ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ನಡೆಸಿದಂತೆ ನಡೆದುಹೋದ ಬೊಂಬೆಯಾಟದ ಪಾತ್ರಧಾರಿ

ಉಮೇಶ್ ನನ್ನ ಚೈಲ್ಡ್‌ ಹುಡ್ ಹೀರೋ. ಹೇಗೆ ಅಂತ ಕೇಳ್ತೀರಾ? ನಮ್ಮ ಶಾಲೆಯಲ್ಲಿ ತೋರಿಸಿದ ಮೊದಲ ಸಿನಿಮಾ ‘ಮಕ್ಕಳ ರಾಜ್ಯ’. ಶಾಲೆಯ ದೊಡ್ಡ ಹಾಲ್‌ನಲ್ಲಿ ಕಪ್ಪುಹಲಗೆ ಮೇಲೆ ಬೆಳ್ಳಿ ಪರದೆ ಹಾಕಿ, ಉಚಿತವಾಗಿ ಸಿನಿಮಾ ತೋರಿಸಿದ ಕಪ್ಪುಬಿಳುಪಿನ ಸಿನಿಮಾ. ಟಾಕೀಸ್‌ನಲ್ಲಲ್ಲದೇ ಬೇರೆ ಕಡೆಯೂ ಸಿನಿಮಾ ಮೂಡಬಲ್ಲದು ಅನ್ನೋದೇ ಅವತ್ತಿನ ಅಚ್ಚರಿ.

ಪದಸಾಗರ

ಯಾರಾದರೂ ನಿಧನರಾದ ಬೆನ್ನಲ್ಲಿ ಅವರ ಕುರಿತ ನೆನಪುಗಳು ತೇಲಿ ಬರುವುದು ಬಹಳ ಸಹಜ ಕ್ರಿಯೆ. ಕೆಲವರು ಮಾತನಾಡಿ ಹಗುರಾಗುತ್ತಾರೆ. ಬರೆಯಲು ಬರುವವರು ಬರೆದು ತಮ್ಮ ಭಾವಭಾರ ಹೊರ ಹಾಕುತ್ತಾರೆ. ಒಬ್ಬೊಬ್ಬರದು ಒಂದೊಂದು ರೀತಿ. ಕೆಲವರ ಸಾವು ಕೆಲವರನ್ನು ಮೌನ ವಾಗಿಸುತ್ತದೆ.

ಸೋಷಿಯಲ್ ಮೀಡಿಯಾ ಯುಗದಲ್ಲಿ ಯಾರಾದರೂ ಸತ್ತಾಕ್ಷಣ ಮೊಬೈಲ್ ಗ್ಯಾಲರಿಗಳು ಆಕ್ಟಿವ್ ಆಗುತ್ತವೆ. ತಮ್ಮೊಂದಿಗೆ ಆ ವ್ಯಕ್ತಿಯ ಫೋಟೋ ಇದೆಯಾ ಎಂದು ಕಣ್ಣುಗಳು ಮತ್ತು ನೆನಪುಗಳು ಹುಡುಕಲಾರಂಭಿಸುತ್ತವೆ. ಅವರೊಂದಿಗೆ ತಾವಿದ್ದ ಫೋಟೋ ಹಾಕಿ ಶ್ರದ್ಧಾಂಜಲಿ ಸೂಚಿಸಿ ಲೈಕು ಕಮೆಂಟು ಎಣಿಸಿದರೇ ಕೆಲವರಿಗೆ ಸಮಾಧಾನ.

ಕೆಲವೊಮ್ಮೆಯಂತೂ ಹಾಗೆ ಸತ್ತವರ ಜತೆಗಿನ ತಮ್ಮ ಫೋಟೋ ಹಾಕಿ ‘ಆರ್‌ಐಪಿ’ ಎಂಬ ಮೂರಕ್ಷರ ಗೀಚುವವರನ್ನು ಕಮೆಂಟಿನಲ್ಲಿ ಕೇಳಬೇಕೆನಿಸುತ್ತದೆ- ‘ಸತ್ತವರು ಯಾರು, ಅವರಾ ನೀವಾ?’ ಅಂತ! ಈಗಂತೂ ಸೋಷಿಯಲ್ ಮೀಡಿಯಾ ಅನ್ನೋದು ಯಾರದ್ದಾದರೂ ಸಾವಿಗೆ ಕಾಯುತ್ತಿದೆಯೇನೋ ಎಂಬಂತೆ ಹಪಹಪಿಸುತ್ತಿರುತ್ತದೆ.

‘ಚಿತ್ರಲೇಖ’ ಎಂಬ ಹಳೆಯ ಕನ್ನಡ ಸಿನಿಮಾದಲ್ಲಿ ೩ ಪಾತ್ರಗಳಿದ್ದವು. ಆ ಊರಲ್ಲಿ ಸಾವಾಗುವು ದನ್ನೇ ಕಾಯುತ್ತಾ ‘ನಾನು ಚಟ್ಟ ರೆಡಿ ಮಾಡಿಬಿಡ್ತೀನಿ, ನಾನು ಶಂಖ ಊದಿ ಬಿಡ್ತೀನಿ, ನಾನು ಜಾಗಟೆ ಬಡಿದೇಬಿಡ್ತೀನಿ’ ಎಂದು ಕನವರಿಸುವ ಪಾತ್ರಗಳವು. ಸೋಷಿಯಲ್ ಮೀಡಿಯಾ ಕೂಡ ಹಾಗೆಯೇ. ಬದುಕಿರುವಾಗಲೇ ಸಾವಿನ ಸುದ್ದಿ ಹಾಕಿ ಸಂತಾಪದ ಸುರಿಮಳೆ ಸುರಿಸುವ ಹುಸಿಜಗತ್ತು!

ಇದನ್ನೂ ಓದಿ: Naveen Sagar Column: ಸೋಷಿಯಲ್‌ ಮೀಡಿಯಾ ಕಾಲದ ಎಮೋಷನಲ್‌ ಕಥೆಗಳು !

ಅಂದಿನ ಕಾಲದಲ್ಲಿ ಭೋಜರಾಜರು ತಾವು ಬದುಕಿದ್ದಾಗಲೇ ಕಾಳಿದಾಸನಿಂದ ತಮ್ಮ ಚರಮಗೀತೆ ಕೇಳಲು ಹಾತೊರೆದಿದ್ದರು. ಅವರ ಯುಗದಲ್ಲಿ ಸೋಷಿಯಲ್ ಮೀಡಿಯಾ ಇದ್ದಿದ್ದರೆ ಅದೆಷ್ಟೋ ಸಲ ಅವರ ಆಸೆಯನ್ನು ಈಡೇರಿಸಿ ಬಿಡುತ್ತಿದ್ದರು ಇಲ್ಲಿನ ಪ್ರಜೆಗಳು!

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯೊಬ್ಬರು ತೀರಿಕೊಂಡಾಗ ಅವರ ಬಗ್ಗೆ ಬರೆಯ ಬೇಕೆನಿಸಿ ದಾಗಲೆಲ್ಲ ನನ್ನನ್ನು ಮೊದಲು ಕೈಜಗ್ಗುತ್ತಿದ್ದುದು ರವಿ ಬೆಳಗೆರೆಯವರು ಹಾ.ಮಾ. ನಾಯಕರನ್ನು ವ್ಯಂಗ್ಯ ಮಾಡುತ್ತಿದ್ದ ರೀತಿ. ಹಾ.ಮಾ. ನಾಯಕರನ್ನು ರವಿ ಬೆಳಗೆರೆ ‘ಸಕೇಶಿ ಹೆಣ್ಣು ಮಗಳು’ ಅಂತೆಲ್ಲ ಟ್ರಾಲ್ ಮಾಡುತ್ತಿದ್ದರು. ಆ ಪದ ಇವತ್ತಿಗೂ ಮನಸಲ್ಲಿ ಅಚ್ಚೊತ್ತಿ ಬಿಟ್ಟಿದೆ. ಸಕೇಶಿ ಹೆಣ್ಣು ಮಗಳು ಅಂತ ರವಿ ಬೆಳಗೆರೆ ಮೊತ್ತಮೊದಲಿಗೆ ಬರೆದಾಗ ಹಾ.ಮಾ.ನಾಯಕರ ಹೇರ್ ಸ್ಟೈಲ್ ಅನ್ನು ಮತ್ತೊಮ್ಮೆ ಹೋಗಿ ಗಮನಿಸಿದ್ದೆ. ನಡುಬೈತಲೆ, ಕತ್ತಿನ ತನಕ ಇಳಿಬಿದ್ದ ಬೆಳ್ಳನೆಯ ಕೂದಲು, ಕ್ಲೀನ್ ಶೇವ್ ಮುಖ ಇದನ್ನೆಲ್ಲ ನೋಡಿದಾಗ, ನಾನು ಅದುವರೆಗೂ ಓದಿದ್ದ ಹಾ.ಮಾ. ನಾಯಕರ ಬರಹ, ಬರಹದ ಮೂಲಕ ಮತ್ತು ಭಾವಚಿತ್ರದ ಮೂಲಕ ಅವರನ್ನು ಊಹಿಸಿಕೊಂಡಿದ್ದ ರೀತಿ ಎಲ್ಲ ತಲೆ ಕೆಳಗಾಗಿ ಹೋಗಿತ್ತು.

Umesh R

ಹಾ.ಮಾ.ನಾಯಕರನ್ನು ‘ಶ್ರದ್ಧಾಂಜಲಿ ಬರಹಗಾರ’ ಎಂಬ ಲೆವೆಲ್ಲಿಗೆ ಇಳಿಸಿ ಬಿಟ್ಟಿದ್ದರು ರವಿ ಬೆಳಗೆರೆ. ‘ಯಾರಾದರೂ ಸತ್ತರೆ ಅವರ ಬಗೆಗಿನ ಬರಹ ಎಲ್ಲಿ ಸಿಗದೇ ಹೋದರೂ ಆ ವಾರದ ಹಾ.ಮಾ. ನಾಯಕ್ ಅಂಕಣದಲ್ಲಿ ಇರುತ್ತದೆ’ ಎಂಬ ಇಮೇಜ್ ಬಿಲ್ಡ್ ಮಾಡಿಬಿಟ್ಟಿದ್ದರು ರವಿ ಬೆಳಗೆರೆ. ‌

‘ಮುಂದಿನ ದಿನಗಳಲ್ಲಿ ಸಾಯಲಿರುವವರ ಆಬಿಚ್ಯುಯರಿಗಳನ್ನೂ ಹಾ.ಮಾ.ನಾಯಕ್ ಈಗಲೇ ಬರೆದಿಟ್ಟಿರುತ್ತಾರೆ’ ಎಂದು ಕಾಲೆಳೆಯುತ್ತಿದ್ದರು. ಅಷ್ಟಕ್ಕೂ ಸಮಾಧಾನವಾಗದೇ, ‘ತಮ್ಮ ಸಾವಿನ ಸಂತಾಪಬರಹವನ್ನೂ ಅವರು ಈಗಾಗಲೇ ಬರೆದಿಟ್ಟಿರ್ತಾರೆ’ ಎಂದು ವ್ಯಂಗ್ಯವನ್ನು ಪರಮಾವಧಿಗೆ ಕೊಂಡೊಯ್ಯುತ್ತಿದ್ದರು.

ರವಿ ಬೆಳಗೆರೆಗೆ ಹಾ.ಮಾ. ನಾಯಕರ ಬಗ್ಗೆ ಏನಾದರೂ ದ್ವೇಷ, ಮತ್ಸರ, ವೃತ್ತಿವೈಷಮ್ಯ ಇತ್ಯಾದಿ ಗಳಿದ್ದವೇ? ಉಹೂಂ. ಅದೊಂದು ಕೈಕೆರೆತಕ್ಕೆ ಹುಟ್ಟುತ್ತಿದ್ದ ಗೇಲಿ ಅಷ್ಟೆ. ಅಂದಿನ ಟಿಪಿಕಲ್ ಟ್ಯಾಬ್ಲಾಯ್ಡ್‌ ಜರ್ನಲಿಸಮ್ಮಿನ ಭಾಗವೆಂಬಂತೆ ಅಂಥವು ಬರುತ್ತಿದ್ದವು.

ರವಿ ಬೆಳಗೆರೆಯನ್ನು ಆ ರೀತಿ ಗಾಢವಾಗಿ ಓದುತ್ತಿದ್ದ ಪರಿಣಾಮದಿಂದ ಬಹಳಷ್ಟು ವಿಷಯಗಳು ಈ ರೀತಿ ನನ್ನನ್ನು ಅನಗತ್ಯ ಅವಲೋಕನಕ್ಕೆ ಒಡ್ಡುತ್ತಿದ್ದವು. ನಿಧನರಾದ ಯಾರ ಕುರಿತಾದರೂ ಬರೆ ಯಲು ಹೊರಟಾಗ, ‘ನಾನು ಯಾರ ಕಣ್ಣಲ್ಲಿ ಹಾ.ಮಾ. ನಾಯಕ್ ಆಗುತ್ತೇನೋ...?’ ಎಂಬ ಅಳುಕು ಹೊಮ್ಮುತ್ತಿತ್ತು.

ಹಾಗಂತ ಬರೆಯಬೇಕೆನಿಸಿದಾಗ ಮನಸನ್ನು ಎಂದೂ ಕಟ್ಟಿ ಹಾಕಿದ್ದಿಲ್ಲ. ನಟ ಉಮೇಶ್ ಅವರ ನಿಧನದ ಹೊತ್ತಿನಲ್ಲಿ ಸೀದಾಸಾದಾ ಅವರನ್ನು ಸ್ಮರಿಸುವ ಮುನ್ನ ಇಷ್ಟು ದೊಡ್ಡ ಪೀಠಿಕೆ ಬೇಕಿತ್ತಾ? ನಂಗೂ ಗೊತ್ತಿಲ್ಲ. ಬೇಕಿರಲಿಲ್ಲ ಅನ್ನುವವರು ಇಲ್ಲಿಂದ ಮುಂದಕ್ಕೆ ಓದಲಿ. ಸಿಂಪಲ್.‌

ಉಮೇಶ್ ನನ್ನ ಚೈಲ್ಡ್‌ ಹುಡ್ ಹೀರೋ. ಹೇಗೆ ಅಂತ ಕೇಳ್ತೀರಾ? ನಮ್ಮ ಶಾಲೆಯಲ್ಲಿ ತೋರಿಸಿದ ಮೊದಲ ಸಿನಿಮಾ ‘ಮಕ್ಕಳ ರಾಜ್ಯ’. ಶಾಲೆಯ ದೊಡ್ಡ ಹಾಲ್‌ನಲ್ಲಿ ಕಪ್ಪುಹಲಗೆ ಮೇಲೆ ಬೆಳ್ಳಿ ಪರದೆ ಹಾಕಿ, ಉಚಿತವಾಗಿ ಸಿನಿಮಾ ತೋರಿಸಿದ ಕಪ್ಪುಬಿಳುಪಿನ ಸಿನಿಮಾ. ಟಾಕೀಸ್‌ನಲ್ಲಲ್ಲದೇ ಬೇರೆ ಕಡೆ ಯೂ ಸಿನಿಮಾ ಮೂಡಬಲ್ಲದು ಅನ್ನೋದೇ ಅವತ್ತಿನ ಅಚ್ಚರಿ.

ಸಿನಿಮಾ ಮುಗಿಯೋ ಹೊತ್ತಿಗೆ ‘ಮಕ್ಕಳರಾಜ್ಯ ಪ್ರೇಮದ ರಾಜ್ಯ’ ಎಂಬ ಹಾಡು ಬಾಯಿಪಾಠ ವಾಗಿತ್ತು. ಬಾಲ ನಾಯಕನ ಪಾತ್ರ ನೋಡಿ ಮೈಯನೋ ಸಂಚಲನ. ‘ಇಂಥ ಸಿನಿಮಾಗೆ ನಾನೂ ಹೀರೋ ಆದರೆ, ಸೂಪರ್ ಹೀರೋ ಆದರೆ..’ ಎಂಬ ಇಮ್ಯಾಜಿನೇಷನ್. ಆ ಸಿನಿಮಾ ವನ್ನು ನಮಗೆ ಸ್ಕೂಲಲ್ಲಿ ತೋರಿಸಿದ್ದು ೮೦ರ ದಶಕದಲ್ಲಿ. ನಾನು ೨ನೇ ಕ್ಲಾಸ್ ಅಂದುಕೊಂಡರೂ 1982-83ರಲ್ಲಿ. ಮಕ್ಕಳ ರಾಜ್ಯ ಸಿನಿಮಾ ತೆರೆಕಂಡು ಅದಾಗಲೇ ೨೨ ವರ್ಷಗಳಾದರೂ ಕಳೆದಿದ್ದವು.

ಮನೆಗೆ ಬಂದು, ಅಪ್ಪಾಜಿಯ ಬಳಿ “ಮಕ್ಕಳರಾಜ್ಯ ಸಿನಿಮಾ ತೋರಿಸಿದ್ರು. ಮಕ್ಕಳೇ ಹೀರೋ" ಅಂತ ಹುಮ್ಮಸ್ಸಿನಲ್ಲಿ ಹೇಳ್ತಾ ಇದ್ದರೆ, ಬಲೂನಿಗೆ ಸೂಜಿ ಚುಚ್ಚಿದ್ದರು ಅಪ್ಪಾಜಿ. “ಅವ್ನು ಯಾರು ಗೊತ್ತಾ ...? ಆ ಹೀರೋ ಈಗ ಹೇಗಾಗಿದಾನೆ ಗೊತ್ತಾ? ಅವ್ನು ಉಮೇಶ್" ಅಂತ ಹೇಳಿದರು.

ನಂಗೆ ಉಮೇಶ್ ಅಂದ್ರೆ ಯಾರಂತ ಗೊತ್ತಿರಲಿಲ್ಲ. ಆ ವಾರವಷ್ಟೇ ‘ಹಾವಿನ ಹೆಡೆ’ ಸಿನಿಮಾವನ್ನು ಟಾಕೀಸಿನಲ್ಲಿ ತೋರಿಸಿದ್ದರು. “ಅದರಲ್ಲಿ ರಾಜ್‌ಕುಮಾರ್‌ಗೆ ಪರ್ಸ್ ಕೊಟ್ಟು ಮೋಸ ಮಾಡೋಕೆ ಬಂದು ಒದೆ ತಿಂತಲ, ಅವ್ನೇ ಆ ಚಿಕ್ಕಹುಡುಗ" ಅಂತ ಅಪ್ಪಾಜಿ ಹೇಳ್ತಾ ಇದ್ರೆ... ನನ್ನ ಕಲ್ಪನಾ ಸೌಧವೇ ಕುಸಿದು ಬಿದ್ದಂತಾಗಿತ್ತು. ಉಮೇಶ್‌ಗೆ ಬಾಲಕಲಾವಿದನಾಗಿದ್ದಾಗ ರೂಪ-ಸೌಷ್ಠವ-ಧ್ವನಿ ಲೆಕ್ಕಕ್ಕೆ ಬರಲಿಲ್ಲ.

ಅಭಿನಯದಲ್ಲಿ ಉಮೇಶ್ ಗೆದ್ದಿದ್ದರು. ಇನ್ನು ಮಕ್ಕಳಿದ್ದಾಗ ಹೇಗಿದ್ದರೂ ಚೆಂದವೆಂಬುದೂ ಸತ್ಯವೇ. ಆದರೆ ಯೌವನಾವಸ್ಥೆಗೆ ಬರುವ ಹೊತ್ತಿಗೆ ಅವರ ಚರ್ಯೆ ಮತ್ತು ನಟನೆ ಎರಡೂ ‘ಕಾಮಿಡಿ ವಿಲನ್’ ಅಥವಾ ಹಾಸ್ಯಪಾತ್ರಕ್ಕೆ ಹೊಂದುವಂತೆ ಬದಲಾಗಿಬಿಟ್ಟಿತ್ತು. ಆದರೆ ಈ ಸೌಂದರ್ಯದ ವ್ಯಾಖ್ಯಾನವನ್ನು ಬದಿಗಿಟ್ಟು ನೋಡಿದರೆ ಅಥವಾ ಎಂಥೆಂಥವರನ್ನೋ ನಾಯಕ ಪಾತ್ರಗಳಲ್ಲಿ ಕಂಡಾಗ, ಉಮೇಶ್ ಅವರು ನಾಯಕ್ ಆಗಲು ನಾಲಾಯಕ್ ಎಂಬಂತೇನೂ ಇರಲಿಲ್ಲವಲ್ಲ ಅಂತಲೂ ಅನಿಸುತ್ತದೆ. ಒಂದು ವಿಷಯ ನಾವು ನೆನಪಿಡಬೇಕು.

ಉಮೇಶ್ ತಾವು ನಟಿಸಿದ ೨ನೇ ಚಿತ್ರದ, ತಾವು ಯೌವನಾವಸ್ಥೆಗೆ ಕಾಲಿಟ್ಟ ನಂತರದ ಮೊದಲ ಚಿತ್ರದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಗಳಿಸಿದ್ದ ಅಪ್ಪಟ ಕಲಾವಿದ. ಆದರೆ ನಂತರದಲ್ಲಿ ಅವರನ್ನು ಪೋಷಕ ಪಾತ್ರಗಳು ಅರಸಿ ಬರಲೇ ಇಲ್ಲ. ಹಾಸ್ಯನಟನಾಗಿಯೇ ಖ್ಯಾತರಾಗಿ/ಸೀಮಿತರಾಗಿ ಹೋದರು.

ರಾಜ್‌ಕುಮಾರ್ ಕಂಪನಿಯಲ್ಲಿ ಉಮೇಶ್ ಅವರಿಗಾಗಿಯೇ ಪಾತ್ರವೊಂದು ಮೀಸಲಿದ್ದಿರುತ್ತಿತ್ತು. ಹಾಸ್ಯವೇ ಆದರೂ ನಟನೆಗೆ ಬಹಳಷ್ಟು ಅವಕಾಶಗಳಿದ್ದ ಪಾತ್ರಗಳು ಅವರಿಗಾಗಿ ಸೃಷ್ಟಿಯಾಗು ತ್ತಿದ್ದವು. ಆದರೆ ಯಾವ ಚಿತ್ರಗಳಲ್ಲೂ ಅವರಿಗೆ ಪ್ರಧಾನ ಹಾಸ್ಯಪಾತ್ರ ಒಲಿಯಲೇ ಇಲ್ಲ. ಆದರೆ ಸಿಕ್ಕ ಪ್ರತಿ ಪಾತ್ರದಲ್ಲೂ ಉಮೇಶ್ ಛಾಪು ಮೂಡಿಸುತ್ತಿದ್ದರು.

ಮಿಮಿಕ್ರಿ ಆರ್ಟಿಸ್ಟುಗಳಿಗೂ ಸುಲಭಕ್ಕೆ ದಕ್ಕದ ಶೈಲಿಯನ್ನು ತಮ್ಮದಾಗಿಸಿಕೊಂಡರು. ಒಂದೇ ಥರದ ಕಾಮಿಡಿ ಪಾತ್ರಗಳು ಹುಡುಕಿ ಕೊಂಡು ಬಂದರೂ ಅದನ್ನೇ ಭಿನ್ನವಾಗಿ ನೀಡಲು ಯತ್ನಿಸಿದರು. ತಮ್ಮದೇ ಸಿಗ್ನೇಚರ್ ಹುಟ್ಟುಹಾಕಿದರು.

‘ಗೋಲ್‌ಮಾಲ್ ರಾಧಾಕೃಷ್ಣ’ ಚಿತ್ರದ ಸೀತಾಪತಿ ಪಾತ್ರ ಅವರ ಜೀವನದ ಟರ್ನಿಂಗ್ ಪಾಯಿಂಟ್. ಅದುವರೆಗೆ ಅವರು ಮಾಡಿದ ಹಾಸ್ಯಪಾತ್ರಗಳ ವರಸೆಯೇ ಬೇರೆ. ಇಲ್ಲಿಂದ ಮುಂದೆ ಸಿಕ್ಕ ಪಾತ್ರಗಳ ವರಸೆಯೇ ಬೇರೆ. ತೆಲುಗಿನ ಚಿತ್ರವೊಂದನ್ನು ಸಾಯಿಪ್ರಕಾಶ್ ಈ ಹೆಸರಲ್ಲಿ ರೀಮೇಕ್ ಮಾಡಿದ್ದರು. ಅನಂತ್‌ನಾಗ್ ಜತೆಗೆ ಹತ್ತಾರು ಹಾಸ್ಯನಟರನ್ನು ಗುಡ್ಡೆಹಾಕಿ, ಫ್ರೇಮ್-ಟು-ಫ್ರೇಮ್ ಕಾಪಿ ಮಾಡಿ ದ್ದರು.

ತೆಲುಗಿನ ಕಾಸಿಪತಿ, ಕನ್ನಡದಲ್ಲಿ ಸೀತಾಪತಿ ಆಗಿದ್ದ. ಆದರೆ ಸೀತಾಪತಿಯಾಗಿ ಉಮೇಶ್ ನಗಿಸಿದ ರೀತಿ ಇತ್ತಲ್ಲ, ಸಿನಿಮಾದಿಂದ ಆಚೆ ಬರುವ ಹೊತ್ತಿಗೆ ಎಲ್ಲರ ಬಾಯಲ್ಲಿ ಉಳಿದಿದ್ದು ಸೀತಾಪತಿಯ ಡೈಲಾಗೇ- “ನೀವೂ ಅಪಾರ್ಥ ಮಾಡ್ಕೊಂಡ್ ಬಿಟ್ರಾ? ನಾನು ಬೇಕೂಂತ ನಿಮ್ ಹೆಂಡ್ತೀನ ತಬ್ಕೊಳ್ಲಿಲ್ಲ. ಅಕಸ್ಮಾತ್ ನಿಮ್ ಹೆಂಡ್ತೀನ ನನ್ ಹೆಂಡ್ತಿ ಅಂದ್ಕೊಂಡ್ ತಬ್ಕೊಂಡ್ ಬಿಟ್ಟೆ"! ಸೀತಾಪತಿ ಗೆದ್ದುಬಿಟ್ಟಿದ್ದ.

ನಂತರ ಚಿಕ್ಕದೇ ಆದರೂ ಉಮೇಶ್‌ಗಾಗಿ ಪಾತ್ರಗಳು ಸೃಷ್ಟಿಯಾಗುವಂತಾದವು. ಹಾಸ್ಯಚಿತ್ರಗಳಲ್ಲಿ ಉಮೇಶ್‌ಗೊಂದು ಪಾತ್ರ ಇರಲೇಬೇಕೆಂಬಂತಾಯ್ತು. ಜಗ್ಗೇಶ್, ಶಿವಣ್ಣ, ರಾಘವೇಂದ್ರ ರಾಜ್ ಕುಮಾರ್ ಚಿತ್ರಗಳಲ್ಲಿ ಉಮೇಶ್‌ಗೊಂದು ಪಾತ್ರ ಗಟ್ಟಿ. ‘ಶಿವಣ್ಣ’, ‘ಮಂಗಳಸೂತ್ರ’, ‘ಬನ್ನಿ ಒಂದ್ಸಲ ನೋಡಿ’, ‘ಗಣೇಶನ ಮದುವೆ’, ‘ಗೌರಿ ಗಣೇಶ’, ‘ನನ್ನಾಸೆಯ ಹೂವೆ’, ‘ಉಂಡೂಹೋದ ಕೊಂಡೂ ಹೋದ’ ಮುಂತಾದ ಚಿತ್ರಗಳಲ್ಲಿ ಉಮೇಶ್ ನಗಿಸಿದ್ದಾರೆ.

ಆದರೆ ‘ಶ್ರುತಿ ಸೇರಿದಾಗ’ ಚಿತ್ರದ ‘ಬೊಂಬೆಯಾಟವಯ್ಯಾ’ ಹಾಡಿನಲ್ಲಿನ ಅವರ ನಟನೆ ಎವರ್ ಗ್ರೀನ್. ಅದೇ ರೀತಿ ರಮೇಶ್ ಅರವಿಂದ್ ನಿರ್ದೇಶನದ ‘ವೆಂಕಟ ಇನ್ ಸಂಕಟ’ ಚಿತ್ರದ ಗುಂಡಮ್ಮಜ್ಜಿ ಪಾತ್ರ. ಸೀತಾಪತಿ ಪಾತ್ರ ಎಷ್ಟು ಖ್ಯಾತಿಯನ್ನು ತಂದುಕೊಟ್ಟಿತ್ತೆಂದರೆ, ಉಮೇಶ್ ಆಲ್‌ಮೋಸ್ಟ್ ‘ಸೀತಾಪತಿ’ ಎಂದು ಹೆಸರು ಬದಲಿಸಿಕೊಳ್ಳೋದು ಬಾಕಿಯಿತ್ತೇನೋ!

ಅದರ ಫಲವಾಗಿ ದೂರದರ್ಶನದಲ್ಲಿ ‘ಸೀತಾಪತಿ ಸಿಟಿ ಲೈಫ್’ ಎಂಬ ಧಾರಾವಾಹಿ ಶುರುವಾಯ್ತು. ಹಿಂದಿಯಲ್ಲಿ ‘ವಾಗ್ಲೇ ಕೀ ದುನಿಯಾ’ ರೀತಿಯ ಸೀರಿಯಲ್ ಬರುತ್ತಿತ್ತು. ಕನ್ನಡದಲ್ಲಿ ಅಂಥದ್ದೇ ಒಂದು ಸೀರಿಯಲ್ ಶುರುವಾದ ಖುಷಿ. ಕಾದು ನೋಡುವಂತೆ ಮಾಡಿತ್ತು. ಬ.ಲ. ಸುರೇಶ್ ಬರವಣಿಗೆ‌ ಯಲ್ಲಿ ಉಮೇಶ್ ಪ್ರಧಾನ ಪಾತ್ರದಲ್ಲಿದ್ದ ಈ ಧಾರಾವಾಹಿಯ ಒಂದು ಎಪಿಸೋಡ್ ಇಂದಿಗೂ ನನ್ನಿಂದ ಮರೆಯಲಾಗಿಲ್ಲ.

‘ಬೆಡ್‌ಬಗ್ ಕಿಲ್ಲಿಂಗ್ ಮಷಿನ್’ ಅಂತ ಆ ಎಪಿಸೋಡಿನ ಹೆಸರು. ಸೀತಾಪತಿಗೆ ದಾರಿಯ ಒಂದು ಪಾಂಪ್ಲೆಟ್ ಸಿಗುತ್ತದೆ- ‘ಬೆಡ್‌ಬಗ್ ಕಿಲ್ಲಿಂಗ್ ಮಷಿನ್ ಬಂದಿದೆ’ ಅಂತ. ತಿಗಣೆ ಕಾಟದಿಂದ ಬೇಸತ್ತಿದ್ದ ಮಿಡ್ಲ್‌ ಕ್ಲಾಸ್ ಸೀತಾಪತಿ, ಅದಕ್ಕಾಗಿ ಹಣ ತೆತ್ತು ಆರ್ಡರ್ ಮಾಡುತ್ತಾನೆ. ಹೇಗೋ ಇರಬಹುದು ಎಂಬ ಕಲ್ಪನೆಯಲ್ಲಿ, ಆರ್ಡರ್ ಮಾಡಿ ಕಾಯುತ್ತಾನೆ.

ವಠಾರದ ಮಂದಿಯೂ ತಿಗಣೆ ಕಾಟದಿಂದ ಮುಕ್ತಿ ಪಡೆಯಲು ಮಷಿನ್ ನೋಡಲು ಮುಗಿ ಬೀಳು ತ್ತಾರೆ. ಪಾರ್ಸೆಲ್ ಬರುತ್ತದೆ. ಓಪನ್ ಮಾಡಿದರೆ, ಅದರಲ್ಲಿ ಒಂದು ಸಪಾಟು ಕಲ್ಲು, ಇನ್ನೊಂದು ಪುಟ್ಟಕಲ್ಲು! ಉಪಯೋಗಿಸುವ ವಿಧಾನದಲ್ಲಿ ಹೀಗೆ ಬರೆದಿರುತ್ತದೆ- ‘ತಿಗಣೆಯನ್ನು ಹಿಡಿದು ಸಪಾಟು ಕಲ್ಲಿನ ಮೇಲಿಡಿ. ಇನ್ನೊಂದು ಕಲ್ಲಿಂದ ಜಜ್ಜಿ ಸಾಯಿಸಿ’ ಅಂತ.

ಸೀತಾಪತಿ ತಿಗಣೆ ಹಿಡಿದು ಕಲ್ಲಿನ ಮೇಲಿಟ್ಟು ಜಜ್ಜಲು ಹೋಗಿ ಕೈಜಜ್ಜಿಕೊಂಡು ಚೀರುವು ದರೊಂದಿಗೆ ಎಪಿಸೋಡ್ ಎಂಡ್! ಮೇರುನಟ ರಾಜ್‌ಕುಮಾರ್ ಹುಟ್ಟಿದ್ದ ದಿನವೇ ಅಂದ್ರೆ ಏಪ್ರಿಲ್ 24ರಂದು ಹುಟ್ಟಿದವರು ಉಮೇಶ್. ಆದರೆ ಉಮೇಶ್ ಜನ್ಮದಿನ ನೆನಪಿಟ್ಟುಕೊಂಡು ವಿಶ್ ಮಾಡಿದ್ದನ್ನು ನಾ ಕಾಣೆ. ರಾಜ್‌ಕುಮಾರ್ ಅವರಿಗೆ ಗೊತ್ತಿದ್ದಿರಬಹುದಾ? ಉಮೇಶ್-ರಾಜ್ ಪರಸ್ಪರ ‘ಹ್ಯಾಪಿ ಬರ್ತ್ ಡೇ- ಸೇಮ್ ಟು ಯೂ’ ಅಂತ ವಿಶ್ ಮಾಡಿಕೊಂಡು ನಕ್ಕಿರಬಹುದಾ? ಅಥವಾ ಉಮೇಶ್ ತಮ್ಮ ಜನ್ಮದಿನಾಂಕವು ಮುನ್ನೆಲೆಗೆ ಬಾರದಂತೆ ಸೈಲೆಂಟ್ ಆಗಿ ಇದ್ದುಬಿಟ್ಟರಾ? ಅವರ ಕೊನೆಯ ದಿನಗಳ ಒಂದು ವಿಡಿಯೋ ಮನಕಲಕುವಂತಿತ್ತು.

ಪತ್ನಿಯೊಂದಿಗೆ ಅವರಾಡಿದ ಮಾತುಗಳು ಅವರ ೮೦ ವರ್ಷಗಳ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಂತಿತ್ತು. ಬೆಳೆದುನಿಂತ ಮಗನನ್ನು ಕಳೆದುಕೊಂಡು, ಅನಿಶ್ಚಿತತೆಯ ಸಿನಿಮಾರಂಗ ನಂಬಿಕೊಂಡು, ಕೌಟುಂಬಿಕ ಜೀವನದಲ್ಲಿ ಹಲವು ಏರುಪೇರು ಕಂಡು ನಗುತ್ತಲೇ ನಗಿಸುತ್ತಲೇ ಬದುಕಿ ಹೋದ ಉಮೇಶ್ ಒಂದು ಅಂಕಣದಲ್ಲಿ ಮುಗಿಯುವಂಥ ವ್ಯಕ್ತಿತ್ವವಲ್ಲ. ಬರವಣಿಗೆ, ಸಂಗೀತ, ಗಾಯನ ಹೀಗೆ ಸಕಲ ಪ್ರತಿಭೆಗಳನ್ನೂ ಹೊಂದಿದ್ದ ಉಮೇಶ್ ಹೊರಗಣ್ಣಿಗೆ ಕಂಡದ್ದು ಹಾಸ್ಯನಟನಾಗಿ ಯಷ್ಟೇ. ಇರಲಿ, ನಗು ಕೊಟ್ಟ ಸಾರ್ಥಕಭಾವದಲ್ಲಿ ಹೋದರಲ್ಲ!

ನವೀನ್‌ ಸಾಗರ್‌

View all posts by this author