ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kiran Upadhyay Column: ಇದು ಟ್ರಂಪ್‌ ಮುಖವನ್ನು ಕೆಂಪಾಗಿಸಿದ ಯುದ್ಧ

ಒಂದಂತೂ ಸತ್ಯ, ಇರಾನ್ ಈ ಮಟ್ಟಿನ ಪ್ರತಿರೋಧ ಒಡ್ಡುತ್ತದೆ ಎಂದು ಅಮೆರಿಕ ಅಥವಾ ಇಸ್ರೇಲ್ ಎಣಿಸಿರಲಿಕ್ಕಿಲ್ಲ. ಇಸ್ರೇಲ್ ಒಂದೇ ಆಗಿದ್ದರೆ ಯುದ್ಧ ಇಷ್ಟು ದಿನ ಮುಂದುವರಿಯು ತ್ತಿರಲಿಲ್ಲ ಅಥವಾ ಈ ಪ್ರಮಾಣದಲ್ಲಿ ಮುಂದುವರಿಯುತ್ತಿರಲಿಲ್ಲ. ಈ ಯುದ್ಧಕ್ಕೆ ಇಷ್ಟು ಪ್ರಾಮುಖ್ಯತೆ ಬಂದಿರುವುದು ಅಮೆರಿಕ ಭಾಗವಹಿಸುತ್ತಿರುವುದರಿಂದ.

Kiran Upadhyay Column: ಇದು ಟ್ರಂಪ್‌ ಮುಖವನ್ನು ಕೆಂಪಾಗಿಸಿದ ಯುದ್ಧ

-

ವಿದೇಶವಾಸಿ

ಸುಮಾರು ನಾಲ್ಕು ವರ್ಷಗಳ ಹಿಂದೆಯೂ ಒಮ್ಮೆ ಯುದ್ಧದ ಸುದ್ದಿಯಾಗಿತ್ತು, ಅದು ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧ. ಆ ಯುದ್ಧ ಇಂದಿಗೂ ಮುಗಿದಿಲ್ಲ. ಅದಕ್ಕಿಂತ ಹೆಚ್ಚಿನದ್ದೇ ಆದ ಯುದ್ಧದ ಸುದ್ದಿ ಈಗ ಜಗತ್ತನ್ನೇ ಕಂಗಡಿಸಿದೆ. ಈ ಯುದ್ಧದಿಂದ ಬಚಾ ವಾದ ದೇಶಗಳೇ ಇಲ್ಲ ಎನ್ನಬಹುದು.

ನೇರಾನೇರ ಭಾಗಿಯಾಗದಿದ್ದರೂ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಮಾಡು ತ್ತಿರುವ ಯುದ್ಧದ ಪರಿಣಾಮವಾಗಿ ಜಗತ್ತಿನ ಪ್ರತಿಯೊಂದು ದೇಶವೂ ಆತಂಕಕ್ಕೆ ಒಳಗಾಗಿದೆ. ಈ ಯುದ್ಧದಲ್ಲಿ ಅಮೆರಿಕ ಪ್ರತಿ ಸೆಕೆಂಡಿಗೆ ಹತ್ತು ಸಾವಿರ ಡಾಲರ್‌ನಂತೆ, ಅಂದರೆ ಪ್ರತಿ ಗಂಟೆಗೆ ಮೂವತ್ತಾರು ಮಿಲಿಯನ್ ಅಥವಾ ಪ್ರತಿನಿತ್ಯ ಸುಮಾರು ಒಂಬೈ ನೂರು ಮಿಲಿಯನ್ ಡಾಲರ್‌ನಂತೆ ಇದುವರೆಗೆ ಸುಮಾರು ಮೂವತ್ತು ಬಿಲಿಯನ್ ಡಾಲರ್‌ಗಿಂತ ಹೆಚ್ಚು ಖರ್ಚು ಮಾಡಿದೆ.

ಅಷ್ಟಾದರೂ ಇದುವರೆಗೆ ಯಾವುದೇ ಒಂದು ದೇಶ ಯುದ್ಧವನ್ನು ಗೆದ್ದಿದೆ ಎನ್ನುವ ಸ್ಥಿತಿ ಯಾಗಲಿ, ಆದ ಹಾನಿಯನ್ನು ಪರಿಗಣಿಸಿ ಅಥವಾ ಮುಂದಾಗುವ ಹಾನಿಯನ್ನು ತಪ್ಪಿಸಲು ಸಂವಿಧಾನಕ್ಕಾಗಲಿ, ಒಪ್ಪಂದಕ್ಕಾಗಲಿ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಒಂದಂತೂ ಸತ್ಯ, ಇರಾನ್ ಈ ಮಟ್ಟಿನ ಪ್ರತಿರೋಧ ಒಡ್ಡುತ್ತದೆ ಎಂದು ಅಮೆರಿಕ ಅಥವಾ ಇಸ್ರೇಲ್ ಎಣಿಸಿರಲಿಕ್ಕಿಲ್ಲ. ಇಸ್ರೇಲ್ ಒಂದೇ ಆಗಿದ್ದರೆ ಯುದ್ಧ ಇಷ್ಟು ದಿನ ಮುಂದು ವರಿಯುತ್ತಿರಲಿಲ್ಲ ಅಥವಾ ಈ ಪ್ರಮಾಣದಲ್ಲಿ ಮುಂದುವರಿಯುತ್ತಿರಲಿಲ್ಲ. ಈ ಯುದ್ಧಕ್ಕೆ ಇಷ್ಟು ಪ್ರಾಮುಖ್ಯತೆ ಬಂದಿರುವುದು ಅಮೆರಿಕ ಭಾಗವಹಿಸುತ್ತಿರುವುದರಿಂದ.

ಇತ್ತೀಚಿಗೆ ಒಂದು ವಿಶ್ಲೇಷಣೆಯನ್ನು ನೋಡುತ್ತಿದ್ದೆ. ಅದರ ಪ್ರಕಾರ, ಅಮೆರಿಕ ಇದುವರೆಗೆ ಇರಾನ್ ಯುದ್ಧಕ್ಕೆ ಖರ್ಚು ಮಾಡಿದ ಹಣದಲ್ಲಿ ತೊಂಭತ್ತೆರಡು ಮನೆ ಕಟ್ಟಬಹು ದಾಗಿತ್ತಂತೆ. ಸುಮಾರು ಹದಿನೈದು ಸಾವಿರ ಆಸ್ಪತ್ರೆಗಳಿಗೆ ಅನುದಾನ ನೀಡಬಹುದಾಗಿ ತ್ತಂತೆ.

ಇದನ್ನೂ ಓದಿ: Kiran Upadhyay Column: ಹೆಸರು ಬಿಟ್ಟರೆ ಅವರ ಕೊಡುಗೆ ಏನೂ ಇಲ್ಲ

ಸುಮಾರು ಅರವತ್ತೈದು ಸಾವಿರ ಶುದ್ಧ ಕುಡಿಯುವ ನೀರಿನ ಉಪಕರಣಗಳನ್ನು ಜನರಿಗೆ ಪೂರೈಸಬಹುದಾಗಿತ್ತು, ಐದು ಲಕ್ಷ ಶಿಕ್ಷಕರಿಗೆ ಸಂಬಳ ನೀಡಬಹುದಾಗಿತ್ತು, ಒಂಬೈನೂರು ಕೋಟಿ ವಿದ್ಯಾರ್ಥಿಗಳಿಗೆ ಒಂದು ವರ್ಷ ಮಧ್ಯಾಹ್ನದ ಊಟವನ್ನು ಉಚಿತವಾಗಿ ನೀಡಬಹುದಾಗಿತ್ತು ಎಂದು ವರದಿ ಹೇಳುತ್ತದೆ. ಈ ವರೆಗೆ ನಡೆದ ಯುದ್ಧಗಳಲ್ಲಿ, ಅತಿ ಹೆಚ್ಚು ಖರ್ಚಾದ ಯುದ್ಧದಲ್ಲಿ ಪ್ರತಿನಿತ್ಯ ಸುಮಾರು ನಾಲ್ಕು ನೂರು ಮಿಲಿಯನ್ ಡಾಲರ್ ಎಂದು ಹೇಳಲಾಗುತ್ತದೆ.

ಆಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಯುದ್ಧದಲ್ಲಿ ಪ್ರತಿನಿತ್ಯ ಮುನ್ನೂರು ಮಿಲಿಯನ್ ಡಾಲರ್ ಖರ್ಚ್ ಆಗಿದೆಯಂತೆ. ಅಂದರೆ, ಈಗ ನಡೆಯುತ್ತಿರುವ ಯುದ್ಧದಲ್ಲಿ ಆಫ್ಘಾನಿ ಸ್ತಾನ ಯುದ್ಧಕ್ಕಿಂತ ಮೂರು ಪಟ್ಟು ಹೆಚ್ಚು ಖರ್ಚು ಆಗುತ್ತಿದೆ. ಇದಿಷ್ಟು ಅಮೆರಿಕದ ಕಡೆಯಿಂದಾದರೆ, ಇಸ್ರೇಲ್ ಅಥವಾ ಇರಾನ್ ಕಡೆಯಿಂದ ಆದ ಖರ್ಚು ಎಷ್ಟು ಎಂದು ಇದುವರೆಗೆ ತಿಳಿಯುತ್ತಿಲ್ಲ.

ಇರಾನ್ ಪ್ರತಿನಿತ್ಯ ಕೊಲ್ಲಿ ರಾಷ್ಟ್ರಗಳ ಮೇಲೆ ನಡೆಸಿದ ದಾಳಿಯ ಸುದ್ದಿಯನ್ನು ನಾವು ನೋಡುತ್ತಿರುತ್ತೇವೆ. ಆದರೆ, ಇರಾನ್ ಮೇಲೆ ಯಾವ ಪ್ರಮಾಣದಲ್ಲಿ ದಾಳಿಗಳು ನಡೆಯು ತ್ತವೆ ಎಂಬುದರ ಸುದ್ದಿ ಯಾರಿಗೂ ಸರಿಯಾಗಿ ತಿಳಿಯುತ್ತಿಲ್ಲ.

ಏಕೆಂದರೆ ಅಲ್ಲಿ ಯಾವುದೇ ಪತ್ರಕರ್ತರಿಗೆ, ವರದಿಗಾರರಿಗೆ ಪ್ರವೇಶವಿಲ್ಲ. ಇದ್ದರೂ ಅವರು ವರದಿ ಮಾಡಲಾಗುತ್ತಿಲ್ಲ. ಕಾರಣ, ಅಲ್ಲಿಯ ಇಂಟರ್‌ನೆಟ್ ವ್ಯವಸ್ಥೆ ನಿಂತು ಬಹಳ ದಿನಗಳಾಗಿವೆ. ಎಷ್ಟೋ ಕಡೆಗಳಲ್ಲಿ ವಿದ್ಯುತ್ ಸರಬರಾಜೂ ನಿಂತು ಹೋಗಿದೆ. ಈಗಂತೂ ಅಮೆರಿಕ ಮತ್ತು ಇಸ್ರೇಲ್ ಕೆಲವು (ಎಕ್ಸ್) ಹ್ಯಾಂಡಲ್ ಗಳ ವರದಿಯೇ ಪ್ರಮುಖ ಸುದ್ದಿ ವಾಹಿನಿಯಾಗಿದೆ.

ಒಂದಂತೂ ಸತ್ಯ, ಈ ಯುದ್ಧದಿಂದ ಇರಾನ್ ಕಮ್ಮಿಕ್ಕಿಮಿಕ್ ಎಂದರೂ ಇಪತ್ತೈದು ವರ್ಷ ಹಿಂದೆ ಹೋಗಿದೆ. ಅಂದರೆ, ಈ ಕ್ಷಣದಲ್ಲಿ ಯುದ್ಧ ನಿಂತರೂ ಇರಾನಿಗೆ ಪುನಃ ಮೊದಲಿ ನಂತೆ ಆಗಲು ಎರಡರಿಂದ ಎರಡುವರೆ ದಶಕಗಳೇ ಬೇಕಾಗಬಹುದು. ಇಸ್ರೇಲ್ ಕೂಡ ಮೊದಲಿನಂತಾಗಲು ಐದರಿಂದ ಆರು ವರ್ಷ ಬೇಕಾಗಬಹುದು.

ಕೊಲ್ಲಿ ರಾಷ್ಟ್ರಗಳಾದ ಬಹರೇನ್, ಕತಾರ್, ಯುಎಇ, ಕುವೈತ್, ಸೌದಿ ಅರೇಬಿಯಾ ಇತ್ಯಾದಿ‌ ಗಳು ಸುಧಾರಿಸಿಕೊಳ್ಳಲು ಎರಡು-ಮೂರು ವರ್ಷ ಬೇಕು. ಹೆಚ್ಚು ಸುದ್ದಿಯಾಗದ ಲೆಬನಾನ್ ಸುದ್ಧಾರಿಸಿಕೊಳ್ಳಲು ಎಂಟರಿಂದ ಹತ್ತು ವರ್ಷ ಬೇಕು. ಒಂದು ವಿಷಯ ಎಲ್ಲರಿಗೂ ಸ್ಪಷ್ಟ ವಾಗಿ ತಿಳಿದಿರಬೇಕು.

ಯುದ್ಧದ ಖರ್ಚಿನ ಲೆಕ್ಕಾಚಾರಗಳೆಲ್ಲ ಅಂದಾಜು ಮಾತ್ರವೇ ವಿನಃ ಯಾವುದೂ ನಿಖರ ವಲ್ಲ. ವಾಸ್ತವದಲ್ಲಿ ಇವೆಲ್ಲ ಅಂದಾಜಿಗಿಂತ ಹೆಚ್ಚೇ ಆಗಬಹುದು ಬಿಟ್ಟರೆ ಕಮ್ಮಿ ಅಂತೂ ಆಗುವುದಿಲ್ಲ. ಹಾಗೆಯೇ, ಈ ಅಂದಾಜು ಪ್ರತಿನಿತ್ಯ ಬಳಸುವ ಬಾಂಬುಗಳು, ಯುದ್ಧೋ ಪಕರಣಗಳು, ಶಸ್ತ್ರಾಸ್ತ್ರಗಳ ವೆಚ್ಚ ಮಾತ್ರ.

ಯುದ್ಧದಲ್ಲಿ ಹಾನಿಗೊಳಗಾದ ಕಟ್ಟಡಗಳು, ರಸ್ತೆ, ಸೇತುವೆ ಇತ್ಯಾದಿ ಯಾವುದೇ ಖರ್ಚು ಗಳನ್ನು ಒಳಗೊಂಡಿರುವುದಿಲ್ಲ. ಅದನ್ನೆಲ್ಲ ಪುನಃ ಕಟ್ಟಲು ಅಥವಾ ಪುನರ್ ನಿರ್ಮಾಣ ಮಾಡಲು ಬೇರೆಯದೇ ಲೆಕ್ಕ ಇರುತ್ತದೆ. ಹಾಗೆಯೇ, ಯುದ್ಧದಲ್ಲಿ ಆದ ಪ್ರಾಣ ನಷ್ಟ, ಅಂಗಾಂಗ ಹಾನಿಗಳ ಬೆಲೆ ಎಷ್ಟು ಎಂದು ಹೇಳುವವರು ಯಾರು? ಯುದ್ಧ ಆರಂಭ ವಾಗುವುದಕ್ಕೂ ಮೊದಲು ಯುದ್ಧವನ್ನು ನಾಲ್ಕು ವಾರಗಳಲ್ಲಿ ಮುಗಿಯುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೋನಾಲ್ಡ ಟ್ರಂಪ್ ಹೇಳಿದ್ದರು.

ಯುದ್ಧ ಆರಂಭವಾಗಿ ಈಗಾಗಲೇ ಐದಾರು ವಾರವಾಗಿದೆ. ಇನ್ನು ಐದು ವಾರವಾದರೂ ಯುದ್ಧ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅಮೆರಿಕ ಆರಂಭಿಸಿದ ಅಥವಾ ಅಮೆರಿಕವನ್ನು ಒಳಗೊಂಡ ಬಹುತೇಕ ಯುದ್ಧಗಳು ಬೇಗ ಮುಗಿದ ದಾಖಲೆಗಳಿಲ್ಲ.

ವಿಯೆಟ್ನಾಮ್‌ನಲ್ಲಿ ಹತ್ತು ವರ್ಷ, ಲಾವೋಸ್‌ನಲ್ಲಿ ಹತ್ತು ವರ್ಷ, ಇರಾಕ್‌ನಲ್ಲಿ ಎಂಟು ವರ್ಷ, ಆಫ್ಘಾನಿಸ್ತಾನದಲ್ಲಿ ಬರೊಬ್ಬರಿ ಇಪ್ಪತ್ತು ವರ್ಷ! ಇದು ಅಮೆರಿಕದ ಯುದ್ಧದ ಇತಿಹಾಸ. ಆದರೂ ಅಮೆರಿಕ ಯುದ್ಧ ಮಾಡುತ್ತದೆ ಏಕೆ? ಮೇಲ್ನೋಟಕ್ಕೆ ಕಾರಣ ಏನೇ ಇದ್ದರೂ, ಅಮೆರಿಕದ ಬಹುತೇಕ ಯುದ್ಧಗಳು ಆ ದೇಶದಲ್ಲಿ ಸಿಗುವ ಸಂಪತ್ತನ್ನು ಆಧರಿಸಿ ರುತ್ತವೆ.

ತೈಲ, ಖನಿಜ ಇತ್ಯಾದಿಗಳನ್ನು ಹೊಂದಿರುವ ದೇಶ ಅಮೆರಿಕದ ಹೇಳಿದಂತೆ ಕೇಳಿಕೊಂಡು ಇರಬೇಕು. ಇಲ್ಲವಾದರೆ ಯಾವುದಾದರೂ ಒಂದು ನೆಪದಲ್ಲಿ, ಯಾವುದಾದರೂ ಒಂದು ಸಂದರ್ಭದಲ್ಲಿ, ಅಂತಹ ದೇಶಗಳ ಮೇಲೆ ಅಮೆರಿಕ ದಾಳಿ ಮಾಡುತ್ತದೆ.

ಹೇಳಿ-ಕೇಳಿ ವಿಶ್ವದ ದೊಡ್ಡಣ್ಣನಲ್ಲವೇ? ಕೆಲವು ಬಾರಿ ಅಮೆರಿಕ ನೇರವಾಗಿ ಯುದ್ಧದಲ್ಲಿ ಪಾಲುದಾರರ ಆಗದಿದ್ದರೂ, ಇನ್ನೊಬ್ಬರಿಗೆ ಶಸ್ತ್ರಾಸ್ತ್ರ ಪೂರೈಸಿ ಯುದ್ಧದಲ್ಲಿ ತೊಡಗಿಸಿ ಕೊಳ್ಳುವುದಿದೆ. ಅದಕ್ಕೆ ಕಾರಣ, ಅಮೆರಿಕದಲ್ಲಿರುವ ಯುದ್ಧೋಪಕರಣಗಳನ್ನು ತಯಾರಿ ಸುವ ಕಾರ್ಖಾನೆಗಳು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಂಕಿ-ಅಂಶಗಳು ಇದನ್ನು ಸಾಬೀತು ಪಡಿಸುತ್ತವೆ.

ವಿಶ್ವದ ಐದು ಅತಿ ದೊಡ್ಡ ಆಯುಧ ಉತ್ಪಾದಕ ಸಂಸ್ಥೆಗಳು ಅಮೆರಿಕದಲ್ಲಿವೆ. ಯುದ್ಧ ವಿಮಾನದಿಂದ ಹಿಡಿದು, ರಾಕೆಟ್ ಲಾಂಚರ್, ಹೆಲಿಕಾಪ್ಟರ್‌ವರೆಗೆ, ಬಂದೂಕಿನಿಂದ ಹಿಡಿದು, ಟ್ಯಾಂಕರ್ ಗಳವರೆಗೆ, ಯುದ್ಧ ನೌಕೆಯಿಂದ ಹಿಡಿದು, ಸಬ್ಮೆರೀನ್ ಗಳವರೆಗೆ, ಯುದ್ಧಕ್ಕೆ ಬೇಕಾಗುವ ಎಲ್ಲ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ತಯಾರಿಸುವ ಸಂಸ್ಥೆಗಳು ಅಮೆರಿಕದಲ್ಲಿವೆ.

ಯುದ್ಧಕ್ಕೆ ಬೇಕಾದ ಎಲ್ಲ ವಿಭಾಗದ ಉಪಕರಣಗಳನ್ನೂ ತಯಾರಿಸುವ ಕಂಪನಿ ಲಾಕ್ಹೀಡ್ ಮಾರ್ಟಿನ್ ಕಳೆದ ವರ್ಷ 55 ಬಿಲಿಯನ್ ಡಾಲರ್ ಮೌಲ್ಯದ ಆಯುಧಗಳನ್ನು ರಫ್ತು ಮಾಡಿದೆ. ಹಾಗೆಯೇ ಬೋಯಿಂಗ್ ಮೂವತ್ತೈದು ಬಿಲಿಯನ್, ನಾರ್ಥ್ರ್ ಆಪ್ ಗ್ರುಮ್ಮನ್ ಮೂವತ್ತು ಬಿಲಿಯನ್, ಜನರಲ್ ಡೈನಾಮಿಕ್ಸ್ ಮತ್ತು ರೇಥಿಯಾನ್ ಟೆಕ್ನಾಲಜಿಸ್ ತಲಾ ಇಪ್ಪತ್ತೈದು ಬಿಲಿಯನ್ ಡಾಲರ್‌ನಂತೆ ಈ ಐದು ಕಂಪನಿಗಳು ಒಟ್ಟೂ ನೂರ ಎಪ್ಪತ್ತು ಶತಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರ ರಫ್ತು ಮಾಡಿವೆ.

ಇವೆಲ್ಲ ಒಂದು ಕಡೆ ಇರಲಿ, ಇರಾನ್ ಮೇಲೆ ಅಮೆರಿಕ ಮುಗಿ ಬಿದ್ದಿದ್ದೇಕೆ? ಇಸ್ರೇಲ್ ಮತ್ತು ಇರಾನ್ ನಡುವೆ ಮುನಿಸು ಯುದ್ಧರೂಪಕ್ಕೆ ತಿರುಗಿತ್ತಾದರೂ ಅಮೆರಿಕ ಇದರಲ್ಲಿ ನೇರ ವಾಗಿ ಭಾಗಿಯಾಗಬೇಕಾಗಿರಲಿಲ್ಲ. ಇಸ್ರೇಲ್ ಪರ ಇರುವುದೇ ಆದರೂ ಕೆಲವು ಯುದ್ಧ ಗಳಲ್ಲಿ ಮಾಡುವಂತೆ ಹಿಂದಿನಿಂದ ಬೆಂಬಲ ನೀಡಬಹುದುತ್ತು. ಆದರೆ, ಈಗಿನ ಅಧ್ಯಕ್ಷ ಟ್ರಂಪ್ ಬಗ್ಗೆ ಏನು ಹೇಳುವುದು? ಒಂದು ಕಡೆ ತಾನು ಯುದ್ಧ ನಿಲ್ಲಿಸುವುದರಲ್ಲಿ ನಿಸ್ಸೀಮ.

ಈಗಾಗಲೇ ಸಾಕಷ್ಟು ಯುದ್ಧ ನಿಲ್ಲಿಸಿದ್ದೇನೆ ಎನ್ನುತ್ತ, ನೊಬೆಲ್ ಶಾಂತಿ ಪುರಸ್ಕಾರಕ್ಕೆ ತಾನೇ ಅರ್ಹ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಾರೆ. ಇನ್ನೊಂದು ಕಡೆ, ಯುದ್ಧದ ತೀವ್ರತೆಯನ್ನು ಇನ್ನೂ ಹೆಚ್ಚುಗೊಳಿಸುತ್ತೇವೆ ಎನ್ನುತ್ತಾರೆ. ಒಂದು ಕಡೆ ಇರಾನ್ ಅಣ್ವಸ್ತ್ರ ತಯಾರಿಕೆಯಲ್ಲಿ ತೊಡಗಿದರೆ ವಿಶ್ವಕ್ಕೇ ಮಾರಕ ಎನ್ನುತ್ತಾರೆ. ಇನ್ನೊಂದು ಕಡೆ ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನ ಹೊಂದಿದೆ ಎಂದು ಅನುಮಾನವಿರುವ ಉತ್ತರ ಕೋರಿಯಾದ ಕುರಿತು ಮೌನ ತಾಳುತ್ತಾರೆ.

ಒಮ್ಮೆ ನಾವು ಯುದ್ಧವನ್ನು ಗೆದ್ದಿದ್ದೇವೆ ಎನ್ನುತ್ತಾರೆ, ಇನ್ನೊಮ್ಮೆ ಸಂಧಾನದ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ, ಮಾತ್ತೊಮ್ಮೆ ಇರಾನ್ ಜನರು ನನ್ನನ್ನೇ ನಾಯಕನನ್ನಾಗಿ ಒಪ್ಪಿ, ದೇಶ ಮುನ್ನಡೆಸಲು ಕೇಳಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ, ಮಗದೊಮ್ಮೆ ಮಿತ್ರರಾಷ್ಟ್ರ ಸೌದಿ ಅರೇಬಿಯಾದ ಯುವರಾಜನ ಬಗ್ಗೆ ಸಲ್ಲದ ಮಾತಾಡುತ್ತಾರೆ.

ಒಟ್ಟಿನಲ್ಲಿ ದಿನಕ್ಕೆ ಮೂರು ನಮೂನಿ ಮಾತಾಡುತ್ತಿದ್ದಾರೆ ವಿನಃ ಯುದ್ಧದ ಕುರಿತಾದ ನಿಖರ ಮಾಹಿತಿ ನೀಡುತ್ತಿಲ್ಲ. ಏನೇ ಆದರೂ, ಇರಾನ್ ಅಮೆರಿಕಕ್ಕೆ ಕೆಲವು ಅನಿರೀಕ್ಷಿತ ಆಘಾತ ನೀಡಿ ಟ್ರಂಪ್ ಮುಖ ಕೆಂಪು ಆಗುವಂತೆ ಮಾಡಿದೆ.

ಕೆಲವೇ ದಿನಗಳ ಮೊದಲು ವೆನಿಜುವೆಲಾದ ಅಧ್ಯಕ್ಷರನ್ನು ಪತ್ನಿ ಸಮೇತ ಮಧ್ಯರಾತ್ರಿ ಎತ್ತಿಕೊಂಡು ಬಂದ ಅಮೆರಿಕ, ಮೊದಲ ದಿನವೇ ಇರಾನಿನ ಸರ್ವಾಧಿಕಾರಿ ಮತ್ತು ಬಳಗ ವೂ ಸೇರಿದಂತೆ ನಲವತ್ತು ಜನರು ಮೃತಪಟ್ಟಾಗ, ಈ ಯುದ್ಧವೂ ಒಂದೆರಡು ದಿನದಲ್ಲಿ ಮುಗಿಯುತ್ತದೆ ಎಂದೇ ಲೆಕ್ಕ ಹಾಕಿದ್ದಿರಬೇಕು.

ಆದರೆ, ಇರಾನಿನ ವ್ಯವಸ್ಥೆ ಉಳಿದ ದೇಶಗಳಂತಿಲ್ಲ, ಎಂದು ಕಳೆದ ಎರಡೂವರೆ ಮೂರು ದಶಕದಲ್ಲಿ ಸಾಕಷ್ಟು ಬದಲಾದದ್ದು ಅಮೆರಿಕಕ್ಕೆ ತಿಳಿಯಲೇ ಇಲ್ಲವೇ? ಅಲ್ಲಿ ಅಧಿಕಾರ ವನ್ನು ಸುಮಾರು ಮೂವತ್ತು ಜಿಲ್ಲೆಗಳಾಗಿ ವಿಂಗಡಿಸಿ, ಪ್ರತಿಯೊಂದಕ್ಕೂ ಒಬ್ಬೊಬ್ಬ ನಾಯಕನನ್ನು ನೇಮಿಸಿ, ಅವರಿಗೆ ಅಧಿಕಾರ ಕೊಟ್ಟು ದಶಕಗಳೇ ಕಳೆದಿವೆ, ಆದ್ದರಿಂದಲೇ ಸರ್ವಾಧಿಕಾರಿ ಇಲ್ಲದಿದ್ದರೂ, ಅಧ್ಯಕ್ಷರ ಪರವಾನಗಿ ಇಲ್ಲದಿದ್ದರೂ ಯುದ್ಧ ಮುಂದು ವರಿದಿದೆ.

ಇದು ಅಮೆರಿಕ ಎಣಿಸದ ಒಂದು ಆಘಾತ. ಯುದ್ಧ ಆರಂಭವಾಗುತ್ತಿದ್ದಂತೆ ಹರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಿದ್ದು ಇನ್ನೊಂದು ಯುದ್ಧ ನೀತಿ. ಯುದ್ಧ ಇಷ್ಟು ಮುಂದುವರಿಯಲು, ಇಡೀ ವಿಶ್ವವೇ ಆತಂಕಕ್ಕೊಳಗಾಗಲು ಇದು ಪ್ರಮುಖ ಕಾರಣ. ಇಲ್ಲವಾದರೆ ಯುದ್ಧದಲ್ಲಿ ಭಾಗಿಯಾದ ದೇಶಗಳನ್ನು ಬಿಟ್ತರೆ ಉಳಿದ ದೇಶಗಳು ತಲೆ ಕೆಡಿಸಿ ಕೊಳ್ಳುತ್ತಿರಲಿಲ್ಲ.

ಅಮೆರಿಕ ಹೆಚ್ಚು ತಲೆ ಕೆಡಿಸಿಕೊಂಡದ್ದೂ ಇದೇ ಕಾರಣಕ್ಕೆ. ಈ ಯುದ್ಧದಲ್ಲಿ ತಿಳಿದ ಇನ್ನೊಂದು ವಿಷಯ ‘ಡಾನ್ಸಿಂಗ್ ಮಿಸೈಲ್’ ಇಸ್ರೇಲ್ ನಿದ್ದೆಗೆಡಿಸಿದ್ದು ಈ ಮಿಸೈಲ್ ಗಳು. ಇದುವರೆಗೂ ನೇರವಾಗಿ ತನ್ನ ದೇಶದತ್ತ ಬರುವ ಮಿಸೈಲ್‌ಗಳನ್ನು ತನ್ನ ಐರನ್ ಡೋಮ್ ನಿಂದ ಭೇದಿಸುತ್ತಿದ್ದ ಇಸ್ರೇಲ್‌ಗೆ ಕುಣಿಯುವ ಅಥವಾ ಆಗಾಗ ದಿಕ್ಕು ಬದಲಾಯಿಸಿ ಗುರಿ ತಲುಪುವ ಮಿಸೈಲ್ ದಾರಿ ತಪ್ಪಿಸಿದವು. ಆ ಕಾರಣಕ್ಕಾಗಿ ಇಸ್ರೇಲ್ ಕೂಡ ಈ ಯುದ್ಧದಲ್ಲಿ ಸಾಕಷ್ಟು ನಷ್ಟಕ್ಕೊಳಗಾಯಿತು.

ಹಾಗೆಯೇ ಇರಾನ್ ನೀಡಿದ ಇನ್ನೊಂದು ಆಘಾತ, ಮಿಸೈಲ್ ಲಾಂಚ್ ಪ್ಯಾಡ್‌ಗಳು. ತನ್ನ ಮಿಲಿಟರಿ ತಾಣಗಳಲ್ಲಿ ಡಮ್ಮಿ ಲಾಂಚ್ ಪ್ಯಾಡ್ ನಿರ್ಮಿಸಿ, ನಿಜವಾದ ಮಿಸೈಲ್‌ಗಳನ್ನು ಮರುಭೂಮಿಯಲ್ಲಿ ನಿರ್ಮಿಸಿದ ಸುರಂಗದಲ್ಲಿರುವ ಪ್ಯಾಡ್‌ಗಳಿಂದ ಹಾರಿಸುವುದನ್ನು ಯಾರೂ ಎಣಿಸಿರಲಿಲ್ಲವೇನೋ.

ಇನ್ನು ಅತ್ಯಂತ ಹಾಸ್ಯಾಸ್ಪದ ಎನಿಸಿದ್ದು, ಹತ್ತು ಸಾವಿರ ಡಾಲರ್ ವೆಚ್ಚದಲ್ಲಿ, ಸಾಧಾರಣ ಮೊಪೆಡ್ ಎಂಜಿನ್‌ನಿಂದ ತಯಾರಿಸಿದ ಡ್ರೋನ್ ಬಳಸಿ ಅಕ್ಕ-ಪಕ್ಕದ ದೇಶಗಳ ಮೇಲೆ ಇರಾನ್ ದಾಳಿ ನಡೆಸಿತು. ಅದನ್ನು ಹೊಡೆದುರುಳಿಸಲು ಆ ದೇಶಗಳು ನಲವತ್ತು ಸಾವಿರ ಡಾಲರ್ ಬೆಲೆಯ ಇಂಟರ್ಸೆಪ್ಟರ್ ಬಳಸಬೇಕಾಯಿತು.

ಇಂತಹ ಸಾವಿರಾರು ಡ್ರೋನ್ ಇರಾನ್ ಬಳಿ ಇನ್ನೂ ಇವೆಯಂತೆ. ಅದರ ಹೊರತಾಗಿ ಸಾಕಷ್ಟು ಮಿಸೈಲ್‌ಗಳೂ ಉಳಿದಿವೆ ಎನ್ನುವುದೂ ಸತ್ಯ. ಹಾಗಿರುವಾಗ ಈ ಯುದ್ಧ ಎನ್ನೂ ಎಷ್ಟು ದಿನ ಮುಂದುವರಿಯಲಿದೆ, ಎಂದು ಮುಗಿಯಲಿದೆ ಎನ್ನುವುದು ಯಾರಿಂದಲೂ ಹೇಳಲು ಸಾಧ್ಯವಿಲ್ಲ.

ಕೊನೆಯದಾಗಿ, ‘ರಣರಂಗದಲ್ಲಿ ಕಾಣುವ ಪ್ರತಿಯೊಂದು ಬಂದೂಕು ಹಸಿದವನ ತಟ್ಟೆ ಯಿಂದ ಅನ್ನ ಕದ್ದ ಸಂಕೇತ. ಪ್ರತಿಯೊಂದು ಟ್ಯಾಂಕರ್ ಚಳಿಯಲ್ಲಿ ನಡುಗುತ್ತಿರು‌ ವವನ ಮೈಮೇಲಿಂದ ಬಟ್ಟೆ ಕದ್ದ ಸೂಚಕ. ಒಂದು ಆಧುನಿಕ ಯುದ್ಧ ವಿಮಾನದ ವೆಚ್ಚ ಮೂವತ್ತು ನಗರಗಳಲ್ಲಿರುವ ಶಾಲೆಗಳಿಗೆ ಸಮ.

ತಲಾ ಅರವತ್ತು ಸಾವಿರ ಜನಸಂಖ್ಯೆ ಹೊಂದಿದ ಎರಡು ಪಟ್ಟಣಗಳಿಗೆ ವಿದ್ಯುತ್ ಶಕ್ತಿ ಒದಗಿಸುವ ಸ್ಥಾವರಗಳಿಗೆ ಸಮ. ಸುಸಜ್ಜಿತವಾದ ಎರಡು ಆಸ್ಪತ್ರೆಗೆ ಅಥವಾ ಐವತ್ತು ಮೈಲು ಕಾಂಕ್ರೀಟ್ ರಸ್ತೆಗೆ ಸಮ ಅಥವಾ ಎಂಟು ಸಾವಿರ ಜನರ ವಾಸಕ್ಕೆ ಯೋಗ್ಯವಾದ ಮನೆಗಳಿಗೆ ಸಮ.’ ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ, ಸ್ವತಃ ಸೇನೆಯ ಕಮಾಂಡರ್ ಆಗಿದ್ದ, ನಂತರ ಅಮೆರಿಕದ ಅಧ್ಯಕ್ಷರೂ ಆಗಿದ್ದ ಐಸೆನ್ಹೋರ್ವ.

ರಷ್ಯಾದೊಂದಿಗೆ ಆಯುಧ ಪೈಪೋಟಿ ಮುಂದೊಂದು ದಿನ ಚಿಂತಾಜನಕವಾಗಲಿದೆ ಎಂದು ಅರವತ್ತರ ದಶಕದಲ್ಲಿಯೇ ಹೇಳಿದ್ದರು ಐಸೆನ್ಹೋರ್ವ. ಐಸನ್ಹೋರ್ವ ಮಾತು, ಮುಂದು, ಎಂದಿಗೂ ನಿಜ. ಒಂದೇ ಬದಲಾವಣೆ ಎಂದರೆ, ಇಂದಿನ ಯುದ್ಧದ ಖರ್ಚು ಅವರು ಹೇಳಿದ್ದಕ್ಕಿಂತ ಹೆಚ್ಚಾಗಿದೆ.

'War does not determine who is right, only who is left', ‘ಯುದ್ಧ ಯಾರು ಸರಿ ಎಂಬು ದನ್ನು ನಿರ್ಧರಿಸುವುದಿಲ್ಲ, ಯಾರು ಬದುಕಿ ಉಳಿದಿದ್ದಾರೆ ಎಂಬುದನ್ನು ಮಾತ್ರ ನಿರ್ಧರಿಸು ತ್ತದೆ’ ಎಂದು ಈ ಮಾತಿನ ಅರ್ಥ. ಯುದ್ಧಕ್ಕೆ ಸಂಬಂಧಿಸಿದಂತೆ ಇದಕ್ಕಿಂತ ಉತ್ತಮ ವಾಕ್ಯ ಸಿಗಲಿಕ್ಕಿಲ್ಲ. ಈ ಮಾತು ಇಂದಿನ ಅಮೆರಿಕದ ಅಧ್ಯಕ್ಷ ಟ್ರಂಪ್‌ಗೆ ಅರ್ಥವಾದಂತಿಲ್ಲ.