ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Vijay Darda Column: ವೈಮಾನಿಕ ಸುರಕ್ಷತೆ ಬಗ್ಗೆ ಮತ್ತೆ ಮತ್ತೆ ಏಳುವ ಪ್ರಶ್ನೆಗಳು !

‌‘ನಾವು ಆವತ್ತು ಒಟ್ಟಿಗೇ ಊಟ ಮಾಡಿ ಹಾಯಾಗಿ ಹರಟೆ ಹೊಡೆಯೋಣ ಎಂದೂ ಹೇಳಿದ್ದರು. ಅದಕ್ಕೆ ನಾನು ತಮಾಷೆಯಾಗಿ, ‘ದಾದಾ, ಜಗಳ ಮಾಡಬಾರದು ಮತ್ತೆ. ಬರೀ ಸಂಭ್ರಮವಷ್ಟೆ ಎಂದು ಹೇಳಿದ್ದೆ. ವಿಧಿಯ ಜೋಳಿಗೆಯಲ್ಲಿ ಏನಿದೆ ಎಂಬುದನ್ನು ಬಲ್ಲವರಾರು? ಅಜಿತ್ ಪವಾರ್ ಅವರ ಕತೆ ಪೂರ್ಣ ತೆರೆದುಕೊಳ್ಳುವುದಕ್ಕೂ ಮೊದಲೇ ಮುಗಿದುಹೋಯಿತು.

ವೈಮಾನಿಕ ಸುರಕ್ಷತೆ ಬಗ್ಗೆ ಮತ್ತೆ ಮತ್ತೆ ಏಳುವ ಪ್ರಶ್ನೆಗಳು !

-

ಸಂಗತ

ವಾಯುದುರಂತಗಳಲ್ಲಿ ಈಗಾಗಲೇ ಹಲವರು ಜೀವ ಕಳೆದುಕೊಂಡಿದ್ದಾರೆ. ಈಗ ಅಜಿತ್ ದಾದಾ ಮೃತಪಟ್ಟಿದ್ದಾರೆ. ಈ ದುರಂತಗಳಿಂದ ನಾವೇನಾದರೂ ಪಾಠ ಕಲಿಯುತ್ತೇವಾ? ಭಾರತದಲ್ಲಿ ವಿಮಾನಯಾನ ತುಂಬಾ ಸುರಕ್ಷಿತ ಎಂದು ಸಮರ್ಥಿಸಿಕೊಳ್ಳುವುದಕ್ಕೆ ನಮ್ಮ ಸರ್ಕಾರಗಳ ಬಳಿ ಸಾಕಷ್ಟು ಅಂಕಿಅಂಶಗಳು ಕಾಗದದ ಮೇಲಿವೆ.

ಮಹಾರಾಷ್ಟ್ರದ ಡೈನಾಮಿಕ್ ರಾಜಕಾರಣಿ ಅಜಿತ್ ದಾದಾ ಅವರನ್ನು ನಾವು ಕಳೆದುಕೊಂಡಿದ್ದೇವೆ. ಈಗ ಉಳಿದಿರುವುದು ಅವರ ನೆನಪು ಮಾತ್ರ. ನಾಗಪುರದಲ್ಲಿ ನಡೆದ ಈ ಹಿಂದಿನ ವಿಧಾನಸಭೆ ಅಧಿವೇಶನದ ವೇಳೆ ನಾನು ಮಹಾರಾಷ್ಟ್ರದ ಸಚಿವರು ಹಾಗೂ ಶಾಸಕರಿಗೆ ಒಂದು ಔತಣಕೂಟ ಆಯೋಜಿಸಿದ್ದೆ. ಅದರಲ್ಲಿ ದಾದಾ ಕೂಡ ಪಾಲ್ಗೊಂಡಿದ್ದರು. ನನ್ನ ಜೊತೆಗೆ ತುಂಬಾ ಆತ್ಮೀಯತೆ ಯಿಂದ, ಖುಷಿಖುಷಿಯಾಗಿ ಮಾತನಾಡಿದ್ದರು. ಸಾಮಾನ್ಯವಾಗಿ ಅಜಿತ್ ದಾದಾ ಗಂಭೀರವಾಗಿರು ತ್ತಾರೆ. ಆದರೆ ಆವತ್ತು ಅವರ ಕಣ್ಣುಗಳಲ್ಲಿ ವಿಶೇಷ ಹೊಳಪಿತ್ತು. ಮುಖದಲ್ಲಿ ಸಂತೋಷವಿತ್ತು. ಅವರ ಉಪಸ್ಥಿತಿಯಲ್ಲೇ ಒಂದು ಲವಲವಿಕೆ ಯಿತ್ತು. ‘ನೀವಿರುವ ಕಟ್ಟಡಕ್ಕೇ ನನ್ನ ಮಗ ಪಾರ್ಥ ಕೆಲ ದಿನಗಳಲ್ಲಿ ಶಿಫ್ಟ್ ಆಗುತ್ತಾನೆ, ನಾನು ಮನೆ ನೋಡಲು ಬರುತ್ತೇನೆ ಎಂದು ಅವರು ಹೇಳಿದ್ದರು.

‌‘ನಾವು ಆವತ್ತು ಒಟ್ಟಿಗೇ ಊಟ ಮಾಡಿ ಹಾಯಾಗಿ ಹರಟೆ ಹೊಡೆಯೋಣ ಎಂದೂ ಹೇಳಿದ್ದರು. ಅದಕ್ಕೆ ನಾನು ತಮಾಷೆಯಾಗಿ, ‘ದಾದಾ, ಜಗಳ ಮಾಡಬಾರದು ಮತ್ತೆ. ಬರೀ ಸಂಭ್ರಮವಷ್ಟೆ ಎಂದು ಹೇಳಿದ್ದೆ. ವಿಧಿಯ ಜೋಳಿಗೆಯಲ್ಲಿ ಏನಿದೆ ಎಂಬುದನ್ನು ಬಲ್ಲವರಾರು? ಅಜಿತ್ ಪವಾರ್ ಅವರ ಕತೆ ಪೂರ್ಣ ತೆರೆದುಕೊಳ್ಳುವುದಕ್ಕೂ ಮೊದಲೇ ಮುಗಿದು ಹೋಯಿತು.

ದಾದಾ ಈಗ ನಮ್ಮೆಲ್ಲರ ನೆನಪೆಂಬ ಕಾಮನಬಿಲ್ಲಿನ ಭಾಗವಾಗಿ ಬಿಟ್ಟಿದ್ದಾರೆ. ಬಿಟ್ಟು ಹೋದವರು ಮತ್ತೆಂದೂ ಮರಳಿ ಬರುವುದಿಲ್ಲ. ನೆನಪಷ್ಟೇ ಉಳಿದುಕೊಳ್ಳುತ್ತದೆ. ಅಜಿತ್ ದಾದಾ ರಾಜಕೀಯದ ಪಾಠಗಳನ್ನು ಕಲಿತಿದ್ದು ತಮ್ಮ ಚಿಕ್ಕಪ್ಪ ಶರತ್‌ಚಂದ್ರ ಪವಾರ್ ಅವರಿಂದ. ಚಾಣಾಕ್ಷ ರಾಜಕಾರಣಿ ಶರದ್ ಪವಾರ್ ಅವರ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಅಜಿತ್ ರಾಜಕಾರಣದಲ್ಲಿ ಬೆಳೆದರು.

ಒಂದೇ ವ್ಯತ್ಯಾಸವೆಂದರೆ, ಶರದ್ ಪವಾರ್ ರಾಜಕಾರಣದಲ್ಲಿ ಸದಾ ನಗುತ್ತಾ ಇರುತ್ತಿದ್ದರೆ, ಅಜಿತ್ ದಾದಾ ಯಾವಾಗಲೂ ನೇರಾನೇರವಾಗಿರುತ್ತಿದ್ದರು. ಮುಖಕ್ಕೆ ಹೊಡೆದಂತೆ ಯಸ್ ಅಥವಾ ನೋ ಎಂದು ಹೇಳಿಬಿಡುತ್ತಿದ್ದರು. ಅವರು ಯಸ್ ಅಂದರೆ ಖಂಡಿತ ಅದನ್ನು ಮಾಡುತ್ತಿದ್ದರು. ನೋ ಅಂದರೆ ಖಂಡಿತ ಅದನ್ನು ಮಾಡುತ್ತಿರಲಿಲ್ಲ.

ಇದನ್ನೂ ಓದಿ: Dr Vijay Darda Column: ಭಾರತ-ಅಮೆರಿಕ ಸಂಬಂಧ ಹಳಿಗೇರಿಸುವರೇ ಹೊಸ ರಾಯಭಾರಿ ?

ಶರದ್ ಪವಾರ್‌ರಂತೆ ಅಜಿತ್ ದಾದಾ ಅವರ ದಿನ ಕೂಡ ಬೆಳಗಿನ ಜಾವದಲ್ಲೇ ಆರಂಭವಾಗುತ್ತಿತ್ತು. ಬೆಳಗಿನ 7 ಗಂಟೆಗೆ ಮೊದಲ ಸಭೆ ನಡೆಸುತ್ತಿದ್ದರು! ನೋಡಿದವರು ಮೆಚ್ಚಿಕೊಳ್ಳುವ ಇಂತಹ ಅನೇಕ ಗುಣಗಳು ಅವರಲ್ಲಿದ್ದವು. ಶನಿವಾರ ಅಥವಾ ಭಾನುವಾರ ಮುಂಬೈನಲ್ಲಿ ಎಷ್ಟೇ ಪ್ರಮುಖವಾದ ಸಮಾರಂಭವಿದ್ದರೂ ಅವರು ಹೋಗುತ್ತಿರಲಿಲ್ಲ. ಆ ಎರಡು ದಿನಗಳ ಪೈಕಿ ಒಂದು ದಿನ ಪುಣೆ ಮತ್ತು ಇನ್ನೊಂದು ದಿನ ಬಾರಾಮತಿಗೆ ಮೀಸಲಾಗಿಟ್ಟಿದ್ದರು.

ದಾದಾ ಜೊತೆ ನನ್ನ ಒಡನಾಟದಲ್ಲಿ ಸಾಕಷ್ಟು ನೆನಪುಗಳಿವೆ. ಆದರೆ ಅವರ ಸಾವಿನ ಈ ಸಂದರ್ಭ ದಲ್ಲಿ ಅವುಗಳನ್ನು ಮೆಲುಕು ಹಾಕುವುದಕ್ಕೂ ಆಗದಷ್ಟು ದುಃಖ ನನ್ನನ್ನು ಆವರಿಸಿಕೊಂಡಿದೆ. ಪದೇಪದೇ ನನ್ನ ಮನದಲ್ಲಿ ಮೂಡುತ್ತಿರುವ ಪ್ರಶ್ನೆಯೇನೆಂದರೆ, ಏಕೆ ವಾಯುಯಾನ ಇತ್ತೀಚೆಗೆ ಅಷ್ಟೊಂದು ಅಸುರಕ್ಷಿತ ಆಗಿಬಿಟ್ಟಿತು? ಭಾರತದಲ್ಲಿ ವೈಮಾನಿಕ ಸುರಕ್ಷತೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ನಾವೆಲ್ಲರೂ ಹೇಳುತ್ತೇವೆ. ಅದನ್ನು ಸಾಬೀತುಪಡಿಸಲು ನಮ್ಮಲ್ಲಿ ಸಾಕಷ್ಟು ದಾಖಲೆಗಳು ಹಾಗೂ ಅಂಕಿಅಂಶಗಳು ಕಾಗದದ ಮೇಲೆ ಇವೆ.

ಜಾಗತಿಕ ವೈಮಾನಿಕ ಸುರಕ್ಷತೆಯ ರ‍್ಯಾಂಕಿಂಗ್ ಪಟ್ಟಿಯಲ್ಲಿ 112ನೇ ಸ್ಥಾನದಿಂದ ನಾವು 55ನೇ ಸ್ಥಾನಕ್ಕೆ ಏರಿಕೆಯಾಗಿದ್ದೇವೆ. ಆದರೂ ಒಂದು ಪ್ರಶ್ನೆ ಹಾಗೇ ಉಳಿದಿದೆ: ನಾವು ವಿಫಲವಾಗುತ್ತಿರು ವುದು ಎಲ್ಲಿ? ರಸ್ತೆ ಅಪಘಾತ ಎಷ್ಟೇ ಘೋರವಾಗಿದ್ದರೂ ಬದುಕುಳಿಯುವ ಸಣ್ಣಪುಟ್ಟ ಸಾಧ್ಯತೆ ಗಳಾದರೂ ಇರುತ್ತವೆ. ಆದರೆ ಆಕಾಶದಲ್ಲಿ ಹಾರಾಡುವಾಗ ಸಣ್ಣದೊಂದು ಎಡವಟ್ಟಾದರೂ ವಿಮಾನ ಅಥವಾ ಹೆಲಿಕಾಪ್ಟರ್ ನಲ್ಲಿರುವ ಎಲ್ಲರಿಗೂ ಸಾವಿನ ಮನೆಯೇ ಮುಂದಿನ ಗಮ್ಯ ವಾಗಿರುತ್ತದೆ.

Screenshot_4 R

ಭಾರತದಲ್ಲಿ ವಿಐಪಿಗಳ ಪ್ರಯಾಣಕ್ಕೆ ಅಸಂಖ್ಯ ನಿಯಮಗಳಿವೆ. ಆದರೂ ಇಂತಹ ತಪ್ಪುಗಳು ಹೇಗಾಗುತ್ತವೆ? ನಾವು ಈ ರೀತಿಯ ಅವಘಡಗಳಲ್ಲಿ ಎಷ್ಟು ಜನರನ್ನು ಕಳೆದುಕೊಂಡಿದ್ದೇವೆ? ಪಟ್ಟಿ ಬಹಳ ಉದ್ದವಿದೆ. ಹೋಮಿ ಭಾಭಾ, ಜನರಲ್ ಬಿಪಿನ್ ರಾವತ್, ಸಂಜಯ್ ಗಾಂಧಿ, ಮಾಧವರಾವ್ ಸಿಂಧ್ಯಾ, ವಿಜಯ್ ರೂಪಾನಿ, ಒ.ಪಿ.ಜಿಂದಾಲ್, ಜಿಎಂಸಿ ಬಾಲಯೋಗಿ, ವೈ.ಎಸ್.ರಾಜಶೇಖರ ರೆಡ್ಡಿ, ದೋರ್ಜಿ ಖಂಡು ಹಾಗೂ ಸೈಪ್ರಿಯನ್ ಸಂಗ್ಮಾ ಸೇರಿದಂತೆ ಸಾಕಷ್ಟು ಜನರು ವಾಯು ದುರಂತ ಗಳಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ.

1965ರ ಯುದ್ಧದ ವೇಳೆ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಅವರನ್ನು ಕರೆದೊಯ್ಯುತ್ತಿದ್ದ ವಿಮಾನವನ್ನು ಮಿಲಿಟರಿ ವಿಮಾನವೆಂದು ತಪ್ಪಾಗಿ ಭಾವಿಸಿ ಪಾಕಿಸ್ತಾನದ ಸೇನೆ ಹೊಡೆದುರುಳಿಸಿತ್ತು. ಅದು ಬೇರೆ ವಿಷಯ. ನಾನಿಲ್ಲಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ.

ಇನ್ನು, ವಿಮಾನ ಅಪಘಾತದಲ್ಲಿ ಅದೃಷ್ಟವಶಾತ್ ಪಾರಾದವರ ಪಟ್ಟಿ ಕೂಡ ದೊಡ್ಡದಿದೆ. ವಸಂತರಾವ್ ನಾಯಕ್‌ರಿಂದ ಹಿಡಿದು ದೇವೇಂದ್ರ ಫಡ್ನವೀಸ್‌ವರೆಗೆ ಸಾಕಷ್ಟು ಜನರು ಈ ಪಟ್ಟಿಯಲ್ಲಿದ್ದಾರೆ. ಆಂಧ್ರಪ್ರದೇಶಕ್ಕೆ ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದಾಗ ಒಮ್ಮೆ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುವ ವೇಳೆ ಎಷ್ಟು ಭೀಕರವಾದ ಧೂಳಿನ ಮಾರುತ ಎದ್ದಿತ್ತು ಅಂದರೆ, ಹೊರಗಿನಿಂದ ನೋಡಿದವರಿಗೆ ಏನೂ ಕಾಣಿಸುತ್ತಿರಲಿಲ್ಲ.

ನಾನು ಕೂಡ ದೂರದಲ್ಲಿ ನಿಂತು ನೋಡುತ್ತಿದ್ದೆ. ಆ ದೃಶ್ಯ ನನ್ನಲ್ಲಿ ಭಯ ಹುಟ್ಟಿಸಿತ್ತು. ಇನ್ನೊಂದು ಘಟನೆ ಹೇಳುತ್ತೇನೆ. ನನ್ನ ತಮ್ಮ ರಾಜೇಂದ್ರ ದರಡಾ ಮತ್ತು ನಾನು ಒಮ್ಮೆ ಮುಂಬೈನಿಂದ ಥಾಣೆಗೆ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಿದ್ದೆವು. ಹೆಚ್ಚೆಂದರೆ 10 ರಿಂದ 15 ನಿಮಿಷದ ಪ್ರಯಾಣ. ಆದರೆ ಆ ದಿನ ಮಂಜು ಮತ್ತು ವಾಯುಮಾಲಿನ್ಯ ಯಾವ ಪರಿ ತೀವ್ರವಾಗಿತ್ತು ಅಂದರೆ, ಮುಂದಿನದು ಏನೂ ಕಾಣಿಸುತ್ತಿರಲಿಲ್ಲ.

ಆ ದಾರಿಯಲ್ಲಿ ಅನೇಕ ಬೆಟ್ಟಗುಡ್ಡಗಳು ಹಾಗೂ ಎತ್ತರದ ಕಟ್ಟಡಗಳಿವೆ. ನಾವು ದೇವರನ್ನು ನೆನೆಯುತ್ತಾ ಕುಳಿತಿದ್ದೆವು. ಹೆಚ್ಚುಕಮ್ಮಿ ಪ್ರತಿದಿನ ನಾವು ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆಯುವುದು ಅಥವಾ ರನ್ ವೇಯಲ್ಲಿ ನಾಯಿ ಓಡಾಡುತ್ತಿದ್ದ ಸುದ್ದಿಗಳನ್ನು ಕೇಳುತ್ತೇವೆ. ಕೆಲ ಪೈಲಟ್‌ಗಳು ತಮಗೆ ಲೇಸರ್ ಬೀಮ್‌ನಿಂದ ತುಂಬಾ ತೊಂದರೆಯಾಗುತ್ತದೆ ಎಂದು ದೂರುತ್ತಾರೆ.

ಅಜಿತ್ ದಾದಾ ಅವರ ಖಾಸಗಿ ವಿಮಾನ ಪತನಗೊಂಡ ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ. ಆ ವಿಮಾನದಲ್ಲೇ ತಾಂತ್ರಿಕ ದೋಷಗಳಿದ್ದವು ಎಂದು ವರದಿಯಾಗಿದೆ. ಮೇಲಾಗಿ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಾಗಲೀ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ವ್ಯವಸ್ಥೆಯಾಗಲೀ ಇಲ್ಲ.

ಸ್ಥಳೀಯ ವಿಮಾನ ತರಬೇತಿ ಶಾಲೆಯಿಂದ ವೈಮಾನಿಕ ಸಿಬ್ಬಂದಿ ರೇಡಿಯೋ ಸಂವಹನ ನಡೆಸು ತ್ತಾರೆ. ಆ ದಿನ ಪೈಲಟ್ ರನ್‌ವೇ ಪತ್ತೆ ಹಚ್ಚಲು ನೇರವಾಗಿ ಸೂರ್ಯನ ಕಡೆ ನೋಡಬೇಕಿತ್ತು. ಸೂರ್ಯನ ಕಿರಣಗಳ ಪ್ರಖರತೆಯಿಂದ ಅವರಿಗೆ ದೃಷ್ಟಿ ಮಂಜಾಗಿರಬಹುದು ಅಥವಾ ದಾರಿ ತಪ್ಪಿರಬಹುದು. ಇನ್ನೂ ಒಂದು ಆತಂಕದ ಸಂಗತಿಯೇನೆಂದರೆ, ಆ ವಿಮಾನದ ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಅಪಾರ ಮದ್ಯಪ್ರಿಯ!

ಈ ಹಿಂದೆ ಎರಡು ಸಲ ವಿಮಾನ ಹಾರಿಸುವುದಕ್ಕೂ ಮೊದಲು ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದ ಕುಖ್ಯಾತಿ ಅವರಿಗಿದೆ. ಮೂರು ವರ್ಷಗಳ ಕಾಲ ಅವರನ್ನು ಡಿಜಿಸಿಎ ಅಮಾನತುಗೊಳಿಸಿತ್ತು. ಅಂತಹ ಪೈಲಟ್‌ಗಳಿಗೆ ವಿಮಾನ ಹಾರಿಸುವುದಕ್ಕೆ ಏಕೆ ಅವಕಾಶ ನೀಡಬೇಕು? ವಾಣಿಜ್ಯ ವಿಮಾನ ಯಾನದಲ್ಲಿ ಪೈಲಟ್‌ಗಳಿಗೆ ಕಠಿಣ ತಪಾಸಣೆ ವ್ಯವಸ್ಥೆಯಿರುತ್ತದೆ.

ವಿಮಾನ ಹಾರಿಸುವುದಕ್ಕೂ ಮೊದಲು ಪೈಲಟ್ ಕನಿಷ್ಠ ಏಳು ತಾಸು ನಿದ್ದೆ ಮಾಡಿದ್ದಾರೆ ಮತ್ತು ಮದ್ಯ ಸೇವನೆ ಮಾಡಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಆದರೆ ಖಾಸಗಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ವಿಷಯದಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡು ತ್ತಾರಾ? ನನಗಂತೂ ನಂಬಿಕೆಯಿಲ್ಲ.

ನಮ್ಮ ದೇಶದಲ್ಲಿ ಕೆಲ ವಿಮಾನ ನಿಲ್ದಾಣಗಳ ಪರಿಸ್ಥಿತಿ ಕೂಡ ಚಿಂತಾಜನಕವಾಗಿದೆ. ದೊಡ್ಡ ದೊಡ್ಡ ವಿಮಾನ ನಿಲ್ದಾಣಗಳ ಕತೆ ಹಾಗಿರಲಿ, ಕೆಲ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಸುರಕ್ಷತಾ ವ್ಯವಸ್ಥೆಗಳೇ ಇರುವುದಿಲ್ಲ. ಅಂತಹ ವಿಮಾನ ನಿಲ್ದಾಣಗಳು ಕಾರ್ಯಾಚರಣೆ ನಡೆಸುವು ದಕ್ಕೆ ಏಕೆ ಸರ್ಕಾರ ಅವಕಾಶ ನೀಡುತ್ತದೆ? ಇಂದು ನಮ್ಮ ದೇಶದ ಸಣ್ಣಪುಟ್ಟ ನಗರಗಳಲ್ಲೂ ವಿಮಾನ ನಿಲ್ದಾಣಗಳಿವೆ.

ಯಾವುದೇ ವಿಮಾನ ನಿಲ್ದಾಣಕ್ಕೆ ತಿಂಗಳಿಗೊಂದು ಅಥವಾ ಎರಡು ತಿಂಗಳಿಗೊಂದು ವಿಮಾನ ಬಂದಿಳಿಯುತ್ತಿದ್ದರೂ, ಅಲ್ಲಿ ಬೇರೆಲ್ಲಾ ವಿಮಾನ ನಿಲ್ದಾಣಗಳಲ್ಲಿ ಇರುವ ಸುರಕ್ಷತಾ ವ್ಯವಸ್ಥೆಗಳೇ ಇರಬೇಕಾಗುತ್ತದೆ. ವೈಮಾನಿಕ ಸುರಕ್ಷತೆ ಮತ್ತು ವಿಮಾನ ನಿಲ್ದಾಣಗಳ ಸುರಕ್ಷತೆಯ ವಿಷಯದಲ್ಲಿ ದೊಡ್ಡ ವಿಮಾನ ನಿಲ್ದಾಣ ಅಥವಾ ಸಣ್ಣ ವಿಮಾನ ನಿಲ್ದಾಣಗಳೆಂಬ ವ್ಯತ್ಯಾಸ ಇರುವುದಿಲ್ಲ. ಹೀಗಾಗಿ ಎಲ್ಲಾ ರಾಜ್ಯಗಳೂ ತಮ್ಮಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಸುರಕ್ಷತಾ ವ್ಯವಸ್ಥೆಗಳು ಸರಿಯಾಗಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲೇಬೇಕು.

ಅದರಲ್ಲೂ, ಅಭಿವೃದ್ಧಿ ಹೊಂದಿರುವ ರಾಜ್ಯ ಮಹಾರಾಷ್ಟ್ರ ಈ ವಿಷಯದಲ್ಲಿ ಎಲ್ಲಾ ರಾಜ್ಯ ಗಳಿಗೂ ಮಾದರಿಯಾಗಬೇಕು. ಅಜಿತ್ ದಾದಾ ಹೋದರು. ಅವರನ್ನು ಮರಳಿ ಕರೆತರುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೊನೆಯ ಪಕ್ಷ ಇಂತಹ ವೈಮಾನಿಕ ದುರ್ಘಟನೆಗಳು ಇನ್ನುಮುಂದಾದರೂ ಘಟಿಸದಂತೆ, ಇನ್ನಷ್ಟು ಅಮೂಲ್ಯ ಜೀವಗಳು ಹೀಗೆ ಬಲಿಯಾಗದಂತೆ ನಾವು ನೋಡಿಕೊಳ್ಳಬೇಕು. ವಿಮಾನಯಾನ ನಿಯಂತ್ರಣ ಪ್ರಾಧಿಕಾರ, ವಿಮಾನಯಾನ ಸಚಿವಾಲಯ, ರಾಜ್ಯ ಸರ್ಕಾರಗಳು, ಏರ್‌ಲೈನ್ಸ್‌ಗಳು ಸೇರಿದಂತೆ ಅನೇಕ ವಿಭಾಗಗಳು ವೈಮಾನಿಕ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಬೇಕು.

ಅಜಿತ್ ದಾದಾ.. ನಿಮ್ಮನ್ನು ನಾವು ಎಂದಿಗೂ ಮರೆಯುವುದಿಲ್ಲ. ನಿಮಗಿದೋ ಕಣ್ಣೀರಿನ ವಿದಾಯ!!