ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiran Kumar Vivekavamshi Column: ಬಸವಣ್ಣನ ಹೆಸರಿನಲ್ಲಿ ನಡೆಯುತ್ತಿರುವ ವೈಚಾರಿಕ ಧ್ರುವೀಕರಣದ ಅಸಲಿಯತ್ತು !

ತಮ್ಮ ಕೃತಿಯಲ್ಲಿ ಭಕ್ತಿಭಂಡಾರಿ ಬಸವಣ್ಣನವರ ಕುರಿತು ತಮ್ಮ ಮಾತುಗಳಲ್ಲಿ ಆಡಿದಂತೆಯೇ ನಮೂದಿಸಿದಲ್ಲಿ ಅದನ್ನೆಂದೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ತಮ್ಮ ಮಾತುಗಳಿಗೆ ಕೆಲವು ಆಕರ ಗ್ರಂಥಗಳನ್ನು ಉಲ್ಲೇಖಿಸಿದ್ದಾರೆ. ಅವರ ಹೇಳಿಕೆಗಳು ಅಥವಾ ಅವರು ಉಲ್ಲೇಖಿಸಿದ ಆಕರಗಳಲ್ಲಿ ತಪ್ಪುಗಳಿದ್ದರೆ, ಅವುಗಳನ್ನು ಆಧಾರಸಹಿತವಾಗಿ ಪ್ರಶ್ನಿಸಬೇಕು. ಆ ಗ್ರಂಥಗಳ ಲೇಖಕರು, ಸಂಪಾದಕರು ಮತ್ತು ಅವುಗಳಲ್ಲಿನ ವಿಚಾರಗಳ ಹೊಣೆಗಾರಿಕೆಯನ್ನು ಚರ್ಚಿಸಲೇಬೇಕು.

ಬಸವಪಥ

ಕಿರಣ್‌ ಕುಮಾರ ವಿವೇಕವಂಶಿ

‘ಬಸವನೆಂದರೆ ಯಾರು? ಬಿಜ್ಜಳನ ಕರಣಿಕನೆ? ಬಿದ್ದವರನೆತ್ತಲಿಕೆ ದುಡಿದ ಶಿವಯೋಗಿ! ಬಸವನೆಂದರೆ ತತ್ವ- ಮುದ್ದುರಾಮ’ ಎಂದುಲಿದ ಕವಿ ಕೆ.ಸಿ.ಶಿವಪ್ಪನವರ ಮಾತನ್ನೊಮ್ಮೆ ಈಗ ಮತ್ತೆ ನೆನಪು ಮಾಡಿಕೊಡುವ ಕಾಲ ಸನ್ನಿಹಿತವಾಗಿದೆ. ಬಸವಣ್ಣನವರು ಒಬ್ಬ ವ್ಯಕ್ತಿಯಾಗಿ ಅಲ್ಲ, ತತ್ವವಾಗಿ ಕಂಡವರು.

ಶಿವಶರಣರ ಚಿಂತನೆ ಲಹರಿಯೆಲ್ಲವೂ ಶೃತಿಯಾದದ್ದು ಬಸವಣ್ಣನಿಂದಲೇ! ಇಡಿಯ ಶಿವಶರಣ ಪರಂಪರೆ ಕೇಂದ್ರವಾಗಿ ನಿಂತವನು ಆತ. ಬಸವಣ್ಣ ಎಂಬವನು ಶರಣನಾಗಿ ಬಾರದಿದ್ದರೆ ಭವವೆಲ್ಲವೂ ಅಂಧಕಾರದ ಮುಳುಗಿರುತ್ತಿತ್ತು. ಬಸವಣ್ಣ ಭಕ್ತಿಯ ಬೆಳವಿಗೆಯನ್ನು ದೆಸೆದೆಸೆಗೆಲ್ಲ ಪಸರಿಸಿದವನು. ಅಂಥ ಬಸವಣ್ಣ ನನ್ನು ಎಂದಿಗೂ ಸಮಾಜ ಅತ್ಯಂತ ಆದರದಿಂದ ಕಾಣುತ್ತಿದೆ. ಆದರೆ ಕಳೆದ ಕೆಲವು ದಶಕಗಳಿಂದ ಅಪ್ಪಟ ಶಿವಭಕ್ತನಾಗಿದ್ದ ಬಸವಣ್ಣ ಹಾಗೂ ಇತರ ಶಿವಶರಣರನ್ನು ಜಾತಿಯ ಪ್ರತಿನಿಧಿಗಳು, ರಾಜಕೀಯ ನಾಯಕರಂತೆ ಬಿಂಬಿಸಿ ಮನ ಬಂದಂತೆ ಬಳಸಿಕೊಳ್ಳುವ ಪ್ರವೃತ್ತಿ ಆರಂಭವಾಯಿತು.

ಅದು ಇಂದು ಎಲ್ಲಿಯತನಕ ಬಂದು ನಿಂತಿದೆ ಗೊತ್ತೆ? ಬಸವಣ್ಣ ಎಂದರೆ ಪ್ರತ್ಯೇಕ ಧರ್ಮದ ಹೋರಾಟ ಗಾರ, ಸನಾತನ ಧರ್ಮ ಮೂಲೋತ್ಪಾಟನೆಯ ಹರಿಕಾರ, ಕಮ್ಯುನಿಸ್ಟ್ ಪ್ರಣಾಳಿಕೆಯ ಚಿಂತನಕಾರ, ಕಾರ್ಲ್ ಮಾರ್ಕ್ಸ್ ಹೇಳಿದ ಸೋಷಿಯಲಿ, ಸೆಕ್ಯುಲರಿಸ್ಟ್, ಕಮ್ಯುನಿಸ್ಟ್ ಹಾಗೂ ರೆವಲ್ಯೂಷನರಿಸ್ಟ್ ಇತ್ಯಾದಿ.. ಇತ್ಯಾದಿ! ‌

ಇದನ್ನೂ ಓದಿ: Kiran Kumar Vivekavamshi Column: ಕಾಂಗ್ರೆಸ್‌ ಪಕ್ಷವು ಬಿಜೆಪಿ-ವಿರೋಧಿಯೋ, ಭಾರತ-ವಿರೋಧಿಯೋ ?

ಹೀಗೆ ಲೇಬಲಿಂಗ್ ಮಾಡಲಾದಾಗ ಸಹಜವಾಗಿ ಅನೇಕರಿಗೆ ಬಸವಣ್ಣ ರಾಜಕೀಯ ಬಂಡವಾಳ ವಾದ. ಸಮಾಜದ ಕಣ್ಣಿಗೆ ಮಣ್ಣೆರಚುವ ಖದೀಮರಿಗೆ ರಕ್ಷಾಕವಚವಾದ. ಆಕಳ ಮುಖ ಹೊದ್ದು ನರಿಯ ಕೆಲಸ ಮಾಡುವ ನರರಾಕ್ಷಸರಿಗೆ ಮುಖವಾಡವೂ ಆದ. ಇದನ್ನೇ ಬಂಡವಾಳ ಮಾಡಿಕೊಂಡ ಕಮ್ಯುನಿಸ್ಟರು ಬಸವಣ್ಣನ ಹೆಸರು ಹೇಳುತ್ತಲೇ ವೀರಶೈವ- ಲಿಂಗಾಯತ ಪ್ರತ್ಯೇಕ, ಲಿಂಗಾಯತ ಅಹಿಂದು, ಅದೊಂದು ಪ್ರತ್ಯೇಕ ಧರ್ಮ ಎಂಬಿತ್ಯಾದಿ ವಿಷ ಬೀಜ ಬಿತ್ತಿದರು. ಅದಕ್ಕೆ ಕೆಲ ಲಿಂಗಾಯತ ಮಠಾಧೀಶರನ್ನು, ರಾಜಕಾರಣಿಗಳನ್ನು, ಶಿಕ್ಷಣ ತಜ್ಞರನ್ನು, ವಿಚಾರವಾದಿಗಳನ್ನು ಬಂಡವಾಳವಾಗಿ ಬಳಸಿಕೊಂಡರು.

ತತ್ಪರಿಣಾಮ ಈ ಹೊತ್ತಿಗೆ ಸಿಕ್ಕ ಸಿಕ್ಕವರು ಬಸವಾದಿ ಶಿವಶರಣರ ಬಗ್ಗೆ ಮನಬಂದಂತೆ ಮಾತನಾಡು ತ್ತಿದ್ದಾರೆ. ತಮಗೆ ಇಷ್ಟವಾದಂತೆ ವ್ಯಾಖ್ಯಾನಿಸುತ್ತಿzರೆ. ಅದನ್ನೇ ಸತ್ಯ ಎಂದು ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅವರನ್ನು ಸಂಕುಚಿತ ಮನಸ್ಸಿನಿಂದಲೇ ಚಿತ್ರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಸೈದ್ಧಾಂತಿಕ ಸಂಘರ್ಷಕ್ಕೂ ಶರಣರು ಅಸ್ತ್ರವಾಗಿ ಬಳಕೆಯಾಗು ತ್ತಿದ್ದಾರೆ. ಇದೀಗ ನಡೆಯುತ್ತಿರುವ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯ ಚರ್ಚೆಯೇ ಇದಕ್ಕೆ ತಾಜಾ ಉದಾಹರಣೆ.

ಬಸವಣ್ಣನವರ ಕುರಿತಾದ ಅವಹೇಳನ ಖಂಡನೀಯ: ಒಂದು ಕೃತಿಯ ವಿಚಾರಗಳು, ಕೃತಿಕಾರರ ಅಭಿಪ್ರಾಯಗಳು ಮತ್ತು ಅವರ ಹೇಳಿಕೆಗಳು ಅವರ ವೈಯಕ್ತಿಕ ಬೌದ್ಧಿಕ ಅಭಿವ್ಯಕ್ತಿಯ ಭಾಗ. ಈ ಹಿಂದೆ ವಿಶ್ವವಾಣಿಯಲ್ಲಿ ಪ್ರಕಟವಾದ ಲೇಖನಗಳೇ ಇಂದು ಕೃತಿಯ ರೂಪದಲ್ಲಿ ಹೊರಬಂದಿವೆ. ಹಾಗಾದರೆ, ಆ ಕೃತಿಯಲ್ಲಿ ಏನು ಹೇಳಲಾಗಿದೆ? ಯಾವ ವಿಚಾರಗಳು ತಪ್ಪಾಗಿವೆ? ಯಾವ ಆಧಾರಗಳು ಅಸಮರ್ಪಕ ವಾಗಿವೆ? ಎಂಬುದನ್ನು ಸಮಗ್ರವಾಗಿ ವಿಶ್ಲೇಷಿಸಿ, ವಿಶ್ವಗುರು ಬಸವಣ್ಣನವರನ್ನು ಖಜಾನೆ ಕಳ್ಳ, ಬಿಜ್ಜಳನನ್ನು ಕೊಲ್ಲಿಸಿದವರು ಎಂಬಂತೆ ಬಿಂಬಿಸಿದ್ದರೆ ರವಿ ಹಂಜಗಿಮಠ ಅವರ ಕೃತಿಯನ್ನು ಖಡಾಖಂಡಿತವಾಗಿ ವಿರೋಧಿಸಬೇಕು.

K K V

ತಮ್ಮ ಕೃತಿಯಲ್ಲಿ ಭಕ್ತಿಭಂಡಾರಿ ಬಸವಣ್ಣನವರ ಕುರಿತು ತಮ್ಮ ಮಾತುಗಳಲ್ಲಿ ಆಡಿದಂತೆಯೇ ನಮೂದಿಸಿದಲ್ಲಿ ಅದನ್ನೆಂದೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರು ತಮ್ಮ ಮಾತುಗಳಿಗೆ ಕೆಲವು ಆಕರ ಗ್ರಂಥಗಳನ್ನು ಉಲ್ಲೇಖಿಸಿದ್ದಾರೆ. ಅವರ ಹೇಳಿಕೆಗಳು ಅಥವಾ ಅವರು ಉಖಿಸಿದ ಆಕರಗಳಲ್ಲಿ ತಪ್ಪುಗಳಿದ್ದರೆ, ಅವುಗಳನ್ನು ಆಧಾರಸಹಿತವಾಗಿ ಪ್ರಶ್ನಿಸಬೇಕು. ಆ ಗ್ರಂಥಗಳ ಲೇಖಕರು, ಸಂಪಾದಕರು ಮತ್ತು ಅವುಗಳಲ್ಲಿನ ವಿಚಾರಗಳ ಹೊಣೆಗಾರಿಕೆಯನ್ನು ಚರ್ಚಿಸಲೇಬೇಕು.

ಸರ್ಕಾರ ಅವುಗಳ ಪ್ರಕಟಣೆಯನ್ನು ಈ ಕೂಡಲೇ ನಿಲ್ಲಿಸಬೇಕು. ಆದರೆ, ಈ ಚರ್ಚೆಯ ನಡುವೆ ಆರೆಸ್ಸೆಸ್, ಬ್ರಾಹ್ಮಣರು ಮತ್ತು ಪಂಚಪೀಠಗಳನ್ನು ಎಳೆದುತರುವ ಔಚಿತ್ಯವೇನು? ಎಲ್ಲ ಅನಿಷ್ಟಗಳಿಗೂ ಶನೇಶ್ವರನೇ ಕಾರಣ ಎಂಬಂತೆ ರವಿ ಹಂಜ್ ಅವರ ಕೃತಿ ಮತ್ತು ಅಭಿಪ್ರಾಯಗಳೊಂದಿಗೆ ಆರೆಸ್ಸೆಸ್, ಬ್ರಾಹ್ಮಣರು ಹಾಗೂ ಪಂಚಪೀಠಗಳನ್ನು ತಳಕು ಹಾಕಲಾಗುತ್ತಿದೆ. ಇದರ ಹಿಂದಿನ ಅಸಲಿಯತ್ತು ಏನು? ಎಂಬುದು ಬಯಲಾಗಬೇಕು.

ವಿಶೇಷವಾಗಿ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ಅವರ ಜಾತಿಯ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವ ಪ್ರವೃತ್ತಿ ಕಂಡುಬರುತ್ತಿದೆ. ಜೊತೆಗೆ ವೀರಶೈವ-ಲಿಂಗಾಯತ ಪರಂಪರೆಯ ಪಂಚಪೀಠಗಳನ್ನೂ ಅನಗತ್ಯವಾಗಿ ವಿವಾದದೊಳಗೆ ಎಳೆಯಲಾಗುತ್ತಿದೆ. ಇದೆಲ್ಲ ಏಕೆ ನಡೆಯುತ್ತಿದೆ ಎಂಬುದನ್ನು ಒಮ್ಮೆ ಆಳವಾಗಿ ವಿಶ್ಲೇಷಿಸಿದರೆ, ಅದರ ಹಿಂದಿನ ಸೈದ್ಧಾಂತಿಕ ಉದ್ದೇಶಗಳು ಅರ್ಥವಾಗುತ್ತವೆ.

ರವಿ ಹಂಜ್ ಮತ್ತು ಕಮ್ಯುನಿಸ್ಟ್ ಚಿಂತನೆ: ಬಸವ ಮಂಟಪ ಕೃತಿಯ ಲೇಖಕರಾದ ರವಿ ಹಂಜಗಿಮಠ ಅವರೇ ಹಿಂದೆ ಕಮ್ಯುನಿಸ್ಟ್ ಚಿಂತನೆಯಿಂದ ಪ್ರಭಾವಿತರಾದವರು. ಅವರು ಒಂದು ಕಾಲದ ಕಮ್ಯುನಿ ಪಟಾಲಮ್ಮಿನಲ್ಲಿ ಇದ್ದವರೇ! ಅವರಿಗೆ ದೇವರ ಮೇಲಾಗಲಿ, ಹಿಂದುತ್ವದಲ್ಲಾಗಲಿ ನಂಬಿಕೆಯೂ ಇಲ್ಲ. ಈ ಹಿಂದೆ ಹಿಂದುತ್ವವನ್ನು, ಸಂಪ್ರದಾಯಗಳನ್ನು ಕಟುವಾಗಿ ಟೀಕಿಸಿದವರು ಅವರು. ಬಹುಪಾಲು ಅವರ ಗೆಳೆಯರ ಬಳಗವೂ ಇದೇ ಗುಂಪು. ಇದೆಲ್ಲ ನೋಡಿದರೆ ಕಮ್ಯುನಿಸ್ಟರೇ ಹಿಂದೆ ನಿಂತು ಇದೆಲ್ಲ ಮಾಡಿಸುತ್ತಿದ್ದಾರೇನೋ ಎಂಬ ಅನುಮಾನವೂ ದಟ್ಟವಾಗುತ್ತದೆ.

ಹಿಂದುತ್ವ ಹಾಗೂ ಆರೆಸ್ಸೆಸ್ ವಿರೋಧಕ್ಕೆ ಪುಷ್ಟಿ: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರು ಲಿಂಗಾಯತ ಅವೈದಿಕ ಎಂದೂ, ಅದು ಹಿಂದೂ ಅಲ್ಲ ಎಂದೂ, ವೀರಶೈವ ಸಪ್ತಶೈವದ ಭಾಗವೂ, ವೈದಿಕವೂ ಆದ್ದರಿಂದ ವೀರಶೈವ- ಲಿಂಗಾಯತವೂ ಪ್ರತ್ಯೇಕವೆಂದೂ ವಾದಿಸಿಕೊಂಡು ಬಂದಿದ್ದರು. ಇನ್ನೇನು ವಿಭಜಿಸಲು ಯಶಸ್ವಿಯಾದರು ಎನ್ನುವಷ್ಟರಲ್ಲಿ ‘ವಚನ ದರ್ಶನ’ ಎಂಬ ಕೃತಿ ಹೊರಬಂದು ಇವರೆಲ್ಲರ ಸ್ವಪ್ನವನ್ನು ಭಗ್ನಗೊಳಿಸಿತು.

ಒಂದು ಸಾಮಾನ್ಯ ಕೃತಿಗೆ ಇವರೆಲ್ಲ ಅದೆಷ್ಟು ಪತರಗುಟ್ಟಿದರು ಎಂದರೆ ಕಂಡಕಂಡಲ್ಲಿ ಪುಸ್ತಕ ವಿರೋಧಿಸಿ ಪ್ರತಿಭಟನೆ ನಡೆಸಿದರು, ಚರ್ಚೆಗೆ ಬಂದಿದ್ದ ಪತ್ರಿಕಾ ಕಚೇರಿ ಎದುರು ಪುಸ್ತಕ ಸುಟ್ಟು ಹಾಕುವ ನಾಟಕವಾಡಿದರು. ಎಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯುತ್ತದೆಯೋ ಅಲ್ಲ ಪುಸ್ತಕ ವಿರೋಧಿ ಚಳುವಳಿ ಆರಂಭಿಸಿದರು. ನಾಲ್ಕಾರು ಪುಸ್ತಕಗಳನ್ನು ಪ್ರತಿಕ್ರಿಯೆಯಾಗಿ ಹೊರತಂದರು. ಇಷ್ಟಾದರೂ ಪುಸ್ತಕದ ಪ್ರಭಾವ ಕಡಿಮೆ ಆಗಲಿಲ್ಲ. ವಚನ ದರ್ಶನ ಪುಸ್ತಕದ ಮುಖಪುಟ ಬಿಟ್ಟರೆ, ಪುಸ್ತಕದೊಳಗೆ ಕಾಣಿಸಲಾದ ಒಂದೇ ಒಂದು ಅಂಶ ತಪ್ಪಾಗಿರುವುದಾಗಿ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.

ಈ ಅವಮಾನವನ್ನು ಪ್ರಗತಿಪರರೆಂದೂ ಊಹಿಸಿರಲಿಲ್ಲ ಮತ್ತು ಅದರಿಂದಾದ ಮುಖಭಂಗವನ್ನು ಸಹಿಸಲು ಸಾಧ್ಯವೂ ಆಗಲಿಲ್ಲ. ಸಾಂಸ್ಕೃತಿಕ ಮಾರ್ಕ್ಸ್‌ʼವಾದಿಗಳ ಅಂತರಂಗದ ಅಹಂಕಾರಕ್ಕೆ ದೊಡ್ಡ ಪೆಟ್ಟುಬಿತ್ತು. ಅರೆಗಚ್ಚಾದ ಹಾವಿನಂತೆ ಬುಸುಗುಡಲು ಆರಂಭಿಸಿದರು. ಅಂದಿನಿಂದ ಎಲ್ಲಾ ಸಾಧ್ಯ ವಾಗುವುದೋ ಅಲ್ಲ ಆರೆಸ್ಸೆಸ್ ಹೆಸರು ತಳಕು ಹಾಕಿ ಮಾತನಾಡುವ, ಮನಸ್ಸಿಗೆ ಬಂದಂತೆ ಅರಚಾಡಿ ಬಾಯಿಚಪಲ ತೀರಿಸಿಕೊಳ್ಳುವ, ಆರೆಸ್ಸೆಸ್ ಲಿಂಗಾಯತ ವಿರೋಧಿ ಹಾಗೂ ಶಿವಶರಣ ವಿರೋಧಿ ಎಂದು ಚಿತ್ರಿಸುವ ಪ್ರಯತ್ನಕ್ಕೆ ಕೈಹಾಕಿದರು.

ಅನೇಕ ಲೇಖನ, ಪುಸ್ತಕ, ಕಾರ್ಯಕ್ರಮ ಹಾಗೂ ಸುದ್ದಿ ಪ್ರಸಾರ ಇತ್ಯಾದಿ ಮಾಡಿದಾಗ್ಯೂ ಯಶಸ್ವಿ ಆಗದಿರುವುದು ಅವರನ್ನು ಮತ್ತಷ್ಟು ನಿದ್ದೆಗೆಡಿಸಿತು. ಹೀಗಾಗಿ ಇದೀಗ ರವಿ ಹಂಜ್ ಅವರ ಅಭಿಪ್ರಾಯವೂ ಸಂಘವೇ ಅವರ ಮೂಲಕ ಆಡಿಸಿದ ಮಾತು ಎಂದು ಗುಬ್ಬಿಸುತ್ತಿದ್ದಾರೆ. ಅಸಲಿಗೆ ರವಿ ಹಂಜ್ ಅವರಿಗಾಗಲಿ, ಆರೆಸ್ಸೆಸ್ಸಿಗಾಗಲಿ ಅಥವಾ ಪ್ರಜ್ಞೆ ಪ್ರವಾಹಕ್ಕಾಗಲಿ ಯಾವುದೇ ಸಂಬಂಧವಿಲ್ಲ. ಅವರು ತಮಗೆ ಕಂಡದ್ದನ್ನು, ತಮ್ಮ ಅಧ್ಯಯನಕ್ಕೆ ದಕ್ಕಿದ್ದನ್ನು ಹೇಳಿಕೊಂಡು ಹೋಗುತ್ತಿದ್ದಾರೆ. ಅವರ ಬರಹಗಳು ಮತ್ತು ಇತರ ಸ್ವತಂತ್ರ ಚಿಂತಕರ ಅಭಿಪ್ರಾಯಗಳು ಸಮಕಾಲೀನವಾಗಿ ಪತ್ರಿಕೆಗಳಲ್ಲಿ ಪ್ರಕಟವಾದ ಮಾತ್ರಕ್ಕೆ ಅವುಗಳ ನಡುವೆ ಸಂಘಟಿತ ಸಂಬಂಧವಿದೆ ಎಂದು ನಿರ್ಧರಿಸುವುದು ಎಷ್ಟು ಸಮಂಜಸ?

ಜಾತಿ ದ್ವೇಷಕ್ಕೆ ತುಪ್ಪ ಸುರಿಯಲು ಭಟ್ಟರ ಬಳಕೆ: ಭಾರತೀಯ ಸಮಾಜದ ಸಂಪ್ರದಾಯಗಳು ಮತ್ತು ಆಚರಣೆಗಳ ಕುರಿತ ಚರ್ಚೆಗಳಲ್ಲಿ ಬ್ರಾಹ್ಮಣರನ್ನು ಒಂದು ವರ್ಗವಾಗಿ ಗುರಿಯಾಗಿಸುವ ಪ್ರವೃತ್ತಿ ಹೊಸದೇನಲ್ಲ. ಬಸವಣ್ಣನವರನ್ನು ಅಂತಹ ಸಂಪ್ರದಾಯವಾದದ ವಿರುದ್ಧದ ಬಂಡಾಯಗಾರರೆಂದು ಕಳೆದ ಕೆಲವು ದಶಕಗಳಿಂದ ಕೆಲವು ಕಮ್ಯುನಿ ಚಿಂತಕರು ವ್ಯವಸ್ಥಿತವಾಗಿ ಚಿತ್ರಿಸುತ್ತಾ ಬಂದಿದ್ದಾರೆ. ಇದರ ಪರಿಣಾಮವಾಗಿ ಬಸವಣ್ಣನವರು ಎಂದರೆ ಬ್ರಾಹ್ಮಣ ವಿರೋಧಿ, ಸಂಪ್ರದಾಯ ವಿರೋಧಿ, ಸನಾತನ ವಿರೋಧಿ ಎಂಬ ಏಕಮುಖಿ ಹುಸಿ ಕಥನವನ್ನು ಸಮಾಜದಲ್ಲಿ ನಿರೂಪಿಸಲು ಪ್ರಯತ್ನಿಸಿದ್ದಾರೆ.

ಏಕೆಂದರೆ ಭಾರತೀಯ ಸಮಾಜದ ಆಂತರಿಕ ವ್ಯವಸ್ಥೆಯನ್ನು ಸಡಿಲಗೊಳಿಸಲು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿ‌ ಕಟ್ಟಬೇಕು, ಒಡೆದಾಳಬೇಕು ಎಂಬುದು ಕಮ್ಯುನಿಸ್ಟ್ ಪ್ರಣಿತ ಚಿಂತನೆ. ಹೀಗಾಗಿಯೇ ಬಸವ ಮಂಟಪ ಕೃತಿಯನ್ನು ಪ್ರಕಟಿಸಿದ್ದಕ್ಕೆ ವಿಶ್ವವಾಣಿ ಪ್ರಕಾಶನ ಸಂಸ್ಥೆಗೆ ಹಾಗೂ ಮಾಲೀಕರಾದ ವಿಶ್ವೇಶ್ವರ ಭಟ್ಟರಿಗೆ ಸಾಮಾಜಿಕ ಜಾಲತಾಣಗಳಲ್ಲಿ, ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಮನಬಂದಂತೆ ಕೆಲವರು ಕೆಂಡಕಾರುತ್ತಿದ್ದಾರೆ.

ಇದೇ ಸಂದರ್ಭವನ್ನು ಜಾತಿ ದ್ವೇಷಕ್ಕೆ ತುಪ್ಪ ಸುರಿಯುವ ಉದ್ಧರಣೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ತತ್ಪರಿಣಾಮ ಮತ್ತಷ್ಟು ಜನ ತಮ್ಮೊಟ್ಟಿಗೆ ಸೇರಿಕೊಳ್ಳಲಿ, ಬ್ರಾಹ್ಮಣ ದ್ವೇಷ ಹಿಂದೂ ದ್ವೇಷವಾಗಿ ಪರಿವರ್ತನೆಯಾಗಲಿ, ತನ್ಮೂಲಕ ಪ್ರತ್ಯೇಕತೆಯ ಅರಣ್ಯರೋದನಕ್ಕೆ ಸಮಾಜದ ಬೆಂಬಲ ಸಿಗಲಿ ಎಂಬುದು ಯೋಜನೆ!

ವಿರೋಧಿಸದಿದ್ದರೆ ಅಸ್ತಿತ್ವವೇ ಕಳೆದುಕೊಳ್ಳುವ ಭಯ: ಸಾಂಸ್ಕೃತಿಕ ಮಾರ್ಕ್ಸ್‌ʼವಾದಿಗಳ ಬಲೆಗೆ ಬಿದ್ದಿರುವ ಅನೇಕ ವಿರಕ್ತ ಪರಂಪರೆಯ ಸಂನ್ಯಾಸಿಗಳು, ರಾಜಕಾರಣಿಗಳು, ಕವಿಪುಂಗವರು ಹಾಗೂ ಪ್ರತ್ಯೇಕತಾ ಹೋರಾಟಗಾರರೆಲ್ಲರೂ ತಮ್ಮ ಗಂಜಿಗಾಗಿ ಇಂದು ಬಸವ ಮಂಟಪ ಕೃತಿಯನ್ನು, ಕೃತಿಕಾರರನ್ನು ಹಾಗೂ ಪ್ರಕಾಶಕರನ್ನು ವಿರೋಧಿಸುತ್ತಿದ್ದಾರೆ.

ಆರೆಸ್ಸೆಸ್ಸನ್ನು ವಿನಾಕಾರಣ ಇದರೊಳಗೆ ಎಳೆದು ತರುತ್ತಿದ್ದಾರೆ. ಹಿಂದುತ್ವವನ್ನು ವಿಲನ್ ಮಾಡುವ ಹಂತಕ್ಕೆ ಹೋಗಿದ್ದಾರೆ ಏಕೆಂದರೆ ವಿರೋಧಿಸುವುದನ್ನು ನಿಲ್ಲಿಸಿದರೆ ತಮ್ಮ ಸೈದ್ಧಾಂತಿಕ ಅಸ್ತಿತ್ವ ವನ್ನು ಉಳಿಸಿಕೊಳ್ಳುವ ಆತಂಕವಿದೆ. ಜೊತೆಗೆ ವಿದೇಶಿ ಫಂಡಿಂಗ್ ಏಜೆನ್ಸಿಗಳು, ಎನ್‌ಜಿಒಗಳು, ಜಾಗತಿಕ ಮತಾಂತರಿ ಹಾಗೂ ರಾಜಕೀಯ ಶಕ್ತಿಗಳು ನೀಡುವ ಅನುದಾನ ರೂಪದ ಗಂಜಿ ನಿಲ್ಲುವ ಭಯವೂ ಉಂಟು. ಹೀಗಾಗಿ ಅವರು ಅರಚುತ್ತಲೇ ಇರುವ ಅನಿವಾರ್ಯತೆಗೆ ಬಿದ್ದಿದ್ದಾರೆ!

ಧರ್ಮ, ಸಂಸ್ಕೃತಿ, ಪರಂಪರೆಗಿಂತ ಸ್ವಾರ್ಥವೇ ಮುಖ್ಯವಾದಾಗ ಹೀಗೆನ್ನಿಸುವುದು ಸಹಜ. ಹೀಗಾಗಿ ಫುಲ್ ಟೈಮ್ ಹಾಗೂ ಪಾರ್ಟ್ ಟೈಮ್ ಕಮ್ಯುನಿಸ್ಟರು ತಮ್ಮ ಕೆಲಸಕ್ಕೆ ತಕ್ಕ ಕೂಲಿ ಪಡೆದು ಋಣ ತೀರಿಸುತ್ತಿದ್ದಾರೆ. ಇಡಿಯ ಸಮಾಜವನ್ನು ವೈಚಾರಿಕತೆ ಹೆಸರಲ್ಲಿ ಹಾಳುಮಾಡುವ ಕಾರ್ಯಕ್ಕೆ ಗುತ್ತಿಗೆದಾರರಾಗಿದ್ದಾರೆ.

ಕೊನೆಯದಾಗಿ: ಬಸವಣ್ಣನವರ ನಿರ್ಗಮನದ ಸಂದರ್ಭದಲ್ಲಿ ಅಕ್ಕನಾಗಮ್ಮನವರು ತಮ್ಮ ವಚನದಲ್ಲಿ ವ್ಯಕ್ತಪಡಿಸಿದ ಭಾವನೆಗಳು ಇಂದಿಗೂ ಮನಸ್ಸನ್ನು ತಟ್ಟುತ್ತವೆ: ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗ ಪಸರಿಸಿತ್ತ! ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆ ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು? ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ. ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.

ಮರ್ತ್ಯದ ಮಹಾಮನೆ ಶೂನ್ಯವಾಯಿತ್ತ ಬಸವಣ್ಣಾ. ಎನ್ನನೊಯ್ಯದೆ ಹೋದೆಯ ಪಂಚಪರುಷ ಮೂರ್ತಿ ಬಸವಣ್ಣಾ. ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣಾ? ಬಸವಣ್ಣನವರು ಮರ್ತ್ಯಕ್ಕೆ ಬಂದಾಗ ಭಕ್ತಿಯ ಬೆಳವಣಿಗೆ ಎಲ್ಲ ದಿಕ್ಕುಗಳಲ್ಲೂ ಹರಡಿತ್ತು. ಅವರ ನಿರ್ಗಮನದಿಂದ ಮರ್ತ್ಯದ ಮಹಾಮನೆ ಶೂನ್ಯವಾಯಿತು ಎಂಬ ಅಕ್ಕ ನಾಗಮ್ಮನ ಭಾವನೆ ನನ್ನದೂ ಹೌದು. ಬಸವಣ್ಣನ ಕಾಲಕ್ಕೆ ಭಕ್ತಿಯು ಔನ್ನತ್ಯದಲ್ಲಿತ್ತು. ಅವರಿಲ್ಲದ ಈ ಕಾಲಕ್ಕೆ ಭಕ್ತಿ, ಆಧ್ಯಾತ್ಮ, ಧರ್ಮಗಳೆಲ್ಲವೂ ಶುಷ್ಕವಾಗಿ ಕೇವಲ ರಾಜಕೀಯ ಮೇಲಾಟಗಳು, ಸೈದ್ಧಾಂತಿಕ ಸಂಘರ್ಷಗಳು, ಆರೋಪ-ಪ್ರತ್ಯಾರೋಪಗಳು ಉಳಿದುಕೊಂಡಿವೆ.

ದುಷ್ಟ ಕೂಟದ ಪಾರುಪತ್ಯ ಆಕಾಶಕ್ಕೆ ಮುಟ್ಟಿದೆ. ಬಸವಣ್ಣನ ಹೆಸರು ಹೇಳಿಕೊಂಡು ಅನುಯಾಯಿಗಳು ಎನ್ನುವವರು ಧರ್ಮಭಂಜನೆಗೆ ಅಣಿಯಾಗಿದ್ದಾರೆ. ಇದಕ್ಕೆ ಮತಾಂತರಿ ಶಕ್ತಿಗಳು ಮತ್ತು ಕಮ್ಮಿನಿಷ್ಟರು ಆರ್ಥಿಕವಾಗಿ, ವೈಚಾರಿಕವಾಗಿ ಜೊತೆಯಾಗಿದ್ದಾರೆ. ಹೀಗಾಗಿಯೇ ವಿನಾಕಾರಣ ಆರೆಸ್ಸೆಸ್, ಬ್ರಾಹ್ಮಣರು ಹಾಗೂ ಪಂಚಪೀಠಗಳು ದೂಷಣೆಗೆ ಗುರಿಯಾಗುತ್ತಿವೆ. ಅಸಲಿಗೆ ಇದರಲ್ಲಿ ಇವರಾರ ಪಾತ್ರವೂ ಇಲ್ಲ, ಆದರೆ, ಇವರನ್ನು ಅಪರಾಧಿಕರಿಸದಿದ್ದರೆ ಕಮ್ಯುನಿಸ್ಟರ ಬೇಳೆ ಬೇಯುವುದಿಲ್ಲ. ಹೀಗಾಗಿ ದೂಷಿಸುತ್ತಿzರೆ, ದೂಷಿಸುತ್ತಲೇ ಇರುತ್ತಾರೆ.

ಬಸವಣ್ಣನವರ ಹೆಸರಿನಲ್ಲಿ ಮಾತನಾಡುವವರೇ ಅವರ ವಿಶಾಲ ತಾತ್ವಿಕ ಪರಂಪರೆಯನ್ನು ಸಂಕುಚಿತ ಗೊಳಿಸುವುದು ದುರದೃಷ್ಟಕರ. ಬಸವಣ್ಣನವರನ್ನು ಒಂದು ಜಾತಿಗೆ, ಒಂದು ರಾಜಕೀಯ ಸಿದ್ಧಾಂತಕ್ಕೆ ಅಥವಾ ಒಂದು ನಿರ್ದಿಷ್ಟ ಸಂಘಟನೆಯ ವಿರೋಧಕ್ಕೆ ಸೀಮಿತ ಗೊಳಿಸುವುದು ಅವರ ವ್ಯಕ್ತಿತ್ವಕ್ಕೆ ಮಾಡುವ ಅನ್ಯಾಯ. ಅವರು ಸಾರಿದ ಭಕ್ತಿ, ಕಾಯಕ, ದಾಸೋಹ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಇದೆಲ್ಲವನ್ನೂ ಸರಿ ಮಾಡಲು ಮತ್ತೆ ಬಸವಣ್ಣನೇ ಬರಬೇಕೇನೋ? ಅದು ನನ್ನ, ನಿಮ್ಮ ರೂಪದಲ್ಲಾದರೂ ಸರಿಯೇ!