ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranjith H Ashwath Column: ಪರಿಷತ್ತಿನ ಫಲಿತಾಂಶ, ಗೆದ್ದರೂ ನಲುಗಿದ್ದ ಕಮಲ ಪಡೆ !

ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ವಿಧಾನಪರಿಷತ್ ಐದನೇ ಅಭ್ಯರ್ಥಿಯನ್ನು ಹಾಕುವ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿದ್ದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯಾದ ಬಳಿಕ ತನ್ನ ಆಪ್ತ ವಿನಯ್ ಕಾರ್ತಿಕ್‌ನನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಕೈಗೆತ್ತಿಕೊಂಡರು. ಡಿಕೆಗೆ ಸವಾಲು ಹಾಕುವ ರೀತಿ ಜೆಡಿಎಸ್ ಸಹ ಸಂಖ್ಯಾ ಬಲದ ಕೊರತೆಯ ಹೊರತಾಗಿಯೂ ‘ಮ್ಯಾಜಿಕ್’ ನಿರೀಕ್ಷೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು

ಅಶ್ವತ್ಥಕಟ್ಟೆ

ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯ ಎಲ್ಲವೂ ನೂತನ. ಅಧಿಕಾರದ ಚುಕ್ಕಾಣಿಯನ್ನು ಡಿ.ಕೆ.ಶಿವಕುಮಾರ್ ಹಿಡಿದಿದ್ದರೆ, ಪಕ್ಷದ ಚುಕ್ಕಾಣಿಯನ್ನು ಬಿ.ಕೆ.ಹರಿಪ್ರಸಾದ್ ಹಿಡಿದಿದ್ದಾರೆ. ಅಧಿಕಾರದ ಗದ್ದುಗೆ ಏರಿದ ಮೊದಲ ಸವಾಲಾಗಿ ಇಬ್ಬರೂ ನಾಯಕರಿಗೆ ವಿಧಾನಪರಿಷತ್ ಚುನಾವಣೆ ಎದುರಾಗಿತ್ತಾದರೂ, ಡಿಕೆ ಶಿವಕುಮಾರ್ ಅವರ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಂತ್ರಕ್ಕೆ ಯಶ ಸಿಕ್ಕಿದೆ.

ಕಾಂಗ್ರೆಸ್ ತನ್ನ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದಷ್ಟೇ ಅಲ್ಲದೇ, ಬಿಜೆಪಿ-ಜೆಡಿಎಸ್‌ ನೊಳಗಿನ ಆಂತರಿಕ ಬೇಗುದಿಯನ್ನು ಇಡೀ ರಾಜ್ಯದ ಮುಂದೆ ‘ಅಡ್ಡಮತದಾನ’ ಸಂಖ್ಯೆಯ ಆಧಾರ ದಲ್ಲಿ ಬಿಚ್ಚಿಟ್ಟಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ವಿಧಾನಪರಿಷತ್ ಐದನೇ ಅಭ್ಯರ್ಥಿಯನ್ನು ಹಾಕುವ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿದ್ದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಯಾದ ಬಳಿಕ ತನ್ನ ಆಪ್ತ ವಿನಯ್ ಕಾರ್ತಿಕ್‌ನನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಕೈಗೆತ್ತಿಕೊಂಡರು. ಡಿಕೆಗೆ ಸವಾಲು ಹಾಕುವ ರೀತಿ ಜೆಡಿಎಸ್ ಸಹ ಸಂಖ್ಯಾಬಲದ ಕೊರತೆಯ ಹೊರತಾಗಿಯೂ ‘ಮ್ಯಾಜಿಕ್’ ನಿರೀಕ್ಷೆ ಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಡಿಕೆಶಿ-ಎಚ್‌ಡಿಕೆ ನಡುವಿನ ಈ ಸಮರದಲ್ಲಿ ರಾಜ್ಯದ ಮುಂದೆ ಬಯಲಾಗಿದ್ದು ಮಾತ್ರ ಬಿಜೆಪಿಯಲ್ಲಿರುವ ಆಂತರಿಕ ಕಿತ್ತಾಟ!

ಏಳು ಸ್ಥಾನಕ್ಕೆ ಎಂಟು ಅಭ್ಯರ್ಥಿಗಳು ಕಣಕ್ಕೆ ಇಳಿಯುವುದು ಖಚಿತವಾಗುತ್ತಿದ್ದಂತೆ ವಿಧಾನ ಪರಿಷತ್ ಚುನಾವಣೆ ನಿಶ್ಚಿತವಾಗಿತ್ತು. ಕಾಂಗ್ರೆಸ್‌ನ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್‌ನ ಗೋವಿಂದ ರಾಜು ಇಬ್ಬರಲ್ಲಿ ಯಾರೇ ಗೆಲ್ಲಬೇಕಾದರೂ ಪಕ್ಷೇತರರ ಬೆಂಬಲ ಅನಿವಾರ್ಯ ವಾಗಿತ್ತು. ಸಾಮಾನ್ಯವಾಗಿ ಪಕ್ಷೇತರರು ಆಡಳಿತ ಪಕ್ಷಕ್ಕೆ ಬೆಂಬಲ ಘೋಷಿಸುವುದರಿಂದ ವಿನಯ್ ಕಾರ್ತಿಕ್‌ಗೆ ಗೆಲುವು ಸುಲಭವೆಂದೇ ವಿಶ್ಲೇಷಿಸಲಾಗಿತ್ತು. ಆದರೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಮತಗಳು ವಿನಯ್ ಕಾರ್ತಿಕ್‌ಗೆ ಬಂದಿದ್ದು, ಅದರಲ್ಲಿಯೂ ಶಿಸ್ತಿನ ಪಕ್ಷವಾಗಿರುವ ಬಿಜೆಪಿಯ ಆರು ಶಾಸಕರಿಂದ ‘ಅಡ್ಡ’ಮತದಾನವಾಗಿರುವುದು ಇದೀಗ ಬಹುಚರ್ಚಿತ ವಿಷಯ.

ಇದನ್ನೂ ಓದಿ: Ranjith H Ashwath Column: ಪ್ರಾದೇಶಿಕ ಪಕ್ಷಗಳ ಬವಣೆಯಾದರೂ ಏನು ?

ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಶಾಸಕರ ನಿಷ್ಠೆ ಪರೀಕ್ಷಿಸಲು ಮಾಡಿದ್ದ ಈ ತಂತ್ರ, ಜೆಡಿಎಸ್‌ ಗಿಂತ ಹೆಚ್ಚಾಗಿ ಬಿಜೆಪಿಯ ಆಂತರಿಕ ಬೇಗುದಿಯನ್ನು ಬಹಿರಂಗಗೊಳಿಸಿದೆ. ಅದರಲ್ಲಿಯೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಈ ಚುನಾವಣಾ ಫಲಿತಾಂಶ ಬಹುದೊಡ್ಡ ಹಿನ್ನಡೆ ಯಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜೆಡಿಎಸ್‌ಗೆ ಬಿಜೆಪಿಯಿಂದ ಆರು ಮತಗಳು ಹೋಗಬೇಕಿತ್ತು. ಆದರೆ ಮತಗಳ ‘ಅಸಿಂಧು’ವಿನ ವಾಸನೆ ಬಡಿಯುತ್ತಿದ್ದಂತೆ ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳಿಗೆ 28ರ ಬದಲು 30 ಶಾಸಕರ ಮತಗಳನ್ನು ಹಂಚಿಕೆ ಮಾಡಿದರು. ಆದರೆ ಇದರಲ್ಲಿಯೂ ರಘು ಕೌಟಿಲ್ಯ ಅವರಿಗೆ 29 ಮತಗಳು ಬಂದರೆ, ಲಿಂಗರಾಜ ಪಾಟೀಲ್ ಅವರಿಗೆ ಹಾಕಿದ್ದ ಮತಗಳ ಪೈಕಿ ಒಂದು ಮತ ಅಸಿಂಧುವಾಗಿದ್ದರಿಂದ 27 ಮತಗಳನ್ನು ಪಡೆಯಬೇಕಾಯಿತು.

ಒಂದು ಮತ ಅಸಿಂಧುವಾದರೂ, ಯತ್ನಾಳ್ ಬಿಜೆಪಿ ಅಭ್ಯರ್ಥಿ ಪರ ಮತ ಹಾಕಿದ್ದರಿಂದ 56 ಮತಗಳು ಸಿಕ್ಕಿದೆ. ಅಂದರೆ, 62 ಶಾಸಕರ ಸಂಖ್ಯಾಬಲದ ಬಿಜೆಪಿ 55 ಮಂದಿ ಮಾತ್ರ ಪಕ್ಷದ ವಿಪ್‌ನ ಸೂಚನೆಯಂತೆ ಮತ ಚಲಾಯಿಸಿದ್ದು, ಒಂದು ಮತ ಅಸಿಂಧುವಾಗಿದೆ.

61 ok

ಒಟ್ಟಾರೆ ಆರು ಮಂದಿ ಬಿಜೆಪಿಗೆ ಕೈಕೊಟ್ಟಿದ್ದಾರೆ. ಬಿಜೆಪಿ ಶಾಸಕರ ಈ ನಡೆ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಗಾಳಿಮಾತಿಗೆ ತುಪ್ಪ ಸುರಿದಂತಾಗಿದೆ. ಜೆಡಿಎಸ್ ತನ್ನ ಅಭ್ಯರ್ಥಿಯ ಸೋಲನ್ನು ನಿರೀಕ್ಷೆ ಮಾಡಿದ್ದರೂ, ಬಿಜೆಪಿಯಿಂದ ಸಿಗಬೇಕಿರುವ ಬೆಂಬಲ ಸಿಗಲಿಲ್ಲವೆನ್ನುವ ಆರೋಪ ದೆಹಲಿ ನಾಯಕರವರೆಗೆ ದೂರು ಹೋಗಿದೆ. ಈ ದೂರಿಗೆ ಪ್ರತಿಯಾಗಿ ‘ಸ್ಪಷ್ಟೀಕರಣ’ ಕೊಡಲು ಅಶೋಕ್ ಹಾಗೂ ವಿಜಯೇಂದ್ರ ದೆಹಲಿಗೆ ಹಾರಿದ್ದಾರೆ.

ಜೆಡಿಎಸ್ ಅಭ್ಯರ್ಥಿಯ ಸೋಲಿನಿಂದ ಬಿಜೆಪಿಯಲ್ಲಿರುವ ಭಿನ್ನಾಭಿಪ್ರಾಯ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿರುವ ಸಮಸ್ಯೆಯನ್ನು ಬಹಿರಂಗಪಡಿಸಿದೆ. ಇನ್ನೆರಡು ತಿಂಗಳಲ್ಲಿ ಎದುರಾಗಲಿರುವ ಜಿಬಿಎ ಚುನಾವಣೆಯ ಹೊಸ್ತಿಲಿನಲ್ಲಿ ಇಂತಹ ಬೆಳವಣಿಗೆಗಳು ಮೈತ್ರಿ ಪಕ್ಷದಲ್ಲಿ ‘ನಂಬಿಕೆ’ಯನ್ನು ಕುಗ್ಗಿಸಲಿದೆ ಎನ್ನುವುದು ಬಿಜೆಪಿ ವರಿಷ್ಠರ ಆತಂಕವಾಗಿದೆ.

ಈಗಾಗಲೇ ಪಕ್ಷದಲ್ಲಿರುವ ಆಂತರಿಕ ಕಿತ್ತಾಟ, ಮನೆಯೊಂದು ಹತ್ತಾರು ಬಾಗಿಲು ಎನ್ನುವ ಪರಿಸ್ಥಿತಿಯಿಂದಾಗಿ ಬಿಜೆಪಿಯಲ್ಲಿನ ಸಂಘಟನಾ ಶಕ್ತಿ ಮೊದಲಿನಂತಿಲ್ಲ. ಇಂತಹ ಸಮಯದಲ್ಲಿ ಮೈತ್ರಿ ಪಕ್ಷದೊಂದಿಗೂ ಸಮಸ್ಯೆ ಉದ್ಭವಿಸಿದರೆ, ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ. ಅದರಲ್ಲಿಯೂ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಅಧಿಪತ್ಯ ಸಾಧಿಸುವ ಆಲೋಚನೆಯಲ್ಲಿರುವ ಬಿಜೆಪಿ ವರಿಷ್ಠರ ಲೆಕ್ಕಾಚಾರಗಳಿಗೆ ಸಮಸ್ಯೆಯಾಗಲಿದೆ ಎನ್ನುವ ಆತಂಕ ದೆಹಲಿ ನಾಯಕರಲ್ಲಿದೆ. ಆ ಕಾರಣಕ್ಕೆ ಸೋಲಾಗುತ್ತಿದ್ದಂತೆ ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕರೆ ಮಾಡಿ ‘ನೀವು ಚಿಂತಿಸಬೇಡಿ.

ರಾಜ್ಯ ಬಿಜೆಪಿಯನ್ನು ನಾವು ಸರಿಪಡಿಸುತ್ತೇವೆ’ ಎನ್ನುವ ಮಾತುಗಳನ್ನು ಆಡಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿಯಲ್ಲಿನ ಸಮಸ್ಯೆ ಇಂದು ಬೃಹದಾಕಾರವಾಗಿ ಕಾಣಿಸುತ್ತಿದ್ದರೂ, ಸಮಸ್ಯೆ ವರ್ಷಗಳಿಂದಲೇ ಆಗಾಗ್ಗೆ ಸಣ್ಣದಾಗಿ ಸ್ಫೋವಾಗುತ್ತಿತ್ತು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾದಾಗಿನಿಂದ ಈ ಸಮಸ್ಯೆ ಪದೇಪದೆ ಮುನ್ನಲೆಗೆ ಬರುತ್ತಿತ್ತು. ಮುಡಾ ಪಾದಾಯತ್ರೆಯನ್ನು ವಿಜಯೇಂದ್ರ ಆರಂಭಿಸಿದಾಗ, ಹಲವು ನಾಯಕರು ದೂರ ಉಳಿದರು.

ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ತಂಡ ನಿರಂತರ ವಾಗಿ ವಾಗ್ದಾಳಿ ನಡೆಸುತ್ತಿದ್ದರೂ, ಅದನ್ನು ಸರಿ ಮಾಡುವ ಗೋಜಿಗೆ ಬಿಜೆಪಿ ವರಿಷ್ಠರು ಹೋಗಲಿಲ್ಲ. ಸದನದೊಳಗೂ ವಿಜಯೇಂದ್ರ, ಅಶೋಕ್ ಹಾಗೂ ಪಕ್ಷದ ಹಿರಿಯ ಶಾಸಕರ ನಡುವೆ ಸಮನ್ವಯ ತೆಯ ಕೊರತೆ ಪ್ರತಿಹಂತದಲ್ಲಿಯೂ ಕಾಣಿಸುತ್ತಿತ್ತು. ಈ ಎಲ್ಲ ಗೊಂದಲ, ಗೋಜಲು, ಅಸಮಾಧಾ ನದ ಲಾಭವನ್ನು ಬಳಸಿಕೊಂಡಿದ್ದ ಮಾತ್ರ ಕಾಂಗ್ರೆಸ್. ಸರಕಾರದ ವಿರುದ್ಧ ಹಲವು ಆರೋಪಗಳು ಕೇಳಿಬಂದರೂ, ಅವುಗಳನ್ನು ತಾರ್ತಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಸಮನ್ವಯತೆ ಬಿಜೆಪಿ ಯಲ್ಲಿ ಕಾಣಿಸಲಿಲ್ಲ.

ಕೇಳಿ ಬಂದ ಆರೋಪಗಳನ್ನು ಮುಂದಿಟ್ಟುಕೊಂಡು ಜನಾಕ್ರೋಶ ಮೂಡಿಸಬೇಕಿದ್ದ ಪ್ರತಿಪಕ್ಷ ದಲ್ಲಿಯೇ ಅಸಮಾಧಾನ ಭುಗಿಲೆದಿದ್ದರಿಂದ ಆಡಳಿತ ಪಕ್ಷ ಕಾಂಗ್ರೆಸ್‌ಗೆ ವರವಾಯಿತು. ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್‌ನಲ್ಲಿ ‘ಲೋಪ’ವನ್ನು ಬಳಸಿಕೊಂಡ ಡಿಕೆಶಿ ತಮ್ಮ ಪಕ್ಷದ ಐವರನ್ನು ವಿಧಾನಪರಿಷತ್ ಪ್ರವೇಶಿಸುವಂತೆ ನೋಡಿಕೊಂಡರು.

ಅದರಲ್ಲಿಯೂ ಯಾವ ಅಭ್ಯರ್ಥಿಯ(ವಿನಯ್ ಕಾರ್ತಿಕ್) ಗೆಲುವು ಅನಿಶ್ಚಿತತೆಯಿಂದ ಇತ್ತೋ ಅದೇ ಅಭ್ಯರ್ಥಿಗೆ ಅತಿಹೆಚ್ಚು ಅಂದರೆ 32 ಮತ ಸಿಗುವಂತಾಯಿತು. ಮುಂದಿನ ಕೆಲ ತಿಂಗಳ ಅಂತರದಲ್ಲಿ ರಾಜ್ಯದಲ್ಲಿ ಸರಣಿ ಚುನಾವಣೆಗಳು ನಡೆಯಲಿವೆ. ಆಗಸ್ಟ್‌ನಲ್ಲಿ ಜಿಬಿಎ ಚುನಾವಣೆ, ಬಳಿಕ ಸ್ಥಳೀಯ ಸಂಸ್ಥೆ ಚುನಾವಣೆ, ನವೆಂಬರ್ʼನಲ್ಲಿ ಶಿಕ್ಷಕರ, ಪದವೀದರರ ಚುನಾವಣೆಗೆ ಅಖಾಡ ಸಜ್ಜಾಗಿದೆ.

ಈ ಎಲ್ಲ ಚುನಾವಣೆಗಳೂ ಒಂದಿಲ್ಲೊಂದು ರೀತಿ 2028 ಸಾರ್ವತ್ರಿಕ ಚುನಾವಣೆ ಎತ್ತ ಸಾಗಬಹುದು ಎನ್ನುವ ದಿಕ್ಕನ್ನು ತೋರಿಸಲಿವೆ. ಅದರಲ್ಲಿಯೂ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ, ಡಿಕೆಶಿ ಪಟ್ಟಕ್ಕೆ ಬಂದಿರುವ ಹೊಸ್ತಿಲಿನಲ್ಲಿ ಜನ ಇದನ್ನು ಯಾವ ರೀತಿ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲಕ್ಕೆ ಉತ್ತರ ನೀಡುವ ಕೆಲಸವನ್ನು ಈ ಎಲ್ಲ ಚುನಾವಣೆಗಳು ಮಾಡಲಿದೆ. ಈ ಎಲ್ಲ ಚುನಾವಣೆಗೂ ಮೊದಲೇ ಎದುರಾದ ಮೊದಲ ಟಾಸ್ಕ್ ಎನ್ನುವಂತಿದ್ದ ವಿಧಾನಪರಿಷತ್ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿರುವುದು ಡಿ.ಕೆ.ಶಿವಕುಮಾರ್ ಅವರಿಗೆ ನೈತಿಕ ಬಲ ಹೆಚ್ಚಿಸಿರುವುದಂತೂ ಸುಳ್ಳಲ್ಲ.

ಐದನೇ ಅಭ್ಯರ್ಥಿ ಕಾಂಗ್ರೆಸ್ ಗೆದ್ದಿರುವುದರಿಂದ ಪರಿಷತ್ʼನಲ್ಲಿ ಸಂಖ್ಯಾಬಲ ಹೆಚ್ಚುವುದಷ್ಟೇ ಅಲ್ಲದೇ, ಪ್ರತಿಪಕ್ಷದೊಳಗೆ ಸೃಷ್ಟಿಸಿರುವ ಅಂತಃಕಲಹವೂ ಡಿಕೆಶಿವಕುಮಾರ್ ಹಾಗೂ ಕಾಂಗ್ರೆಸ್ ಪಾಲಿಗೆ ಪ್ಲಸ್ ಪಾಯಿಂಟ್ ಎಂದರ ತಪ್ಪಾಗುವುದಿಲ್ಲ. ಬಿಜೆಪಿ-ಜೆಡಿಎಸ್ ಇಬ್ಬರನ್ನೂ ಸೇರಿಸಿ 11 ಅಡ್ಡಮತದಾನ, ಒಂದು ಮತದಾ ಅಸಿಂಧುವಾಗಿರುವುದರಿಂದ ಇದರ ಮೂಲ ಹುಡುಕುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ.

ಇದಕ್ಕಾಗಿ ಸತ್ಯಶೋಧನಾ ಸಮಿತಿಯನ್ನೂ ಮಾಡಲಾಗಿದೆ. ಆದರೆ ಗೌಪ್ಯ ಮತದಾನ ವಾಗಿರುವು ದರಿಂದ, ‘ಸಾಕ್ಷ್ಯ’ ಸಮೇತ ಒಬ್ಬ ಶಾಸಕರತ್ತ ಬೊಟ್ಟು ಮಾಡಲು ಸಾಧ್ಯವಿಲ್ಲದೇ ಇರುವುದರಿಂದ ಈ ಸತ್ಯಶೋಧನಾ ಸಮಿತಿಯ ವರದಿಯ ಆಧಾರದಲ್ಲಿ ‘ಕಠಿಣ’ ಕ್ರಮ ತೆಗೆದುಕೊಳ್ಳುವುದು ತೀರಾ ಕಠಿಣ. ಆದರೆ, ಮೈತ್ರಿಯಲ್ಲಿ ಒಬ್ಬರನ್ನೊಬ್ಬರು ನಂಬದ ಸ್ಥಿತಿಯನ್ನು ಅಂತು ಈ 11 ಮತಗಳು ಸೃಷ್ಟಿಸಿವೆ.

ಐದನೇ ಅಭ್ಯರ್ಥಿಯ ಡಿ.ಕೆ.ಶಿವಕುಮಾರ್ ಆಲೋಚನೆ ಹಾಗೂ ಸೋತರೂ ಪರವಾಗಿಲ್ಲ ತಮ್ಮ ಪಕ್ಷದ ಶಾಸಕ ‘ನಿಷ್ಠೆ’ಯನ್ನು ಪರೀಕ್ಷಿಸುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಡೆ, ಇಕ್ಕಟ್ಟಿಗೆ ಸಿಲುಕಿಸಿರುವುದು ರಾಜ್ಯ ಬಿಜೆಪಿ ನಾಯಕತ್ವವನ್ನು. ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧ್ಯವಾಗ ದಿದ್ದರೂ, ಬರಬೇಕಿದ್ದ ಮತಗಳು ಬಂದಿದ್ದರೆ ರಾಜ್ಯ ಬಿಜೆಪಿಯ ಮೇಲೆ ಜೆಡಿಎಸ್ ನಾಯಕರಿಗೂ ನಂಬಿಕೆ ಬರುತ್ತಿತ್ತು.

ಆದರೀಗ ಅಡ್ಡಮತದಾನ ಹಾಗೂ ನಿರೀಕ್ಷೆಯಂತೆ ಮತ ಹಂಚದೇ ಇರುವುದು ರಾಜ್ಯ ಬಿಜೆಪಿ ನಾಯಕತ್ವದ ಮೇಲಿನ ಅಪನಂಬಿಕೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಹಾಗೇ ನೋಡಿದರೆ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವರಿಷ್ಠರೊಂದಿಗೆ ಕುಮಾರಸ್ವಾಮಿ, ದೇವೇಗೌಡರು ಉತ್ತಮ ಒಡನಾಟ ಹೊಂದಿದ್ದರೂ, ರಾಜ್ಯದಲ್ಲಿ ಈ ಪ್ರಮಾಣದಲ್ಲಿ ಹೊಂದಾಣಿಕೆ ಕಾಣಿಸಿಲ್ಲ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಮುಡಾ ಪಾದಯಾತ್ರೆ ವೇಳೆ, ಜೆಡಿಎಸ್ ನಾಮ್‌ ಕೆವಾಸ್ತೆ ಭಾಗವಹಿಸಿತ್ತು.

ಇದಾದ ಬಳಿಕ ಸದನದೊಳಗೆ ನಡೆಯುವ ಹಲವು ಹೋರಾಟಗಳಿಗೆ ಬಿಜೆಪಿ-ಜೆಡಿಎಸ್ ನಡುವೆ ಸಂವಹನ ಕಾಣಿಸುತ್ತಿಲ್ಲ. ಇದಕ್ಕೂ ಮೀರಿ 2024ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ಸ್ಥಳೀಯ ಬಿಜೆಪಿ ನಾಯಕರ ‘ಕುತಂತ್ರ’ವೇ ಕಾರಣ ಎನ್ನುವ ಆರೋಪ ಈಗಲೂ ಜೆಡಿಎಸ್ ಪಾಳಯದಲ್ಲಿ ಕೇಳಿ ಬರುತ್ತಿದೆ. ಈ ಕಾರಣಕ್ಕೆ ಕೆಲ ತಿಂಗಳ ಹಿಂದೆ ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ಮೈತ್ರಿಯಿಲ್ಲ ಎನ್ನುವ ಮಾತನ್ನು ಕುಮಾರಸ್ವಾಮಿ ಅವರು ಘೋಷಿಸಿ, ಬಳಿಕ ದೇವೇಗೌಡರು ದೆಹಲಿ ನಾಯಕರೊಂದಿಗೆ ಚರ್ಚಿಸಿದ ಬಳಿಕ ಮೈತ್ರಿ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದ್ದರು.

ಅಡ್ಡ ಮತದಾನವಾಗಿದ್ದಕ್ಕೆ ಇದೀಗ ಜೆಡಿಎಸ್ ಅಭ್ಯರ್ಥಿಗೆ ಮೈತ್ರಿ ಪಕ್ಷದಿಂದ ವಂಚನೆಯಾಗಿದೆ ಎನ್ನುವ ಅರ್ಥದಲ್ಲಿ ಮಾತುಗಳು ಕೇಳಿ ಬರುತ್ತಿದೆ. ಆದರೆ ಬಿಜೆಪಿಯಿಂದ ಸಿಗಬೇಕಿದ್ದ ಆರು ಮತಗಳು ಸೇರಿದಂತೆ ಜೆಡಿಎಸ್‌ನ ೧೮ ಮತಗಳು ಜೆಡಿಎಸ್ ಅಭ್ಯರ್ಥಿಗೆ ಸಿಕ್ಕಿದ್ದರೂ, ಗೆಲ್ಲುವುದಕ್ಕೆ ಆರು ಮತಗಳ ಕೊರತೆಯಿತ್ತು.

ಅಭ್ಯರ್ಥಿಯನ್ನು ಹಾಕುವಾಗಲೇ, ಪಕ್ಷೇತರರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದು, ಜೆಡಿಎಸ್‌ನಲ್ಲಿ ನಾಲ್ಕೈದು ಮತಗಳು ಅಡ್ಡ ಮತದಾನವಾಗುವ ಸುಳಿವಿತ್ತು. ಆದರೂ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಿದ್ದು, ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಪಕ್ಷದಲ್ಲಿರುವ ‘ಬಲ’ ಹಾಗೂ ಮೈತ್ರಿ ಪಕ್ಷದ ಮೇಲಿಡಬಹುದಾದ ನಂಬಿಕೆಯನ್ನು ತಿಳಿಯಲು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಅಂಶವನ್ನು ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿಯನ್ನು ಎಷ್ಟರ ಮಟ್ಟಿಗೆ ನಂಬಬಹುದು ಎನ್ನುವ ಕಾರಣಕ್ಕೆ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರು. ಆದರೆ ಈ ನಡೆಯಿಂದ ಚುನಾವಣೆ ನಡೆದು, ಜೆಡಿಎಸ್‌ಗಿಂತ ಹೆಚ್ಚಿನ ಸಮಸ್ಯೆ ಬಿಜೆಪಿಯಲ್ಲಿದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

ಆರು ಮಂದಿಯ ಅಡ್ಡಮತದಾನ, ಒಬ್ಬರ ಮತ ಅಸಿಂಧುವಿನ ಬೆನ್ನಲ್ಲೇ, ಸತ್ಯಶೋಧನಾ ಸಮಿತಿ, ಆಣೆ ಪ್ರಮಾಣ, ದೆಹಲಿ ನಾಯಕರಿಗೆ ವರದಿಯ ಪ್ರಕ್ರಿಯೆಗಳನ್ನು ಆರಂಭಿಸಿರುವ ಬಿಜೆಪಿ, ಚುನಾ ವಣೆಗೆ ಮೊದಲು ಕಾಂಗ್ರೆಸ್ ರೀತಿಯಲ್ಲಿ ತನ್ನ ಶಾಸಕರನ್ನು ಒಗ್ಗೂಡಿಸಿಕೊಳ್ಳುವ ಪ್ರಯತ್ನವನ್ನು ಏಕೆ ಮಾಡಲಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿದೆ. ರೆಸಾರ್ಟ್‌ಗೆ ಕರೆದೊಯ್ದ ಮಾತ್ರಕ್ಕೆ, ಎಲ್ಲವೂ ಸರಿ ಹೋಗುತ್ತಿತ್ತು ಎನ್ನುವುದಕ್ಕಿಂತ ಕನಿಷ್ಠ ‘ಪ್ರಯತ್ನ’ವನ್ನಾದರೂ ಮಾಡಬಹುದಾಗಿತ್ತು ಎನ್ನುವುದು ಪಕ್ಷದೊಳಗಿನ ಮಾತಾಗಿದೆ.

ಪರಿಷತ್‌ನ ಅಡ್ಡಮತದಾನ ಇದೀಗ ಪಕ್ಷದೊಳಗಿದ್ದ ಬೇಗುದಿಯನ್ನು ಬಹಿರಂಗಪಡಿಸಿದೆ. ಈ ಹಿಂದೆ ಹಲವು ಬಾರಿ ಈ ಬೇಗುದಿಯ ಬಗ್ಗೆ ದೆಹಲಿ ಬಿಜೆಪಿ ನಾಯಕರ ಗಮನಕ್ಕೆ ತರುವ ಪ್ರಯತ್ನ ನಡೆದಿವೆ ಯಾದರೂ, ಅದ್ಯಾವುದನ್ನು ಗಂಭೀರವಾಗಿ ಪರಿಗಣಿಸದೇ ‘ನೋಡೋಣ’ ಎನ್ನುವ ಮನಸ್ಥಿತಿಯಲ್ಲಿ ನಾಯಕರಿದ್ದರು. ಇನ್ನಾದರೂ ಎಚ್ಚೆತ್ತು ಕರ್ನಾಟಕ ಬಿಜೆಪಿಯನ್ನು ‘ಟೈಟ್’ ಮಾಡುವತ್ತ ಗಮನ ಹರಿಸುವರೋ ಅಥವಾ ಈ ವಿಷಯವನ್ನೂ ‘ಚುನಾವಣೆ ವೇಳೆಗೆ ನೋಡಿ ಕೊಳ್ಳೋಣ’ ಎಂದು ಮುಂದಕ್ಕೆ ತಳ್ಳುತ್ತಾರೋ ಎನ್ನುವುದಕ್ಕೆ ಶೀಘ್ರವೇ ತೆರೆಯ ಮೇಲೆ ಉತ್ತರ ಸಿಗಲಿದೆ.

ರಂಜಿತ್​ ಎಚ್​ ಅಶ್ವತ್ಥ್

View all posts by this author