ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharaghavachar Column: ಬಿಬಿಎಂಪಿ ಚುನಾವಣೆಯ ಅಸಲಿ ಕಹಾನಿ

ನಗರಕ್ಕೆಲ್ಲಾ ಒಂದೇ ಪಾಲಿಕೆಯಿರುವಾಗಲೇ ಕಳಪೆ ಕಾಮಗಾರಿಗೆ ಮತ್ತು ಭ್ರಷ್ಟಾಚಾರಕ್ಕೆ ಅಂಕುಶ ಹಾಕ ಲಿಲ್ಲ. ಈಗ ಆರು ಪಾಲಿಕೆಯು ರಚನೆಯಾದ ತರುವಾಯ ಅಧಿಕಾರಿಗಳ ಸಂಖ್ಯೆ ದುಪ್ಪಟ್ಟಾಗಿ ಪಾಲಿಕೆ ಯಲ್ಲಿ ಭ್ರಷ್ಟಾಚಾರ ಯಾವ ಎತ್ತರಕ್ಕೆ ಹೋಗಬಹುದು ಎಂದು ಊಹಿಸಲೂ ಭಯವಾಗುತ್ತದೆ. ಬೆಂಗಳೂರಿಗಿಂತ ದೊಡ್ಡ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈಗಳಲ್ಲಿ ಒಂದೇ ಪಾಲಿಕೆ ಯು ಅಸ್ತಿತ್ವದಲ್ಲಿರುವುದು; ಅವುಗಳನ್ನು ವಿಭಜಿಸಿ ಎಂಬ ಕೂಗು ಅಲ್ಲಿಲ್ಲ.

ಬಿಬಿಎಂಪಿ ಚುನಾವಣೆಯ ಅಸಲಿ ಕಹಾನಿ

ಅಂಕಣಕಾರ ಪ್ರಕಾಶ್ ಶೇಷರಾಘವಾಚಾರ್‌

Profile Ashok Nayak Apr 2, 2025 5:47 AM

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಪಗ್ರಸ್ತವಾ? ಅಥವಾ ರಾಜಕೀಯ ಪಕ್ಷಗಳ ಕಾರ್ಯ ಕರ್ತರು ಅನಾಥರಾ? 2001ರಿಂದ, ಪಾಲಿಕೆಯ ಅವಧಿಯು ಮುಗಿದ ತರುವಾಯ, ಚುನಾವಣೆ ಯನ್ನು ಮುಂದೂಡುವ ಕಾರ್ಯತಂತ್ರಗಳೇ ಕಾಣುತ್ತವೆ. ಪ್ರಜಾಪ್ರಭುತ್ವದ ಮೂರನೇ ಹಂತದ ಆಡಳಿತ ವ್ಯವಸ್ಥೆಯ ಬಗ್ಗೆ ಸರಕಾರಗಳಿಗೆ ಲವಲೇಶವೂ ಗೌರವವಿಲ್ಲದೆ, ಏನಾದರೂ ಸರ್ಕಸ್ ಮಾಡಿ ಚುನಾವಣೆಯನ್ನು ನಡೆಸದಿರುವಲ್ಲಿ ಅವು ಯಶಸ್ವಿಯಾಗುತ್ತಿವೆ.

ಕಳೆದ 2 ದಶಕದಿಂದ, ಪಾಲಿಕೆಯ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸರಕಾರಗಳು ತೋರುತ್ತಿರುವ ಅಸಡ್ಡೆಗೆ ಕಡಿವಾಣವೇ ಇಲ್ಲವಾಗಿದೆ. ಕ್ಷೇತ್ರಗಳ ಹೆಚ್ಚಳ ಮತ್ತು ಕ್ಷೇತ್ರಗಳ ಮೀಸಲಾತಿ ನಿಗದಿ- ಇವು ಪ್ರತಿ ಬಾರಿಯೂ ಚುನಾವಣೆಯನ್ನು ಮುಂದೂಡಲು ಸರಕಾರಗಳು ಬಳಸುತ್ತಿರುವ ಅಸ್ತ್ರವಾಗಿವೆ; ಕ್ಷೇತ್ರವಾರು ಮೀಸಲಾತಿಯು ಪ್ರಕಟವಾಗುತ್ತಿದ್ದ ಹಾಗೆ ಅದರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಚುನಾವಣಾ ಪ್ರಕ್ರಿಯೆಗೆ ತಡೆ ತರುತ್ತಾರೆ. ಒಂದು ಪೀಠವು ಚುನಾವಣೆ ನಡೆಸಲು ಗಡುವು ನಿಗದಿಮಾಡಿದರೆ, ಮತ್ತೊಂದು ಪೀಠವು ಚುನಾವಣೆಗೆ ತಡೆ ಕೊಡುತ್ತದೆ. ಈ ಆಟ ಸಾಗುತ್ತಲೇ ಇದೆ.

ಬೆಂಗಳೂರು ಮಹಾನಗರ ಪಾಲಿಕೆಗೆ 2001ರಲ್ಲಿ 100 ಸ್ಥಾನಗಳಿಗೆ ಚುನಾವಣೆ ನಡೆಯಿತು. 2007ರಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿಕೂಟವು ಅಧಿಕಾರಕ್ಕೆ ಬಂದ ತರುವಾಯ, ನಗರದ ಹೊರ ವಲಯದ ಆರು ಪುರಸಭೆಗಳನ್ನು ವಿಲೀನಮಾಡಿ, 2006ರಲ್ಲಿ ಅದಾಗಲೇ ನಡೆಯಬೇಕಿದ್ದ ಚುನಾವಣೆಯು ಮುಂದಕ್ಕೆ ಹೋಯಿತು. ಬಿಜೆಪಿ ಸರಕಾರವು 2010ರಲ್ಲಿ ಒಟ್ಟು ಸ್ಥಾನವನ್ನು ಹೆಚ್ಚಿಸಿ 198 ಸ್ಥಾನಗಳಿಗೆ ಚುನಾವಣೆ ನಡೆಸಿತು.

2015ರಲ್ಲಿ ಹಣ ದುರುಪಯೋಗದ ಆರೋಪ ಮಾಡಿ ಸಿದ್ದರಾಮಯ್ಯರ ಸರಕಾರವು ಪಾಲಿಕೆಯ ಅವಧಿ ಮುಗಿಯಲು 3 ದಿನವಿರುವಾಗ ಅದನ್ನು ವಿಸರ್ಜಿಸಿತು. 2015ರಲ್ಲಿ, ಚುನಾವಣೆಯನ್ನು ಮುಂದೂಡಲು ಕಾಂಗ್ರೆಸ್ ಸರಕಾರವು ಮಹಾನಗರಪಾಲಿಕೆಯನ್ನು ಪುನರ್ ರಚಿಸುವ ತಂತ್ರಕ್ಕೆ ಮೊರೆಹೋಯಿತು. ಇದರ ಫಲವಾಗಿ, ಬಿ.ಎಸ್.ಪಾಟೀಲ್, ಪಿ.ರವಿಚಂದ್ರನ್ ಮತ್ತು ಸಿದ್ದಯ್ಯ ನೇತೃತ್ವದ ತ್ರಿಸದಸ್ಯ ಸಮಿತಿಯ ನೇಮಕವಾಯಿತು.

ಈ ಸಮಿತಿಯು ತನ್ನ ವರದಿಯಲ್ಲಿ, ನಗರವನ್ನು ಮೂರು ಭಾಗಗಳಾಗಿ ವಿಭಜಿಸಲು ಶಿಫಾರಸು ಮಾಡಿತು. ಇದನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಮುಂದೂಡಲು ನ್ಯಾಯಾಲಯ ದಲ್ಲಿ ಮನವಿ ಮಾಡಲಾಯಿತು. ಆದರೆ ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು 198 ಸ್ಥಾನಗಳಿಗೆ ಚುನಾವಣೆ ನಡೆಸಲು ಆದೇಶಿಸಿತು.

2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿ ಪಾಲಿಕೆಯ ಅಧಿಕಾರವು ಬಿಜೆಪಿಯವರ ಪಾಲಾಯಿತು. ಆದರೆ 2020ರಲ್ಲಿ ಚುನಾವಣೆ ನಡೆಸುವ ಬದಲು, ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾಯ್ದೆಯನ್ನು ರಚಿಸಿ, ಪಾಲಿಕೆಯ ಒಟ್ಟು ಸ್ಥಾನವನ್ನು 243ಕ್ಕೆ ಹೆಚ್ಚಳ ಮಾಡಿ, ಕ್ಷೇತ್ರ ವಿಂಗಡಣೆಯ ನೆಪವೊಡ್ಡಿ ಚುನಾವಣೆಯನ್ನು ಮುಂದೂಡುವಲ್ಲಿ ಅವರು ಯಶಸ್ವಿಯಾದರು.

2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಮರಳಿ ಅಧಿಕಾರಕ್ಕೆ ಬಂದಾಗ, ಚುನಾವಣೆ ನಡೆಸಲು ಅವರಿಗೂ ಆಸಕ್ತಿಯಿಲ್ಲದೆ ಮತ್ತೆ ಕ್ಷೇತ್ರ ಮರುವಿಂಗಡಣೆ ಕೈಗೊಂಡು 225 ವಾರ್ಡ್‌ಗಳನ್ನು ರಚಿಸಿದರು. ನಗರದ ಆಡಳಿತ ವ್ಯವಸ್ಥೆಯನ್ನು ಪುನರ್‌ರಚಿಸಲು ಮತ್ತೊಮ್ಮೆ ಅದೇ ಬಿ.ಎಸ್.ಪಾಟೀಲ್, ಪಿ.ರವಿಚಂದ್ರನ್ ಮತ್ತು ಮಾಜಿ ಆಯುಕ್ತ ಸಿದ್ದಯ್ಯ ನೇತೃತ್ವದ ಮೂರು ಜನರ ಸಮಿತಿಯ ನೇಮಕವಾಯಿತು.

ಇದರ ಆಧಾರದ ಮೇಲೆ ಚುನಾವಣೆಯನ್ನು ಮುಂದೂಡಲು ಸರಕಾರ ಮನವಿ ಮಾಡಿತು. ಆದರೆ ನ್ಯಾಯಾಲಯ ಇದನ್ನು ತಿರಸ್ಕರಿಸಿ 198 ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಆದೇಶಿಸಿತು. ಈ ತೀರ್ಪಿನ ವಿರುದ್ಧ ಸರಕಾರವು ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆಯನ್ನು ಪಡೆಯಿತು. ವಿವಾದವು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದಾಗ, ಬೆಂಗಳೂರಿನ ಕೆಲವು ಪ್ರಬಲ ಶಾಸಕರ ಪ್ರಯತ್ನದೊಂದಿಗೆ, ಕಳೆದ 5 ವರ್ಷದಿಂದ ಚುನಾವಣೆ ನಡೆಸಲು ಆದೇಶ ಕೋರಿ ಸಲ್ಲಿಸಿದ್ದ ಅರ್ಜಿಯು ವಿಚಾರಣೆಗೇ ಬಾರದಂತೆ ತಡೆಯುವಲ್ಲಿ ಯಶಸ್ವಿಯಾದರು.

198 ಕ್ಷೇತ್ರಗಳ ರಚನೆಯಾದಾಗ ವಾರ್ಡ್‌ಗಳಿಗೆ ಹೊಸ ಹೆಸರು ನೀಡಿದ ಕಾರಣ, ವಾರ್ಡ್‌ಗಳಲ್ಲಿನ ಬೋರ್ಡ್‌ಗಳು ಬದಲಾದವು. ಆ ನಂತರ ಕ್ಷೇತ್ರಗಳು 235 ಆಗಿ ಬದಲಾದಾಗ, ಮತ್ತೆ ಹೊಸ ಬೋರ್ಡ್‌ ಗಳು ಬದಲಾದವು. ಆನಂತರ ಕಾಂಗ್ರೆಸ್‌ನವರು 225 ಕ್ಷೇತ್ರಕ್ಕೆ ಅದನ್ನು ಕಡಿತಗೊಳಿಸಿದರು, ಮತ್ತೆ ಹೊಸದಾಗಿ ಬೋರ್ಡ್‌ಗಳು ಬದಲಾದವು. ಪಾಲಿಕೆಯಲ್ಲಿ ಜನರ ತೆರಿಗೆ ಹಣಕ್ಕೇನೂ ಬೆಲೆಯಿಲ್ಲದ ಕಾರಣ ಹೊಸ ಬೋರ್ಡ್‌ಗಳನ್ನು ಬರೆಸುತ್ತಲೇ ಇರುತ್ತಾರೆ!

ಇದರ ನಡುವೆ, ಪಾಲಿಕೆಯ ಸದಸ್ಯರ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಳ ಮಾಡಿದಾಗ, ಸದಸ್ಯರು ಸಭೆ ಸೇರುವ ಕೌನ್ಸಿಲ್ ಹಾಲ್‌ನಲ್ಲಿ ಸಂಖ್ಯೆಗೆ ತಕ್ಕ ಹಾಗೆ ಸ್ಥಳಾವಕಾಶ ಕಲ್ಪಿಸಲು ಪಾಲಿಕೆಯು ಕಳೆದ 2 ವರ್ಷದಲ್ಲಿ 25 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಿದೆ. ಈಗ ನೂತನ ಕಾಯ್ದೆಯು ದುರದೃಷ್ಟವಶಾತ್ ಜಾರಿಗೆ ಬಂದರೆ, ಸದಸ್ಯರ ಸಂಖ್ಯೆಯು ನೂರು ದಾಟದಿರುವುದರಿಂದ, ನವೀಕರಿಸಲು ಮಾಡಿರುವ 25 ಕೋಟಿ ರುಪಾಯಿಯು ನೀರಿನಲ್ಲಿ ಬೂದಿ ಯನ್ನು ಕಲೆಸಿದ ಹಾಗೆ ಆಗುತ್ತದೆ.

ಅವೈಜ್ಞಾನಿಕವಾಗಿರುವ ಮೀಸಲಾತಿ ನಿಗದಿಯು ಚುನಾವಣೆಯನ್ನು ಮುಂದೂಡುವಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ. 2021ರಲ್ಲಿ, 243 ಸ್ಥಾನಗಳಿಗೆ ಮೀಸಲಾತಿಯನ್ನು, ನ್ಯಾಯಾಲಯ ದಲ್ಲಿ ಪ್ರಶ್ನಿಸಿದ ಕೂಡಲೇ ನಿಶ್ಚಿತವಾಗಿ ಅದು ರದ್ದಾಗುವ ಹಾಗೆ ಕೈಗೊಳ್ಳಲಾಯಿತು. ಮೀಸಲಾತಿ ನಿಗದಿಪಡಿಸಲು ಸರಕಾರವು 2001ರ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಳ್ಳುವುದರಿಂದ, ಸುಲಭವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಪಾಲಿಕೆಗೆ ಚುನಾವಣೆ ನಡೆಯದಿರಲು ರಣತಂತ್ರ ರೂಪಿಸಿ ಕಾಂಗ್ರೆಸ್ ಸರಕಾರವು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಧೇಯಕ’ಕ್ಕೆ ವಿಧಾನಸಭೆಯಲ್ಲಿ ತರಾತುರಿಯಲ್ಲಿ ಅನುಮೋದನೆ ಪಡೆದಿದೆ. ಹೊಸ ಕಾಯ್ದೆಯನ್ವಯ ನಗರವನ್ನು ಆರು ಪಾಲಿಕೆಗಳಾಗಿ ವಿಭಜಿಸಲಾಗುವುದು. ಪ್ರತಿ ಪಾಲಿಕೆಯಲ್ಲಿ ನೂರು ಸದಸ್ಯರು ಇರುತ್ತಾರೆ. 600 ಸದಸ್ಯರಿಗೆ 600 ಕ್ಷೇತ್ರಗಳನ್ನು ರಚಿಸಬೇಕು. 600 ಕ್ಷೇತ್ರಗಳಲ್ಲಿ ಮೀಸಲಾತಿ ನಿಗದಿಪಡಿಸಬೇಕು.

ಕಳೆದ 5 ವರ್ಷದಿಂದ ಜನಪ್ರತಿನಿಽಗಳಿಲ್ಲದೆ ಬೆಂಗಳೂರು ಅನಾಥವಾಗಿದೆ. ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ರಾಜಕೀಯ ನಾಯಕರುಗಳು ಸಂವಿಧಾನಕ್ಕೆ ಅಪಚಾರವೆಸಗು ತ್ತಿದ್ದಾರೆ. ತಮಗಾಗಿ ದುಡಿಯುವ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು, ಅವರನ್ನು ನಾಯಕ ರನ್ನಾಗಿ ಬೆಳೆಸಿ ಪಕ್ಷವನ್ನು ಗಟ್ಟಿಗೊಳಿಸಬೇಕು ಎಂಬ ಉದಾರತೆಯೇ ಶಾಸಕರುಗಳಲ್ಲಿ ಇಲ್ಲ; ಎಲ್ಲ ಅಧಿಕಾರವೂ ತಮ್ಮಲ್ಲೇ ಇರಬೇಕೆಂಬ ಸಂಕುಚಿತ ಮನೋಭಾವವನ್ನು ಅವರು ಹೊಂದಿದ್ದಾರೆ.

2026ರಲ್ಲಿ ದೇಶದ ಜನಗಣತಿಗೆ ಕ್ಷಣಗಣನೆ ಆರಂಭವಾಗಿದೆ. ಅದರೊಂದಿಗೆ ಕ್ಷೇತ್ರಗಳ ಮರು ವಿಂಗಡಣೆ ಹಾಗೂ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಬರುತ್ತವೆ. ಹೀಗಾಗಿ, ಕ್ಷೇತ್ರಗಳ ಮರುವಿಂಗಡಣೆ ಸಮಿತಿಯು ರಚನೆಯಾಗಿ, ಅದು ಅಂತಿಮ ವರದಿ ಸಲ್ಲಿಸುವವರೆಗೂ ಕಾಯು ವುದು ಅನಿವಾರ್ಯವಾಗುವುದು.

ಇದರಿಂದಾಗಿ, ಇನ್ನೂ ಮೂರರಿಂದ ನಾಲ್ಕು ವರ್ಷದವರೆಗೆ ಪಾಲಿಕೆಯ ಚುನಾವಣೆಯನ್ನು ಸುಲಭವಾಗಿ ಮುಂದೂಡಲು ಬಲವಾದ ಕಾರಣ ದೊರೆಯುತ್ತದೆ. ಮುಂದಿನ ಕನಿಷ್ಠ ಮೂರು ವರ್ಷದವರೆಗಾದರೂ ಪಾಲಿಕೆಗೆ ಚುನಾವಣೆ ನಡೆಯದಂತೆ ನೋಡಿಕೊಳ್ಳುವ ಹುನ್ನಾರ ನಡೆದಿದೆ.

2009ರಲ್ಲಿ ಸೇರ್ಪಡೆಯಾದ ನಗರದ ಹೊರವಲಯದ 150 ಹಳ್ಳಿಗಳಿಗೆ ಮೂಲಸೌಕರ್ಯ ನೀಡಲು ಪಾಲಿಕೆ ಪರದಾಡುತ್ತಿದೆ. ಸಂಪನ್ಮೂಲ ಮತ್ತು ಸೂಕ್ತ ಯೋಜನೆಗಳ ಕೊರತೆಯಿಂದ ಈ ಹಳ್ಳಿಗಳು ಸೌಲಭ್ಯವಂಚಿತವಾಗಿವೆ. ಈಗ ರಾಮನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಸೇರ್ಪಡೆ ಮಾಡಿ, ಅಲ್ಲಿ ಮಹಾನಗರ ಮಟ್ಟದ ಸೌಕರ್ಯ ವಿಸ್ತರಿಸುವ ಹಗಲುಗನಸನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಇವರ ಈ ಕಾಯ್ದೆಯಿಂದಾಗಿ ಹೊರ ವಲಯದಲ್ಲಿ ಭೂಮಿಯ ಬೆಲೆಯು ಚಿನ್ನದಷ್ಟಾಗಿ, ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಅಪಾರ ಲಾಭವಾಗುವುದರಲ್ಲಿ ಸಂದೇಹವಿಲ್ಲ.

ಕಾಯ್ದೆಯಿಂದ ಬಡತನ ನಿರ್ಮೂಲನವಾಗುತ್ತದೆ ಮತ್ತು ಸರಕಾರದ ಆಡಳಿತವು ಪಾರದರ್ಶಕ ವಾಗುತ್ತದೆ ಎಂಬ ಭ್ರಮೆಯನ್ನು ಕಾಂಗ್ರೆಸ್ ಪಕ್ಷವು ದಶಕಗಳಿಂದ ಜನರಲ್ಲಿ ಬಿಂಬಿಸಿದೆ. ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಯನ್ನು ಜಾರಿಗೊಳಿಸಿ, ಬೆಂಗಳೂರು ನಗರಕ್ಕೆ ವಿಶ್ವ ದರ್ಜೆಯ ಸೌಲಭ್ಯ-ಸೌಕರ್ಯ ನೀಡುತ್ತೇವೆ ಎಂಬ ಬೊಗಳೆ ಬಿಡುತ್ತಿದ್ದಾರೆ.

ನಗರಕ್ಕೆಲ್ಲಾ ಒಂದೇ ಪಾಲಿಕೆಯಿರುವಾಗಲೇ ಕಳಪೆ ಕಾಮಗಾರಿಗೆ ಮತ್ತು ಭ್ರಷ್ಟಾಚಾರಕ್ಕೆ ಅಂಕುಶ ಹಾಕಲಿಲ್ಲ. ಈಗ ಆರು ಪಾಲಿಕೆಯು ರಚನೆಯಾದ ತರುವಾಯ ಅಧಿಕಾರಿಗಳ ಸಂಖ್ಯೆ ದುಪ್ಪಟ್ಟಾಗಿ ಪಾಲಿಕೆಯಲ್ಲಿ ಭ್ರಷ್ಟಾಚಾರ ಯಾವ ಎತ್ತರಕ್ಕೆ ಹೋಗಬಹುದು ಎಂದು ಊಹಿಸಲೂ ಭಯವಾ ಗುತ್ತದೆ. ಬೆಂಗಳೂರಿಗಿಂತ ದೊಡ್ಡ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈಗಳಲ್ಲಿ ಒಂದೇ ಪಾಲಿಕೆಯು ಅಸ್ತಿತ್ವದಲ್ಲಿರುವುದು; ಅವುಗಳನ್ನು ವಿಭಜಿಸಿ ಎಂಬ ಕೂಗು ಅಲ್ಲಿಲ್ಲ.

ಸಂವಿಧಾನದ 74ನೇ ತಿದ್ದುಪಡಿಯಲ್ಲಿರುವ ಅಧಿಕಾರ ವಿಕೇಂದ್ರೀಕರಣ ನೀತಿಗೆ ವಿರುದ್ಧವಾಗಿ ಸರಕಾರವು ಅಧಿಕಾರ ಕೇಂದ್ರೀಕರಣವಾಗುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿದೆ. ಹೊಸ ಸರಕಾರ ರಚನೆಯಾಗಿ ಎರಡು ವರ್ಷವಾದರೂ, ನಗರದ ಹಿತದೃಷ್ಟಿಯಿಂದ ಒಂದೇ ಒಂದು ನಾಗರಿಕ-ಸ್ನೇಹಿ ಯೋಜನೆಯನ್ನು ರೂಪಿಸಲು ಸಾಧ್ಯವಾಗಿಲ್ಲ. ಗುಂಡಿ ಬೀಳದ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲಿಲ್ಲ, ಕಸಮುಕ್ತ ಮಾಡಲಿಲ್ಲ.

ಒಂದೇ ಒಂದು ವಾಹನ ನಿಲುಗಡೆ ಸಮುಚ್ಚಯ ನಿರ್ಮಿಸಲಿಲ್ಲ. ನಗರದ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿಯೇ ಸಚಿವರಲ್ಲಿ ಅಥವಾ ಅಧಿಕಾರಿಗಳಲ್ಲಿ ಇಲ್ಲದಿರುವಾಗ, ಹೊಸ ಕಾಯ್ದೆಯು ಸೃಷ್ಟಿಸುವ ವ್ಯವಸ್ಥೆಯಲ್ಲಿ ಅದೇ ಅಧಿಕಾರಿಗಳು, ಸಿಬ್ಬಂದಿಗಳು, ಮೇಲಾಗಿ ಅದೇ ಸಚಿವರಿಂದ ಅದ್ಯಾವ ಬದಲಾವಣೆ ಬರಲು ಸಾಧ್ಯ? ಬೆಂಗಳೂರು ನಗರಕ್ಕೆ ಕಾಯ್ದೆಯ ಮೇಲೆ ಕಾಯ್ದೆ ರೂಪಿಸಿ, ಚುನಾವಣೆಯನ್ನು ನಡೆಸದಂತೆ ಕುತಂತ್ರ ಮಾಡಿ, ಎಲ್ಲಾ ಪಕ್ಷದ ಕಾರ್ಯಕರ್ತ ರನ್ನು ಅಧಿಕಾರದಿಂದ ವಂಚಿಸಲಾಗಿದೆ.

ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳು ನಿರ್ದಿಷ್ಟ ಅವಧಿಗೆ ನಿಯತವಾಗಿ ನಡೆಯುತ್ತವೆ; ಆದರೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ರೀತಿಯ ಕಟ್ಟುಪಾಡು ಹಾಕದಿರುವ ಕಾರಣ, ಕುಂಟುನೆಪವೊಡ್ಡಿ ಪದೇ ಪದೆ ಚುನಾವಣೆಯನ್ನು ಮುಂದೂಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದನ್ನು ತಡೆಯಬೇಕಾದ ರಾಜ್ಯ ಚುನಾವಣಾ ಆಯೋಗವು ಹಲ್ಲು ಕಿತ್ತ ಹಾವಾಗಿರುವುದು ಶೋಚನೀಯ.

(ಲೇಖಕರು ಬಿಜೆಪಿಯ ವಕ್ತಾರರು)