ತಿಳಿರು ತೋರಣ
ಆವಕಾಡೊ ಹಣ್ಣುಗಳು ಈಗ ಭಾರತದಲ್ಲೂ, ಕನಿಷ್ಠಪಕ್ಷ ಬೆಂಗಳೂರಿನಂಥ ನಗರಪ್ರದೇಶ ಗಳಲ್ಲಂತೂ ಪರಿಚಿತ ಮತ್ತು ಜನಪ್ರಿಯವೂ ಆಗಿವೆ. ಹಣ್ಣಿನ ತಿರುಳು ಬೆಣ್ಣೆಯಂತೆ ಇರುವುದರಿಂದ ಆವಕಾಡೊಗೆ ಕನ್ನಡದಲ್ಲಿ ಬೆಣ್ಣೆಹಣ್ಣು ಎಂಬ ನಾಮಕರಣವೂ ಆಗಿರು ವಂತಿದೆ. ಗ್ವಾಕಮೂಲಿ ತಯಾರಿಯಲ್ಲಿ ಮಾತ್ರವಲ್ಲದೇ ಬೇರೆ ಮೆಕ್ಸಿಕನ್ ತಿಂಡಿ-ತಿನಿಸು ಗಳಲ್ಲೂ ಆವಕಾಡೊ ಪಾತ್ರವಿರುವುದರಿಂದ ಬಳಕೆ ಜಾಸ್ತಿಯಾಗಿದೆ, ಬೇಡಿಕೆಯೂ ಜಾಸ್ತಿ ಯಾಗಿದೆ; ಸ್ಥಳೀಯವಾಗಿ ಆವಕಾಡೊ ಕೃಷಿಯೂ ಆರಂಭವಾಗಿ ಲಾಭದಾಯಕ ಉದ್ಯಮ ವೆನಿಸಿದೆ ಎಂದು ತಿಳಿದು ಬರುತ್ತದೆ.
ಅಮೆರಿಕನ್ ಫುಟ್‌ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನೇ ‘ಸುಪರ್‌ಬೌಲ್ ಸಂಡೇ’ ಎನ್ನುವುದು, ಇಡೀ ಪಂದ್ಯಾವಳಿಯಲ್ಲಿ ಅಮೆರಿಕದೊಳಗಿನ ತಂಡಗಳಷ್ಟೇ ಸೆಣಸುವುದಾದರೂ ವರ್ಲ್ಡ್ ಕಪ್ ಎಂದು ಕರೆದು ವೈಭವೀಕರಿಸುವುದು, ಅದು ಫೆಬ್ರವರಿ ತಿಂಗಳ ಎರಡನೆಯ ಭಾನುವಾರ ನಡೆಯುವುದು, ಪಂದ್ಯ ವೀಕ್ಷಣೆಯ ನೆಪದಲ್ಲಿ ರಾಷ್ಟ್ರಮಟ್ಟದಲ್ಲಿ ಅತಿಹೆಚ್ಚು ಆಹಾರ ಭಕ್ಷಣ ಮತ್ತು ಮದ್ಯಸೇವನೆ ಆ ದಿನದಂದು ಆಗುವುದು... ಅಂತೆಲ್ಲ ಕಳೆದವಾರ ಫೆಬ್ರವರಿ ತಿಂಗಳ ಹಿರಿಮೆಯನ್ನು ಕುರಿತ ಅಂಕಣದಲ್ಲಿ ಬರೆದಿದ್ದೆನಷ್ಟೆ? ಇದರಲ್ಲಿ ‘ಅತಿಹೆಚ್ಚು ಆಹಾರಭಕ್ಷಣ’ ಎಂಬ ಸಂಗತಿಯನ್ನು ಫೋಕಸ್ ಮಾಡಿದರೆ, ಯಾವ್ಯಾವ ಥರದ ಆಹಾರ ತಿಂಡಿ-ತಿನಿಸು? ಪ್ರಮುಖವಾಗಿ ಮೆಕ್ಕೆಜೋಳದ ಹಿಟ್ಟಿನಿಂದ ತಯಾರಿಸಿದಂಥ ಟೋರ್ಟಿಯಾ ಚಿಪ್ಸ್, ಮತ್ತು ಅವುಗಳನ್ನು ಅದ್ದಿ (ಡಿಪ್ ಮಾಡಿ) ತಿನ್ನಲಿಕ್ಕೆ ಗ್ವಾಕಮೂಲಿ.
ಅದೇ, ಆವಕಾಡೊ ಹಣ್ಣಿನ ತಿರುಳನ್ನು ಮ್ಯಾಷ್ ಮಾಡಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೇಟೊ, ಹಸಿಮೆಣಸು, ಕೊತ್ತಂಬ್ರಿಸೊಪ್ಪು, ಉಪ್ಪು, ನಿಂಬೆರಸ ಕಲೆಸಿ ಮಾಡಿದ ಲೇಹ್ಯ.
ಒಂದು ಥೋರ ಮಟ್ಟಿನ ಅಂದಾಜಿನಂತೆ ಸುಮಾರು 130 ಮಿಲಿಯನ್ ಪೌಂಡ್‌ಗಳಷ್ಟು, ಅಂದರೆ ಹತ್ತಿರ ಹತ್ತಿರ 5 ಕೋಟಿ 90 ಲಕ್ಷ ಕಿಲೊಗ್ರಾಮ್‌ಗಳಷ್ಟು, ಗ್ವಾಕಮೂಲಿ ಲೇಹ್ಯವು ಸುಪರ್‌ಬೌಲ್ ಸಂಡೇ ಒಂದೇ ದಿನದಂದು ಖರ್ಚಾಗುತ್ತದೆಯಂತೆ!
ಖರ್ಚಾಗುತ್ತದೆ ಅಂದರೆ ಮನುಷ್ಯರ ಹೊಟ್ಟೆ ಸೇರುತ್ತದೆ ಎಂದರ್ಥ. ಈ ಪ್ರಮಾಣವನ್ನು ಇನ್ನೊಂದು ತಮಾಷೆ ಕಲ್ಪನೆ ರೀತಿಯಲ್ಲಿ ಹೇಳುವುದಾದರೆ- ಒಂದು ಫುಟ್‌ಬಾಲ್ ಮೈದಾನದ ತುಂಬೆಲ್ಲ ಈ ಗ್ವಾಕಮೂಲಿಯನ್ನು ಮೆತ್ತಿದರೆ ಏನಿಲ್ಲವೆಂದರೂ 25 ಅಡಿ ದಪ್ಪದ ಪದರವಾದೀತು! ಇಷ್ಟೊಂದು ಗ್ವಾಕಮೂಲಿ ತಯಾರಿಸಬೇಕಾದರೆ ಸುಮಾರು 20 ಕೋಟಿ ಸಂಖ್ಯೆಯ ಆವಕಾಡೊ ಹಣ್ಣುಗಳು ಬೇಕಾಗುತ್ತವೆ.
ಇದನ್ನೂ ಓದಿ: Srivathsa Joshi Column: ಫೆಬ್ರವರಿ: ಕಿರಿಯ ತಿಂಗಳ ಹಿರಿಮೆಯ ಕುರಿತೊಂದು ಲಹರಿ
ಇದರಲ್ಲಿ 80 ಪ್ರತಿಶತದಷ್ಟು, 6000 ಟ್ರಕ್‌ಲೋಡ್‌ನಷ್ಟು ಹಣ್ಣುಗಳು ಮೆಕ್ಸಿಕೊದಿಂದ ಅಮೆರಿಕ ದೇಶಕ್ಕೆ ಆಮದಾಗುತ್ತವೆ. ಆವಕಾಡೊ ಹಣ್ಣುಗಳು ಈಗ ಭಾರತದಲ್ಲೂ, ಕನಿಷ್ಠಪಕ್ಷ ಬೆಂಗಳೂರಿ ನಂಥ ನಗರಪ್ರದೇಶಗಳಲ್ಲಂತೂ ಪರಿಚಿತ ಮತ್ತು ಜನಪ್ರಿಯವೂ ಆಗಿವೆ. ಹಣ್ಣಿನ ತಿರುಳು ಬೆಣ್ಣೆ ಯಂತೆ ಇರುವುದರಿಂದ ಆವಕಾಡೊಗೆ ಕನ್ನಡದಲ್ಲಿ ಬೆಣ್ಣೆಹಣ್ಣು ಎಂಬ ನಾಮಕರಣವೂ ಆಗಿರುವಂತಿದೆ.
ಗ್ವಾಕಮೂಲಿ ತಯಾರಿಯಲ್ಲಿ ಮಾತ್ರವಲ್ಲದೇ ಬೇರೆ ಮೆಕ್ಸಿಕನ್ ತಿಂಡಿ-ತಿನಿಸುಗಳಲ್ಲೂ ಆವಕಾಡೊ ಪಾತ್ರವಿರುವುದರಿಂದ ಬಳಕೆ ಜಾಸ್ತಿಯಾಗಿದೆ, ಬೇಡಿಕೆಯೂ ಜಾಸ್ತಿಯಾಗಿದೆ; ಸ್ಥಳೀಯವಾಗಿ ಆವಕಾಡೊ ಕೃಷಿಯೂ ಆರಂಭವಾಗಿ ಲಾಭದಾಯಕ ಉದ್ಯಮವೆನಿಸಿದೆ- ಎಂದು ತಿಳಿದುಬರುತ್ತದೆ.
ಆವಕಾಡೊ ಬಹುತೇಕ ಕೊಬ್ಬಿನ ಅಂಶ ಹೆಚ್ಚು ಇರುವ ಖಾದ್ಯವಾದರೂ ಅದು ದೇಹಕ್ಕೆ ಒಳ್ಳೆಯ ಕೊಬ್ಬು. “ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಭಗವಂತನ ಹಾಗೆ" ದೇಹದೊಳಗಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಾಶಪಡಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುವಂತೆ ಮಾಡುತ್ತದೆ; ಪೊಟ್ಯಾಸಿಯಂ, ಪ್ರೋಟೀನ್, ಇ-ವಿಟಮಿನ್ ಮುಂತಾಗಿ ಪೋಷಕಾಂಶಗಳನ್ನು ಒದಗಿಸುತ್ತದೆ- ಎಂಬಿತ್ಯಾದಿ ಗುಣಗಾನವೂ ಇರುವುದರಿಂದ ಈಗಿನ ಹೆಲ್ತ್ ಕಾನ್ಷಿಯಸ್ ಪ್ರಜೆಗಳಿಗೆ ಆವಕಾಡೊ ಮೇಲೆ ಹೆಚ್ಚಿನ ಒಲವು.
ಗ್ವಾಕಮೂಲಿ ಡಿಪ್ ರೂಪದಲ್ಲಷ್ಟೇ ಅಲ್ಲದೆ ಸಲಾಡ್‌ಗಳಲ್ಲಿ, ಸ್ಯಾಂಡ್‌ವಿಚ್‌ಗಳಲ್ಲಿ, ಬ್ರೆಡ್ ಟೋಸ್ಟ್ ಗಳಲ್ಲಿ, ಸ್ಟ- ಪರಾಠಾಗಳಲ್ಲಿ, ಐಸ್‌ಕ್ರೀಮ್ ಮತ್ತು ಸ್ಮೂದೀಗಳಲ್ಲೂ ಆವಕಾಡೊ ಸೇವನೆ ಈಗೊಂದು ಫ್ಯಾಷನ್ನೇ ಆಗಿಬಿಟ್ಟಿದೆ ಎನ್ನಲಿಕ್ಕಡ್ಡಿಯಿಲ್ಲ. ಇಂತಿರುವ ಆವಕಾಡೊ ಭಾರತದಲ್ಲಿ ಈಚೆಗಷ್ಟೇ ಜನಪ್ರಿಯ ಆಗುತ್ತಿರುವುದಾದರೂ ಮೆಕ್ಸಿಕೊ ಮತ್ತಿತರ ಲ್ಯಾಟಿನ್ ಅಮೆರಿಕ ಪ್ರದೇಶಗಳಲ್ಲಿ ಸಹಸ್ರಾರು ವರ್ಷಗಳಷ್ಟು ಹಿಂದಿನ ಕಾಲದಿಂದಲೂ ಒಂದು ಮುಖ್ಯ ಆಹಾರಪದಾರ್ಥ ಆಗಿರುವ ಹೆಗ್ಗಳಿಕೆ ಈ ಹಣ್ಣಿನದು. ಇದನ್ನು ಕುರಿತ ಜನಪದ ಕಥೆಗಳೂ ಇವೆ!
ಅಂಥದೊಂದು ಸ್ವಾರಸ್ಯಕರ ಕಥೆ- ಓಡಿಹೋದ ಇಬ್ಬರು ಪ್ರೇಮಿಗಳು ಮತ್ತು ಅವರು ಬಿತ್ತಿದ ಆವಕಾಡೊ ಹಣ್ಣುಗಳ ಕಥೆ, ಹೀಗಿದೆ: ಒಂದಾನೊಂದು ಊರಿನಲ್ಲಿ ಸೆರಿಯೋಕೈ ಎಂಬುವವ ಒಬ್ಬನಿದ್ದನು. ತನ್ನ ಹೆಂಡತಿಯೊಂದಿಗೆ ಕಾಡಿನ ಮಧ್ಯದಲ್ಲಿರುವ ಒಂದು ಹಳ್ಳಿಯಲ್ಲಿ ವಾಸಿಸು ತ್ತಿದ್ದನು. ಸೆರಿಯೋಕೈಗೆ ಆವಕಾಡೊ ಹಣ್ಣುಗಳೆಂದರೆ ತುಂಬ ಇಷ್ಟ. ಅವನು ಹೆಚ್ಚಿನ ಸಮಯ ವನ್ನು ಮರದಿಂದ ಆವಕಾಡೊಗಳನ್ನು ಕೊಯ್ದು ತಿನ್ನುವುದರಲ್ಲಿ ಕಳೆಯುತ್ತಿದ್ದನು.
ಪ್ರಕೃತಿಯ ಸಮೃದ್ಧಿಯನ್ನು, ವಿಶೇಷವಾಗಿ ಆವಕಾಡೊ ಹಣ್ಣುಗಳನ್ನು, ಆನಂದಿಸುತ್ತಾ ಸುಖ ಶಾಂತಿಯ ಜೀವನ ನಡೆಸುತ್ತಿದ್ದನು. ಆದರೆ ಈ ಶಾಂತಿ ಹೆಚ್ಚು ಕಾಲ ಉಳಿಯಲಿಲ್ಲ. ಒಂದು ದಿನ ಸೆರಿಯೋಕೈ ಆವಕಾಡೊ ಕೀಳಲು ಹೊರಗಿದ್ದಾಗ, ಒಂದು ಟ್ಯಾಪಿರ್ (ಹಂದಿಯನ್ನು ಹೋಲುವ ಒಂದು ಚಿಕ್ಕ ಪ್ರಾಣಿ) ಅವನ ಮನೆಗೆ ಬಂತು. ಹೇಗೆಂದು ಕೇಳಬೇಡಿ, ಆದರೆ ಆ ಟ್ಯಾಪಿರ್‌ಗೆ ಸೆರಿಯೋ ಕೈನ ಹೆಂಡತಿಯ ಮೇಲೆ ಮೋಹ ಉಂಟಾಯಿತು.
ಗೌತಮ ಮುನಿಯ ಆಬ್ಸೆನ್ಸಲ್ಲಿ ಅಹಲ್ಯೆಯ ಮೇಲೆ ಕಣ್ಣಿಟ್ಟು ಇಂದ್ರ ಬಂದಂತೆ ಎಂದು ನಿಮಗೆ ಪುರಾಣಕಥೆ ನೆನಪಾದರೆ ಅದು ಕಾಕತಾಳೀಯ ಹೋಲಿಕೆ ಅಷ್ಟೇ. ತನ್ನ ಅನುಪಸ್ಥಿತಿಯಲ್ಲಿ ಟ್ಯಾಪಿರ್ ಬಂದು ಹೆಂಡತಿಯೊಡನೆ ಲಲ್ಲೆಗರೆದ ವಿಷಯ ಸೆರಿಯೋಕೈಗೆ ತಿಳಿದಿರಲಿಲ್ಲ. ಅವನಿಗೇನು ಗೌತಮನಂತೆ ತಪಃಶಕ್ತಿ ಇರಲಿಲ್ಲವಲ್ಲ ಎನ್ನೋಣ.
ಸರಿ, ಮರುದಿನವೂ ಸೆರಿಯೋಕೈ ಕಾಡಿಗೆ ಆವಕಾಡೊ ಹಣ್ಣು ಕೀಳಲು ಹೊರಟಾಗ, ಅವನ ಹೆಂಡತಿ ತಾನೂ ಜತೆಯಲ್ಲಿ ಬರುತ್ತೇನೆಂದಳು. ಅವಳು ಮುಂದೆಮುಂದೆ ಸಾಗುತ್ತ ಉರುವಲಿಗಾಗಿ ಕಟ್ಟಿಗೆ ಹುಡುಕುತ್ತಿರುವಂತೆ ನಟನೆ ಮಾಡಿದಳು. ಸೆರಿಯೋಕೈ ಒಂದು ಮರವನ್ನೇರಿ ಬುಟ್ಟಿತುಂಬ ಆವಕಾ ಡೊ ಹಣ್ಣುಗಳನ್ನು ಕೊಯ್ದನು. ಮರದಿಂದ ಇಳಿಯುತ್ತಿರಬೇಕಾದರೆ ಹೆಂಡತಿಯು ದೂರದಿಂದಲೇ ಅವನ ಕಾಲಿಗೆ ಗುರಿಯಿಟ್ಟು ಕಲ್ಲೆಸೆದಳು.
ಗಾಯಗೊಂಡ ಸೆರಿಯೋಕೈ ಅಲ್ಲಿಯೇ ಕೆಳಗೆ ಬಿದ್ದನು. ಕಷ್ಟಪಟ್ಟು ಕುಂಟುತ್ತ ನಡೆಯ ತೊಡಗಿ ದನು. ಅದೇ ಕ್ಷಣವನ್ನು ಕಾಯುತ್ತಿದ್ದ ಟ್ಯಾಪಿರ್ ಅಲ್ಲಿ ಪ್ರತ್ಯಕ್ಷವಾಯಿತು. ಆವಕಾಡೊ ತುಂಬಿದ್ದ ಬುಟ್ಟಿಯನ್ನೂ ಎತ್ತಿಕೊಂಡು ಸೆರಿಯೋಕೈನ ಹೆಂಡತಿಯು ಟ್ಯಾಪಿರ್‌ನೊಡನೆ ಓಡಿ ಹೋದಳು. ಅವರಿಬ್ಬರೂ ಮಿಂಚಿನಂತೆ ಮಾಯವಾದರು.
ಅದೃಷ್ಟವಶಾತ್ ಸೆರಿಯೋಕೈನನ್ನು ಆತನ ಒಬ್ಬ ಪರಿಚಿತ ನೆರೆಯವನು ಕಂಡು ರಕ್ಷಿಸಿದನು. ಕುಂಟುತ್ತಿರುವವನಿಗೆ ಆಧಾರವಾಗಿ ಕ್ಷೇಮದಿಂದ ಮನೆಗೆ ತಲುಪಿಸಿದನು. ಕೆಲ ದಿನಗಳ ಬಳಿಕ ಸೆರಿಯೋಕೈ ಚೇತರಿಸಿಕೊಂಡನು. ಆದರೆ ಸಿಟ್ಟಿನಿಂದ ಉರಿಯುತ್ತಿದ್ದ ಅವನು ಟ್ಯಾಪಿರ್‌ನೊಡನೆ ಓಡಿಹೋದ ಹೆಂಡತಿಯನ್ನು ಹುಡುಕಲು ಹೊರಟನು. ಆವತ್ತು ಹೆಂಡತಿಯಿಂದ ಕಲ್ಲೇಟು ತಿಂದ ಘಟನೆ ನಡೆದಿದ್ದ ಸ್ಥಳಕ್ಕೆ ಹಿಂತಿರುಗಿದಾಗ, ಅಲ್ಲಿ ಹುಲುಸಾಗಿ ಬೆಳೆದಿರುವ ಆವಕಾಡೊ ಮರಗಳ ಸಾಲು ಕಂಡಿತು.
ಅವು ಆತನ ಹೆಂಡತಿಯು ಬುಟ್ಟಿಯನ್ನು ಕದ್ದೊಯ್ದು ಓಡಿಹೋಗಿದ್ದಾಗ ಬುಟ್ಟಿಯಿಂದ ಕೆಳಗೆ ಬಿದ್ದಿದ್ದ ಹಣ್ಣುಗಳ ಬೀಜ ಮೊಳೆತು ಬೆಳೆದ ಮರಗಳು. ಒಂದೊಂದೇ ಮರವನ್ನು ನೋಡುತ್ತ, ಮರದಿಂದ ಮರಕ್ಕೆ ಸಾಗುತ್ತಾ ಸೆರಿಯೋಕೈ ಭೂಲೋಕದ ಕೊನೆಯವರೆಗೆ ತಲುಪಿದನು. ಅಲ್ಲಿ ಅವನು ಆ ಇಬ್ಬರನ್ನು ಕಂಡನು!
ಅಂತರಂಗದಲ್ಲಿ ಕೋಪ ಕುದಿಯುತ್ತಿತ್ತು. ಕಣ್ಣು ಮುಚ್ಚಿಕೊಂಡು ಅವರೆಡೆಗೆ ಬಾಣ ಬಿಟ್ಟನು. ಬಾಣ ಟ್ಯಾಪಿರ್‌ಗೆ ತಗುಲಿ, ಅದು ಲೋಕದ ಅಂಚಿನ ಪಾರಕ್ಕೆ ಬಿದ್ದುಹೋಯಿತು. ಟ್ಯಾಪಿರ್ ಬೀಳುವು ದನ್ನು ಕಂಡ ಆ ಹೆಂಗಸು ಕೂಡ ಪ್ರಾಣಿಯ ಮೇಲೆ ನಿಜವಾದ ಪ್ರೀತಿ ಹೊಂದಿದ್ದವಳಂತೆ ಟ್ಯಾಪಿರ್ʼ ನೊಂದಿಗೇ ಪ್ರಾಣ ತ್ಯಜಿಸಿದಳು. ಅವರಿಬ್ಬರ ಆತ್ಮಗಳು ಸ್ವರ್ಗದತ್ತ ಹಾರಿದವು. ಆಮೇಲೆ ಸೆರಿಯೋಕೈ ಏನಾದನು? ಕಥೆಯ ಪ್ರಕಾರ, ಅವನು ಇಂದಿಗೂ ಅವರಿಬ್ಬರನ್ನು ಹಿಂಬಾಲಿಸುತ್ತಿದ್ದಾನೆ.
ಆಕಾಶದಲ್ಲಿ ನಮಗೆ ಕಾಣುವ ಓರಿಯನ್ ತಾರಾಪುಂಜವೇ ಸೆರಿಯೋಕೈ. ಅವನ ಹೆಂಡತಿಯು ಪ್ಲೀಯಾಡ್ಸ್ ಎಂಬ ಇನ್ನೊಂದು ನಕ್ಷತ್ರಪುಂಜ. ಟ್ಯಾಪಿರ್ ಕೂಡ ಹೈಯಾಡ್ಸ್ ಎಂಬ ಮತ್ತೊಂದು ನಕ್ಷತ್ರಪುಂಜದ ರೂಪದಲ್ಲಿ ಪಕ್ಕದಲ್ಲೇ ಇದೆ. ಈ ಕರುಣಾಜನಕ ಕಥೆಯಲ್ಲಿ ನಡೆದ ಒಂದು ಒಳ್ಳೆಯ ಸಂಗತಿಯೆಂದರೆ, ಬಿದ್ದ ಅವಕಾಡೊ ಬೀಜಗಳಿಂದ ಹುಟ್ಟಿದ ಮರಗಳು. ಅವುಗಳ ಸಂತತಿಯೇ ಈಗ ಭೂಲೋಕವಾಸಿಗಳಿಗೆ ಆವಕಾಡೊ ನೀಡುತ್ತಿವೆ.
ಈ ಫೇರಿ-ಟೇಲ್ ಅಷ್ಟೇ ಅಲ್ಲ, ಆವಕಾಡೊಗೆ ಸಂಬಂಧಿಸಿದಂತೆ ಬೇರೆ ಕೆಲವು ನಂಬಿಕೆಗಳೂ ಆ ಜನಾಂಗದವರಲ್ಲಿ ಈಗಲೂ ಪ್ರಚಲಿತ ಇವೆಯಂತೆ. ಕನಸಲ್ಲಿ ಆವಕಾಡೊ ಕಂಡರೆ ಅದು ಯಾವುದರ ಶಕುನ ಅಂತ ಅಂಥದೊಂದು ನಂಬಿಕೆ. ಆವಕಾಡೊ ಮರದಿಂದ ಹಣ್ಣುಗಳನ್ನು ಕೀಳುತ್ತಿದ್ದೇನೆಂಬ ಕನಸುಬಿದ್ದರೆ ಸದ್ಯದಲ್ಲೇ ಹಿತೈಷಿಗಳ ಭೇಟಿ; ಮರದಲ್ಲಿ ಹಣ್ಣುಗಳು ಗಾಳಿಗೆ ಓಲಾಡುತ್ತಿರುವ ದೃಶ್ಯ ಕನಸಲ್ಲಿ ಕಂಡರೆ ಧನಲಾಭ.
ಹಣ್ಣು ತಾನಾಗಿಯೇ ಮರದಿಂದ ಬಿದ್ದಂತೆ ಕಂಡರೆ ಏನೋ ತೊಂದರೆ, ಸಂಕಟ ಕಾದಿದೆ; ಮರದ ಸುತ್ತ ಆಟ ಆಡಿದಂತೆ ಕನಸು ಬಿದ್ದರೆ ಕುಟುಂಬದಲ್ಲೊಂದು ಶುಭಪ್ರಸವ ಆಗುವುದಿದೆ... ಹೀಗೆ ಆವಕಾಡೊ ಸ್ವಪ್ನಫಲ.
ಆಗಲೇ ಹೇಳಿದಂತೆ ಮೆಕ್ಸಿಕೊ ಹಾಗೂ ಮಧ್ಯ ಮತ್ತು ದಕ್ಷಿಣ ಅಮೆರಿಕ ಖಂಡದಲ್ಲಿ ಆವಕಾಡೊ ಪ್ರಾಚೀನ ಕಾಲದಿಂದಲೂ ಪ್ರಮುಖ ಆಹಾರವಾಗಿತ್ತು. ಮಾಯನ್, ಇಂಕಾ, ಆಜ್ಟೆಕ್ ನಾಗರಿಕತೆಗಳ ಜನಜೀವನದಲ್ಲಿ ಈ ಹಣ್ಣಿನ ಬಳಕೆ ಹಾಸುಹೊಕ್ಕಿತ್ತೆಂದು ಪುರಾತತ್ವ ಉತ್ಖನನಗಳಲ್ಲೂ ತಿಳಿದು ಬಂದಿದೆ. ಆಜ್ಟೆಕ್ ಜನಾಂಗದವರು ಇದನ್ನು ಅಹುವಾಕಾಟೆ (Ahuacate) ಎಂದು ಕರೆಯುತ್ತಿದ್ದರು.
ಕ್ರಿ.ಶ 16ನೆಯ ಶತಮಾನದಲ್ಲಿ ಯುರೋಪ್‌ನಿಂದ ಬಂದ ಸ್ಪಾನಿಷ್ ಆಕ್ರಮಣಕಾರರು ಆಜ್ಟೆಕ್ ಜನರಲ್ಲಿ ಈ ಹಣ್ಣಿಗೆ ಇದ್ದ ಮಹತ್ತ್ವವನ್ನು ನೋಡಿ ಇದನ್ನು ತುಂಬಾ ಇಷ್ಟಪಟ್ಟರು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1900ರ ಆರಂಭದವರೆಗೂ ಅಹುವಾಕಾಟೆಯನ್ನು ವ್ಯಾಪಾರಿಕವಾಗಿ ಬೆಳೆಸಲಾಗಿರಲಿಲ್ಲ. ಆದರೆ 191ರ ವೇಳೆಗೆ ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಹೋಟೆಲ್‌ಗಳು ಈ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಆರ್ಡರ್ ಮಾಡತೊಡಗಿದವು.
ಒಂದು ಡಜನ್ ಹಣ್ಣಿಗೆ 12 ಡಾಲರ್‌ನಂತೆ ಅಧಿಕ ಬೆಲೆ ಕೊಟ್ಟಾದರೂ ಕೊಳ್ಳುತ್ತಿದ್ದರು. ಆಮೇಲೆ ಕ್ಯಾಲಿಫೋರ್ನಿಯಾದ ಕೆಲ ರೈತರು ಅಹುವಾಕಾಟೆ ಬೆಳೆಯತೊಡಗಿದರು. ಆದರೆ ತಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಕಂಡುಕೊಳ್ಳುವುದು ಅವರಿಗೊಂದು ಸಮಸ್ಯೆಯಾಯಿತು.
ಮೊದಲನೆಯದಾಗಿ Ahuacate ಎಂಬ ಪದವನ್ನು ಅಮೆರಿಕನ್ನರಿಗೆ ಉಚ್ಚರಿಸಲು ಕಷ್ಟವಾಗುತ್ತಿತ್ತು. ಇನ್ನೂ ಕೆಟ್ಟದೇನೆಂದರೆ, ಅಜ್ಟೆಕ್ ಜನರ ನಹೌಟಿ ಭಾಷೆಯಲ್ಲಿ ಅದರ ಅರ್ಥ ಇದ್ದದ್ದು ವೃಷಣ ( testicle) ಎಂದು! ಹಣ್ಣಿನ ಆಕಾರ, ಮರದ ಕೊಂಬೆಗಳಲ್ಲಿ ಹೆಚ್ಚಾಗಿ ಜೋಡಿ ಹಣ್ಣುಗಳು ನೇತಾಡು ತ್ತಿರುವುದು, ಮತ್ತು ಅವುಗಳಿಗೆ ಕಾಮೋತ್ತೇಜಕ ಗುಣವಿದೆ ಎಂಬ ಕಾರಣದಿಂದ ಆಜ್ಟೆಕ್ ಪೂರ್ವಜರು ಆ ಹೆಸರನ್ನಿಟ್ಟಿದ್ದರು. ಯುರೋಪಿಯನ್ ಆಕ್ರಮಣಕಾರರು ಅದನ್ನು Alligator pear ಎಂದು ಕೂಡ ಕರೆದಿದ್ದುಂಟು.
ಹಣ್ಣಿನ ಹೊರಚರ್ಮ ಮೊಸಳೆಯಂತೆ ಕಡುಕಂದು ಬಣ್ಣ ಮತ್ತು ಚಿಕ್ಕಚಿಕ್ಕ ಗುಳ್ಳೆಗಳಿಂದ ಕೂಡಿರುವುದು, ಪೇರ್ ಹಣ್ಣಿನ ಆಕಾರವಿರುವುದರಿಂದ ಆ ಹೆಸರು. ಅಮೆರಿಕನ್ನರಿಗೆ ಅದೂ ಇಷ್ಟ ವಾಗಲಿಲ್ಲ. Butter pear ಅಂತ ಇನ್ನೊಂದು ಹೆಸರು, Calavo ಎಂಬ ಮತ್ತೊಂದು ಹೆಸರು ಕೂಡ ಅಲ್ಲಲ್ಲಿ ಚಾಲ್ತಿಯಿತ್ತಾದರೂ ಜನಮಾನಸದಲ್ಲಿ ನಿಲ್ಲಲಿಲ್ಲ.
ಹೀಗಾಗಿ ಕ್ಯಾಲಿಫೋರ್ನಿಯಾದ ರೈತರು ಹೊಸ ಹೆಸರು ಕಂಡುಕೊಂಡರು Avocado ಎಂದು. ನಿಘಂಟು ಪ್ರಕಾಶಕರಿಗೂ ಈ ಬದಲಾವಣೆಯನ್ನು ತಿಳಿಸಿದರು. ಬಹುವಚನ ರೂಪದಲ್ಲಿ Avocados ಅಂತ ಬರೆಯಬೇಕು ಎಂದು ಕೂಡ ಸೂಚಿಸಿದರು. ತಮ್ಮ ಸಂಘಟನೆಯ ಹೆಸರನ್ನು California Avocado Association ಎಂದು ಇಟ್ಟರು. ಈ ತಂತ್ರ ಯಶಸ್ವಿಯಾಯಿತು!
ಇಂದು ಅಮೆರಿಕದಲ್ಲಿ ಬೆಳೆಸಲಾಗುವ ಸುಮಾರು ಶೇ.90ರಷ್ಟು ಆವಕಾಡೊಗಳು ಕ್ಯಾಲಿಫೋರ್ನಿಯಾದಲ್ಲೇ ಬೆಳೆಯುತ್ತವೆ. ಆರಂಭದಲ್ಲಿ ಕೆಲವರಿಗೆ ಈ ಹಣ್ಣು ಅಷ್ಟೇನೂ ಇಷ್ಟವಾಗಿರಲಿಲ್ಲ. ಏಕೆಂದರೆ ಇದರಲ್ಲಿ ಸಕ್ಕರೆಯಂಶ ಇಲ್ಲ, ಹಣ್ಣು ಎಂದಮೇಲೆ ಸಿಹಿಯಾಗಿರ ಬೇಕು ತಾನೆ? ಆದರೆ ಕ್ಯಾಲಿಫೋರ್ನಿಯಾದ ರೈತರು ಛಲ ಬಿಡಲಿಲ್ಲ. ಸಿಹಿ ಇಲ್ಲದಿರುವುದೇ ಇದರ ವಿಶೇಷತೆ ಎಂದು ಸಾರಿದರು.
ಆವಕಾಡೊಗಳ ಸುಮಾರು 400ಕ್ಕೂ ಹೆಚ್ಚು ತಳಿಗಳಿವೆ. ಆದರೆ ಅಮೆರಿಕದಲ್ಲಿ ಹೆಚ್ಚು ಪ್ರಸಿದ್ಧ ವಾದದ್ದು Hass Avocado. ಇದು ರುಡಾಲ್ಫ್ ಹಾಸ್ ಎಂಬ ವ್ಯಕ್ತಿಯ ಹೆಸರಿನದ್ದು. ಇದರ ಚರ್ಮ ದಪ್ಪವಾಗಿರುತ್ತದೆ, ಗಾತ್ರ ಚಿಕ್ಕದಾಗಿರುತ್ತದೆ, ತೈಲದಂಶ ಹೆಚ್ಚು, ರುಚಿ ಚೆನ್ನಾಗಿರುತ್ತದೆ. ಬೆಳೆಸಲು ಸುಲಭವಾದ್ದರಿಂದ ರೈತರೂ ಇದನ್ನು ಹೆಚ್ಚು ಇಷ್ಟಪಡುತ್ತಾರೆ.
ಅಂದ ಹಾಗೆ ಅಮೆರಿಕದಲ್ಲಿ ಹಾಸ್ ಆವಕಾಡೊಗಳು ಪ್ರಸಿದ್ಧವಾಗಿರುವ, ಮಾರುಕಟ್ಟೆಯಲ್ಲಿ ಸಿಂಹಪಾಲು ಅವುಗಳದೇ ಆಗಿರುವ ಸಂಗತಿಯ ಹಿಂದೆಯೂ ಒಂದು ಸ್ವಾರಸ್ಯಕರ ಚರಿತ್ರೆಯಿದೆ. 1920ರ ದಶಕದ ಕೊನೆಯಲ್ಲಿ, ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ರುಡಾಲ್ಫ್ ಹಾಸ್ ಎಂಬಾತನು ಎ.ಆರ್. ರೈಡೌಟ್ ಎಂಬ ಕೃಷಿಕನಿಂದ ಕೆಲವು ಚಿಕ್ಕ ಆವಕಾಡೊ ಗಿಡಗಳನ್ನು ಖರೀದಿಸಿದನು.
ಹಾಸ್‌ನ ಉದ್ದೇಶವಿದ್ದದ್ದು ಲಿಯೋನ್ ಎಂಬ ತಳಿಯ ಎರಡು ಎಕರೆ ಪ್ರದೇಶದ ತೋಟವನ್ನು ಬೆಳೆಸುವುದು. ರೈಡೌಟ್ ಅನುಸರಿಸುತ್ತಿದ್ದ ಪದ್ಧತಿಯಂತೆ, ಚಿಕ್ಕ ಗಿಡಗಳನ್ನು ನೇರವಾಗಿ ತೋಟ ದಲ್ಲೇ 12 ಅಡಿ ಚದರ ಅಂತರದಲ್ಲಿ ನೆಡಲಾಗುತ್ತಿತ್ತು. ಈ ಗಿಡಗಳನ್ನು ಮೊದಲಿಗೆ ಟಾರ್‌ಪೇಪರ್ ಟ್ಯೂಬ್‌ಗಳಲ್ಲಿ ಬೆಳೆಸಲಾಗುತ್ತಿತ್ತು.
ಒಂದು ವರ್ಷ ಹಾಗೆಯೇ ಬೆಳೆಯಲು ಬಿಟ್ಟು ಆಮೇಲೆ ಅವುಗಳಿಗೆ ಬೇರೆ ತಳಿಯ ಮೊಗ್ಗುಗಳನ್ನು ಜೋಡಿಸುವ ವಿಧಾನ ಬಳಸಲಾಗುತ್ತಿತ್ತು. ರುಡಾಲ್ ಹಾಸ್‌ನ ಮಕ್ಕಳು ಒಂದು ವಿಶೇಷ ಗಿಡದ ಕಡೆ ಅಪ್ಪನ ಗಮನ ಸೆಳೆದರು. ಏಕೆಂದರೆ ಆ ಗಿಡದ ಹಣ್ಣು ತುಂಬ ಚೆನ್ನಾಗಿರುತ್ತವೆಂದು ಅವರು ಕಂಡುಕೊಂಡಿದ್ದರು. ಗಿಡದಲ್ಲಿ ಫಸಲೂ ಚೆನ್ನಾಗಿ ಬರುತ್ತಿತ್ತು.
ಹಾಸ್ 1935ರಲ್ಲಿ ಆ ಗಿಡದ ತಳಿ ಅನನ್ಯವಾಗಿ ಇದೆಯೆಂದುಕೊಂಡು ಪೇಟೆಂಟ್ʼಗೆ ಅರ್ಜಿ ಸಲ್ಲಿಸಿ ಪೇಟೆಂಟ್ ಪಡೆದೇಬಿಟ್ಟನು. ಅದೇ ವರ್ಷ, ಎಚ್.ಎಚ್.ಬ್ರೋಕಾ ಎಂಬ ಕೃಷಿಕನೊಡನೆ ಈ ತಳಿಯ 300 ಗಿಡಗಳನ್ನು ಬೆಳೆಸುವ ಪಾಲುದಾರಿಕೆ ಒಪ್ಪಂದ ಮಾಡಿಕೊಂಡನು. ಆದಾಯದಲ್ಲಿ ಶೇ.25ರಷ್ಟು ಹಾಸ್‌ಗೆ, ಮತ್ತು ಕೃಷಿಕೆಲಸವೆಲ್ಲ ಅವನದೇ ಆದ್ದರಿಂದ ಶೇ.75ರಷ್ಟು ಬ್ರೋಕಾನಿಗೆ.
ಆ ಕಾಲದಲ್ಲಿ ಜನಪ್ರಿಯವಾಗಿದ್ದ ಫುಯರ್ಟೆ ಎಂಬ ತಳಿಯನ್ನು ಮೀರಿ ಹಾಸ್ ತಳಿ ಮುನ್ನಡೆ ಯಿತು. ಪ್ರತಿವರ್ಷ ಅವರ ನರ್ಸರಿಯಿಂದ ಸಾವಿರಗಟ್ಟಲೆ ಗಿಡಗಳು ಮಾರಾಟವಾಗುತ್ತಿದ್ದವು. ಅಷ್ಟಾಗಿ ಹಾಸ್ ತಳಿಯ ಬೀಜ ಮೂಲತಃ ಯಾವ ತಳಿಯಿಂದ ಬಂದಿತು ಎಂಬುದು ಇಂದಿಗೂ ಯಾರಿಗೂ ಖಚಿತವಾಗಿ ಗೊತ್ತಿಲ್ಲ. ರುಡಾಲ್ಫ್ ಹಾಸ್ ಮೊದಲಿಗೆ ಸಂಪರ್ಕಿಸಿದ್ದ ಎ.ಆರ್. ರೈಡೌಟ್ ಆದರೋ ಆವಕಾಡೊ ಕೃಷಿಯಲ್ಲಿ ಹೊಸಹೊಸ ಪ್ರಯೋಗ ಮಾಡುತ್ತಲೇ ಇದ್ದವನು.
ಸಿಕ್ಕ ಯಾವ ಬೀಜವಾದರೂ ನೆಡುತ್ತಿದ್ದನು, ಕೆಲವೊಮ್ಮೆ ರಸ್ತೆಗಳ ಬದಿಯಲ್ಲೂ, ನೆರೆಯವರ ಮನೆಗಳಲ್ಲೂ. ಹೊಸ ತಳಿ ಸಿಗಬಹುದು ಎಂಬ ಆಸೆಯೇನೋ ಅವನಿಗೆ ಇತ್ತು, ಆದರೆ ಹಾಸ್ ತಳಿಯು ಆತ ವಿಶೇಷವಾಗಿ ಉಳಿಸಬೇಕು ಎಂದುಕೊಂಡದ್ದೇನೂ ಅಲ್ಲ. ಅಷ್ಟರ ಮಟ್ಟಿಗೆ, ಯಃಕಶ್ಚಿತ್ ಅಂಚೆಯಣ್ಣನಾಗಿದ್ದ ರುಡಾಲ್ಫ್ ಹಾಸ್‌ನಿಗೆ ನಿಜವಾಗಿಯೂ ಅದೃಷ್ಟದೇವತೆ ಒಲಿದು ಬಂದಳೆಂದೇ ಹೇಳಬೇಕು.
ಅವನ ಮಕ್ಕಳು ಗಮನಿಸಿದ್ದ ಮೂಲ ಹಾಸ್ ಗಿಡವು, ಕ್ಯಾಲಿಫೋರ್ನಿಯಾದ ಲಾ ಹಬ್ರಾ ಹೈಟ್ಸ್ ಎಂಬಲ್ಲಿ 70 ವರ್ಷ ಬದುಕಿ ಭರಪೂರ ಫಲಗಳನ್ನಿತ್ತು 2002ರಲ್ಲಿ ಸತ್ತಿತು. ಹಾಸ್ ಎಂಬ ಹೆಸರು ಮಾತ್ರ ಅಮೆರಿಕದ ಆವಕಾಡೊ ಮಾರುಕಟ್ಟೆಯಲ್ಲಿ ಹಾಸ್-ಹೊಕ್ಕಾಗಿ ಉಳಿಯಿತು.
ಅಮೆರಿಕದಲ್ಲಿ ಆವಕಾಡೊ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ ಮೆಕ್ಸಿಕೊ ದಿಂದ ಅವುಗಳ ಆಮದನ್ನು ಒಂದು ಕಾಲದಲ್ಲಿ, 1914ರಿಂದ 1997ರವರೆಗೂ, ನಿಷೇಧಿಸಲಾಗಿತ್ತು. 1997ರಲ್ಲಿಯೂ 19 ಸಂಸ್ಥಾನಗಳಿಗೆ ಮಾತ್ರ ಮೆಕ್ಸಿಕೊ ಆವಕಾಡೊಗಳನ್ನು ರಫ್ತು ಮಾಡಬಹು ದಾಗಿತ್ತು.
ಕ್ಯಾಲಿಫೋರ್ನಿಯಾಕ್ಕೆ ರಫ್ತು ಮಾಡುವಂತಿರಲಿಲ್ಲ. 2002ರಲ್ಲಿ ಆ ನಿಷೇಧವನ್ನೂ ತೆಗೆದ ಮೇಲೆ ಈಗ ಎಲ್ಲ 50 ಸಂಸ್ಥಾನಗಳಲ್ಲೂ ಮೆಕ್ಸಿಕೊ ಆವಕಾಡೊ ಲಭ್ಯವಿರುತ್ತವೆ. ಮೇ ತಿಂಗಳಿಂದ ನವೆಂಬರ್ ವರೆಗೆ ಅವುಗಳ ಸೀಸನ್ ಇರುವಾಗ ಬೆಲೆಯೂ ತುಂಬ ಕಡಿಮೆಯಿರುತ್ತದೆ. ಈನಡುವೆ ಸುಪರ್‌ಬೌಲ್ ಜತೆ ತಳುಕುಹಾಕಿದ್ದರಿಂದ, ಫುಟ್‌ಬಾಲ್ ಆಟಗಾರರನ್ನೇ ಆವಕಾಡೊ/ಗ್ವಾಕಮೂಲಿ ಜಾಹೀರಾತುಗಳಿಗೆ ರೂಪದರ್ಶಿಗಳನ್ನಾಗಿಸಿದ್ದರಿಂದ, ಜತೆಯಲ್ಲೇ ಆವಕಾಡೊ ಒದಗಿಸುವ ಆರೋಗ್ಯಭಾಗ್ಯಗಳ ಬಗ್ಗೆ ವೈದ್ಯ ಸಮುದಾಯವೂ ಪ್ರಚಾರ ನಡೆಸಿದ್ದರಿಂದ ಈಗ ಆವಕಾಡೊದ್ದೇ ಆಧಿಪತ್ಯ ಎಂಬಂತಾಗಿದೆ. ಈಬಾರಿಯ ಸುಪರ್‌ಬೌಲ್ ಪಂದ್ಯ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲೇ ನಡೆಯುತ್ತಿರುವುದರಿಂದ ಅಮೆರಿಕನ್ ಆವಕಾಡೊಗಳಿಗೂ ಹೋಮ್‌ಪಿಚ್‌ನಲ್ಲಿ ಮೆರೆಯುವ ಸಂಭ್ರಮ!