ಕ್ರಿಯಾಲೋಪ
ಎಚ್.ಎಸ್.ಮಂಜುನಾಥ್ ಗೌಡ
ಸರಕಾರಿ ಹುದ್ದೆಗಳ ಭರ್ತಿ ಹಾಗೂ ವಯೋಮಿತಿ ಸಡಿಲಿಕೆಗಾಗಿ ರಾಜ್ಯದ ಶಿಕ್ಷಣ ಕಾಶಿ ಧಾರವಾಡ ದಲ್ಲಿ ಯುವ ಜನರು ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ನಿರುದ್ಯೋಗ ಸಮಸ್ಯೆ ಯ ಬಗ್ಗೆ ರಾಜ್ಯಾದ್ಯಂತ ಚರ್ಚೆ ಹುಟ್ಟಿಕೊಂಡಿದೆ.
ವಾಸ್ತವವಾಗಿ ದೇಶದಲ್ಲಿ ನಿರೋದ್ಯೋಗ ಸಮಸ್ಯೆಯು ತಾರಕಕ್ಕೇರಲು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವೇ ಕಾರಣ. ಪ್ರತಿ ವರ್ಷ ೨ ಕೋಟಿಯಷ್ಟು ಉದ್ಯೋಗಗಳನ್ನು ಸೃಷ್ಟಿ ಸುವ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರಕಾರವು, ಆ ಲೆಕ್ಕಾಚಾರದ ಪ್ರಕಾರ ಕಳೆದ ೧೧ ವರ್ಷಗಳಲ್ಲಿ ೨೨ ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು. ಆದರೆ, ದೇಶದಲ್ಲಿ ಅದು ಐದು ದಶಕಗಳಲ್ಲೇ ಅತಿ ಹೆಚ್ಚು ಎನ್ನಬಹುದಾದಷ್ಟು ತೀವ್ರತೆಯ ನಿರುದ್ಯೋಗ ಸಮಸ್ಯೆಯನ್ನು ಹುಟ್ಟು ಹಾಕಿದೆ.
ತನ್ಮೂಲಕ ಯುವಜನರ ಭವಿಷ್ಯವನ್ನು ನರಕವಾಗಿಸಿದೆ. ಮೋದಿ ಸರಕಾರದ ಕಳೆದ ೧೧ ವರ್ಷಗಳ ದುರಾಡಳಿತವು ಸಮಾಜದ ಎಲ್ಲ ವರ್ಗಗಳ ಮೇಲೂ ಪರಿಣಾಮ ಬೀರಿದೆ ಎಂದರೆ ಅತಿಶಯೋಕ್ತಿ ಆಗಲಾರದು. ವಿದ್ಯಾರ್ಥಿಗಳು, ಯುವಜನರು, ರೈತರು, ಕಾರ್ಮಿಕರು, ವರ್ತಕರು, ಉದ್ಯಮಿಗಳು ಸೇರಿದಂತೆ ಯಾವೊಂದು ವರ್ಗದವರೂ ಈ ಸರಕಾರದ ಅವಧಿಯಲ್ಲಿ ಸಂತಸದಿಂದಿಲ್ಲ.
ಇದನ್ನೂ ಓದಿ: Ganesh Bhat Column: ಪರಾನುಭೂತಿ ಎನ್ನುವ ಶ್ರೇಷ್ಠ ಭಾವಸಂಗಮ
ಹಣದುಬ್ಬರವು ಗಗನಕ್ಕೇರುತ್ತಿದ್ದರೆ, ರುಪಾಯಿ ದರ ನಿರಂತರವಾಗಿ ಕುಸಿಯುತ್ತಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಸತತವಾಗಿ ಅಗಲವಾಗುತ್ತಿದೆ, ಬಡವರು ಮತ್ತು ಮಧ್ಯಮ ವರ್ಗದವರು ಬದುಕನ್ನು ಸಾಗಿಸುವುದು ದುಸ್ತರವಾಗುತ್ತಿದೆ. ‘ಬಿಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆಯ ವರದಿಯೊಂದರ ಪ್ರಕಾರ, 2017-18ರ ವರ್ಷಾವಧಿಯಲ್ಲಿ ದೇಶವು, ಕಳೆದ ೪೫ ವರ್ಷಗಳಲ್ಲಿ ಎಂದೂ ಎದುರಿಸದಷ್ಟು ತೀವ್ರತೆಯ ನಿರುದ್ಯೋಗ ಸಮಸ್ಯೆಯನ್ನು ಎದುರಿಸಿತ್ತು.
1972-73ರಲ್ಲಿ ದೇಶದ ನಿರುದ್ಯೋಗ ಪ್ರಮಾಣವು ಶೇ.೬.೧ರಷ್ಟಿತ್ತು. ಆದರೆ 2017-18ರಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ ಇದು ಶೇ. ೭.೮ರಷ್ಟಿದ್ದರೆ, ಗ್ರಾಮೀಣ ಪ್ರದೇಶ ದಲ್ಲಿ ಶೇ. ೫.೩ರಷ್ಟಿದೆ ಎಂದು ಈ ವರದಿ ಹೇಳಿದೆ. ಈಗಲೂ ಈ ಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ.
ಇತ್ತೀಚೆಗೆ ಬಿಡುಗಡೆಯಾದ ಸಿಎಂಐಇ ವರದಿಯನ್ನು ಉಲ್ಲೇಖಿಸಿ ಹೇಳುವುದಾದರೆ, 2025ರ ಅಕ್ಟೋಬರ್‌ನಲ್ಲಿ ನಿರುದ್ಯೋಗದ ಪ್ರಮಾಣ ಶೇ.೭.೫ರಷ್ಟಕ್ಕೆ ಏರಿದೆ. ಇದು ಕಳೆದ ೬ ತಿಂಗಳಲ್ಲಿನ ಗರಿಷ್ಠ ಮಟ್ಟ. ಒಟ್ಟಾರೆ ನೋಡಿದರೆ, ಐದು ದಶಕಗಳ ಹಿಂದೆ ಇದ್ದ ನಿರುದ್ಯೋಗ ದರಕ್ಕಿಂತ ಹೆಚ್ಚು!ವಿವಿಧ ಕ್ಷೇತ್ರಗಳಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.
ನಿರ್ಮಾಣ ಕ್ಷೇತ್ರದಲ್ಲಿ ಈ ಪ್ರಮಾಣ ೯೦ ಲಕ್ಷಕ್ಕೂ ಹೆಚ್ಚು. ಕಳೆದ ೧೧ ವರ್ಷಗಳಿಂದಲೂ ಇದೇ ರೀತಿಯ ಅಂಕಿ-ಅಂಶಗಳು ಹೊರಹೊಮ್ಮುತ್ತಲೇ ಇವೆ. ನಿರುದ್ಯೋಗದ ಪ್ರಮಾಣದ ಹೆಚ್ಚಳದ ವಿಷಯದಲ್ಲಿ ಮೋದಿಯವರು ತಮ್ಮ ದಾಖಲೆಯನ್ನು ತಾವೇ ಮುರಿಯುತ್ತಿದ್ದಾರೆ. ಚುನಾವಣೆಗಳ ಗುಂಗಿನಲ್ಲೇ ಇರುವ ಅವರು ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಬದಲು, ಜನರ ಗಮನ ವನ್ನು ಬೇರೆಡೆಗೆ ಸೆಳೆಯಲು ಹೊಸ ರೀತಿಯ ಭಾಷಣಗಳನ್ನು ಮಾಡುವುದರಲ್ಲಿ ನಿರತ ರಾಗಿದ್ದಾರೆ!
ರಾಜ್ಯದಲ್ಲಿ ದುಸ್ಥಿತಿ ತಂದಿದ್ದು ಬಿಜೆಪಿ
ಉದ್ಯೋಗಕ್ಕಾಗಿ ಹುಡುಕುತ್ತಿರುವವರು ಮತ್ತು ಉದ್ಯೋಗ ವನ್ನು ಅರಸಿ ಅರಸಿ ಬೇಸತ್ತು ನಿಲ್ಲಿಸಿರು ವವರನ್ನು ಒಟ್ಟಾಗಿ ಸೇರಿಸಿದರೆ ಅದನ್ನು ‘ಗ್ರೇಟರ್ ಅನ್-ಎಂಪ್ಲಾಯ್‌ಮೆಂಟ್ ರೇಟ್’ ಎನ್ನುತ್ತಾರೆ. ರಾಜ್ಯದಲ್ಲಿ 2018ರಲ್ಲಿ ‘ಗ್ರೇಟರ್ ಅನ್-ಎಂಪ್ಲಾಯ್ ಮೆಂಟ್ ದರ’ವು ಶೇ.೪.೪೨ರಷ್ಟಿತ್ತು. ಅಂದರೆ, 2013-2018ರ ಅವಧಿಯಲ್ಲಿ ನಮ್ಮ ಕಾಂಗ್ರೆಸ್ ಸರಕಾರವು ನಿರುದ್ಯೋಗ ದರವನ್ನು ನಿಯಂತ್ರಣಕ್ಕೆ ತಂದಿತ್ತು. ಆದರೆ ಅದೇ ದರವು 2022-23ರಲ್ಲಿ ಶೇ.11.73ಕ್ಕೆ ಏರಿಕೆಯಾಗಿತ್ತು ಮತ್ತು ಕಾಂಗ್ರೆಸ್ ಸರಕಾರದ ಅವಧಿಗೆ ಹೋಲಿಸಿದರೆ ಇದು ಶೇ.೭.೩ ರಷ್ಟು ಹೆಚ್ಚಳವಾಗಿತ್ತು. ಹೀಗಾಗಿ ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಗೆ ಕೊಡುಗೆ ನೀಡಿದ್ದು ಆಗಿನ ಭ್ರಷ್ಟ ಬಿಜೆಪಿ ಸರಕಾರ.
ಕೈ ಹಿಡಿದೆತ್ತಿದ ಕಾಂಗ್ರೆಸ್
ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ ಪ್ರಕಾರ, ದೇಶದಲ್ಲಿನ ನಿರುದ್ಯೋಗ ದರವು ಪದವೀಧರರ ವಿಷಯದಲ್ಲಿ ಶೇ.18.9ರಷ್ಟಿದ್ದರೆ, ಡಿಪ್ಲೊಮಾ ಪಡೆದವರಲ್ಲಿ ಶೇ.೧೭.೧ರಷ್ಟಿದೆ. ಕರ್ನಾಟಕದಲ್ಲಿ ಈ ದರವು ಶೇ.೨.೫ರಷ್ಟಿದ್ದು, ಇದು ಇತರ ರಾಜ್ಯಗಳಿಗಿಂತ ತುಲನಾತ್ಮಕವಾಗಿ ಕಡಿಮೆಯಾಗಿದೆ; ಉದ್ಯೋಗಾವಕಾಶಗಳನ್ನು ಒದಗಿಸಿ, ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರವು ತೆಗೆದುಕೊಂಡಿರುವ ಪೂರ್ವಭಾವಿ ಕ್ರಮಗಳಿಗೆ ಇದು ಸಾಕ್ಷಿಯಾಗಿದೆ.
ನ್ಯಾಯ ಒದಗಿಸಲು ‘ಕೈ’ ಕಟಿಬದ್ಧ
ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರಕಾರ ಮೊದಲಿನಿಂದಲೂ ಮಾಡುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಈ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಸಾವಿರಾರು ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿದೆ. ಇದರ ನಡುವೆ, ಮೂರು ದಶಕ ಗಳಿಂದ ಹೊಮ್ಮುತ್ತಿದ್ದ ‘ಎಸ್‌ಸಿ’ ಒಳ ಮೀಸಲಾತಿಯ ಬೇಡಿಕೆಯನ್ನು ರಾಜ್ಯ ಸರಕಾರ ಈಡೇರಿಸ ಲಿದೆ. ಇದಕ್ಕಾಗಿ ಕೆಲ ತಿಂಗಳುಗಳ ಕಾಲ ನೇಮಕಾತಿ ಹಾಗೂ ಬಡ್ತಿಯನ್ನು ತಡೆಹಿಡಿಯಲಾಗಿತ್ತು.
ನ್ಯಾಯಾಲಯದಲ್ಲಿನ ಗೊಂದಲ ಬಗೆಹರಿದ ಕೂಡಲೇ ರಾಜ್ಯದಲ್ಲಿ ನೇಮಕಾತಿ ಪರ್ವ ಆರಂಭ ವಾಗಲಿದೆ. ಬಿಜೆಪಿಯ ಕೆಲ ನಾಯಕರು ಮತ್ತು ಬಿಜೆಪಿಯ ಅಂಗಸಂಸ್ಥೆ ‘ಎಬಿವಿಪಿ’ಯ ಕಾರ್ಯ ಕರ್ತರು ಖಾಲಿಹುದ್ದೆಗಳ ಸಂಖ್ಯೆಯನ್ನು ದೊಡ್ಡದಾಗಿ ಬಿಂಬಿಸಲು ಹೊರಟಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ, ೫.೨೨ ಲಕ್ಷದಷ್ಟಿದ್ದ ಸರಕಾರಿ ಉದ್ಯೋಗ ಗಳನ್ನು ೫.೮೮ ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ, ಗುತ್ತಿಗೆ ನೌಕರರ ಸಂಖ್ಯೆಯನ್ನು 96884ಕ್ಕೆ ಇಳಿಕೆ ಮಾಡಲಾಗಿದೆ.
ಬಿಜೆಪಿಯ ಅಧಿಕಾರಾವಧಿಯಲ್ಲಿ ೨.೫ ಲಕ್ಷ ಹುದ್ದೆಗಳು ಖಾಲಿಯಿದ್ದವು. ಕೃಷಿ ಇಲಾಖೆ ಯೊಂದರಲ್ಲೇ ಶೇ.೫೦ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಉಳಿದಿದ್ದವು. 128 ಕೃಷಿ ಅಧಿಕಾರಿಗಳು, ೮೧೭ ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಈ ಕೊರತೆಯನ್ನು ನೀಗಿಸಿದ್ದು ನಮ್ಮ ಕಾಂಗ್ರೆಸ್ ಸರಕಾರ.
ಮತ್ತಷ್ಟು ನೇಮಕಕ್ಕೆ ಸಿದ್ಧತೆ
ಸಾವಿರಾರು ಹುದ್ದೆಗಳ ನೇಮಕಾತಿಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿದೆ. ಸರಕಾರದ ವಿವಿಧ ಇಲಾಖೆ ಗಳು ೮೦ ಸಾವಿರ ನೌಕರರ ನೇಮಕಾತಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಈ ಪೈಕಿ ಕೆಲವಕ್ಕೆ ಹಣಕಾಸು ಇಲಾಖೆಯಿಂದ ಈಗಾಗಲೇ ಅಂಗೀಕಾರ ದೊರೆತಿದೆ.
ಇನ್ನೂ ಕೆಲ ಇಲಾಖೆಗಳ ಪ್ರಸ್ತಾವನೆಗಳು ಆಯಾ ಇಲಾಖೆಯ ಹಂತದಲ್ಲೇ ಇವೆ. ಈ ಎಲ್ಲ ಪ್ರಸ್ತಾವನೆ ಗಳಿಗೆ ಹಣಕಾಸು ಇಲಾಖೆ ಮತ್ತು ರಾಜ್ಯ ಸರಕಾರದ ಅಂತಿಮ ಒಪ್ಪಿಗೆ ಪಡೆದು, ಕೆಪಿಎಸ್‌ಸಿ ಮೂಲಕ ನೇರ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
೨೦ ಲಕ್ಷ ಉದ್ಯೋಗ ಸೃಜನೆ
ರಾಜ್ಯದಲ್ಲಿನ ಬಂಡವಾಳ ಹೂಡಿಕೆ ಮತ್ತು ಖಾಸಗಿ ವಲಯದಲ್ಲಿನ ಉದ್ಯೋಗ ಸೃಷ್ಟಿಯ ವಿಷಯ ದಲ್ಲಿ ರಾಜ್ಯ ಸರಕಾರ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಎರಡು ವರ್ಷಗಳಲ್ಲಿ 6,57,660 ಕೋಟಿ ರುಪಾಯಿಯಷ್ಟು ಬಂಡವಾಳ ಹೂಡಿಕೆಯನ್ನು ಒಳಗೊಂಡ ೧೧೫ ಒಪ್ಪಂದಗಳನ್ನು ಸರಕಾರ ಮಾಡಿಕೊಂಡಿದ್ದು, ಇದರಿಂದ ೨,೩೨,೭೭೧ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಕಳೆದ ೨ ವರ್ಷಗಳ ಹೂಡಿಕೆ ಪೈಕಿ, ಫಾಕ್ಸ್‌ಕಾನ್ ಕಂಪನಿಯೊಂದರ ಹೂಡಿಕೆಯೇ 22000 ಕೋಟಿ ರುಪಾಯಿಯಷ್ಟಿದೆ. ಮಿಕ್ಕಂತೆ ಎಪ್ಸಿಲಾನ್ ಸಮೂಹ 15350 ಕೋಟಿ ರು., ಎನ್‌ಎಕ್ಸ್‌ಪಿ ಸೆಮಿ ಕಂಡಕ್ಟರ್ 8500 ಕೋಟಿ ರು., ಎಂ.ವಿ. ಎನರ್ಜಿ ಪ್ರೈವೇಟ್ ಲಿಮಿಟೆಡ್ 5000 ಕೋಟಿ ರು., ಜಿಂದಾಲ್ ಎನರ್ಜಿ ೪,೯೬೦ ಕೋಟಿ ರು.ಗಳನ್ನು ಹೂಡಿಕೆ ಮಾಡಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಲು ಸಾಲು ಕಂಪನಿಗಳು ಕೋಟ್ಯಂತರ ರು. ಹೂಡಿಕೆ ಮಾಡಿವೆ. ಇನ್ನು ರಾಜ್ಯ ಸರಕಾರವು ೨೦೨೫-೩೦ರ ಕೈಗಾರಿಕಾ ನೀತಿಯ ಮೂಲಕ ೭.೫೦ ಲಕ್ಷ ಕೋಟಿ ರು. ಹೂಡಿಕೆ ಮತ್ತು ೨೦ ಲಕ್ಷ ಉದ್ಯೋಗಗಳ ಸೃಷ್ಟಿಯ ಗುರಿಯನ್ನು ಹೊಂದಿದೆ. ಅಲ್ಲದೆ, ದೇಶ-ವಿದೇಶಗಳ ಪ್ರಮುಖ ಕೈಗಾರಿಕೆಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಉದ್ಯಮ ದಿಗ್ಗಜರಿಂದ ಹೂಡಿಕೆಯನ್ನು ಆಕರ್ಷಿಸುವಲ್ಲಿನ ತನ್ನ ಮುಂಚೂಣಿ ಸ್ಥಾನವನ್ನು ರಾಜ್ಯವು ಉಳಿಸಿಕೊಂಡಿವೆ.
ಮಹತ್ವಾಕಾಂಕ್ಷಿ ಒಪ್ಪಂದಗಳು
ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ನಡೆದ ಜಾಗತಿಕ ಬಂಡವಾಳಹೂಡಿಕೆದಾರರ ಸಮಾವೇಶ ‘ಇನ್‌ವೆಸ್ಟ್ ಕರ್ನಾಟಕ’ದಲ್ಲಿ, ಒಟ್ಟು ೯೮ ಕಂಪನಿಗಳ ಜತೆಗೆ 6,23,970 ಕೋಟಿ ರು. ಮೌಲ್ಯದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೆ, 4,03,533 ಕೋಟಿ ರು. ಹೂಡಿಕೆ ಮಾಡಲು ೧,೧೦೧ ಕಂಪನಿಗಳು ವಿವಿಧ ಸಮಿತಿಗಳಿಂದ ಅನುಮೋದನೆ ಪಡೆದಿವೆ. ಈ ಎಲ್ಲಾ ಯೋಜನೆಗಳಿಂದ ರಾಜ್ಯದಲ್ಲಿ ಸುಮಾರು ೬ ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ವಿದೇಶಿ ಬಂಡವಾಳದ ಆಕರ್ಷಣೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಮಹಾರಾಷ್ಟ್ರದ ನಂತರದ ೨ನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ತಮಿಳುನಾಡು, ಗುಜರಾತ್, ದೆಹಲಿಯನ್ನು ರಾಜ್ಯವು ಹಿಂದಿಕ್ಕಿದೆ. ಹೂಡಿಕೆ ರೂಪದಲ್ಲಿ ಮಹಾರಾಷ್ಟ್ರಕ್ಕೆ ೯೧,೩೩೭ ಕೋಟಿ ರುಪಾಯಿ ದಕ್ಕಿದ್ದರೆ, ಕರ್ನಾಟಕಕ್ಕೆ ೮೦,೯೯೭ ಕೋಟಿ ರುಪಾಯಿ ಬಂಡವಾಳವು ಹರಿದುಬಂದು ದಾಖಲೆ ನಿರ್ಮಾಣ ವಾಗಿದೆ.
ಸಮತೋಲಿತ ಅಭಿವೃದ್ಧಿಗೆ ಒತ್ತು
ಪ್ರಾದೇಶಿಕ ಸಮತೋಲಿತ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸರಕಾರವು ಕಳೆದ ಎರಡು ವರ್ಷಗಳಲ್ಲಿ, ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆಗಳು/ ತಾಲೂಕುಗಳಲ್ಲಿ ಹೂಡಿಕೆಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ. ಇದೇ ಕಾರಣಕ್ಕೆ, ಬೆಂಗಳೂರಿನ ಹೊರಗೆ ಶೇ.75 ರಷ್ಟು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಶೇ. ೪೫ರಷ್ಟು ಉದ್ಯೋಗ ಸೃಷ್ಟಿ ಕಾಣಬರಲಿದೆ. ಅಷ್ಟೇ ಅಲ್ಲದೆ, ಹಿಂದುಳಿದ ಪ್ರದೇಶಗಳಲ್ಲೂ ಹೂಡಿಕೆಗೆ ಉತ್ತೇಜಿಸಲಾಗುತ್ತಿದೆ.
ಹುದ್ದೆ ಬಿಕರಿಯಾಗಿದ್ದನ್ನು ಮರೆತಿಲ್ಲ!
ರಾಜ್ಯ ಬಿಜೆಪಿಯ ನಾಯಕರು ಮತ್ತು ಬಿಜೆಪಿಯ ರಾಜಕೀಯ ಶಿಶು ಎನಿಸಿರುವ ‘ಎಬಿವಿಪಿ’ಯವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ಕಳೆದ ಬಾರಿ ಇದೇ ನಾಯಕರು, ಇದೇ ಬಿಜೆಪಿಯ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ.೧೦ ಭರವಸೆ ಗಳನ್ನೂ ಪೂರೈಸಿಲ್ಲ... ಏಕೆ?! ಕರ್ನಾಟಕದಲ್ಲಿ ಸುಮಾರು ಎರಡೂವರೆ ಲಕ್ಷದಷ್ಟು ಸರಕಾರಿ ಉದ್ಯೋಗ ಮತ್ತು ಸುಮಾರು ಏಳೂವರೆ ಲಕ್ಷದಷ್ಟು ಖಾಸಗಿ ಉದ್ಯೋಗಕ್ಕೆ ಅವಕಾಶ ವಿದ್ದರೂ ಮಾಡಲಿಲ್ಲ,
ಏಕೆ? ಇದರ ನಡುವೆ, ನೇಮಕಾತಿಗಳಲ್ಲೂ ಬಿಜೆಪಿಯು ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮೆರೆದಿತ್ತು. ಬಿಜೆಪಿಯ ಶಾಸಕರು ಹಾಗೂ ಮಂತ್ರಿಗಳು ಸರಕಾರದ ಹುದ್ದೆಗಳನ್ನು ಕೋಟಿಗಟ್ಟಲೆ ಹಣಕ್ಕೆ ಮಾರಾಟಕ್ಕಿಟ್ಟಿದ್ದರು. ಇದೇ ಪಕ್ಷದ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಶಾಸಕರೊಬ್ಬರು, ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳ ಪುತ್ರ ‘ಪಿಎಸ್‌ಐ ನೇಮಕಾತಿ ಹಗರಣ’ದ ನೇರ ರೂವಾರಿ ಎಂದು ಆರೋಪಿಸಿದ್ದರು.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ‘ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ’ಯು, ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿದ್ದ ದೇಶದ ಮಹತ್ತರ ಕಾರ್ಖಾನೆಯಾಗಿತ್ತು. ಇದಕ್ಕೆ ಯುಪಿಎ ಸರಕಾರ 2013ರಲ್ಲಿಯೇ ಬಳ್ಳಾರಿಯಲ್ಲಿ 380 ಎಕರೆ ಗಣಿ ಪ್ರದೇಶವನ್ನು ಒದಗಿಸಿತ್ತು. ಆದರೆ ಬಿಜೆಪಿ ಸರಕಾರವು ಆ ಗಣಿ ಪ್ರದೇಶದ ಉಪಯೋಗವನ್ನೇ ಮಾಡದೇ, ಈ ಕಾರ್ಖಾನೆಗೆ ಶಾಶ್ವತವಾಗಿ ಬೀಗ ಹಾಕಿತು, ಏಕೆ?೨೦೧೮ರ ಚುನಾವಣೆಯ ವೇಳೆ ದೇಶದ ಗೃಹಮಂತ್ರಿ ಅಮಿತ್ ಶಾ ಅವರು, ‘ರಾಜ್ಯದಲ್ಲಿ ಬಿಜೆಪಿಯು ಅDiಕಾರಕ್ಕೆ ಬಂದರೆ,
ಶಿವಮೊಗ್ಗ ಜಿಲ್ಲೆಯಲ್ಲಿ 500 ಕೋಟಿ ರು. ವೆಚ್ಚದ ಅಡಕೆ ಸಂಶೋಧನಾ ಕೇಂದ್ರವನ್ನು ರೂಪಿಸ ಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಅದಕ್ಕೆ ೫ ಪೈಸೆ ಸಹ ನೀಡಿಲ್ಲ ಏಕೆ?
‘ಆತ್ಮನಿರ್ಭರ್ ಭಾರತ್’ ಹೆಸರಿನಲ್ಲಿ ಪ್ರಚಾರ ಪಡೆಯುವ ಬಿಜೆಪಿಗರು, ನಮ್ಮ ದೇಶದಲ್ಲಿ ಬೆಳೆಯ ಲಾಗುವ ಉತ್ಕೃಷ್ಟ ದರ್ಜೆಯ ಅಡಕೆಗೆ ಪ್ರೋತ್ಸಾಹ ನೀಡದೇ, ಹೊರದೇಶದಿಂದ ಆಮದಾಗುವ ಅಡಕೆಯ ಮೇಲಿದ್ದ ಆಮದು ಸುಂಕವನ್ನು ಶೇ.110ರಿಂದ ಕೇವಲ ಶೇ.10ರ ಮಟ್ಟಕ್ಕೆ ಇಳಿಸಿ, ದೇಸಿ ಅಡಕೆಯ ಮಾರುಕಟ್ಟೆಯನ್ನು ಭಸ್ಮಮಾಡಿದ್ದು ಏಕೆ?
ಇನ್ನಾದರೂ ಜನಪರ ಕೆಲಸ ಮಾಡಲಿ
ಕೆಲವು ಇಲಾಖೆಗಳಲ್ಲಿ ಹಲವು ದಶಕಗಳಿಂದ ‘ಸಿ ಆಂಡ್ ಆರ್’ ನಿಯಮ ತಿದ್ದುಪಡಿಯಾಗಿಲ್ಲ. ರಾಜ್ಯದಲ್ಲಿ ೪೧ ಇಲಾಖೆಗಳ ‘ವೃಂದ ಮತ್ತು ನೇಮಕಾತಿ ನಿಯಮ’ವನ್ನು ಸಿದ್ಧಪಡಿಸಲು ಸೂಚಿಸ ಲಾಗಿದೆ. ಮೂರು ದಶಕಗಳ ‘ಎಸ್‌ಸಿ ಹೋರಾಟ’ದ ಬೇಡಿಕೆಯನ್ನು ಈಡೇರಿಸಲು ಒಳಮೀಸಲಾತಿ ಯನ್ನು ಜಾರಿ ಮಾಡಲಾಗುತ್ತಿದೆ. ಇದರಿಂದ ಆಗುತ್ತಿರುವ ವಿಳಂಬವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ ಯತ್ನಿಸುತ್ತಿವೆ.
‘ಕೇಂದ್ರದ ನೇಮಕಾತಿ ರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ನಡೆಸಬೇಕು’ ಎಂದು ಈ ಹಿಂದೆ ಒತ್ತಾಯಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಈಗ ಇದಕ್ಕೆ ಪೂರಕವಾಗಿ ಕೆಲಸ ಮಾಡಲಿ. ಕೇಂದ್ರದ ಎಲ್ಲಾ ನೇಮಕಾತಿಗಳಿಗೆ ಕನ್ನಡದಲ್ಲೂ ಪರೀಕ್ಷೆ ನಡೆಸಬೇಕು, ಕರ್ನಾಟಕ ದಲ್ಲಿನ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ಹಾಗಾದಲ್ಲಿ, ಕರ್ನಾಟಕದ ಜನರಿಗೆ ಕನ್ನಡದಲ್ಲೇ ಸೇವೆ ದೊರೆಯುತ್ತದೆ.
ತಪ್ಪಿದರೆ, ಕೇಂದ್ರ ಸರಕಾರ, ಬಿಜೆಪಿ ಮತ್ತು ಜೆಡಿಎಸ್‌ಗಳು ಕನ್ನಡಿಗರ ಆಗ್ರಹಕ್ಕೆ ಗುರಿಯಾಗ ಬೇಕಾಗುತ್ತದೆ....
(ಲೇಖಕರು ಕೆಪಿಸಿಸಿ ಯುವ ಘಟಕದ ರಾಜ್ಯಾಧ್ಯಕ್ಷರು)