ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Thimmanna Bhagwath Column: ನ್ಯಾಯದ ಪಂಜರದಿಂದ ಪಾರಾಗಲು ಬಡವರಿಗೆ ರೆಕ್ಕೆಗಳಿಲ್ಲ !

ಕಾನೂನಿನ ಪ್ರಕಾರ ಸ್ಥಾಪಿತವಾದ ಕಾರ್ಯ ವಿಧಾನದಿಂದ ಮಾತ್ರ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಬಹುದು ಎಂದಿರುವ 21ನೇ ವಿಧಿಯ ಅನುಷ್ಟಾನ ಅತ್ಯಂತ ಕ್ಲಿಷ್ಟವಾದುದು. ಆ ವಿವೇಚನಾ ಧಿಕಾರ ವನ್ನು ನ್ಯಾಯಾಲಯಗಳು ಅತ್ಯಂತ ಜವಾಬ್ದಾರಿಯಿಂದ ಹಾಗೂ ವಿವೇಚನಾಯುತವಾಗಿ ಚಲಾಯಿಸ ಬೇಕಾಗುತ್ತದೆ. ಆರೋಪದ ತೀವ್ರತೆ ಹಾಗೂ ಆರೋಪಿಯ ಪೂರ್ವ ಚರಿತ್ರೆ ಖಂಡಿತ ಪ್ರಮುಖ ಆಂಶವಾಗುತ್ತದೆ.

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗವತ್

‘ಹೊಟ್ಟೆ ಹೊರೆದುಕೊಳ್ಳಲು ತಮ್ಮ ಕೆಲಸದ ಜಾಗಕ್ಕೆ ಅಂಟಿಕೊಳ್ಳುವ ಬಡವರು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವದಿಲ್ಲ. ನ್ಯಾಯದ ಪಂಜರದಿಂದ ಹಾರಿಹೋಗಲು ಅವರಿಗೆ ಬಂಗಾ ರದ ರೆಕ್ಕೆಗಳಿರುವದಿಲ್ಲ.’ 1899ರಲ್ಲಿ ಇಂಗ್ಲೆಂಡಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಲಾರ್ಡ್ ರಸ್ಸೆಲ್ಸ್, ಜಾಮೀನು ಪ್ರಕ್ರಿಯೆಯ ವಿಷಯದಲ್ಲಿ ಉದ್ಗರಿಸಿದ ಮಾತುಗಳಿವು.

ಆರ್ಥಿಕ ಅಪರಾಧದ ಆರೋಪ ಎದುರಿಸುತ್ತಿರುವ ದೇಶದ ಕೆಲವರು ವಿದೇಶದಲ್ಲಿ ಐಶಾರಾಮೀ ಜೀವನ ನಡೆಸುತ್ತಿರುವುದನ್ನು ಕಂಡಾಗ ಲಾರ್ಡ್ ರಸ್ಸೆಲ್ಸ್‌ರವರ ಮಾತುಗಳು ಈಗ ಹೆಚ್ಚು ಪ್ರಸ್ತುತ ವೆನಿಸುತ್ತವೆ. ‘ಜಾಮೀನಿನ ನಿರಾಕರಣೆಯು ಸಂವಿಧಾನದ 21ನೇ ಕಲಮು ನೀಡುವ ಅಮೂಲ್ಯ ‘ವ್ಯಕ್ತಿ ಸ್ವಾತಂತ್ರ್ಯ’ದ ಹಕ್ಕಿನ ನಿರಾಕರಣೆ ಯಾಗುತ್ತದೆ. ಅಂಥ ನಿರಾಕರಣೆಯನ್ನು ನ್ಯಾಯಯುತ ವಾಗಿ ಹಾಗೂ ಕಾಳಜಿಯಿಂದ ಮಾಡಬೇಕು ಹೊರತು ಕೇವಲ ಯಾಂತ್ರಿಕವಾಗಿ ಅಲ್ಲ.’ ‘ಆರೋಪಿಗಳಿಗೆ ಜಾಮೀನು ನೀಡಬೇಕು ಎಂಬುದು ನಿಯಮ.

ಜೈಲು ಅಪವಾದದ ಸಂದರ್ಭಗಳಲ್ಲಿ ಮಾತ್ರ’ (Bail is the Rule. Jail is exception) - ನ್ಯಾಯದಾನ ವ್ಯವಸ್ಥೆಯಲ್ಲಿ ಅನೇಕ ಕ್ರಾಂತಿಕಾರೀ ಬದಲಾವಣೆಗೆ ಕಾರಣರಾದ ಜಸ್ಟೀಸ್ ವಿ.ಆರ್.ಕೃಷ್ಣ ಐಯ್ಯರ್ ಹೇಳಿದ ಮಾತುಗಳಿವು (ಗುಡಿಕಂಟಿ ನರಸಿಂಹುಲು ವರ್ಸಸ್ ಪಬ್ಲಿಕ್ ಪ್ರೊಸಿಕ್ಯೂಟರ್ ಆಂಧ್ರ ಪ್ರದೇಶ ಹೈಕೋರ್ಟ್ ಪ್ರಕರಣ-ಸುಪ್ರೀಂ ಕೋರ್ಟು).

ಇದನ್ನೂ ಓದಿ:Thimmanna Bhagawat Column: ಆರೋಪಿಗಳೆಲ್ಲ ಅಪರಾಧಿಗಳಲ್ಲ, ಬಂಧನವೆಲ್ಲ ಶಿಕ್ಷೆಯಲ್ಲ

ಕಾನೂನಿನ ಪ್ರಕಾರ ಸ್ಥಾಪಿತವಾದ ಕಾರ್ಯ ವಿಧಾನದಿಂದ ಮಾತ್ರ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಬಹುದು ಎಂದಿರುವ 21ನೇ ವಿಧಿಯ ಅನುಷ್ಟಾನ ಅತ್ಯಂತ ಕ್ಲಿಷ್ಟವಾದುದು. ಆ ವಿವೇಚನಾ ಧಿಕಾರ ವನ್ನು ನ್ಯಾಯಾಲಯಗಳು ಅತ್ಯಂತ ಜವಾಬ್ದಾರಿಯಿಂದ ಹಾಗೂ ವಿವೇಚನಾಯುತವಾಗಿ ಚಲಾಯಿಸ ಬೇಕಾಗುತ್ತದೆ. ಆರೋಪದ ತೀವ್ರತೆ ಹಾಗೂ ಆರೋಪಿಯ ಪೂರ್ವ ಚರಿತ್ರೆ ಖಂಡಿತ ಪ್ರಮುಖ ಆಂಶವಾಗುತ್ತದೆ.

ಅದಲ್ಲದೆ ಆರೋಪಿಗೆ ಜಾಮಿನು ನೀಡಿದರೆ ಆತನು ಪರಾರಿಯಾಗಿ ಅಪರಾಧದ ತನಿಖೆ ಹಾಗೂ ವಿಚಾರಣೆಗೆ ಲಭ್ಯವಾಗದಿರುವ ಸಾಧ್ಯತೆ, ಸಾಕ್ಷಿಗಳನ್ನು ತಿರುಚುವ ಅಥವಾ ಇತರ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ, ಆತ ಇನ್ನಷ್ಟು ಅಪರಾಧಗಳನ್ನು ಮಾಡಬಹುದೆಂಬ ದಟ್ಟವಾದ ಸಂಶಯ, ಸಾಮಾಜಿಕ ಶಾಂತಿ ಮತ್ತು ಭದ್ರತೆಗೆ ಆತನಿಂದ ಅಪಾಯವಾಗುವ ಸಾಧ್ಯತೆ ಅಥವಾ ಹೊರಗಡೆ ಬಿಟ್ಟರೆ ಆತನ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇದ್ದರೆ ಜಾಮಿನು ಅರ್ಜಿಯನ್ನು ಕೋರ್ಟುಗಳು ತಿರಸ್ಕರಿಸಬಹುದು.

ಇಂಥ ಸಂದರ್ಭಗಳಿಲ್ಲದಿದ್ದಾಗ ಸಹಜವಾಗಿ ಜಾಮೀನು ಮಂಜೂರಾಗಬೇಕು. ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ (ಬಿಎನ್‌ಎಸ್ ಎಸ್) 478 ರಿಂದ 496ನೇ ಕಲಮುಗಳನ್ನೊಳಗೊಂಡ 35ನೇ ಅಧ್ಯಾಯವು ಜಾಮೀನಿಗೆ ಸಂಬಂಧಪಟ್ಟಿದೆ. ನಿಜವಾಗಿ ಅಪರಾಧ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗ ಬೇಕು ಮತ್ತು ಆತನನ್ನು ಕೂಡಲೇ ಜೈಲಿಗೆ ಹಾಕಬೇಕು ಎಂಬುದು ಕಾನೂನಿನ ಹಾಗೂ ಸಮಾಜದ ಆಶಯ. ಆದರೆ ಕೆಲವು ಸಲ ಯಾರದೋ ಸಂಚಿನಿಂದ ಆಥವಾ ತಪ್ಪು ಗ್ರಹಿಕೆಯಿಂದ ಸುಳ್ಳು ಕೇಸ್ ದಾಖಲಾಗಿ ಬಂಧನವಾಗುವ ಸಾಧ್ಯತೆ ಇರುತ್ತದೆ.

TB

ಅಂಥ ಸಂದರ್ಭಗಳಲ್ಲಿ ಬಂಧನವಾಗುವ ಮೊದಲು ನಿರೀಕ್ಷಣಾ ಜಾಮೀನು ಹಾಗೂ ಬಂಧನ ವಾದರೆ ರೆಗ್ಯುಲರ್ ಜಾಮೀನು ಅರ್ಜಿ ಸಲ್ಲಿಸಿ ಬಿಡುಗಡೆಗೆ ಪ್ರಯತ್ನಿಸಬೇಕು. ನಂತರ ಆರೋಪ ನಿಜವಲ್ಲ ವೆಂಬುದನ್ನು ಕೋರ್ಟಿನಲ್ಲಿ ಸಾಬೀತು ಪಡಿಸಬಹುದು. ಸುಳ್ಳು ಆರೋಪದ ಆಧಾರ ದಲ್ಲಿ ಎಫ್ಐಆರ್ ದಾಖಲಾದರೆ ಅದನ್ನು ರದ್ದು ಮಾಡಲು ಬಿಎನ್‌ಎಸ್‌ಎಸ್‌ನ 528ನೇ ಕಲಮಿನಡಿ ಹೈಕೋರ್ಟಿಗೆ ಅಂತರ್ಗತ ಅಧಿಕಾರವಿದೆ.

ಸೂಕ್ತ ನ್ಯಾಯವಾದಿಯ ನೆರವಿನಿಂದ ಅಂಥ ಅವಕಾಶವನ್ನೂ ಉಪಯೋಗಿಸಿಕೊಳ್ಳಬಹುದು. ನಿಯಮಿತ ಜಾಮೀನು (ರೆಗ್ಯುಲರ್ ಬೇಲ್): ಬಿಎನ್‌ಎಸ್ ಎಸ್‌ನ 478 ಮತ್ತು 480 ಕಲಮುಗಳ ಅಡಿಯಲ್ಲಿ ಬಂಧಿತ ಅಥವಾ ನ್ಯಾಯಾಲಯಕ್ಕೆ ಅಥವಾ ಪೋಲೀಸ್ ಠಾಣೆಗೆ ಹಾಜರಾದ ವ್ಯಕ್ತಿಯನ್ನು ಜಾಮೀನು ಅಥವಾ ಬಾಂಡ್ ಪಡೆದು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ನಿಯಮಿತ ಜಾಮೀನು ಎನ್ನಬಹುದು.

478ನೇ ಕಲಮಿನ ಪ್ರಕಾರ ಜಾಮೀನು ಇರುವ (ಬೇಲಬಲ್) ಅಪರಾಧದ ಆರೋಪದ ಆಧಾರದಲ್ಲಿ ಆರೋಪಿಯನ್ನು ಪೋಲೀಸರು ಬಂಧಿಸಿದಾಗ ಅಥವಾ ಆತನೇ ಠಾಣೆಗೆ ಅಥವಾ ಕೋರ್ಟಿಗೆ ಖುದ್ದು ಹಾಜರಾದಾಗ ಆತನನ್ನು ಜಾಮೀನು ಪಡೆದು ಬಿಡುಗಡೆ ಮಾಡಬೇಕು ಎಂದಿದೆ. ಒಂದು ವೇಳೆ ಅಂಥ ವ್ಯಕ್ತಿಯು ಜಾಮೀನು ಒದಗಿಸಲು ಅಶಕ್ಯನಾದರೆ ಆತನಿಂದ ವೈಯಕ್ತಿಕ ಬಾಂಡ್ ಪಡೆದು ಬಿಡುಗಡೆ ಮಾಡಬೇಕು. ಹಾಗೆ ಬಿಡುಗಡೆ ಮಾಡುವ ಅಧಿಕಾರ ಪೊಲೀಸ್ ಅಧಿಕಾರಿ ಅಥವಾ ಕೋರ್ಟಿಗೆ ಇರುತ್ತದೆ. 480ನೇ ಕಲಮು ಜಾಮೀನು ರಹಿತ ಅಪರಾಧಗಳಿಗೆ ಅನ್ವಯಿಸುತ್ತದೆ.

ಅಪರಾಧ ಸಾಬೀತಾದರೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ನೀಡಬಹುದಾದ ಅಪರಾಧದ ಕುರಿತು ಬಂಧಿತನಾಗಿದ್ದರೆ ಅಥವಾ ಕೋರ್ಟಿನ ಮುಂದೆ ಹಾಜರಾಗಿದ್ದರೆ ಅಥವಾ ಆತ ಈ ಹಿಂದೆ ಅಂಥದ್ದೇ ಅಪರಾಧಗಳ ಕುರಿತು (ಅಥವಾ 7 ವರ್ಷ ಜೈಲು ಶಿಕ್ಷೆ ಅಥವಾ ಎರಡಕ್ಕಿಂತ ಹೆಚ್ಚು ಸಲ ಕಡಿಮೆ ಅವಽ) ಶಿಕ್ಷೆಗೆ ಗುರಿಯಾಗಿದ್ದರೆ, ಆತನನ್ನು ಜಾಮೀನು ಅಥವಾ ಬಾಂಡ್ ಆಧಾರದಲ್ಲಿ ಬಿಡುಗಡೆ ಮಾಡಲು ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಅಧಿಕಾರವಿರುವದಿಲ್ಲ. (ಆರೋಪಿಯು ಮಹಿಳೆ ಅಥವಾ ಅಪ್ರಾಯಸ್ಥರಾಗಿ ದ್ದರೆ, ಅಥವಾ ಅನಾರೋಗ್ಯ ಪೀಡಿತನಾಗಿದ್ದರೆ ಬಿಡುಗಡೆ ಮಾಡಬಹುದು.) ಆದರೆ ಇಂಥ ಆರೋಪಗಳ ಸಂದರ್ಭದಲ್ಲಿ ಕೂಡಾ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸೆಶನ್ಸ್ ಕೋರ್ಟು ಮತ್ತು ಹೈಕೋರ್ಟು ಗಳಿಗೆ 483ನೇ ಕಲಮಿನ ಅಡಿಯಲ್ಲಿ ವಿಶೇಷ ಅಧಿಕಾರವಿರುತ್ತದೆ.

187ನೇ ಕಲಮು ಬಂಧನದ ಗರಿಷ್ಠ ಅವಧಿಯನ್ನು ಸೂಚಿಸುತ್ತದೆ. ಮರಣ ದಂಡನೆ, ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಗೆ ಜೈಲುಶಿಕ್ಷೆ ನೀಡಬಹುದಾದ ಅಪರಾಧಗಳಾಗಿದ್ದರೆ ಆರೋಪಿಯನ್ನು ಬಂಧಿಸಿ 90 ದಿನ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿ 60 ದಿನಗಳ ಒಳಗೆ ತನಿಖೆ ಮುಗಿಸಿ ಚಾರ್ಜ್ ಶೀಟ್ ಸಲ್ಲಿಕೆಯಾಗದಿದ್ದರೆ ಆರೋಪಿಯನ್ನು ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡುವದು ಕಾನೂನು ರೀತ್ಯಾ ಕಡ್ಡಾಯವಾಗಿರುತ್ತದೆ.

ಅಂಥ ಸಂದರ್ಭಗಳಲ್ಲೂ ಬಂಧಿತ ಆರೋಪಿ ಜಾಮೀನು ಒದಗಿಸಬೇಕಾಗುತ್ತದೆ. ಬಿಎನ್‌ಎಸ್‌ಎಸ್‌ ನ 126 ಮತ್ತು 127ನೇ ಕಲಮುಗಳ ಪ್ರಕಾರ ಮ್ಯಾಜಿಸ್ಟ್ರೇಟರು ಮುಂಜಾಗರೂಕತಾ ಕ್ರಮವಾಗಿ ಯಾವದೇ ವ್ಯಕ್ತಿಗೆ ಶಾಂತಿ ಭಂಗವಾಗದಂತೆ ಉತ್ತಮ ನಡವಳಿಕೆಯ ಬಾಂಡ್ ಅಥವಾ ಜಾಮೀನು ಒದಗಿಸಲು ಆದೇಶಿಸಬಹುದು. ಅಪರಾಧ ನಿರ್ಣಯವಾಗಿ ಶಿಕ್ಷೆ ವಿಧಿಸಿದ ಮೇಲೆ ಅಪರಾಧಿಯು ಮೇಲ್ಮನವಿ ಸಲ್ಲಿಸಿದ್ದರೆ ಮೇಲ್ಮನವಿ ಕೋರ್ಟು ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಬಹುದು. (430ನೇ ಕಲಮು). ನಿರೀಕ್ಷಣಾ ಜಾಮೀನು: ಬಿಎನ್‌ಎಸ್‌ಎಸ್‌ನ 482ನೇ ಕಲಮು ನಿರೀಕ್ಷಣಾ ಜಾಮೀನಿಗೆ ಸಂಬಂಧಿಸುತ್ತದೆ.

ಜಾಮೀನು ರಹಿತ ಅಪರಾಧದ ಆರೋಪದಲ್ಲಿ ತನ್ನನ್ನು ಬಂಧಿಸಬಹುದೆಂದು ಯಾವದೇ ವ್ಯಕ್ತಿಗೆ ಅನಿಸಿದರೆ ಆತನು ಸೆಶನ್ಸ್ ಕೋರ್ಟ್ ಅಥವಾ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಕೋರ್ಟು ಅಂಥ ಅರ್ಜಿಯನ್ನು ಪುರಸ್ಕರಿಸಿ ಜಾಮೀನು ಮಂಜೂರಿ ಮಾಡುವಾಗ ಅಂಥ ವ್ಯಕ್ತಿಯು ಪೋಲೀಸರ ವಿಚಾರಣೆಗೆ ಕರೆದಾಗ ಹಾಜರಾಗಬೇಕು, ಸಾಕ್ಷಿಗಳನ್ನು ಬೆದರಿಸುವ ಅಥವಾ ಮನವೊಲಿಸುವ ಯಾವದೇ ಪ್ರಯತ್ನ ಮಾಡಬಾರದು, ಕೋರ್ಟಿನ ಅನುಮತಿಯಿಲ್ಲದೆ ದೇಶದ ಹೊರಗಡೆ ಅಥವಾ ನ್ಯಾಯಾಲಯದ ವ್ಯಾಪ್ತಿಯ ಹೊರಗೆ ಹೋಗಬಾರದು ಮುಂತಾದ ಶರತ್ತುಗಳನ್ನು ವಿಧಿಸಬಹುದು.

ಜಾಮೀನಿನ ಶರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗುತ್ತದೆ ಮತ್ತು ಆರೋಪಿಯನ್ನು ಕೂಡಲೇ ಬಂಧಿಸಲಾಗುತ್ತದೆ. ಆದರೆ ಭಾರತೀಯ ನ್ಯಾಯ ಸಂಹಿತೆಯ 65 ಮತ್ತು 70ನೇ ಕಲಮು ಅನ್ವಯವಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವದಿಲ್ಲ. ನಿರೀಕ್ಷಣಾ ಜಾಮೀನು ಮಂಜೂರಿ ಕುರಿತಂತೆ ಸೆಶನ್ಸ್ ಕೋರ್ಟು ಮತ್ತು ಹೈಕೋರ್ಟ್‌ಗಳಿಗೆ ಅಪಾರ ವಿವೇಚನಾಧಿಕಾರವಿದೆ.

ಅಪರಾಧ ನಿರ್ಣಯವಾಗುವ ವರೆಗೂ ಆರೋಪಿ ನಿರ್ದೋಷಿ ಎಂಬುದು ಕ್ರಿಮಿನಲ್ ಕಾನೂನಿನ ಮೂಲ ತತ್ವ. ಅಲ್ಲದೆ ವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ ಹಾಗೂ ಜಾಮೀನಿನ ಮೇಲೆ ಬಿಡುಗಡೆ ಹೊಂದುವ ಮೂಲಭೂತ ಹಕ್ಕಿನ ಆಧಾರದಲ್ಲಿ, ಗಂಭೀರ ಅಪರಾಧಗಳಂಥ ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿದರೆ ಸಾಮಾನ್ಯವಾಗಿ ಜಾಮೀನು ಮಂಜೂರಿ ಮಾಡಬೇಕು ಎಂಬುದನ್ನು ಸುಪ್ರೀಂ ಕೋರ್ಟು ಮತ್ತು ಹೈಕೋರ್ಟುಗಳು ಅನೇಕ ಪ್ರಕರಣಗಳಲ್ಲಿ ಸ್ಪಷ್ಟಪಡಿಸಿವೆ.

ಕೌಟುಂಬಿಕ ದೌರ್ಜನ್ಯ, ಎಸ್.ಸಿ./ಎಸ್.ಟಿ. ದೌರ್ಜನ್ಯದಂಥ ಜಾಮೀನುರಹಿತ ಪ್ರಕರಣಗಳಲ್ಲೂ 482ನೇ ಕಲಮಿನನ್ವಯ ಇರುವ ವಿಶೇಷಾಧಿಕಾರ ಬಳಸಿ ಹೈಕೋರ್ಟು/ಸೆಶನ್ಸ್ ಕೋರ್ಟುಗಳು ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟು ಕೆಲವು ಪ್ರಕರಣಗಳಲ್ಲಿ ಹೇಳಿದೆ. (ಸುಭಾಶ ಕಾಶಿನಾಥ ಮಹಾಜನ ವರ್ಸಸ್ ಮಹಾರಾಷ್ಟ್ರ ಸರಕಾರ, ಸುಶಿಲಕುಮಾರ್ ಶರ್ಮ ವರ್ಸಸ್ ಭಾರತ ಸರಕಾರ).

ಡಾ| ಎನ್.ಟಿ.ದೇಸಾಯಿ ವರ್ಸಸ್ ಗುಜರಾತ್ ಸರಕಾರ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟು ಮಾಡಿದ ಅವಲೋಕನ, ನಿರೀಕ್ಷಣಾ ಜಾಮೀನಿನ ಮಹತ್ವವನ್ನು ಎತ್ತಿ ತೋರಿಸುತ್ತದೆ: ‘ಜಾಮೀನು ನಿರಾಕರಿಸಲ್ಪಟ್ಟ ಆರೋಪಿಯು ಒಂದು ವೇಳೆ ಅಂತಿಮವಾಗಿ ನಿರ್ದೋಷಿ ಎಂದು ಪರಿಗಣಿಸಲ್ಪಟ್ಟರೆ ಸುಳ್ಳು ಆಪಾದನೆ ಯಾಧಾರದಲ್ಲಿ ಬಂಧನಕ್ಕೊಳಗಾಗಿ ಜಾಮೀನೂ ಇಲ್ಲದೆ ಜೈಲುವಾಸದಲ್ಲಿ ಪಡುವ ಯಾತನೆ, ಮುಂದೆ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗುವದು ಮತ್ತು ಅದಕ್ಕಿಂತ ಹೆಚ್ಚಾಗಿ ಆಪಾದಿತರೆಂಬ ಹಣೆಪಟ್ಟಿಯಿಂದ ಸಮಾಜದಲ್ಲಿ ಅವರು ಅನುಭವಿ ಸುವ ಅವಮಾನ ಇವೆಲ್ಲಕ್ಕೂ ಕಾರಣವಾಗಿ ನ್ಯಾಯವನ್ನು ಒದಗಿಸುತ್ತೇವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನ್ಯಾಯಾಲಯಗಳು ನಾಚಿಕೆಯಿಂದ ತಲೆ ತಗ್ಗಿಸುವಂತಾಗುವುದಿಲ್ಲವೇ?’ ವಿಚಾರಣಾ ಧೀನ ಜೈಲುವಾಸ ಮತ್ತು ಪ್ರಕರಣಗಳ ಶೀಘ್ರ ವಿಲೇವಾರಿ ಕುರಿತು ‘ಹುಸೈನಾರಾ ಖಾಟೂನ್ ವರ್ಸಸ್ ಬಿಹಾರ ಸರಕಾರ’ ಪ್ರಕರಣ ಐತಿಹಾಸಿಕವಾದುದು.

1977ರಷ್ಟು ಹಿಂದೆ ಬಿಹಾರದ ವಿವಿಧ ಜೈಲುಗಳಲ್ಲಿ ಅನೇಕ ವಿಚಾರಣಾಧೀನ ಕೈದಿಗಳು ವರ್ಷಾನು ಗಟ್ಟಲೆ ವಿಚಾರಣೆಯಿಲ್ಲದೆ ಸೆರೆವಾಸ ಅನುಭವಿಸುತ್ತಿದ್ದರು. ಅವರಲ್ಲಿ ಕೆಲವರಂತೂ ತಮ್ಮ ಮೇಲೆ ಮಾಡಲಾದ ಅರೋಪ ಸಾಬೀತಾದರೆ ವಿಧಿಸಬಹುದಾದ ಗರಿಷ್ಠ 10 ವರ್ಷದ ಅವಧಿಗಿಂತ ಹೆಚ್ಚು ಅವಧಿಗೆ ಜೈಲಿನಲ್ಲಿದ್ದರು. ಅವರಲ್ಲಿ ಬಹುತೇಕರು ಬಡವರು ಮತ್ತು ನಿರಕ್ಷರಿಗಳು.

ಕಾನೂನಿನ ಪ್ರಕ್ರಿಯೆಗಳ ಗೋಜಲಿನ ಯಾವ ಜ್ಞಾನವೂ ಇರದ ಅವರಿಗೆ ಕೋರ್ಟಿನಿಂದ ಜಾಮೀನು ಪಡೆಯುವ ಅವಕಾಶವಿದೆ ಎಂತಲೇ ಗೊತ್ತಿರಲಿಲ್ಲ. ವಕೀಲರನ್ನು ಸಂಪರ್ಕಿಸುವ ಮಾಹಿತಿ ಮತ್ತು ಅದಕ್ಕೆ ತಗಲುವ ವೆಚ್ಚ ಭರಿಸುವ ಶಕ್ತಿಯೂ ಇರಲಿಲ್ಲ. ಕಪಿಲಾ ಹಿಂಗೋರಾಣಿ ಎಂಬ ನ್ಯಾಯವಾದಿ ಅಂಥ ಅನೇಕ ಕೈದಿಗಳ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮೂಲಕ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯನ್ನು ದಾಖಲಿಸಿದರು. ಈ ರಿಟ್ ಅರ್ಜಿಯಲ್ಲಿ ಅವರು ಆಪಾದಿತರ ಬಡತನ ಹಾಗೂ ನಿರಕ್ಷರತೆಯಿಂದಾಗಿ ಜಾಮೀನು ಹಾಗೂ ನ್ಯಾಯ ಪಡೆಯಲು ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು.

ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಪಿ.ಎನ್ ಭಗವತಿಯವರು ನೀಡಿದ ಐತಿಹಾಸಿಕ ತೀರ್ಪು ದೇಶಾದ್ಯಂತ ವಿವಿಧ ಜೈಲುಗಳಲ್ಲಿದ್ದ 40 ಸಾವಿರಕ್ಕೂ ಅಧಿಕ ವಿಚಾರಣಾಧೀನ ಕೈದಿಗಳ ಬಿಡುಗಡೆಗೆ ಕಾರಣವಾಯಿತು. ಅಲ್ಲದೆ ನ್ಯಾಯ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ದುಡಿದು ಹಣತರುವ ಗಂಡಸು ಮಿಥ್ಯಾರೋಪದ ಅಡಿ ಜೈಲು ಸೇರಿದರೆ ಇಡೀ ಕುಟುಂಬವೇ ಅನಾಥವಾಗುತ್ತದೆ.

ಬಡತನದ ಕಷ್ಟದ ಜೊತೆಗೆ ವಕೀಲರ ವೆಚ್ಚ ಆ ನೋವನ್ನು ಇಮ್ಮಡಿಗೊಳಿಸುತ್ತದೆ. ಆತನ ಹೆಂಡತಿ ಮಕ್ಕಳು ಸ್ವಾಭಿಮಾನ ಬಿಟ್ಟು ಹಣವಂತರ ಕಾಲು ಹಿಡಿದು ಜಾಮೀನು ಪಡೆಯಲು ಹರ ಸಾಹಸ ಪಡಬೇಕು. ಪೋಲೀಸರ ಕಿರುಕುಳ ಬೇರೆ. ಹಣಬಲ, ಜನಬಲವಿರುವ ಸಿರಿವಂತರು ಅಪರಾಧ ಮಾಡಿಯೂ ಕಾರಿನಲ್ಲಿ ಒಡಾಡಿಕೊಂಡಿರುವ ಅನೇಕ ಉದಾಹರಣೆಗಳಿವೆ.

ಕಾನೂನುಗಳಿರುವದು ಬಡವರನ್ನು ಶಿಕ್ಷಿಸಲು ಮತ್ತು ಸಿರಿವಂತರನ್ನು ರಕ್ಷಿಸಲು ಮಾತ್ರ ಎಂಬ ಕಲ್ಪನೆಗೆ ಇಂಥ ಘಟನೆಗಳು ಕಾರಣವಾದರೆ ಅದು ಇಡೀ ನ್ಯಾಯ ವ್ಯವಸ್ಥೆಯ ಘೋರ ವೈಫಲ್ಯ ವಾಗುತ್ತದೆ. ಜಾಮೀನಿನ ಆಧಾರದಲ್ಲಿ ಆರೋಪಿಗಳ ಬಿಡುಗಡೆಗೆ ಸಂಕೀರ್ಣ ನ್ಯಾಯ ವ್ಯವಸ್ಥೆಯು ಇನ್ನಷ್ಟು ಸರಳವಾಗಬೇಕು. ಆದರರ್ಥ ಅಪರಾಧಿಗಳು ಶಿಕ್ಷೆಯಿಂದ ಪಾರಾಗಬೇಕೆಂದಲ್ಲ.