ಸಂಪಾದಕರ ಸದ್ಯಶೋಧನೆ
ವಿಮಾನವೆಂದರೆ ಕೇವಲ ಹಾರುವ ವಾಹನವಲ್ಲ, ಅದು ಆಕಾಶದಲ್ಲಿ ಚಲಿಸುವ ಒಂದು ‘ವಿದ್ಯುತ್ ಉತ್ಪಾದನಾ ಕೇಂದ್ರ’ (Flying Power Station ) ಕೂಡ ಹೌದು. ಒಂದು ಬೃಹತ್ ಗಾತ್ರದ ವಿಮಾನವು ಉತ್ಪಾದಿಸುವ ವಿದ್ಯುತ್ ಶಕ್ತಿಯು ಒಂದು ಪುಟ್ಟ ನಗರದ ಅಗತ್ಯವನ್ನೇ ಪೂರೈಸಬಲ್ಲದು ಎಂದರೆ ನೀವು ನಂಬಬೇಕು.
ವಿಮಾನದ ವಿದ್ಯುತ್ ವ್ಯವಸ್ಥೆ, ಅದರ ಮೂಲಗಳು ಮತ್ತು ಅಷ್ಟು ದೊಡ್ಡ ಪ್ರಮಾಣದ ವಿದ್ಯುತ್ ಏಕೆ ಬೇಕಾಗುತ್ತದೆ ಎಂಬುದು ಕುತೂಹಲಕರ ಸಂಗತಿಯೇ. ವಿಮಾನದ ವಿದ್ಯುತ್ ವ್ಯವಸ್ಥೆಯನ್ನು ಆಕಾಶದಲ್ಲಿನ ಮಿನಿ ಪವರ್‌ಗ್ರಿಡ್ ಎನ್ನಬಹುದು. ಆಧುನಿಕ ವಿಮಾನಗಳು ಸಾವಿರಾರು ಅಡಿ ಎತ್ತರದಲ್ಲಿ ಹಾರುವಾಗ ಸ್ವಾವಲಂಬಿಯಾಗಿರಬೇಕು. ಅಲ್ಲಿ ವಿದ್ಯುತ್ ಇಲ್ಲದೇ ಹೋದರೆ ವಿಮಾನದ ಯಾವ ವ್ಯವಸ್ಥೆಯೂ ಕೆಲಸ ಮಾಡುವುದಿಲ್ಲ. ವಿಮಾನಕ್ಕೆ ವಿದ್ಯುತ್ ಎಲ್ಲಿಂದ ಬರುತ್ತದೆ? ಇದಕ್ಕೆ ಮೂರು ಪ್ರಮುಖ ಮೂಲಗಳಿವೆ. ಮೊದಲನೆ ಯದು, ಎಂಜಿನ್ ಚಾಲಿತ ಜನರೇಟರ್‌ಗಳು ( Engine Driven Generators). ವಿಮಾನದ ಮುಖ್ಯ ಎಂಜಿನ್‌ಗಳು ಕೇವಲ ವಿಮಾನವನ್ನು ಮುಂದಕ್ಕೆ ತಳ್ಳುವುದಷ್ಟೇ ಅಲ್ಲದೆ, ವಿದ್ಯುತ್ ಉತ್ಪಾದನೆ ಯನ್ನೂ ಮಾಡುತ್ತವೆ.
ಪ್ರತಿಯೊಂದು ಎಂಜಿನ್‌ನಲ್ಲಿ ಅಳವಡಿಸಲಾದ ಜನರೇಟರ್‌ಗಳು ಸಾಮಾನ್ಯವಾಗಿ 90 ರಿಂದ 150 ಕೆವಿಎ (Kilovolt-Ampere) ವಿದ್ಯುತ್ ಉತ್ಪಾದಿಸುತ್ತವೆ. ಬೋಯಿಂಗ್ 787 (ಡ್ರೀಮ್ ಲೈನರ್)ನಂಥ ಆಧುನಿಕ ವಿಮಾನಗಳಲ್ಲಿ ಇದು ಇನ್ನೂ ಹೆಚ್ಚಾಗಿರುತ್ತದೆ. ಎಪಿಯು (APU- Auxiliary Power Unit) ಎಂಬುದು ವಿಮಾನದ ಬಾಲದ ಭಾಗದಲ್ಲಿರುವ ಪುಟ್ಟ ಎಂಜಿನ್. ವಿಮಾನವು ನೆಲದ ಮೇಲಿರು ವಾಗ ಮತ್ತು ತುರ್ತು ಸಂದರ್ಭದಲ್ಲಿ ಗಾಳಿಯಲ್ಲಿದ್ದಾಗ ಇದು ವಿದ್ಯುತ್ ಮತ್ತು ಎಸಿ (AC) ವ್ಯವಸ್ಥೆ ಯನ್ನು ಒದಗಿಸುತ್ತದೆ.
ಇದನ್ನೂ ಓದಿ: Vishweshwar Bhat Column: ಪೈಲಟ್ ಮತ್ತು ಸಂಕೇತ
ಹಾಗೆ ಬ್ಯಾಕಪ್ ಮತ್ತು ತುರ್ತು ಮೂಲಗಳು ಮುಖ್ಯ ಜನರೇಟರ್‌ಗಳು ವಿಫಲವಾದರೆ, ಬ್ಯಾಟರಿಗಳು ಮತ್ತು ರ‍್ಯಾಟ್ (RAT-Ram Air Turbine) ಎಂಬ ಪುಟ್ಟ ಗಾಳಿಯ ಯಂತ್ರವು ವಿಮಾನದ ಅವಶ್ಯಕ ವ್ಯವಸ್ಥೆಗಳಿಗೆ ವಿದ್ಯುತ್ ನೀಡುತ್ತದೆ. ಎರಡನೆಯದಾಗಿ, ಒಂದು ಬೃಹತ್ ದೀರ್ಘ ಪ್ರಯಾಣದ ವಿಮಾನವು ಒಟ್ಟಾರೆಯಾಗಿ 500 ಕೆವಿಎಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.
ಸಾಮಾನ್ಯವಾಗಿ ಒಂದು ಸಣ್ಣ ಪಟ್ಟಣದ ಸಾವಿರಾರು ಮನೆಗಳು ಗರಿಷ್ಠ ಬಳಕೆಯ ಸಮಯದಲ್ಲಿ ಎಷ್ಟು ವಿದ್ಯುತ್ ಬಳಸುತ್ತವೆಯೋ, ಅಷ್ಟೇ ವಿದ್ಯುತ್ ಅನ್ನು ಒಂದು ದೊಡ್ಡ ವಿಮಾನವು ನಿರಂತರ ವಾಗಿ ಬಳಸುತ್ತಿರುತ್ತದೆ. ಆದ್ದರಿಂದಲೇ ಎಂಜಿನಿಯರ್ʼಗಳು ವಿಮಾನವನ್ನು ‘ವಿಮಾನ ವೆಂಬ ಪವರ್ ಸ್ಟೇಷನ್’ ಎಂದು ಕರೆಯುತ್ತಾರೆ.
ಇನ್ನು ಈ ವಿದ್ಯುತ್ ಎಲ್ಲಿಗೆ ಬಳಕೆಯಾಗುತ್ತದೆ? ಪ್ರಯಾಣಿಕರು ಕೇವಲ ಲೈಟ್‌ಗಳು ಮತ್ತು ಚಲನ ಚಿತ್ರದ ಪರದೆಗಳನ್ನು ಮಾತ್ರ ಗಮನಿಸುತ್ತಾರೆ. ಆದರೆ ವಿಮಾನದ ಒಳಗೆ ಅತಿದೊಡ್ಡ ಭಾಗದ ವಿದ್ಯುತ್ ಹಲವು ಭಾಗಗಳಲ್ಲಿ ವಿನಿಯೋಗವಾಗುತ್ತವೆ. ಉದಾಹರಣೆಗೆ, ಏವಿಯಾನಿಕ್ಸ್ ಮತ್ತು ಫ್ಲೈಟ್ ಕಂಪ್ಯೂಟರ್‌ಗಳು. ವಿಮಾನದ ದಿಕ್ಕನ್ನು ತೋರಿಸುವ, ಪೈಲಟ್‌ಗೆ ಮಾಹಿತಿ ನೀಡುವ ಮತ್ತು ವಿಮಾನವನ್ನು ಸಮತೋಲನದಲ್ಲಿಡುವ ನೂರಾರು ಕಂಪ್ಯೂಟರ್‌ಗಳು ನಿರಂತರವಾಗಿ ವಿದ್ಯುತ್ ಬಳಸುತ್ತವೆ.
35000 ಅಡಿ ಎತ್ತರದಲ್ಲಿ ಗಾಳಿಯ ಒತ್ತಡ ಮತ್ತು ತಾಪಮಾನ ಅತ್ಯಂತ ಕಡಿಮೆ ಇರುತ್ತದೆ. ಕ್ಯಾಬಿನ್ ಒಳಗಿನ ಗಾಳಿಯನ್ನು ಬೆಚ್ಚಗಿಡಲು ಮತ್ತು ಉಸಿರಾಡಲು ಯೋಗ್ಯವಾದ ಒತ್ತಡವನ್ನು ನಿರ್ವಹಿ ಸಲು ದೊಡ್ಡ ಪ್ರಮಾಣದ ವಿದ್ಯುತ್ ಬೇಕು. ನೂರಾರು ಪ್ರಯಾಣಿಕರಿಗೆ ಕಾಫಿ ತಯಾರಿಸಲು, ಆಹಾರವನ್ನು ಬಿಸಿ ಮಾಡಲು ಓವನ್‌ಗಳು ಮತ್ತು ಹಣ್ಣು-ಪಾನೀಯಗಳನ್ನು ತಂಪಾಗಿಡಲು ಚಿಲ್ಲರ್‌ಗಳು (Chillers) ಬೇಕು. ಇವು ವಿಮಾನದ ಒಳಗೆ ಹೆಚ್ಚು ವಿದ್ಯುತ್ ಬಳಸುವ ಭಾಗಗಳಾಗಿವೆ.
ವಿಮಾನದ ರೆಕ್ಕೆಗಳನ್ನು ಚಲಿಸಲು ಮತ್ತು ಲ್ಯಾಂಡಿಂಗ್ ಗೇರ್ ತೆರೆಯಲು ಬಳಸುವ ಪಂಪ್‌ಗಳು, ಮೋಟಾರ್ʼಗಳು, ಹೈಡ್ರಾಲಿಕ್ ಮತ್ತು ಆಕ್ಚುಯೇಟರ್‌ಗಳು ವಿದ್ಯುತ್ ಶಕ್ತಿಯಿಂದಲೇ ಚಲಿಸುತ್ತವೆ. ವಿಮಾನಯಾನದಲ್ಲಿ ಯಾವುದಾದರೂ ಒಂದು ವ್ಯವಸ್ಥೆ ವಿಫಲವಾದರೆ ಪರ್ಯಾಯ ವ್ಯವಸ್ಥೆ ಇರಲೇಬೇಕು.
ವಿದ್ಯುತ್ ವ್ಯವಸ್ಥೆಯನ್ನು ಹಲವಾರು ಮೂಲಗಳಾಗಿ ವಿಂಗಡಿಸಲಾಗಿರುತ್ತದೆ. ಒಂದು ಎಂಜಿನ್ ನಿಂತುಹೋದರೂ, ಇನ್ನೊಂದು ಎಂಜಿನ್‌ನ ಜನರೇಟರ್ ಇಡೀ ವಿಮಾನಕ್ಕೆ ವಿದ್ಯುತ್ ನೀಡ ಬಲ್ಲದು. ಎಲ್ಲ ಎಂಜಿನ್‌ಗಳು ವಿಫಲವಾದರೂ, ಎಪಿಯು ಅಥವಾ ಬ್ಯಾಟರಿಗಳು ವಿಮಾನದ ಕನಿಷ್ಠ ಮತ್ತು ಅನಿವಾರ್ಯ ಉಪಕರಣಗಳನ್ನು ಚಾಲನೆಯಲ್ಲಿಡುತ್ತವೆ. ಆಧುನಿಕ ವಿಮಾನಗಳು ಕೇವಲ ಕಂಪ್ಯೂಟರ್‌ಗಳಿಗಷ್ಟೇ ಅಲ್ಲದೆ, ವಿಮಾನದ ಹಲವು ಯಾಂತ್ರಿಕ ಭಾಗಗಳನ್ನು ವಿದ್ಯುದೀ ಕರಿಸುತ್ತಿವೆ.