ಸಂಗತ
ಡಾ.ವಿಜಯ್ ದರಡಾ
ಇತ್ತೀಚೆಗೆ ಈಜಿಪ್ಟ್ ಪ್ರವಾಸಕ್ಕೆ ಹೋಗಿದ್ದೆ. ಆಶ್ಚರ್ಯವೆಂಬಂತೆ ಅಲ್ಲಿ ಬಹಳಷ್ಟು ಜನರು, ಬಾಂಗ್ಲಾದೇಶದಲ್ಲಿ ನಡೆಯಲಿರುವ ಚುನಾವಣೆ ಬಗ್ಗೆ ನನ್ನ ಬಳಿ ಕೇಳಿದ್ದರು. ಬಾಂಗ್ಲಾದೇಶ ದಲ್ಲಿ ಚುನಾವಣೆಯ ಗಾಳಿ ಯಾವ ಕಡೆಗೆ ಬೀಸುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅವರಿಗಿತ್ತು. ಯಾರು ಗೆಲ್ಲುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಅವರು ಕಾತುರರಾಗಿದ್ದರು.
ಬಾಂಗ್ಲಾದೇಶದ ಮತದಾರರಲ್ಲಿ ಸಂಪೂರ್ಣ ವಿಶ್ವಾಸ ಹೊಂದಿದ್ದ ನಾನು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಗೆಲ್ಲುತ್ತದೆ ಎಂದು ಹೇಳಿದ್ದೆ. ಏಕೆಂದರೆ ಬಾಂಗ್ಲಾದೇಶ ದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು ಅಂದರೆ ಬಿಎನ್‌ಪಿ ಗೆಲ್ಲಬೇಕಿತ್ತು.
ಜಮಾತ್-ಎ-ಇಸ್ಲಾಮಿ ಮತ್ತು ನ್ಯಾಷನಲ್ ಸಿಟಿಜನ್ ಪಾರ್ಟಿಗಳು ಗೆದ್ದರೆ ಬಾಂಗ್ಲಾದೇಶ ವನ್ನು ಮೂಲಭೂತವಾದದತ್ತ ಕೊಂಡೊಯ್ಯುತ್ತವೆ ಎಂಬುದು ನನ್ನ ನಂಬಿಕೆಯಾಗಿತ್ತು. ಅಭಿವೃದ್ಧಿಯಲ್ಲಿ ನಂಬಿಕೆಯಿರಿಸಿರುವ ಬಾಂಗ್ಲಾದೇಶದ ಜನರು ಕೂಡ ಹೀಗೇ ಯೋಚಿಸು ತ್ತಾರೆ ಎಂದು ಭಾವಿಸಿದ್ದೆ.
ನನ್ನ ನಂಬಿಕೆ ನಿಜವಾಗಿದೆ. ಬಿಎನ್‌ಪಿಯೇ ಗೆದ್ದಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳ ಬೇಕೆಂದರೆ, ಬಾಂಗ್ಲಾದೇಶದ ಜನರು ತಮ್ಮ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಆಗಿನ ಪ್ರಧಾನಿ ಶೇಖ್ ಹಸೀನಾ ಅವರ ಸರಕಾರವನ್ನು ತೀವ್ರ ವಾದಿ ಹೋರಾಟಗಾರರು ಹಿಂಸಾಚಾರದ ಮೂಲಕ ಕಿತ್ತೆಸೆದಿದ್ದರು. ಆಗಿನ ಪರಿಸ್ಥಿತಿಯನ್ನು ನೋಡಿದರೆ, ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತಾ ಬಂದಿರುವ ದೇಶವೀಗ ಮೂಲಭೂತ ವಾದದತ್ತ ಹೋಗುತ್ತಿದೆಯಲ್ಲಾ ಎಂದು ಆತಂಕವಾಗುತ್ತಿತ್ತು.
ಇದನ್ನೂ ಓದಿ: Dr Vijay Darda Column: ವೈಮಾನಿಕ ಸುರಕ್ಷತೆ ಬಗ್ಗೆ ಮತ್ತೆ ಮತ್ತೆ ಏಳುವ ಪ್ರಶ್ನೆಗಳು !
ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಪದೇಪದೆ ದೌರ್ಜನ್ಯಗಳನ್ನು ಎಸಗುವುದು, ಹಿಂದೂ ಗಳನ್ನು ಹೊಡೆದು ಕೊಲ್ಲುವುದು ನಡೆಯುತ್ತಿತ್ತು. ಈ ದೌರ್ಜನ್ಯಗಳ ಬಗ್ಗೆ ಭಾರತ ಆತಂಕ ಗೊಂಡಿತ್ತು. ಅದನ್ನೆಲ್ಲ ನಿಲ್ಲಿಸಬೇಕಿದ್ದ ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಭಾರತ-ವಿರೋಧಿ ಭಾವನೆಗಳನ್ನೇ ಇನ್ನಷ್ಟು ಪೋಷಿಸಿ, ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದರು.
ಅವರ ಪ್ರಶಾಂತ ಮುಖದ ಹಿಂದೆ ಅದೇನೋ ಆತಂಕವಿರುವುದು ಸೂಕ್ಷ್ಮವಾಗಿ ಕಾಣಿಸು ತ್ತಿತ್ತು. ತಮಗೆ ಲಭಿಸಿದ ಅಧಿಕಾರವನ್ನು ನಿರ್ಭೀತಿಯಿಂದ ಚಲಾಯಿಸುವುದರಲ್ಲಿ ಅವರಿ ಗೇನೋ ಸಮಸ್ಯೆಯಿತ್ತು. ಅವರು ಪಾಕಿಸ್ತಾನ ಮತ್ತು ಚೀನಾದತ್ತ ವಾಲುತ್ತಿದ್ದರು. ಅಧಿಕಾರ ಉಳಿಸಿಕೊಳ್ಳಲು ಸಾರ್ವತ್ರಿಕ ಚುನಾವಣೆ ನಡೆಸುವ ನಿರ್ಧಾರವನ್ನು ಪದೇಪದೆ ಮುಂದಕ್ಕೆ ಹಾಕುತ್ತಿದ್ದರು.
ಕೊನೆಗೆ ಬಾಂಗ್ಲಾದೇಶದ ನರನಾಡಿಗಳಲ್ಲಿ ಮೂಲಭೂತವಾದ ಮತ್ತು ಧಾರ್ಮಿಕ ಮತಾಂಧತೆಯ ವಿಷ ಸಾಕಷ್ಟು ತುಂಬಿಕೊಂಡಿದೆ ಎಂಬುದು ಅವರಿಗೆ ಖಾತ್ರಿಯಾದ ಮೇಲೆ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದರು. ಚುನಾವಣೆ ನಡೆಸುವುದಕ್ಕೆ ಅವರ ಮೇಲೆ ಸಾಕಷ್ಟು ಒತ್ತಡವೂ ಇತ್ತೆನ್ನಿ. ಆ ಒತ್ತಡದಿಂದ ಅವರಿಗೆ ಕೈ ಕಟ್ಟಿಹಾಕಿದಂತಾಗಿತ್ತು. ಹೀಗಾಗಿ ವಿಽಯಿಲ್ಲದೆ ಚುನಾವಣೆ ನಡೆಸುವುದಾಗಿ ಪ್ರಕಟಿಸಿದರು.
ಚುನಾವಣೆಯ ನಂತರವೂ ದೇಶದಲ್ಲಿ ಧಾರ್ಮಿಕ ಮತೀಯವಾದಿ ಶಕ್ತಿಗಳೇ ಅಧಿಕಾರಕ್ಕೆ ಬರುತ್ತವೆ, ಹೀಗಾಗಿ ತನ್ನ ಪ್ರಸ್ತುತತೆ ಹೀಗೇ ಮುಂದುವರಿಯುತ್ತದೆ ಎಂಬ ನಂಬಿಕೆ ಅವರಿ ಗಿತ್ತು. ಇತ್ತ ಜಮಾತ್-ಎ-ಇಸ್ಲಾಮಿ ಮತ್ತು ನ್ಯಾಷನಲ್ ಸಿಟಿಜನ್ ಪಾರ್ಟಿಗೆ ತಾವೇ ಗೆಲ್ಲು ತ್ತೇವೆ ಎಂಬ ಅದಮ್ಯ ವಿಶ್ವಾಸವಿತ್ತು. ಶೇಖ್ ಹಸೀನಾ ವಿರುದ್ಧದ ಚಳವಳಿಯ ಮೂಲಕ ಉದ್ಭವಗೊಂಡಿದ್ದ ರಾಜಕೀಯ ಪಕ್ಷಗಳಿವು.
ಚುನಾವಣೆಯ ಬಳಿಕ ತಮ್ಮ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಏರ್ಪಡಬೇಕಾದ ಸನ್ನಿವೇಶ ಬರುತ್ತದೆ, ಹೀಗಾಗಿ ಬಾಂಗ್ಲಾದೇಶದ ಭವಿಷ್ಯದ ಆಡಳಿತದಲ್ಲಿ ತಾವೇ ಕೇಂದ್ರ ಪಾತ್ರ ವಹಿಸುತ್ತೇವೆ ಎಂದು ಈ ಪಕ್ಷಗಳು ನಂಬಿದ್ದವು. ಹೇಗಿದ್ದರೂ ಮಾಜಿ ಪ್ರಧಾನಿ ಖಲೀದಾ ಜಿಯಾ ಈಗ ಬದುಕಿಲ್ಲ. ಆಕೆಯ ಮಗ ತಾರೀಖ್ ರೆಹಮಾನ್ ಬರೋಬ್ಬರಿ 17 ವರ್ಷಗಳನ್ನು ವಿದೇಶದಲ್ಲಿ ಕಳೆದಿದ್ದಾರೆ.
ಬಾಂಗ್ಲಾದೇಶದ ಜತೆಗೆ ಅಷ್ಟು ಬೇಗ ಮರು-ಸಂಪರ್ಕ ಸಾಧಿಸಲು ಆತನಿಗೆ ಸಾಧ್ಯವಿಲ್ಲ. ಹೀಗಾಗಿ ಅವರ ನೇತೃತ್ವದ ಬಿಎನ್‌ಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಅವು ದೃಢವಾಗಿ ನಂಬಿದ್ದವು. ಆದರೆ ಎಲ್ಲರ ನಂಬಿಕೆಯನ್ನೂ ಹುಸಿಯಾಗಿಸಿ ತಾರೀಖ್ ರೆಹಮಾನ್ ಬಾಂಗ್ಲಾದೇಶದ ಜನರ ಮನಸ್ಸನ್ನು ಬಹಳ ಬೇಗ ಗೆದ್ದು, ಚುನಾವಣೆಯಲ್ಲಿ ತಮ್ಮ ತಾಯಿಯ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿ, ಉಳಿದೆಲ್ಲಾ ಪಕ್ಷಗಳಿಗೂ ಮಣ್ಣು ಮುಕ್ಕಿಸಿಬಿಟ್ಟರು.
ಕಳೆದ ಡಿಸೆಂಬರ್‌ನಲ್ಲಿ ಅವರು ಢಾಕಾಗೆ ಮರಳಿದಾಗಲೇ ಬಿಎನ್‌ಪಿಯಲ್ಲಿ ಹೊಸ ಚೈತನ್ಯದ ಸಂಚಾರವಾಗಿತ್ತು. ಅವರು ಸಂಪೂರ್ಣ ಭಿನ್ನವಾದ ರೀತಿಯಲ್ಲಿ ಸಾರ್ವಜನಿಕ ರೊಂದಿಗೆ ಬೆರೆತರು. 19 ದಿನಗಳ ಚುನಾವಣಾ ಪ್ರಚಾರದ ವೇಳೆ 64 ರ‍್ಯಾಲಿಗಳಲ್ಲಿ ಪಾಲ್ಗೊಂಡರು.
ಅವರ ಜತೆಗೆ ಪತ್ನಿ ಡಾ.ಜುಬೇದಾ ರೆಹಮಾನ್ ಮತ್ತು ಪುತ್ರಿ ಜೈಮಾ ರೆಹಮಾನ್ ಕೂಡ ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದರು. ತನ್ಮೂಲಕ ತಾವೊಬ್ಬ ‘ಫ್ಯಾಮಿಲಿ ಮ್ಯಾನ್’ ಎಂಬಂತೆ ಅವರು ದೇಶದ ಮುಂದೆ ಬಿಂಬಿಸಿಕೊಂಡರು. ತಮ್ಮ ರ‍್ಯಾಲಿ ಮತ್ತು ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಅವರು ಜನಸಾಮಾನ್ಯರನ್ನು ವೇದಿಕೆಯ ಮೇಲೆ ಬರುವಂತೆ ಕರೆಯು ತ್ತಿದ್ದರು. ಅಲ್ಲಿ ಅವರೊಂದಿಗೆ ಆಪ್ತವಾಗಿ ಸಂವಾದ ನಡೆಸಿ, ಪ್ರಶ್ನೆಗಳನ್ನು ಕೇಳಿ, ಬಾಂಗ್ಲಾ ದೇಶಿಗರ ಮನಸ್ಥಿತಿಯನ್ನೂ, ಅವರ ಸಂಕಷ್ಟಗಳನ್ನೂ ಅರ್ಥ ಮಾಡಿಕೊಳ್ಳು ತ್ತಿದ್ದರು.
ಬಳಿಕ ತಮ್ಮ ಭಾಷಣದಲ್ಲಿ ಆ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿಸಿ, ಬಿಎನ್‌ಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಏನು ಬದಲಾವಣೆಯಾಗಲಿದೆ ಎಂಬುದನ್ನು ಸರಳವಾದ ಭಾಷೆಯಲ್ಲಿ ಹೇಳುತ್ತಿದ್ದರು. ಈ ಉಪಾಯ ಚೆನ್ನಾಗಿ ಕೆಲಸ ಮಾಡಿತು. ಬಾಂಗ್ಲಾದೇಶದ ಮತದಾರರಿಗೆ ‘ಫಾರಿನ್ ರಿಟರ್ನ್ಡ್’ ನಾಯಕನಲ್ಲಿ ವಿಶ್ವಾಸ ಮೂಡಿತು.
ಅವರು ತಾರೀಖ್ ರೆಹಮಾನ್‌ಗೆ ಹತ್ತಿರವಾದರು. ಪ್ರಚಾರದುದ್ದಕ್ಕೂ ಶಾಂತಿ, ಸಹಬಾಳ್ವೆ ಮತ್ತು ಪ್ರಜಾಪ್ರಭುತ್ವದ ಬಗ್ಗೆಯೇ ತಾರೀಖ್ ಮಾತನಾಡುತ್ತಿದ್ದರು. ಬಾಂಗ್ಲಾದೇಶದ ಸಾರ್ವಭೌಮತೆಯ ಬಗ್ಗೆ ಪ್ರಶ್ನೆ ಎದುರಾದಾಗ ಅವರು, ‘ದಿಲ್ಲಿಯೂ ಅಲ್ಲ ಪಿಂಡಿಯೂ ಅಲ್ಲ’ ಎಂಬ ಘೋಷಣೆ ಮೊಳಗಿಸಿದರು.
ಅಂದರೆ ತಾವು ದೆಹಲಿಯ ಒತ್ತಡಗಳಿಗೂ ತಲೆಬಾಗುವುದಿಲ್ಲ, ರಾವಲ್ಪಿಂಡಿಯ ಒತ್ತಡ ಗಳಿಗೂ ತಲೆಬಾಗುವುದಿಲ್ಲ, ಬದಲಿಗೆ ತಾವು ತಲೆಬಾಗುವುದು ಬಾಂಗ್ಲಾದೇಶದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮಾತ್ರ ಎಂದು ಒತ್ತಿ ಹೇಳಿದರು. ಈ ಘೋಷಣೆಯು ಮತದಾರರ ಕಿವಿಯೊಳಗೆ ಗುಂಯ್‌ಗುಡುತ್ತಿತ್ತು.
ಶೇಖ್ ಹಸೀನಾರ ಅವಾಮಿ ಲೀಗ್ ಪಕ್ಷದ ಕಾರ್ಯಕರ್ತರು ಅಲ್ಲಿಯವರೆಗೆ ತಾರೀಖ್ ರೆಹಮಾನ್‌ರನ್ನು ಇಷ್ಟಪಡುತ್ತಿರಲಿಲ್ಲ. ಆದರೆ ಅವರ ಪ್ರಚಾದ ವೈಖರಿಯನ್ನು ನೋಡಿದ ಮೇಲೆ ಅವರಲ್ಲೂ ತಮ್ಮ ದೇಶದ ಬಗ್ಗೆ ಹೊಸ ಆಶಾಭಾವನೆ ಮೂಡಿತ್ತು. ಹೀಗಾಗಿ, ಅವಾಮಿ ಲೀಗ್'ನ ಮತದಾರರಾಗಿದ್ದ ಸಾಕಷ್ಟು ಜನರು ಈ ಚುನಾವಣೆಯಲ್ಲಿ ತಾರೀಖ್ ರೆಹಮಾನ್‌ಗೆ ಮತ ಹಾಕಿದ್ದರೆ ಏನೂ ಆಶ್ಚರ್ಯವಿಲ್ಲ.
ಅವಾಮಿ ಲೀಗ್‌ನ ಮೂಲ ಉದ್ದೇಶವೇ ಜಮಾತ್-ಎ-ಇಸ್ಲಾಮಿ ಮತ್ತು ನ್ಯಾಷನಲ್ ಸಿಟಿಜನ್ ಪಾರ್ಟಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವುದಾಗಿತ್ತು. ಅದು ಈಡೇರಬೇಕು ಅಂದರೆ ತಾರೀಖ್ ರೆಹಮಾನ್‌ರನ್ನು ಬೆಂಬಲಿಸಲೇಬೇಕಿತ್ತು. ಈ ರಣತಂತ್ರ ಸಾಕಷ್ಟು ಕೆಲಸ ಮಾಡಿತು. ಜಮಾತ್-ಎ-ಇಸ್ಲಾಮಿ ಪಕ್ಷವು ಬಾಂಗ್ಲಾದೇಶದ ವಿರೋಧ ಪಕ್ಷವಾಗುವಷ್ಟು ಸ್ಥಾನಗಳನ್ನಾದರೂ ಪಡೆಯಿತು. ಆದರೆ, ವಿದ್ಯಾರ್ಥಿ ಚಳವಳಿಯ ಮೂಲಕ ಹುಟ್ಟಿದ ನ್ಯಾಷನಲ್ ಸಿಟಿಜನ್ ಪಾರ್ಟಿ ಹೀನಾಯವಾಗಿ ಸೋತಿತು.
ಹಾಗಂತ ತಾರೀಖ್ ರೆಹಮಾನ್‌ರ ಗೆಲುವಿನೊಂದಿಗೆ ಎಲ್ಲವೂ ಸುಖಾಂತ್ಯವಾಯಿತು ಎಂದೇನೂ ಭಾವಿಸಬೇಕಿಲ್ಲ. ಅವರು ಅಧಿಕಾರಕ್ಕೆ ಬರುವುದರೊಂದಿಗೆ ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅವರೆದುರು ಸಾಕಷ್ಟು ಸವಾಲುಗಳೂ ಇವೆ. ಅವರು ಬಾಂಗ್ಲಾದೇಶದಲ್ಲಿ ಶಾಂತಿ ಸ್ಥಾಪನೆ ಮಾಡಬಲ್ಲರೇ? ಆರ್ಥಿಕವಾಗಿ ತೀರಾ ದಯನೀಯ ಸ್ಥಿತಿಗೆ ತಲುಪಿರುವ ದೇಶವನ್ನು ಈ ಹಿಂದೆ ಶೇಖ್ ಹಸೀನಾರ ನಾಯಕತ್ವದಲ್ಲಿ ಸಾಧಿಸಿದ್ದ ಆರ್ಥಿಕ ಶ್ರೀಮಂತಿಕೆ ಯತ್ತ ಮತ್ತೆ ಕೊಂಡೊಯ್ಯಬಲ್ಲರೇ? ಅವರ ಮೇಲೆ ಚೀನಾ ಅಥವಾ ಪಾಕಿಸ್ತಾನ ಎಷ್ಟರ ಮಟ್ಟಿಗೆ ನಿಯಂತ್ರಣ ಸಾಧಿಸುತ್ತವೆ? ಎಲ್ಲಕ್ಕಿಂತ ಮುಖ್ಯವಾಗಿ, ಭಾರತದೊಂದಿಗೆ ಹದಗೆಟ್ಟಿ ರುವ ಬಾಂಗ್ಲಾದೇಶದ ಸಂಬಂಧವನ್ನು ಅವರು ಸುಧಾರಣೆ ಮಾಡಬಲ್ಲರೇ? ಭಾರತ-ಬಾಂಗ್ಲಾ ಸಂಬಂಧ ಸುಧಾರಣೆಯ ದಾರಿಗೆ ಬರುತ್ತಿದೆ ಎಂದು ಈಗಲೇ ಹೇಳಲು ನಾನು ಸಿದ್ಧನಿಲ್ಲ.
ಏಕೆಂದರೆ ಎರಡೂ ದೇಶಗಳ ನಡುವೆ ಇನ್ನೂ ಬಹಳಷ್ಟು ವಿಷಯಗಳಲ್ಲಿ ಸಂಘರ್ಷವಿದೆ. ಮೊದಲನೆಯದಾಗಿ, ಬಾಂಗ್ಲಾದೇಶದ ಆರ್ಥಿಕತೆಯನ್ನು ಸುಧಾರಿಸುವ ಬಹುದೊಡ್ಡ ಸವಾಲು ತಾರೀಖ್ ರೆಹಮಾನ್‌ರ ಮುಂದಿದೆ. ಮೊಹಮ್ಮದ್ ಯೂನಸ್‌ರ ನೇತೃತ್ವದಲ್ಲಿ ದೇಶದ ಆರ್ಥಿಕತೆ ಗಣನೀಯವಾಗಿ ಕುಸಿದಿದೆ. ಅದನ್ನು ಮೇಲೆತ್ತಿ, ಸ್ಥಿರತೆಯ ಮಟ್ಟಕ್ಕೆ ತರಲು ತಾರೀಖ್ ರೆಹಮಾನ್ ಅಮೆರಿಕದತ್ತ ನೋಡುವ ಸಾಧ್ಯತೆಯಿದೆ.
ಚೀನಾ ಕೂಡ ಅವರ ಮೇಲೆ ಕಣ್ಣಿಡಲಿದೆ. ಬಾಂಗ್ಲಾದೇಶದಲ್ಲೊಂದು ಮಿಲಿಟರಿ ನೆಲೆ ಸ್ಥಾಪಿಸಬೇಕೆಂದು ಅಮೆರಿಕ ಬಹಳ ದಿನಗಳಿಂದ ಹವಣಿಸುತ್ತಿದೆ. ಅದಕ್ಕೆ ತಾರೀಖ್ ಅವಕಾಶ ನೀಡುತ್ತಾರೆಯೇ? ಇನ್ನೂ ಸಾಕಷ್ಟು ಪ್ರಶ್ನೆಗಳಿವೆ. ಆದರೆ ಎಲ್ಲಕ್ಕಿಂತ ದೊಡ್ಡ ಪ್ರಶ್ನೆ ಭಾರತದ ಜತೆಗಿನ ಸಂಬಂಧ ಸುಧಾರಣೆ ಸಾಧ್ಯವಾಗಲಿದೆಯೇ ಎಂಬುದು. ಭೌಗೋಳಿಕವಾಗಿ ಭಾರತ ಮತ್ತು ಬಾಂಗ್ಲಾದೇಶಗಳು ಅತ್ಯಂತ ಹತ್ತಿರದ ನೆರೆರಾಷ್ಟ್ರಗಳು.
ಬಾಂಗ್ಲಾದೇಶ ತನ್ನ ಶೇ.94ರಷ್ಟು ಗಡಿಯನ್ನು ಭಾರತದೊಂದಿಗೆ ಹಂಚಿಕೊಂಡಿದೆ. ಹೀಗಾಗಿ ಭಾರತದ ಜತೆಗೆ ಒಳ್ಳೆಯ ಸಂಬಂಧವನ್ನು ಹೊಂದಿರದೆ ಆರ್ಥಿಕವಾಗಿ ಪ್ರಗತಿ ಸಾಧಿಸುವು ದನ್ನು ಬಾಂಗ್ಲಾದೇಶ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಜಯ ಸಾಧಿಸುವುದಕ್ಕೂ ಮೊದಲೇ ಆ ದೇಶದ ಜತೆಗಿನ ಸಂಬಂಧ ಸುಧಾರಣೆ ಮಾಡಿಕೊಳ್ಳಲು ಭಾರತ ಒಂದು ಹೆಜ್ಜೆ ಇರಿಸಿತ್ತು. ತಾರೀಖ್ ರೆಹಮಾನ್ʼರ ತಾಯಿಯಾದ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಖುದ್ದಾಗಿ ಭಾಗವಹಿಸಿ, ಪ್ರಧಾನಿ ನರೇಂದ್ರ ಮೋದಿ ಯವರ ಸಂತಾಪ ಪತ್ರವನ್ನು ಹಸ್ತಾಂತರಿಸಿದ್ದರು.
ಈ ಹಿಂದೆ ಖಲೀದಾ ಜಿಯಾ ಬಾಂಗ್ಲಾದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದ ಕೊನೆಯ ಅವಽಯಲ್ಲಿ ಭಾರತದ ಜತೆಗೆ ಅವರ ಸಂಬಂಧ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ, ರಾಜಕೀಯ ಮತ್ತು ರಾಜತಾಂತ್ರಿಕ ವ್ಯವಹಾರಗಳಲ್ಲಿ ಬದಲಾವಣೆಗಳು ಯಾವಾಗ ಬೇಕಾದರೂ ಆಗಬಹುದು. ಇಲ್ಲಿ ಶಾಶ್ವತ ಸ್ನೇಹಿತರು ಹಾಗೂ ಶಾಶ್ವತ ಶತ್ರುಗಳು ಯಾರೂ ಇರುವುದಿಲ್ಲ. ಈಗ ಭಾರತದ ಜತೆಗೆ ಸ್ನೇಹದ ಹಾದಿಯಲ್ಲಿ ಸಾಗಲು ತಾರೀಖ್ ರೆಹಮಾನ್ರ ಸಮ್ಮುಖದಲ್ಲಿ ಸಾಕಷ್ಟು ಅವಕಾಶಗಳಿವೆ.
ಹಾಗೆ ಮಾಡುವುದು ಬಾಂಗ್ಲಾದೇಶಕ್ಕೂ ಒಳ್ಳೆಯದು, ಭಾರತಕ್ಕೂ ಒಳ್ಳೆಯದು. ಬಾಂಗ್ಲಾ ದೇಶದ ಭವಿಷ್ಯ ಉಜ್ವಲವಾಗಲಿ. ಅಲ್ಲಿನ ಹೊಸ ನಾಯಕನಿಗೆ ಅಭಿನಂದನೆಗಳು. ಜಮಾತ್-ಎ-ಇಸ್ಲಾಮಿಯಂಥ ಮೂಲಭೂತವಾದಿ ಶಕ್ತಿಗಳನ್ನು ಎದುರಿಸುವ ಶಕ್ತಿಯನ್ನು ಅವರಿಗೆ ದೇವರು ದಯಪಾಲಿಸಲಿ. ನನ್ನ ಪ್ರಾಮಾಣಿಕ ಕಳಕಳಿ ಇಷ್ಟೆ!
(ಲೇಖಕರು ಹಿರಿಯ ಪತ್ರಿಕೋದ್ಯಮಿ)