ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Narendra Pai Column: ಆರುನೂರು ತಳಿಗಳ ಸಂರಕ್ಷಕ !

ಮನೆಮಾತು ಮಲೆಯಾಳಂ ಆದರೂ ಕನ್ನಡದಲ್ಲಿ ಓದಲು ಬರೆಯಲು ಬರುವುದರಿಂದ ಈ ಎರಡು ರಾಜ್ಯಗಳ ಕೃಷಿ ವಲಯದೊಂದಿಗೆ ಅವರಿಗೆ ನಿಕಟ ಸಂಪರ್ಕವಿದೆ. ಹಲವಾರು ತಳಿ ಸಂರಕ್ಷಕರು ಅವರಿಗೆ ಪರಿಚಿತರಾದರೂ ಈ ಕ್ಷೇತ್ರಕ್ಕೆ ಅವರನ್ನು ಕೈಹಿಡಿದು ಕರೆತಂದವರು : ಇಬ್ಬರು ಮಹನೀಯರು - ಅವರೇ ಉಡುಪಿಯ ಚೇರ್ಕಾಡಿ ರಾಮಚಂದ್ರ ರಾಯರು ಮತ್ತು ಬೆಳ್ತಂಗಡಿಯ ದೇವರಾಯರು.

ನರೇಂದ್ರ ರೈ ದೇರ್ಲ

ರೈತರ ಬದುಕು ಕೇವಲ ಅಂಕಿಅಂಶಗಳ ಸಾಲಲ್ಲ; ಅದು ಹಸಿವು, ಭರವಸೆ, ಸೋಲು, ಸಂಕಲ್ಪ ಮತ್ತು ಎದ್ದು ನಿಲ್ಲುವ ಧೈರ್ಯದ ಕಥೆ. ಇಂಥ ಬದುಕುಗಳ ಮಧ್ಯೆ ಹುಟ್ಟುವ ಸಾಧನೆಗಳು ಕಾಲದ ಅಂಚು ದಾಟಿ ಸಮಾಜದ ದಿಕ್ಕನ್ನೇ ಬದಲಾಯಿ ಸುವ ಶಕ್ತಿ ಹೊಂದಿರು ತ್ತವೆ. ಭತ್ತದ ತಳಿ ರಕ್ಷಕ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಯವರ ಬದುಕು ನಮಗೆ ಹೇಳುವುದು ಇಷ್ಟೇ : ದೊಡ್ಡ ಕ್ರಾಂತಿಗಳಿಗೆ ದೊಡ್ಡ ನೆಲ ಬೇಕಾಗಿಲ್ಲ; ದೊಡ್ಡ ಹೃದಯ ಸಾಕು. ಹತ್ತು ಇಪ್ಪತ್ತು ಸೆಂಟ್ಸ್ ಜಾಗದಲ್ಲಿ ಆರು ನೂರಕ್ಕಿಂತ ಹೆಚ್ಚು ತಳಿಗಳನ್ನು ಉಳಿಸ ಬಹುದು ಎಂದಾದರೆ, ನಾವು ನಮ್ಮ ಮನಸ್ಸಿನಲ್ಲಿ ಎಷ್ಟು ದೊಡ್ಡ ಬದಲಾವಣೆಯನ್ನು ಬೆಳೆಸಬಹುದು ಎಂಬುದನ್ನು ಈ ಕಥೆ ಕೇಳುತ್ತದೆ. ಇದು ಒಂದು ರೈತನ ಕಥೆಯಲ್ಲ; ಇದು ನಮ್ಮೆಲ್ಲರ ಹೊಣೆಗಾರಿಕೆಯ ಕಥೆ.

ಬೆಳೇರಿ ಎಂಬುದು ಒಂದು ಸಣ್ಣ ಹಳ್ಳಿ; ಕೇರಳ ಕರ್ನಾಟಕ ಗಡಿಯ ನೆಟ್ಟಣಿಗೆ ಗ್ರಾಮದ ಭಾಗ. ಎರಡು ರಾಜ್ಯಗಳ ಭಾಷೆ, ಸಂಸ್ಕೃತಿ, ಬದುಕಿನ ಹೊಕ್ಕುಬಳಕೆ ಬೆರೆತು ಹೋಗಿರುವ ಈ ಗಡಿನಾಡಿನಲ್ಲಿ 640ಕ್ಕಿಂತಲೂ ಹೆಚ್ಚು ಭತ್ತದ ತಳಿಗಳ ರಕ್ಷಕ ಪದ್ಮಶ್ರೀ ಸತ್ಯ ನಾರಾಯಣರು ಬದುಕುತ್ತಿದ್ದಾರೆ. ಕೃಷಿಯಲ್ಲಿ ಕೇರಳದ ನೆಲದವರ ಕೈಚಳಕ ವಿಶೇಷ. ಸಣ್ಣ ಹಿಡುವಳಿಗಳಲ್ಲಿಯೇ ಅವರು ಮಾಡುವ ಪ್ರಯೋಗಗಳು ಅಚ್ಚರಿ ಹುಟ್ಟಿಸುವಂತಿವೆ.

ಈ ಎರಡು ರಾಜ್ಯಗಳ ಕೃಷಿ ಕೇಂದ್ರಗಳು, ಕೃಷಿ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳ ಜೊತೆಗಿನ ಪರಿಚಯ ಮತ್ತು ಕೊಡುಕೊಳ್ಳುವಿಕೆಯಲ್ಲಿ ಸತ್ಯನಾರಾಯಣರು ಹಿಂದೆ ಬಿದ್ದವರಲ್ಲ. ಅದಕ್ಕೇ ದೇಶದ ಯಾವ ಭಾಗದಲ್ಲಾದರೂ ಹೊಸ ಭತ್ತದ ತಳಿ ಕಂಡುಬಂದರೆ, ಅದರ ಬೀಜ ಯಾವಾಗಲಾದರೂ ಇವರ ಕೈ ಸೇರಿಬಿಡುತ್ತದೆ.

ಬೀಜ ಕೇಳಿದವರಿಗೆ ಹಣವನ್ನೇ ಕೇಳದೆ ಅಂಚೆಯ ಮೂಲಕ ಕಳುಹಿಸುವ ಸೇವಾಭಾವ ಇವ ರದ್ದು. ದೆಹಲಿಯ ಬೀಜ ಬ್ಯಾಂಕ್ ಸೇರಿದಂತೆ ದೇಶದ ಹಲವು ರೈತರು, ವಿಶ್ವವಿದ್ಯಾಲಯ ಗಳು, ಕೃಷಿ ಅಧ್ಯಯನ ಕೇಂದ್ರಗಳಿಂದ ಅವರು ಅನೇಕ ತಳಿಗಳನ್ನು ಸಂಗ್ರಹಿಸಿದ್ದಾರೆ.

ಕೇರಳದ ವಯನಾಡು, ಪಟ್ಟಾಂಬಿ, ಮಲಪ್ಪುರಂ ಪ್ರದೇಶಗಳಿಂದ ಹಿಡಿದು ಕರ್ನಾಟಕದ ಬೆಳ್ತಂಗಡಿ, ಶಿವಮೊಗ್ಗ, ದಾವಣಗೆರೆ, ಮೈಸೂರು, ಮಂಡ್ಯ ಭಾಗಗಳವರೆಗೂ ಸಂಚರಿಸಿ ಅವರು ಬೀಜಗಳನ್ನು ಪಡೆದುಕೊಂಡಿದ್ದಾರೆ.

ಗದ್ದೆಯಿಲ್ಲದ ರೈತನೊಬ್ಬ ಸಾವಿರಾರು ತಳಿಗಳ ಬೀಜ ಕಾಯುತ್ತಿರುವುದು ಇದು ಒಂದು ವ್ಯಕ್ತಿಯ ಸಾಹಸದ ಪರಿಶ್ರಮದ ಕಥೆಯಷ್ಟೇ ಅಲ್ಲ, ಈ ನೆಲದ ಕೃಷಿ ಸಂಸ್ಕೃತಿಯ ಕಥೆಯೂ ಹೌದು.ಸತ್ಯನಾರಾಯಣರ ತಳಿ ಸಂರಕ್ಷಣೆಯ ತಾಟು ಕೇರಳಕರ್ನಾಟಕ ಗಡಿಭಾಗದಲ್ಲಿದೆ.

ಇದನ್ನೂ ಓದಿ: Srivathsa Joshi Column: ಬರಿ, ಬರಿಯುತ್ತ ಬರಿ...ಕೋಸಂಬರಿ ರೀತಿಯೂ ಬರಿ !

ಮನೆಮಾತು ಮಲೆಯಾಳಂ ಆದರೂ ಕನ್ನಡದಲ್ಲಿ ಓದಲು ಬರೆಯಲು ಬರುವುದರಿಂದ ಈ ಎರಡು ರಾಜ್ಯಗಳ ಕೃಷಿ ವಲಯದೊಂದಿಗೆ ಅವರಿಗೆ ನಿಕಟ ಸಂಪರ್ಕವಿದೆ. ಹಲವಾರು ತಳಿ ಸಂರಕ್ಷಕರು ಅವರಿಗೆ ಪರಿಚಿತರಾದರೂ ಈ ಕ್ಷೇತ್ರಕ್ಕೆ ಅವರನ್ನು ಕೈಹಿಡಿದು ಕರೆತಂದವರು : ಇಬ್ಬರು ಮಹನೀಯರು - ಅವರೇ ಉಡುಪಿಯ ಚೇರ್ಕಾಡಿ ರಾಮಚಂದ್ರ ರಾಯರು ಮತ್ತು ಬೆಳ್ತಂಗಡಿಯ ದೇವರಾಯರು.

ಚೇರ್ಕಾಡಿಯವರ ಮಾರ್ಗದರ್ಶನ

2003ರಲ್ಲಿ ಅಡಿಕೆ ಪತ್ರಿಕೆ ಓದುತ್ತಿದ್ದಾಗ ಚೇರ್ಕಾಡಿಯವರು ‘ರಾಜಕಯಮೆ’ ಎಂಬ ಭತ್ತದ ತಳಿಯನ್ನು ಬೆಳೆಸುತ್ತಿರುವ ಮಾಹಿತಿ ಸತ್ಯನಾರಾಯಣರಿಗೆ ಸಿಕ್ಕಿತು. ಬಾಲ್ಯದಲ್ಲಿ ತಮ್ಮ ಮನಸ್ಸನ್ನು ಕಾಡಿದ್ದ ಆ ತಳಿ ಇನ್ನೂ ಜೀವಂತವಾಗಿರುವುದು ತಿಳಿದು ಅವರು ಪತ್ರಿಕೆ ಯಲ್ಲಿದ್ದ ವಿಳಾಸಕ್ಕೆ ಪತ್ರ ಬರೆದರು.

ಕೆಲವೇ ದಿನಗಳಲ್ಲಿ ಚೇರ್ಕಾಡಿಯವರು ಒಂದು ಮುಷ್ಟಿ ಬೀಜಗಳ ಜೊತೆ ಒಂದು ಆತ್ಮೀಯ ಪತ್ರವನ್ನೂ ಕಳುಹಿಸಿದರು. “ನಿಮ್ಮ ಕುತೂಹಲ ನನಗೆ ಖುಷಿ ಕೊಟ್ಟಿದೆ. ಈ ತಳಿಯನ್ನು ಬೆಳೆಸಿ ನಾಲ್ವರಿಗೆ ತಿಳಿಸಿ," ಎಂದು ಅವರು ಬರೆದಿದ್ದರು. ಆ ಪತ್ರವನ್ನು ಸತ್ಯನಾರಾಯಣರು ಇಂದಿಗೂ ಜೋಪಾನವಾಗಿ ಉಳಿಸಿಕೊಂಡಿದ್ದಾರೆ. ಮುಂದೆ ಈ ಬೀಜವೇ ಅವರಿಗೆ ಹೊಸ ದಾರಿ ತೋರಿಸಿತು.

ಒಂದು ದಿನ ಮಂಗಳೂರು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಪಾರಂಪರಿಕ ತಳಿಗಳ ಬಗ್ಗೆ ಮಾತು ಬರುತ್ತಿತ್ತು. ಅದರಲ್ಲಿ ಬೆಳ್ತಂಗಡಿಯ ದೇವರಾಯರ ಹೆಸರು ಕೇಳಿಸಿತು. ರೇಡಿಯೋ ಮೂಲಕ ದೊರೆತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅವರ ಮನೆಗೆ ಹೋಗಿ ನೋಡಿದಾಗ ಸತ್ಯನಾರಾಯಣರು ದಂಗಾದರು. ಅಲ್ಲಿ ಭತ್ತದ ತಳಿಗಳ ವಿಶ್ವರೂಪ ವೇ ಕಂಡಂತಾಯಿತು.

ದೇವರಾಯರು ಮತ್ತು ಅವರ ಪುತ್ರ ಪರಮೇಶ್ವರ ರಾಯರು ತಳಿಗಳ ಗುಣಧರ್ಮಗಳನ್ನು ವಿವರಿಸಿ ಬೀಜಗಳನ್ನು ಕೊಟ್ಟರು. “ನಮ್ಮಲ್ಲಿಂದ ಬೀಜ ತೆಗೆದುಕೊಂಡವರು ಹಲವರು, ಆದರೆ ನಿಮ್ಮ ತರ ಮುಂದುವರೆಸಿದವರು ಕಡಿಮೆ," ಎಂದು ದೇವರಾಯರು ಹೇಳಿದ ಮಾತು ಸತ್ಯನಾರಾಯಣರಿಗೆ ದೊಡ್ಡ ಪ್ರೇರಣೆಯಾಯಿತು.

Screenshot_9 R

ಸತ್ಯನಾರಾಯಣರ ಕುಟುಂಬದ ಮೂಲವೇ ಕೃಷಿಯೊಂದಿಗೇ ಬೆಸೆದುಕೊಂಡದ್ದು. ಕಾಸರಗೋಡಿನ ಎಡನೀರು ಮಠದ ಕೃಷಿಭೂಮಿ, ಭೂಸುಧಾರಣೆಯ ಮೂಲಕ ಇವರ ಅಜ್ಜನಿಗೆ ದೊರಕಿತ್ತು. ಅಲ್ಲಿಯೇ ಭತ್ತದ ಕೃಷಿಯ ಸೂಕ್ಷ್ಮತೆಗಳನ್ನು ಬಾಲ್ಯದಲ್ಲೇ ದೂರ ದಿಂದ ಕಂಡು ಬೆಳೆದವರು ಸತ್ಯನಾರಾಯಣರು.

ತಾಯಿಯೂ ನಾಟಿ, ಕೊಯ್ಲು ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದ ನೆನಪು ಅವರಿಗೆ ಇನ್ನೂ ಹಸುರಾಗಿದೆ. ಮನೆಯಲ್ಲಿ ಬೇಯಿಸಿ ಒಣಗಿಸಿದ ಭತ್ತವನ್ನು ಒನಕೆಯಲ್ಲಿ ಕುಟ್ಟಿ ಅಕ್ಕಿ ಮಾಡಿ ಗಂಜಿ ತಿನ್ನುತ್ತಿದ್ದ ದಿನಗಳು ಅವರ ಸ್ಮೃತಿಯಲ್ಲಿ ಇಂದಿಗೂ ಉಳಿದಿವೆ.

ಬಡತನ ಅವರ ಬಾಲ್ಯದ ನಿತ್ಯಸಂಗಾತಿ. ಐದು ರುಪಾಯಿ ಕೂಲಿಗಾಗಿ ರಜಾದಿನಗಳಲ್ಲಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಬಾಲಕ. ಆ ಹಣವೇ ಪುಸ್ತಕ, ಬಟ್ಟೆ ಕೊಂಡುಕೊಳ್ಳಲು ಸಹಾಯವಾಗುತ್ತಿತ್ತು. ಮನೆಯ ಅವಶ್ಯಕತೆಗಳೂ ಅದನ್ನೇ ಕೇಳುತ್ತಿದ್ದವು. ಹತ್ತನೇ ತರಗತಿ ಪಾಸಾದರೂ ಹೆಚ್ಚಿನ ವಿದ್ಯಾಭ್ಯಾಸದ ಅವಕಾಶ ಸಿಕ್ಕಿಲ್ಲ. ಅನ್ನದ ದಾರಿ ಕಂಡುಕೊ ಳ್ಳುವುದೇ ತುರ್ತು ಕೆಲಸವಾಗಿತ್ತು. ಹೀಗಾಗಿ ಕೃಷಿ ಕಾರ್ಮಿಕನಾದರು. 1991ರಿಂದ 2021 ರವರೆಗೆ ಮೂರು ದಶಕ ಕಾಲ, ಒಬ್ಬರ ಮನೆಯಲ್ಲೇ ಖಾಯಂ ಕೃಷಿ ಕಾರ್ಮಿಕನಾಗಿ ದುಡಿದರು.

ರೇಡಿಯೋ ಮತ್ತು ಪತ್ರಿಕೆಗಳು

ಮನೆಯ ಒಂದು ವಿಶೇಷ ಸಂಗತಿ ಅವರ ಬದುಕನ್ನೇ ಬದಲಿಸಿತು. ಕನ್ನಡ, ಮಲಯಾಳಂ, ಇಂಗ್ಲಿಷ್ ಸೇರಿದಂತೆ ಇಪ್ಪತ್ತೈದಕ್ಕೂ ಹೆಚ್ಚು ಪತ್ರಿಕೆಗಳು ಅಲ್ಲಿಗೆ ಬರುತ್ತಿದ್ದವು. ಮಧ್ಯಾಹ್ನದ ಒಂದೂವರೆ ಗಂಟೆಯ ಬಿಡುವಿನಲ್ಲಿ ಓದುವ ಹವ್ಯಾಸ ಬೆಳೆದು ಬಂತು. ಇವರೂ ಒಂದು ರೇಡಿಯೋ ಕೊಂಡುಕೊಂಡರು. ವಾರಪತ್ರಿಕೆಗಳನ್ನು ಖಾಯಂ ತರಿಸಿಕೊಳ್ಳಲು ಆರಂಭಿಸಿ ದರು. “ರೇಡಿಯೋ ಮತ್ತು ಪತ್ರಿಕೆಗಳೇ ನನ್ನ ಕಲಿಕೆಯ ವಿಶ್ವವಿದ್ಯಾಲಯ" ಎಂದು ಅವರು ಈಗಲೂ ಹೇಳುತ್ತಾರೆ.

ಬಾಲ್ಯದಲ್ಲಿ ದೊಡ್ಡಪ್ಪನ ಗದ್ದೆಯಲ್ಲಿ ಬೆಳೆಯುತ್ತಿದ್ದ ರಾಜಕಯಮೆ ಎಂಬ ಭತ್ತದ ತಳಿ ಅವರನ್ನು ಆಕರ್ಷಿಸಿತ್ತು. ಕೊಯ್ಲಿನ ನಂತರ ಬಿದ್ದಿದ್ದ ತೆನೆಗಳನ್ನು ಹೆಕ್ಕಿ ಮನೆಗೆ ತರು ಬಾಲಕನ ಕುತೂಹಲವೇ ಮುಂದೆ ದೊಡ್ಡ ಆಸಕ್ತಿಯಾಯಿತು.

ತಳಿ ಸಂರಕ್ಷಣೆಯ ಕೆಲಸಕ್ಕೆ ಇಳಿದಾಗ ಅವರಿಗೆ ಗದ್ದೆಯೇ ಇರಲಿಲ್ಲ. ಆದ್ದರಿಂದ ಆರಂಭ ದಲ್ಲಿ ಸುಮಾರು ಎರಡು ನೂರು ತಳಿಗಳನ್ನು ಗ್ರೋಬ್ಯಾಗ್‌ಗಳಲ್ಲಿ ಬೆಳೆಸಿದರು. ನಂತರ ತಳಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಒಂದು ಸಣ್ಣ ಗದ್ದೆಯನ್ನು ಸಿದ್ಧಪಡಿಸಿದರು.

ನೀರಿಗಾಗಿ ಬೋರ್ ವೆಲ್, ಹಕ್ಕಿಗಳಿಂದ ರಕ್ಷಣೆಗಾಗಿ ಬಲೆಗಳು ಇವೆಲ್ಲ ಅವರ ಪ್ರಯೋಗದ ಭಾಗವಾಯಿತು. ಸತ್ಯನಾರಾಯಣರ ತಳಿ ಉಳಿಕೆಯ ಹಿಂದೆ ಒಂದು ದೊಡ್ಡ ತತ್ವ ಇದೆ. ಆಹಾರದ ಎಲ್ಲಾ ಬೆಳೆಗಳ ಬೀಜ ವೈವಿಧ್ಯ ನಮ್ಮ ಪೂರ್ವಜರು ಕಾಪಾಡಿಕೊಂಡು ಬಂದ ಅಮೂಲ್ಯ ಸಂಪತ್ತು. ಅದನ್ನು ಕಳೆದುಕೊಂಡರೆ ಪುನಃ ಸೃಷ್ಟಿಸಲು ಸಾಧ್ಯವಿಲ್ಲ. ಪ್ರತಿ ವರ್ಷ ಬೆಳೆಸಿ ಉಳಿಸಿಕೊಳ್ಳಬೇಕಷ್ಟೇ. ಇದೇ ಭಾವನೆ ಸತ್ಯನಾರಾಯಣರನ್ನು ಈ ಕೆಲಸಕ್ಕೆ ಕಟ್ಟಿಬಿಟ್ಟಿದೆ.

ಬೀಜ ಸಂಗ್ರಹಿಸುವುದಕ್ಕಾಗಿ ಅವರು ಕೇರಳ, ಕರ್ನಾಟಕ, ತಮಿಳುನಾಡಿನ ಹಲವೆಡೆ ಸಂಚರಿಸಿದ್ದಾರೆ. ರಾತ್ರಿ ಬಸ್ ಸಿಗದೆ ನಿಲ್ದಾಣದಲ್ಲೇ ಮಲಗಿದ ದಿನಗಳೂ ಇವೆ. ದೂರದ ಊರು ಗಳಲ್ಲಿ ಮೋಸ ಅನುಭವಿಸಿದ ಸಂದರ್ಭಗಳೂ ಇವೆ. ಆದರೆ ಹೊಸ ತಳಿ ಕೈ ಸೇರಿದಾಗ ಆ ಕಷ್ಟಗಳೆಲ್ಲ ಮರೆಯಾಗುತ್ತಿತ್ತು.

ಒಮ್ಮೆ ಟೀವಿಯಲ್ಲಿ ಶಿವಮೊಗ್ಗದ ನವಿಲೆ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ನೋಡಿ ಫೋನ್ ಮಾಡಿದಾಗ ಡಾ. ಉಲ್ಲಾಸ್ ಎಂಬ ವಿಜ್ಞಾನಿಯ ಪರಿಚಯವಾಯಿತು. ಅವರು ಸತ್ಯನಾರಾಯಣರ ತಳಿಗಳನ್ನು ನೋಡಿ ಆಶ್ಚರ್ಯಪಟ್ಟರು. ನಂತರ ಹಲವಾರು ತಳಿಗಳನ್ನು ವಿನಿಮಯ ಮಾಡಿಕೊಂಡರು. ಅವರೇ ಮೊದಲ ಬಾರಿ ಪತ್ರಿಕೆಯಲ್ಲಿ ಸತ್ಯ ನಾರಾಯಣರ ಬಗ್ಗೆ ಬರೆದರು. ಬಳಿಕ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಮಲ್ಲಿಕಾರ್ಜುನರ ಪರಿಚಯವೂ ದೊರಕಿತು. ಈ ಇಬ್ಬರು ಯುವ ವಿಜ್ಞಾನಿಗಳ ಬೆಂಬಲ ದಿಂದ ಸತ್ಯನಾರಾಯಣರ ಕೆಲಸ ಹೆಚ್ಚಿನ ಗಮನ ಸೆಳೆಯಿತು.

ಕೇರಳ ಕೃಷಿ ವಿಶ್ವವಿದ್ಯಾಲಯದ ಮೂಲಕ ಅವರಿಗೆ 2021ರಲ್ಲಿ “ಪ್ಲಾಂಟ್ ಜೀನೋಮ್ ಸೇವಿಯರ್" ರಾಷ್ಟ್ರೀಯ ಪ್ರಶಸ್ತಿ ದೊರೆಯಿತು. ನಂತರ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿತು. ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳು ಅವರ ಪಾಲಾಗಿವೆ.

ಔಷಧೀಯ ಭತ್ತ !

ಸತ್ಯನಾರಾಯಣರ ಸಂಗ್ರಹದಲ್ಲಿ ಅನೇಕ ಅಪರೂಪದ ತಳಿಗಳಿವೆ. ಕಾಲಾನಾಕ್, ಕಳಮೆ, ಅಂಬೆಮೊಹರಿ, ಕರಿಗಜವಲಿ, ನವರ, ಮಧುಶಾಲೆ, ಷಷ್ಠಿಕಾ ಶಾಳಿ, ಕರಿಕಗ್ಗ, ಗಂಧಶಾಲೆ, ಜೀರಿಗೆಶಾಲೆ, ರಾಜಮುಡಿ, ಜುಗಲ್ ಹೀಗೆ ಅನೇಕ ವೈವಿಧ್ಯತೆಯ ತಳಿಗಳು. ಕೆಲವಕ್ಕೆ ವಿಶೇಷ ಔಷಧಿಯ ಗುಣಗಳಿವೆ, ಕೆಲವು ನೆರೆ ಅಥವಾ ಬರ ನಿರೋಧಕಗಳು, ಕೆಲವು ಪರಿಮಳದ ಅಕ್ಕಿಯ ತಳಿಗಳು ಈ ತಳಿ ಸಂರಕ್ಷಣೆ ಎಂಬುದು ಸುಲಭ ಕೆಲಸವಲ್ಲ. ಹಗಲು ಹಕ್ಕಿಗಳ ಕಾಟ, ರಾತ್ರಿ ಇಲಿಗಳ ಕಾಟ. ಕೊಯ್ಲಿನ ಅವಧಿ ದೀರ್ಘವಾಗುವುದರಿಂದ ದಿನರಾತ್ರಿ ಕಾವಲು ಕಾಯಬೇಕು.

“ಇದು ಲಾಭನಷ್ಟದ ತಕ್ಕಡಿಯಲ್ಲಿ ತೂಗುವ ಕೆಲಸವಲ್ಲ. ನಮ್ಮ ಸಂಸ್ಕೃತಿಯ ಒಂದು ಭಾಗವನ್ನು ಉಳಿಸುವ ಕೆಲಸ" ಎಂದು ಸತ್ಯನಾರಾಯಣರು ಕಾಪಿಡುವಿಕೆಯ ಸಂದರ್ಭದಲ್ಲಿ ಅನುಭವಿಸುವ ಎಲ್ಲಾ ನೋವುಗಳನ್ನು ಮರೆಯುತ್ತಾರೆ. ಗಡಿಭಾಗದಲ್ಲಿ ವಾಸಿಸುವುದರಿಂದ ಸತ್ಯನಾರಾಯಣರಿಗೆ ಕರ್ನಾಟಕದ ರೈತರೊಂದಿಗೆ ಹೆಚ್ಚು ಸಂಪರ್ಕ ವಿದೆ. ಆದರೆ ಅವರ ವಾಸಸ್ಥಳ ಕೇರಳದಲ್ಲಿರುವುದರಿಂದ ಕರ್ನಾಟಕ ಸರ್ಕಾರದ ನೆರವು ಅವರಿಗೆ ಹೆಚ್ಚು ದೊರಕಲಿಲ್ಲ.

ಕೇರಳ ಸರ್ಕಾರ ಮಾತ್ರ ರಾಜ್ಯಮಟ್ಟದ ಎರಡು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಕೇರಳ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಆಗಾಗ್ಗೆ ಅವರ ಬಳಿ ಬಂದು ಮಾಹಿತಿ ಪಡೆಯುತ್ತಾರೆ. ಅನೇಕ ತಳಿಗಳನ್ನು ಸಂಶೋಧನೆಗಾಗಿ ಅವರಿಂದ ಪಡೆದಿದ್ದಾರೆ.

ತಳಿ ಸಂರಕ್ಷಣೆಯ ದೊಡ್ಡ ಸವಾಲು ಎಂದರೆ ಬೀಜವನ್ನು ನಿರಂತರವಾಗಿ ಭೂಮಿಗಿಟ್ಟು ಬೆಳೆಸಬೇಕಾಗುವುದು. ಎರಡು ಮೂರು ವರ್ಷ ಹಾಗೆ ಇಟ್ಟರೆ ಬೀಜ ಮೊಳೆಯುವ ಶಕ್ತಿ ಕಳೆದುಕೊಳ್ಳುತ್ತದೆ. ಆದ್ದರಿಂದ ಪ್ರತಿವರ್ಷ ತಳಿಗಳನ್ನು ಮತ್ತೆ ನೆಲಕ್ಕೆ ಇಳಿಸಿ ಪುನರ್ ಉತ್ಪಾದನೆ ಮಾಡಬೇಕು. ಸ್ಥಳೀಯವಾಗಿ ಅಡಿಕೆ, ರಬ್ಬರ್, ಕಾಳುಮೆಣಸು ಮುಂತಾದ ವಾಣಿಜ್ಯ ಬೆಳೆಗಳು ವಿಸ್ತರಿಸುತ್ತಾ ಬಂದಂತೆ ಕರಾವಳಿ, ಮಲೆನಾಡಿನ ಮೂಲ ಕೃಷಿಯಾದ ಭತ್ತ ನಿಧಾನವಾಗಿ ಕಣ್ಮರೆಯಾಗುತ್ತಿದೆ.

ಈಗ ಕೆಲವರು ಮಾತ್ರ ತಮ್ಮ ಮನೆಗೆ ಬೇಕಾದಷ್ಟು ಅಕ್ಕಿಗಾಗಿ ಸಣ್ಣ ತುಂಡು ಗದ್ದೆಯಲ್ಲಿ ಭತ್ತ ಬೆಳೆಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ತಳಿ ಸಂರಕ್ಷಣೆ ಮಾಡಲು ಹೆಚ್ಚಿನ ಮಾನವ ಶ್ರಮ ಬೇಕಾಗುತ್ತದೆ. ಸೋಲಾರ್ ಬೇಲಿ, ಬಲೆಗಳು, ಬೀಜ ಸಂಗ್ರಹ ಕೊಠಡಿ ಮುಂತಾದ ಮೂಲ ಸೌಕರ್ಯಗಳು ದೊರೆತರೆ ಈ ಕೆಲಸಕ್ಕೆ ಇನ್ನಷ್ಟು ಉತ್ತೇಜನ ಸಿಗುತ್ತದೆ ಎಂದು ಸತ್ಯನಾರಾಯಣರು ಹೇಳುತ್ತಾರೆ.

ಆರು ನೂರು ತಳಿಗಳು

ಇದೀಗ ಅವರ ಬಳಿ ಆರು ನೂರಕ್ಕೂ ಹೆಚ್ಚು ಭತ್ತದ ತಳಿಗಳಿವೆ. ಮುಂದಿನ ದಿನಗಳಲ್ಲಿ ಸರ್ಕಾರ ಅಥವಾ ಬೇರೆ ಸಂಸ್ಥೆಗಳ ಸಹಕಾರ ದೊರೆತರೆ ಈ ತಳಿಗಳನ್ನು ಪ್ರದರ್ಶಿಸಲು ಒಂದು ಸಣ್ಣ ಮ್ಯೂಸಿಯಂ ನಿರ್ಮಿಸುವ ಕನಸಿದೆ. ಕೃಷಿ ವಿದ್ಯಾರ್ಥಿಗಳು ಮತ್ತು ಆಸಕ್ತರು ಬಂದು ಮಾಹಿತಿ ಪಡೆಯಲು ಅದು ಸಹಾಯಕವಾಗುತ್ತದೆ. ಈಗಾಗಲೇ ಅನೇಕ ಕೃಷಿ ವಿಶ್ವವಿದ್ಯಾಲಯಗಳು, ಶಾಲಾಕಾಲೇಜುಗಳು ಮತ್ತು ಪರಿಸರ ವೇದಿಕೆಗಳಲ್ಲಿ ಈ ತಳಿಗಳ ಪ್ರದರ್ಶನವನ್ನು ಅವರು ಏರ್ಪಡಿಸಿದ್ದಾರೆ.

ಆದರೆ ಪ್ರತಿಸಾರಿ ಬೀಜಗಳನ್ನು ದೂರದೂರಿಗೆ ಹೊತ್ತುಕೊಂಡು ಹೋಗಿ ಮತ್ತೆ ಜೋಪಾನ ವಾಗಿ ತಂದು ಸಂಗ್ರಹಿಸುವುದು ಕಷ್ಟಕರ ಕೆಲಸವೇ. ಇಂದಿನ ಜಗತ್ತು ಹಣದ ಹಿಂದೆ ಓಡುತ್ತಿದೆ; ಅನ್ನದ ಹಿಂದೆ ಅಲ್ಲ. ಹೊಸ ತಲೆಮಾರಿನ ಮಕ್ಕಳಿಗೆ ಅನ್ನದ ಮೂಲವೇ ಗೊತ್ತಿಲ್ಲ. ಭತ್ತ ನೋಡದೆ ಅನ್ನ ತಿನ್ನುವ, ಹಸು ನೋಡದೆ ಹಾಲು ಕುಡಿಯುವ ಕಾಲ ಬಂದಿದೆ. ಆದ್ದರಿಂದ ಅನ್ನದ ದಾರಿ ಪಠ್ಯದಲ್ಲಿ ಬರಬೇಕು ಎಂದು ಸತ್ಯನಾರಾಯಣರು ಹೇಳುತ್ತಾರೆ.

“ನಮ್ಮ ಶಿಕ್ಷಣ ಪದ್ಧತಿ ಹಣ ಸಂಪಾದಿಸುವುದನ್ನು ಮಾತ್ರ ಕಲಿಸುತ್ತದೆ; ಆದರೆ ಅನ್ನ ಸಂಪಾದಿಸುವುದನ್ನು ಹೇಳುವುದಿಲ್ಲ. ರೈತರ ಕಥೆಗಳು ಪಠ್ಯದಲ್ಲಿ ಸೇರಿದರೆ ಕೆಲವು ಮಕ್ಕಳು ಕೃಷಿಯತ್ತ ಮುಖ ಮಾಡಬಹುದು," ಎನ್ನುವುದು ಅವರ ಅಭಿಪ್ರಾಯ. ಸತ್ಯನಾರಾಯಣರು ಓದುವ ಹವ್ಯಾಸ, ಮನೆಗೆ ಬರುವ ಪತ್ರಿಕೆಗಳು, ಆಕಾಶವಾಣಿ ಕಾರ್ಯಕ್ರಮಗಳು ಅವರ ಬರವಣಿಗೆಗೂ ದಾರಿ ತೋರಿಸಿದೆ. ಮನೆಯಲ್ಲೇ ಒಂದು ಸಣ್ಣ ಗ್ರಂಥಾಲಯವನ್ನೂ ನಿರ್ಮಿಸಿಕೊಂಡಿದ್ದಾರೆ.

ಕೃಷಿ, ಸಾಹಿತ್ಯ, ಕಲೆ ಇವೆಲ್ಲವೂ ಅವರ ಬದುಕಿನಲ್ಲಿ ಒಂದೇ ರೀತಿ ಹರಿಯುತ್ತಿವೆ. ಒಬ್ಬ ನೆಲದ ರೈತ ಎಷ್ಟೆಲ್ಲಾ ಆಸಕ್ತಿಗಳನ್ನು ಬೆಳೆಸಿಕೊಳ್ಳಬಹುದು, ಸತತ ಪ್ರಯತ್ನದಿಂದ ಅದನ್ನು ಮೈಗೂಡಿಸಿಕೊಳ್ಳಬಹುದು ಎಂಬುದಕ್ಕೆ ಸತ್ಯನಾರಾಯಣರ ಬದುಕೇ ಒಂದು ದೃಷ್ಟಾಂತ.

ಒಂದು ಚಿಂತನೆ

ಸತ್ಯನಾರಾಯಣರಿಗೆ ಕೃಷಿ ಕೇವಲ ಜೀವನ ಮಾರ್ಗ ಮಾತ್ರವಲ್ಲ, ಒಂದು ಚಿಂತನೆ. ರೈತನ ಅನುಭವವೇ ನಿಜವಾದ ಜ್ಞಾನ ಎಂಬುದು ಅವರ ನಂಬಿಕೆ. ವಿಶ್ವವಿದ್ಯಾಲಯಗಳ ಜ್ಞಾನ ಬೇರೆ, ನೆಲದ ಅನುಭವ ಬೇರೆ ಆದರೆ ಎರಡೂ ಸೇರಿ ಕೃಷಿಯನ್ನು ಉಳಿಸುತ್ತವೆ ಎಂದು ಅವರು ಹೇಳುತ್ತಾರೆ.

ಹಲವು ಆಸಕ್ತಿಗಳು

ಪದ್ಮಶ್ರೀ ಸತ್ಯನಾರಾಯಣರು ಕೇವಲ ಬೀಜ ಸಂರಕ್ಷಕರಲ್ಲ. ಅವರು ಕವಿ, ಲೇಖಕ, ವ್ಯಂಗ್ಯ ಚಿತ್ರಕಾರ, ಒಳ್ಳೆಯ ಓದುಗರೂ ಹೌದು. ಕೇರಳ ಸಾಕ್ಷರತಾ ಮಿಷನ್ ಮೂಲಕ ಪಿಯುಸಿ ಪೂರೈಸಿದ್ದಾರೆ. ಮೋಟಾರ್ ರಿಪೇರಿ, ವಿದ್ಯುತ್ ಕೆಲಸ, ಜೇನು ಸಾಕಣೆ, ಮರದ ಕೆಲಸ ಇವೆಲ್ಲವೂ ಅವರ ಬದುಕಿನ ಇನ್ನೊಂದು ಮುಖ.

ಕರ್ನಾಟಕ ಕೃಷಿ ಕಥನ ಮಾಲಿಕೆ - 8

ಆರುನೂರಕ್ಕೂ ಹೆಚ್ಚು ಬತ್ತದ ತಳಿಗಳನ್ನು ರಕ್ಷಿಸಿಕೊಂಡು ಬಂದಿರುವ ಪದ್ಮಶ್ರೀ ಸತ್ಯ ನಾರಾಯಣ ಬೆಳೇರಿ ಅವರ ಕೃಷಿ ಸಾಧನೆಯ ಕುರಿತು ಲೇಖಕ ನರೇಂದ್ರ ರೈ ದೇರ್ಲ ಅವರು ‘ಭತ್ತದ ತಳಿಯ ಕಾವಲುಗಾರ’ ಎಂಬ ಪುಸ್ತಕವನ್ನು ರಚಿಸಿದ್ದು, ಇದು ಕರ್ನಾಟಕ ಕೃಷಿ ಕಥನ ಮಾಲಿಕೆಯ ಎಂಟನೆಯ ಕೃತಿಯಾಗಿ ರೂಪುಗೊಂಡಿದೆ.