ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Swathi Harish Column: ಐ am ಫೈನ್ ಎಂಬ ಕಿರುನಗೆಯ ಹಿಂದಿನ ನೋವು

ಎನ್ ಸಿಆರ್‌ಬಿ 2023ರ ವರದಿಯ ಪ್ರಕಾರ ಭಾರತದಲ್ಲಿ ವರ್ಷವೊಂದರ 13,892 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿ 38 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಬದುಕನ್ನೇ ಕೊನೆಗೊಳಿಸುತ್ತಿದ್ದಾನೆ. 2022ಕ್ಕೆ ಹೋಲಿಸಿದರೆ ಶೇ.6.5ರಷ್ಟು ಏರಿಕೆ, ಮತ್ತು ಕಳೆದ ದಶಕದಲ್ಲಿ (2013-2023) ವಿದ್ಯಾರ್ಥಿ ಆತ್ಮಹತ್ಯೆ ಪ್ರಮಾಣ ಶೇ.65ರಷ್ಟು ಹೆಚ್ಚಿ, ದೇಶದ ಒಟ್ಟಾರೆ ಆತ್ಮಹತ್ಯೆ ದರಕ್ಕಿಂತ ದುಪ್ಪಟ್ಟು ವೇಗವಾಗಿ ಬೆಳೆದಿದೆ.

ಆತ್ಮಸಂಗಾತ

ಸ್ವಾತಿ ಹರೀಶ

ಕೆಲವು ದಿನ ಹಿಂದೆ ಮಹಾರಾಷ್ಟ್ರದಲ್ಲಿ ಯುವಕನೊಬ್ಬ ಬೆಟ್ಟದ ತುದಿಯಿಂದ ಹಾರಿ, ಆತನನ್ನು ಉಳಿಸಲು ಹೋದ ಹೆತ್ತವರೂ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ದುರಂತ ನೆನಪಿದೆಯಲ್ಲವೇ? ಐಫೋನ್ ಕೊಡಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ನಡೆಯಿತು ಎಂದು ವರದಿಯಾಗಿದ್ದರೂ, ತನಿಖೆಯ ಆಳಕ್ಕೆ ಹೋದಾಗ ಇದು ಆ ಹುಡುಗನ ಎರಡನೇ ಆತ್ಮಹತ್ಯೆ ಯತ್ನವಾಗಿತ್ತು ಎಂದೂ, ಕುಟುಂಬದೊಳಗಿನ ನಿರಂತರ ಜಗಳಗಳಿಂದ ಆತ ದೀರ್ಘಕಾಲದ ಮಾನಸಿಕ ಒತ್ತಡ ಅನುಭವಿಸು ತ್ತಿದ್ದ ಎಂದೂ ತಿಳಿದುಬಂತು.

ಇಂದಿನ ಜೆನ್ ಝೀ ಪೀಳಿಗೆ ಫೋನ್‌ಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ, ಸಂಸ್ಕಾರ ವಿಲ್ಲದ ಪೀಳಿಗೆ ಎಂದು ಸಮಾಜ ಸಲೀಸಾಗಿ ತೀರ್ಪು ನೀಡಿತು. ಆದರೆ ಆ ಕ್ಷುಲ್ಲಕ ನೆಪದ ಆಚೆಗೆ ಆ ಯುವಕ ಅನುಭವಿಸುತ್ತಿದ್ದ ಒಂಟಿತನ, ಆತಂಕ, ಅಸಹಾಯಕತೆಯನ್ನು ಗ್ರಹಿಸುವ ಸೂಕ್ಷ್ಮ ನಮಗಿದೆಯೇ? ಯುವಜನರನ್ನು ಬೊಟ್ಟು ಮಾಡಿ ನಿಂದಿಸುವ ಬದಲು, ಅವರ ಒಳಮನಸ್ಸನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿ ನಮಗಿರಬೇಕಾಗಿದೆ. ಇಂತಹ ಘಟನೆಗಳು ಈಗ ಹೊಸತೆನಿಸುವುದೇ ಇಲ್ಲ.

ಎನ್ ಸಿಆರ್‌ಬಿ 2023ರ ವರದಿಯ ಪ್ರಕಾರ ಭಾರತದಲ್ಲಿ ವರ್ಷವೊಂದರ 13,892 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿ 38 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಬದುಕನ್ನೇ ಕೊನೆಗೊಳಿಸು ತ್ತಿದ್ದಾನೆ. 2022ಕ್ಕೆ ಹೋಲಿಸಿದರೆ ಶೇ.6.5ರಷ್ಟು ಏರಿಕೆ, ಮತ್ತು ಕಳೆದ ದಶಕದಲ್ಲಿ (2013-2023) ವಿದ್ಯಾರ್ಥಿ ಆತ್ಮಹತ್ಯೆ ಪ್ರಮಾಣ ಶೇ.65ರಷ್ಟು ಹೆಚ್ಚಿ, ದೇಶದ ಒಟ್ಟಾರೆ ಆತ್ಮಹತ್ಯೆ ದರಕ್ಕಿಂತ ದುಪ್ಪಟ್ಟು ವೇಗವಾಗಿ ಬೆಳೆದಿದೆ.

ಇದನ್ನೂ ಓದಿ: Vishweshwar Bhat Column: ಅಪ್ಪನ ಕೊನೆಯುಸಿರ ಹಾದಿಯಲ್ಲಿ ಮಗನ ಜತೆ ಭಾವಪೂರ್ಣ ಪಯಣ

All Is Well ಎಂಬ ಮುಖವಾಡ

ಹೇಗಿದ್ದೀಯ? ಎಂದು ಕೇಳಿದರೆ ಕೂಡಲೇ ಬರುವ ಉತ್ತರ I am fine! ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ಈ ಕಿರುನಗೆಯ ಹಿಂದೆಯೇ ಅಡಗಿರುತ್ತದೆ. ದುರ್ಬಲ ಎಂಬ ಪಟ್ಟ ಕಟ್ಟಿಬಿಡುತ್ತಾರೋ, ನನ್ನ ನೋವು ಇನ್ನೊಬ್ಬರಿಗೆ ಭಾರವಾಗುತ್ತದೋ ಎಂಬ ಭಯವೇ ಯುವಜನರನ್ನು ಮೌನಕ್ಕೆ ದೂಡುತ್ತದೆ. ಜ್ವರ ಬಂದಾಗ ರೆ ತಗೋ, ಡಾಕ್ಟರ್ ಹತ್ತಿರ ಹೋಗು ಎನ್ನುವ ನಾವು, ಅದೇ ವ್ಯಕ್ತಿ ಆತಂಕ-ಖಿನ್ನತೆಯ ಬಗ್ಗೆ ಮಾತಾಡಿದಾಗ ಸ್ಟ್ರಾಂಗ್ ಆಗಿರು, ಎಲ್ಲಾ ಸಹಿಸಿಕೋ ಎನ್ನುತ್ತೇವೆ.

ಇಂತಹ ಮಾತುಗಳು ವ್ಯಕ್ತಿಯ ಭಾವನೆಗಳನ್ನು ಅಮಾನ್ಯಗೊಳಿಸಿ, ನಿನ್ನ ನೋವಿಗೆ ಇಲ್ಲಿ ಜಾಗವಿಲ್ಲ ಎಂಬ ಸಂದೇಶ ರವಾನಿಸುತ್ತವೆ. ಪದೇಪದೆ ಇದನ್ನು ಕೇಳಿ, ಜನ ತಮ್ಮ ಭಾವನೆಗಳನ್ನೇ ಸಂಶಯಿಸಿ ಮುಚ್ಚಿಟ್ಟು ಕೊಳ್ಳುವುದೇ ಸುರಕ್ಷಿತ ಎಂಬ ತೀರ್ಮಾನಕ್ಕೆ ಬರುತ್ತಾರೆ.

ಮೂಲಭೂತ ಸವಾಲುಗಳು

ಕೋಟಾ, ಹೈದರಾಬಾದ್‌ನಂತಹ ಅತಿ-ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳು ವಿದ್ಯಾರ್ಥಿಗಳನ್ನು ರ್ಯಾಂಕ್‌ ಗಳಿಸುವ ಯಂತ್ರಗಳಂತೆ ಕಾಣುತ್ತವೆ. ದಿನಕ್ಕೆ 14-16 ಗಂಟೆ ಓದು, ವಾರಕ್ಕೊಮ್ಮೆ ಪ್ರಕಟವಾಗುವ ಅಂಕಪಟ್ಟಿ, ನೀಟ್/ ಜೆಇಇಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ನಡುವೆ ಕೆಲವೇ ಸಾವಿರ ಸೀಟುಗಳಿಗಾಗಿ ಹೋರಾಟ ಮಾನಸಿಕ ಸ್ಥಿರತೆಯನ್ನೇ ಕುಸಿಯುವಂತೆ ಮಾಡುತ್ತದೆ. ಈ ವರ್ಷದ ನೀಟ್ ಸೋರಿಕೆ ಸಂದರ್ಭದಲ್ಲಿ ಎಷ್ಟೋ ಮುಗ್ಧ ವಿದ್ಯಾರ್ಥಿಗಳು ಪ್ರಾಣ ಕಳೆದು ಕೊಂಡರು.

62 ಒಕ

ಐಐಟಿ, ಐಐಎಂ, ಐಐಎಸ್‌ಸಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲೂ ಕಠಿಣ ಗ್ರೇಡಿಂಗ್, ಸಂಶೋಧನಾ ಒತ್ತಡ ಮತ್ತು ಪ್ಲೇಸ್ಮೆಂಟ್ ಅಭದ್ರತೆಯಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವವಿದ್ಯಾ ಲಯಗಳಿಗೆ ಬರುವ ಗ್ರಾಮೀಣ, ಬಡ, ಎಸ್‌ಸಿ/ಎಸ್‌ಟಿ/ಒಬಿಸಿ ವಿದ್ಯಾರ್ಥಿಗಳು ಭಾಷಾ ಕೀಳರಿಮೆ ಮತ್ತು ಬೆಂಬಲದ ಕೊರತೆ ಯಿಂದ ಒಂಟಿತನ-ತಾರತಮ್ಯ ಎದುರಿಸುತ್ತಾರೆ. ಸೋಲಿನ ಭಯದಿಂದ, ಮುಕ್ತವಾಗಿ ಮಾತಾಡಲಾಗದೆ ಕೋಟಾದಂತಹ ನಗರಗಳಲ್ಲಿ ಪ್ರತಿವರ್ಷ ಕೋಚಿಂಗ್ ವಿದ್ಯಾರ್ಥಿಗಳ ಆತ್ಮಹತ್ಯೆ ವರದಿಯಾಗುತ್ತಲೇ ಇದೆ.

ಆತ್ಮಹತ್ಯೆ ಸಾಕ್ಷರತೆ

ಆತ್ಮಹತ್ಯೆ ತಡೆಗಟ್ಟುವಿಕೆಯಲ್ಲಿ ‘ಸುಸೈಡ್ ಲಿಟರಸಿ’ ಎಂಬ ಪರಿಕಲ್ಪನೆ ಮಹತ್ವದ್ದು. ಸಾಕ್ಷರತೆ ಎಂದರೆ ಕಾರಣಗಳು, ಎಚ್ಚರಿಕೆ ಸೂಚನೆ, ಅಪಾಯಕಾರಕ-ರಕ್ಷಣಾತ್ಮಕ ಅಂಶಗಳು, ಎಲ್ಲಿ-ಹೇಗೆ ಸಹಾಯ ಪಡೆಯಬಹುದು ಎಂಬುದರ ಸಮಾಜದ ಸಾಮಾನ್ಯ ಜ್ಞಾನ. ಜ್ವರ ಬಂದಾಗ ಅದು ಸೋಂಕಿನ ಸೂಚನೆ ಎಂದು ಗೊತ್ತಿರುವಂತೆಯೇ, ಯಾರಾದರೂ ಮೌನಕ್ಕೆ ಜಾರಿದಾಗ, ಹತಾಶೆಯ ಮಾತಾಡಿದಾಗ ಗುರುತಿಸಿ ಸ್ಪಂದಿಸುವ ಜ್ಞಾನ.

ಭಾರತದಲ್ಲಿ ಈ ಸಾಕ್ಷರತೆಯ ಕೊರತೆ ಎದ್ದು ಕಾಣುತ್ತದೆ. ಹೆಚ್ಚಿನವರಿಗೆ ಸೂಚನೆಗಳನ್ನೇ ಗುರುತಿಸ ಲು ಗೊತ್ತಿಲ್ಲ, ಗೊತ್ತಿದ್ದರೂ ಎಲ್ಲಿಗೆ ಹೋಗಬೇಕೆಂಬ ಸ್ಪಷ್ಟತೆ ಇಲ್ಲ. ಸಾಕ್ಷರತೆ ಹೆಚ್ಚಿದಷ್ಟೂ ಸಹಾಯ ಪಡೆಯುವ ವರ್ತನೆ ಸುಧಾರಿಸುತ್ತದೆ; ಆದರೆ ಸ್ಟಿಗ್ಮಾ, ಜನ ಏನಂದುಕೊಳ್ಳುತ್ತಾರೆ ಎಂಬ ಭಯ, ನನ್ನ ಸಮಸ್ಯೆ ಅಷ್ಟು ದೊಡ್ಡದಲ್ಲ ಎಂಬ ಅಂದಾಜು, ಸೇವೆಗಳ ಕೊರತೆ ಸಹಾಯ ಪಡೆಯುವುದನ್ನು ತಡೆಯುತ್ತವೆ. ಹಾಗಾಗಿ ಶಾಲಾ-ಕಾಲೇಜು ಹಂತದ ಸಾಕ್ಷರತೆಯ ಪಾಠ, ಸಹಾಯ ಕೇಳುವುದು ದೌರ್ಬಲ್ಯ ವಲ್ಲ ಎಂಬ ಸತ್ಯ ಪರಿಚಯಿಸುವುದು ಅಗತ್ಯ.

ಈ ಸಾಕ್ಷರತೆಯನ್ನು ಸ್ಥೂಲವಾಗಿ ಐದು ಮುಖ್ಯ ಅಂಶಗಳ ಮೇಲೆ ರೂಪಿಸಬಹುದು:

  1. ಎಚ್ಚರಿಕೆಯ ಸೂಚನೆಗಳನ್ನು ಗುರುತಿಸುವುದು: ಆತ್ಮಹತ್ಯೆ ಥಟ್ಟನೆ ತೆಗೆದುಕೊಳ್ಳುವ ನಿರ್ಧಾರ ವಲ್ಲ; ಅದಕ್ಕೂ ಮೊದಲು ವ್ಯಕ್ತಿ ಸೂಚನೆಗಳನ್ನು ಕೊಡುತ್ತಲೇ ಇರುತ್ತಾನೆ. ಇದಕ್ಕಾಗಿ IS PATH WARM ಮಾದರಿ ಬಳಸಲಾಗುತ್ತದೆ: Ideation (ಸಾವಿನ ಬಗ್ಗೆ ಮಾತು), Substance use (ಮದ್ಯ-ಮಾದಕ ವಸ್ತು ಹೆಚ್ಚಳ), Purposelessness (ಶೂನ್ಯ ಭಾವನೆ), Anxiety (ತೀವ್ರ ಆತಂಕ), Trapped (ಬಂದಿಯಾದ ಭಾವ), Hopelessness (ನಿರಾಶೆ), Withdrawal (ಪ್ರೀತಿಪಾತ್ರರಿಂದ ದೂರವಾಗುವುದು), Anger (ಅನಿರೀಕ್ಷಿತ ಕ್ರೋಧ), Recklessness (ಅಜಾಗರೂಕ ವರ್ತನೆ), Mood changes (ಶೀಘ್ರ ಮನೋಭಾವ ಏರಿಳಿತ). ಐ ಆಮ್ ಫೈನ್ ಎಂಬ ಮಾತಿನ ಹಿಂದೆ ಐ ನೀಡ್ ಹೆಲ್ಪ್ ಎಂಬ ಕರೆಯನ್ನು ಗುರುತಿಸಬೇಕಿದೆ. ಸೂಚನೆ ಗುರುತಿಸಿದ ಮೇಲೆ ತೀರ್ಪಿಲ್ಲದೆ ಶಾಂತವಾಗಿ ಆಲಿಸುವುದೇ ಮೊದಲ ಹೆಜ್ಜೆ. ಎಲ್ಲಾ ಸರಿಯಾಗುತ್ತದೆ ಎಂಬ ಪೊಳ್ಳು ಭರವಸೆ ಗಿಂತ ನಿನ್ನ ನೋವು ನಿಜ, ನಾನು ನಿನ್ನ ಜೊತೆಗಿದ್ದೇನೆ ಎಂಬ ಮಾತು ಪರಿಣಾಮಕಾರಿ.
  2. ಅಪಾಯಕಾರಿ ಮತ್ತು ರಕ್ಷಣಾತ್ಮಕ ಅಂಶಗಳ ಅರಿವು: ಮಾನಸಿಕ ಒತ್ತಡ, ಒಂಟಿತನ, ಸಂಬಂಧಗಳ ಬಿರುಕು, ಹಿಂದಿನ ಪ್ರಯತ್ನಗಳಂತಹ ಅಪಾಯಕಾರಕ ಅಂಶಗಳ ಜೊತೆಗೆ, ಕುಟುಂಬ-ಸ್ನೇಹಿತರ ಬೆಂಬಲ, ವೃತ್ತಿಪರ ಸಹಾಯದಂತಹ ರಕ್ಷಣಾತ್ಮಕ ಅಂಶಗಳ ಸಮತೋಲನ ಅರ್ಥಮಾಡಿಕೊಳ್ಳುವುದೇ ಎರಡನೇ ಸ್ತಂಭ.
  3. ಮಿಥ್ಯೆಗಳನ್ನು ಅಳಿಸಿ ವಾಸ್ತವ ಅರಿಯುವುದು: ಆತ್ಮಹತ್ಯೆಯ ಬಗ್ಗೆ ನೇರವಾಗಿ ಕೇಳುವುದು ಅಪಾಯ ಕಾರಿ ಎಂಬುದು ದೊಡ್ಡ ತಪ್ಪು ಕಲ್ಪನೆ. ವಾಸ್ತವದಲ್ಲಿ ಸಹಾನುಭೂತಿಯಿಂದ ಕೇಳುವುದು ಭಾವನೆ ವ್ಯಕ್ತಪಡಿಸಲು ಅವಕಾಶ ನೀಡುತ್ತದೆ. ಪದೇಪದೆ ಹೇಳುವವರು ಗಮನ ಸೆಳೆಯಲಷ್ಟೇ ಹಾಗೆ ಮಾಡುತ್ತಾರೆ ಎಂಬ ನಂಬಿಕೆಯೂ ತಪ್ಪು.
  4. ಎಲ್ಲಿ, ಹೇಗೆ ಸಹಾಯ ಪಡೆಯಬೇಕು ಎಂಬ ಸ್ಪಷ್ಟತೆ: Tele-MANAS, ಹತ್ತಿರದ ಕೌನ್ಸಿಲರ್, ಮನೋ ವೈದ್ಯರನ್ನು ಸಂಪರ್ಕಿಸುವ ಮಾರ್ಗ ಸ್ಪಷ್ಟವಾಗಿರಬೇಕು. ತೀವ್ರ ಅಪಾಯದ ಸಂದರ್ಭ ದಲ್ಲಿ ವ್ಯಕ್ತಿಯನ್ನು ಒಂಟಿಯಾಗಿ ಬಿಡಬಾರದು, ಅಪಾಯಕಾರಿ ವಸ್ತುಗಳನ್ನು ದೂರವಿಡಬೇಕು, ತಕ್ಷಣ ವೃತ್ತಿಪರ ಸಹಾಯ ಪಡೆಯಬೇಕು. ತೀವ್ರ ಆತ್ಮಹತ್ಯೆಯ ಯೋಚನೆ ಕೆಲವೇ ನಿಮಿಷ ಇರುತ್ತದೆ; ಆ ಕ್ಷಣ ಜೊತೆಗಿದ್ದು ಗಮನ ಬೇರೆಡೆ ತಿರುಗಿಸುವುದರಿಂದ ಜೀವ ಉಳಿಸಬಹುದು.
  5. ಮುಕ್ತವಾಗಿ ಮಾತನಾಡುವ ಸೌಕರ್ಯ: ಮುಜುಗರವಿಲ್ಲದೆ ಮಾತಾಡುವ ಮಾನಸಿಕ ಸಿದ್ಧತೆ. ಸ್ಟಿಗ್ಮಾ ಕಡಿಮೆಯಾದಷ್ಟೂ ಸಂಭಾಷಣೆ ಸುಲಭ. ಈ ಐದೂ ಅಂಶಗಳು ಒಟ್ಟಾಗಿ ಸೇರಿದಾಗಲೇ ನಿಜವಾದ ಆತ್ಮಹತ್ಯೆ ಸಾಕ್ಷರತೆ ರೂಪುಗೊಳ್ಳುತ್ತದೆ; ಮಾಹಿತಿ ಇದ್ದ ಮಾತ್ರಕ್ಕೆ ಸಾಲದು, ಗುರುತಿಸಿ ಅರ್ಥಮಾಡಿ ಕೊಂಡು ಕಾರ್ಯರೂಪಕ್ಕಿಳಿಸುವ ಸಾಮರ್ಥ್ಯವೇ ಜೀವ ಉಳಿಸುತ್ತದೆ.

ಗೇಟ್‌ಕೀಪರ್ ಆಗುವ ಜವಾಬ್ದಾರಿ

ಆತ್ಮಹತ್ಯೆ ತಡೆಗಟ್ಟುವಿಕೆ ಕೇವಲ ಮನೋವೈದ್ಯರ ಕೆಲಸವಲ್ಲ. ಗೇಟ್‌ಕೀಪರ್ ತರಬೇತಿ ಮಾದರಿ ಯಂತೆ, ಶಿಕ್ಷಕರು, ಪೋಷಕರು, ಸ್ನೇಹಿತರು, ಸಹೋದ್ಯೋಗಿಗಳು ಸೂಚನೆಗಳನ್ನು ಗುರುತಿಸಿ ಸಕಾಲಿಕ ಸಹಾಯ ಒದಗಿಸುವ ಸಾಮರ್ಥ್ಯ ಹೊಂದಿರಬೇಕು.

ಭಾರತ ಸರಕಾರ 2022ರಲ್ಲಿ ಬಿಡುಗಡೆ ಮಾಡಿದ ರಾಷ್ಟ್ರೀಯ ಆತ್ಮಹತ್ಯೆ ತಡೆ ಯೋಜನೆಯೂ ಇದೇ ತತ್ವದ ಮೇಲಿದೆ. ಇದು ಆರೋಗ್ಯ ಇಲಾಖೆ ಮಾತ್ರವಲ್ಲ, ಶಿಕ್ಷಣ, ಕುಟುಂಬ, ಮಾಧ್ಯಮ, ಸಮುದಾ ಯ ಎಲ್ಲರೂ ಒಟ್ಟಾಗಿ ನಿರ್ವಹಿಸಬೇಕಾದ ಸಾಮೂಹಿಕ ಹೊಣೆ. ಪೋಷಕರು ಅಂಕಗಳಿಗಾಗಿ ಒತ್ತಡ ಹೇರುವುದನ್ನು ನಿಲ್ಲಿಸಿ, ಮಗುವಿನ ಭಾವನಾತ್ಮಕ ಸ್ಥಿತಿಗೆ ಗಮನ ಕೊಡಬೇಕು. ನೀನು ಸೋತರೂ ಗೆದ್ದರೂ ಈ ಮನೆ ನಿನಗೆ ಸುರಕ್ಷಿತ ಜಾಗ ಎಂಬ ಅಭಯ ನೀಡಬೇಕು. ದೈಹಿಕ ಜ್ವರಕ್ಕೆ ವೈದ್ಯರ ಬಳಿ ಹೋಗುವಷ್ಟೇ ಸಹಜವಾಗಿ ಥೆರಪಿ-ಕೌನ್ಸೆಲಿಂಗ್ ಪಡೆಯುವ ವಾತಾವರಣ ಸಂಸ್ಥೆಗಳಲ್ಲಿ ನಿರ್ಮಾಣವಾಗಬೇಕು; ಹಿರಿಯ ವಿದ್ಯಾರ್ಥಿಗಳ ಮೂಲಕ ಕಿರಿಯರಿಗೆ ಮಾರ್ಗದರ್ಶನ ನೀಡುವ ಬಡ್ಡೀ ಸಿಸ್ಟಮ್ ಜಾರಿಯಾಗಬೇಕು.

ಇತ್ತೀಚೆಗೆ ಸುಪ್ರೀಂ ಕೋರ್ಟ್ ವಿದ್ಯಾರ್ಥಿ ಆತ್ಮಹತ್ಯೆಗಳ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯ ಮಾರ್ಗಸೂಚಿ ಹೊರಡಿಸಿ, ಎನ್‌ಸಿಆರ್‌ಬಿಗೆ ವಿದ್ಯಾರ್ಥಿ ಆತ್ಮಹತ್ಯೆ ದತ್ತಾಂಶ ಪ್ರತ್ಯೇಕವಾಗಿ ದಾಖಲಿಸುವಂತೆ ಸೂಚಿಸಿರುವುದು ಸ್ವಾಗತಾರ್ಹ.

ಮನೆಯೊಳಗಿನ ಮತ್ತು ಸ್ನೇಹ ವಲಯದೊಳಗಿನ ಸೂಕ್ಷ್ಮತೆಯೇ ನಿಜವಾದ ಮೊದಲ ರಕ್ಷಣಾ ಗೋಡೆ. ಸಂಭಾಜಿನಗರದ ಆ ಯುವಕನ ಕಥೆಗೆ ಹಿಂತಿರುಗಿ ನೋಡಿದರೆ, ಒಂದೇ ಸತ್ಯ ಎದ್ದು ಕಾಣುತ್ತದೆ. ಆತ ಎಲ್ಲಾ ಒಂದು ಸೂಚನೆ ಕೊಟ್ಟಿರಬಹುದು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿದವರಿಲ್ಲ. ಯುವಜನರು ದೇಶದ ಭವಿಷ್ಯ. ಅವರ ಕನಸುಗಳಿಗೆ ರೆಕ್ಕೆ ಕೊಡುವುದು ಎಷ್ಟು ಮುಖ್ಯವೋ, ಅವರ ಮಾನಸಿಕ ಆರೋಗ್ಯಕ್ಕೆ ಭದ್ರತೆ ನೀಡುವುದು ಅಷ್ಟೇ ತುರ್ತಿನ ಅಗತ್ಯ.

ಐ ಆಮ್ ಫೈನ್ ಎಂಬ ಕಿರುನಗೆಯ ಹಿಂದಿರುವ ನೋವನ್ನು ಗುರುತಿಸುವ ಸೂಕ್ಷ್ಮತೆ ನಮ್ಮದಾಗಲಿ. ನಾನು ನಿನ್ನ ಜೊತೆ ಇದ್ದೇನೆ, ನಿನ್ನ ಸೋಲು-ಗೆಲುವಿನಲ್ಲೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ಒಂದು ಭರವಸೆಯ ಮಾತು ಒಂದು ಅಮೂಲ್ಯ ಜೀವವನ್ನು ಉಳಿಸಬಲ್ಲದು.

ನಿಮ್ಮ ಸುತ್ತಮುತ್ತ ಯಾರಾದರೂ ಆತ್ಮಹತ್ಯೆಯ ಆಲೋಚನೆಗಳನ್ನು ಹೊಂದಿದ್ದರೆ, ದಯವಿಟ್ಟು ತಕ್ಷಣ ಈ ಉಚಿತ 24/7 ಸೇವೆಗಳನ್ನು ಸಂಪರ್ಕಿಸಿ: Tele- MANAS (ಭಾರತ ಸರ್ಕಾರದ ಮಾನಸಿಕ ಆರೋಗ್ಯ ಸಹಾಯವಾಣಿ): 14416 ಅಥವಾ 1800-891-4416. KIRAN Helpline (ಸಾಮಾಜಿಕ ನ್ಯಾಯ ಸಚಿವಾಲಯ): 1800-599-0019. Vandrevala Foundation: 9999 666 555. V-Care: 8277946600. Sahayi: 08025497777.