ವಿದ್ಯಮಾನ
ಇತ್ತೀಚೆಗೆ ಲೋಕಾರ್ಪಣೆಗೊಂಡ ಸಂಶೋಧಕ ರವಿ ಹಂಜ್ ಅವರ ’ಬಸವ ಮಂಟಪ’ ವೀರಶೈವ ಲಿಂಗಾಯತ ಸತ್ಯದರ್ಶನ ಎನ್ನುವ ಕೃತಿಯನ್ನು ಕರ್ನಾಟಕ ಸರಕಾರ ಮುಟ್ಟುಗೋಲು ಹಾಕಿದೆ. ಅದೇನು ಹೊಸ ವಿಷಯವಲ್ಲ, ಹಿಂದೆಯೂ ಪುಸ್ತಕಗಳನ್ನು ಸರಕಾರ ಹೀಗೆ ಮುಟ್ಟುಗೋಲು ಹಾಕಿದ್ದಿದೆ, ಡಾ.ಬಂಜಗೆರೆ ಜಯಪ್ರಕಾಶ್ ಅವರು ‘ಆನು ದೇವಾ ಹೊರಗಣವನು’ ಎಂಬ ಕೃತಿಯಲ್ಲಿ ಬಸವಣ್ಣನವರ ಜಾತಿ, ಮೂಲ ಮತ್ತು ಐತಿಹಾಸಿಕ ಹಿನ್ನೆಲೆಯ ಕುರಿತು ಹೊಸ ಸಂಶೋಧನಾತ್ಮಕ ಹಾಗೂ ವಿಮರ್ಶಾತ್ಮಕ ಚರ್ಚೆಗಳನ್ನು ಮುಂದಿಟ್ಟಿದ್ದರು. ನಂತರ ಈ ಕೃತಿಯನ್ನು ಕರ್ನಾಟಕ ಸರ್ಕಾರ ನಿಷೇಧಿಸಿ ಮುಟ್ಟುಗೋಲು ಹಾಕಿಕೊಂಡಿತ್ತು.
ಸರ್ಕಾರದ ಈ ನಿಷೇಧ ಕ್ರಮಕ್ಕೆ ಕನ್ನಡದ ಅನೇಕ ಪ್ರಗತಿಪರ ಚಿಂತಕರು ಮತ್ತು ಸಾಹಿತಿಗಳಿಂದ ವಿರೋಧ ವ್ಯಕ್ತವಾಗಿತ್ತು; ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಎದುರಿಸ ಬೇಕೇ ಹೊರತು ಪುಸ್ತಕವನ್ನು ನಿಷೇಧಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧ ಎಂಬ ಅಭಿಪ್ರಾಯ ಕೇಳಿ ಬಂದಿತ್ತು.
ಪ್ರೊ.ನಾರಾಯಣಾಚಾರ್ಯರ ‘ವಾಲ್ಮೀಕಿ ಯಾರು’ ಕೃತಿಯನ್ನೂ ಕರ್ನಾಟಕ ಸರ್ಕಾರ ನಿಷೇಧಿಸಿತ್ತು. ಈ ಕೃತಿಯಲ್ಲಿ ಮಹರ್ಷಿ ವಾಲ್ಮೀಕಿ ಅವರು ಬೇಡ ಸಮುದಾಯದವರಲ್ಲ, ಬ್ರಾಹ್ಮಣರು ಎಂದು ಲೇಖಕರು ಪ್ರತಿಪಾದಿಸಿದ್ದರು. ಇದು ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ವಿವಿಧ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕರ್ನಾಟಕ ಸರ್ಕಾರವು ಈ ಕೃತಿಯನ್ನು ನಿಷೇಧಿಸಿತ್ತು. ಹೀಗೆ ಅನೇಕ ಕೃತಿಗಳು ಕರ್ನಾಟಕದಲ್ಲಿ ನಿಷೇಧಕ್ಕೊಳಗಾದ ಉದಾಹರಣೆಗಳು ನಮ್ಮ ಮುಂದಿವೆ.
ಹೀಗೆ ನಿಷೇಧಕ್ಕೆ ಒಳಪಟ್ಟ ಈ ಎಲ್ಲ ಪುಸ್ತಕಗಳಲ್ಲೂ ಒಂದು Common factor ಇದೆ, ಅದೇನು ಗೊತ್ತಾ? ಈ ಎಲ್ಲ ಪುಸ್ತಕಗಳು ನಿಷೇಧಕ್ಕೊಳಪಟ್ಟಮೇಲೆ ಅಥವಾ ನಿಷೇಧಿಸಲ್ಪಟ್ಟಿದ್ದರಿಂದ ಬಿಸಿ ಜಿಲೇಬಿಯಂತೆ ಮಾರಾಟವಾಗಿವೆ. ಆ ದೃಷ್ಟಿಯಿಂದ ನೋಡುವಾಗ, ಬಸವ ಮಂಟಪ ಪುಸ್ತಕವನ್ನು ನಿಷೇಧಿಸುವ ಮೂಲಕ ಪ್ರಚಾರ ಒದಗಿಸಿ, ರವಿ ಹಂಜ್ ಅವರಿಗೆ ಸರಕಾರವೇ ಉಪಕಾರ ಮಾಡಿದ ಹಾಗಾಯ್ತು ಹಾಗೂ ಪರೋಕ್ಷವಾಗಿ ಬಸವ ವಿರೋಧಿಗಳ ಪರ ಆದ ಹಾಗಾಯ್ತು.
ಇದನ್ನೂ ಓದಿ: Vinayak M Bhat Column : ಮರುನಾಮಕರಣಕ್ಕೆ ಕನ್ನಡದ ಪದವೇಕೆ ದೊರಕಲಿಲ್ಲ ?
ಅರ್ಥವಾಗುವವರಿಗೆ ಅರ್ಥವಾಗುತ್ತೆ ಅಂತ ಅಂದುಕೊಳ್ಳುತ್ತೇನೆ. ವಾಸ್ತವ ಏನು ಗೊತ್ತಾ? ಯಾವಾಗೆಲ್ಲ ಪುಸ್ತಕವನ್ನು ನಿಷೇಧಿಸಲಾಗುತ್ತೋ ಆ ಪುಸ್ತಕವನ್ನು ಹೆಚ್ಚು ಜನ ಓದುತ್ತಾರೆ, ಯಾವುದನ್ನು ಹೆಚ್ಚು ಮುಚ್ಚಿಡುವ ಪ್ರಯತ್ನ ಮಾಡಲಾಗುತ್ತೋ, ಜನಕ್ಕೆ ಅದನ್ನೇ ನೋಡುವ ಕುತೂಹಲ ಜಾಸ್ತಿಯಾಗುತ್ತೆ, ಕುತೂಹಲ ಜಾಸ್ತಿಯಾದ ಮೇಲೆ ಆ ವಸ್ತುವನ್ನು ಶತಾಯಗತಾಯ ಪಡೆಯುವುದು ಹೇಗೆ ಎನ್ನುವುದನ್ನು ಯಾರೂ ಹೇಳಿಕೊಡಬೇಕಾಗುವುದಿಲ್ಲ. ಈಗ ಆಗಿರುವುದೂ ಅದೇ, ರವಿ ಹಂಜ್ ಅವರು, ವರ್ಷಾನುಗಟ್ಟಲೇ ವಿಶ್ವವಾಣಿಯಲ್ಲಿ ಉದ್ದುದ್ದದ ಲೇಖನಗಳನ್ನು ಬರೆಯುತ್ತಲೇ ಬಂದರು, ಜಾಮದಾರ್ ಅವರ ಪ್ರತಿಕ್ರಿಯೆಯೂ ಸೇರಿ, ಅವರ ಲೇಖನಗಳಿಗೆ ದಿಟ್ಟ, ಕೆಟ್ಟ ಪ್ರತಿಕ್ರಿಯಾತ್ಮಕ ಲೇಖನಗಳೂ ಇದೇ ಪತ್ರಿಕೆಯಲ್ಲಿ ಪ್ರಕಟವಾದವು, ಯಾರಿಗೆ ಯಾವುದು ಇಷ್ಟವಾಯಿತೋ ಅದನ್ನು ಸ್ವೀಕರಿಸಿದ್ದರು, ಕೆಲವರು ಎರಡನ್ನೂ ಓದಿ ಕುಡುಗಿ ಬಿಟ್ಟಿದ್ದರು.
ಹಂಜ್ ಅವರ ಲೇಖನಗಳ ಸಾರಸಂಗ್ರಹವಾಗಿ ಮೂಡಿಬಂದಿರುವ ‘ಬಸವ ಮಂಟಪವನ್ನು’ ಎಷ್ಟು ಜನ ಕೊಂಡು ಓದುತ್ತಿದ್ದರೋ ಗೊತ್ತಿಲ್ಲ, ನಾನಂತೂ ಓದುತ್ತಿರಲಿಲ್ಲ, ಕಾರಣ ಅದು ನನ್ನ ಆಸಕ್ತಿಯ ವಿಷಯವಾಗಿರಲಿಲ್ಲ. ಆದರೆ ಈಗ ಹಾಗಲ್ಲ, ಇಷ್ಟೆ ಗಲಾಟೆಯಾಗುವಾಗ ಅದರೊಳಗೆ ಏನೋ ಇರಬೇಕು ಎನ್ನುವ ಕಲಹ ಕುತೂಹಲ ನನ್ನನ್ನೂ ಕಾಡುತ್ತಿದೆ, ‘ಬಸವ ಮಂಟಪ’ ಸೋಲ್ಡ್ ಔಟ್ ಆಗಿದೆ ಎಂದು ರವಿ ಹಂಜ್ ಅವರೇ ಹೇಳಿಯಾಗಿದೆ, ಆದರೂ ಪುಸ್ತಕಕ್ಕಾಗಿನ ನನ್ನ ಹುಡುಕಾಟ ಮಾತ್ರ ಜಾರಿಯಲ್ಲಿದೆ.
ವಿವಾದಿತ ಕೃತಿಯು ಮನೆಮನೆಗೆ ತಲುಪುವಂತೆ ನೋಡಿಕೊಂಡಿರುವುದು, ವಿಷಯದಲ್ಲಿ ಆಸಕ್ತಿ ಇಲ್ಲದವರೂ ಓದುವಂತೆ ಮಾಡಿರುವುದೇ ಬಸವ ಮಂಟಪ ಕೃತಿಯ ವಿರೋಧಿಗಳು ಮಾಡಿರುವ ಸಾಧನೆಯಾಗಿದೆ. ರವಿ ಹಂಜ್ ಅವರನ್ನು ರಾಜ್ಯಾದ್ಯಂತ ಪರಿಚಯ ಮಾಡಿಕೊಡುವಲ್ಲಿ, ವಿಶ್ವವಾಣಿ ಗಿಂತ ಹೆಚ್ಚಿನ ಕೆಲಸವನ್ನು ಸರಕಾರ, ಜಾಮದಾರ್ ಪಟಾಲಂ ಮಾಡಿದಂತಾಗಿದೆ.
ಹಾಗಲ್ಲದಿದ್ದರೆ, ಈ ಕೃತಿಯನ್ನು ಎಷ್ಟು ಜನ ಕೊಂಡು ಓದುತ್ತಿದ್ದರು? ಎಲ್ಲರೂ ಓದಲು ಅದೇನು ಭೈರಪ್ಪನವರ ಅಥವಾ ಯಂಡಮೂರಿಯ ಕಾದಂಬರಿಯೇ? ಅದೊಂದು ಸಂಶೋಧನಾತ್ಮಕ ಗ್ರಂಥ. ಹಾಗಾಗಿ, ಯಾವುದೇ ಪುಸ್ತಕವನ್ನು ಸರಕಾರ ಮುಟ್ಟುಗೋಲು ಹಾಕಿದೆ ಅಂತಾದರೆ, ಲೇಖಕನಿಗೆ ಒಂದು ರೀತಿಯ ಸುಪ್ತ ಸಂಭ್ರಮ, Market Value ಹೆಚ್ಚಿದ ಅನುಭವ, ಮಧ್ಯಮ ವರ್ಗದವರ ಮನೆಯ ಮೇಲೆ ಆದಾಯ ತೆರಿಗೆ ದಾಳಿಯಾದಾಗ ಅವರಿಗಾಗುವ ಅನುಭವ.
ನಮ್ಮ ಮನೆಯಮೇಲೂ ಆದಾಯ ತೆರಿಗೆ ದಾಳಿಯಾಯಿತಲ್ಲ, ನಾವೂ ಶ್ರೀಮಂತರೆಂದು ಅಕ್ಕಪಕ್ಕ ದವರು ಅಂದುಕೊಳ್ಳುವ ಹಾಗಾಯ್ತ ಅಂತ ಸಂಭ್ರಮಿಸುವಂತಾಯ್ತು. ಪ್ರತಿರೋಧ ತೋರಲೇ ಬೇಕು. ನಮ್ಮ ನಂಬಿಕೆಯಮೇಲೆ ಆಕ್ರಮಣ ಆದಾಗ, ನಾವು ನಂಬಿದ ಆದರ್ಶ ಪುರುಷರ ಮೇಲೆ ಸುಳ್ಳು ಆಪಾದನೆಗಳು ಬಂದಾಗ, ನಮ್ಮ ನಮ್ಮ ಸಮುದಾಯದ ಅಳಿವು ಉಳಿವಿನ ಪ್ರಸಂಗ ಎದುರಾದಾಗ ಸುಮ್ಮನಿರುವುದು ಸರಿಯಾದ ದಾರಿಯಲ್ಲ, ಹಾಗೆ ಸುಮ್ಮನಿದ್ದರೆ ನಿರ್ವೀರ್ಯರು ಎನಿಸಿಕೊಂಡುಬಿಡುತ್ತೇವೆ.
ಹಾಗಾಗಿ ಹೋರಾಟಕ್ಕೆ ಸ್ವಾಗತವಿದೆ. ಆದರೆ ಇಂದು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಯಾರೂ ಏನು ಮಾತನಾಡುವುದಾದರೂ ಹತ್ತು ಬಾರಿ ಆಲೋಚನೆ ಮಾಡುವ ಹಾಗಾಗಿದೆ. ಹಾಗಾಗಬಾರದು, ಟೀಕೆ ಟಿಪ್ಪಣಿಗಳಿಗೆ ಯಾರೂ ಅತೀತರಲ್ಲ ಅಥವಾ ಟೀಕೆ ಟಿಪ್ಪಣಿಗಳಿಗೆ ಒಳಗಾಗದ ಯಾವ ಮಹಾನುಭಾವರೂ ಇಲ್ಲ. ಅದನ್ನೆಲ್ಲ ದಕ್ಕಿಸಿಕೊಂಡಿದ್ದರಿಂದಲೇ ಅವರು ಕಾಲಾತೀತರಾದವರು. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಈ ಮೂವರು ಸಾಮಾನ್ಯರಲ್ಲ, ಮಹಾಮನುಜರು.
ಟೀಕೆ ಟಿಪ್ಪಣೆಗಳು, ವೈಚಾರಿಕ ಭಿನ್ನತೆಗಳ ಮಧ್ಯದಲ್ಲಿಯೂ ಶತಮಾನಗಳಿಂದ ಜನಮಾನಸದಲ್ಲಿ ಉಳಿದವರು. ಹಾಗೆ ನೋಡಿದರೆ, ಬಸವಣ್ಣನವರೂ ಆ ಕಾಲದಲ್ಲಿದ್ದ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿ, ಧಿಕ್ಕರಿಸಿ ಅದರ ವಿರುದ್ಧ ಸೆಟೆದೆದ್ದು ಹೋರಾಡಿ, ಎಲ್ಲರನ್ನೂ ಒಳಗೊಂಡ ಸಮಾಜ ವೊಂದರ ನಿರ್ಮಾಣದ ಕನಸು ಕಂಡವರಲ್ಲವೇ? ಯುಗಯುಗಗಳಿಂದ ಆಚರಣೆಯಲ್ಲಿದ್ದ ಸಂಪ್ರದಾಯವನ್ನು ಟೀಕಿಸಿ, ವಿರೋಧಿಸಿಯೇ ಬಸವಣ್ಣನವರ ಮಹಾಮನೆ ನಿರ್ಮಾಣವಾಗಿದ್ದ ಲ್ಲವೇ? ಇದ್ದಕ್ಕಿದ್ದ ಹಾಗೆ ಯಾರೋ ಒಬ್ಬ ಎದ್ದು ಬಂದು ಕಲ್ಲು ದೇವರು ದೇವರಲ್ಲ, ಮಣ್ಣ ದೇವರು ದೇವರಲ್ಲ ಎಂದಾಗ, ವೇದಕ್ಕೆ ಒರೆಯ ಕಟ್ಟುವೆ ಶಾಸ್ತ್ರಕ್ಕೆ ನಿಗಳವನಿಕ್ಕುವೆ ತರ್ಕದ ಬೆನ್ನ ಬಾರನೆತ್ತುವೆ ಆಗಮದ ಮೂಗ ಕೊಯಿವೆ ನೋಡಯ್ಯಾ ಎಂದಾಗ ಅ ಕಾಲದ ಆಸ್ತಿಕ ಜನರಿಗೆ ಬಸವಣ್ಣನ ಕುರಿತು ಎಷ್ಟು ಕೋಪ ಬಂದಿರಬಹುದು? ಕಾರಣ, ಬಸವಣ್ಣ ಅಂದು ಸಾರಿದ ವಿಚಾರ ಆ ಕಾಲದ ಆಚಾರವಂತರ ನಂಬಿಕೆಗೆ, ಶ್ರದ್ಧೆಗೆ ವಿರುದ್ಧವಾದದ್ದಾಗಿತ್ತು.
ರವಿ ಹಂಜ್ ಅವರ ಮಾತುಗಳಿಂದ ಈಗ ಬಸವಣ್ಣನ ಅನುಯಾಯಿಗಳಿಗೆ ಇಷ್ಟು ಅಪಮಾನ, ನೋವು, ಸಿಟ್ಟು ಆಕ್ರೋಶ ಎಲ್ಲವೂ ಆಗಬಹುದಾದರೆ, ಅಂದು ಬಸವಣ್ಣನ ಮೇಲೂ ಜನಕ್ಕೆ ಆಕ್ರೋಶ ಉಂಟಾಗಿರಬೇಕಲ್ಲ. ಹಾಗಾಗಿ, ದಯವಿಟ್ಟು ಹೊಸ ಹೊಸ ಸತ್ಯಗಳು ಈಚೆ ಬರುವುದಕ್ಕೆ ಬಿಡಿ, ಅದು ಸುಳ್ಳು ಅಂತ ಸಾಬೀತು ಮಾಡುವುದರಲ್ಲಿ ಶ್ರಮ ವ್ಯಯವಾಗಲಿ, ಅದುಬಿಟ್ಟು ಆಡಿದವರ ಬಾಯಿಮುಚ್ಚಿಸಲು ಹೋದಾಗ ಸಾಮಾನ್ಯ ಜನಕ್ಕೆ ಆ ಮಹಾಪುರುಷರ ಬಗ್ಗೆಯೇ ಸಂದೇಹ ಮೂಡಿಬಿಡುತ್ತೆ.
ಹಿಂದೂಗಳಾದ ನಮ್ಮನ್ನು ನೋಡಿ ಕಲಿಯಬೇಕು, ಒಳಉಡುಪು, ಪಾದರಕ್ಷೆಗಳ ಮೇಲೆ ನಮ್ಮ ದೇವಾನುದೇವತೆಗಳ ಚಿತ್ರ ಹಾಕಿದರೂ, ಚಾಮುಂಡಿ ತಾಯಿಯನ್ನು ವೇಶ್ಯೆ ಎಂದರೂ, ಶ್ರೀರಾಮ, ಕೃಷ್ಣರು ಕಲ್ಪನೆಯ ಕೂಸುಗಳು ಎಂದರೂ ನಮ್ಮ ರಕ್ತ ಮಾತ್ರ ಕುದಿಯುವುದೇ ಇಲ್ಲ, ಏನೂ ಆಗಿಲ್ಲವೆಂಬಂತೆ ನೆಮ್ಮದಿಯಾಗಿದ್ದುಬಿಡುತ್ತೇವೆ. ಅದಲ್ಲದಿದ್ದರೆ, ಹಂಜ್ ಅವರ ತಲೆಗೇ 5 ಲಕ್ಷ ಬೆಲೆಯಾದರೆ, ಹಿಂದೂಗಳ ಪವಿತ್ರ ದೇವತೆಗಳನ್ನೇ ಅವಹೇಳನ ಮಾಡಿದವರ ತಲೆಗೆ ಎಷ್ಟು ರೂಪಾಯಿ ಬಹುಮಾನ ಘೋಷಣೆಯಾಗಬೇಕಾಗಿತ್ತು ಅಲ್ವಾ? ಆದರೆ ಆಗೆಲ್ಲ ಸರಕಾರಕ್ಕೆ ಹಿಂದೂಗಳ ಸಂವೇದನೆಯ ಕೂಗು ಕೇಳಲೇ ಇಲ್ಲ ಪಾಪ, ಏನೂ ಆಗಿಲ್ಲವೆಂಬಂತೆ ಕಣ್ಣುಮುಚ್ಚಿ ಕುಳಿತಿತ್ತು. ಬದಲಿಗೆ ನಿಜಗುಣಾನ್ವಿತರುಗಳಿಗೆ ಒಳ್ಳೇ ಕೆಲಸಮಾಡಿದ್ದೀಯಪ್ಪಾ ಅಂತ ಸರಕಾರ ಪ್ರಶಸ್ತಿಕೊಟ್ಟು ಸನ್ಮಾನಿಸಿತು, ಅಂಥವರನ್ನು ಅಕಾಡೆಮಿಗಳಿಗೆ ನೇಮಿಸಲಾಯಿತು, ವೇದಿಕೆಯಲ್ಲಿ ಪಕ್ಕಕ್ಕೆ ಕುಳ್ಳಿರಿಸಿಕೊಳ್ಳಲಾಯಿತು.
ಇದೇ ಸಹಿಷ್ಣುತಾ ಭಾವವನ್ನು, ಉದಾರತೆಯನ್ನು ಸರಕಾರ ಈಗ ರವಿ ಹಂಜ್ ಅವರಿಗೂ ವಿಸ್ತರಿಸಬಹುದಿತ್ತಲ್ಲ! ಬೇರೆ ಧರ್ಮ ಅಂತ ಮಾಡಲು ಹೋಗಿ ಕೈಸುಟ್ಟುಕೊಂಡ ಧರ್ಮಭಂಜಕರು, ಸಂದರ್ಭದ ದುರುಪಯೋಗಪಡಿಸಿಕೊಳ್ಳಬೇಕು ಎಂದು ಪೂರ್ವ ಸಂಕಲ್ಪ ಮಾಡಿದವರು, ವಿಶ್ವೇಶ್ವರ ಭಟ್ಟರ ಮೇಲೆ ಯಾವುದೋ ಹಳೇ ದ್ವೇಷ ಇರುವವರು ಈ ಹೋರಾಟದ ಮುಂಚೂಣಿ ಯಲ್ಲಿದ್ದ ಹಾಗೆ ಕಾಣಿಸುತ್ತಿದೆ. ಇದು ಸರಿಯಾದ ದಾರಿಯಲ್ಲ.
ರವಿ ಹಂಜ್ ಅವರು ಪ್ರಸ್ತುತಪಡಿಸಿದ ವಿಚಾರಗಳನ್ನು ಇನ್ನೊಂದು ಪುಸ್ತಕದ ಮೂಲಕವೋ, ಲೇಖನದ ಮೂಲಕವೋ ಅಥವಾ ವಿಚಾರ ಸಂಕಿರಣಗಳ ಮೂಲಕವೋ ಸುಳ್ಳು/ತಪ್ಪು ಎಂದು ತಾತ್ವಿಕವಾಗಿ ಸಾಬೀತು ಮಾಡಬಹುದು. ಅದು ಬಿಟ್ಟು, ದಯವೇ ಧರ್ಮದ ಮೂಲವಯ್ಯಾ ಎಂದವರ ಅನುಯಾಯಿ ಗಳು, ರವಿ ಹಂಜ್ ಅವರ ತಲೆಗೆ ಐದು ಲಕ್ಷ ರೂಪಾಯಿಯ ಬೆಲೆಕಟ್ಟಿದರೆ ಬಸವಣ್ಣನಾದರೂ ಮೆಚ್ಚಬಹುದೇ? ಮತ್ತೆ, ಈ ದೇಶದಲ್ಲಿ ಕಾನೂನು ಎನ್ನುವುದೂ ಇನ್ನೂ ಸದೃಢವಾಗಿ ಇದೆಯ ಮಾರಾಯ್ರೆ! ಕೆಲವರು, ವಿಶ್ವೇಶ್ವರ ಭಟ್ಟರ ಹಾಗೂ ವಿಜಯ ಸಂಕೇಶ್ವರ್ ಅವರೇ ಎಂ.ಎಂ.ಕಲ್ಬುರ್ಗಿಯವರ ಹತ್ಯೆ ಮಾಡಿದ್ದಾರೆ ಎನ್ನುವ ಧಾಟಿಯಲ್ಲಿ ಮಾತನಾಡುತ್ತಾ, ಅವರನ್ನು ‘ಅಬೇಟರ್’ ಅಂತ ಆಗಲೇ ಒಳಗೆ ಹಾಕಬೇಕಾಗಿತ್ತು ಎನ್ನುತ್ತಾರೆ.
ಇದು ತೀರಾ ಬಾಲಿಶ ಅನಿಸುತ್ತೆ ಮತ್ತು ಅದು ಒಪ್ಪತಕ್ಕ ಮಾತಂತೂ ಅಲ್ಲವೇ ಅಲ್ಲ. ವಾಸ್ತವಿಕ ವಾಗಿ ವಿಶ್ವೇಶ್ವರ ಭಟ್ಟರು ಇಂಥವರ ಮೇಲೆ ಆಗಲೇ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು, ಹಾಗೆ ಮಾಡದೇ ಸುಮ್ಮನಿದ್ದು ಭಟ್ಟರು ಏನು ಸಾಧಿಸಿದರೋ ತಿಳಿಯುತ್ತಿಲ್ಲ. ತಾನು ಕೇವಲ ವಿಶ್ವೇಶ್ವರ ಭಟ್ಟರಲ್ಲ, ಸಂಪಾದಕ, ಜವಾಬ್ದಾರಿಯುತ ತ್ರಕರ್ತ ವಿಶ್ವೇಶ್ವರ ಭಟ್ಟರು ಎನ್ನುವ ಅಂತಃಪ್ರಜ್ಞೆ ಭಟ್ಟರನ್ನು ತಡೆದಿರಲು ಸಾಕು. ಒಂದೆರಡು ವರ್ಷಗಳ ಹಿಂದೆ ನಾನು ಮಣಿಮಂಜರಿ ಎನ್ನುವ ಯಾರೂ ಓದಬಾರದ ಮಾಧ್ವ ಗ್ರಂಥದ ದುಷ್ಟ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ವಿಶ್ವವಾಣಿಯಲ್ಲಿ ಬರೆದಿದ್ದೆ, ಮರುದಿನ ನೋಡಿದರೆ ಯಾರೋ ಒಬ್ಬರು ನನ್ನ ಅನಿಸಿಕೆಗಳಿಗೆ ವಿರುದ್ಧವಾಗಿ, ಮಣಿಮಂಜರಿಯ ಪರವಾಗಿ ನನಗಿಂತ ದೊಡ್ಡ ಲೇಖನ ಬರೆದಿದ್ದರು, ಮರುದಿನ ಮತ್ತೆ ಆತನ ಲೇಖನಕ್ಕೆ ನಾನು ಉತ್ತರವಾಗಿ ಬರೆದೆ, ಅದೂ ಪ್ರಕಟವಾಯಿತು. ಶತಾವಧಾನಿ ಆರ್.ಗಣೇಶ್ ಅವರೂ ಹಾಗೂ ಶ್ರೀಯುತ ವರ್ಕೇರಿಯವರೂ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು. ಇಷ್ಟೆ ಅದರೂ, ಭಟ್ಟರು ಮಾತ್ರ ಒಂದು ಚಕಾರ ಎತ್ತಲಿಲ್ಲ, ನನಗೇನೂ ಸಂಬಂಧವೇ ಇಲ್ಲ ಎನ್ನುವಂತಿ ದ್ದರು. ಅವರು ಅಂಕಣ ಬರಹಗಳ ಹಾಗೂ ಅಂಕಣಕಾರರ ವಿಷಯದಲ್ಲಿ ಪಕ್ಷಪಾತಿಗಳ ಎನ್ನುವುದನ್ನು ತಿಳಿಸಲು ಈ ಉದಾಹರಣೆ ಕೊಡಬೇಕಾಯಿತು.
ಇನ್ನು, ವಿಶ್ವೇಶ್ವರ ಭಟ್ಟರು ವೀರಶೈವ ಲಿಂಗಾಯಿತ ಸಮುದಾಯವನ್ನು, ಸ್ವಾಮೀಜಿಗಳನ್ನು ತುಂಬಾ ಪ್ರೀತಿಸುತ್ತಾರೆ ಎಂದು ಅವರ ಕೆಲವು ಅಭಿಮಾನಿಗಳು ಬರೆಯುತ್ತಿರುವುದನ್ನು ನೋಡು ತ್ತಿದ್ದೇನೆ, ಅದು ಅಪ್ಪಟ ಸುಳ್ಳು. ನಾನು ಕಂಡಂತೆ ವಿಶ್ವೇಶ್ವರ ಭಟ್ಟರು ಯಾವ ಸಮುದಾಯವನ್ನೂ ಪ್ರೀತಿಸುವುದೂ ಇಲ್ಲ, ದ್ವೇಷಿಸುವುದೂ ಇಲ್ಲ. ಅವರ ಪ್ರೀತಿಯಿರುವುದು ಅವರ ವೃತ್ತಿಯಲ್ಲಿ ಮಾತ್ರ. ಹಾಗೆ ಯಾವುದೋ ಸಮುದಾಯವನ್ನು ಪ್ರೀತಿಸಿ ಅಥವಾ ದ್ವೇಷಿಸಿ, ಓಲೈಕೆ ಅಥವಾ ವಿರೋಧ ಮಾಡುವುದರಿಂದ ಭಟ್ಟರಿಗೆ ಆಗಲಿಕ್ಕಿರುವುದಾದರೂ ಏನು? ಅವರೇನು ಮುಂದಿನ ಬಾರಿ ಚುನಾವಣೆಗೆ ನಿಲ್ಲಬೇಕಿದೆಯೆ? ಯಾವ ಹೈಕಮಾಂಡನ್ನು ಮೆಚ್ಚಿಸಬೇಕಿದೆಯೇ? ಒಂದು ರಾಜಕೀಯ ಪಕ್ಷದ ಅಥವಾ ಪ್ರಮುಖ ನಾಯಕರ ಮುಖವಾಣಿಯಾಗಿಯೇ ಬೆಳೆದುಬಂದಿರುವ ಕೆಲವು ಪತ್ರಿಕೆಗಳೂ, ಪತ್ರಕರ್ತರೂ ಇರುವುದು ತಿಳಿದೇ ಇದೆ, ಆದರೆ, ಇಲ್ಲಿಯವರೆಗೆ ಯಾವುದೇ ಪತ್ರಿಕೆ ಅಥವಾ ಪತ್ರಕರ್ತ, ಒಂದು ಜಾತಿಯ ಅಥವಾ ವರ್ಗದ ಪರ ಅಥವಾ ವಿರೋಧವಾಗಿ ನಿಂತಿರುವುದು ನನಗಂತೂ ತಿಳಿಯದು. ಹಾಗೆ ಮಾಡಿದರೆ ಆ ವರ್ಗದ ಓದುಗರನ್ನು ಪತ್ರಿಕೆ ಶಾಶ್ವತವಾಗಿ ಕಳೆದುಕೊಂಡಿತು ಅಂತಲೇ ಅರ್ಥ. ಕಿಂಚಿತ್ ವ್ಯಾವಹಾರಿಕ ಚಿಂತನೆಯಿರುವ ಯಾವ ಸಂಪಾದಕನೂ ಹಾಗೆ ಮಾಡಲಾರ.
ಹಾಗಾಗಿ, ಈ ಬಸವ ಮಂಟಪದ ಪ್ರಕರಣದಲ್ಲಿ ಪತ್ರಿಕಾ ಸಂಪಾದಕರಾದ ವಿಶ್ವೇಶ್ವರ ಭಟ್ಟರನ್ನು ಜರಿದು ಆಗುವ ಸಾಧನೆ ಏನೂ ಇಲ್ಲ, ಬಿಟ್ಟುಬಿಡಿ ಎನ್ನುವುದೇ ಛಿದ್ರಾನ್ವೇಷಿಗಳಿಗೆ ನನ್ನ ಹಿತವಚನ. ನೀವು ಏನು ಬೇಕಾದರೂ ಹೇಳಿ, ನಾವು ಮಾತ್ರ ಸುಮ್ಮನಿರುವುದಿಲ್ಲ, ಸಂಬಂಧವಿಲ್ಲದಿದ್ದರೂ ವಿಶ್ವೇಶ್ವರ ಭಟ್ಟರನ್ನು, ಬ್ರಾಹ್ಮಣರನ್ನು, ಆರ್ಎಸ್ಎಸ್ ಹಾಗೂ ಬಿಜೆಪಿಯನ್ನೂ ದೂಷಣೆ ಮಾಡಿಯೇ ತೀರುತ್ತೇವೆ, ಅಚಾನಕ್ಕಾಗಿ ದೊರೆತ ಈ ಅವಕಾಶವನ್ನು ನಾವು ಉಪಯೋಗಿಸಿಕೊಳ್ಳದೇ ಬಿಡುವ ಪ್ರಶ್ನೆಯೇ ಇಲ್ಲ ಎನ್ನುವುದೇ ಈ ಪ್ರeವಾದಿಗಳ ನಿರ್ಧಾರವಾದರೆ, We should wish them all the very best.
ತಮ್ಮ ಮೇಲೆ ಇಷ್ಟೆ ದುರಾಕ್ರಮಣ ನಡೆಯುತ್ತಿದ್ದರೂ, ವ್ಯೂಹ ಹಣೆದು ವೈಯಕ್ತಿಕ ಚಾರಿತ್ರ್ಯಹರಣ ಮಾಡುತ್ತಿದ್ದರೂ, ವಿಶ್ವೇಶ್ವರ ಭಟ್ಟರು ಮಾತ್ರ ಏಕೆ ಒಂದೂ ಮಾತನಾಡುತ್ತಿಲ್ಲ? ಅದೇ ಧಾಟಿಯಲ್ಲಿ ಉತ್ತರಿಸುವ ಸಾಮರ್ಥ್ಯ, ಅವಕಾಶ, ಉಪಕರಣ ಎಲ್ಲವೂ ತಮ್ಮ ಕೈಯ್ಯ ಇದ್ದರೂ ಏಕೆ ತುಟಿ ಬಿಚ್ಚುತ್ತಿಲ್ಲ ಎನ್ನುವ ಪ್ರಶ್ನೆ, ಭಟ್ಟರನ್ನು ಪ್ರೀತಿಸುವವರಿಗೂ ಇದೆ ದ್ವೇಷಿಸುವವರಿಗೂ ಇದೆ. ಇಂಥಾ ವಿಷಮ ಸಂದರ್ಭಗಳಲ್ಲಿ ನಿಯತ್ತು ಘಟ್ಟಿ ಇರುವ ವಿಶ್ವೇಶ್ವರ ಭಟ್ಟರಂಥಾ ಜನ ಮಾತ್ರ ಹೀಗೆ ನಿರುದ್ವೇಗವನ್ನೂ, ಮೌನವನ್ನೂ ಸಾಧಿಸಲು ಸಾಧ್ಯ ಮತ್ತು ಅದು ಸಾಧು ಕೂಡಾ ಎನ್ನುವುದು ನನ್ನ ಅಭಿಮತ.