ಕಳಕಳಿ
ರವಿ ಕಂಗಳ
ಶಿಲಾಯುಗದಿಂದ ಪ್ರಾರಂಭವಾಗುವ ಮಾನವನ ವಿಕಾಸವು ಇಂದು ಕಂಪ್ಯೂಟರ್/ಕೃತಕ ಬುದ್ಧಿಮತ್ತೆಯ (ಎಐ) ಯುಗಕ್ಕೆ ಬಂದು ತಲುಪಿದೆ. ಜಗತ್ತಿನ ದೂರ ಕಡಿಮೆಯಾಗಿದ್ದು ಅಂಗೈಯಲ್ಲಿಯೇ ಎಲ್ಲವನ್ನೂ ನಿಯಂತ್ರಿಸಬಲ್ಲ ಹಾಗೂ ಪಡೆಯಬಲ್ಲ ಶಕ್ತಿಯನ್ನು ಮಾನವ ಹೊಂದಿದ್ದಾನೆ.
ಸುಖ, ಶಾಂತಿ, ನೆಮ್ಮದಿಯ ಜೀವನಕ್ಕಾಗಿ ಪ್ರತಿನಿತ್ಯ ಹೋರಾಟ ಮಾಡುತ್ತಿರುವ ಮಾನವ, ನಿಜವಾಗಲೂ ಸುಖಿಯಾಗಿದ್ದಾನೆಯೇ? ಎಂಬ ಜಿಜ್ಞಾಸೆ ಮೂಡುತ್ತದೆ. ಸಂತೃಪ್ತಿಯ ಜೀವನ ನಡೆಸಬೇಕೆಂದು ಜೀವನದ ಕೊನೆಯ ಕ್ಷಣದವರೆಗೂ ಪಡಬಾರದ ಕಷ್ಟಪಡುತ್ತಿದ್ದರೂ ಸುಖ-ಶಾಂತಿಗಳಿಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಜೀವನ ಮೌಲ್ಯಗಳನ್ನು ಗುರುತಿಸಿ ಅಳವಡಿಸಿಕೊಳ್ಳದೆ ಜೀವನದಲ್ಲಿ ನಿಜವಾದ ಸಂತೃಪ್ತಿ ಯಾವುದರಲ್ಲಿದೆ? ಎಲ್ಲಿದೆ? ಎಂಬುದನ್ನು ಮೈಮರೆತು ಮೆರೆಯುತ್ತಿದ್ದಾನೆ.
ಒಂದೂರಲ್ಲಿ ಕೋದಂಡರಾಮನೆಂಬ ಯಾರಿಗೂ ಬೇಡವಾದ ವ್ಯಕ್ತಿ ಇದ್ದನು. ಆತನ ದೌರ್ಜನ್ಯ, ದುರಹಂಕಾರಕ್ಕೆ ಬೇಸತ್ತ ಜನ ಆತನನ್ನು ಕಂಡರೆ ಬಹುದೂರ ಹೋಗುತ್ತಿದ್ದರು. ಇವನ ಮನೆ ಊರಿನ ಮುಖ್ಯ ರಸ್ತೆಯಲ್ಲಿದ್ದು ಇಡೀ ಊರಿನ ಜನ ಇವನ ಮನೆಯ ಮುಂದೆ ಹಾದು ಹೋಗುತ್ತಿದ್ದರೂ ಯಾರೂ ಈತನ ಬಗ್ಗೆ ಗಮನ ನೀಡುತ್ತಿರಲಿಲ್ಲ.
ಇದನ್ನೂ ಓದಿ: Vinayaka V Bhat Column: ಸಂಘದ ಶತಮಾನೋತ್ಸವಕ್ಕೆ ಮೆರುಗು ತಂದ ಪ್ರಿಯಾಂಕ್
ಒಂದು ದಿನ ಕೋದಂಡರಾಮ ಆ ರಸ್ತೆಯ ಎರಡು ಬದಿಗೆ ಮುಳ್ಳಿನ ಬೇಲಿ ಹಚ್ಚಿ ರಸ್ತೆಯನ್ನು ಬಂದ್ ಮಾಡಿ ಏನನ್ನೋ ಹುಡುಕುತ್ತಿದ್ದನು. ಆದರೆ ರಸ್ತೆ ಏಕೆ ಬಂದ್ ಮಾಡಿದ್ದೀರಿ? ಎಂದು ಆತನನ್ನು ಪ್ರಶ್ನಿಸುವವರು ಯಾರೂ ಆತನನ್ನು ಇರಲಿಲ್ಲ. ಬೆಳಗ್ಗೆಯಿಂದ ಸಾಯಂಕಾಲದವರಿಗೆ ಈತನ ಕಾರ್ಯವನ್ನು ನೋಡಿದ ಒಬ್ಬ ಹಿರಿಯ ಅನುಭವಿಕ ವ್ಯಕ್ತಿ ಧೈರ್ಯ ಮಾಡಿ, “ಬೆಳಗ್ಗೆಯಿಂದ ಗಮನಿಸುತ್ತ ಬಂದಿದ್ದೇನೆ.
ಸೂರ್ಯಾಸ್ತವಾಗುವ ಸಮಯವಾಗುತ್ತಿದೆ; ತಾವು ಏನನ್ನು ಹುಡುಕುತ್ತಿದ್ದೀರಿ?" ಎಂದು ಕೋದಂಡ ರಾಮನನ್ನು ಪ್ರಶ್ನಿಸಿದಾಗ, “ನಾನು ಸೂಜಿ ಕಳೆದುಕೊಂಡಿದ್ದು, ಅದನ್ನು ಹುಡುಕುತ್ತಿದ್ದೇನೆ" ಎಂದು ಉತ್ತರಿಸುತ್ತಾನೆ. ಆಗ ಹಿರಿಯರು, “ತಾವು ಸೂಜಿ ಎಲ್ಲಿ ಕಳೆದು ಕೊಂಡಿದ್ದೀರಿ?" ಎಂದು ಪ್ರಶ್ನಿಸಿದಾಗ “ಮನೆಯಲ್ಲಿ ಕಳೆದುಕೊಂಡಿದ್ದೇನೆ" ಎಂದು ಉತ್ತರಿಸುತ್ತಾನೆ.
“ಮನೆಯಲ್ಲಿ ಕಳೆದುಕೊಂಡಿದ್ದರೆ ಇಲ್ಲೇಕೆ ಅದನ್ನು ಹುಡುಕುತ್ತಿದ್ದೀರಿ?" ಎಂದು ಮರುಪ್ರಶ್ನಿಸಿದಾಗ. ಕೋದಂಡರಾಮ, “ಮನೆಯ ಒಳಗೆ ಕತ್ತಲಾವರಿಸಿಕೊಂಡಿದೆ, ಅಲ್ಲಿ ಹುಡುಕಲು ಸಾಧ್ಯವಾಗದೆ ಹೊರಗೆ ಬೆಳಕಿನಲ್ಲಿ ಹುಡುಕುತ್ತಿದ್ದೇನೆ" ಎನ್ನುತ್ತಾನೆ! ಈ ಉತ್ತರವನ್ನು ಕೇಳಿದಾಗ ನಗುವಿನೊಂದಿಗೆ ಅಚ್ಚರಿಯೂ ಆಗುತ್ತದಲ್ಲವೇ? ಇದು ಕೇವಲ ಒಬ್ಬ ಕೋದಂಡರಾಮನ ಕಥೆಯಲ್ಲ.
ಇಂದು ನಾವೆಲ್ಲ, ಸಂತೃಪ್ತ ಜೀವನ ನಡೆಸಬೇಕು, ಸಂಪದ್ಭರಿತ ಸಮಾಜವನ್ನು ನಿರ್ಮಿಸಬೇಕು ಅಂತ ಹೊರಟವರೇ. ಆದರೆ ‘ಇರುವುದೆಲ್ಲವ ಬಿಟ್ಟು ಇಲ್ಲದಿರುವುದರ ಕಡೆಗೆ’ ಕೋದಂಡರಾಮನ ರೀತಿಯಲ್ಲಿಯೇ ಸುಖ, ಶಾಂತಿ, ನೆಮ್ಮದಿಗಾಗಿ ಹುಡುಕುತ್ತಿದ್ದೇವೆ.
“ಮಾನವನು ಹಕ್ಕಿಯಂತೆ ಹಾರಾಡುವುದನ್ನು ಕಲಿತ, ಮೀನಿನಂತೆ ಈಜುವುದನ್ನು ಕಲಿತ. ಆದರೆ, ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ!" ಎಂದಿದ್ದಾರೆ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು. ಮಾನವ ಏನೆಲ್ಲ ಸಾಧನೆ ಮಾಡಿದ್ದರೂ ಮಾನವನಾಗಿ ಬಾಳಲು ಇರಬೇಕಾದ ಮೌಲ್ಯ ಗಳನ್ನು ಅನುಸರಿಸುವಲ್ಲಿ ಎಡವುತ್ತಿದ್ದಾನೆಯೇ? ಎಂಬ ಸಹಜ ಪ್ರಶ್ನೆಯನ್ನು ನಾವು ಕೇಳಿಕೊಳ್ಳ ಬೇಕಾಗಿದೆ.
“ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ, ಎಲ್ಲರೊಳಗೊಂದಾಗು- ಮಂಕುತಿಮ್ಮ" ಎಂದಿದ್ದಾರೆ ಡಿವಿಜಿಯವರು. ಬದುಕಿನ ಈ ಸ್ವಾರಸ್ಯಕರ ಗುಟ್ಟನ್ನು ಶಿಕ್ಷಣವಂತರೆಲ್ಲ ಅರಿತುಕೊಂಡಾಗ ಮಾತ್ರ ಸಮೃದ್ಧ ಸಮಾಜ ನಿರ್ಮಾಣದಲ್ಲಿ ಅದು ಮೊದಲ ಮೆಟ್ಟಿಲಾಗುತ್ತದೆ.
ಮನುಷ್ಯ ಸಂಘಜೀವಿಯಾಗಿದ್ದು ‘ನೀ ನನಗಿದ್ದರೆ ನಾನು ನಿನಗೆ’ ಎಂಬ ಸಹಕಾರಿ ತತ್ವದಲ್ಲಿಯೇ ಪರೋಪಕಾರಿಯಾಗಿ ಬದುಕಬೇಕು ಎನ್ನುವುದು ನಮ್ಮ ಸಂಸ್ಕೃತಿಯ ಮತ್ತು ಸಂಸ್ಕಾರಗಳ ಆಶಯವಾಗಿದೆ. ಮರಗಳು ಹಣ್ಣನ್ನು, ನದಿಗಳು ನೀರನ್ನು, ಹಸುಗಳು ಹಾಲನ್ನು ಕೊಡುವಂತೆ ಮನುಷ್ಯನು ಕೂಡ ಪರೋಪಕಾರಕ್ಕಾಗಿ ಜೀವನವನ್ನು ಸವೆಸಬೇಕು.
ನಮ್ಮ ಬದುಕು ‘ಮನೆಗೆ ಮಾರಿ, ಪರರಿಗೆ ಉಪಕಾರಿ’ ಎನ್ನುವ ಗಾದೆ ಮಾತಿನಂತಾಗದೆ ತನ್ನ ಮನೆಯವರೆಲ್ಲರಿಗೂ ಹಿತವ ನೀಡುತ್ತಾ, ತಾನಿರುವ ಮನೆ, ಸಮಾಜ, ದೇಶ ಮತ್ತು ಜಗತ್ತಿಗೆ, ಮಲ್ಲಿಗೆಯ ಸುಗಂಧದಂತೆ ಇದ್ದರೆ, ಎಲ್ಲರೂ ನಮ್ಮನ್ನು ಇಷ್ಟಪಡುವಂತೆ ಬದುಕಿದರೆ ಅದು ಸುಂದರ ಮತ್ತು ಸಾರ್ಥಕ ಬದುಕಾಗುತ್ತದೆ.
“ವ್ಯಕ್ತಿಯಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವಲ್ಲಿ ಶಿಕ್ಷಣ ಕೇಂದ್ರಗಳು ಯಶಸ್ವಿಯಾದರೆ ಸಮಾಜವು ತನ್ನಿಂದ ತಾನೇ ಸುಧಾರಿಸುತ್ತದೆ ಎಂದು ಭಾವಿಸುತ್ತೇನೆ" ಎಂಬ ಮಹಾತ್ಮ ಗಾಂಧಿಯವರ ಮಾತು ಮೌಲ್ಯವರ್ಧನೆಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಣದಲ್ಲಿ ಮೌಲ್ಯವರ್ಧನೆ ಎಂದರೆ, ನೈತಿಕ ಸದ್ಗುಣಗಳಾದ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ದಯೆ, ಪರಸ್ಪರ ಗೌರವ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತೆ, ಪರಿಸರ ಜಾಗೃತಿ, ನಾಗರಿಕ ಜವಾಬ್ದಾರಿಗಳು, ವೈಜ್ಞಾನಿಕ ಮನೋಭಾವ ಇವೇ ಮೊದಲಾದ ಗುಣಗಳನ್ನು ಬೆಳೆಸುವುದು.
ಮಕ್ಕಳಲ್ಲಿ ಈ ಮೌಲ್ಯಗಳನ್ನು ಪ್ರಾಥಮಿಕ ಹಂತದಿಂದಲೇ ತುಂಬದಿದ್ದರೆ, ‘ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೇ?’ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಮೌಲ್ಯಗಳ ಶಿಕ್ಷಣವು ನಿಜಕ್ಕೂ ಪವಿತ್ರ ಕಾರ್ಯ. ನಿಸ್ವಾರ್ಥತೆಯಿಂದ ಶಿಕ್ಷಣ ನೀಡಿದಷ್ಟೂ ಉತ್ತಮ ಫಲ ದೊರೆಯುತ್ತದೆ. ಶಿಕ್ಷಣವಿಲ್ಲದಿದ್ದರೆ, ನೈತಿಕ ಪ್ರe ಇಲ್ಲದಿದ್ದರೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಬೆಲೆಯಿಲ್ಲ!
ವ್ಯಕ್ತಿತ್ವವಿಲ್ಲದೆ ಸಮಾಜದಲ್ಲಿ ಮನ್ನಣೆ ಇಲ್ಲ. ಮನ್ನಣೆಗಾಗಿಯಾದರೂ ನೈತಿಕ ಮೌಲ್ಯಗಳ ಜ್ಞಾನಾ ರ್ಜನೆ ಅತ್ಯಗತ್ಯ. ಮಕ್ಕಳ ಮನೋಬಲ ಮತ್ತು ಬೌದ್ಧಿಕ ವಿಕಾಸಕ್ಕೆ ಕಲಿಕೆ ವರವಾಗಿ ಪರಿಣಮಿಸ ಬೇಕು ಎಂದಾದರೆ, ಇಂದಿನ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವುದರೆಡೆಗೆ ದಿಟ್ಟ ಹೆಜ್ಜೆ ಹಾಕಬೇಕು. ಆ ಮೂಲಕ ಸಮರ್ಥ ಸಮಾಜವನ್ನು ಕಟ್ಟಲು ಸಾಧ್ಯವಿದೆ.
‘ವರ್ತನೆಯ ನರ್ತನಕೆ ಪರಿವರ್ತನೆಯ ಶೃಂಗಾರ’ ಎಂನ್ನುತ್ತದೆ ಕವಿವಾಣಿ. ಈಗಾಗಲೇ ಮಗುವಿನ ಅಂತರಂಗದಲ್ಲಿ ಹುದುಗಿರುವ ಪರಿಪೂರ್ಣತೆಯನ್ನು, ದೈವತ್ವವನ್ನು ಹೊರತರುವುದೇ ಶಿಕ್ಷಣ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಇಂದಿನ ಶಿಕ್ಷಣ ಸಂಸ್ಥೆಗಳು ಸಾಗಿದರೆ ಸ್ವಸ್ಥ ಸಮಾಜವು ನಿರ್ಮಾಣವಾಗುತ್ತದೆ.
ಶಿಕ್ಷಣವೆಂದರೆ ಬುದ್ಧಿ, ಅಂತಃಕರಣ ಮತ್ತು ಕೌಶಲಗಳ ಸಮಾಗಮವಾಗಿದೆ. ಜಗತ್ತಿನ ಪ್ರಸಿದ್ಧ ಹಾಸ್ಯಗಾರ ಜಾರ್ಜ್ ಕಾರ್ಲಿನರು ಹೇಳುವಂತೆ, ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ, ಆದರೆ ಸ್ಫೋಟಿಸುವ ಸ್ವಭಾವಗಳು ಇವೆ; ಅಸಾಮಾನ್ಯ ವಿದ್ಯಾರ್ಹತೆಗಳಿವೆ, ಆದರೆ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ; ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ ವಿವೇಚನೆ ಕಡಿಮೆಯಾಗಿದೆ; ನಮ್ಮ ಆಸ್ತಿ ಪಾಸ್ತಿಗಳ ಬೆಲೆ ಏರಿದೆ, ಆದರೆ ನಮ್ಮ ಮೌಲ್ಯಗಳ ಬೆಲೆ ಇಳಿದಿವೆ; ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ, ಸೂರ್ಯನತ್ತಲೂ ಸಾಗಿದ್ದೇವೆ, ಆದರೆ ನಮ್ಮ ಕಾಂಪೌಂಡ್ ಗೋಡೆ ದಾಟಿ ನೆರೆಹೊರೆಯವರನ್ನು ಭೇಟಿಯಾಗಲು ಹೋಗಿಲ್ಲ; ನಾವು ಬಹಿರಂಗದಲ್ಲಿ ಗೆಲ್ಲುತ್ತಿದ್ದೇವೆ, ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ; ವಿಶ್ವ ಶಾಂತಿಯ ಬಗ್ಗೆ ಮಾತನಾಡುತ್ತೇವೆ, ಆದರೆ ಮನೆಯಲ್ಲಿ ಕಾದಾಡುತ್ತೇವೆ; ಇದು ಇಂದಿನ ವಿಶ್ವದ ವಿಚಿತ್ರ!
ನಿಜ! ಮಾನವೀಯತೆಯ ನೆಲೆಯಲ್ಲಿ ಮೌಲ್ಯಾಧಾರಿತ ಮನೋಸ್ಥಿತಿ, ಬಹುತ್ವ, ಬಹು-ಸಂಸ್ಕೃತಿ, ಬಹು-ಭಾಷೆಗೆ ಸಮಾನ ಗೌರವದ ಮೂಲಕ ಸಹಿಷ್ಣುತೆಯ ಬದುಕನ್ನು ಕಟ್ಟಿಕೊಳ್ಳಬೇಕಾದ ನಾವು ಪರಸ್ಪರ ಕಾದಾಟ, ಕೆಸರೆರಚಾಟ ಮತ್ತು ಅಸಹಿಷ್ಣುತೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ.
ಇದರಿಂದ ದೇಶಕ್ಕೆ ಸಮಾಜಕ್ಕೆ ಒಳಿತಾಗುವ ಬದಲು ಕೆಡುಕಾಗುವ ಸಂಭವವೇ ಹೆಚ್ಚಾಗಿದೆ. ಇದಕ್ಕೆ ಮೂಲ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆ. ನಮ್ಮ ನೆರೆಯವರ ಕಷ್ಟ-ಸುಖಗಳನ್ನು ಅರಿತುಕೊಳ್ಳುವ ಹೃದಯವಂತಿಕೆಯನ್ನು ಇಂದಿನ ಶಿಕ್ಷಣ ನಮಗೆ ಕಟ್ಟಿಕೊಡಬೇಕು. ಮಾನವೀಯ ಮೌಲ್ಯಗಳ ನೆಲೆಯಲ್ಲಿ ತಾರತಮ್ಯರಹಿತ ಸಮಸಮಾಜವನ್ನು ಕಟ್ಟಿಕೊಳ್ಳಬೇಕು.
ಶಿಕ್ಷಣದ ಮೂಲಕ ಮೌಲ್ಯಗಳ ಬಲವರ್ಧನೆಯಾಗಬೇಕು. ‘ಮನುಷ್ಯ ಇತರರ ಒಳ್ಳೆಯದಕ್ಕಾಗಿ ಎಷ್ಟು ದುಡಿಯುತ್ತಾನೋ ಅಷ್ಟು ದೊಡ್ಡ ವ್ಯಕ್ತಿಯಾಗುತ್ತಾನೆ" ಎಂದಿದ್ದಾರೆ ಗಾಂಧೀಜಿ. ಸಾಮಾನ್ಯ ವಾಗಿ ಭಾರತೀಯ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹುತೇಕ ವ್ಯಕ್ತಿಗಳು ದುಡಿಯುವುದು, ಬದುಕುವುದು, ಮಡಿಯುವುದು ತಮ್ಮ ತಂದೆ-ತಾಯಿ, ಗಂಡ-ಹೆಂಡತಿ-ಮಕ್ಕಳಿಗಾಗಿ. ಕೆಲವರಂತೂ ತಮ್ಮ ಮುಂದಿನ ಹಲವು ಪೀಳಿಗೆಗೆ ಆಗುವಷ್ಟು ಹಣ ಮಾಡಲು ಪ್ರಯತ್ನಿಸುತ್ತಾರೆ.
ಆದರೆ ದುರಂತವೆಂದರೆ, ಸಾಮಾನ್ಯವಾಗಿ ತಮ್ಮವರಿಗಾಗಿ ಅಷ್ಟು ಹಣ ಮಾಡಿದ್ದರೂ ‘ಇನ್ನೂ ಮಾಡಬೇಕಿತ್ತು’ ಎಂಬ ಅತೃಪ್ತಿ-ಅಸಮಾಧಾನ ಅವರ ಹತ್ತಿದವರಲ್ಲಿ ಇರುತ್ತದೆ. ಕೆಲವು ಸಂದರ್ಭ ಗಳಲ್ಲಿ ಅವರ ಆಸ್ತಿ ಸಂಪಾದನೆಯ ಸಾಧನೆಯ ಬಗ್ಗೆ ಹೆಮ್ಮೆ ಇದ್ದರೂ ಒಂದೆರಡು ಪೀಳಿಗೆಯ ನಂತರ ಅವರ ಹೆಸರನ್ನೇ ಮರೆಯಲಾಗುತ್ತದೆ.
‘ಪರೋಪಕಾರಂ ಇದಂ ಶರೀರಂ’ ಎಂಬ ಬದುಕಿನ ಸಾರ್ಥಕತೆ ಅಡಗಿರುವುದೇ ಇತರರ ಸೇವೆಯಲ್ಲಿ ಎಂಬುದನ್ನು ಅರಿತುಕೊಂಡು ಮಾನವೀಯ ಮೌಲ್ಯಗಳು ಎಲ್ಲರಲ್ಲೂ ಮೈಗೂಡಿ ನಿಂತರೆ ಸಮರ್ಥ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಮಾನವತೆಯ ವಿಕಾಸವೇ ಶಿಕ್ಷಣ ಎಂಬುದನ್ನು ಸಾಕ್ಷಾತ್ಕರಿಸಲು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಒಂದು ಅಥವಾ ಎರಡು ಅವಧಿಗಳ ಕಾಲ ಮೌಲ್ಯಶಿಕ್ಷಣವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಸಂದರ್ಭೋಚಿತವಾಗಿ ಹಾಗೂ ನಿರಂತರ ವಾಗಿ ನೀಡುತ್ತಿದ್ದರೆ ನಿಜವಾದ ಸಮರ್ಥ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
(ಲೇಖಕರು ಶಿಕ್ಷಕರು)