ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiran Upadhyay Column: ಎಣ್ಣೆ ನಮ್ದು...ಸುಂಕ ನಿಮ್ದು...!

ಪ್ರಪಂಚದ ಭೂಪಟದಲ್ಲಿ ಸುಮಾರು ಇನ್ನೂರು ದೇಶಗಳಿರುವಾಗ, ಆರೋ-ಏಳೋ ದೇಶಗಳಿಗೆ ಸೀಮಿತ ವಾಗಿರುವ ಈ ಜಲಸಂಧಿಗೆ ಇಷ್ಟು ಪ್ರಾಮುಖ್ಯತೆ ಏಕೆ? ಇಂದು ವಿಶ್ವದಾದ್ಯಂತ ಚಲಿಸುವ ಒಟ್ಟೂ ಹಡಗುಗಳಲ್ಲಿ ಶೇಕಡಾ ಇಪ್ಪತ್ತರಷ್ಟು ಹಡಗುಗಳು ನಲವತ್ತು ಕಿಲೋಮೀಟರ್‌ಗಿಂತ ಕಮ್ಮಿ ಅಗಲವಿರುವ ಇದೇ ಹರ್ಮುಜ್ ಜಲಸಂಧಿಯನ್ನು ದಾಟಿಯೇ ಹೋಗಬೇಕು.

ವಿದೇಶವಾಸಿ

ಕಳೆದ ಮೂರು ದಶಕದಿಂದ ಕೊಲ್ಲಿ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಬಹ್ರೈನ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ನಡುವೆ ಕುವೈತ, ಯುಎಇ, ಖರ್ತಾ, ಒಮನ್ ದೇಶಗಳಿಗೂ ಸಾಕಷ್ಟು ಬಾರಿ ಓಡಾಡಿದ್ದೇನೆ. ಕೊಲ್ಲಿ ರಾಷ್ಟ್ರದಲ್ಲಿ ವೃತ್ತಿ ಬದುಕಿನ ಹೆಚ್ಚು ಸಮಯ ವಿಶ್ವದ ಪ್ರಸಿದ್ಧ ತೈಲ ಅಥವಾ ಅದಕ್ಕೆ ಸಂಬಂಧಪಟ್ಟ ಸಂಸ್ಥೆಯೊಂದಿಗೆ ಕೆಲಸ ಮಾಡಿದ್ದೇನೆ.

ಸುಮಾರು ಎರಡು ದಶಕಗಳವರೆಗೆ ತೈಲದ ಬಾವಿ ಕೊರೆಯುವ ಕೆಲಸದಲ್ಲಿ ಭಾಗಿಯಾಗಿದ್ದೆ. ಮಾರುಕಟ್ಟೆಯಲ್ಲಿ ತೈಲದ ಬೆಲೆ ಎಷ್ಟು, ಅದರ ಏರಿಳಿತ ಹೇಗೆ, ಬಾವಿಯಿಂದ ತೈಲ ಸಂಸ್ಕರಣೆ ಯಾಗಿ ರಿಫೈನರಿ ಸೇರುವ ಬಗೆ ಇತ್ಯಾದಿ ಇಂಧನದ ಎಣ್ಣೆಯ ಕುರಿತಾಗಿ ತಿಳಿದುಕೊಂಡಿದ್ದೆ.

ಅದು ವೃತ್ತಿಯ ಅನಿವಾರ್ಯವಾಗಿತ್ತು. ಆದರೆ ‘ಹಾರ್ಮುಜ್ ಜಲಸಂಧಿ’ (Strait of Harmuz) ಬಗ್ಗೆ ಮೂವತ್ತು ವರ್ಷದಲ್ಲಿ ಮೂರು ಬಾರಿ ಕೇಳಿದ್ದಿರಬಹುದು. ಈಗ ಅದೇ ಜಲಸಂಧಿಯ ವಿಷಯ ದಿನಕ್ಕೆ ಮೂವತ್ತು ಸಲ ಕೇಳುವ ಪರಿಸ್ಥಿತಿ ಬಂದೊದಗಿದೆ. ಪರ್ಶಿಯನ್ ಕೊಲ್ಲಿ ಮತ್ತು ಒಮನ್ ಕೊಲ್ಲಿ (ಅರಬ್ಬಿ ಸಮುದ್ರದ ವಾಯುವ್ಯ ಭಾಗದಲ್ಲಿದೆ) ಸೇರುವ ಜಾಗ ಹಾರ್ಮುಜ್ ಜಲಸಂಧಿ.

ಇದರ ಉತ್ತರಕ್ಕೆ ಇರಾನ್, ದಕ್ಷಿಣಕ್ಕೆ ಒಮನ್ ದೇಶಗಳಿವೆ. ಭೂಮಿ ಹಂಚುವವರು ಅಂದು ಹೇಗೆ ಹಂಚಿದರೋ ಗೊತ್ತಿಲ್ಲ, ಒಮನ್ ದೇಶದ ಒಂದು ಭಾಗ ಒಮನ್ನಿಂದ ಬೇರ್ಪಟ್ಟು ಯುಎಇಯ ಒಳಗೂ, ಇನ್ನೊಂದು ಭಾಗ ಯುಎಇಯ ಒಂದು ಮೂಲೆಯಲ್ಲೂ ಇದೆ. ಮೂಲೆಯಲ್ಲಿರುವುದು ದೊಡ್ಡ ಭಾಗ ಅಲ್ಲವಾದರೂ ಹರ್ಮುಜ್ ಜಲಸಂಧಿ ಇರುವುದು ಈ ಜಾಗದಲ್ಲಿ. ಆದ್ದರಿಂದ ಈ ಜಲಸಂಧಿ ಇರಾನ್ ಮತ್ತು ಒಮನ್ ವ್ಯಾಪ್ತಿಗೆ ಸೇರಿದ್ದು ಎಂದು ಹೇಳಲಾಗುತ್ತದೆ.

ಕುವೈತ, ಬಹರೈನ್, ಖತಾರ್ ಮತ್ತು ಇರಾಕ್ ದೇಶಗಳ ಯಾವುದೇ ಬಂದರಿನಿಂದ, ಸೌದಿ ಅರೇಬಿಯಾದ ಪೂರ್ವ ತಟದಲ್ಲಿರುವ ದಮ್ಮಾಮ, ಜುಬೈಲ್ ಬಂದರು, ಯುಎಇಯ ಅಬುಧಾಬಿ, ದುಬೈ, ಶಾರ್ಜಾ (ಖೊಫರ್‌ಕ್ಕನ್ ಬಿಟ್ಟು) ಬಂದರಿನಿಂದ ಹಡಗುಗಳು ಬೇರೆ ದೇಶಗಳಿಗೆ ಹೋಗ ಬೇಕಾದರೆ ಈ ಜಲಸಂಧಿಯನ್ನು ದಾಟಿಯೇ ಹೋಗಬೇಕು.

ಪ್ರಪಂಚದ ಭೂಪಟದಲ್ಲಿ ಸುಮಾರು ಇನ್ನೂರು ದೇಶಗಳಿರುವಾಗ, ಆರೋ-ಏಳೋ ದೇಶಗಳಿಗೆ ಸೀಮಿತವಾಗಿರುವ ಈ ಜಲಸಂಧಿಗೆ ಇಷ್ಟು ಪ್ರಾಮುಖ್ಯತೆ ಏಕೆ? ಇಂದು ವಿಶ್ವದಾದ್ಯಂತ ಚಲಿಸುವ ಒಟ್ಟೂ ಹಡಗುಗಳಲ್ಲಿ ಶೇಕಡಾ ಇಪ್ಪತ್ತರಷ್ಟು ಹಡಗುಗಳು ನಲವತ್ತು ಕಿಲೋಮೀಟರ್‌ಗಿಂತ ಕಮ್ಮಿ ಅಗಲವಿರುವ ಇದೇ ಹರ್ಮುಜ್ ಜಲಸಂಧಿಯನ್ನು ದಾಟಿಯೇ ಹೋಗಬೇಕು.

ಇದನ್ನೂ ಓದಿ: Kiran Upadhyay Column: ಇದು ಟ್ರಂಪ್‌ ಮುಖವನ್ನು ಕೆಂಪಾಗಿಸಿದ ಯುದ್ಧ

ಜಲಸಂಧಿ ಇರಾನ್ ಮತ್ತು ಒಮನ್ ಎರಡೂ ದೇಶಕ್ಕೆ ಸೇರಿದ್ದರೂ ಜಲಸಂಧಿಯ ಸುತ್ತ ಹೆಚ್ಚಿನ ಭೂಭಾಗ ಇರುವ ಕಾರಣಕ್ಕೋ ಅಥವಾ ಹತ್ತಿರದಲ್ಲಿ ಇರಾನ್ ಆಡಳಿತದಲ್ಲಿರುವ ದ್ವೀಪಗಳು ಇರುವ ಕಾರಣಕ್ಕೋ, ಇರಾನ್‌ನ ಐಆರ್‌ಜಿಸಿ ಜಲಪಡೆ ಹಾರ್ಮೋಜ್ ಮೇಲೆ ನಿಯಂತ್ರಣ ಹೊಂದಿದೆ. ಇದು ಇರಾನ್ ಯುದ್ಧ ಆರಂಭವಾದ ನಂತರದ ಬೆಳವಣಿಗೆಯಲ್ಲ.

ಅದಕ್ಕೂ ಮೊದಲೇ ಆ ಜಲಸಂಧಿಯ ಸಂಚಾರ, ಸುರಕ್ಷತೆಯ ನಿಯಂತ್ರಣ ಇರಾನ್ ಕೈಯಲ್ಲಿತ್ತು, ಸುಂಕ ಮುಕ್ತವಾಗಿತ್ತು. ಯುದ್ಧ ಆರಂಭವಾದ ನಂತರ ಈ ಜಲಸಂಧಿ ದಾಟಿ ಹೋಗುವ ಹಡಗಿಗೆ ಸುಂಕ ವಿಧಿಸುತ್ತೇವೆ ಎಂದು ಇರಾನ್ ಹೇಳುತ್ತಿದೆ. ನಾಲ್ಕು ವರ್ಷದ ಹಿಂದೆ ರಷ್ಯಾ ಮತ್ತು ಯುಕ್ರೇನ್ ನಡುವೆ ಯುದ್ಧ ಆರಂಭವಾದಾಗ ಹೇಗೆ ಯುರೋಪ್ ಕಷ್ಟಕ್ಕೊಳಗಾಗಿತ್ತೋ, ಹೆಚ್ಚು ಕಮ್ಮಿ ಅದೇ ಪರಿಸ್ಥಿತಿ ಇಂದು ಇತರ ಕೊಲ್ಲಿ ರಾಷ್ಟ್ರಗಳಿಗಾಗಿದೆ.

ಯಾರದ್ದೋ ಯುದ್ಧದಲ್ಲಿ ಇನ್ಯಾರೋ ಸೊರಗಬೇಕು ಅಂದಂತೆ. ಈ ಯುದ್ಧದಿಂದ ಯುರೋಪ್ ದೇಶಗಳಿಗೆ ಯಾವುದೇ ನಷ್ಟವಾಗಿಲ್ಲ ಎಂದಲ್ಲ. ಅಲ್ಲಿಯೂ ಪೆಟ್ರೋಲ್ ಡೀಸೆಲ್ ಬೆಲೆ ಈಗಾಗಲೇ ದ್ವಿಗುಣಗೊಂಡಿದೆ. ಆ ನಿಟ್ಟಿನಲ್ಲಿ ಭಾರತವೇ ಅಡ್ಡಿಯಿಲ್ಲ. ಅನಿಲದ ಕೊರತೆ ಬಿಟ್ಟರೆ ಇದುವರೆಗೆ ಪೆಟ್ರೋಲ, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಲಿ, ಕೊರತೆಯಾಗಲಿ ಇದುವರೆಗಂತೂ ಕಂಡು ಬರಲಿಲ್ಲ.

ಕೊಲ್ಲಿ ರಾಷ್ಟ್ರಗಳಿಗೆ ಸದ್ಯ ಯಾವುದೇ ವಸ್ತುವಿನ ಅಭಾವ ಇಲ್ಲ. ಆದರೆ ಯುದ್ಧ ಕೆಲ ಕಾಲ ಮುಂದುವರಿದರೆ ಹಾರ್ಮುಜ್ ಅನಿವಾರ್ಯವಾಗಿರುವ ದೇಶಗಳಿಗೆ ಕೆಲವು ಕೊರತೆಯಂತೂ ಉಂಟಾಗುತ್ತದೆ. ಹಾರ್ಮುಜ್ ಜಲಸಂಧಿಯಿಂದ ಪ್ರತಿನಿತ್ಯ ಸುಮಾರು ನೂರಮೂವತ್ತರಿಂದ ನೂರನಲವತ್ತು ಹಡಗುಗಳು ಸುಮಾರು ಇಪ್ಪತ್ತು ಮಿಲಿಯನ್ ಬ್ಯಾರೆಲ್ ತೈಲ, ಅನಿಲ, ಇನ್ನಿತರ ಪೆಟ್ರೋಲಿಯಮ್ ಉತ್ಪನ್ನ ಹೊತ್ತು ಬರುತ್ತಿದ್ದವು. ಈಗ ಇರಾನ್ ಒಂದು ಹಡಗಿಗೆ ಎರಡು ಮಿಲಿಯನ್ ಡಾಲರ್ (ಸುಮಾರು ನೂರ ಎಂಬತ್ತೈದು ಕೋಟಿ ರೂಪಾಯಿ) ಅಥವಾ ಒಂದು ಬ್ಯಾರೆಲ್‌ಗೆ (159 ಲೀಟರ್) ಒಂದು ಡಾಲರ್ ಸುಂಕ ನೀಡಬೇಕು ಎಂದು ತಾಕೀತು ಮಾಡುತ್ತಿದೆ.

Crude oil

ಸುಂಕದಿಂದ ಬಂದ ಹಣವನ್ನು ಯುದ್ಧದದ ಹಾನಿ ಭರಿಸಲು ಬಳಸುವುದಾಗಿ ಇರಾನ್ ಹೇಳಿ ಕೊಳ್ಳುತ್ತಿದೆ. ಇದನ್ನು ಬರೆಯುವ ಹೊತ್ತಿಗೆ ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನದ ಮಾತುಕತೆ ವಿಫಲವಾಗಿದೆ ಎಂಬ ಸುದ್ದಿ ಬರುತ್ತಿದೆ. ಅದಕ್ಕೆ ಇರುವ ಹದಿನೈದು ಕಾರಣಗಳಲ್ಲಿ ಹಾರ್ಮುಜ್ ಜಲಸಂಧಿಯ ಸುಂಕದ ವಿಷಯವೂ ಒಂದು ಕಾರಣ.

ಒಂದು ವೇಳೆ ಸುಂಕ ಕೋಡಲೇಬೇಕಾದ ಪರಿಸ್ಥಿತಿ ಬಂತು ಅಂದುಕೊಳ್ಳಿ, ಎಲ್ಲಕ್ಕಿಂತ ಹೆಚ್ಚು ಸಂಕಷ್ಟಕ್ಕೊಳಗಾಗುವುದು ಇದೇ ಕೊಲ್ಲಿ ರಾಷ್ಟ್ರಗಳು. ಏಕೆಂದರೆ ಉಳಿದ ದೇಶಗಳಿಗೆ ತೈಲ ಆಮದು ಮಾಡಿಕೊಳ್ಳಲು ಹಾರ್ಮೋಜ್ ಜಲಸಂಽಯನ್ನು ತಪ್ಪಿಸುವ ಪರ್ಯಾಯ ದೇಶಗಳಿವೆ. ಅಲ್ಲದೇ, ಸೌದಿ ಅರೇಬಿಯಾದ ಪಶ್ಚಿಮ ಮತ್ತು ಯುಎಇಯ ಪೂರ್ವದಲ್ಲಿರುವ ಇತರ ಬಂದರುಗಳೂ ಇವೆ.

ಆದರೆ ಕುವೈತ, ಬಹ್ರೈನ್, ಇರಾಕ್ ಮತ್ತು ಖತಾರ್ ನಷ್ಟಕ್ಕೊಳಗಾಗುತ್ತವೆ. ಏಕೆಂದರೆ ಆ ದೇಶ ಗಳಿಂದ ಆಮದು ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದಾಗಿ ಇಂಧನದ ಎಣ್ಣೆ ತೆಗೆಯುವ ಈ ದೇಶಗಳು ‘ಎಣ್ಣೆ ನಮ್ದು, ಸುಂಕ ನಿಮ್ದು...?’ ಎನ್ನುವ ಪರಿಸ್ಥಿತಿ ಇದೆ.

ಯುದ್ಧ ಆರಂಭಕ್ಕೆ ಮುನ್ನ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ ಅರವತ್ತೈದರಿಂದ ಎಪ್ಪತ್ತು ಡಾಲರ್ ಇತ್ತು. ಈಗ ಯುದ್ಧ ಮುಗಿದರೂ ಒಂದು ಬ್ಯಾರೆಲ್ ಬೆಲೆ ತೊಂಬತ್ತರಿಂದ ನೂರು ಡಾಲರ್ ಆಸುಪಾಸಿನಲ್ಲಿ ನಿಲ್ಲಬಹುದು, ಅದಕ್ಕಿಂತ ಕಮ್ಮಿ ಆಗುವುದಿಲ್ಲ ಎನ್ನಲಾಗುತ್ತಿದೆ. ಬಹುತೇಕ ಕೊಲ್ಲಿ ರಾಷ್ಟ್ರಗಳಲ್ಲಿ ಈಗ ಒಂದು ಲೀಟರ್ ಪೆಟ್ರೊಲ್ ಬೆಲೆ ಐವತ್ತು ರೂಪಾಯಿ. ‌

ಭಾರತದಲ್ಲಿ ನೂರು ರೂಪಾಯಿಯ ಆಸುಪಾಸು. ಅಂದರೆ, ಹೆಚ್ಚು ಕಮ್ಮಿ ನೂರು ಪ್ರತಿಶತ ಹೆಚ್ಚು. ಅದರಲ್ಲಿ ಸಾಗಾಣಿಕೆ, ಸಂಸ್ಕರಣೆ, ವಿತರಣೆ, ದಳಿ, ಮಜೂರಿ, ಕೇಂದ್ರ ಮತ್ತು ರಾಜ್ಯ ಸರಕಾರದ ತೆರಿಗೆ, ಎಲ್ಲಿ ಎಷ್ಟೆಷ್ಟು ಸಲ್ಲಬೇಕೋ ಅದು, ಎಲ್ಲವೂ ಬಂತು. ಆದರೂ, ಒಂದು ಲೀಟರ್‌ಗೆ ಮೂವತ್ತೈದು ರೂಪಾಯಿ ಇರುವ ಕಚ್ಚಾ ಎಣ್ಣೆ, ಜನಸಾಮಾನ್ಯರ ವಾಹನದ ಹೊಟ್ಟೆಗೆ ಊಟವಾಗುವಾಗ ಅರವತ್ತೈದು ರೂಪಾಯಿ ಹೆಚ್ಚು ಜೋಡಣೆಯಾಗುತ್ತದೆ.

ಮುಂದೆ ಒಂದು ಬ್ಯಾರೆಲ್ʼಗೆ ನೂರು ಡಾಲರ್ ಆದರೆ, ಅದರಲ್ಲಿ ಯಾರ್ಯಾರು ಎಷ್ಟೆಷ್ಟು ಉಣ್ಣು ತ್ತಾರೋ ಗೊತ್ತಿಲ್ಲ. ಆಗ ಕೊಲ್ಲಿ ರಾಷ್ಟ್ರಗಳು ’ಎಣ್ಣೆ ನಮ್ದು... ಊಟ ನಿಮ್ದು...’ ಎನ್ನು ವಂತಾಗು ತ್ತದೆ. ಅಷ್ಟಕ್ಕೂ ಭಾರತ ಕೊಲ್ಲಿ ರಾಷ್ಟ್ರಗಳಿಂದ ಎಷ್ಟು ತೈಲ ಆಮದು ಮಾಡಿಕೊಳ್ಳುತ್ತಿದೆ?

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ ಶೇಕಡಾ ನಲವತ್ತಕ್ಕಿಂತಲೂ ಕಮ್ಮಿ. ಇತ್ತೀಚಿನ ದಿನಗಳಲ್ಲಿ ಭಾರತ ರಷ್ಯಾದಿಂದ ನಲವತ್ತು ಪ್ರತಿಶತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಎರಡನೆಯ ಸ್ಥಾನ ಇರಾಕ್, ಇಪ್ಪತ್ತು ಪ್ರತಿಶತ. ಮೂರನೆಯ ಸ್ಥಾನದಲ್ಲಿ ಸೌದಿ ಅರೇಬಿಯಾ, ಹನ್ನೊಂದು ಪ್ರತಿಶತ. ಇತರ ಕೊಲ್ಲಿ ರಾಷ್ಟ್ರಗಳಾದ ಯುಎಇ, ಕುವೈತ್ ಇತ್ಯಾದಿಗಳಿಂದ ಶೇಕಡಾ ಐದು. ಉಳಿದಂತೆ ಅಮೆರಿಕ, ನೈಜೇರಿಯಾ, ಅಂಗೋಲಾ, ಬ್ರೆಝಿಲ್ ದೇಶಗಳಿಂದ ಸುಮಾರು ಹತ್ತು ಪ್ರತಿಶತ. ಮುಂದಿನ ದಿನಗಳಲ್ಲಿ ಭಾರತಕ್ಕೆ ಕೊಲ್ಲಿ ರಾಷ್ಟ್ರಗಳ ಮೇಲೆ ಅವಲಂಬಿತವಾಗುವುದನ್ನು ಬಿಟ್ಟು ಇತರ ದೇಶಗಳಿಂದ ಆಮದು ಹೆಚ್ಚಿಸಿಕೊಳ್ಳದೆ ಬೇರೆ ಮಾರ್ಗವಿಲ್ಲ.

ಯುದ್ಧ ಆರಂಭವಾದಾಗಿನಿಂದ ಇದುವರೆಗೆ ಭಾರತದ ಐದು ಹಡಗು ಮಾತ್ರ ಭಾರತ ತಲುಪಿದೆ. ಇನ್ನೂ ಹತ್ತು ಹಡಗು ಸಿಕ್ಕಿಹಾಕಿಕೊಂಡಿದೆ. ಮತ್ತೆ ಮತ್ತೆ ಅದೇ ಸುಳಿಯಲ್ಲಿ ಸಿಲುಕಿ ಭಾರತವಷ್ಟೇ ಅಲ್ಲ, ಯಾವ ದೇಶವೂ ಬಯಸುವುದಿಲ್ಲ. ಹಾಗಾಗಿ ಮುಂದೊಂದು ದಿನ ಕೊಲ್ಲಿ ರಾಷ್ಟ್ರಗಳಿಂದ ರಫ್ತು ಕಮ್ಮಿಯಾದರೂ ಆಶ್ಚರ್ಯಪಡಬೇಕಾಗಿಲ್ಲ.

ಭಾರತ ಅಮೆರಿಕದಿಂದಲೂ ತೈಲ ಆಮದು ಮಾಡಿಕೊಳ್ಳುತ್ತದೆಯೇ? ಅಮೆರಿಕದಲ್ಲಿ ಅಷ್ಟು ತೈಲ ಇದೆಯೇ? ಹಾಗಾದರೆ ಅಮೆರಿಕದಲ್ಲಿ ಎಷ್ಟು ತೈಲ ಇದೆ? ಅಮೆರಿಕದಲ್ಲಿ ತೈಲ ಇದ್ದರೂ ಅಮೆರಿಕ ಬೇರೆ ದೇಶಗಳಿಂದ ಏಕೆ ತೈಲವನ್ನು ಆಮದು ಮಾಡಿಕೊಳ್ಳುತ್ತದೆ? ತೈಲ ಇರುವ ರಾಷ್ಟ್ರಗಳ ಮೇಲೆ ಯಾವುದಾದರೂ ನೆಪ ಹೇಳಿಕೊಂಡು ಯುದ್ಧಕ್ಕೆ ಮುಗಿಬೀಳುವುದೇಕೆ? ವಿಶ್ವದಲ್ಲಿ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ದೇಶ ಅಮೆರಿಕ.

ವಿಶ್ವದ ಶೇಕಡಾ ಇಪ್ಪತ್ತು ಪ್ರತಿಶತ ಅಮೆರಿಕದಲ್ಲಿದ್ದರೆ, ಸೌದಿ ಅರೇಬಿಯಾ ಮತ್ತು ರಷ್ಯಾ ತಲಾ ಹತ್ತು ಪ್ರತಿಶತ ತೈಲ ನಿಕ್ಷೇಪ ಹೊಂದಿವೆ. ಅಮೆರಿಕದ ಬಳಿ ನಲವತ್ತಾರು ಬಿಲಿಯನ್ ಬ್ಯಾರೆಲ್ ತೈಲ ಇಂದಿಗೂ ದಾಸ್ತಾನಿನಲ್ಲಿದೆ. ಪ್ರತಿನಿತ್ಯ ಅತಿ ಹೆಚ್ಚು (ಸುಮಾರು ಹದಿಮೂರು ಮಿಲಿಯನ್ ಬ್ಯಾರೆಲ) ತೈಲ ಉತ್ಪಾದಿಸುವ ದೇಶವೂ ಅಮೆರಿಕ.

ಆದರೂ ಅಮೆರಿಕ ಇತರ ದೇಶಗಳಿಂದ ಕಚ್ಚಾ ತೈಲ ತೈಲ ಆಮದು ಮಾಡಿಕೊಳ್ಳಲು ಕಾರಣ, ಅಮೆರಿಕದಲ್ಲಿ ತೈಲ ಭೂಮಿಗಿಂತ ಕಲ್ಲಿನಲ್ಲಿನಲ್ಲಿ ಹೆಚ್ಚಾಗಿದೆ. ಅವು ಸಣ್ಣ ಕಣಗಳಿಂದ ಕೂಡಿದ ದೊಡ್ಡ ಕಲ್ಲುಗಳು (fine grained sedimentary rocks). ಇವುಗಳನ್ನು ಶೆಲ್ ಫೀಲ್ಡ್ ಎಂದು ಕರೆಯು ತ್ತಾರೆ. ಅದರಿಂದ ತೈಲ ಹೊರಗೆ ತೆಗೆಯುವುದು ಭೂಮಿಯಿಂದ ಹೊರಗೆ ತೆಗೆಯುವಷ್ಟು ಸುಲಭ ವಲ್ಲ. ‌

ಇದರಿಂದ ಒಂದು ಬ್ಯಾರೆಲ್ ತೈಲವನ್ನು ಹೊರಗೆ ತೆಗೆಯಬೇಕಾದರೆ ಸುಮಾರು ಐವತ್ತು ಡಾಲರ್ ಖರ್ಚಾಗುತ್ತದೆ. ಅದೇ ಭೂಮಿಯಿಂದ ಕಚ್ಚಾ ತೈಲ ಹೊರಗೆದರೆ ಹತ್ತರಿಂದ ಹದಿನೈದು ಡಾರ್ಲ ಒಳಗೆ ಕೆಲಸ ಮುಗಿಯುತ್ತದೆ.

ತನ್ನ ಬಳಿ ಇರುವ ತೈಲಕ್ಕಿಂತ ಕಡಿಮೆ ದರದಲ್ಲಿ ಬೇರೆ ದೇಶದಲ್ಲಿ ತೈಲ ದೊರಕುತ್ತದೆ, ಅದನ್ನು ತನ್ನ ದೇಶಕ್ಕೆ ತಂದಲ್ಲಿ ಹಣವೂ ಉಳಿಯುತ್ತದೆ, ತನ್ನ ಬಳಿ ಇರುವ ತೈಲವೂ ತನ್ನಲ್ಲಿಯೇ ಇರುತ್ತದೆ ಎನ್ನುವುದು ಅಮೆರಿಕದ ಲೆಕ್ಕಾಚಾರ. ಅಮೆರಿಕ ಮಾತ್ರವಲ್ಲ, ಯಾವುದೇ ದೇಶವಾದರೂ ಇದನ್ನೇ ಮಾಡುತ್ತಿತ್ತು.

ಈ ಕಾರಣದಿಂದ ಅಮೆರಿಕಕ್ಕಷ್ಟೇ ಅಲ್ಲ, ವಿಶ್ವದ ಬಹುತೇಕೆ ದೇಶಗಳಿಗೆ ಹಾರ್ಮುಜ್ ಜಲಸಂಧಿ ಅತ್ತ ಉಗುಳಲೂ ಆಗದ, ನುಂಗಲೂ ಆಗದ ಬಿಸಿ ತುಪ್ಪವಾಗಿದೆ. ಹಾಗಾದರೆ ಈ ತೈಲದ ಸಮಸ್ಯೆ ಎದುರಾದದ್ದು ಇದೇ ಮೊದಲಬಾರಿಯೇ ಎಂದರೆ ಖಂಡಿತ ಅಲ್ಲ. 1973ರ ಅಕ್ಟೋಬರ್ ನಲ್ಲಿ ನಡೆದ ಅರಬ್ ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಕೊಲ್ಲಿ ರಾಷ್ಟ್ರಗಳು ಕಚ್ಚಾ ತೈಲದ ರಫ್ತನ್ನು ನಿಷೇಧಿಸಿದ್ದವು.

ರಸ್ತೆಗಳಲ್ಲಿ ಚಲಿಸುತ್ತಿದ್ದ ಬಹುತೇಕ ವಾಹನಗಳು ಮನೆಯ ಮುಂದೆ ನಿಂತುಕೊಂಡವು. ಸುಮಾರು ಅರ್ಧಕ್ಕರ್ಧ ಪ್ರಪಂಚವೇ ಸ್ಥಗಿತಗೊಂಡಿತ್ತು. ಕಚ್ಚಾ ತೈಲದ ಬೆಲೆ ಇದ್ದಕ್ಕಿದ್ದಂತೆ ಹಲವಾರು ಬಾರಿ ಏರಿತ್ತು. ಪೆಟ್ರೋಲ್ ಡೀಸೆಲ್ ಮತ್ತು ಅನಿಲದ ಬೆಲೆ ಗಗನಕ್ಕೆ ಏರಲು ಆರಂಭವಾಯಿತು. ಜನರ ಜೀವನವೂ ವಾಹನದಂತೆಯೇ ಆಗಿತ್ತು. ಅಮೆರಿಕದಂತಹ ಪ್ರಬಲ ದೇಶಗಳ ಆರ್ಥಿಕತೆಯೂ ಕುಸಿತದ ಅಂಚಿನಲ್ಲಿತ್ತು.

ಅನೇಕ ಕಾರ್ಖಾನೆಗಳು ಮುಚ್ಚಲ್ಪಟ್ಟಿದ್ದವು. ಈ ಘಟನೆ ವಿಶ್ವಕ್ಕೆ ಕಚ್ಚಾ ತೈಲದ ನಿಜವಾದ ಶಕ್ತಿಯ ಬಗ್ಗೆ ಸೂಚನೆ ನೀಡಿತು. ಜನರು ಕಚ್ಚಾತೈಲವನ್ನು ’ಕಪ್ಪು ಚಿನ್ನ’ ಎಂದು ಕರೆಯಲು ಆರಂಭಿಸಿ ದರು. ಹಾಗೆ ನೋಡಿದರೆ ತೈಲದ ಸತ್ವ ಸ್ವರ್ಣದ ಸತ್ವಕ್ಕೆ ಕಡಿಮೆ ಏನೂ ಅಲ್ಲ. ಈ ದಿನಗಳಲ್ಲಿ ಬಂಗಾರ ಇಲ್ಲದೇ ಬದುಕಬಹುದು, ಪೆಟ್ರೋಲಿಯಮ್ ಉತ್ಪನ್ನಗಳಿಲ್ಲದೆ ಬದುಕಲು ಸಾಧ್ಯವೇ ಇಲ್ಲ.

1992ರ ಗಲ್ಫ್‌ ಯುದ್ಧದ ಸಂದರ್ಭದಲ್ಲಿಯೂ ತೈಲದ ಬೆಲೆ ಏರಿತ್ತು. ಇದಾದ ನಂತರ 2008ರಲ್ಲಿ ಚೀನಾದಲ್ಲಿ ಕೈಗಾರಿಕಾ ಆರ್ಥಿಕತೆ ಬದಲಾಗುವ ಸಂದರ್ಭದಲ್ಲಿ ತೈಲದ ಬೆಲೆ ಬ್ಯಾರೆಲ್‌ಗೆ ನೂರ ಐವತ್ತಕ್ಕೆ ತಲುಪಿತ್ತು. 2022ರಲ್ಲಿ ರಷ್ಯಾ-ಯುಕ್ರೇನ್ ಯುದ್ಧ ಆರಂಭವಾದಾಗಲೂ ಬೆಲೆ ನೂರ ಇಪ್ಪತ್ತಕ್ಕೆ ಏರಿತ್ತು. ಹಾಗಾದರೆ ಈ ಕಚ್ಚಾ ತೈಲದ ಇತಿಹಾಸವೇನು? ಅದು ಇಷ್ಟು ಮಹತ್ವ ಪಡೆದದ್ದು ಹೇಗೆ? ಈ ತೈಲವನ್ನು ಮಾರಿ ಹಣಗಳಿಸಬಹುದು ಎಂದು ಮೊದಲು ಸ್ಕೆಚ್ ಹಾಕಿದವರು ಯಾರು? ವಿವರ ಮುಂದಿನ ಅಂಕಣದಲ್ಲಿ...

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author