Vishweshwar Bhat Column: ಜಗತ್ತಿನ ಮುಂದೆ ವಿಚಿತ್ರ ಮನವಿ ಇಟ್ಟಿದ್ದ ಜಪಾನ್ ಪ್ರಧಾನಿ !
ಪ್ರಾಯಶಃ 2019ರಲ್ಲಿ ಇರಬಹುದು, ಜಪಾನಿನ ಅಂದಿನ ಪ್ರಧಾನಿ ಅಬೆ ಶಿಂಜೊ ಜಗತ್ತಿನ ಮುಂದೆ ಒಂದು ವಿಚಿತ್ರ ಮತ್ತು ಅಚ್ಚರಿಯ ಮನವಿಯನ್ನು ಮಾಡಿಕೊಂಡಿದ್ದರು. ಅದು ಪತ್ರಿಕೆಗಳಲ್ಲೂ ವ್ಯಾಪಕವಾಗಿ ವರದಿಯಾಗಿತ್ತು. “ನಾವು ಜಪಾನಿಯರು ನಮ್ಮ ಹೆಸರಿನ ಬಗ್ಗೆ ಹೆಚ್ಚು ಒಲವುಳ್ಳವರು. ನಮ್ಮ ಹೆಸರನ್ನು ಯಾರಾ ದರೂ ತಪ್ಪಾಗಿ ಹೇಳಿದರೆ ನಮಗೆ ಬೇಸರವಾಗುತ್ತದೆ. ಯಾರಿಗಾದರೂ ವಿದೇಶಿ ಹೆಸರುಗಳನ್ನು ಉಚ್ಚರಿಸುವುದು ಕಷ್ಟವೇ. ಹಾಗಂತ ತಪ್ಪಾಗಿ ಉಚ್ಚರಿಸುವುದು ಅದಕ್ಕೆ ಸಮರ್ಥನೆ ಆಗಬಾರದು. ಈ ಕಾರಣದಿಂದ ಜಪಾನ್ ಜಗತ್ತಿಗೆ ಒಂದು ವಿನಮ್ರ ವಿನಂತಿಯನ್ನು ಮಾಡಿಕೊಳ್ಳಲು ಬಯಸುತ್ತದೆ


ಇದೇ ಅಂತರಂಗ ಸುದ್ದಿ
vbhat@me.com
ಪ್ರಾಯಶಃ 2019ರಲ್ಲಿ ಇರಬಹುದು, ಜಪಾನಿನ ಅಂದಿನ ಪ್ರಧಾನಿ ಅಬೆ ಶಿಂಜೊ ಜಗತ್ತಿನ ಮುಂದೆ ಒಂದು ವಿಚಿತ್ರ ಮತ್ತು ಅಚ್ಚರಿಯ ಮನವಿಯನ್ನು ಮಾಡಿಕೊಂಡಿದ್ದರು. ಅದು ಪತ್ರಿಕೆಗಳಲ್ಲೂ ವ್ಯಾಪಕವಾಗಿ ವರದಿಯಾಗಿತ್ತು. “ನಾವು ಜಪಾನಿಯರು ನಮ್ಮ ಹೆಸರಿನ ಬಗ್ಗೆ ಹೆಚ್ಚು ಒಲವುಳ್ಳವರು. ನಮ್ಮ ಹೆಸರನ್ನು ಯಾರಾದರೂ ತಪ್ಪಾಗಿ ಹೇಳಿದರೆ ನಮಗೆ ಬೇಸರವಾಗುತ್ತದೆ. ಯಾರಿಗಾದರೂ ವಿದೇಶಿ ಹೆಸರುಗಳನ್ನು ಉಚ್ಚರಿಸುವುದು ಕಷ್ಟವೇ. ಹಾಗಂತ ತಪ್ಪಾಗಿ ಉಚ್ಚರಿಸುವುದು ಅದಕ್ಕೆ ಸಮರ್ಥನೆ ಆಗಬಾರದು. ಈ ಕಾರಣದಿಂದ ಜಪಾನ್ ಜಗತ್ತಿಗೆ ಒಂದು ವಿನಮ್ರ ವಿನಂತಿಯನ್ನು ಮಾಡಿಕೊಳ್ಳಲು ಬಯಸುತ್ತದೆ. ಅದೇನೆಂದರೆ ನಮ್ಮ ಹೆಸರುಗಳನ್ನು ತಪ್ಪಾಗಿ ಹೇಳುವುದನ್ನು ನಿಲ್ಲಿಸಿ. ನಮ್ಮ ಹೆಸರುಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಯಾರ ಹೆಸರೂ ತಪ್ಪು ಹೇಳುವಷ್ಟು ಕಠಿಣವಾಗಿರುವು ದಿಲ್ಲ" ಎಂದು ಖಡಕ್ ಆಗಿ ಹೇಳಿದ್ದರು.
ಇಂಥದ್ದೊಂದು ವಿನಂತಿ ಒಂದು ದೇಶದ ಪ್ರಧಾನಿಯಿಂದ, ಅದರಲ್ಲೂ ಜಪಾನಿನ ಪ್ರಧಾನಿಯಿಂದ ಬಂದಾಗ ಅಚ್ಚರಿಯಾಗುವುದು ಸಹಜವೇ. ಈ ವಿಷಯದಲ್ಲಿ ಅಬೆ ಅವರಿಗೆ ಕೆಟ್ಟ ಅನುಭವ ಆಗಿರಲೂಬಹುದು. ಹೀಗಾಗಿ ಅವರು ಹಾಗೆ ಹೇಳಿದ್ದಿರಬಹುದು. ಸಾಮಾನ್ಯವಾಗಿ ಯಾವ ದೇಶದ ಪ್ರಧಾನಿಯೂ ಜಗತ್ತಿನ ಮುಂದೆ ಇಂಥ ಮನವಿ ಮಾಡಿಕೊಳ್ಳುವುದಿಲ್ಲ, ಇಲ್ಲಿ ತನಕ ಮಾಡಿ ಕೊಂಡಿರಲೂ ಇಲ್ಲ. ಆದರೆ ಅಬೆ ಈ ವಿಷಯದಲ್ಲಿ ಕಟ್ಟುನಿಟ್ಟು. ಅದು ಜಪಾನಿಯರ ಸಂಸ್ಕೃತಿ-ಸಂಪ್ರದಾಯಕ್ಕೆ ಅನುಗುಣವಾಗಿತ್ತು.
ಜಪಾನಿನಲ್ಲಿ, ವ್ಯಕ್ತಿಯ ಹೆಸರುಗಳನ್ನು ಬರೆಯುವಾಗ ಕುಟುಂಬದ ಹೆಸರನ್ನು ಮೊದಲು ಮತ್ತು ವೈಯಕ್ತಿಕ ಹೆಸರನ್ನು ನಂತರ ಬಳಸುವುದು ಸಂಪ್ರದಾಯವಾಗಿದೆ. ಉದಾಹರಣೆಗೆ, ‘ಅಬೆ ಶಿಂಜೋ’ ಎಂಬಲ್ಲಿ ‘ಅಬೆ’ ಕುಟುಂಬದ ಹೆಸರು ಮತ್ತು ‘ಶಿಂಜೋ’ ವೈಯಕ್ತಿಕ ಹೆಸರು. ಈ ಪದ್ಧತಿ ಚೀನಾ, ಕೊರಿಯಾ ಮತ್ತು ವಿಯೆಟ್ನಾಂ ದೇಶಗಳಲ್ಲಿಯೂ ಸಾಮಾನ್ಯವಾಗಿದೆ.
ಇದನ್ನೂ ಓದಿ: Vishweshwar Bhat Column: ಜಪಾನಿಯರ ಹೆಸರುಗಳು
ಆದರೂ, ಸುಮಾರು ಒಂದೂವರೆ ಶತಮಾನದಿಂದ, ಜಪಾನಿ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ವಿರುದ್ಧ ರೀತಿಯಲ್ಲಿ ಬರೆಯಲಾಗುತ್ತಿದೆ. ಈ ಪದ್ಧತಿಯನ್ನು ಅಂತಾರಾಷ್ಟ್ರೀಯ ಸ್ತರಗಳಲ್ಲಿ ಸಾಕಷ್ಟು ಚರ್ಚೆ ಮಾಡಿ, ವಿಶಾಲ ಪ್ರಯತ್ನಗಳ ಭಾಗವಾಗಿ ಅಳವಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಈಗ ಅದು ಪ್ರಮಾಣಿತವಾಗಿದೆ. ಆದರೂ ಈ ತಪ್ಪುಗಳು ಆಗಾಗ ಆಗುತ್ತಲೇ ಇರುವುದರಿಂದ ಶಿಂಜೊ ಅಬೆ ಹಾಗೆ ಹೇಳಿದ್ದರು. ಇದು ಒಂಥರ ನಮ್ಮ ಪ್ರಧಾನಿಯವರನ್ನು ‘ಮೋದಿ ನರೇಂದ್ರ’ ಎಂದು ಸಂಬೋಧಿಸಿದರೆ ಹೇಗೋ ಹಾಗೆ.

ಅಬೆ ಅವರು ಆ ಮನವಿ ಮಾಡಿಕೊಳ್ಳುವಾಗ ಜಪಾನ್ ಹೊಸ ಯುಗಕ್ಕೆ ಪ್ರವೇಶಿಸುತ್ತಿರುವುದಾಗಿ ಘೋಷಿಸಿಕೊಂಡಿತ್ತು. ಆಗ ಜಪಾನ್ ಸರಕಾರ ಈ ಹೆಸರಿನ ವಿಷಯವನ್ನು ಒಮ್ಮೆ ಮತ್ತು ಶಾಶ್ವತ ವಾಗಿ ಇತ್ಯರ್ಥಪಡಿಸಲು ನಿರ್ಧರಿಸಿತ್ತು. ಜಪಾನಿನ ಅಂದಿನ ವಿದೇಶಾಂಗ ಸಚಿವ ಟಾರೊ ಕೊನೊ, ಇನ್ನು ಮುಂದೆ ಪ್ರಧಾನಿಯವರ ಹೆಸರನ್ನು “ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಅವರಂತೆ ಅಬೆ ಶಿಂಜೊ ಎಂದು ಬರೆಯಬೇಕು" ಎಂದು ಹೇಳಿದ್ದರು.
“ನಾನು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ವಿನಂತಿ ಮಾಡಲು ಬಯಸುತ್ತೇನೆ- ನಮ್ಮ ಹೆಸರು ಗಳನ್ನು ಸರಿಯಾಗಿ ಬರೆಯಿರಿ" ಎಂದು ಕೊನೊ ಹೇಳಿದ್ದರು. ಜಪಾನಿನ ಇಂಗ್ಲಿಷ್ ಮಾಧ್ಯಮಗಳು ಇದನ್ನು ಈಗ ಕಟ್ಟುನಿಟ್ಟಾಗಿ ಅನುಸರಿಸುತ್ತಿವೆ ಎಂದು ಅವರು ಹೇಳಿದ್ದರು. ಈ ನಿರ್ಧಾರವು ಜಪಾನಿನ ಸಂಸ್ಕೃತಿಯ ಗೌರವವನ್ನು ಕಾಪಾಡಲು ಮತ್ತು ಪಶ್ಚಿಮ ಪ್ರಭಾವದಿಂದ ಮುಕ್ತಗೊಳ್ಳಲು ಉದ್ದೇಶಿತವಾಗಿದೆ ಎಂದು ಅವರು ಹೇಳಿದ್ದರು.
2019ರ ಸೆಪ್ಟೆಂಬರ್‌ನಲ್ಲಿ, ಜಪಾನಿನ ಶಿಕ್ಷಣ ಸಚಿವಾಲಯವು ಇಂಗ್ಲಿಷ್‌ನಲ್ಲಿ ಜಪಾನಿನ ಹೆಸರನ್ನು ಬರೆಯುವಾಗ ಕುಟುಂಬದ ಹೆಸರನ್ನು ಮೊದಲು ಬಳಸುವಂತೆ ಅಧಿಕೃತವಾಗಿ ಘೋಷಿಸಿತು. ಈ ಬದಲಾವಣೆ 2020ರಲ್ಲಿ ಜಾರಿಗೆ ಬಂತು. ಅಬೆ ಅವರು ಜಪಾನಿನ ಸಂಸ್ಕೃತಿಯ ಪುನರುಜ್ಜೀವನಕ್ಕೆ ಬದ್ಧರಾಗಿದ್ದರು. ಅವರು ತಮ್ಮ ಹೆಸರನ್ನು ‘ಅಬೆ ಶಿಂಜೋ’ ಎಂದು ಉಚ್ಚರಿಸುವಂತೆ ಕೇಳಿದ ಕಾರಣ, ಜಪಾನಿನ ಸಂಸ್ಕೃತಿಯ ಗೌರವವನ್ನು ಕಾಪಾಡುವುದು ಮತ್ತು ಪಶ್ಚಿಮ ಪ್ರಭಾವದಿಂದ ಮುಕ್ತಗೊಳಿಸುವುದು ಆಗಿತ್ತು. ಅವರು ಈ ಬದಲಾವಣೆಯನ್ನು ಜಪಾನಿನ ಸಾಂಸ್ಕೃತಿಕ ಸ್ವಾತಂತ್ರ್ಯ ದ ಪ್ರತೀಕವಾಗಿ ನೋಡಿದರು. ಈ ಬದಲಾವಣೆಯು ಜಾಗತಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ಗಳನ್ನು ಹುಟ್ಟಿಸಿತು. ಕೆಲವು ಮಾಧ್ಯಮಗಳು ಹೊಸ ಹೆಸರಿನ ಕ್ರಮವನ್ನು ಅಳವಡಿಸಿಕೊಂಡರೆ, ಇತರರು ಹಳೆಯ ಕ್ರಮವನ್ನು ಮುಂದುವರಿಸಿದರು.
ಉದಾಹರಣೆಗೆ, The Economist ಮತ್ತು The Diplomat ಮಾಧ್ಯಮಗಳು ಅಬೆ ಶಿಂಜೋ ಎಂಬ ಹೆಸರನ್ನು ಬಳಸಲು ಆರಂಭಿಸಿದವು. ಆದರೆ, The New York Times, BBC ಮತ್ತು The Guardian ಮಾಧ್ಯಮಗಳು ಹಳೆಯ ಕ್ರಮವನ್ನು ಮುಂದುವರಿಸಿದವು. ಅಬೆ ಸುಮ್ಮನಾಗಲಿಲ್ಲ. ಆ ಪತ್ರಿಕೆಗಳಿಗೆ ಪ್ರತ್ಯೇಕವಾಗಿ ವಿನಂತಿಸಿಕೊಂಡರು.
ಜಪಾನಿ ಸ್ವರೂಪವನ್ನು ಇಂಗ್ಲಿಷ್‌ಲ್ಲಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿ ರಾಷ್ಟ್ರೀಯ ಭಾಷಾ ಮಂಡಳಿಯು ಸುಮಾರು 20 ವರ್ಷಗಳ ಹಿಂದೆ ಹೊರಡಿಸಿದ ವರದಿಯನ್ನು ಅವರು ಉಲ್ಲೇಖಿಸಿ ದರು. ಆ ಸಮಯದಲ್ಲಿ ಅದು ಜಾರಿಗೆ ಬಂದಿರಲಿಲ್ಲ. ಅಂತಾರಾಷ್ಟ್ರೀಯ ಸಮುದಾಯ ಮತ್ತು ಜಪಾನಿಯ ರಲ್ಲಿ ಹೆಚ್ಚಿನವರು ತಮ್ಮ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ಕೊನೆಯದಾಗಿ ಕುಟುಂಬದ ಹೆಸರಿ ನೊಂದಿಗೆ ಬರೆಯುವುದನ್ನು ಮುಂದುವರಿಸಿದ್ದರು.
ಆದರೆ ಹೊಸ ಯುಗದೊಂದಿಗೆ ಬದಲಾವಣೆಗೆ ಹೆಚ್ಚಿನ ಒಲವು ಮೂಡುವುದರಿಂದ ಅವರು ಆ ಮನವಿ ಮಾಡಿಕೊಂಡಿದ್ದರು. ಜಪಾನಿನ ಪ್ರಧಾನಿ ಒಲಿಂಪಿಕ್ಸ್ ಕ್ರೀಡಾಕೂಟದ ಸಂದರ್ಭದಲ್ಲಿ ಏರ್ಪಡಿಸಿದ ಔತಣಕೂಟದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರತಿನಿಧಿಗಳ ಜತೆ ಮಾತಾಡು ವಾಗ, ನಮ್ಮ ಹೆಸರುಗಳನ್ನು ಸರಿಯಾಗಿ ಬರೆಯಿರಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರಂತೆ.
ಅವರು ವಿದೇಶ ಪ್ರವಾಸದಲ್ಲಿದ್ದಾಗ, ವಿದೇಶಾಂಗ ಇಲಾಖೆ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಒಂದು ಮುದ್ರಿತ ಚೀಟಿ ಕೊಟ್ಟು, “ಇದು ನಮ್ಮ ಪ್ರಧಾನಿ ಮತ್ತು ಇತರ ಗಣ್ಯರ ಹೆಸರುಗಳು. ಈ ಎಲ್ಲ ಹೆಸರುಗಳನ್ನು ಹೀಗೆ ಬರೆಯಿರಿ" ಎಂದು ಮನವಿ ಮಾಡಿಕೊಳ್ಳುತ್ತಿದ್ದರಂತೆ. ಅಬೆ ಅವರು ವಿದೇಶ ಪ್ರಯಾಣ ಮಾಡುವಾಗ, ತಾವು ಭೇಟಿಯಾಗಲಿರುವ ದೇಶದ ಪ್ರಧಾನಿ, ಅಧ್ಯಕ್ಷ ಮತ್ತು ಗಣ್ಯರ ಹೆಸರುಗಳನ್ನು ಬಾಯಿಪಾಠ ಮಾಡುತ್ತಿದ್ದರಂತೆ. ಹತ್ತಾರು ಸಲ ಸರಿಯಾಗಿ ಉಚ್ಚರಿಸಿ ಅಭ್ಯಾಸ ಮಾಡಿಕೊಳ್ಳುತ್ತಿದ್ದರಂತೆ.
ಉದಾಹರಣೆಗೆ, ಅವರು ಭಾರತಕ್ಕೆ ಭೇಟಿ ನೀಡುವ ಮುನ್ನ, ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳನ್ನು ಕರೆಯಿಸಿಕೊಂಡು, ತಾವು ಭೇಟಿ ಮಾಡುವ ಗಣ್ಯರ ಫೋಟೋಗಳನ್ನು ಇಟ್ಟು ಕೊಂಡು ಅವರ ಹೆಸರು, ಅವರ ಕುಟುಂಬದ ಹೆಸರನ್ನು ಸರಿಯಾಗಿ ಕೇಳಿ ಉರು ಹೊಡೆಯುತ್ತಿದ್ದ ರಂತೆ. ಯಾವ ಕಾರಣಕ್ಕೂ ಹೆಸರು ಹೇಳುವಾಗ ತಪ್ಪಾಗಬಾರದು ಎಂಬುದು ಅವರ ಆಶಯವಾ ಗಿತ್ತು.

ಜಪಾನಿನಿಂದ ಕಲಿತಿದ್ದೇನು?
ಜಪಾನಿನಲ್ಲಿ ಮೂರು ವರ್ಷಗಳ ಕಾಲ ಇದ್ದು ಇತ್ತೀಚೆಗೆ ಬೆಂಗಳೂರಿಗೆ ಮರಳಿದ ಪಿ.ಮುರಳಿ ರಾವ್ ಅವರನ್ನು, “ನೀವು ಜಪಾನಿನಿಂದ ಏನನ್ನು ಕಲಿತಿರಿ?" ಎಂದು ಕೇಳಿದೆ. ಅವರು ನೀಡುವ ಉತ್ತರದ ಬಗ್ಗೆ ನಾನು ಅತೀವ ಕೌತುಕವನ್ನು ಹೊಂದಿದ್ದೆ. ಮುರಳಿಯವರು ಸ್ವಲ್ಪವೂ ಯೋಚಿಸದೇ ನೇರ ವಾಗಿ, “ನಾನು ಪ್ರಕೃತಿಯನ್ನು ಇನ್ನಷ್ಟು ಗಾಢವಾಗಿ ಪ್ರೀತಿಸುವುದನ್ನು ಕಲಿತೆ" ಎಂದು ಹೇಳಿದರು. ನಾನು ಅವರಿಂದ ಆ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ಆದರೆ ಆ ಉತ್ತರ ಅತ್ಯಂತ ಸಮಂಜಸ ವಾಗಿತ್ತು. ಜಪಾನಿನ ಬದುಕನ್ನು ಗಾಢವಾಗಿ ಅನುಭವಿಸಿದವರು ಮಾತ್ರ ಆ ಉತ್ತರ ನೀಡಲು ಸಾಧ್ಯ.
ಮುರಳಿ ರಾವ್ ಹೇಳಿದ್ದು ಹೀಗೆ: ಜಪಾನಿನ ಯಾವುದೇ ನಗರಕ್ಕೆ ಹೋದರೂ ಢಾಳಾಗಿ ಕಾಣುವುದು ಅಲ್ಲಿನ ಸುಂದರ ಪ್ರಕೃತಿ. ಕಣ್ಣು ಹಾಯಿಸಿದ ಕಡೆಗಳಲ್ಲ ಮನಸೂರೆಗೊಳ್ಳುವ ಪ್ರಕೃತಿ ಸೌಂದರ್ಯ. ಮರ-ಗಿಡಗಳೂ ಒಂದು ಶಿಸ್ತಿಗೆ ಒಳಪಟ್ಟವರಂತೆ ಗೋಚರಿಸುತ್ತವೆ. ಪ್ರಕೃತಿ ಬಗ್ಗೆ ಅಷ್ಟೇನೂ ಒಲವು ಇಲ್ಲದವರಿಗೂ, ಜಪಾನಿನ ಪರಿಸರ ಉತ್ಕಟ ಪ್ರೀತಿ ಮೂಡುವಂತೆ ಮಾಡುತ್ತದೆ.
ಅಲ್ಲಿನ ಬದುಕಿನಲ್ಲಿ ನಿಸರ್ಗಕ್ಕೆ ಒಂದು ಪವಿತ್ರ ಸ್ಥಾನವನ್ನು ನೀಡಿದ್ದಾರೆ. ನದಿ, ನೀರು, ಮರ, ಭೂಮಿಯನ್ನು ಅವರು ಅಕ್ಷರಶಃ ಪ್ರೀತಿಸುತ್ತಾರೆ, ಪೂಜಿಸುತ್ತಾರೆ. ಇದು ಅವುಗಳ ಸಂರಕ್ಷಣೆಯಲ್ಲಿ ಎದ್ದು ಕಾಣುತ್ತದೆ. ಟೋಕಿಯೋ ನಗರದ ನನ್ನ ಆಫೀಸಿರುವ ಎಪ್ಪತ್ತೇಳನೇ ಮಹಡಿಯಲ್ಲೂ ಒಂದು ಪುಟ್ಟ ಮರವಿದೆ. ಆಫೀಸಿಗೆ ಹೋಗುವಾಗ, ಬರುವಾಗ ಎಲ್ಲರೂ ಅದಕ್ಕೆ ನಮಸ್ಕರಿಸುತ್ತಾರೆ. ಜಪಾನಿಯರ ಬದುಕು ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ.
ಅವರು ನೆಲದ ಮೇಲೆ, ಚಾಪೆಯ ಮೇಲೆ ಕುಳಿತುಕೊಳ್ಳುವುದನ್ನು ಬಯಸುತ್ತಾರೆ. ಮನೆಯ ಪಕ್ಕ ದಲ್ಲಿ ಹರಿಯುವ ಕಾಲುವೆಯ ನೀರು ಸಹ ಶುದ್ಧ ತಿಳಿ, ಸ್ಪಟಿಕ ಸ್ಪಷ್ಟ. ಪುಟ್ಟ ಜಾಗವಿದ್ದರೂ ಅಂದು ಸಣ್ಣ ಉದ್ಯಾನ. ಮನೆಯಲ್ಲಿ ಗಾಳಿ, ಬೆಳಕು ಧಾರಾಳ. ಜಪಾನಿಯರಿಗೆ ‘ಫಾರೆಸ್ಟ್ ಬಾತಿಂಗ್’ ಅಂದರೆ ಬಹಳ ಇಷ್ಟ. ಇದು ಪ್ರಕೃತಿಯೊಂದಿಗೆ ಸಮನ್ವಯ ಸಾಧಿಸುವ ಒಂದು ಅನೂಹ್ಯ ಕ್ರಿಯೆ.
ಅರಣ್ಯದ ವಾತಾವರಣವನ್ನು ಹೀರಿಕೊಳ್ಳುವ ಈ ಕ್ರಿಯೆ ಅಲ್ಲಿನ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಅರಣ್ಯದಲ್ಲಿ ಸಮಯ ಕಳೆಯುವುದು, ಅಲ್ಲಿ ನಡೆಯುವುದು, ಮರಗಳ ಸುತ್ತಲೂ ನಿಂತು ಪ್ರಕೃತಿಯ ಶಬ್ದಗಳನ್ನು ಕೇಳುವುದು, ವಾಸನೆ ಹೀರುವುದು, ಅನುಭವಿಸುವುದು, ಪ್ರಕೃತಿಯ ಸೌಂದರ್ಯವನ್ನು ಗಮನಿಸುವುದು ಮುಖ್ಯ ಚಟುವಟಿಕೆ.
ಇದು ಯಾವುದೇ ಶಾರೀರಿಕ ಶ್ರಮವಿಲ್ಲದೇ, ಮನಸ್ಸನ್ನು ಶಾಂತಗೊಳಿಸುವ ಒಂದು ಸರಳ ವಿಧಾನ. ಜಪಾನಿನಲ್ಲಿ ಇದ್ದಷ್ಟು ದಿನ ಪರಿಸರ ನಮ್ಮೊಳಗೆ ಗಾಢವಾಗಿ ಇಳಿಯುತ್ತದೆ. ಇದಕ್ಕೆ ಕಾರಣ ಜಪಾನಿ ಯರು ಪ್ರಕೃತಿಗೆ ನೀಡುವ ಮಹತ್ವ. ಅದು ಸ್ವಾಭಾವಿಕವಾಗಿ ನಮ್ಮನ್ನು ಪ್ರಭಾವಿಸದೇ ಹೋಗುವು ದಿಲ್ಲ.
ಶೋಗಾನೈ ಮನಸ್ಥಿತಿ
ಜಪಾನಿಯರು ನಿತ್ಯ ಜೀವನದಲ್ಲಿ ‘ಶೋಗಾನೈ’ ಎಂಬ ಒಂದು ಪದವನ್ನು ಆಗಾಗ ಬಳಸುವು ದುಂಟು. ಇದರ ಅರ್ಥ- “ನಿಮ್ಮಿಂದ ಯಾವುದನ್ನು ನಿಯಂತ್ರಿಸಲು ಸಾಧ್ಯವಿಲ್ಲವೋ, ಅದನ್ನು ಬಿಟ್ಟುಬಿಡಿ". ಅದನ್ನು ಇಂಗ್ಲಿಷಿನಲ್ಲಿ let go of what you cannot control ಎನ್ನಬಹುದು. ಇದು ನಮ್ಮ ‘ಚಲ್ತಾ ಹೈ’ ಮನಸ್ಥಿತಿ ಇದ್ದ ಹಾಗೆ. ಇದು ಕೇವಲ ಒಂದು ಪದವಲ್ಲ. ಇದು ಜಪಾನಿ ಜನತೆ ಯ ಜೀವನಪದ್ಧತಿ, ದರ್ಶನ ಮತ್ತು ಸಹನೆಯ ಸಂಕೇತವಾಗಿದೆ.
ಶೋಗಾನೈ ಕೇವಲ ನಕಾರಾತ್ಮಕ ಸ್ವೀಕಾರವಲ್ಲ. ಇದು ಒಂದು ರೀತಿಯ ಧೈರ್ಯ. ಪ್ರತಿಕೂಲತೆ ಯನ್ನು ಎದುರಿಸುವ, ತಪ್ಪಿಸಲಾಗದ ಬದಲಾವಣೆಗಳನ್ನು ಒಪ್ಪಿಕೊಳ್ಳುವ, ಮತ್ತು ಪ್ರಗತಿಯತ್ತ ಮುನ್ನುಗ್ಗುವ ಆತ್ಮಬಲ. ಉದಾಹರಣೆಗೆ, ಭೂಕಂಪದಲ್ಲಿ ಮನೆಯು ನಾಶವಾದಾಗ, ಜಪಾನಿ ವ್ಯಕ್ತಿಯ ಪ್ರತಿಕ್ರಿಯೆ- ‘ಶೋಗಾನೈ’. ಅಂದರೆ ನೋವು ಇದ್ದರೂ ಅವರು ಆ ಸ್ಥಿತಿಯನ್ನು ತಾಳ್ಮೆ ಯಿಂದ ಒಪ್ಪಿಕೊಳ್ಳುತ್ತಾರೆ. ಕೆಲಸದಲ್ಲಿ ನಿರೀಕ್ಷಿತ ಫಲಿತಾಂಶ ಸಿಗದಿದ್ದಾಗಲೂ ‘ಶೋಗಾನೈ’ ಅಂತಾರೆ.
ಭೂಕಂಪ, ಸುನಾಮಿ, ಜ್ವಾಲಾಮುಖಿ ಮುಂತಾದವುಗಳು ಜಪಾನಿನಲ್ಲಿ ಸಾಮಾನ್ಯ. ಈ ಆಘಾತ ಗಳನ್ನು ಎದುರಿಸುವ ಸಾಮಾನ್ಯ ನುಡಿಮುತ್ತಾಗಿ ಶೋಗಾನೈ ಬೆಳೆದಿದೆ. ಎರಡನೇ ಮಹಾ ಯುದ್ಧದ ನಂತರ ಜಪಾನ್ ಸಂಪೂರ್ಣವಾಗಿ ಧ್ವಂಸಗೊಂಡಿತ್ತು. ಆ ಸಂದರ್ಭದಲ್ಲಿ ಶೋಗಾನೈ ತತ್ವದಿಂದಲೇ ಜನ ಮತ್ತೆ ಎದ್ದು ನಿಂತಿದ್ದು.
ಜಪಾನಿನ ಸಮಾಜದಲ್ಲಿ ಶೋಗಾನೈ ನುಡಿಮುತ್ತು ಅನೇಕ ರೀತಿ ಪ್ರತಿಬಿಂಬಿತವಾಗಿದೆ. ಅಧಿಕಾರಿ ಗಳಿಂದ ಆಗದ ವಿಷಯಗಳನ್ನು ಸಾರ್ವಜನಿಕರು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಕೆಲಸದ ತೀವ್ರ ಒತ್ತಡದ ನಡುವೆಯೂ ನೌಕರರು ಶೋಗಾನೈ ಮನೋಭಾವದಿಂದ ತಮ್ಮ ಕೆಲಸ ಮುಂದುವರಿಸು ತ್ತಾರೆ. ಸಂಬಂಧ, ಆರೋಗ್ಯ ಅಥವಾ ಜೀವನದ ಸಂಕಷ್ಟಗಳಲ್ಲಿ ಸಹನೆ ಮತ್ತು ಸಮಾಧಾನದಿಂದ ಬದುಕುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ.
ನಮ್ಮ ನಿತ್ಯಜೀವನದಲ್ಲಿ ‘ಶೋಗಾನೈ’ ತತ್ವವನ್ನು ಹೇಗೆ ಅನುಸರಿಸಬಹುದು? ಕಷ್ಟಗಳು ಬಂದಾಗ ತಕ್ಷಣ ನಿರಾಶೆಗೊಳಗಾಗದೇ, “ಇದನ್ನು ನನ್ನಿಂದ ನಿಯಂತ್ರಿಸಲಾಗದು" ಎಂಬ ಮನೋಭಾವದಿಂದ ಮುಂದೆ ಸಾಗುವುದು. ಎಲ್ಲರಿಗೂ ತಮ್ಮದೇ ಆದ ಪರಿಪೂರ್ಣತೆ ಇಲ್ಲದಿರಬಹುದು, ಅವರನ್ನು ಬದಲಾಯಿಸುವ ಬದಲು, ಅವರ ಸ್ವಭಾವವನ್ನು ಒಪ್ಪಿಕೊಳ್ಳುವುದು.
ವೈಫಲ್ಯವನ್ನು ತಾತ್ಕಾಲಿಕವಾಗಿ ಒಪ್ಪಿಕೊಂಡು, ಮರುಪ್ರಯತ್ನ ಮಾಡುವ ಶಕ್ತಿಯನ್ನು ಬೆಳೆಸಿ ಕೊಳ್ಳುವುದು. ಶೋಗಾನೈ ಎನ್ನುವುದು ತಾಳ್ಮೆಯ ತತ್ವ, ಅದು ಜಪಾನಿನ ಶಕ್ತಿ. ಅದು ಒಂದು ಜೀವನ ಮೌಲ್ಯ, ಒಂದು ದೃಷ್ಟಿಕೋನ, ಒಂದು ಧೈರ್ಯದ ಭಾಷೆ.
ನಮ್ಮ ಕೊಪುರಿ ಚಪ್ಪಲಿಯಂತೆ
ಜಪಾನಿನ ಪಾದರಕ್ಷೆಗಳಾದ ‘ಗೆಟಾ’ ಮತ್ತು ‘ಝೋರಿ’ಗಳ ಬಗ್ಗೆ ಕೇಳಿದ್ದೀರಾ ಎಂದು ಆ ದೇಶದಲ್ಲಿ ಕೆಲ ವರ್ಷಗಳ ಕಾಲ ನೆಲೆಸಿದ್ದ ಸ್ನೇಹಿತರೊಬ್ಬರು ಕೇಳಿದ್ದರು. ನನಗೆ ಆ ಸಂಗತಿ ಗೊತ್ತಿರಲಿಲ್ಲ. ನಂತರ ಅವರೇ ಅವುಗಳ ಬಗ್ಗೆ ವಿವರಿಸಿದರು. “ಪಾದರಕ್ಷೆಗಳು ಜಪಾನಿನ ಸಂಸ್ಕೃತಿಯ ಅಮೂಲ್ಯ ಭಾಗಗಳಾಗಿವೆ. ಇವು ಕೇವಲ ಪಾದರಕ್ಷೆಗಳಷ್ಟೇ ಅಲ್ಲ, ಜಪಾನಿನ ಪರಂಪರೆ, ಕಲಾ ನೈಪುಣ್ಯ ಮತ್ತು ಜೀವನಶೈಲಿಯ ಪ್ರತಿಬಿಂಬಗಳಾಗಿವೆ. ಇವುಗಳ ವಿನ್ಯಾಸ, ಬಳಕೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರ್ಥಮಾಡಿಕೊಳ್ಳುವುದು, ಜಪಾನಿನ ಸಂಸ್ಕೃತಿಯನ್ನು ಆಳವಾಗಿ ತಿಳಿಯಲು ಸಹಾಯ ಮಾಡು ತ್ತದೆ" ಎಂದಾಗ ತುಸು ಸೋಜಿಗವಾಯಿತು.
ಗೆಟಾ ಪಾದರಕ್ಷೆಗಳ ಇತಿಹಾಸವು ನಾರಾ ಕಾಲಘಟ್ಟ (710-794)ಕ್ಕೆ ಸೇರಿದಷ್ಟು ಹಳೆಯದು. ಇವು ಚೀನಾದ ದಕ್ಷಿಣ ಭಾಗದಿಂದ ಜಪಾನಿಗೆ ಪರಿಚಯವಾಗಿದ್ದು, ಹೀಯಾನ್ ಕಾಲಘಟ್ಟದ (794-1185) ಅಂತ್ಯದ ಭಾಗದಲ್ಲಿ ಜಪಾನಿನಲ್ಲಿ ಬಳಕೆಯಲ್ಲಿದ್ದವು ಎಂಬ ಪುರಾವೆಗಳು ಇವೆಯಂತೆ. ಇಡೋ ಕಾಲಘಟ್ಟದಲ್ಲಿ (1603-1868), ಗೆಟಾ ಪಾದರಕ್ಷೆಗಳು ಸಾಮಾನ್ಯ ಜನರಲ್ಲಿ ಹೆಚ್ಚು ಜನಪ್ರಿಯ ವಾಗಿದ್ದವಂತೆ.
ಗೆಟಾ ಪಾದರಕ್ಷೆಗಳು ಸಾಮಾನ್ಯವಾಗಿ ಮೂರು ಭಾಗಗಳಿಂದ ಕೂಡಿವೆ- ಪಾದವನ್ನು ಇರಿಸುವ ಸಮತಟ್ಟಾದ ಮರದ ತಳಹದಿ, ಪಾದರಕ್ಷೆಗೆ ಎತ್ತರವನ್ನು ನೀಡುವ ಮರದ ಪಟ್ಟಿ ಮತ್ತು ಮೆಟ್ಟಿಲಿ ನಂತೆ ಪಾದವನ್ನು ಸ್ಥಿರವಾಗಿ ಹಿಡಿಯುವ ಬಟ್ಟೆಯ ಪಟ್ಟಿ. ಗೆಟಾ ಪಾದರಕ್ಷೆಗಳನ್ನು ಸಾಮಾನ್ಯ ವಾಗಿ ಯುಕಾತಾ ಅಥವಾ ಸಾಂಪ್ರದಾಯಿಕ ಕಿಮೋನೊ ಉಡುಪಿನೊಂದಿಗೆ ಧರಿಸಲಾಗುತ್ತವೆ.
ಇವು ಪಾದಗಳನ್ನು ನೆಲದ ತೇವದಿಂದ ಮತ್ತು ಧೂಳಿನಿಂದ ರಕ್ಷಿಸಲು ಸಹಾಯಕ. ಇತ್ತೀಚಿನ ದಿನಗಳಲ್ಲಿ, ಗೆಟಾ ಪಾದರಕ್ಷೆಗಳು ಫ್ಯಾಷನ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಇವು ನಮ್ಮ ಕೊಪುರಿ ಚಪ್ಪಲಿಯಂತೆ.
ಝೋರಿ ಪಾದರಕ್ಷೆಗಳ ಇತಿಹಾಸವು ಜಪಾನಿನ ಪ್ರಾಚೀನ ಕಾಲಕ್ಕೆ ಸೇರಿದೆ. ಇವನ್ನು ಸಾಮಾನ್ಯವಾಗಿ ಭತ್ತದ ಹುಲ್ಲು, ಮರ, ಚರ್ಮ ಅಥವಾ ರಬ್ಬರ್‌ನಿಂದ ತಯಾರಿಸಲಾಗುತ್ತವೆ. ಝೋರಿ ಪಾದರಕ್ಷೆ ಗಳು ಪಾದರಕ್ಷೆಗಳ ಶ್ರೇಣಿಯಲ್ಲಿ ಹೆಚ್ಚು ಸೌಕರ್ಯ ಮತ್ತು ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತವೆ. ಝೋರಿ ಪಾದರಕ್ಷೆಗಳನ್ನು ಅಧಿಕೃತ ಸಂದರ್ಭಗಳಲ್ಲಿ, ವಿಶೇಷವಾಗಿ ವಿವಾಹ ಸಮಾರಂಭಗಳು ಮತ್ತು ಚಾಯ್ ಸಮಾರಂಭಗಳಲ್ಲಿ ಧರಿಸಲಾಗುತ್ತವೆ. ಇವು ಪಾದಗಳಿಗೆ ಹಿತ ನೀಡುವ ಜತೆಗೆ, ಉಡುಪಿನ ಸೌಂದರ್ಯವನ್ನು ಹೆಚ್ಚಿಸುತ್ತವೆ.
ಇತ್ತೀಚಿನ ದಿನಗಳಲ್ಲಿ, ಝೋರಿ ಪಾದರಕ್ಷೆಗಳು ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದ್ದು, ಪಾಶ್ಚಾತ್ಯ ಉಡುಪಿನೊಂದಿಗೆ ಸಹ ಇವನ್ನು ಧರಿಸಲಾಗುತ್ತವೆ.