ಒಂದೊಳ್ಳೆ ಮಾತು
ಪುರಾಣಗಳ ಪ್ರಕಾರ, ಶ್ರೀಮನ್ನಾರಾಯಣನ ಪರಮ ಭಕ್ತೆ ಮತ್ತು ಪತಿವ್ರತೆಯಾಗಿದ್ದ ಬೃಂದಾ (ತುಳಸಿ) ದೇವಿಯ ದಿವ್ಯ ನಿಷ್ಠೆಯೇ ಗಂಡಕೀ ನದಿ ಮತ್ತು ಸಾಲಿಗ್ರಾಮಗಳ ಉಗಮಕ್ಕೆ ಮೂಲ ಕಾರಣ. ಈ ಕಥೆಯು ಬ್ರಹ್ಮವೈವರ್ತ ಪುರಾಣ ಹಾಗೂ ಪದ್ಮ ಪುರಾಣಗಳಲ್ಲಿ ವರ್ಣಿತವಾಗಿದೆ.
ಪರಮ ಪತಿವ್ರತೆಯಾದ ಬೃಂದಾಳ ಪತಿ ಶಂಖಚೂಡ (ಜಲಂಧರ) ಎಂಬ ಅಸುರ. ಆಕೆಯ ಪಾತಿವ್ರತ್ಯದ ಬಲದಿಂದಾಗಿ ಆತನಿಗೆ ಯಾವುದೇ ಮರಣವಿರಲಿಲ್ಲ. ದೇವತೆಗಳ ರಕ್ಷಣೆಗಾಗಿ ಮತ್ತು ಅಧರ್ಮದ ನಾಶಕ್ಕಾಗಿ ಶಂಖಚೂಡನ ಸಂಹಾರ ಮಾಡುವುದು ದೇವತೆಗಳಿಗೆ ಅನಿವಾರ್ಯ ವಾಗಿತ್ತು. ಇದಕ್ಕಾಗಿ ಮಹಾವಿಷ್ಣುವು ಶಂಖಚೂಡನ ರೂಪವನ್ನು ಧರಿಸಿ ಬೃಂದಾಳ ಅರಮನೆಗೆ ಬರಬೇಕಾಯಿತು. ಇದರಿಂದ ಬೃಂದಾಳ ಪಾತಿವ್ರತ್ಯಕ್ಕೆ ಭಂಗ ಬಂದು, ಮತ್ತೊಂದು ಕಡೆ ಶಿವನು ಶಂಖಚೂಡನನ್ನು ಸಂಹರಿಸಿದನು.
ತನಗೆ ಮೋಸ ಮಾಡಿರುವುದು ತನ್ನ ಆರಾಧ್ಯ ದೈವವಾದ ಮಹಾವಿಷ್ಣುವೇ ಎಂದು ಬೃಂದಾಳಿಗೆ ಅರಿವಾಯಿತು. ಅಪಾರ ಭಕ್ತಿಯ ಜಾಗದಲ್ಲಿ ತೀವ್ರ ಆಘಾತ ಅನುಭವಿಸಿದ ಆಕೆ, "ಸ್ವಾಮಿ, ಭಕ್ತೆಯಾದ ನನ್ನ ಭಾವನೆಗಳೊಂದಿಗೆ ಆಟವಾಡಿದ ನೀನು ಕಲ್ಲಿನಂತೆ ಹೃದಯಹೀನನಾಗಿ ವರ್ತಿಸಿದೆ. ಆದ್ದರಿಂದ ನೀನು ಕಠಿಣವಾದ ಶಿಲೆಯಾಗಿ ಭೂಮಿಯ ಮೇಲೆ ಬಿದ್ದಿರು" ಎಂದು ಮಹಾವಿಷ್ಣುವಿಗೆ ಶಾಪ ನೀಡಿದಳು.
ಇದನ್ನೂ ಓದಿ: Roopa Gururaj Column: ಈಶ್ವರನ ಕೃಪೆಗೆ ಪಾತ್ರರಾದ ಶಿವಗಣಗಳ ಮಹತ್ವ
ವಿಷ್ಣುವು ತನ್ನ ಭಕ್ತೆಯ ಶಾಪವನ್ನು ಅತ್ಯಂತ ಪ್ರೇಮದಿಂದ, ಮಂದಹಾಸದಿಂದ ಸ್ವೀಕರಿಸಿ ದನು. ಅವಳ ದಿವ್ಯ ನಿಷ್ಠೆಯನ್ನು ಮೆಚ್ಚಿದ ಪರಮಾತ್ಮ, "ಹೇ ದೇವಿಯೇ, ನಿನ್ನ ಶಾಪವು ಜಗತ್ತಿನ ಕಲ್ಯಾಣಕ್ಕೆ ಕಾರಣವಾಗಲಿದೆ. ನಿನ್ನ ಈ ಪವಿತ್ರ ದೇಹವು ಭೂಮಿಯ ಮೇಲೆ ಪಾವನವಾದ 'ಗಂಡಕೀ' ನದಿಯಾಗಿ ಹರಿಯಲಿದೆ. ನಿನ್ನ ಕೇಶರಾಶಿಯು ಅತ್ಯಂತ ಪವಿತ್ರ ವಾದ 'ತುಳಸಿ' ಸಸ್ಯವಾಗಿ ಜನ್ಮತಾಳುತ್ತದೆ. ನಿನ್ನ ಶಾಪದಂತೆ ನಾನು ಈ ಗಂಡಕೀ ನದಿಯ ಮಡಿಲಲ್ಲಿ 'ಸಾಲಿಗ್ರಾಮ' ಎಂಬ ದಿವ್ಯ ಶಿಲೆಯಾಗಿ ಶಾಶ್ವತವಾಗಿ ನೆಲೆಸುತ್ತೇನೆ" ಎಂದು ವರ ನೀಡಿದನು.
ಅಂದಿನಿಂದ ಬೃಂದಾಳೇ ಗಂಡಕೀ ನದಿಯಾಗಿ ಹರಿದಳು. ಆಕೆಯ ನಿಷ್ಠೆಗೆ ಒಲಿದು ಭಗವಂತನು ಸಾಲಿಗ್ರಾಮ ಕಲ್ಲುಗಳಾಗಿ ಆಕೆಯ ಮಡಿಲನ್ನು ಅಲಂಕರಿಸಿದನು.
ಪುರಾಣಗಳ ಪ್ರಕಾರ, ಈ ಗಂಡಕೀ ನದಿಯಲ್ಲಿ 'ವಜ್ರಕೀಟ' ಎಂಬ ವಿಶೇಷ ಕೀಟಗಳು ವಾಸಿಸುತ್ತವೆ. ಇವು ಬ್ರಹ್ಮದೇವರ ಅಂಶವೆಂದು ಪರಿಗಣಿತವಾಗಿವೆ. ಈ ಕೀಟಗಳು ನದಿಯ ಗರ್ಭದಲ್ಲಿರುವ ಶಿಲೆಗಳನ್ನು ಕೊರೆದು, ಅವುಗಳ ಒಳಗೆ ಮತ್ತು ಹೊರಗೆ ಸುದರ್ಶನ ಚಕ್ರ, ಗದಾ, ಪದ್ಮ ಮತ್ತು ಶಂಖಗಳ ದಿವ್ಯ ಆಕೃತಿಗಳನ್ನು ಮೂಡಿಸುತ್ತವೆ. ಈ ದೈವಿಕ ಆಕೃತಿಗಳೇ ಸಾಲಿಗ್ರಾಮಗಳಾಗಿ ಭಕ್ತರಿಗೆ ದರ್ಶನ ನೀಡುತ್ತವೆ. ಇವುಗಳನ್ನು ಮಾನವರು ಕೆತ್ತಿದ್ದಲ್ಲ, ಭಗವಂತನೇ ಸ್ವಯಂಭೂವಾಗಿ ಧರಿಸಿದ ರೂಪಗಳು ಎನ್ನುತ್ತಾರೆ.
ಯಾವ ಮನೆಯಲ್ಲಿ ಸಾಲಿಗ್ರಾಮವನ್ನು ಇಟ್ಟು, ತುಳಸಿ ದಳದಿಂದ ನಿತ್ಯವೂ ಪೂಜಿಸಲಾಗು ತ್ತದೆಯೋ, ಅಲ್ಲಿ ಸಾಕ್ಷಾತ್ ಲಕ್ಷ್ಮೀನಾರಾಯಣರು ನೆಲೆಸುತ್ತಾರೆ ಎಂಬುದು ನಮ್ಮ ನಂಬಿಕೆ. ಸಾಲಿಗ್ರಾಮಕ್ಕೆ ಯಾವುದೇ ಪ್ರಾಣ ಪ್ರತಿಷ್ಠಾಪನೆಯ ಅಗತ್ಯವಿಲ್ಲ. ಇದರ ಪೂಜೆಯಿಂದ ಮನೆಯಲ್ಲಿ ರುವ ನಕಾರಾತ್ಮಕ ಶಕ್ತಿಗಳು ನಾಶವಾಗಿ ಸಂತಾನ, ಐಶ್ವರ್ಯ, ದೀರ್ಘಾಯುಷ್ಯ ಮತ್ತು ಪರಮ ಶಾಂತಿ ಲಭಿಸುತ್ತದೆ. ಗಂಡಕೀ ನದಿಯ ಜಲ ಮತ್ತು ಸಾಲಿಗ್ರಾಮದ ತೀರ್ಥವನ್ನು ಪ್ರೋಕ್ಷಣೆ ಮಾಡಿ ಕೊಳ್ಳುವುದರಿಂದ ಕೋಟಿ ಜನ್ಮಗಳ ಪಾಪಗಳು ಪರಿಹಾರ ವಾಗುತ್ತವೆ ಎಂಬುದು ಪುರಾಣಗಳ ಅಚಲ ನಂಬಿಕೆ.
ಜೀವನದಲ್ಲಿ ಎಷ್ಟೋ ಬಾರಿ ಒಳ್ಳೆಯ ಉದ್ದೇಶಗಳಿಗಾಗಿ ಅಥವಾ ಅನಿವಾರ್ಯ ಪರಿಸ್ಥಿತಿ ಗಳಲ್ಲಿ ನಮ್ಮಿಂದ ಯಾರಿಗಾದರೂ ನೋವಾಗಬಹುದು. ಅಂತಹ ಸಂದರ್ಭದಲ್ಲಿ "ನಾನು ದೊಡ್ಡವನು" ಎಂಬ ಅಹಂಕಾರವನ್ನು ಬದಿಗಿಟ್ಟು, ಎದುರಿಗಿನವರ ಭಾವನೆಗಳನ್ನು ಗೌರವಿಸಿ, ನಮ್ಮ ತಪ್ಪನ್ನು ಒಪ್ಪಿಕೊಳ್ಳುವ ಔದಾರ್ಯ ಇರಬೇಕು. ಪರಸ್ಪರ ಗೌರವ ಮತ್ತು ಕ್ಷಮಾಗುಣದಿಂದ ಮಾತ್ರ ಕಹಿ ಘಟನೆಗಳನ್ನು ಮಧುರವಾದ ಸಂಬಂಧಗಳಾಗಿ ಬದಲಾಯಿ ಸಲು ಸಾಧ್ಯ.ನಾವು ಮಾಡುವ ಕೆಲಸ ಯಾವುದೇ ಇರಲಿ ಅದರಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇದ್ದರೆ, ಜಗತ್ತೇ ನಮ್ಮ ನಿಷ್ಠೆಗೆ ಗೌರವ ನೀಡುತ್ತದೆ. ಕಠಿಣ ಪರಿಸ್ಥಿತಿಗಳಲ್ಲೂ ನಮ್ಮ ತತ್ವಗಳನ್ನು ಬಿಟ್ಟುಕೊಡದಿರುವುದೇ ನಿಜವಾದ ಯಶಸ್ಸು.