಿಕ್ಕದಿರಲಿ, ದೊಡ್ಡದಿರಲಿ ನಮ್ಮ ಯೋಚನಾ ಲಹರಿಯನ್ನು ಒಂದು ಕ್ಷಣ ಹೊರ ನಿಂತು ನಾವೇ ಗಮನಿಸುವ ಕ್ರಿಯೆ.
ನಾವೇ ಗ್ರಹಿಸುವುದು ಎಂದರೆ ಓಶೋ ರಜನೀಶ್ ಹೇಳುವಂತೆ ಥಿಯೇಟರ್‌ನಲ್ಲಿ ಕೂತು ಸಿನಿಮಾ ನೋಡಿದಂತೆ, ಪಾತ್ರಧಾರಿಯಾಗದೆ ವೀಕ್ಷಿಸುವುದು. ನಮ್ಮಿಂದ ಮನಸ್ಸನ್ನು ಪ್ರತ್ಯೇಕಿಸಿ ನೋಡುವ ಸಾಕ್ಷೀಭಾವ. ಇದು ಕೂಡ ಒಂದು ಯೋಚನೆಯೇ. ಹಾಗೆ ನೋಡಲು ಅಂಥ ಸ್ಥಿತಿಯಲ್ಲಿ ಅದು ನೆನಪಾಗಬೇಕು ಮತ್ತು ಕ್ರಮೇಣ ಅದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದಕ್ಕೆ ಧ್ಯಾನ, ಯೋಗ ಸಹಾಯಕ. ಆದರೆ ಇದೆಲ್ಲದಕ್ಕೂ ಧ್ಯಾನವೇ ಮಾಡಬೇಕು, ಯೋಗಿಯೇ ಆಗಬೇಕು ಎಂದೆಲ್ಲ ಇಲ್ಲ. ಒಂದು ಪ್ರಾಮಾಣಿಕ ಪ್ರಯತ್ನದಿಂದ ಸುಲಭ-ಸಾಧ್ಯ.
Meta-cognition ಇಂದಿನ ಮನಶಾಸ್ತ್ರದ ಜನಜನಿತ ಶಬ್ದ (buzzword). ನಮ್ಮದೇ ಯೋಚನೆಯ ಕುರಿತು ಯೋಚಿಸುವುದು. ಈ ಯೋಚನೆಯ ಕೆಲಸವನ್ನು ಅದೇ ಮನಸ್ಸಿಗೆ ಕೊಡುವುದು. ತಕ್ಷಣ ಅದೆಂಥದೇ ಆತಂಕವಿದ್ದರೂ ಅದು ತ್ರಾಣ ಕಳೆದುಕೊಳ್ಳಲು ಶುರುವಾಗುತ್ತದೆ. ಅದು ಕೂಡ ಚಿತ್ತ ವೃತ್ತಿಯ ಪರಿಣಾಮವೇ. ಹಾಗೆ ಯೋಚಿಸಿದಾಕ್ಷಣ ನಮ್ಮ ಮನಸ್ಸಿಗೆ ಹೊಸತೊಂದು ಕೆಲಸ, ರಹಸ್ಯ ಭೇದಿಸಲು ಕೆಲಸ ಹಚ್ಚಿದಂತಾಗುತ್ತದೆ.
ಆತಂಕ, ಭಯದ ಮೂಲ ತಿಳಿದಂತೆ ಅವಸರ ಕಡಿಮೆಯಾಗುತ್ತದೆ. ಆಗ ಮಾತ್ರ ನಮ್ಮ ಬಹುತೇಕ ಮಾನಸಿಕ ಬಿಕ್ಕಟ್ಟುಗಳಿಗೆ ನಮ್ಮ ಕಲ್ಪನೆಯೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಯೋಚನೆಗಳನ್ನು ಸುಮ್ಮನೆ ನೋಡಿದಲ್ಲಿ ಅವು ತನ್ನೆಲ್ಲ ಶಕ್ತಿಯನ್ನು ಕಳೆದುಕೊಂಡು ಬಿಡುತ್ತವೆ. ಯೋಚನೆ, ಕಲ್ಪನೆ ಯಾವುದೇ ಇರಬಹುದು. ದಿಟ್ಟಿಸಿ ನೋಡುತ್ತಿದ್ದಂತೆ ಮನಸ್ಸಿನೊಳಗಿನ ಷರ್ಲಾಕ್ ಹೋಮ್ಸ್ ರಹಸ್ಯ ಭೇದಿಸುವುದನ್ನು ನಿಲ್ಲಿಸಿಬಿಡುತ್ತಾನೆ.
ಯಾವುದೇ ಮಹತ್ವದ ವಿಚಾರವನ್ನು ಹೆಚ್ಚಿಗೆ ಯೋಚಿಸುವುದು, ಪರಾಂಬರಿಸಿ ನಡೆಯುವುದು ಅವಶ್ಯಕತೆ. ಆದರೆ ನಾವು ಇಂದು ತಲೆ ಕೆಡಿಸಿಕೊಳ್ಳುವುದು ಬಹುತೇಕ ಖಾಲಿ ಪುಕ್ಸಟ್ಟೆ ಕಾರಣಗಳಿಗೆ. ದೊಡ್ಡ, ಅವಶ್ಯ ವಿಷಯಗಳ ಬಗ್ಗೆ ನಾವೆಂದೂ ಜಾಸ್ತಿ ಯೋಚಿಸುವುದಿಲ್ಲ.
ನಿತ್ಯ ಬದುಕಿನಲ್ಲಿ ಅದೆಷ್ಟೋ ವಿಚಾರಗಳಲ್ಲಿ ಅತಿಯಾಗಿ ಯೋಚಿಸಬೇಕಾಗಿಯೇ ಇರುವುದಿಲ್ಲ. ಆದರೂ ಬೆಟ್ಟ ತಲೆಮೇಲೆ ಹೊತ್ತಂತೆ ಆಡುತ್ತಿರುತ್ತೇವೆ. ಕಂಡಕಂಡದ್ದರಲ್ಲ ದೊಡ್ಡ ಅಪಾಯ ಗ್ರಹಿಸಲು ಮುಂದಾಗುತ್ತೇವೆ. ಹೆಚ್ಚಿನವರನ್ನು ಹೆಚ್ಚು ಕಾಡುವುದು ಯಾವತ್ತೂ ಚಿಲ್ಲರೆ ಪಲ್ಲರೆ- ಯಾರೋ ಮೆಸೇಜಿಗೆ ಉತ್ತರಿಸಿಲ್ಲ, ಯಾರೋ ಸರಿಯಾಗಿ ಮಾತನಾಡಿಸಲಿಲ್ಲ ಇತ್ಯಾದಿ.
ಅದರಲ್ಲಿ ಅಗ್ರಗಣ್ಯ- ಇನ್ನೊಬ್ಬರು ಏನಂದುಕೊಳ್ಳುತ್ತಾರೆ ಎಂಬ ಪ್ರಶ್ನೆ. ಇದು ಎಲ್ಲರನ್ನೂ ಎಲ್ಲ ಕಾಲದಲ್ಲೂ ಕಾಡುವ ವಿಚಾರ. ಇದನ್ನು ಮೀರಲು ಮಾತ್ರ ಒಂದಿಷ್ಟು ದಾಡಶೀತನ ಬೇಕು. ದಾಢಸೀತನ ಎಂದರೆ ಇನ್ನೊಬ್ಬರೆಡೆಗಿನ ಅಲಕ್ಷ್ಯ, ನಿರ್ಲಜ್ಜತೆ ಅಥವಾ ಕಟುತ್ವವಲ್ಲ. ಬದಲಿಗೆ ಅನ್ಯರಿಗೆ, ಸುತ್ತಲಿನವರಿಗೆ ಒಂದಿಷ್ಟು ಸ್ವಾತಂತ್ರ್ಯವನ್ನು ನಾವೇ ಕೊಟ್ಟುಬಿಡುವ ಪ್ರಕ್ರಿಯೆ. ಹಾಗೆಂದರೆ ಏನು? ನಮ್ಮ ಬಗ್ಗೆ ಏನು ಬೇಕಾದರೂ ಅಂದುಕೊಳ್ಳುವ ಸ್ವಾತಂತ್ರ್ಯವನ್ನು ನಾವೇ ಎಲ್ಲರಿಗೂ ಕೊಟ್ಟುಬಿಡುವುದು. ಹಾಗೆ ಕೊಟ್ಟು ನಮ್ಮ ಬದುಕನ್ನು ಹೆಮ್ಮೆಯಿಂದಲೇ ಮುಂದು ವರಿಸುವುದು.
ನಮ್ಮನ್ನು ಅನುಮಾನಿಸುವ, ತಪ್ಪು ತಿಳಿಯುವ ಸ್ವಾತಂತ್ರ್ಯವನ್ನು ನಾವೇ ಕೊಟ್ಟು, ನಾವು ನಂಬಿದ ಬದುಕನ್ನು ನಿಭಾಯಿಸುವುದು. ನಮ್ಮ ಮೇಲೆ ಬೇಸರಗೊಳ್ಳುವ ಸ್ವಾತಂತ್ರ್ಯ ಕೊಟ್ಟು ನಮ್ಮ ನಿರ್ಧಾರವನ್ನು ನಾವೇ ಗೌರವಿಸುವುದು. ನಮ್ಮ ಬಗ್ಗೆ ಏನು ಬೇಕಾದರೂ ಅಂದುಕೊಳ್ಳುವ ಸ್ವಾತಂತ್ರ್ಯವನ್ನು ಎಲ್ಲರಿಗೂ ಕೊಟ್ಟು, ನಮ್ಮ ನಿಯಂತ್ರಣದಲ್ಲಿರುವ ಸಾಧ್ಯತೆಗಳ ಬಗ್ಗೆ ಮಾತ್ರ ಯೋಚಿಸುವುದು. ನಮ್ಮ ಬಗ್ಗೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೊಂದುವುದು ಸಹಜ.
ನಾವು ಎಲ್ಲರ ಅಭಿಪ್ರಾಯವನ್ನು ಸರಿಮಾಡಬೇಕಾದ ಅವಶ್ಯಕತೆ ಇಲ್ಲವೇ ಇಲ್ಲ. ಹಾಗೆಯೇ ಬಿಡುವುದೇ ಸ್ವಾತಂತ್ರ್ಯ. ಎಲ್ಲದಕ್ಕೂ ಪ್ರತಿಕ್ರಿಯಿಸಬೇಕಾಗಿಲ್ಲ. ಪ್ರಶ್ನೆಯನ್ನು ಯಾರೇ ಕೇಳಿದ್ದರೂ ಪ್ರಶ್ನೆಯೇ ಸಮಂಜಸವಲ್ಲದಿದ್ದಲ್ಲಿ ಉತ್ತರಿಸಬೇಕಿಲ್ಲ. ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಇರುವುದೂ ಇಲ್ಲ, ಕೇಳಿದವರಿಗೂ ಉತ್ತರ ಬೇಕಿರುವುದೂ ಇಲ್ಲ.
ಉತ್ತರ ಬಯಸದ ಪ್ರಶ್ನೆಗಳಿಗೆ ಯಾವತ್ತೂ ಉತ್ತರಿಸಬೇಕಿಲ್ಲ. ಹೆಚ್ಚಿನ ಯೋಚನೆಗಳು ಮೂಲದಲ್ಲಿ ನಮಗೆ ನಾವೇ ಕೇಳಿಕೊಳ್ಳುವ ಪ್ರಶ್ನೋತ್ತರಗಳ ಸರಮಾಲೆಯೇ ಆಗಿರುತ್ತವೆ. ಉತ್ತರಿಸುತ್ತ ಹೋದಂತೆ ಪ್ರಶ್ನೆಯೂ ಮುಂದುವರಿಯುತ್ತದೆ. ಆದರೆ ಉತ್ತರ ನಿಲ್ಲಿಸಿದ ಮರುಕ್ಷಣ ಪ್ರಶ್ನೆಯೂ ನಿಂತು ಬಿಡುತ್ತದೆ. ಯೋಚನೆಗಳು ಖಾಲಿ ಎಂದು ತಿಳಿದಂತೆ ಮನಸ್ಸು ಕೃಷ್ಣನ ಕೊಳಲಿನಂತಾ ಗುತ್ತದೆ....