ಸಂಪಾದಕರ ಸದ್ಯಶೋಧನೆ
ವಿಮಾನವು ಹೇಗೋ ಒಂದು ಬಯಲಲ್ಲಿ ಲ್ಯಾಂಡ್ ಆಯಿತು ಎಂದು ಭಾವಿಸಿ. ಅಲ್ಲಿ ರನ್‌ವೇ ಇಲ್ಲ. ಅಲ್ಲಿಂದ ಅದು ಹೇಗೆ ಟೇಕಾಫ್ ಆಗುತ್ತದೆ? ವಿಮಾನವೊಂದು ರನ್‌ವೇ ಇಲ್ಲದ ಬಯಲಿನಲ್ಲಿ ಅಥವಾ ಅಸಮತೋಲಿತ ಜಾಗದಲ್ಲಿ ಅನಿವಾರ್ಯ ಕಾರಣಗಳಿಂದ ಲ್ಯಾಂಡ್ ಆದರೆ, ಅದನ್ನು ಅಲ್ಲಿಂದ ಮತ್ತೆ ಸುರಕ್ಷಿತವಾಗಿ ಟೇಕಾಫ್ ಮಾಡುವುದು ವಿಮಾನಯಾನ ಎಂಜಿನಿಯರಿಂಗ್‌ನ ಅತ್ಯಂತ ಸವಾಲಿನ ಕೆಲಸಗಳಲ್ಲಿ ಒಂದು.
ಇಂಥ ಸಂದರ್ಭವನ್ನು ’ Off-field recovery’ ಅಂತಾರೆ. ಬಯಲಿನಲ್ಲಿ ಇಳಿದ ತಕ್ಷಣ ವಿಮಾನ ವನ್ನು ಮತ್ತೆ ಹಾರಿಸಲು ಸಾಧ್ಯವಿಲ್ಲ. ಮೊದಲು ಎಂಜಿನಿಯರ್‌ಗಳ ತಂಡವು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತದೆ.
ವಿಮಾನದ ಬಾಡಿ (Fuselage) ಅಥವಾ ರೆಕ್ಕೆಗಳಿಗೆ ತೀವ್ರವಾದ ಹಾನಿಯಾಗಿದೆಯೇ ಎಂದು ನೋಡಲಾಗುತ್ತದೆ. ಹಾನಿಯು ಕೇವಲ ಆರ್ಥಿಕವಾಗಿದ್ದರೆ (Written of) ಮತ್ತು ತಾಂತ್ರಿಕವಾಗಿ ವಿಮಾನ ಗಟ್ಟಿಯಾಗಿದ್ದರೆ ಮಾತ್ರ ಮುಂದಿನ ಆಲೋಚನೆ ಮಾಡಲಾಗುತ್ತದೆ.
ಬಯಲಿನಲ್ಲಿ ಇಳಿಯುವಾಗ ವಿಮಾನದ ಚಕ್ರಗಳು ಮತ್ತು ಹೈಡ್ರಾಲಿಕ್ ವ್ಯವಸ್ಥೆಗೆ ಮಣ್ಣು ಅಥವಾ ಕಲ್ಲು ತಗುಲಿ ಹಾನಿಯಾಗುವ ಸಾಧ್ಯತೆ ಹೆಚ್ಚು. ರನ್‌ವೇ ಇಲ್ಲದೇ ಟೇಕಾಫ್ ಆಗುವುದು ಅಸಾಧ್ಯ. ಆದ್ದರಿಂದ, ವಿಮಾನ ಎಲ್ಲಿದೆಯೋ ಅಲ್ಲಿಯೇ ಒಂದು ತಾತ್ಕಾಲಿಕ ರನ್‌ವೇ ಸಿದ್ಧಪಡಿಸಬೇಕಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಸಂಭವಿಸದ ವೈಫಲ್ಯಗಳಿಗೆ ಸಿದ್ಧತೆ
ಬುಲ್ಡೋಜರ್‌ಗಳನ್ನು ಬಳಸಿ ಬಯಲಿನ ಮಣ್ಣನ್ನು ಸಮತಟ್ಟು ಮಾಡಲಾಗುತ್ತದೆ. ಮಣ್ಣು ಸಡಿಲ ವಾಗಿದ್ದರೆ ವಿಮಾನದ ಭಾರಕ್ಕೆ ಚಕ್ರಗಳು ಹೂತುಹೋಗಬಹುದು. ಮಣ್ಣು ಗಟ್ಟಿಯಾಗಿಲ್ಲ ದಿದ್ದರೆ, ಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಳಸುವಂತೆ ‘ಪಿಯರ್ಸೆಡ್ ಸ್ಟೀಲ್ ಪ್ಲಾಂಕಿಂಗ್’ ಅಥವಾ ದೊಡ್ಡ ಲೋಹದ ತಗಡುಗಳನ್ನು ಹಾಸಿ ಕೃತಕ ರನ್‌ವೇ ಸೃಷ್ಟಿಸಲಾಗುತ್ತದೆ.
ಒಂದು ಸಣ್ಣ ರನ್‌ವೇಯಲ್ಲಿ ವಿಮಾನ ಟೇಕಾಫ್ ಆಗಬೇಕೆಂದರೆ ಅದು ಎಷ್ಟು ಸಾಧ್ಯವೋ ಅಷ್ಟು ಹಗುರವಾಗಿರಬೇಕು. ವಿಮಾನದಲ್ಲಿರುವ ಹೆಚ್ಚುವರಿ ಇಂಧನವನ್ನು ಹೊರತೆಗೆಯಲಾಗುತ್ತದೆ. ಹತ್ತಿರದ ವಿಮಾನ ನಿಲ್ದಾಣಕ್ಕೆ ತಲುಪಲು ಬೇಕಾಗುವಷ್ಟು ಇಂಧನವನ್ನು ಮಾತ್ರ ಉಳಿಸಿಕೊಳ್ಳ ಲಾಗುತ್ತದೆ.
ವಿಮಾನದ ಒಳಗಿರುವ ಪ್ರಯಾಣಿಕರ ಆಸನಗಳು, ಗ್ಯಾಲಿ ಉಪಕರಣಗಳು ಮತ್ತು ಇತರ ಭಾರವಾದ ವಸ್ತುಗಳನ್ನು ಹೊರತೆಗೆಯಲಾಗುತ್ತದೆ. ಕಡಿಮೆ ದೂರದಲ್ಲಿ ವಿಮಾನ ಹಾರಬೇಕೆಂದರೆ ಗಾಳಿಯ ವೇಗ ಮತ್ತು ರೆಕ್ಕೆಗಳ ‘ಲಿಫ್ಟ್’ (Lift) ಹೆಚ್ಚಿರಬೇಕು. ಟೇಕಾಫ್ ಸಮಯದಲ್ಲಿ ರೆಕ್ಕೆಗಳ ಫ್ಲ್ಯಾಪ್‌ಗಳನ್ನು ಗರಿಷ್ಠ ಮಟ್ಟಕ್ಕೆ ಇಳಿಸಲಾಗುತ್ತದೆ.
ಇದು ಕಡಿಮೆ ವೇಗದಲ್ಲೂ ವಿಮಾನಕ್ಕೆ ಬೇಕಾದ ಮೇಲ್ಮುಖ ಒತ್ತಡವನ್ನು ನೀಡುತ್ತದೆ. ಪೈಲಟ್‌ಗಳು ವಿಮಾನದ ಎಂಜಿನ್‌ಗಳನ್ನು ಪೂರ್ಣ ಶಕ್ತಿಯಲ್ಲಿ (Full Thrust) ಇಟ್ಟು, ಬ್ರೇಕ್‌ಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಎಂಜಿನ್ ಗರಿಷ್ಠ ಶಕ್ತಿ ತಲುಪಿದ ತಕ್ಷಣ ಬ್ರೇಕ್ ಬಿಡಲಾಗುತ್ತದೆ, ಇದರಿಂದ ವಿಮಾನವು ರಾಕೆಟ್‌ನಂತೆ ವೇಗವಾಗಿ ನುಗ್ಗುತ್ತದೆ. ಒಂದು ವೇಳೆ ಬಯಲು ಪ್ರದೇಶವು ತೀರಾ ಚಿಕ್ಕ ದಾಗಿದ್ದರೆ ಅಥವಾ ಸುತ್ತಲೂ ಬೆಟ್ಟ-ಗುಡ್ಡಗಳಿದ್ದರೆ ಟೇಕಾಫ್ ಮಾಡುವುದು ಅಪಾಯಕಾರಿ. ಅಂಥ ಸಂದರ್ಭದಲ್ಲಿ ವಿಮಾನದ ರೆಕ್ಕೆಗಳು, ಬಾಲ (Tail) ಮತ್ತು ಎಂಜಿನ್‌ಗಳನ್ನು ಪ್ರತ್ಯೇಕವಾಗಿ ಬಿಚ್ಚ ಲಾಗುತ್ತದೆ.
ಈ ಭಾಗಗಳನ್ನು ದೊಡ್ಡ ಕ್ರೇನ್‌ಗಳ ಮೂಲಕ ಎತ್ತಿ ಲಾಂಗ್-ಬೆಡ್ ಟ್ರಕ್‌ಗಳ ಮೇಲೆ ಹೇರಿ ರಸ್ತೆ ಮಾರ್ಗದ ಮೂಲಕ ಹತ್ತಿರದ ಹ್ಯಾಂಗರ್ ಅಥವಾ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಪುನಃ ಜೋಡಿಸಿ ಪರೀಕ್ಷಾರ್ಥ ಹಾರಾಟ ನಡೆಸಲಾಗುತ್ತದೆ. ಇಂಥ ಟೇಕಾಫ್ ಗಳನ್ನು ಸಾಮಾನ್ಯ ಪೈಲಟ್‌ಗಳು ಮಾಡುವುದಿಲ್ಲ. ಇದಕ್ಕಾಗಿ ‘ಟೆಸ್ಟ್ ಪೈಲಟ್’ಗಳನ್ನು ಕರೆಯಿಸಲಾಗುತ್ತದೆ.
ಅವರು ವಿಮಾನದ ತೂಕ ಮತ್ತು ಲಭ್ಯವಿರುವ ಜಾಗವನ್ನು ಲೆಕ್ಕ ಹಾಕಿ, ಅತ್ಯಂತ ನಿಖರವಾದ ವೇಗದಲ್ಲಿ ವಿಮಾನವನ್ನು ಮೇಲಕ್ಕೆತ್ತುತ್ತಾರೆ. ಈ ಹಾರಾಟದಲ್ಲಿ ಯಾವುದೇ ಪ್ರಯಾಣಿಕರಿರುವು ದಿಲ್ಲ. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯಗಳು- ಗಾಳಿಯ ದಿಕ್ಕು ಟೇಕಾಫ್ʼಗೆ ಪೂರಕ ವಾಗಿರಬೇಕು (Headwind) ಬಯಲಿನಲ್ಲಿ ಟೇಕಾಫ್ ಆಗುವಾಗ ಹಕ್ಕಿಗಳು ಅಥವಾ ಪ್ರಾಣಿಗಳು ಅಡ್ಡ ಬರದಂತೆ ನೋಡಿಕೊಳ್ಳಬೇಕು.
ವಿಮಾನಯಾನ ಪ್ರಾಧಿಕಾರವು (DGCA) ಅಥವಾ (FAA) ಸಂಪೂರ್ಣ ಸುರಕ್ಷತೆಯನ್ನು ಪರಿಶೀಲಿಸಿದ ನಂತರವೇ ಇಂಥ ಸಾಹಸಕ್ಕೆ ಅನುಮತಿ ನೀಡುತ್ತದೆ. ಬಯಲಿನಲ್ಲಿ ಲ್ಯಾಂಡ್ ಆದ ವಿಮಾನವನ್ನು ಮತ್ತೆ ಹಾರಿಸುವುದು ಕೇವಲ ಪೈಲಟ್ ಸಾಹಸವಲ್ಲ, ಅದು ಎಂಜಿನಿಯರ್‌ಗಳ ಗಣಿತದ ಲೆಕ್ಕಾಚಾರ ಮತ್ತು ತಾತ್ಕಾಲಿಕ ಮೂಲಸೌಕರ್ಯದ ಯಶಸ್ಸು. ವಿಮಾನವು ಸುರಕ್ಷಿತ ವಾಗಿದ್ದರೆ ಮತ್ತು ಹಾರಾ ಟಕ್ಕೆ ಯೋಗ್ಯವಾಗಿದ್ದರೆ, ಎಂಥ ಕಠಿಣ ಪರಿಸ್ಥಿತಿಯಲ್ಲೂ ಅದನ್ನು ಮತ್ತೆ ಆಕಾಶಕ್ಕೆ ಏರಿಸಬಹುದು.