ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Ravi Hunj Column: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಂದಿನ ಆಯ್ಕೆ !

ಪ್ರಧಾನ ಕಾರ್ಯದರ್ಶಿ ಹುದ್ದೆ ಸದ್ಯಕ್ಕೆ ಇಲ್ಲವಾಗಿದೆ. ಶಿವಶಂಕರಪ್ಪನವರು ಈ ವ್ಯಕ್ತಿಯನ್ನು 24 ತಾಸು ತಮ್ನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲು ವೈಯಕ್ತಿಕ ಸಂಭಾವನೆ ಕೊಟ್ಟು ಕಳೆದ 15 ವರ್ಷಗಳಿಂದ ನಿಯೋಜಿಸಿಕೊಂಡಿದ್ದು ಮಹಾಸಭಿಕರೆಲ್ಲರಿಗೂ ತಿಳಿದ ಸಾರ್ವತ್ರಿಕ ಮಾಹಿತಿ. ಶಿವಶಂಕರಪ್ಪನವರ ಉದ್ದೇಶ ಏನಿತ್ತೋ ಗೊತ್ತಿಲ್ಲ.

ಬಸವ ಮಂಟಪ

ರವಿ ಹಂಜ್

ಸ್ಕಂದ ಪುರಾಣದ ಶ್ಲೋಕಗಳಾದ, “ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನ ಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಸ್ಠಹಾತ್ಮಾ | ಸಂಪೂಜಯತ್ತಂಗ ಸ ವೀರಶೈವಂ|" ಮತ್ತು “ಶಿವಾಶ್ರಿತೇಷು ತೇ ಶೈನಾ ಜ್ಞಾನಯಜ್ಞ ರತಾ ನರಾಃ | ಮಾಹೇಶ್ವರಾಃ ಸಮಾಖ್ಯಾ ತಾಃ ಕರ್ಮಯಜ್ಜ ರತಾ ಭುವಿ|" ಎಂಬಂತೆ ಲಿಂಗವನ್ನು ಆಯತ ಮಾಡಿಕೊಂಡು ವಿದ್ಯೆಯನ್ನು ರಮಿಸುವವನು ವೀರಶೈವ ಲಿಂಗಾಯತ.

ಈ ಎರಡೂ ಶ್ಲೋಕಗಳನ್ನು ಊರ್ಜಿತಗೊಳಿಸಿ ವಿಕಸಿಸಿದ ಸಂಸ್ಥೆಯೇ ಅಖಿಲ ಭಾರತ ವೀರಶೈವ (ಲಿಂಗಾಯತ) ಮಹಾಸಭಾ! ಶ್ರೀ ಹಾನಗಲ್ ಕುಮಾರಸ್ವಾಮಿಗಳ ಉದಾತ್ತ ದೂರದರ್ಶಿ ಚಿಂತನೆಯ ಕಾರಣವಾಗಿ ಈ ಸಂಸ್ಥೆ ಉದಯವಾಯಿತು. ಈ ಸಂಸ್ಥೆಗೆ ಅಧ್ಯಕ್ಷ ರಾಗಿ ಸಿರಸಂಗಿ ಲಿಂಗರಾಜ ಸರದೇಸಾಯಿ, ಕೆ.ಪಿ.ಪುಟ್ಟಣ್ಣಶೆಟ್ಟಿ, ರಾಜಾ ಲಖಮ ಗೌಡ, ವಾರದ ಮಲ್ಲಪ್ಪ, ಮಾಮಲೆ ದೇಸಾಯಿ, ಅರಟಾಳ ರುದ್ರಗೌಡ, ಶಾಂತವೀರಪ್ಪ ಮೆಣಸಿನ ಕಾಯಿ, ಸಿದ್ದಪ್ಪ ಕಂಬಳಿ, ಫಕೀರಪ್ಪ ಗುರುಬಸಪ್ಪ ಹಳಕಟ್ಟಿ, ಶಿ.ಶಿ. ಬಸವನಾಳ, ಎಂ.ಎಸ್. ಸರದಾರ, ಸಿ.ಸಿ. ಹುಲಕೋಟಿ, ಪೂಜ್ಯ ಶ್ರೀ ಬಂಥನಾಳ ಶಿವಯೋಗಿಗಳು, ಡಾ.ಡಿ.ಸಿ. ಪಾವಟೆ, ಪೂಜ್ಯ ಶ್ರೀ ಸಿದ್ಧಗಂಗಾ ಶಿವಕುಮಾರ ಮಹಾಸ್ವಾಮಿಗಳು, ಜೆ.ಬಿ.ಮರಾಧ್ಯ, ಈಶ್ವರ ಮಲ್ಲಪ್ಪ ಮಗ್ದುಂ, ಪೂಜ್ಯ ಶ್ರೀ ಡಾ. ಶರಣಬಸಪ್ಪ ಅಪ್ಪ, ಭೀಮಣ್ಣ ಖಂಡ್ರೆ ಮತ್ತು ಶಾಮನೂರು ಶಿವಶಂಕರಪ್ಪ ಆಗಿಹೋಗಿದ್ದಾರೆ.

ಶ್ರೀ ಶರಣಬಸಪ್ಪ ಅಪ್ಪ ಅವರಿಗಿಂತ ಮುಂಚಿನ ಎಲ್ಲಾ ಅಧ್ಯಕ್ಷರೂ ಸಮಾಜವನ್ನು ಪ್ರಮುಖವಾಗಿ ಮೇಲಿನ ಸ್ಕಂದ ಶ್ಲೋಕಗಳಿಗನುಗುಣವಾಗಿ ವೀರಶೈವ ಲಿಂಗಾಯತ ಸಮಾಜ ವನ್ನು ವಿದ್ಯಾವಂತ ಸಾಧಕ ಸಮಾಜವಾಗಿ ಪರಿವರ್ತಿಸಲು ಅಪಾರ ಸೇವೆಯನ್ನು ಸಲ್ಲಿಸಿರು ವುದು ಇತಿಹಾಸದಲ್ಲಿ ಕಾಣಬಹುದಾಗಿದೆ.

ಮಹಾಸಭಾದಿಂದ ಸಮಾವೇಶಗಳನ್ನು ನಡೆಸಿ ಹಲವಾರು ವಿದ್ಯಾಸಂಸ್ಥೆಗಳ ಸ್ಥಾಪನೆಗೆ ಕಾರಣೀಭೂತರಾಗಿದ್ದಾರೆ. ಇವರೆಲ್ಲರ ಸಾಧನೆಯಿಂದ ವೀರಶೈವ ಲಿಂಗಾಯತ ಸಮಾಜವು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕರ್ನಾಟಕದ ಒಂದು ಬಲಿಷ್ಠ ಸಮಾಜ ವಾಗಿ ಅಸ್ತಿತ್ವವನ್ನು ಗಳಿಸಿಕೊಂಡಿದ್ದಲ್ಲದೆ ಸಮಗ್ರ ಮಾನವತೆಗೆ ಅಪಾರ ಕಾಣಿಕೆಯನ್ನು ನೀಡಿದೆ.

ಇದನ್ನೂ ಓದಿ: Ravi Hunj Column: ಪ್ರತ್ಯೇಕ ಧರ್ಮದ ಮಾನ್ಯತೆ ಸ್ವರ್ಗವನ್ನೇ ಇಳೆಗೆ ಇಳಿಸುವುದೇ ?

ಇದೆಲ್ಲಕ್ಕೂ ಮಹಾಸಭಾ ಅಧ್ಯಕ್ಷರುಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಆದಿ ಯಿಂದಲೂ ಒಂದು ಚಿಂತಕರ ಚಾವಡಿ ಸಮಿತಿಯಿತ್ತು. ಈ ಸಮಿತಿಯ ಮಾರ್ಗದರ್ಶನ ದಂತೆ ಅಧ್ಯಕ್ಷರು ಕಾರ್ಯನಿರ್ವಹಿಸುತ್ತಿದ್ದರು. ಈ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು, ಸಾಹಿತಿಗಳು, ಧರ್ಮಧುರೀಣರು ಇರುತ್ತಿದ್ದರು.

ಮಹಾಸಭಾದ ಎಲ್ಲಾ ಮಹತ್ವದ ನಿರ್ಣಯಗಳು ಈ ಸಮಿತಿಯ ಅನುಮೋದನೆಯ ಮೇಲೆ ಅವಲಂಬಿತವಾಗಿರುತ್ತಿತ್ತು. ಶ್ರೀ ಶರಣಬಸಪ್ಪ ಅಪ್ಪ ಅವರ ನಂತರದ ಅಧ್ಯಕ್ಷರುಗಳ ಕೊಡುಗೆ ಹಿಂದಿನ ಎಲ್ಲ ಅಧ್ಯಕ್ಷರುಗಳಿಗಿಂತ ಗೌಣವೆನಿಸಿದರೂ ಅವರನ್ನು ಸರಿದಾರಿಯಲ್ಲಿ ಮುನ್ನಡೆಸಲು ಮಹಾಸಭಾದ ಈ ‘ಚಿಂತಕರ ಚಾವಡಿ’ ಯಾನೆ think tank ಸಮಿತಿಯ ಸಲಹೆಗಳನ್ನು ಪಾಲಿಸಲಾಗುತ್ತಿತ್ತು. ಈ ಸಮಿತಿಯು ಭೀಮಣ್ಣ ಖಂಡ್ರೆಯವರ ಅಧಿಕಾರದ ಅವಧಿಯವರೆಗೂ ಕಾರ್ಯನಿರ್ವಹಿಸುತ್ತಿತ್ತು.

ಖಂಡ್ರೆಯವರ ಅವಧಿಯಲ್ಲಿ ಈ ಚಿಂತಕರ ಚಾವಡಿಯಲ್ಲಿ ನ್ಯಾ.ಎಸ್.ಎಸ್.ಮಳಿಮಠ, ನ್ಯಾ. ಶಿವರಾಜ ಪಾಟೀಲ, ಗೊ.ರು. ಚನ್ನಬಸಪ್ಪ ಮುಂತಾದ ಸದಸ್ಯರಿದ್ದರು. ಯಾವಾಗ ಶಿವಶಂಕರಪ್ಪನವರು ಅಧಿಕಾರ ವಹಿಸಿಕೊಂಡರೋ ಆಗ ಅವರು ಈ ಚಿಂತಕರ ಚಾವಡಿ ಯನ್ನು ಬರಖಾಸ್ತುಗೊಳಿಸಿ ತಮ್ಮ ಸೇವಕ ವರ್ಗದ ಓರ್ವ ಸ್ವಜಾತಿಬಾಂಧವನನ್ನು ಮಹಾ ಸಭಾದ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು.

ಈವರೆಗೆ ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿ (ರಾಷ್ಟ್ರೀಯ) ಹುದ್ದೆಯನ್ನು ವಹಿಸಿಕೊಂಡವರು ನಿವೃತ ಐಎಎಸ್ ಅಧಿಕಾರಿಗಳು, ಉದ್ದಿಮೆದಾರರು ಅಥವಾ ಹಿರಿಯ ರಾಜಕಾರಣಿಗಳಾಗಿರುತ್ತಿದ್ದರು. ಅಂಥ ಸ್ಥಾನಕ್ಕೆ ಟೂರಿಸ್ಟ್ ಹೋಟೆಲಿನ ಮುಂದೆ ನಿಂತು ಹಲವಾರು ವರ್ಗಾವಣೆ ದಂಧೆ, ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ದಂಧೆ, ರಾಜ ಕಾರಣಿಗಳ ಚೇಲಾಗಿರಿ ಮಾಡುವ ಸೇವಕ ವರ್ಗದ ವ್ಯಕ್ತಿಯನ್ನು ಕೇವಲ ಸ್ವಜಾತಿ ಬಂಧು ಕಾರಣಾರ್ಥ ಶಿವಶಂಕರಪ್ಪನವರು ಭಡ್ತಿ ನೀಡಿ ಪ್ರಧಾನವಲ್ಲದ ಕಾರ್ಯದರ್ಶಿಯಾಗಿಸಿ ಕೊಂಡರು.

ಪ್ರಧಾನ ಕಾರ್ಯದರ್ಶಿ ಹುದ್ದೆ ಸದ್ಯಕ್ಕೆ ಇಲ್ಲವಾಗಿದೆ. ಶಿವಶಂಕರಪ್ಪನವರು ಈ ವ್ಯಕ್ತಿ ಯನ್ನು 24 ತಾಸು ತಮ್ನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲು ವೈಯಕ್ತಿಕ ಸಂಭಾವನೆ ಕೊಟ್ಟು ಕಳೆದ 15 ವರ್ಷಗಳಿಂದ ನಿಯೋಜಿಸಿಕೊಂಡಿದ್ದು ಮಹಾಸಭಿಕರೆಲ್ಲರಿಗೂ ತಿಳಿದ ಸಾರ್ವತ್ರಿಕ ಮಾಹಿತಿ. ಶಿವಶಂಕರಪ್ಪನವರ ಉದ್ದೇಶ ಏನಿತ್ತೋ ಗೊತ್ತಿಲ್ಲ.

ಆದರೆ ಈ ಕಾರ್ಯದರ್ಶಿಯು ಮಹಾಸಭಾವನ್ನು ನಿರ್ವೀರ್ಯ ಶವ ಲಿಂಗಾಹತ ಸಭಾವಾಗಿ ಮಾಡಿದನೆಂದು ಮಹಾಸಭಿಗರೆಲ್ಲರೂ ದೂರುತ್ತಾರೆ. ಇರಲಿ, ಹೀಗೆ ಸಂಬಳಕ್ಕಿರುವ ಅಪ್ರಾಮಾಣಿಕ ವ್ಯಕ್ತಿಗಳು ಸಿದ್ಧಾಂತವನ್ನು ಕಾಪಿಡಬಲ್ಲರೇ? ವರ್ಗಾವಣೆ ದಲ್ಲಾಳಿಗಳು ಅಧ್ಯಾತ್ಮವನ್ನು ಅರಿಯಬಲ್ಲರೇ? ಈ ಪ್ರಚ್ಛನ್ನ ಕಾರ್ಯದರ್ಶಿಯ ಕಾರ್ಯಗಳ ಪಟ್ಟಿ ಹೀಗಿದೆ: ಶಿವಶಂಕರಪ್ಪನವರ ವಯೋಸಹಜ ದೌರ್ಬಲ್ಯವನ್ನು ಬಳಸಿಕೊಂಡು ಈತ ಮಾಡಿದ ಅನಾಹುತಗಳು ಧರ್ಮಘಾತಕವಷ್ಟೇ ಅಲ್ಲದೆ ತನ್ನ ಮಾಲೀಕ ಶಿವಶಂಕರಪ್ಪ ನವರಿಗೆ ಮಾಡಿದ ಮಹಾದ್ರೋಹವೆಂದು ಜಿಲ್ಲಾ ಮಹಾಸಭಾಗಳ ಸದಸ್ಯರು ದೂರಿದ್ದಾರೆ.

ಈತನ ದ್ರೋಹವನ್ನು ಅರಿತೋ ಅರಿಯದೆಯೋ ಇಂದಿನ ಮಹಾಸಭಾದ ದುಸ್ಥಿತಿಗೆ ದಿವಂಗತ ಶಿವಶಂಕರಪ್ಪನವರನ್ನು ವೀರಶೈವ ಸಮಾಜ ದೂಷಿಸುವಂತಾಗಿದೆ. ಸೂತಕದ ಮುನ್ನವೇ ಈ ಬಗ್ಗೆ ಜನರು ಮಾತನಾಡಿಕೊಳ್ಳುವಂತಾಗಿದೆ. ಏಕೆಂದರೆ, ಟೂರಿಸ್ಟ್ ಹೋಟೆಲಿನ ಮುಂದೆ ನಿಂತು ಮಾಡುವ ಮಧ್ಯವರ್ತಿ ದಂಧೆಗಳು ಕಳೆದ 15 ವರ್ಷಗಳಿಂದ ಮಹಾಸಭಾದ ಆವರಣದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ದಂಧೆಗಳಾಗಿವೆ.

ರಂಗ ಜಂಗಮ ನಟುವಾಂಗನ ಶಿಷ್ಯನಾದ ಈ ಪ್ರಚ್ಛನ್ನ ಕಾರ್ಯದರ್ಶಿಯು ಮಹಾಸಭೆ‌ ಯನ್ನು ನಿಷ್ಕ್ರಿಯಗೊಳಿಸುವ ಮಂದವಿಷಗಾಮಿಯಾಗಿ ಧರ್ಮಭಂಜಕ ಲಿಂಗಾಹತರ ದಾಳವಾಗಿ ಬಳಕೆಯಾಗಿದ್ದು ಸ್ಫಟಿಕ ಸದೃಶ ಎಂದು ಮಹಾಸಭಿಗರು ಹಿಂದೆಯೇ ದೂರಿದ್ದರು.

ಇದಕ್ಕೆ ಸಾಕ್ಷಿಯಾಗಿ ಮಹಾಸಭೆಯ ಮಹತ್ವದ ದಾಖಲೆಗಳು ಧರ್ಮಭಂಜಕ ಜಾಮದಾರರ ಕೈಗೆ ಸಿಕ್ಕಿದ್ದು ಹೇಗೆ ಎಂಬುದು ಬಸವ ಉದ್ಘೋಷಿತ ಮುತ್ತಿನಹಾರದಂತಿದ್ದರೂ ಅಧ್ಯಕ್ಷರ ಈ ಕುರಿತ ಮೌನ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಎಲ್ಲರಲ್ಲೂ ನರ್ತಿಸುತ್ತಲಿತ್ತು. ಆದರೆ ಕುರುಡು ಕಾಂಚಾಣದ ಮುಂದೆ ಎಲ್ಲರೂ ಕುರುಡಾಗಿದ್ದರು!

ಇನ್ನು ಜಾಮದಾರರು ಬಹಿರಂಗವಾಗಿ ಮಹಾಸಭಾದ ವಿರುದ್ಧ ನೂರಾರು ಹೇಳಿಕೆ ಕೊಟ್ಟರೂ ಒಂದೇ ಒಂದು ಪ್ರತಿ ಹೇಳಿಕೆಯನ್ನು ಕೊಡುವುದಿರಲಿ, ಅದನ್ನು ಖಂಡಿಸಿ ಸಹ ಒಂದು ಹೇಳಿಕೆಯನ್ನು ಈ ಪ್ರಚ್ಛನ್ನ ಕಾರ್ಯದರ್ಶಿ ಎಂದೂ ಕೊಟ್ಟಿಲ್ಲ. ಅಂಥ ಹೇಳಿಕೆ ಕೊಡುವಷ್ಟು ಪ್ರಬುದ್ಧತೆ ಈತನಲ್ಲಿ ಇಲ್ಲವೇ ಇಲ್ಲ. ಆದರೂ ಈತ ಎಲ್ಲಾ ಟಿವಿ ಮಾಧ್ಯಮ ಗಳಲ್ಲಿ ರಾರಾಜಿಸುತ್ತಿದ್ದರೂ ಮಹಾಸಭಾದ ನಿಷ್ಕ್ರಿಯತೆ ಸಭಾವನ್ನು ನಿರ್ವೀರ್ಯಶವ ವನ್ನಾಗಿ ನಗೆಪಾಟಲಿಗೆ ಈಡುಮಾಡಿದೆ.

ಅದರಲ್ಲೂ, 1940 ಮೇ 26ರಿಂದ 28ರವರೆಗೆ ಕುಂಭಕೋಣಂನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟ ಹಲವು ನಿರ್ಣಯ ಗಳಲ್ಲೊಂದಾದ ನಿರ್ಣಯ ಸಂಖ್ಯೆ 23, “ಬ್ರಿಟಿಷ್ ಭಾರತದಲ್ಲಿಯೂ ಭಾರತೀಯ ಸಂಸ್ಥಾನಗಳಲ್ಲಿಯೂ ಲಿಂಗಾಯತರಿಗೆ ಹಿಂದೂ ಕಾನೂನನ್ನು ಅನ್ವಯಿಸುವ ವಿಷಯ ದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಈ ಸಭೆ ಖಂಡಿಸುತ್ತದೆ.

ವೀರಶೈವ ಶಾಸ್ತ್ರಗಳು ಮತ್ತು ಶಾಶ್ವತಾಚಾರಗಳ ಆಧಾರದ ಮೇಲೆ ಲಿಂಗಾಯತರಿಗೆ ಪ್ರತ್ಯೇಕ ಕಾನೂನು ಸಂಹಿತೆ ಅಗತ್ಯವೆಂದು ಮನಗಂಡು, ಕೆಳಗಿನ ಸಮಿತಿಯನ್ನು ಲಿಂಗಾ ಯತ ಕಾನೂನು ಸಂಹಿತೆಯನ್ನು ಸಿದ್ಧಪಡಿಸಲು ನೇಮಿಸಿ, ಮುಂದಿನ ಅಧಿವೇಶನಕ್ಕೂ ಮುನ್ನ ಮಹಾಸಭೆಯ ಕಾರ್ಯಕಾರಿ ಸಮಿತಿಗೆ ವರದಿ ಸಲ್ಲಿಸುವಂತೆ ವಿನಂತಿಸುತ್ತದೆ" ಎನ್ನುವುದನ್ನು ಪ್ರಚ್ಛನ್ನ ಕಾರ್ಯದರ್ಶಿಯು ತಿರುಚಿ ಕುಂಭಕೋಣಂ ಅಧಿವೇಶನದಲ್ಲಿ ವೀರಶೈವ-ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಿವಶಂಕರಪ್ಪನವರನ್ನು ದಿಕ್ಕು ತಪ್ಪಿಸಿದರು ಎಂದು ಮಹಾಸಭಿಗರು ಮಾತನಾಡಿಕೊಳ್ಳು ತ್ತಾರೆ.

ಆದರೆ ಇದು ಕಾರ್ಯದರ್ಶಿ ಅಧ್ಯಕ್ಷರನ್ನು ಯಾಮಾರಿಸಿದ್ದೋ ಅಥವಾ ಅಧ್ಯಕ್ಷರ ನಿರ್ದೇಶನದಂತೆ ಕಾರ್ಯನಿರ್ವಹಿಸಿದ್ದೋ? ಚಿಂತಕರ ಚಾವಡಿಯನ್ನೇ ಬರಖಾಸ್ತು ಮಾಡಿದ ಶಿವಶಂಕರಪ್ಪನವರು ಇಷ್ಟೆ ದೂರುಗಳಿದ್ದರೂ ತಮ್ಮ ಕಾರ್ಯದರ್ಶಿಯ ಕುರಿತು ಯಾವ ಕ್ರಮವನ್ನೂ ಕೈಗೊಳ್ಳದೇ ಹೋದರೇಕೆ!? ತಮ್ಮ ಮನೆವಾರ್ತೆಯಿಂದ ಹಿಡಿದು ಸಂಸತ್ತಿ ನವರೆಗಿನ ಯಾವುದೇ ವ್ಯವಹಾರ, ವ್ಯಾಪಾರ, ಉಸಾಬರಿಯ ಸಣ್ಣ ನಿರ್ಧಾರ ಗಳನ್ನೂ ಖುದ್ದು ತಾವೇ ನಿರ್ವಹಿಸುವ ದಾವಣಗೆರೆ ಧಣಿಗಳು ತಮ್ಮ ಆಪ್ತವರ್ಗದ ಅಣಬೇರು ರಾಜಣ್ಣ, ಅಥಣಿ ವೀರಣ್ಣ ಮತ್ತು ತಮ್ಮ ಪುತ್ರ ಗಣೇಶ್ ಅವರನ್ನು ಮಹಾ ಸಭಾದ ಆಯಕಟ್ಟಿನ ಜಾಗದಲ್ಲಿ ಕೂರಿಸಿಯೂ ಈ ಕಾರ್ಯದರ್ಶಿಯ ಕಾರ್ಯವೈಖರಿಯ ಕುರಿತು ಇಷ್ಟೊಂದು ಉದಾಸೀನರಾಗಿದ್ದರೇ? ಹೋಗಲಿ, ಉಪಾಧ್ಯಕ್ಷ ಈಶ್ವರ್ ಖಂಡ್ರೆ ಏಕೆ ಈ ಕುರಿತು ಗಮನ ಹರಿಸಲಿಲ್ಲ? ಕೇವಲ ಶಿವಶಂಕರಪ್ಪನವರಲ್ಲದೆ ಯಾವುದೇ ರಾಜಕಾರಣಿ ಅಥವಾ ವಿದ್ಯಾವ್ಯಾಪಾರಿಗಳು (ಸಂಸಾರಿ ಯಾ ಸನ್ಯಾಸಿ) ಒಂದು ಧಾರ್ಮಿಕ ಉದ್ದೇಶದ ಸಾಮಾಜಿಕ ಸಂಸ್ಥೆಯ ಅಧ್ಯಕ್ಷರಾದರೆ ಆಗುವ ನಿಶ್ಚಿತ ಅನಾಹುತವೇ ಮಹಾಸಭಾದಲ್ಲಿ ಆದದ್ದು.

ಇಲ್ಲದಿದ್ದರೆ ಶಿವಶಂಕರಪ್ಪನವರ ಆಪ್ತರೂ, ವೀರಶೈವ ಲಿಂಗಾಯತ ಮಹಾಸಭಾದ ವಕ್ತಾರರೂ ಆದ ಅಣಬೇರು ರಾಜಣ್ಣ ಮತ್ತು ಅಥಣಿ ವೀರಣ್ಣನವರು ಧರ್ಮಭಂಜಕ ರಂಗಜಂಗಮರ ಭಂಜಕ ಅಭಿಯಾನಕ್ಕೆ ಜಯಕಾರ ಹಾಕಿ ಪಾಲ್ಗೊಳ್ಳುತ್ತಿದ್ದರೇ?! ಶಿವಶಂಕರಪ್ಪನವರು ಎಂದಾದರೂ ತಮ್ಮ ಸ್ವಜಾತಿ ಶಾಖಾಮಠದ ರಂಗಜಂಗಮರ ಭಂಜಕ ನಡೆಯನ್ನು ಖಂಡಿಸಿದ್ದರೇ? ದೂರದ ಪರದೇಶದಲ್ಲಿ ಕುಳಿತ ಅನಿವಾಸಿಗಳು ಇದನ್ನೆ ಗಮನಿಸಿ ಹೇಸಿಕೊಳ್ಳುತ್ತಿರುವಾಗ ಸ್ವದೇಶವಾಸಿ ಸಮಾಜ ಬಾಂಧವರು ಕಳೆದ ಒಂದು ದಶಕದಿಂದ ಎಷ್ಟೊಂದು ಹೇಸಿಕೊಂಡಿರಬಹುದು? ಕಳವಳಕಾರಿ ಸಂಖ್ಯೆಯಲ್ಲಿ ಕ್ರೈಸ್ತಮತಕ್ಕೆ ಲಿಂಗಾಯತರು ಮತಾಂತರವಾಗುತ್ತಿರುವುದೇ ಈ ಹೇಸಿಗೆಯ ಒಂದು ವಾಸ್ತವಿಕ ಮಾಪನವಾಗಿದೆ. ಆದರೆ ನೋಟಿಗಾಗಿ ವೋಟಿನ ಊಳಿಗಮಾನ್ಯ ಪ್ರಜಾ ಪ್ರಭುತ್ವವೇ ಎಲ್ಲೂ ಮೆರೆಯುತ್ತಿರುವಾಗ ಒಂದು ಧಾರ್ಮಿಕ ಸಮಾಜವು ಅಂಗೈ ಮೇಲಣ ಲಿಂಗಕ್ಕಿಂತ ಅಂಗೈಯೊಳಗಣ ಹಣದ ಥೈಲಿಗೆ ತಕಥೈ ಎಂದು ನರ್ತಿಸಲಾರದೇ?! ಎಂಬ ಜಿeಸೆ ಭೂತಾಕಾರವಾಗಿ ಬೆಳೆದು ಇಂದು ಸಾಕ್ಷಾತ್ಕಾರವಾಗಿದೆ.

ಅಂದ ಹಾಗೆ ಸದ್ಯದ ಆಧ್ಯಾತ್ಮಿಕ ಜಗತ್ತಿನ ಸದ್ಗುರು ಜಗ್ಗಿ ವಾಸುದೇವರವರು ಸಾಕಷ್ಟು ಸಲ, “ಭಾರತದ ಪ್ರಜಾಪ್ರಭುತ್ವವು ಊಳಿಗಮಾನ್ಯ ಪ್ರಜಾಪ್ರಭುತ್ವವೇ ಆಗಿದೆ" ಎಂದು ಜಗತ್ತಿಗೆ ಸಾರಿಹೇಳಿzರೆ ಎಂಬುದನ್ನು ಇಲ್ಲಿ ಸಾಂದರ್ಭಿಕವಾಗಿ ನೆನಪಿಸಿಕೊಳ್ಳಬಹುದು.

‘ಪ್ರತ್ಯೇಕ ಧರ್ಮ’ ಎಂಬ ಮೂಗಿನ ಮೇಲಿನ ಡಾಲ್ಡಾವನ್ನು ಸಮಾಜ ಅನುಭವಿಸಿದೆ. ಈ ಪ್ರತ್ಯೇಕ ಧರ್ಮದಿಂದ ಶ್ರೀಸಾಮಾನ್ಯನಿಗೆ ನಿಶ್ಶೂನ್ಯ ಲಾಭವಾಗಿ ಕ್ಯಾಪಿಟೇಶನ್ ಶುಲ್ಕ ನಿರ್ವಾಹಕರಿಗೆ ಸಿಗುವ ಲಾಭ, ಅದಕ್ಕಾಗಿ ಕ್ಯಾಪಿಟೇಶನ್ ಶುಲ್ಕ ನಿರ್ವಾಹಕರಿಂದ ಆದ ಸಮಾಜದ್ರೋಹವನ್ನು ಹಿಂದಿನ ಅಂಕಣಗಳಲ್ಲಿ ಸವಿವರವಾಗಿ ತಿಳಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಹಿಂದಿನ ಲೇಖನಗಳನ್ನು ಗಮನಿಸಬಹುದು. ಹೀಗಿರುವಾಗ ಈ ಕಾರ್ಯದರ್ಶಿಯ ಕಾರ್ಯವೈಖರಿ ನಿರ್ದೇಶಿತವೇ ಏಕಾಗಿರಬಾರದು? ಇದಕ್ಕಾಗಿ ಕೆಲವೇ ಕೆಲವು ಕುಟುಂಬಗಳ ಕಪಿಮುಷ್ಟಿಯಲ್ಲಿರುವ ವಿದ್ಯಾಸಂಸ್ಥೆಗಳ ಲಾಭಕ್ಕಾಗಿ ಈ ಧರ್ಮ ಭಂಜನೆ ಏಕಾಗಿರಬಾರದು? ಒಂದೆಡೆ ವೀರಶೈವ ಲಿಂಗಾಯತ ಒಂದೇ ಎನ್ನುತ್ತಾ ಸ್ವಾಮೀಜಿ ಗಳ ಪಾದಪೂಜೆ, ಭಕ್ತಿಪ್ರದರ್ಶನ, ಭರಪೂರ ದಕ್ಷಿಣೆ ಕೊಟ್ಟು ಜನರಲ್ಲಿ ಭಾವುಕತೆಯನ್ನು ಬಿಂಬಿಸಿ, ಇನ್ನೊಂದೆಡೆ ಪ್ರತ್ಯೇಕ ಧರ್ಮದ ಬದಿಯಲ್ಲಿನ ಬೀಗತನ, ಸ್ವಜಾತಿ ಶಾಖಾಮಠಿಯ ಭಂಜಕಕೃತ್ಯವನ್ನು ಎಲ್ಲಿಯೂ ಖಂಡಿಸದಿರುವುದು ಎಲ್ಲವೂ ಒಂದು ಬಂಡವಾಳಶಾಹಿಗಳ ಸಂಘಟಿತ ತಂತ್ರ ಯಾಕಾಗಿರಬಾರದು ಎಂದು ಇಂದು ಅಖಂಡ ವೀರಶೈವ ಲಿಂಗಾಯತ ರಲ್ಲಿ ಅನುಮಾನದ ಹುತ್ತಗಳನ್ನೇ ಹುಟ್ಟು ಹಾಕಿದೆ.

ಆದರೂ ಕುರುಡು ಕಾಂಚಾಣಕ್ಕೆ ಸಭಿಗರು ತಲೆಬಾಗಿಸಿದ್ದರೇನೋ ಎನಿಸಿದೆ. “ಲಿಂಗವನ್ನು ಸ್ವಾಯತ್ತ ಮಾಡಿಕೊಂಡು ವಿದ್ಯೆಯ ಮಾರಾಟದಲ್ಲಿ ತೊಡಗಿರುವವರು ವೀರಶೈವ ಲಿಂಗಾಯತಕ್ಕೆ ಹೊರಗು" ಎಂಬ ನಿಷ್ಠುರ ಕಟುಸತ್ಯವನ್ನು ಇಂದು ಕವಲುದಾರಿ ಯಲ್ಲಿರುವ ಅಖಂಡ ವೀರಶೈವ ಲಿಂಗಾಯತ ಸಮಾಜವು ಅರಿತು ನಿರ್ಣಾಯಕ ನಿರ್ಧಾರವನ್ನು ಕಂಡುಕೊಳ್ಳಬೇಕು.

ಇಂಥ ವಿದ್ಯಾ ವ್ಯಾಪಾರದಿಂದಲೇ ತಮ್ಮ ಶ್ರೀಮಂತಿಕೆಯ ಊಳಿಗಮಾನ್ಯ ಕೋಟೆಯನ್ನು ಕಟ್ಟಿಕೊಂಡ ಸಂಸಾರಿಗಳು ಮತ್ತು ಶ್ರೀಮಂತ ಮಠಗಳನ್ನು ಮಾಡಿಕೊಂಡ ಸನ್ಯಾಸಿ ವರ್ಗ ಗಳೆರಡೂ ವಿದ್ಯಾ ವ್ಯಾಪಾರಿಗಳದ್ದೇ ಆಗಿದೆ. ಇವರಲ್ಲಿ ಕೆಲವರು ತೋರಿಕೆಗೆ ಅನಾಥಾಶ್ರಮ, ವೃದ್ಧಾಶ್ರಮ ಮಾಡಿದ್ದರೂ ಅದು ಅವರ ಮನದೊಳಗಿನ ಅಪರಾಧಿ ಪ್ರಜ್ಞೆಗಿಂತಲೂ, ಸಮಸಮಾಜ ಕಟ್ಟುವ ಉಳ್ಳವರಿಂದ ಪಡೆದು ಇರದವರಿಗೆ ಹಂಚಿಕೆ ಮಾಡುವ ಕಾಯಕ-ದಾಸೋಹ ಶರಣ ತತ್ವದ ಮೂಲಕ ನಾವು ಸಮಾಜಸೇವೆ ಮಾಡುತ್ತಿದ್ದೇವೆ ಎಂಬ ನಂದಿ ಕೋಡುಗಳಿಗಾಗಿ ಮಾತ್ರ. ಏಕೆಂದರೆ ವಿದ್ಯಾ ವ್ಯಾಪಾರದಿಂದ ಆಯತವಾದ ಸಂಪತ್ತು ಮತ್ತು ದಾಸೋಹಕ್ಕಾಗಿ ವ್ಯಯಿಸಿದ ವೆಚ್ಚದ ನಡುವಿನ ಅಂತರ, ಅಜಗಜಾಂತರ!

ಇವರ ವ್ಯಾಪಾರಿ ಸೂತ್ರವು ವೀರಶೈವ ಶಾಸ್ತ್ರಕ್ಕೂ, ವಿರಕ್ತರ ಸೂತ್ರಕ್ಕೂ, ಶರಣರ ಸಿದ್ಧಾಂತ ಕ್ಕೂ ಎಳ್ಳಷ್ಟೂ ಹೊಂದದು. ಈ ವ್ಯಾಪಾರಿಗಳ್ಯಾರೂ ಸಮಾಜ ಬಾಂಧವರಿಗೆ ಸೋಡಿ ( Discount) ಕೊಟ್ಟು ಸೀಟು ಕೊಟ್ಟದ್ದು ಅಷ್ಟಕ್ಕಷ್ಟೇ.

ಕೆಲ ಸಂಸಾರಿ ವಿದ್ಯಾ ವ್ಯಾಪಾರಿಗಳು ತಮ್ಮ ಸ್ವಜಾತಿ ಬಾಂಧವರಿಗೆ ‘ಜಾತಿ ಅತೀಯತೆ’ ಯಲ್ಲಿ ಸೋಡಿ ಸೀಟು, ಉದ್ಯೋಗ ಕೊಟ್ಟಿದ್ದಾರೆಯೇ ಹೊರತು ಅಖಂಡ ಸಮಾಜ ಬಾಂಧವರಿಗಲ್ಲ. ಇದಕ್ಕೆ ಶಿವಶಂಕರಪ್ಪನವರ ಬಾಪೂಜಿ ಸಂಸ್ಥೆ ಸಹ ಹೊರತಲ್ಲ. ಬಾಪೂಜಿ ಸಂಸ್ಥೆಯಲ್ಲಿ ಇತರೆ ವೀರಶೈವ ಜಾತಿಯವರಿಗಿಂತ ನಾಲ್ಕು ಪಟ್ಟು ಅಧಿಕ ಸಂಖ್ಯೆಯ ಉದ್ಯೋಗಿಗಳಿರುವುದು ಶಿವಶಂಕರಪ್ಪನವರ ಸ್ವಜಾತಿ ಬಾಂಧವರು!

ಶಿವಶಂಕರಪ್ಪನವರು ತಮ್ಮ ಸುದೀರ್ಘ 95 ವರ್ಷಗಳ ಜೀವಿತದ ಕೊನೆಯ 30 ವರ್ಷ ಗಳಲ್ಲಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯ ಉದ್ದೇಶಕ್ಕೆ ಅನಿವಾರ್ಯವಾಗಿ ಲಿಂಗಾಯತ ಒಳಪಂಗಡಗಳ ಜಾತ್ಯತೀತ ನಿಲುವನ್ನು ಅಪ್ಪಿಕೊಂಡರು.

ಅದರಲ್ಲೂ ವೀರಶೈವ ಮಹಾಸಭಾದ ಅಧ್ಯಕ್ಷರಾದ ಮೇಲೆ ಅನಿವಾರ್ಯವಾಗಿ ಅಖಂಡ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಆಸ್ಥೆ ತೋರಿದರೇ ಹೊರತು ಇನ್ಯಾವ ವಿಶೇಷ ಆಸ್ಥೆಯಿಂದಲ್ಲ. ಈ ಬಗ್ಗೆ ಅನುಮಾನವಿರುವವರು ಅವರ ಬಾಪೂಜಿ ಸಂಸ್ಥೆಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಉದ್ಯೋಗಿಗಳ ಜಾತಿಗಣತಿ ನಡೆಸಿ ಪರಿಶೀಲಿಸ ಬಹುದು.

ಅವರ ಎಲ್ಲ ಸಾಮಾಜಿಕ ಮುತ್ಸದ್ದಿತನ, ದಾನದತ್ತಿಗಳು, ಧಾರ್ಮಿಕ ಸೇವೆಗಳು ಎಲ್ಲವೂ ಅವರ ಕೊನೆಯ 35 ವರ್ಷಗಳ ಜೀವಿತಾವಧಿಯಲ್ಲಿ ಆದ ಪರಿಪಕ್ವ ಬದಲಾವಣೆಗಳೇ ಹೊರತು ಅವೆಲ್ಲವೂ ಮೊದಲಿನಿಂದ ಇದ್ದಂಥದ್ದಲ್ಲ. ಈ ಪರಿವರ್ತನೆಗೆ ಕಾರಣ ಅವರ ಪುತ್ರ ಮಲ್ಲಿಕಾರ್ಜುನರು ಎನಿಸುತ್ತದೆ. ತಂದೆಯು ಮಕ್ಕಳ ಭವಿಷ್ಯ ರೂಪಿಸಿದರೆ, ಇಲ್ಲಿ ಮಲ್ಲಿಕಾರ್ಜುನರು ತಮ್ಮ ತಂದೆಯ ನಿವೃತ್ತಿ ವಯಸ್ಸಿನಲ್ಲಿ ಅವರ ರಾಜ್ಯಮಟ್ಟದ ವ್ಯಕ್ತಿತ್ವ ವನ್ನು ರೂಪಿಸಿದರು.

ಇಂದು ಶಿವಶಂಕರಪ್ಪನವರ ಎಲ್ಲಾ ಖ್ಯಾತಿ, ಜನಪ್ರಿಯತೆಯನ್ನು ರೂಪಿಸುವಲ್ಲಿ ಜನಾನು ರಾಗಿ ದೂರದರ್ಶಿತ್ವದ ಅವರ ಕೊನೆಯ ಪುತ್ರ ಕಾರಣವೆಂಬುದು ನನ್ನ ವೈಯಕ್ತಿಕ ಅನಿಸಿಕೆ ಯಾಗಿದೆ. ಮಲ್ಲಿಕಾರ್ಜುನರಂಥ ಓರ್ವ ಸಮರ್ಥ ಸಮಾಜಸೇವಕರನ್ನು ದಾವಣಗೆರೆಗೆ ಕೊಟ್ಟದ್ದು ಮಾತ್ರ ಶಿವಶಂಕರಪ್ಪನವರ ಸಾಧನೆ ಎನ್ನುವುದೂ ನನ್ನ ವೈಯಕ್ತಿಕ ಅನಿಸಿಕೆಯಾಗಿದೆ.

ಒಟ್ಟಾರೆ ಸಮಗ್ರವಾಗಿ ಶಿವಶಂಕರಪ್ಪನವರ ಸಾಮಾಜಿಕ ಸೇವೆ ಎಷ್ಟು ಗಹನವಾಗಿದೆಯೋ ಅದರ ನೆರಳು ಅಷ್ಟೇ ಕಪ್ಪಾಗಿದೆ. ಈ ಕಪ್ಪನೆಯ ನೆರಳು ಎಲ್ಲಾ ವಿದ್ಯಾ ವ್ಯಾಪಾರಿಗಳದ್ದೂ ಆಗಿದೆ. ಈಗ ಶ್ರೀಯುತರ ನಿಧನದಿಂದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಖಾಲಿ ಯಾಗಿದೆ. ಸಮಾಜದ ಇಂಥ ದುರಿತ ಕಾಲದ ಸನ್ನಿವೇಶದಲ್ಲಿ ಮಹಾಸಭಾದ ರಾಷ್ಟೀಯ ಅಧ್ಯಕ್ಷ ಸ್ಥಾನಕ್ಕೆ ಮತ್ತದೇ ಹಳಸಲು ಊಳಿಗಮಾನ್ಯ ವಂಶಾಡಳಿತದ, ರಾಜಕಾರಣಿಗಳ, ವಿದ್ಯಾ ವ್ಯಾಪಾರಿಗಳ (ಸಂಸಾರಿ ಮತ್ತು ಸನ್ಯಾಸಿ) ಹೆಸರುಗಳು ಮುನ್ನೆಲೆಗೆ ಬಂದಿವೆ.

ಇಂಥ ಸನ್ನಿವೇಶದಲ್ಲಿ ಧಾರ್ಮಿಕ ಸಂಸ್ಥೆಯಾದ ಮಹಾಸಭಾದ ಆಯ್ಕೆ ಯಾವುದಾಗ ಬೇಕು? ಸದ್ಯಕ್ಕೆ ಈ ಸ್ಥಾನಕ್ಕೆ ಶಾಮನೂರು ಕುಟುಂಬಸ್ಥರಬ್ಬರು, ಎಡೆಯೂರಪ್ಪ, ಈಶ್ವರ್ ಖಂಡ್ರೆ, ಪ್ರಭಾಕರ್ ಕೋರೆ ಅಲ್ಲದೆ ಸುತ್ತೂರು ಶ್ರೀಗಳು ಮತ್ತು ದಿಂಗಾಲೇಶ್ವರ ಶ್ರೀಗಳ ಹೆಸರುಗಳು ಮುನ್ನೆಲೆಯಲ್ಲಿ ಕೇಳಿಬರುತ್ತಿವೆ. ಈ ಎಲ್ಲಾ ಅಭ್ಯರ್ಥಿಗಳೂ ಅವರವರ ಮಾರ್ಗದಲ್ಲಿ ಸಾಧಕರೆನಿಸಿದ್ದರೂ ಇಂದಿನ ದುರಿತ ಕಾಲಮಾನದಲ್ಲಿ ಭಾವೋದ್ವೇಗಕ್ಕೊಳ ಗಾಗದೆ ಎಲ್ಲವನ್ನೂ ತರ್ಕಕ್ಕೊಡ್ಡಿ ತೂಲಿಸಿ ಅಧ್ಯಕ್ಷರನ್ನು ಆಯ್ಕೆಮಾಡುವ ನಿಷ್ಠುರ ನಿರ್ಧಾರ ಸಮಾಜದ ಮುಂದಿದೆ.

ಎಡೆಯೂರಪ್ಪನವರು ವಯೋವೃದ್ಧರು ಎಂಬ ಕಾರಣಕ್ಕೆ ಆಗಲೇ ನಿವೃತ್ತಿ ಹೊಂದಿದ್ದಾರೆ. ಈಶ್ವರ್ ಖಂಡ್ರೆ ಕ್ಯಾಬಿನೆಟ್ ಸಚಿವರಾಗಿ ಅವರದೇ ಕಾರ್ಯಗಳಲ್ಲಿ ಪುರುಸೊತ್ತು ಇಲ್ಲದಂತೆ ಮಗ್ನರಾಗಿದ್ದಾರೆ. ಮೇಲಾಗಿ ಈಗಾಗಲೇ ಮಹಾಸಭಾದ ಉಪಾಧ್ಯಕ್ಷರಾಗಿ ಅವರೂ ಮಹಾಸಭಾದ ಇಂದಿನ ದುಸ್ಥಿತಿಗೆ ಪರೋಕ್ಷ ಕಾರಣರು ಎಂಬ ಜನಾಭಿಪ್ರಾಯವಿದೆ.

ಕೋರೆಯವರು ಸಹ ತಮ್ಮ ಸಂಸ್ಥೆಗಳಲ್ಲಿ ಮಗ್ನರು. ಇನ್ನು ಸುತ್ತೂರು ಶ್ರೀಗಳು ಸಹ ದೇಶ-ವಿದೇಶಗಳಲ್ಲಿ ಪಸರಿಸಿರುವ ತಮ್ಮ ಸಂಸ್ಥೆಗಳಲ್ಲಿ ಮಗ್ನರಾಗಿರುವ ಕಾರಣ ಮಹಾಸಭಾ ಕಾರ್ಯಗಳಿಗೆ ಅವರಿಗೆಷ್ಟು ಸಮಯಾವಕಾಶವಿರುತ್ತದೋ ಗೊತ್ತಿಲ್ಲ.

ಅಲ್ಲದೆ ಈ ಹಿಂದೆಯೇ ಚರ್ಚಿಸಿದಂತೆ ಕ್ಯಾಪಿಟೇಷನ್ ಶುಲ್ಕ ನಿರ್ವಾಹಕರಿಂದ ಆದ ಎಡವಟ್ಟುಗಳನ್ನು ಸಮಾಜವು ನಿರ್ದಾಕ್ಷಿಣ್ಯವಾಗಿ ಸ್ವಚ್ಛಗೊಳಿಸಿ ಶುದ್ಧೀಕರಿಸಬೇಕಾದ ಧರ್ಮಕಾರಣ ತುರ್ತು ಸಮಾಜದ ಮುಂದಿದೆ. ಈ ಹಿನ್ನೆಲೆಯನ್ನು ಪರಿಗಣಿಸಿದಾಗ ಸದ್ಯಕ್ಕೆ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಎಡೆಯೂರಪ್ಪ, ಈಶ್ವರ್ ಖಂಡ್ರೆ, ಪ್ರಭಾಕರ್ ಕೋರೆ, ಶಾಮನೂರು ಕುಟುಂಬಸ್ಥರು ಮತ್ತು ಸುತ್ತೂರು ಶ್ರೀಗಳು ಈ ಕುರಿತು ಆಲೋಚಿಸದಿರು ವುದೇ ಒಳಿತು. ಹಾಗಾಗಿ ಮೇಲಿನ ಹೆಸರುಗಳಲ್ಲಿ ಕ್ಯಾಪಿಟೇಷನ್ ಶುಲ್ಕ ನಿರ್ವಹಣೆ-ರಹಿತ ಅಭ್ಯರ್ಥಿಗಳೆಂದರೆ ದಿಂಗಾಲೇಶ್ವರ ಸ್ವಾಮೀಜಿಗಳು ಮಾತ್ರ!

ಕ್ಯಾಪಿಟೇಷನ್ ಶುಲ್ಕ ನಿರ್ವಹಣೆಯಲ್ಲದೆ ಊಳಿಗಮಾನ್ಯ ದೃಷ್ಟಿಯಿಂದ ನೋಡಿದಾಗ ಸಹ ಶಾಮನೂರು ಕುಟುಂಬಸ್ಥರಬ್ಬರು, ಎಡೆಯೂರಪ್ಪ, ಈಶ್ವರ್ ಖಂಡ್ರೆ ಮತ್ತು ಪ್ರಭಾಕರ್ ಕೋರೆ ಎಲ್ಲರೂ ಊಳಿಗಮಾನ್ಯ ಪ್ರಜಾಪ್ರಭುತ್ವದ ಪೋಷಕರೇ ಎಂದು ಈಗಾಗಲೇ ಸಾಬೀತಾಗಿದೆ. ಈ ನಾಯಕರ 2ನೇ ತಲೆಮಾರುಗಳು ಆಗಲೇ ಅಧಿಕಾರ ಹೊಂದಿ 3ನೇ ತಲೆಮಾರಿಗೆ ವರ್ಗಾಯಿಸಿದ್ದಾರೆ/ವರ್ಗಾಯಿಸುತ್ತಿದ್ದಾರೆ.

ಇನ್ನು ಸುತ್ತೂರು ಮಠವೂ ವಂಶಾಡಳಿತದ ಮಠವೇ ಆಗಿದ್ದು ಊಳಿಗಮಾನ್ಯ ಮಠೀಯ ವ್ಯವಸ್ಥೆಯನ್ನೇ ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಿಂದಲೂ ಸೂಕ್ತವಾಗಿ ಉಳಿಯುವ ಏಕೈಕ ಅಭ್ಯರ್ಥಿ ಎಂದರೆ ದಿಂಗಾಲೇಶ್ವರ ಸ್ವಾಮೀಜಿಗಳು ಮಾತ್ರ!

ಅಂದ ಹಾಗೆ ದಿಂಗಾಲೇಶ್ವರ ಶ್ರೀಗಳು ಎಂದರೆ ಯಾರು? ಈ ಬಗ್ಗೆ ಅವರ ಕುರಿತು ಕೊಂಚ ಅರಿತುಕೊಂಡಾಗ ತಿಳಿದದ್ದು: ಮಹಾಸಭಾವನ್ನು ಸ್ಥಾಪಿಸಿದ ಪೂಜ್ಯ ಶ್ರೀ ಹಾನಗಲ್ ಕುಮಾರ ಸ್ವಾಮಿಗಳ ಶಿವಯೋಗಾಶ್ರಮದಲ್ಲಿ ಸನ್ಯಾಸ ದೀಕ್ಷೆ ಪಡೆದ ಮತ್ತು ವಯಸ್ಸಿನಲ್ಲಿ ಈ ಎಲ್ಲಾ ಅಭ್ಯರ್ಥಿಗಳಿಗಿಂತ ಕಿರಿಯರಾದ ದಿಂಗಾಲೇಶ್ವರ ಶ್ರೀಗಳು ಉತ್ತಮ ಪ್ರವಚನ ಕಾರರೂ, ವಾಗ್ಮಿಯೂ, ನಿಷ್ಠುರವಾದಿಯೂ, ಗುರು-ವಿರಕ್ತ-ಶರಣ ಸಮನ್ವಯಕಾರರೂ ಹೌದು ಎಂದು ಮಾಧ್ಯಮಗಳ ಮೂಲಕ ತಿಳಿಯುತ್ತದೆ.

ಶ್ರೀಗಳು ಮೊದಲಿಗೆ ಬಾಲೇಹೊಸೂರು ದಿಂಗಾಲೇಶ್ವರ ಮಠದಲ್ಲಿದ್ದವರು (ಕರ್ತೃ- ಶ್ರೀ ಮ.ನಿ.ಪ್ರ. ದಿಂಗಾಲೇಶ್ವರ ಶಿವಯೋಗಿಗಳು. ಗದಗ ಜಿ ಶಿರಹಟ್ಟಿ ತಾಲೂಕಿನ ಬಾಲೇ ಹೊಸೂರು ಗ್ರಾಮ). ನಂತರ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಪಟ್ಟವಾದರು. ತಮ್ಮ ಅಧಿಕಾರಾವಧಿಯಲ್ಲಿ ಈ ಎರಡೂ ಮಠಗಳ ಕೆಲವು ಗಮನಾರ್ಹ ಅಭಿವೃದ್ಧಿಯನ್ನು ಮಾಡಿದ್ದಾರೆ ಎನ್ನಲಾಗಿದೆ.

ಇವೆಲ್ಲಕ್ಕಿಂತ ಧಾರ್ಮಿಕವಾಗಿ ಅಖಂಡ ವೀರಶೈವ ಲಿಂಗಾಯತ ಸಮಾಜದ 2018ರ ವಿಭಜನೆಯ ವಿರುದ್ಧ ಸಕ್ರಿಯವಾಗಿ ಸಮಾಜವನ್ನು ಸಂಘಟಿಸಿ ಅಖಂಡತೆಯನ್ನು ಎತ್ತಿ ಹಿಡಿಯುವ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹೋರಾಟದ ಸಮಯದಲ್ಲಿ ಮಾತೆ ಮಹಾದೇವಿಯವರನ್ನು ಸಂವಾದದಲ್ಲಿ ಮಣಿಸಿದ್ದು, ಪ್ರತ್ಯೇಕ ವಾದದ ಹೊರಟ್ಟಿ, ಜಾಮದಾರ ಮುಂತಾದವರನ್ನು ಸಂವಾದಕ್ಕೆ ಆಹ್ವಾನಿಸಿದ್ದು ಮತ್ತವರುಗಳು ಸಂವಾದಿಸಲಾಗದೆ ಹೋದದ್ದು, ಇತ್ತೀಚೆಗೆ ವೀರಣ್ಣ ರಾಜೂರರನ್ನು ವೇದಿಕೆಯ ಮೇಲೆಯೇ ತರಾಟೆಗೆ ತೆಗೆದುಕೊಂಡದ್ದು ಮತ್ತು ಎಲ್ಲಾ ಬಲ್ಲೆನೆಂದು ನರ್ತಿಸುವ ರಂಗಜಂಗಮರ ಅಜ್ಞಾನವನ್ನು ಸೌಮ್ಯವಾಗಿಯೇ ತಕ್ಕ ಉತ್ತರದಿಂದ ಬಯಲಾಗಿಸಿದ್ದು, ವೀರಶೈವ ಲಿಂಗಾಯತರಿಗೆ ತಕ್ಕ ಪ್ರಾತಿನಿಧ್ಯ ಸಿಗದಿದ್ದರೆ ಚುನಾವಣೆಗೆ ಸ್ಪರ್ಧಿಸುವುದಾಗಿ ನಾಮಪತ್ರವನ್ನು ಸಲ್ಲಿಸಿದ್ದುದು ಇವರ ನಿಲುವನ್ನು ಮತ್ತು ಬದ್ಧತೆ ಯನ್ನು ತೋರುತ್ತದೆ.

ಎಲ್ಲಕ್ಕೂ ಮಿಗಿಲಾಗಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕೇವಲ 10 ದಿನಗಳ ಅವಧಿಯೊಳಗೆ ಗುರು-ವಿರಕ್ತ-ಶರಣ ಪರಂಪರೆಯವರನ್ನು ಒಗ್ಗೂಡಿಸಿ ಪಂಚಾಚಾರ್ಯರನ್ನು ಸಮಾಸನದಲ್ಲಿ ಕೂಡಿಸಿ ಎಲ್ಲಾ ಪಕ್ಷಗಳ ರಾಜಕಾರಣಿಗಳನ್ನೂ ಸೇರಿಸಿ ಏಕತಾ ಸಮಾವೇಶವನ್ನು ನಡೆಸಿದ್ದುದು ಇವರ ಸಂಘಟನಾ ಸಾಧನೆ ಎನ್ನಬಹುದು.

ಒಟ್ಟಾರೆ ಯಾವುದೇ ಕ್ಯಾಪಿಟೇಶನ್ ಶುಲ್ಕ ನಿರ್ವಹಣೆ ರಹಿತ, ವಂಶಾಡಳಿತವಿರದ ಮತ್ತು ವೀರಶೈವ ಲಿಂಗಾಯತ ಅಖಂಡತೆಯ ಬದ್ಧತೆ ಹೊಂದಿರುವ ಸಂಘಟನಾ ಶಕ್ತಿಯ ಹೊಚ್ಚ ಹೊಸತನ ಇವರಲ್ಲಿದೆ ಎನ್ನಬಹುದು. ಸದ್ಯದ ಅಧ್ಯಕ್ಷ ಸ್ಥಾನಕ್ಕೆ ಮಂಚೂಣಿಯಲ್ಲಿರುವ ಹೆಸರುಗಳಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳ ವ್ಯಕ್ತಿತ್ವ ವಿಭಿನ್ನವೂ ಆಕರ್ಷಕವೂ ಆಗಿರು ವುದು ನಿಜ. ಸದ್ಯಕ್ಕೆ ಮಹಾಸಭೆಗೆ ಬೇಕಾಗಿರುವುದೂ ಇಂಥ ಹೊಚ್ಚ ಹೊಸ ಗುರುತಿನ ನಾಯಕತ್ವವೇ ಆಗಿದೆ.

ಇದಿಷ್ಟು ಮಹಾಸಭಿಗರ ಮುಂದಿರುವ ಆಯ್ಕೆಯ ಪಟ್ಟಿ. ಇಂದಿನ ದುರಿತ ಕಾಲದ ಪರಿಸ್ಥಿತಿ ಯಲ್ಲಿ ಮಹಾಸಭಿಗರು ಥೈಲಿಗೆ ಮಣಿಯದೆ ಲಿಂಗಕ್ಕೆ ನಿಷ್ಠರಾಗಿ ಒಂದು ನಿಷ್ಠುರ, ತಾರ್ಕಿಕ ನಿರ್ಧಾರವನ್ನು ಕೈಗೊಂಡು ಲಿಂಗಾಹತ ನಿರ್ವೀರ್ಯಶವದಂತಿರುವ ಸಂಸ್ಥೆಯನ್ನು ಮತ್ತೊಮ್ಮೆ ಸಂಘಟಿಸಿ ನಿಜಾರ್ಥದ ವೀರಶೈವ ಲಿಂಗಾಯತ ಮಹಾಸಭಾ ಆಗಿಸುವ ನೈತಿಕ ಹೊಣೆಯನ್ನು ಪ್ರದರ್ಶಿಸಬಲ್ಲರೇ?!

“ಅಂಗದ ಮೇಲೊಂದು ಲಿಂಗವು, ಲಿಂಗದ ಮೇಲೊಂದು ಅಂಗವು. ಆವುದು ಘನವೆಂಬೆ? ಆವುದು ಕಿರಿದೆಂಬೆ? ತಾಳೋಷ್ಠಸಂಪುಟಕ್ಕೆ ಬಾರದ ಘನ, ಉಭಯಲಿಂಗ ವಿರಹಿತವಾದ ಶರಣ. ಕೂಡಲಚೆನ್ನಸಂಗಾ ಲಿಂಗೈಕ್ಯವು".

(ಲೇಖಕರು ಶಿಕಾಗೋ ನಿವಾಸಿ ಮತ್ತು ಸಾಹಿತಿ)